ನಮ್ಮೆಲ್ಲರಿಗೂ ತಿಳಿದಿರುವಂತೆ ತಂದೆ ತಾಯಿಯರನ್ನು ಹೊರತು ಪಡಿಸಿ ಕಣ್ಣಿಗೆ ಕಾಣುವ ದೇವರುಗಳೆಂದರೆ ಸೂರ್ಯ ಮತ್ತು ಚಂದ್ರ. ಇವತ್ತು ರಥಸಪ್ತಮಿ ಅರ್ಥಾತ್ ಸೂರ್ಯನ ಹುಟ್ಟು ಹಬ್ಬ ಎಂದರೂ ತಪ್ಪಾಗಲಾರದು. ಹಾಗಾಗಿ ಸೂರ್ಯನ ಪ್ರಿಯವಾದ ನೈವೇದ್ಯವಾದ ರವೇ ಪಾಯಸ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ.
ಸುಮಾರು 4-5 ಜನರು ಸವಿಯಬಹುದಾದಷ್ಟು ರವೇ ಪಾಯಸ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ
- ಸಣ್ಣ ರವೆ – 1 ಬಟ್ಟಲು
- ಗಸಗಸೆ – 1 ಚಮಚ
- ಬೆಲ್ಲದ ಪುಡಿ – 3 ಬಟ್ಟಲು
- ಏಲಕ್ಕಿ ಪುಡಿ 1/4 ಚಮಚ
- ಗೋಡಂಬಿ – 1 ಚಮಚ
- ಒಣದ್ರಾಕ್ಷಿ – 1 ಚಮಚ
- ಒಣ ಕೊಬ್ಬರಿ ತುರಿ – 3 ಚಮಚ
- ತೆಂಗಿನ ತುರಿ – 1/2 ಬಟ್ಟಲು
- ತುಪ್ಪ – 2 ಚಮಚ
- ನೀರು – 2 ಬಟ್ಟಲು
- ಹಾಲು – 4 ಬಟ್ಟಲು
ರವೇ ಪಾಯಸ ತಯಾರಿಸುವ ವಿಧಾನ
- ಒಂದು ಗಟ್ಟಿ ತಳದ ಬಾಣಲೆಯನ್ನು ಬಿಸಿ ಮಾಡಿಕೊಂದು ಅದರಲ್ಲಿ ರವೆಯನ್ನು ಹಾಕಿ
ಸ್ವಲ್ಪ ಕೆಂಪಗೆ ಮತ್ತು ಘಮ್ಮನೆ ಸುವಾಸನೆ ಬರುವಷ್ಟು ಹೊತ್ತು ಹುರಿಯಿರಿ. - ತೆಂಗಿನ ತುರಿ ಮತ್ತು ಗಸಗಸೆಗೆ ಸ್ವಲ್ಪವೇ ನೀರನ್ನು ಬೆರೆಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.
- ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಿಕೊಂದು ಅದಕ್ಕೆ ನಿಧಾನವಾಗಿ ರವೆಯನ್ನು ಗಂಟು ಬಾರಂತೆ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ,
- ಬೇಯುತ್ತಿರುವ ರವೆಗೆ ನಿಧಾನವಾಗಿ ಹಾಲು ಮತು ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ ಒಲೆಯ ಉರಿಯನ್ನು ಸಣ್ಣದಾಗಿ ಮಾಡಿ ಚೆನ್ನಾಗಿ ಗೊಟಾಯಿಸಿ.
- ಕುದಿಯುತ್ತಿರುವ ಮಿಶ್ರಣಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಸುಮಾರು ಐದಾರು ನಿಮಿಷಗಷ್ಟು ಕುದಿಸಿ.
- ಒಂದು ಸಣ್ಣ ಬಾಣಲೆಗೆ ತುಪ್ಪವನ್ನು ಹಾಕಿ, ತುಪ್ಪ ಕಾದ ನಂತರ ಅದಕ್ಕೆ ಮುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ ಕೆಂಪಗೆ ಬರುವಷ್ಟು ಹುರಿದುಕೊಂಡು ಅದಕ್ಕೆ ಒಣಕೊಬ್ಬರಿಯನ್ನು ಸೇರಿಸಿ ಹಸೀ ಹೋಗುವರೆಗೂ ಹುರಿದುಕೊಳ್ಳಿ.
- ಹುರಿದುಕೊಂಡ ಮಿಶ್ರಣವನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಬೆರಸಿದಲ್ಲಿ, ಬಿಸಿ ಬಿಸಿಯಾದ ಮತ್ತು ರುಚಿ ರುಚಿಯಾದ ರವೇ ಪಾಯಸ ಸಿದ್ಧ.
ಪಾಯಸ ಆರಿದ ನಂತರ ಸೂರ್ಯ ದೇವರಿಗೆ ನೈವೇದ್ಯ ಮಾಡಿದ ನಂತರ ಸವಿಯಲು ಸಿದ್ಧ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ನಿಮ್ಮವನೇ ಉಮಾಸುತ
ಈ ಪಾಕವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳಿಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು