ಅದು 1920ರ ಸಮಯ ಅಲ್ವಾರ್ ಮಹಾರಾಜ ಜೈ ಸಿಂಗ್ ಪ್ರಭಾಕರ್ ಅವರು ಅಸಾಧಾರಣ ಶ್ರೀಮಂತರಾಗಿದ್ದರು, ಸುಮಾರು ಹತ್ತಾರು ತಲೆಮಾರುಗಳ ಕಾಲ ಸುಮ್ಮನೇ ಕುಳಿತು ತಿಂದರೂ ಕರಗದಷ್ಟು ಆಸ್ತಿ ಅವರ ಬಳಿ ಇತ್ತು. ಅದೊಮ್ಮೆ ಅವರು ಲಂಡನ್ನಿಗೆ ಹೋಗಿದ್ದಾಗ ನಗರ ಪ್ರದಕ್ಷಿಣೆಗಾಗಿ ಸಾಧಾರಣವಾದ ಬಟ್ಟೆಗಳನ್ನು ಧರಿಸಿ, ಯಾವುದೇ ಆಳುಗಳ ಬೆಂಗಾವಲು ಇಲ್ಲದೇ ಹೋಗುತ್ತಿದ್ದಾಗ ಅವರು ರಸ್ತೆಯಲ್ಲಿದ್ದ ರೋಲ್ಸ್ ರಾಯ್ಸ್ ಕಾರಿನ ಶೋ ರೂಂ ನೋಡಿದರು. 1906 ರಲ್ಲಿ ಆರಂಭವಾದ ರೋಲ್ಸ್ ರಾಯ್ಸ್ ಬ್ರಾಂಡ್ 1920ರ ಹೊತ್ತಿಗೆ ವಿಶ್ವದ ನಂಬರ್ ಒನ್ ಕಾರು ಆಗಿ ಪ್ರಸಿದ್ಧಿಯನ್ನು ಪಡೆದಿದಿತ್ತು. ಆ ಕಾರಗಳನ್ನು ತಮ್ಮ ಬಳಿ ಹೊಂದಿರುವುದೇ ಐಶಾರಾಮ್ಯದ ಕುರುಹಾಗಿತ್ತು. ಹಾಗಾಗಿ ರಾಜಾ ಜೈ ಸಿಂಗ್ ಅವರು ಸಹಾ ಆ ಕಾರುಗಳನ್ನು ನೋಡುವುದಕ್ಕಾಗಿ ರೋಲ್ಸ್ ರಾಯ್ಸ್ ಕಾರುಗಳ ಶೋ ರೂಮಿಗೆ ಹೋಗಿ ಕಾರಿನ ವಿಶೇಷಣಗಳು ಮತ್ತು ಅವುಗಳ ಬೆಲೆಗಳ ಬಗ್ಗೆ ವಿಚಾರಿಸತೊಡಗಿದ್ದಲ್ಲದೇ, ಕಾರಿನ ಟೆಸ್ಟ್ ಡ್ರೈವ್ ಮಾಡಬಹುದೇ ಎಂದು ಕೇಳಿದರು. ಒಬ್ಬ ಸಾಧಾರಣ ಭಾರತೀಯ ವ್ಯಕ್ತಿಯೊಂದಿಗೆ ಸಂಯಮದಿಂದ ವ್ಯವಹರಿಸಲು ಇಚ್ಚೆ ಪಡದ ಸಿಬ್ಬಂಧಿಗಳು ಅವರನ್ನು ನಿರ್ಲಕ್ಷಿಸುವ ಮೂಲಕ, ಮಹಾರಾಜರಿಗೆ ಅವಮಾನ ಮಾಡಿದ್ದಲ್ಲದೇ ಒಂದು ರೀತಿಯಲ್ಲಿ ಅವರನ್ನು ಬಲವಂತವಾಗಿ ಹೊರಗೆ ಹೋಗುವಂತೆ ಮಾಡಿದ್ದರು.
ರೋಲ್ಸ್ ರಾಯ್ಸ್ ಶೋ ರೂಮಿನ ಸಿಬ್ಬಂಧಿಗಳ ಉದ್ಧಟತನ, ಸಹಜವಾಗಿಯೇ ಮಹಾರಾಜರನ್ನು ಕೆರಳಿಸಿತ್ತು. ಕೂಡಲೇ ತಾವು ಉಳಿದುಕೊಂಡಿದ್ದ ಹೋಟೆಲ್ಲಿಗೆ ಮರಳಿ ತಮ್ಮ ಸಿಬ್ಬಂಧಿಯನ್ನು ಕರೆದು, ಭಾರತದ ಮಹಾರಾಜರು ರೋಲ್ಸ್ ರಾಯ್ ಕಾರನ್ನು ನೋಡಲು ಇಚ್ಚಿಸುತ್ತಿರುವ ಕಾರಣ ಅದಕ್ಕೆ ಸೂಕ್ತ ಏರ್ಪಾಟುಗಳನ್ನು ಮಾಡಿ ಎಂದು ಅಧಿಕೃತವಾಗಿ ಒಂದು ಸಂದೇಶವನ್ನು ಕಳುಹಿಸಿದರು. ಭಾರತ ರಾಜರೊಬ್ಬರು ತಮ್ಮ ಶೋ ರೂಮಿಗೆ ಬರುವುದು ತಮ್ಮ ಘನತೆಯ ಪ್ರತೀಕ ಎಂದು ಭಾವಿಸಿದ ಕಾರ್ ಶೋ ರೂಮಿನ ಸಿಬ್ಬಂಧಿಗಳು ನಿಗಧಿತ ದಿನದಂದು ರಾಜರ ಆಗಮನಕ್ಕಾಗಿ ರತ್ನಕಂಬಳಿಯ ಸ್ವಾಗತದೊಂದಿಗೆ ಸಿದ್ಧವಾದರು. ಮಹಾರಾಜರು ತಮ್ಮ ಎಂದಿನ ರಾಜಪೋಷಾಕುಗಳನ್ನು ಧರಿಸಿ ಬಹಳ ಗಾಂಬೀರ್ಯತೆಯಿಂದ ಕಾರಿನ ಶೋ ರೂಮಿಗೆ ಭೇಟಿ ಕೊಟ್ಟಾಗ, ಅವರ ಹೊಳೆಯುವ ಬಟ್ಟೆ ಮತ್ತು ಆಭರಣಗಳು ಮತ್ತು ಅವರ ಮುಖದಲ್ಲಿದ್ದ ಕ್ಷಾತ್ರ ತೇಜವನ್ನು ನೋದಿಯೇ ಅಲ್ಲಿನ ಸಿಬ್ಬಂಧಿಗಳು ಅಚ್ಚರಿ ಪಟ್ಟಿದ್ದಲ್ಲದೇ ಅವರಿಗೆ ಸಕಲ ರಾಜ ಮರ್ಯದೆಯೊಂದಿಗೆ ಸ್ವಾಗತಿಸಿ ಅಲ್ಲಿದ ಆರು ಕಾರುಗಳ ಸಂಪೂರ್ಣ ಮಾಹಿತಿಯನ್ನು ಅತಿ ವಿನಯದಿಂದ ವಿವರಿಸಿದರು.
ಮಹಾರಾಜ ಜೈ ಸಿಂಗರು ಸುಮಾರು ಎರಡು ಮೂರು ಗಂಟೆಗಳ ಕಾಲ ಸಮಚಿತ್ತದಿಂದ ಅಲ್ಲಿನ ಸಿಬ್ಬಂಧಿಗಳೊಂದಿಗೆ ಕಾಲ ಕಳೆದು ನಂತರ ತಮ್ಮ ಘನ ಗಾಂಭೀರ್ಯದಿಂದ ಅಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ಎಲ್ಲಾ ಆರು ಮಾದರಿಗಳನ್ನೂ ತಾವೇ ಕೊಳ್ಳುವುದಾಗಿ ಹೇಳಿದ್ದಲ್ಲದೇ, ಅದರ ಸಂಪೂರ್ಣ ಹಣವನ್ನು ಆ ಕ್ಷಣದಲ್ಲಿಯೇ ಕೊಟ್ಟಿದ್ದಲ್ಲದೇ ಆ ಎಲ್ಲಾ ಕಾರುಗಳನ್ನು ಭಾರತದ ತಮ್ಮ ಪ್ರಾಂತ್ಯಕ್ಕೆ ತಲುಪಿಸಲು ಆಗುವ ಎಲ್ಲಾ ಖರ್ಚನ್ನೂ ಸಹಾ ಮುಂಗಡವಾಗಿಯೇ ಪಾವತಿಸಿ ಅಲ್ಲಿನ ಸಿಬ್ಬಂಧಿಗಳಿಗೆ ಅಚ್ಚರಿಯನ್ನುಂಟು ಮಾಡಿದರು.
ಮಹಾರಾಜರು ಅಂತಹ ಐಶಾರಾಮೀ ಕಾರನ್ನು ಖರೀಧಿಸಿರುವ ಸುದ್ದಿ ಅದಾಗಲೇ ಪ್ರಪಂಚಾದ್ಯಂತ ಹರಿಡಿದ್ದ ಕಾರಣ, ಭಾರತದಲ್ಲೂ ಆ ಕಾರುಗಳನ್ನು ಕಣ್ತುಂಬಿ ಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಸುಮಾರು ಮೂರ್ನಾಲ್ಕು ತಿಂಗಳುಗಳ ಕಾಲ ಸುದೀರ್ಘ ಕಾಲಾ ನಂತರ ಹಡುಗಿನ ಮುಖಾಂತರ ಆ ಎಲ್ಲಾ ಆರು ಕಾರುಗಳೂ ಭಾರತಕ್ಕೆ ಸುರಕ್ಷಿತವಾಗಿ ಬಂದು ತಲುಪಿದವು.
ಕಾರುಗಳು ಸುರಕ್ಷಿತವಾಗಿ ತಮ್ಮ ಪ್ರಾಂತ್ಯಕ್ಕೆ ಬಂದು ತಲುಪಿದ ವಿಷಯವನ್ನು ತಿಳಿದ ಮಹಾರಾಜರು ಕೂಡಲೇ ಆ ಎಲ್ಲಾ ಕಾರುಗಳನ್ನು ಅಲ್ಲಿನ ಪುರಸಭೆಯ ಸುಪರ್ಧಿಗೆ ಒಪ್ಪಿಸಿ, ಆ ಕಾರುಗಳನ್ನು ಅಲ್ಲಿನ ಕಸ ಸಂಗ್ರಹಿಸಲು ಬಳಸುವಂತೆ ಆದೇಶ ನೀಡಿದರು. ಮಹಾರಾಜರ ಈ ಆದೇಶ ಎಲ್ಲರಿಗೂ ಆಶ್ಚರ್ಯ ತರಿಸಿತಾದರೂ, ರಾಜರ ಆಜ್ಞೆಯನ್ನು ಪಾಲಿಸಲೇಬೇಕಾದ ಅನಿವಾರ್ಯತೆಯಿಂದಾಗಿ ರಾಜಾಜ್ಞೆಯನ್ನು ಪಾಲಿಸತೊಡಗಿದರು.
ಪ್ರಪಂಚದ ಇಂತಹ ಐಶಾರಾಮ್ಯದ ಕಾರು ಈ ರೀತಿಯಾಗಿ ಬಳಕೆಯಗುತ್ತಿರುವ ವಿಷಯ ಕೆಲವೇ ಕೆಲವು ದಿನಗಳಲ್ಲಿ ಪ್ರಪಂಚಾದ್ಯಂತ ಹರಡಿದ್ದಲ್ಲದೇ ರೋಲ್ಸ್ ರಾಯ್ ಕಂಪನಿಯವರಿಗೂ ಈ ವಿಷಯ ತಲುಪಿತು. ಈ ಪ್ರಕರಣದಿಂದಾಗಿ ಯಾವ ಕಾರು ತಮ್ಮೊಂದಿಗೆ ಇದ್ದಲ್ಲಿ ಪ್ರತಿಷ್ಟೆಯ ಸಂಕೇತ ಎಂದು ಭಾವಿಸುತ್ತಿದ್ದರೂ ಅಂತಹ ಕಾರನ್ನು ಅಮೇರಿಕಾದ ಜನರು ಓಹ್, ಕಸವನ್ನು ಸಾಗಿಸಲು ಭಾರತದಲ್ಲಿ ಬಳಸಿದ ಕಾರಲ್ಲವೇ ಇದು ಎಂದು ತುಚ್ಛವಾಗಿ ನೋಡತೊಡಗಿದ ಕಾರಣ ಕಂಪನಿಯ ಖ್ಯಾತಿ ಅಧೋಗತಿಗೆ ಇಳಿದಿದ್ದಲ್ಲದೇ, ವ್ಯಾವಹಾರಿಕವಾಗಿ ಭಾರೀ ನಷ್ಟವನ್ನು ಅನುಭವಿಸ ಬೇಕಾಯಿತು.
ಮಹಾರಾಜರು ತಮ್ಮ ಈ ಕಾರುಗಳನ್ನು ಈ ರೀತಿಯಾಗಿ ಬಳಸುವ ಹಿಂದಿರುವ ರಹಸ್ಯವೇನು? ಎಂದು ತಿಳಿಯಲು ಕಾರ್ ಕಂಪನಿ ಪ್ರಯತ್ನಿಸಿದಾಗ, ಸಾಧಾರಣ ಉಡುಪಿನಲ್ಲಿ ಕಾರನ್ನು ನೋಡಲು ರಾಜರು ಬಂದಿದ್ದಾಗ ಲಂಡನ್ನಿನ ಕಾರ್ ಶೋ ರೋಮ್ ಸಿಬ್ಬಂಧಿಗಳು ಮಾಡಿದ ಅವಮಾನದ ಸಂಗತಿ ತಿಳಿಯಿತು. ಕೂಡಲೇ ತಮ್ಮ ಸಿಬ್ಬಂಧಿಯಿಂದಾದ ಅಚಾತುರ್ಯದ ಬಗ್ಗೆ ಕ್ಷಮೆಯಾಚಿಸಿದ್ದಲ್ಲದೇ ಅದರ ತಪ್ಪೊಪ್ಪಿಗೆಯಾಗಿ ಮತ್ತೆ ಅದೇ ಆರು ಕಾರುಗಳನ್ನು ಉಚಿತವಾಗಿ ಮಹಾರಾಜರಿಗೆ ಉಡುಗೊರೆಯಾಗಿ ನೀಡಿ ದಯವಿಟ್ಟು ಇನ್ನು ಮುಂದೆ ಕಸ ಸಾಗಿಸಲು ರೋಲ್ಸ್ ರಾಯ್ ಕಾರುಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಕಾರ್ ಕಂಪನಿಯವರು ಮಹಾರಾಜರಲ್ಲಿ ಮನವಿ ಮಾಡಿಕೊಂಡರು. ತಮ್ಮ ತಪ್ಪಿನ ಅರಿವಾಗಿ ಕ್ಷಮೆಯನ್ನು ಯಾಚಿಸಿದಾಗ ಅದನ್ನು ಮನ್ನಿಸುವುದು ನಮ್ಮ ಭಾರತೀಯರ ಸಂಪ್ರದಾಯ ಎಂದು ತಿಳಿಸಿ ಅಂದಿನಿಂದ ರೋಲ್ಸ್ ರಾಯ್ ಕಾರುಗಳನ್ನು ಕಸ ಎತ್ತಲು ಬಳಸುವುದನ್ನು ನಿಲ್ಲಿಸಲು ಆದೇಶ ನೀಡಿದರು. ಈ ಮೂಲಕ ವಿದೇಶದಲ್ಲಿ ಒಬ್ಬ ಭಾರತೀಯನಿಗೆ ಆದ ಅವಮಾನಕ್ಕೆ ಸದ್ದಿಲ್ಲದೇ ಯಾವುದೇ ಸದ್ದು ಗದ್ದಲವಿಲ್ಲದೇ, ಹೋರಾಟವಿಲ್ಲದೇ, ಪ್ರತೀಕಾರವನ್ನು ತೀರಿಸಿಕೊಂಡು ಸ್ವಾಭಿಮಾನಿ ಭಾರತೀಯರಿಗೆ ಮಾದರಿಯಾದರು. ಮೌನವೂ ಕೆಲವೊಂದು ಬಾರೀ ತೀಕ್ಷ್ಣವಾದ ಪರಿಣಾಮವನ್ನು ಬೀರಬಲ್ಲದು ಎನ್ನುವುದಕ್ಕೆ ಈ ಪ್ರಸಂಗವೇ ಜ್ವಲಂತ ಸಾಕ್ಷಿಯಾಗಿದೆ ಅಲ್ವೇ? ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಕಡೆಯ ಹನಿ : ಉದ್ಧಟತನದ ಬ್ರಿಟಿಷರಿಗೆ ಬುದ್ದಿ ಕಲಿಸಿದ ಭಾರತೀಯ ಮಹಾರಾಜರ ಈ ರೋಚಕ ಕತೆಯನ್ನು ನಾವು ಮೊದಲಿನಿಂದಲೂ ಕೇಳಿಕೊಂಡೇ ಬರುತ್ತಿದ್ದರೂ ಇದನ್ನು ಧೃಢೀಕರಿಸುವ ಯಾವುದೇ ಸೂಕ್ತವಾದ ದಾಖಲೆ ಮತ್ತು ಪುರಾವೆಗಳು ಇಲ್ಲದಿರುವುದು ಗಮನಾರ್ಹವಾಗಿದೆ. ಆದರೂ ಸಾಮಾಜಿಕ ಅಂತರ್ಜಾಲದಲ್ಲಿ ಈ ಕುರಿತಂತೆ ಪೋಟೋಗಳು ಮತ್ತು ವಿಷಗಳು ಲಭ್ಯವಿರುವ ಕಾರಣ ನಂಬಲೇ ಬೇಕಾಗಿದೆ.