ನ್ಯಾಯಮೂರ್ತಿ, ಶ್ರೀ ರಾಮಾ ಜೋಯಿಸ್

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕ್ಕಿಗೂ ಮತ್ತು ಕನ್ನಡ ಸಾರಸ್ವತ ಲೋಕಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ ಎಂದರೂ ತಪ್ಪಾಗಲಾರದು. ನಾಡಿನ ಹೆಸರಾಂತ ಕವಿ, ಕನ್ನಡಕ್ಕೆ ಮೊತ್ತ ಮೊದಲ ಜ್ಣಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕುವೆಂಪು, ಅವರ ಮಗ ಶ್ರೀ ಪೂರ್ಣಚಂದ್ರ ತೇಜಸ್ವೀ, ಕಾಂಬರಿಗಾರ್ತಿ ಶ್ರೀಮತಿ ಎಂ. ಕೆ. ಇಂದಿರಾ, ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ಗಿರೀಶ್ ಕಾಸರವಳ್ಳಿ, ಕೂಡ್ಲು ರಾಮಕೃಷ್ಣ, ರಾಜಕೀಯ ಧುರೀಣರಾದ ಶ್ರೀ ಶಾಂತವೇರಿ ಗೋಪಾಲ ಗೌಡರ ಜೊತೆ ಕರ್ನಾಟಕದ ಘನತೆ ಮತ್ತು ಗೌರವವನ್ನು ದೇಶಾದ್ಯಂತ ಎತ್ತಿ ಹಿಡಿದ ಮತ್ತೊಬ್ಬ ಸಜ್ಜನರೇ ಹಿರಿಯ ನ್ಯಾಯವಾದಿಗಳಾಗಿದ್ದ ಮತ್ತು ಎರಡು ರಾಜ್ಯಗಳ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದ್ದ ಶ್ರೀ ರಾಮಾ ಜೋಯಿಸರು.

1931ರ ಜುಲೈ 27ರಂದು ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯ ಸಾಂಪ್ರದಾಯಕ ಕುಟುಂಬದ ಶ್ರೀ ನರಸಿಂಹ ಜೋಯಿಸ್ ಮತ್ತು ಶ್ರೀಮತಿ ಲಕ್ಷ್ಮೀದೇವಮ್ಮ ದಂಪತಿಗಳ ಸುಪುತ್ರರಾಗಿ ಶ್ರೀ ರಾಮಾ ಜೋಯಿಸ್ ಅವರ ಜನನವಾಗುತ್ತದೆ. ತಮ್ಮ ಹುಟ್ಟೂರಿನಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸುತ್ತಾರೆ. ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಡನಾಟವನ್ನು ಇಟ್ಟುಕೊಂಡಿದ್ದರಿಂದ ರಾಮಾ ಜೋಯಿಸರ ವ್ಯಕ್ತಿತ್ವ, ಹಿಂದೂಪರ ಮನಸ್ಥಿತಿ ಮತ್ತು ಆವರ ಬೌದ್ಧಿಕ ಬೆಳವಣಿಗೆಗೆ ಸಂಘದ ಕೊಡುಗೆ ಅಪಾರ ಎಂದರೂ ತಪ್ಪಾಗಲಾರದು. ಶಿವಮೊಗ್ಗದ ಕುವೆಂಪು ವಿಶ್ವ ವಿದ್ಯಾನಿಲಯದಿಂದ ಬಿಎ ಪದವಿಯನ್ನು ಪಡೆದು ಕಾನೂನಿನಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಬೆಂಗಳೂರಿನ ಸೆಂಟ್ರಲ್‌ ಕಾಲೇಜ್ ಸೇರಿಕೊಂಡು ತಮ್ಮ ಎಲ್. ಎಲ್.ಬಿ. ಪವಿಯನ್ನು ಪೂರೈಸುತ್ತಾರೆ.

1959 ರಲ್ಲಿ ಅದಾಗಲೇ ಖ್ಯಾತ ವಕೀಲರೆಂದೇ ಖ್ಯಾತರಾಗಿದ್ದ ಶ್ರೀ ವೆಂಕಟರಂಗ ಅಯ್ಯಂಗಾರ್‌ ಅವರ ಬಳಿ ತಮ್ಮ ವಕೀಲಿ ವೃತ್ತಿಯನ್ನು ಆರಂಭಿಸಿ ನೋಡ ನೋಡುತ್ತಿದ್ದಂತೆಯೇ ಕೆಲವೇ ಕೆಲವು ವರ್ಷಗಳಲ್ಲಿ ತಮ್ಮ ಅಪಾರವಾದ ಕಾನೂನು ಸಂಬಂಧಿತ ಜ್ಞಾನ ಸಂಪತ್ತು ಮತ್ತು ಅಧ್ಭುತ ವಾಗ್ಜರಿಯಿಂದಾಗಿ ಉತ್ತಮ ವಕೀಲರೆಂದು ಪ್ರಖ್ಯಾತಿಯನ್ನುಪಡೆದು ಕೊಳ್ಳುತ್ತಾರೆ. ಇವೆಲ್ಲದರಗಳ ಜೊತೆ ಜೊತೆಯಲ್ಲಿಯೇ ಅವರ ಮತ್ತು ಸಂಘ ಪರಿವಾರದೊಂದಿಗಿನ ಸಂಬಂಧ ಮುಂದುವರಿಯುತ್ತಲೇ ಹೋಗುವುದಲ್ಲದೇ ಸಂದರ್ಭಕ್ಕೆ ಅನುಸಾರವಾಗಿ ಕಾನೂನಾತ್ಮಕ ಸಲಹೆಗಳನ್ನು ನೀಡುವುದರ ಜೊತೆಗೆ, ಹಲವು ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. 1975 ರಲ್ಲಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದಲ್ಲದೇ, ಸರ್ಕಾರ ವಿರುದ್ಧ ಪ್ರತಿಭಟಿಸುವ ಎಲ್ಲರನ್ನೂ ಯಾವುದೇ ವಿ‍ಚಾರಣೇ ಇಲ್ಲದೇ ಸೆರೆಮನೆಗೆ ತಳ್ಳುತ್ತಿರುತ್ತಾರೆ.

ಅಂತಹ ಹೋರಾಟದ ಭಾಗವಾಗಿಯೇ ಅಂದಿನ ಜನಸಂಘದ ಹಿರಿಯ ನಾಯಕರುಗಳಗಿದ್ದಂತಹ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಲಾಲ್‌ ಕೃಷ್ಣ ಅಡ್ವಾಣಿ ಅಲ್ಲದೇ, ಹಿರಿಯ ವಿರೋಧ ಪಕ್ಷದ ನಾಯಕರುಗಳಗಿದ್ದ ಶ್ರೀ ಮಧು ದಂಡವತೆ, ಶ್ರೀ ನಾಗಪ್ಪ ಆಳ್ವ, ಶ್ರೀ ರಾಮಕೃಷ್ಣ ಹೆಗಡೆ ಮುಂತಾದವರನ್ನು ಬಂಧಿಸಿ, ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಬಂಧಿಸಿಡಲಾಗುತ್ತದೆ.

ಇಂದಿರಾ ಗಾಂಧಿಯವರ ಸರ್ವಾಧಿಕಾರೀ ಧೋರಣೆಯನ್ನು ಎದುರಿಸಲು ಭಯಪಟ್ಟು ಅನೇಕ ವಕೀಲರು ಇಂತಹ ವಿರೋಧ ಪಕ್ಷದ ನಾಯಕರುಗಳ ಪರವಾಗಿ ನ್ಯಾಯಾಲಯದಲ್ಲಿ ವಾದ ಮಾಡಲು ಹಿಂಜರಿಯುತ್ತಿದ ಸಮಯದಲ್ಲಿ ಸುಪ್ರೀಂಕೋರ್ಟ್ ನಲ್ಲಿ ವಾಜಪೇಯಿ ಆಡ್ವಾಣಿ ಸೇರಿದಂತೆ ತುರ್ತುಪರಿಸ್ಥಿತಿಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅನೇಕ ನಾಯಕರ ಪರವಾಗಿ ಸ್ವಪ್ರೇರಿತವಾಗಿ ವಾದ ಮಂಡಿಸಿದವರೇ ಶ್ರೀ ರಾಮಾ ಜೋಯಿಸರು. ಇದರ ಪರಿಣಾಮವಾಗಿಯೇ ಶ್ರೀ ರಾಮಾ ಜೋಯಿಸರೂ ಸಹಾ ಸೆರೆಮನೆಯ ವಾಸವನ್ನು ಅನುಭವಿಸಬೇಕಾಗಿ ಬಂದದ್ದು ನಿಜಕ್ಕೂ ವಿಪರ್ಯಾಸವೇ ಸರಿ.

ತುರ್ತು ಪರಿಸ್ಥಿತಿ ಅಂತ್ಯಗೊಂಡು ಜೈಲಿನಿಂದ ಬಿಡುಗಡೆಯಾದ ವರ್ಷದಲ್ಲಿಯೇ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಲ್ಲದೇ, 1992 ರ ಮೇ 3 ರಂದು ಪಂಜಾಬ್‌ ಹಾಗೂ ಹರ್ಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿಯೂ ಅಲ್ಪಕಾಲ ಸೇವೆ ಸಲ್ಲಿಸುವುದರೊಂದಿಗೆ ನಿವೃತ್ತರಾಗುತ್ತಾರೆ. ನಿವೃತ್ತರಾದ ಬಳಿಕ ಹಲವು ಕಾನೂನು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಅನುಭವದ ಧಾರೆಯನ್ನು ಎರೆಯುವುದಲ್ಲದೇ, ಕಾನೂನು ಸಂಬಂಧ ಪಟ್ಟ ಹಲವಾರು ಪುಸ್ತಕಗಳನ್ನು ಬರೆಯುತ್ತಾರೆ. ಇವುಗಳ ನಡುವೆಯೇ ಕೆಲವು ಪ್ರಮುಖ ಕೇಸುಗಳ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯವಾದಿಯಾಗಿಯೂ ವಾದ ಮಾಡುತ್ತಾರೆ.

2002 ರಲ್ಲಿ ಕೇಂದ್ರದಲ್ಲಿ ಶ್ರೀ ಆಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರ ಆಡಳಿತಕ್ಕೆ ಬಂದಾಗ ಶ್ರೀ ರಾಮಾ ಜೋಯಿಸರ ಹಿರಿತನ ಮತ್ತು ಅನುಭವವನ್ನು ಬಳಸಿಕೊಳ್ಳುವ ಸಲುವಾಗಿ ‌ ಅವರನ್ನು ಜಾರ್ಖಂಡ್‌ನ ರಾಜ್ಯಪಾಲರನ್ನಾಗಿ ನಿಯುಕ್ತಿ ಮಾಡುತ್ತಾರೆ. ಸುಮಾರು ಒಂದು ವರ್ಷಗಳ ಕಾಲ ಜಾರ್ಖಂಡಿನಲ್ಲಿ ಸೇವೆ ಸಲ್ಲಿಸಿದ ಬಳಿಕ 2003 ರಲ್ಲಿ ಬಿಹಾರದ ರಾಜ್ಯಪಾಲರಾಗಿ ವರ್ಗಾವಣೆಯಾಗಿ ಅಲ್ಲಿಯೂ ಸಹಾ ಒಂದು ವರ್ಷದ ಕಾಲ ಸೇವೆ ಸಲ್ಲಿಸುತ್ತಾರೆ. ರಾಜ್ಯಪಾಲರೆಂದರೆ ಕೇವಲ ಅಲಂಕಾರಿಕ ಹುದ್ದೆಯಲ್ಲದೇ ಅದಕ್ಕೂ ಒಂದು ಘನತೆ ಇರುತ್ತದೆ ಮತ್ತು ಜವಾಬ್ಧಾರಿ ಇರುತ್ತದೆ ಎನ್ನುವುದನ್ನು ಎತ್ತಿ ತೋರಿಸಿದರು ಎಂದರೂ ಅತಿಶಯೋಕ್ತಿಯೇನಲ್ಲ.

2008ರಲ್ಲಿ ಮತ್ತೆ ಅವರ ಸೇವೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ನಿರ್ಧರಿಸಿದ ಭಾರತೀಯ ಜನತಾಪಕ್ಷ ಅವರನ್ನು ಕರ್ನಾಟಕದಿಂದ ರಾಜ್ಯಸಭೆ ಆಯ್ಕೆಮಾಡಿ ಕಳುಹಿಸುತ್ತದೆ. 2014ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗುವವರೆಗೂ ಸಂಸತ್‌ ಕಲಾಪದಲ್ಲಿ ಅತ್ಯಂತ ಸಕ್ರೀಯವಾಗಿ ಭಾಗಿಯಾಗಿದ್ದಲ್ಲದೇ, ತಮ್ಮ ಸಂಸತ್ ನಿಧಿಯಿಂದ ತಮ್ಮ ತವರು ತೀರ್ಥಹಳ್ಳಿ ಕ್ಷೇತ್ರಕ್ಕೆ ಅತಿ ಹೆಚ್ಚಿನ ಅನುದಾನವನ್ನು ನೀದುವ ಮೂಲಕ ತೀರ್ಥಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದ್ದಲ್ಲದೇ ಸಮಾಜವಾದದ ನೆಲೆಯಾಗಿದ್ದ ತೀರ್ಥಹಳ್ಳಿ ಕ್ಷೇತ್ರದಲ್ಲಿ ರಾಷ್ಟ್ರೀಯತೆಯನ್ನು ಬಿತ್ತಿದ ಹಿರಿಯರ ಸಾಲಿನಲ್ಲಿ ಅಗ್ರೇಸರರಾಗಿ ರಾಮಾಜೋಯಿಸರು ಹೊರಹೊಮ್ಮಿದರು. ತಮ್ಮ ಆರು ವರ್ಷಗಳ ಸಂಸದೀಯ ಅವಧಿಯಲ್ಲಿ ಸಂಸತ್ತಿನಲ್ಲಿನ ಅವರ ಹಾಜರಾತಿ ಮತ್ತು ಸಂಸತ್‌ ಚರ್ಚೆಗಳಲ್ಲಿ ತಮ್ಮ ವಿದ್ಚದೀಯ ಭಾಷಣಗಳ ಮೂಲಕ ಸಕ್ರೀಯವಾಗಿ ಭಾಗವಹಿಸುವ ಮೂಲಕ ರಾಜ್ಯಸಭೆಯ ಘನತೆಯನ್ನು ಎತ್ತಿಹಿಡಿಯುವದರಲ್ಲಿ ಸಫಲರಾಗಿದ್ದರು. ಸಂಸದರಾಗಿ ಕೇವಲ ರಾಜಕೀಯದತ್ತವೇ ತಮ್ಮ ಚಿತ್ತವನ್ನು ಹರಿಸದೇ, ಇದೇ ಸಮಯದಲ್ಲಿಯೇ ಸಂಸತ್ತಿನಲ್ಲಿರುವ ಎಲ್ಲಾ ಸಂಸ್ಕೃತ ಶ್ಲೋಕಗಳು ಮತ್ತು ಬರಹಗಳನ್ನು ಭಾಷಾಂತರಿಸಿ, ಆ ಶ್ಲೋಕಗಳ ಭಾವಾರ್ಥಗಳು ಜನಸಾಮಾನ್ಯರಿರೂ ತಲುಪುವಂತೆ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾದದ್ದು.

ಅವರ ಸರಳತೆಯನ್ನು ತೋರಿಸುವ ಪ್ರಸಂಗವೊಂದನ್ನು ನಮ್ಮ ಆತ್ಮೀಯರು ಹಂಚಿಕೊಂಡಿದ್ದಾರೆ. ಅವರು ರಾಜ್ಯಸಭಾ ಸದಸ್ಯರಾಗಿದ್ದಾಗ, ಬೆಂಗಳೂರಿನಿಂದ ದೆಹಲಿಗೆ ಹೋಗಿ ಬರಲು ವಿಮಾನದಲ್ಲಿ ಸರ್ಕಾರೀ ಖರ್ಚಿನಲ್ಲಿ executive classsನಲ್ಲಿ ಓಡಾಡುವ ಅವಕಾಶ ಕಲ್ಪಿಸಿಕೊಡಲಾಗುತ್ತದೆ. , ವಿಮಾನದಲ್ಲಿ ಹೋಗುವಾಗ ಎಗ್ಸಿಕ್ಯುಟೀವ್ ಕ್ಲಾಸಿನಲ್ಲಿ ಹೋದರೂ ಒಂದೇ ಆರ್ಡಿನರಿ ಕ್ಲಾಸಿನಲ್ಲಿ ಹೋದರೂ ತಲುಪುವುದು ಒಂದೇ ಸಮಯಕ್ಕೇ ಹಾಗಾಗಿ ಅವರೆಂದೂ, ಎಗ್ಸಿಕ್ಯುಟೀವ್ ಕ್ಲಾಸಿನಲ್ಲಿ ಹೋಗದೇ, ಮಿಡಲ್‌ಕ್ಲಾಸಿನಲ್ಲೇ ಓಡಾಡುವ‌ ಮೂಲಕ, ಯಾವಾಗಲೂ ಜನಸಾಮಾನ್ಯರಂತೆ ಇರುವುದನ್ನು ರೂಢಿಸಿಕೊಳ್ಳಬೇಕು. ಎಷ್ಟೇ ದೊಡ್ಡವರಾದರೂ ಸಾಮಾನ್ಯ ಮನುಷ್ಯರಂತೆ ಇರಬೇಕು, ಎಲ್ಲರೂ ಒಂದೇ ಎಲ್ಲರೂ ನಮ್ಮವರೇ ಎನ್ನುವ ಮನೋಭಾವ ಇಟ್ಟುಕೊಂಡಿರಬೇಕು ಎಂದು ಹೇಳಿದ್ದರಂತೆ.

ರಾಮಾ ಜೋಯಿಸರು ಶಿವಮೊಗ್ಗದಲ್ಲಿ ಸಂಘದ ಕಾರ್ಯಕರ್ತರಾಗಿದ್ದಾಗಿನ‌ ಅವರ ಕಾನೂನು ಪಾಲನೆಯ ಬದ್ದತೆಯ ಕುರಿತಾದ ಒಂದು ಪ್ರಸಂಗ ಈ ಸಮಯದಲ್ಲಿ ಹಂಚಿಕೊಳ್ಳಲೇಬೆಕು. ಅದೊಂದು ದಿನ, ಬಿ.ಬಿ.ರಸ್ತೆಯ ಹತ್ತಿರ ರಾತ್ರಿ ಅವರು ಸೈಕಲ್ ದಬ್ಬಿಕೊಂಡು ಬರುತ್ತಿದ್ದಾಗ ಕೆ.ಎಸ್ ಈಶ್ವರಪ್ಪನವರ ಅಣ್ಣ ಚಂದ್ರಪ್ಪನವರು ಎದಿರಾಗುತ್ತಾರೆ.ಇದೇನು‌ ಜೋಯಿಸರೇ ಇಷ್ಟು ಹೊತ್ತಿನಲ್ಲಿ ಸೈಕಲ್ ತಳ್ಳಿಕೊಂಡು ಬರುತ್ತಿದ್ದೀರಿ ಎಂದು ಕೇಳಿದರು. ಆಗೆಲ್ಲಾ ರಾತ್ರಿ ಸೈಕಲ್ ತುಳಿಯುವಾಗ ಚಿಮಣಿ/ದೀಪ ಕಡ್ಡಾಯವಾಗಿತ್ತು. ದೀಪ ಇರದಿದ್ದಲ್ಲಿ ಪೋಲೀಸರು ಹಿಡಿದು ದಂಡ ಹಾಕುತ್ತಿದ್ದರು.

ಅದಕ್ಕೆ ಜೋಯಿಸರು, ದೀಪವಿಲ್ಲದಿದ್ದರಿಂದ ಸೈಕಲ್ ದಬ್ಬಿಕೊಂಡು ಹೋಗುತ್ತಿದ್ದೇನೆ ಎಂದರು.

ಚಂದ್ರಪ್ಪನವರು ಅರೇ, ಜೋಯಿಸರೇ, ಪೋಲೀಸರು ಗಾಂಧೀ ಬಜಾರ್ ಮುಂದಿರುತ್ತಾರೆ. ಇಲ್ಲೇನು ಹೆದರಿಕೆ? ಸೈಕಲ್ ತುಳಿದುಕೊಂಡು ಹೋಗಿ, ಪರವಾಗಿಲ್ಲ
ಎಂದರು.

ಆಗ ರಾಮಾ ಜೋಯಿಸರು ಕಾನೂನು ಇರುವುದು ಪೋಲೀಸರಿಗಾಗಿ ಅಲ್ಲ. ನಮಗಾಗಿ ಎಂದಿದ್ದರಂತೆ.

ಇಂತಹವರು ನಮ್ಮ ನಡುವೆ ಇದ್ದರು ಎಂಬುದೇ ನಮ್ಮಗಳ ಪುಣ್ಯ ಎಂದರೂ ಅತಿಶಯೋಕ್ತಿಯೇನಲ್ಲ.

ತಮ್ಮ ಬಿಡುವಿನ ಸಮಯದಲ್ಲಿ ಸರ್ವೀಸ್ ಅನ್ಡರ್ ಸ್ಟೇಟ್, ಹಿಸ್ಟಾರಿಕಲ್ ಬ್ಯಾಟಲ್, ನೀಡ್ ಫಾರ್ ಅಮೆಂಡಿಂಗ್ ದಿ ಕಾನ್ಸ್ಟಿಟ್ಯೂಷನ್, ರಾಜ ಧಾರ್ಮ ವಿಥ್ ದಿ ಲೆಸೆನ್ಸ್ ಆಫ್ ರಾಜ ನೀತಿ ಮುಂತಾದ ಕಾನೂನಾತ್ಮಕ ಪುಸ್ತಕಗಳನ್ನು ಬರೆದಿದ್ದಾರೆ.

ರಾಮಜೋಯಿಸ್ ಅವರ ಈ ಎಲ್ಲಾ ಸಮಾಜಮುಖೀ ಸೇವೆಗಳನ್ನೂ ಪರಿಗಣಿಸಿ ಕುವೆಂಪು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಸಹಾ ನೀಡಿ ಗೌರವಿಸಿತ್ತು.

ತೀರ್ಥಹಳ್ಳಿಯ ಅರಗ ಗ್ರಾಮದಲ್ಲಿ ಜನಿಸಿ ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದರೂ ಕೆಲ ಕಾಲ ಆಗುಂಬೆಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ ಹೈಕೋರ್ಟ್ ನ್ಯಾಯಾಧೀಶರಾಗಿ, ಎರಡು ರಾಜ್ಯಗಳ ರಾಜ್ಯಪಾಲರಾಗಿ, ರಾಜ್ಯ ಸಭೆಯ ಸಂಸದರಾಗಿದ್ದರೂ, ತಾವು ನಂಬಿದ್ದ ಸಿದ್ಧಾಂತ ಮತ್ತು ವೈಚಾರಿಕತೆಗಳಿಗೆ ಕಿಂಚಿತ್ತೂ ಚ್ಯುತಿ ಬಾರದಂತೆ, ತಾವು ಎಷ್ಟು ಎತ್ತರಕ್ಕೇರಿದರೂ, ತಮ್ಮ ರಾಷ್ಟ್ರೀಯತೆಯ ವಿಚಾರಧಾರೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದಿದ್ದ ಶ್ರಿಯುತ ರಾಮಾ ಜೋಯಿಸರು, ತಮ್ಮ 89 ವರ್ಷಗಳ ಸುದೀರ್ಘ ಜೀವನ ನಡೆಸಿದ ನಂತರ ಇಂದು ಫೆಬ್ರವರಿ 16 2021 ರಂದು ತಮ್ಮ ವಯೋಸಹಜ ದೀರ್ಘಕಾಲೀನ ಅನಾರೋಗ್ಯದ ಪರಿಣಾಮವಾಗಿ ಬೆಳಿಗ್ಗೆ 7.30ರ ಸುಮಾರಿನಲ್ಲಿ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾಧವಾಗುತ್ತದೆ.

ತಮ್ಮ ಧರ್ಮಪತ್ನಿ ಶ್ರೀಮತಿ ವಿಮಲಾ ಮತ್ತು ನ್ಯಾಯವಾದಿಗಳೇ ಆಗಿರುವ ಮಗ ಮತ್ತು ಮಗಳು ಅಲ್ಲದೇ ತಮ್ಮ ಅಪಾರವಾದ ಅಭಿಮಾನಿಗಳನ್ನು ದುಖಃ ಸಾಗರದಲ್ಲಿ ತೇಲುವಂತೆ ಮಾಡಿದ್ದಾರೆ.ಭಗವಂತ ಮೃತರ ಆತ್ಮಕ್ಕೆ ಸದ್ಗತಿಯನ್ನು ಕೊಡಲಿ ಮತ್ತು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸೋಣ.

ಏನಂತೀರೀ?

ನಿಮ್ಮವನೇ ಉಮಾಸುತ

One thought on “ನ್ಯಾಯಮೂರ್ತಿ, ಶ್ರೀ ರಾಮಾ ಜೋಯಿಸ್

  1. ಶ್ರೀ ರಾಮಾಜೋಯಿಸರ ಅತ್ತೆ ಮತ್ತು ನನ್ನ ಅತ್ತೆ ಹಿಂದೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹೋದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ವಿಧಾನಸೌಧದಲ್ಲಿ ನಾನು ಅಧಿಕಾರಿಯಾಗಿದ್ದಾಗ ನಮ್ಮದೇ ಇಲಾಖೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ರಾಮಾಜೋಯಿಸ್ ಅವರು ಬಂದಿದ್ದರು. ಆ ದಿನ ಶ್ರೀ ರಾಮಾಜೋಯಿಸರನ್ನು ಕಾರಿನಲ್ಲಿ ಅವರ ಮನೆಯಿಂದ ಕರೆದುಕೊಂಡುಬಂದು ವಾಪಸ್ ಅವರ ಮನೆಗೆ ಬಿಡುವ ಜವಾಬ್ದಾರಿಯನ್ನು ನನಗೆ ವಹಿಸಲಾಗಿತ್ತು. ಆ ಸಂದರ್ಭದಲ್ಲಿ ನನ್ನ ಪರಿಚಯವನ್ನು ಹೇಳಿಕೊಂಡು ಅವರ ಮನೆಯಲ್ಲಿ ಅರ್ಧ ಗಂಟೆ ಮಾತನಾಡುವ ಅವಕಾಶ ಲಭಿಸಿತ್ತು. ಆಗ ಅವರ ಸರಳ ವ್ಯಕ್ತಿತ್ವದ ಪರಿಚಯ ನನಗೆ ಚೆನ್ನಾಗಿ ಆಗಿತ್ತು. ಅವರು ಆಗ ರಾಜ್ಯಸಭಾ ಸದಸ್ಯರೂ ಆಗಿದ್ದರು. ರಾಜ್ಯಸಭಾ ಸದಸ್ಯರು ದೆಹಲಿಗೆ ಹೋಗಿಬರುವಾಗ ವಿಮಾನದಲ್ಲಿ executive classsನಲ್ಲಿ ಓಡಾಡುವ ಅವಕಾಶ ಇತ್ತು. ಅವರು ಹೇಳುತ್ತಿದ್ದರು, “ವಿಮಾನದಲ್ಲಿ ಹೋಗುವಾಗ ಎಗ್ಸಿಕ್ಯುಟೀವ್ ಕ್ಲಾಸಿನಲ್ಲಿ ಹೋದರೂ ಒಂದೇ ಆರ್ಡಿನರಿ ಕ್ಲಾಸಿನಲ್ಲಿ ಹೋದರೂ ಒಂದೇ. ಅದಕ್ಕೆ ನಾನು ಒಂದು ಸಲವೂ ಎಗ್ಸಿಕ್ಯುಟೀವ್ ಕ್ಲಾಸಿನಲ್ಲಿ ಹೋಗಿಲ್ಲ, ಆರ್ಡಿನರಿ ಕ್ಲಾಸಿನಲ್ಲೇ ಓಡಾಡುತ್ತೇನೆ. ನಾವು ಯಾವಾಗಲೂ ಜನಸಾಮಾನ್ಯರಂತೆ ಇರುವುದನ್ನು ರೂಢಿಸಿಕೊಳ್ಳಬೇಕು. ಎಷ್ಟೇ ದೊಡ್ಡವರಾದರೂ ಸಾಮಾನ್ಯ ಮನುಷ್ಯರಂತೆ ಇರಬೇಕು, ಎಲ್ಲರೂ ಒಂದೇ ಎಲ್ಲರೂ ನಮ್ಮವರೇ ಎನ್ನುವ ಮನೋಭಾವ ಇಟ್ಟುಕೊಂಡಿರಬೇಕು” ಎಂದು ಹೇಳಿದರು. ಆಗ ಅವರು ಅನೇಕ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದರು. ಅಷ್ಟು ದೊಡ್ಡ ಮನುಷ್ಯರಾಗಿದ್ದರೂ ಸರಳವಾಗಿ ಆತ್ಮೀಯತೆಯಿಂದ ಮಾತನಾಡಿಸಿ ಕಳಿಸಿದ್ದರು.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s