ಭೂವರಾಹಸ್ವಾಮಿ ದೇವಸ್ಥಾನ ಕಲ್ಲಹಳ್ಳಿ

ವರಾಹ ನಾಥ ಕಲ್ಲಹಳ್ಳಿ  ಮಂಡ್ಯ ಜಿಲ್ಲೆಯ ಕೆ .ಅರ. ಪೇಟೆ ತಾಲೂಕಿನ ಒಂದು ಪುಣ್ಯ ಕ್ಷೇತ್ರ ಕೆ.ಅರ. ಪೇಟೆ ಯಿಂದ 18.ಕಿ.ಮಿ.,ಮೈಸೂರಿನಿಂದ 43 ಕಿ.ಮಿ. ದೂರದಲ್ಲಿದೆ. ಮೈಸೂರಿನಿಂದ ಕೆ.ಆರ್.ಎಸ್ ಮಾರ್ಗವಾಗಿ ಕನ್ನಂಬಾಡಿ ಊರನ್ನು ದಾಟಿ ಕೆ.ಆರ್.ಎಸ್ ಹಿನ್ನಿರನ್ನು ಅನುಸರಿಸಿಕೊಂಡು ಅರ್ಧ ಮುಕ್ಕಾಲು ಗಂಟೆ ಪ್ರಯಣಿಸಿದರೆ,  ಪಶ್ಚಿಮ ದಿಂದ ಉತ್ತರಕ್ಕೆ ಸಾಗುವ ಹೇಮಾವತಿ ನದಿಯ ದಡದಲ್ಲಿ ನಿರ್ಮಾಣದ ಹಂತದಲ್ಲಿರುವ ಕಲ್ಲಹಳ್ಳಿಯ ಭೂವರಾಹ ಸ್ವಾಮಿಯ  ದೇವಾಲಯವನ್ನು ಕಾಣಬಹುದಾಗಿದೆ.

ಬೆಂಗಳೂರಿನಿಂದ ಬರುವ ಭಕ್ತಾದಿಗಳು ಮಂಡ್ಯ ಮತ್ತು ಶ್ರೀ ರಂಗಪಟ್ಟಣ ಮಾರ್ಗವಾಗಿ ಬಂದು ಅಲ್ಲಿಂದ ಕಿರಂಗೂರ್ ಗೇಟ್ ಬಳಿ ಬಲಕ್ಕೆ ತಿರುಗಿ  ಕೆ.ಆರ್.ಪೇಟೆ ರಸ್ತೆಯಲ್ಲಿ ಸಾಗಿ  ಪಾಂಡವಪುರ  ರೈಲ್ವೆ ನಿಲ್ದಾಣ, ಚಿನಕುರುಳಿ, ಭೂಕನಕೆರೆ ದಾಟಿ ಗಂಜಿಗೆರೆಯಿಂದ ಸುಮಾರು ನಾಲ್ಕು ಕಿ.ಮಿ.ಕ್ರಮಿಸಿದರೆ ಕಲ್ಲಹಳ್ಳಿಯ ಭೂವರಾಹ ಸ್ವಾಮಿಯ ದೇವಾಲಯವನ್ನು ತಲುಪಬಹುದಾಗಿದೆ.

ದೇವಾಲಯ ಪೂರ್ವಾಭಿಮುಖವಾಗಿದ್ದು ಗರ್ಭ ಗಡಿಯಲ್ಲಿ ಎತ್ತರದ ಪೀಠದ ಮೇಲೆ ವರಾಹ ಸ್ವಾಮಿ ಹಾಗು ಎಡ ತೊಡೆಯ ಮೇಲೆ ಭೂದೇವಿಯು ಆಸಿನಳಾಗಿದ್ದು, ಅವಳ ಸೊಂಟವನ್ನು ವರಾಹಸ್ವಾಮಿಯು ಬಳಸಿ ವಿಶಿಷ್ಟ ಬಂಗಿಯಲ್ಲಿ ಕುಳಿತಿರುವ ಸುಮಾರು 17 ಅಡಿ ಎತ್ತರದ ದೇಶದಲ್ಲಿಯೇ ಅಪರೂಪದ್ದಾಗಿರುವ ಬೃಹದಾಕಾರದ ಸಾಲಿಗ್ರಾಮ ಕೃಷ್ಣಶಿಲೆಯ ನಯನ ಮನೋಹರವಾಗಿದ ಮೂರ್ತಿಯನ್ನು ಕಣ್ತುಂಬಿಕೊಳ್ಳುವುದಕ್ಕೆ ನಿಜಕ್ಕೂ ಅದೃಷ್ಟ ಪಡೆದಿರಲೇ ಬೇಕು.

ದೇವಾಲಯದ ಬಳಿ ಇರುವ 1334ರ ಶಿಲಾಶಾಸನದ ಪ್ರಕಾರ ಮಹಾಪ್ರಧಾನ ಆದಿ ಸಿಂಗೇಯ ನಾಯಕನು ಕಲ್ಲಹಳ್ಳಿ ಗ್ರಾಮವನ್ನು ಅಗ್ರಹಾರವಾಗಿಸಿ, ರಾಣಿ ದೇಮಲದೇವಿಯ ಹೆಸರಿನಲ್ಲಿ ದೇವಲಾಪುರ ಎಂದು ನಾಮಕರಣ ಮಾಡಿ, ರಾಜ ಗುರು ಗುಮ್ಮಟ ದೇವನಿಗೆ ದಾನ ಮಾಡಿರುವುದಾಗಿ ತಿಳಿಸುತ್ತದೆ.ಶಾಸನದಲ್ಲಿ ಸೂರ್ಯ-ಚಂದ್ರ, ಕಮಂಡಲ ,ದೀಪ ಮಾಲೆ ಕಂಬ ಅರ್ದ ಮಾನವ ಹಾಗು ಅರ್ದ ಬೇರುಂಡ ಪಕ್ಷಿ ಕೆತ್ತನೆಯಿದ್ದು ,ಪಂಜ ಮೇಲೆತ್ತಿ  ಗರ್ಜಿಸಿರುವ ಹುಲಿಯ ಕೆತ್ತನೆ ಅದ್ಭುತವಾಗಿದೆ.

ಈ ಮೊದಲು ಈ ರೀತಿಯಾಗಿ ಸಣ್ಣದಾಗಿ ಇದ್ದ ದೇವಾಲಯವನ್ನು ಸಂಪೂರ್ಣವಾಗಿ ಹೊಸದಾಗಿ ಭವ್ಯವಾಗಿ ನಿರ್ಮಾಣ ಮಾಡುವ ಕಾರ್ಯವನ್ನು ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದವರು ಊ ದೇವಾಲಯದ ಪುನರ್ ನಿರ್ಮಾಣದ ಹೊಣೆಯನ್ನು ಹೊತ್ತಿದ್ದು, ತಿರುಮಲ ತಿರುಪತಿಯ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಮಾಡಲು ನಿಶ್ಚಯಿಸಲಾಗಿದೆ. 108 ಕಂಬಗಳ ಮುಖಮಂಟಪ 150 ಅಡಿ ಎತ್ತರದ ಬೃಹತ್ ರಾಜಗೋಪುರದ ನಿರ್ಮಾಣವೂ ಸೇರಿದಂತೆ ದೇವಾಲಯವನ್ನು ವಾಸ್ತುಪ್ರಕಾರವಾಗಿ ವಿಸ್ತರಣಾ ಕೆಲಸವನ್ನು ಸುಮಾರು 50ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಡೆಸಲಾಗುತ್ತಿದ್ದು  ಅದಕ್ಕೆ ಪೂರಕವಾಗಿ ಕಲ್ಲಿನ ಕಂಬಗಳು ಈಗಾಗಲೇ  ಶ್ರೀ ಕ್ಷೇತ್ರಕ್ಕೆ ತರಲಾಗಿದ್ದು ಅದರ ಕೆತ್ತನೆ ಕೆಲಸಗಳು ನಿರಂತವಾಗಿ ಭರದಿಂದ ಹಲವಾರು ವರ್ಷಗಳಿಂದಲೂ ನಡೆಯುತ್ತಲಿದೆ.

ನಿರ್ಮಾಣವಾಗುತ್ತಿರುವ ಈ ದೇವಾಲಯವನ್ನು ಹೊರಗಿನಿಂದ  ನೋಡಿದವರಿಗೆ ಇಷ್ಟು ದೊಡ್ಡದಾದ ಭವ್ಯವಾದ ಮೂರ್ತಿ ಒಳಗಡೆ ಇರಬಹುದು ಎನ್ನುವ ಕಲ್ಪನೆಗೂ ಸಿಗದಂತಿರುವ ಈ ಬೃಹದಾಕಾರದ ಸಾಲಿಗ್ರಾಮ ಕೃಷ್ಣಶಿಲೆಯ ನಯನ ಮನೋಹರ ಸ್ವಾಮಿಯು  ಬೇಡಿ ಬಂದ ಭಕ್ತರ ಹರಕೆಗಳನ್ನು ನೆರವೇರಿಸುವ ಭೂ ವೈಕುಂಠವೆಂದೇ ಪ್ರಖ್ಯಾತವಾಗಿದೆ. ಭೂವ್ಯಾಜ್ಯಗಳನ್ನು ಪರಿಹರಿಸುವ, ಸ್ವಂತ ಸೂರನ್ನು ಹೊಂದಬೇಕೆಂಬ ಕನಸನ್ನು ಹೊತ್ತಿರುವ ಭಕ್ತರು ಹಾಗೂ ಮಧ್ಯಮ ವರ್ಗದ ಜನರ ಕರುಣಾಮಯಿಯಾಗಿರುವ ಭೂವರಹನಾಥಸ್ವಾಮಿಯು ಭಕ್ತರ ಅಭೀಷ್ಠೆಗಳನ್ನು ನೆರವೇರಿಸುತ್ತಾ ಹೇಮಾವತಿ ನದಿಯ ದಡದಲ್ಲಿಯೇ ಅನಾದಿ ಕಾಲದಿಂದಲೂ ನೆಲೆಸಿದ್ದಾನೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಇಂತಹ ಪುರಾಣ ಪ್ರಸಿದ್ಧವಾದ ಕಲ್ಲಹಳ್ಳಿಯ ಭೂವರಹನಾಥಸ್ವಾಮಿಗೆ ರೇವತಿ ನಕ್ಷತ್ರದ ಅಂಗವಾಗಿ ವಿಶೇಷ ಅಭಿಷೇಕ ಹಾಗೂ ಪೂಜೆ ಪುರಸ್ಕಾರಗಳು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿದ್ದು ವಿಶೇಷವಾಗಿತ್ತು.

ಒಂದು ಸಾವಿರ ಲೀಟರ್ ಹಾಲು, 500 ಲೀಟರ್ ಕಬ್ಬಿನ ಹಾಲು, 500 ಲೀಟರ್ ಎಳನೀರು, ಜೇನುತುಪ್ಪ, ಮೊಸರು, ಹಸುವಿನ ತುಪ್ಪ, ಶ್ರೀಗಂಧ, ಅರಿಶಿನ ಹಾಗೂ ಪವಿತ್ರ ಗಂಗಾಜಲದಿಂದ ಅಭಿಷೇಕ ಮಾಡಿ ಗುಲಾಬಿ, ಮಲ್ಲಿಗೆ ಸೇವಂತಿಗೆ, ಜಾಜಿ, ಕನಕಾಂಬರ,  ಸಂಪಿಗೆ, ಪನ್ನೀರು ಹೂವು, ಕಮಲ, ಸೂಜಿಮಲ್ಲಿಗೆ, ತುಳಸಿ, ಪವಿತ್ರ ಪತ್ರೆಗಳು, ಮರುಗ, ಧವನ ಸೇರಿದಂತೆ 58 ಬಗೆಯ ಪತ್ರೆಗಳು ಮತ್ತು ಪುಷ್ಪಗಳಿಂದ ಅಭಿಷೇಕ ಮಾಡಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ರೇವತಿ ನಕ್ಷತ್ರದ  ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರಶಿವಾಚಾರ್ಯ ಸ್ವಾಮೀಜಿಗಳು ಅಭಿಷೇಕವನ್ನು ಕಣ್ತುಂಬಿಕೊಂಡು ಶ್ರೀ ಕ್ಷೇತ್ರ ಹಾಗೂ ಭೂವರಹನಾಥಸ್ವಾಮಿಯ ಶಕ್ತಿಯನ್ನು ಸ್ಮರಿಸಿದರು..ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಿಂದ ಭಗವಂತನ ಸಾಕ್ಷಾತ್ಕಾರ ಹೊಂದಬಹುದು. ಭಗವಂತನಿಗೆ ಆಡಂಬರದ ಪೂಜೆ ಪುರಸ್ಕಾರಗಳು ಬೇಕಾಗಿಲ್ಲ. ಶ್ರದ್ಧಾ ಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿ ಪೂಜಿಸಿದರೂ ಸಾಕು ದಯಾಮಯನಾದ ಭಗವಂತನು ಒಲಿದು ಆಶೀರ್ವಾದ ಮಾಡಿ ಹರಸುತ್ತಾನೆ ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

ನವದೆಹಲಿಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸಂಸದ್ ಭವನಕ್ಕೆ  ವಾಸ್ತುಸಲಹೆಯನ್ನು ನೀಡಿರುವ ಬಳ್ಳಾರಿಯ ಪ್ರಖ್ಯಾತ ವಾಸ್ತುತಜ್ಞ ಶ್ರೀ ಶ್ರೀಧರ ಪ್ರಮೀಳಾಚಾರ್ ಅವರು ಸಹಾ ಈ ದಿನದ ಪೂಜೆಯಲ್ಲಿ ಭಾಗವಹಿಸಿ  ನಿರ್ವಿಘ್ನವಾಗಿ, ನಿಗಧಿತ ಸಮಯದಲ್ಲಿಯೇ ನೂತನ ಸಂಸದ್ ಭವನದ ಕಾಮಗಾರಿಯು ಮುಗಿಯಲಿ ಎಂದು ಭಗವಂತ ಬಳಿ ಕೋರಿಕೊಂಡಿದ್ದು ವಿಶೇಷವಾಗಿತ್ತು. ಮೈಸೂರಿನ ಪರಕಾಲ ಮಠದ ಪೀಠಾಧ್ಯಕ್ಷರಾದ ಶ್ರೀ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿಗಳು, ಅವರೂ ಸಹಾ ಈ ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೂ ದೇವಾಲಯ ಜೀರ್ಣೋದ್ಧಾರ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿಗಳಾದ ಶ್ರೀನಿವಾಸರಾಘವನ್ ಮತ್ತು ನಾಗೇಶರಾವ್ ಅವರ ನೇತೃತ್ವದಲ್ಲಿ ವಿಶೇಷ ಪ್ರಸಾದ ಹಾಗೂ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದದ್ದು ಶ್ಲಾಘನೀಯವಾಗಿತ್ತು.

ದೇವಾಲಯದ ಪಕ್ಕದಲ್ಲೇ ಹರಿಯುವ ಹೇಮಾವತಿ ನದಿಯ ದಂಡೆಯಲ್ಲಿರುವ ಹಲವಾರು ಬಗೆಯ ನೀರು ಹಕ್ಕಿಗಳು, ಮತ್ತು ಅಕ್ಕ ಪಕ್ಕದ ಹಸಿರಿನ ಗದ್ದೆಗಳಲ್ಲಿ ಕಾಣಸಿಗುವ ಬಗೆ ಬಗೆಯ  ಜಾತಿಯ ಹಕ್ಕಿಗಳು ನೋಡುಗರ ಹೃಮನಗಳನ್ನು ತಣಿಸುತ್ತವೆ.

ತಮ್ಮ ಕೆಲಸದ ಮಧ್ಯೆ ಅಲ್ಪ ಸಮಯ ಮಾಡಿಕೊಂಡು ಭೂ ವರಾಹ ಸ್ವಾಮಿಯ ದರ್ಶನ ಪಡೆದು ಪಾವನರಗೋಣ.  ಹಿಂದಿರುಗುವ ಮಾರ್ಗದಲ್ಲಿ ಕನ್ನಂಬಾಡಿ ಕಟ್ಟೆ ಕಟ್ಟುವ ಸಮಯದಲ್ಲಿ ಮುಳುಗಡೆಯಾಗಿದ್ದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ಖೋಡೇಸ್ ಟ್ರಸ್ಟ್ ಅವರು ಜತನದಿಂದ ಹಿನ್ನೀರಿನ ನದಿಯ ತಟದಕ್ಕೆ ಸ್ಥಳಾಂತರಿಸಿ ಮೂಲ ದೇವಾಲಯಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಅತ್ಯದ್ಭುತವಾಗಿ ನಿರ್ಮಿಸಿರುವ ನೂತನ ದೇವಾಲಯವನ್ನೂ ನೋಡಿಕೊಂಡು ಶ್ರೀರಂಗಪಟ್ಟಣದ ಮೂಲಕ ಬೆಂಗಳೂರನ್ನು ತಲುಪಬಹುದಾಗಿದೆ.

ಇದಿಲ್ಲದಿದ್ದರೆ, ಬಂದ ದಾರಿಯಲ್ಲಿಯೇ ಪಾಂಡವಪುರ ತಲುಪಿ ಅಲ್ಲಿಂದ ಉತ್ತರಾಭಿಮುಖವಾಗಿ ಹತ್ತು ಹದಿನೈದು ಕಿ.ಮೀ ದೂರದಲ್ಲಿರುವ ಇತಿಹಾಸ ಪ್ರಸಿದ್ದ ಕೆರೆತೊಂಡನೂರು ಮತ್ತು ಅಲ್ಲಿಂದ ನಾಗಮಂಗಲದ ಶ್ರೀ ಸೌಮ್ಯಕೇಶವನ ದರ್ಶನ ಪಡೆದು ಬೆಳ್ಳೂರು, ಯಡೆಯೂರು ಮತ್ತು ಕುಣಿಗಲ್ ಮುಖಾಂತರ ಬೆಂಗಳೂರನ್ನು ತಲುಪಬಹುದಾಗಿದೆ.

ಇನ್ನೇಕೆ ತಡಾ, ವಾರಾಂತ್ಯಾದಲ್ಲಿ ಈ ಎಲ್ಲಾ ರಮಣೀಯ ಕ್ಷೇತ್ರಗಳಿಗೆ ಭೇಟಿ ನೀಡಿ ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಕಲ್ಲಹಳ್ಳಿಯ ಭೂವರಾಹನಾಥಸ್ವಾಮಿಗೆ ರೇವತಿ ನಕ್ಷತ್ರದ ಅಂಗವಾಗಿ ನಡೆದ ವಿಶೇಷ ಅಭಿಷೇಕ ಹಾಗೂ ಪೂಜೆ ಪುರಸ್ಕಾರಗಳನ್ನು ಮನೆಯಿಂದಲೇ ಕಣ್ತುಂಬಿಸಿಕೊಳ್ಳೋಣ ಬನ್ನಿ.

 

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s