ಬೆಂಗಳೂರಿನಲ್ಲಿನ ಉಷ್ಣಾಂಶ 17 ಕ್ಕಿಂತ ಕಡಿಮೆ ಇಳಿದರೆ ಸಾಕು. ಜನರು ಅಹಹಾ! ಚಳಿ ಚಳಿ ತಾಳೆನು ಈ ಚಳಿಯಾ. ಅಂತ ಚೆಚ್ಚನೆಯ ವಸ್ತ್ರಗಳನ್ನು ಧರಿಸಿ ಬಿಸಿ ಬಿಸಿಯಾದ ಕಾಫೀ, ಟೀ ಹೀರುತ್ತಾ ಮನೆಯಿಂದ ಹೊರಗೇ ಕಾಲು ಇಡುವುದಿಲ್ಲ. ಅದರೆ ಅದೇ, ಹಿಮಚ್ಛಾದಿತ ಪ್ರದೇಶಗಳಲ್ಲಿ ದೇಶದ ಗಡಿಯನ್ನು ಕಾಯುವ ಸೈನಿಕರ ಪಾಡು ನಿಜಕ್ಕೂ ಹೇಳ ತೀರದು. ರಾತ್ರಿಹೊತ್ತಿನಲ್ಲಂತೂ ಹೊರಗಿನ ಕನಿಷ್ಠ ತಾಪಮಾನ ಕೆಲವೊಮ್ಮೆ -20 – 40ರ ವರೆಗೂ ತಲುಪಿರುತ್ತದೆ ಎಂದರೆ ಅಲ್ಲಿನ ಸಮಸ್ಯೆಗಳನ್ನು ಉಹಿಸಿಕೊಳ್ಳಬಹುದು. ನೀರು ಕುದಿಸಿ ಸ್ಟವ್ ನಿಂದ ಹೊರಗಿಡುತ್ತಿದ್ದಂತೆಯೇ ಮಂಜಾಗೆಡ್ಡೆಗೆ ಪರಿವರ್ತಿತವಾಗುವಷ್ಟರ ಮಟ್ಟಿಗಿನ ಕೊರೆ ಅಲ್ಲಿರುತ್ತದೆ.
ಹಿಮಚ್ಛಾದಿತ ಪ್ರದೇಶಗಳಲ್ಲಿ ಸೈನಿಕರನ್ನು ಸದಾಕಾಲವೂ ಬೆಚ್ಚಗಿಡಿವಿದೇ ಸೈನ್ಯಾಧಿಕಾರಿಗಳಿಗೆ ಒಂದು ಸವಾಲಿನ ಸಂಗತಿಯಾಗಿದೆ. ಎಲ್ಲಾ ಕಡೆಯಲ್ಲೂ ವಿದ್ಯುತ್ ಇಲ್ಲದ ಕಾರಣ ಡೇರೆಗಳನ್ನು ಬೆಚ್ಚಗಿಡಲು ಡೀಸೆಲ್, ಸೀಮೆಎಣ್ಣೆ ಅಥವಾ ಉರುವಲುಗಳನ್ನು ಸುಡುವ ಮೂಲಕ ಬೆಚ್ಚಗಿಡುವ ಪ್ರಯತ್ನಗಳು ನಿರಂತರವಾಗಿದ್ದರೂ, ಭದ್ರತಾ ದೃಷ್ಟಿಯಿಂದ ಮತ್ತು ಅಂತಹ ಎತ್ತರದ ಪ್ರದೇಶಗಳಿಗೆ ದೀಸೆಲ್ ಮತ್ತು ಸೀಮೇಎಣ್ಣೆಗಳನ್ನು ಸಾಗಿಸುವುದು ಬಹಳ ತ್ರಾಸದಾಯಕವಾಗಿದೆ. ಹಾಗಾಗಿ ಸಶಸ್ತ್ರ ಪಡೆಗಳನ್ನು ನೈಸರ್ಗಿಕವಾಗಿ ಬೆಚ್ಚಗೆ ಮತ್ತು ಆರೋಗ್ಯಕರವಾಗಿಡಲು ಹೊಸ ಹೊಸಾ ಮಾರ್ಗೋಪಾಯಗಳನ್ನು ಕಂಡು ಹಿಡಿಯುವ ಪ್ರಯತ್ನ ನಿರಂತವಾಗಿದೆ.
ಸೈನಿಕರ ಅನುಕೂಲಕ್ಕಾಗಿಯೇ ಅಂತಹದ್ದೇ ಪ್ರತ್ಯತ್ನದ ಫಲವಾಗಿ ಹೆಮ್ಮೆಯ ಭಾರತೀಯ ವಿಜ್ಞಾನಿಯಾದ ಶ್ರೀ ಸೋನಮ್ ವಾಂಗ್‌ಚುಕ್ ಎತ್ತರದ ಪ್ರದೇಶಗಳ ಭಾರತೀಯ ಸಶಸ್ತ್ರ ಪಡೆಗಳಿಗಾಗಿ ಒಂದು ಅಧ್ಭುತವಾದ ಆವಿಷ್ಕಾರವನ್ನು ಸಮರ್ಪಿಸಿದ್ದಾರೆ. ಸೋನಮ್ ವಾಂಗ್‌ಚುಕ್ ಅಂದರೆ ಥಟ್ ಅಂತಾ ನೆನಪಾಗದೇ ಹೋದರೆ, ಅಮೀರ್ ಖಾನ್ ಅಭಿನಯದ ಬ್ಲಾಕ್ ಬಸ್ಟರ್ ಹಿಂದಿ ಚಿತ್ರ 3 ಈಡಿಯಟ್ಸ್ ಪಾತ್ರದಲ್ಲಿ ಅಮೀರ್ ಖಾನ್ ಅಭಿನಯಿಸಿರುವ ಫುಂಗ್‌ಸುಕ್ ವಾಂಗ್ಡು ಪಾತ್ರಕ್ಕೆ ಮೂಲ ಪ್ರೇರಣೆ ನೀಡಿದ ವ್ಯಕ್ತಿಯೇ ಸೋನಮ್ ವಾಂಗ್‌ಚುಕ್ ಎಂದರೆ ನೆನಪಾಗುತ್ತದೆ. ಇಲ್ಲದೇ ಹೋದರೆ, ಇತ್ತೀಚೀಗೆ ಗಾಲ್ವಾನ್ ಕಣಿವೆಯಲ್ಲಿ ನಿಂತು ನಮ್ಮ ಸೈನಿಕರು ತಮ್ಮ ಬುಲೆಟ್ ನಿಂದ ಹೋರಾಡಿದರೆ, ಸಾಮಾನ್ಯ ಭಾರತೀಯರಾದ ನಾವು ನಮ್ಮ ವಾಲೆಟ್ ಶಕ್ತಿ ಯಿಂದ ಚೀನಾದ ವಿರುದ್ಧ ಹೋರಾಡೋಣ. ಎಂದು ಭಾರತೀಯರನ್ನು ಹುರಿದುಂಬಿಸಿದ ಅಪ್ಪಟ ಸ್ವಾಭಿಮಾನಿ ದೇಶಪ್ರೇಮಿ ಅವರು.
ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನ್ಯಕ್ಕಾಗಿ ಸೌರಶಕ್ತಿಯಿಂದ ಬಿಸಿಯಾಗಿಸ ಬಲ್ಲ ಮಿಲಿಟರಿ ಟೆಂಟನ್ನು ಆವಿಷ್ಕರಿಸಿದ್ದಾರೆ. ಈ ಡೇರೆಯಲ್ಲಿ ಸುಮಾರು 10 ಸೈನಿಕರಿಗೆ ಸ್ಥಳಾವಕಾಶವಿದ್ದು ಇದು ಸಂಪೂರ್ಣವಾಗಿ ಪೋರ್ಟಬಲ್ ಆಗಿದ್ದು ಎಲ್ಲಾ ಭಾಗಗಳೂ ಸೇರಿದಂತೆ 30 ಕಿ.ಗ್ರಾಂಗಿಂತ ಕಡಿಮೆ ತೂಕವಿರುತ್ತವೆ. ಇದರಲ್ಲಿ ರಾತ್ರಿ 10 ಗಂಟೆಯಿಂದ ಬೆಳಗಿನವರೆಗೂ +15 ಡಿಗ್ರಿಯ ತಾಪಮಾನವನ್ನು ಹಿಡಿದಿಡುವ ಮೂಲಕ ಟನ್ ಗಟ್ಟಲೆ ಡೀಸಲ್ ಮತ್ತು ಸೀಮೇ ಎಣ್ಣೆಯನ್ನು ಉಳಿಸುವಂತಾಗಿರುವುದಲ್ಲದೇ ಪರಿಸರ ಮಾಲಿನ್ಯವನ್ನು ತಡೆಯುವಂತಾಗಿದೆ. ಈದು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ, ಆತ್ಮನಿರ್ಭರದ ಉತ್ಪನ್ನವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ಡೇರೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಸ್ಥಳಾಂತರ ಮಾಡಬಹುದಾಗಿರುವುದು ಗಮನಾರ್ಹವಾಗಿದೆ.
ಹೊಸದಾಗಿ ನಿರ್ಮಿಸಲಾದ ಈ ಡೇರೆಗಳು -14 ಡಿಗ್ರಿ ವರೆಗಿನಷ್ಟು ಕಡಿಮೆ ಹೊರಗಿನ ತಾಪಮಾನವಿದ್ದರೂ ಸಹಾ ಡೇರೆಯ ಒಲಗೆ 15 ಡಿಗ್ರಿ ಸೆಲ್ಸಿಯಸ್‌ನಷ್ಟು ಬೆಚ್ಚಗಿನ ಸ್ಥಿರವಾದ ತಾಪಮಾನವನ್ನು ಕೊಡಬಲ್ಲದು ಎನ್ನಲಾಗಿದೆ. ಆರಂಭದಲ್ಲಿ ಈ ಡೇರೆಯ ತಯಾರಿಕಾವೆಚ್ಚ ಸುಮಾರು 6-8 ಲಕ್ಷವಾಗಿದ್ದು, ಸೈನ್ಯದಿಂದ ಅಂಗೀಕಾರವಾಗಿ ಹೆಚ್ಚಿನ ಸಂಖ್ಯೆಯ ಆದೇಶ ಬಂದರೆ ಸುಮಾರು 3-4 ಲಕ್ಷಗಳಲ್ಲಿಯೇ ಮುಂದಿನ ದಿನಗಳಲ್ಲಿ ತಯಾರಿಸಿಕೊಡಲು ಸಿದ್ಧರಾಗಿದ್ದಾರೆ ಶ್ರೀ ಸೋನಮ್ ವಾಂಗ್‌ಚುಕ್.
ಇದಕ್ಕೂ ಮೊದಲು, ಅವರು ಭಾರತೀಯ ಸಶಸ್ತ್ರ ಪಡೆಗಳು ಎತ್ತರದ ಪ್ರದೇಶದಲ್ಲಿ ಬಳಸಲು ಅನುಕೂಲವಾಗುವಂತೆ ಸೌರಶಕ್ತಿ ಅಳವಡಿಸಿದ ಮಣ್ಣಿನ ಗುಡಿಸಲನ್ನು ಸಹ ವಿನ್ಯಾಸಗೊಳಿಸಿದ್ದರು. ಇದು ಒಂದು ಸ್ಥಿರವಾದ ಕಟ್ಟಡವಾಗಿದ್ದು ಇದನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರ ಮಾಡಲು ಸಾಧ್ಯವಿಲ್ಲದ್ದಾಗಿತ್ತು.
ಇದೇ ರೀತಿಯಲ್ಲಿ ಸೈನಿಕರಿಗೆ ಎಲ್ಲಾ ಕಾಲದಲ್ಲೂ ಶುದ್ದವಾದ ನೀರನ್ನು ಸ್ಥಳೀಯವಾಗಿಯೇ ಸಂಗ್ರಹಿಸಿ ಒದಗಿಸುವ, ಐಸ್ ಸ್ತೂಪಸ್ ಎಂಬ ಪರಿಕಲ್ಪನೆಯ ಮೂಲಕ ಹಿಮದ ನೀರನ್ನು ಚಳಿಗಾಲದಲ್ಲಿ ಹಿಮದ ಗುಡ್ಡದ ರಾಶಿಯಂತೆ ಸಂಗ್ರಹಿಸಿಟ್ಟುಕೊಂಡು ನಂತರ ಅದನ್ನು ಬೇಸಿಗೆಯಲ್ಲಿ ಸುಲಭವಾಗಿ ಬಳಸುವಂತಹ ವಿಧಾನವನ್ನೂ ಸಹಾ ಕಂಡು ಹಿಡಿದ್ದರು.
ಇವೆಲ್ಲವಕ್ಕೂ ಕೀರ್ತಿ ಶಿಖರದಂತೆ ತ್ರೀ ಈಡಿಯಟ್ ಸಿನಿಮಾದ ಕಡೆಯಲ್ಲಿ ತೋರಿಸಿರುವಂತೆ, ಲಡಾಖ್‌ಗೆ ಪ್ರದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಯುಂಟು ಮಾಡಿದ ಲಡಾಖ್‌ನ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಂದೋಲನ ಅರ್ಥಾತ್ Students Educational and Cultural Movement of Ladakh (SECMOL) ನಿಜಕ್ಕೂ ಅಲ್ಲಿನ ಮಕ್ಕಳ ಬೌದ್ಧಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಮಹತ್ತರ ಕೊಡುಗೆಯನ್ನು ನೀಡುತ್ತಿದೆ.
ಸೋನಮ್ ವಾಂಗ್‌ಚುಕ್ ಅಭಿವೃದ್ಧಿಪಡಿಸಿರುವ ಈ ಹೊಸ ಪರಿಸರ ಸ್ನೇಹಿ ಪರಿಹಾರವು ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ ಭಾರತ್ ಅಭಿಯಾನಕ್ಕೆ ಹೇಳಿ ಮಾಡಿಸಿದಂತಿದೆ. ಈ ಹೊಸ ಸೌರಶಕ್ತಿ ಚಾಲಿತ ಡೇರೆಗಳು ಅತ್ಯಂತ ಪರಿಣಾಮಕಾರಿ ಮತ್ತು ಅಂತಹ ಕಠಿಣ ಪರಿಸ್ಥಿತಿಗಳಲ್ಲಿ ಸೈನಿಕರಿಗೆ ಬೆಚ್ಚಗಿನ ಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸಲು ಒಂದು ಪರಿಪೂರ್ಣ ಪರಿಹಾರವಾಗಿದೆ. ಭಗವಂತನ ಅನುಗ್ರಹದಿಂದ ಸೋನಮ್ ವಾಂಗ್‌ಚುಕ್ ಅವರಿಗೆ ಆಯುರಾರೋಗ್ಯಗಳು ಲಭಿಸಿ ಇನ್ನು ಇಂತಹ ಹತ್ತಾರು ಪರಿಸರ ಸ್ನೇಹಿ ಉತ್ಪನ್ನಗಳನ್ನು ಆವಿಷ್ಕಾರ ಮಾಡುವಂತಹ ಶಕ್ತಿಯನ್ನು ನೀಡಲಿ ಮತ್ತು ನಮ್ಮ ಸೈನಿಕರಿಗೆ ಉಪಯೋಗವಾಗಲಿೆ ಎಂಬ ಹಾರೈಕೆ ನಮ್ಮೆಲ್ಲದ್ದಾಗಿದೆ.
ಏನಂತೀರೀ?
ನಿಮ್ಮವನೇ ಉಮಾಸುತ
[…] ಸೋನಮ್ ವಾಂಗ್‌ಚುಕ್ ಅಭಿವೃದ್ಧಿಪಡಿಸಿರುವ ಈ ಹೊಸ ಪರಿಸರ ಸ್ನೇಹಿ ಪರಿಹಾರವು ಆತ್ಮ ನಿರ್ಭರ ಭಾರತ್ ಅಭಿಯಾನಕ್ಕೆ ಹೇಳಿ ಮಾಡಿಸಿದಂತಿದೆ. ಈ ಹೊಸ ಸೌರಶಕ್ತಿ ಚಾಲಿತ ಡೇರೆಗಳು ಅತ್ಯಂತ ಪರಿಣಾಮಕಾರಿ ಮತ್ತು ಅಂತಹ ಕಠಿಣ ಪರಿಸ್ಥಿತಿಗಳಲ್ಲಿ ಸೈನಿಕರಿಗೆ ಬೆಚ್ಚಗಿನ ಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸಲು ಒಂದು ಪರಿಪೂರ್ಣ ಪರಿಹಾರವಾಗಿದೆ. ಭಗವಂತನ ಅನುಗ್ರಹದಿಂದ ಸೋನಮ್ ವಾಂಗ್‌ಚುಕ್ ಅವರಿಗೆ ಆಯುರಾರೋಗ್ಯಗಳು ಲಭಿಸಿ ಇನ್ನು ಇಂತಹ ಹತ್ತಾರು ಪರಿಸರ ಸ್ನೇಹಿ ಉತ್ಪನ್ನಗಳನ್ನು ಆವಿಷ್ಕಾರ ಮಾಡುವಂತಹ ಶಕ್ತಿಯನ್ನು ನೀಡಲಿ ಮತ್ತು ನಮ್ಮ ಸೈನಿಕರಿಗೆ ಉಪಯೋಗವಾಗಲಿ ಎಂಬ ಹಾರೈಕೆ ನಮ್ಮೆಲ್ಲದ್ದಾಗಿದೆ. ಕೃಪೆ: ಏನಂತೀರಿ ಬ್ಲಾಗ್ ಸೌರಶಕ್ತಿಯ ಮಿಲಿಟರಿ ಡೇರೆಗಳು […]
LikeLike