ಪೊಗರು ಇಳಿಸಿದ ಪರಿ

ಕಳೆದ ಶುಕ್ರವಾರ ಬಹು ನಿರೀಕ್ಷಿತ ನಂದಕಿಶೋರ್ ನಿರ್ದೇಶಿಸಿದ ಮತ್ತು ಧೃವ ಸರ್ಜಾ ನಟಿಸಿದ ಪೊಗರು ಚಿತ್ರ, ಚಿತ್ರಮಂದಿರದಲ್ಲಿ ರಿಲೀಸ್ ಆದಾಗ ಬಹಳ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಇದೇ ಚಿತ್ರಕ್ಕಾಗಿ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಪಾತ್ರಕ್ಕೆ ತಕ್ಕಂತೆ ತನ್ನ ದೇಹವನ್ನು ಸಣ್ಣ ಮತ್ತು ದಪ್ಪ ಮಾಡಿಕೊಂಡಿದ್ದ ಧೃವ ಸರ್ಜಾ ಬಗ್ಗೆ ಎಲ್ಲರೂ ಹಾಡಿ ಹೊಗಳುತ್ತಿದ್ದದ್ದನ್ನು ಓದಿ, ಕೇಳಿ ಎಲ್ಲರೂ ಪುಳಕಿತಗೊಂಡಿದ್ದಂತೂ ಸುಳ್ಳಲ್ಲ. ಆದರೆ ಶುಕ್ರವಾರ ಸಂಜೆ ಆಗುತ್ತಿದ್ದಂತೆಯೇ ಚಿತ್ರದಲ್ಲಿ ಒಂದು ಸಮುದಾಯವನ್ನು ಬಹಳ ಕೀಳಾಗಿ ಚಿತ್ರೀಕರಿಸಲ್ಪಟ್ಟಿದೆ ಎಂಬ ವಿಷಯ ಹೊರಬರುತ್ತಿದ್ದಂತೆಯೇ ರಾಜ್ಯಾದ್ಯಂತ ಹತ್ತು ಹಲವಾರು ಚರ್ಚೆಗಳು ಆರಂಭವಾದವು.

ಚಿತ್ರ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಆರಂಭದಲ್ಲಿ ಇದು ಸಣ್ಣದಾದ ಕಿರಿಕ್ ಎನ್ನಿಸಿದರೂ, ದಿನ ಕಳೆದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಮನಗಂಡರು. ಈ ವಿಷಯ ಕುರಿತಂತೆ ಅಪರೂಪಕ್ಕೆ ತ್ರಿಮತಸ್ಥ ಬ್ರಾಹ್ಮಣರು ಒಗ್ಗಟ್ಟಾಗಿ ನಿಂತರು. ತ್ರಿಮತಸ್ಥ ಮಠಾಧೀಶರೂ ತಮ್ಮ ಹಮ್ಮು ಬಿಮ್ಮುಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಈ ಕುಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸಿದರು. ಎಲ್ಲದ್ದಕ್ಕಿಂತಲೂ ಮೆಚ್ಚಬೇಕಾದ ಅಂಶವೆಂದರೆ, ಇದು ಯಾವುದೇ ಒಬ್ಬ ವ್ಯಕ್ತಿಯ ವಿರುದ್ಧ ವಯಕ್ತಿಕ ಹೋರಾಟವಾಗಿರದೇ, ಯಾವುದೇ ರೀತಿಯ ಪ್ರಚೋದನಾತ್ಮಕವಾದ ಹೇಳಿಕೆಗಳನ್ನು ನೀಡದೇ, ಯಾರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳದೇ, ಎಲ್ಲಿಯೂ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ನಷ್ಟ ಉಂಟು ಮಾಡದೇ, ವಿನಾ ಕಾರಣ, ಸಹಸ್ರಾರು ಜನರನ್ನು ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಒಗ್ಗೂಡಿಸಿ ಭಾರೀ ಪ್ರತಿಭಟನೆ ನಡೆಸಿ ರಸ್ತೆ ಬಂದ್ ಮಾಡದೇ ಅತ್ಯಂತ ನಾಜೂಕಿನಿಂದ ಸಮಸ್ಯೆಗೆ ತಾರ್ಕಿಕ ಅಂತ್ಯವನ್ನು ನೀಡಿದ್ದು ಮೆಚ್ಚುಗೆಯ ಅಂಶವಾಗಿರುವುದಲ್ಲದೇ ಎಲ್ಲರಿಗೂ ‌ಮಾದರಿಯಾಗಿದೆ.

ಚಿತ್ರ ತಂಡದ ವಿರುದ್ಧ ಫಿಲ್ಮ್ ಛೇಂಬರಿಗೆ ಈ ಕುರಿತಂತೆ ದೂರನ್ನು ದಾಖಲಿಸಿ ಅವರ ಸಮ್ಮುಖದಲ್ಲಿಯೇ ಇಡೀ ಚಿತ್ರತಂಡವನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು. ಈ ರೀತಿಯ ಆಳಲನ್ನು ತೋಡಿ ಕೊಳ್ಳುವ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಒಂದಿಬ್ಬರು ನಾಯಕರು ಅನಗತ್ಯವಾಗಿ ಮುಜುಗೊರವನ್ನುಂಟು ಮಾಡುವ ಕೆಲವೊಂದು ಅವಾಚ್ಯ ಪದಗಳನ್ನು ಆಡಿದ್ದು ತಪ್ಪೆನಿಸಿದರೂ, ಕೂಡಲೇ ಅವರ ತಪ್ಪಿನ ಅರಿವಾಗಿ ಅಲ್ಲಿಯೇ ಕ್ಷಮೆಯಾಚಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇನ್ನು ಚಿತ್ರ ತಂಡವೂ ಆರಂಭದಲ್ಲಿ ಸ್ವಲ್ಪ ಉಡಾಫೆ ತೋರಿಸಿದರೂ ನಂತರ ಸಮಚಿತ್ತದಿಂದ ಅವರ ಆರೋಪವನ್ನು ಆಲಿಸಿ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಲ್ಲದೇ, ನಿರ್ದೇಶಕರು ಕ್ಷಮೆ ಯಾಚಿಸಿ ಇಡೀ ಗೊಂದಲವನ್ನು ಎರಡು ಮೂರು ದಿನಗಳಲ್ಲಿ ಸರಿ ಪಡಿಸುತ್ತೇವೆ ಎಂದು ಹೇಳಿದರೂ ನಂತರ ಸಮಾಜದ ಒಕ್ಕೊರಲಿನ ಒತ್ತಾಯಕ್ಕೆ ಮಣಿದು ಕೂಡಲೇ, ಚಿತ್ರದಲ್ಲಿದ್ದ ಆಕ್ಷೇಪಾರ್ಹವಾದ ಸುಮಾರು 15-16 ದೃಶ್ಯಗಳನ್ನು ಕತ್ತರಿಸಿ ಮರು ಸೆನ್ಸಾರ್ ಮಾಡಿಸಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಒಪ್ಪಿದ್ದು ಮೆಚ್ಚುಗೆ ಪಡಬೇಕಾದಂತಹ ಅಂಶವಾಗಿತ್ತು.

ಆರಂಭದಲ್ಲಿ ತನಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ಮೌನಕ್ಕೆ ಜಾರಿದ್ದ ಚಿತ್ರದ ನಾಯಕ ಧೃವ ಸರ್ಜಾ ಕೂಡಾ ನಮ್ಮ ಇಡೀ ಕುಟುಂಬ ಹನುಮಭಕ್ತರು. ಆಂಜನೇಯನ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನಮ್ಮ ಇಡೀ ವಂಶವೇ ಹಿಂದುತ್ವದ ಪದ್ಧತಿಯನ್ನು ಆಚರಿಸುತ್ತಾ ಗೌರವಿಸುತ್ತಾ ಬದುಕುತ್ತಿದ್ದೇವೆ. ತಾತನವರ ಕಾಲದಿದಂಲೂ ಹಿಂದೂತ್ವದ ಪ್ರತಿಪಾದಕರಾಗಿಯೇ ಬದುಕಿದ್ದೇವೆ. ಕಲೆಯೇ ಧರ್ಮ.. ನಾವು ಎಲ್ಲಾ ಧರ್ಮಗಳನ್ನು ಗೌರವಿಸಿದ್ದೇವೆ. ಚಿತ್ರದ ಕಥೆ, ಪಾತ್ರಪೋಷಣೆಯಲ್ಲಿ ಯಾವುದೇ ಸಮುದಾಯಕ್ಕೆ ನೋವಾಗಿದೆ ಎನ್ನುವಂತಹ ಮಾತು ನಿಜಕ್ಕೂ ನಮ್ಮ ತಂಡಕ್ಕೆ ಬೇಸರ ತಂದಿದೆ ಎಂದು ನಡೆದು ಹೋದ ಅಚಾತುರ್ಯಕ್ಕೆ ಭೇಷರತ್ತು ಕ್ಷಮೆಯಾಚಿಸಿ ಇನ್ನು ಮುಂದೆ ಈ ರೀತಿಯ ಮುಜುಗರದ ಪ್ರಸಂಗಳು ಆಗದಂತೆ ನೋಡಿಕೊಳ್ಳುತ್ತೇನೆ ಎಂಬ ಆಶ್ವಾಸನೆ ನೀಡಿದ್ದು ಗಮನಾರ್ಹವಾಗಿತ್ತು.

ಎಲ್ಲಕ್ಕಿಂತಲೂ ಮುಖ್ಯವಾಗಿ ಯಾರದ್ದೇ ಕಾರಿಗೂ ಕಲ್ಲು ಹೊಡೆಯದೇ, ಎಲ್ಲಿಯೂ ಬೆಂಕಿ‌ ಹಚ್ಚದೇ, ಯಾವುದೇ ರಾಜಕೀಯ ಪಕ್ಷದ ಹಂಗಿಲ್ಲದೇ, ಸಂವಿಧಾನ, ಹಕ್ಕು, ಜಾತಿ, ಅಥವಾ ಯಾರದ್ದೇ ವಯಕ್ತಿಯ ಹೆಸರುಗಳನ್ನು ಎತ್ತುತ್ತಾ ಕೆಸರೆಚಾಡದೇ, ಇಲ್ಲವೇ ಬ್ರಾಹ್ಮಣ ಸಮಾಜದ ನಾಯಕರು ತೆರೆಯ ಮರೆಯಲ್ಲಿ ಸದ್ದಿಲ್ಲದೇ, ಚಿತ್ರತಂಡವನ್ನು ಭೇಟಿ ಮಾಡಿ ಯಾವುದೇ ಡೀಲ್ ನಡೆಸದೇ, ಜನಿವಾರಧಾರಿ ಋತ್ವಿಕರ ಭುಜದ ಮೇಲೆ ಕಾಲು ಇಟ್ಟವನಿಗೆ ಶಾಲು ಸುತ್ತಿ ಗೌರವಾಧರಗಳಿಂದ ಹೊಡೆಯುವಂತಹ ಚಾಣ್ಯಕ ರೀತಿಯನ್ನು ಮೆಚ್ಚಲೇ ಬೇಕಾಗಿದೆ.

ಇದು ಕೇವಲ ಒಂದು ಸಮುದಾಯದ ಹೋರಾಟವಾಗಿರದೇ, ಇದು ಇಡೀ ಹಿಂದೂ ಸಮಾಜಕ್ಕೇ ಆದ ಅವಮಾನ ಎಂದು ಇತರೇ ಎಲ್ಲಾ ಸಮುದಾಯದವರೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲ ನೀಡುವ ಮೂಲಕ, ಹಿಂದೂಗಳ ಒಗ್ಗಟ್ಟು ಮತ್ತು ಜಾಗೃತಿಯನ್ನು ಎತ್ತಿ ತೋರಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಿದ್ದು ಉತ್ತಮ ಬೆಳವಣಿಗೆಯಾಗಿದೆ. ಇಡೀ ಪ್ರಸಂಗವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಇದು ಯಾರೊಬ್ಬರ ಗೆಲುವೂ ಅಲ್ಲ ಮತ್ತು ಇನ್ನೊಬ್ಬರ ಸೋಲೂ ಅಲ್ಲ. ಇದೊಂದು ರೀತಿಯ ಬದಲಾವಣೆಯ ಪರ್ವ ಎಂದರೂ ತಪ್ಪಾಗಲಾರದು.

ಪುರಂದರದಾಸರು ಹೇಳಿರುವಂತೆ ನಿಂದಕರಿರಬೇಕು. ಕೇರಿಯಲ್ಲಿ ಹಂ.. ಇದ್ದ ಹಾಗೆ ಎನ್ನುವಂತೆ ಇಡೀ ಪ್ರಸಂಗವನ್ನು ಮೂಲಭೂತವಾದಕ್ಕೆ ಹೋಲಿಸುವರು ಮತ್ತು ಈ ಹಿಂದೇ ಉಪೇಂದ್ರ ಚಿತ್ರದಲ್ಲಿ ಆರ್ಚಕರಿಗೆ ಹೆಂಡ ಕುಡಿಸಿರಲ್ಲವೇ? ಬೇಡರ ಕಣ್ಣಪ್ಪ ಚಿತ್ರದಲ್ಲಿ ರಾಜಕುಮಾರ್ ಅವರು ಶಿವಲಿಂಗದ ಮೇಲೆ ಕಾಲಿಟ್ಟಿರಲಿಲ್ಲವೇ? ಶ್ರೀ ಮಂಜುನಾಥ ಚಿತ್ರದಲ್ಲಿ ಅರ್ಜುನ್ ಸರ್ಜಾ ಬಾಯಿಗೆ ಬಂದಂತೆ ಶಿವನಿಂದನೆ ಮಾಡಿರಲಿಲ್ಲವೇ? ಆಗ ನಡೆಯದ ಪ್ರತಿಭಟನೆ ಈಗೇಕೆ? ಎಂಬ ವಿಂತಡವಾದ ಮಂಡಿಸುವವರಿಗೇನೂ ಕಡಿಮೆ ಇರಲಿಲ್ಲ. ಹಿಂದೆಯೂ ಇಂತಹ ‍ಚಾರ್ವಾಕರುಗಳು ಇದ್ದರು. ಈಗಲೂ ಇಂತಹ ಚಾರ್ವಾಕರು ಇದ್ದಾರೆ ಮತ್ತು ಮುಂದೆಯೂ ಇಂತಹ ಚಾರ್ವಕರ ಸಂತಾನ ಇದ್ದೇ ಇರುತ್ತದೆ. ಅಂದು ಯಾರೋ ತಪ್ಪು ಮಾಡಿದ್ದರು ಇಂದು ನಾವೂ ಸಹಾ ಅದೇ ತಪ್ಪನ್ನು ಮಾಡುತ್ತೇವೆ ಎನ್ನುವುದು ವಿತಂಡವಾದವಾಗುತ್ತದೆ. ಅಂದು ಉಪೇಂದ್ರ ಮಾಡಿದ್ದನ್ನು ಖಂಡಿಸಲಿಲ್ಲ ಎನ್ನುವವರಿಗೆ ಅದನ್ನು ಸಮರ್ಥನೆ ಮಾಡಿದರೂ ಇರಲಿಲ್ಲ ಎನ್ನುವುದನ್ನು ನೆನಪಿಸಬೇಕಾಗಿದೆ. ಮನುಷ್ಯ ಖಾಯಿಲೆಯಿಂದ ಸತ್ತಹೋದ ಮೇಲೆ ಶವನ್ನು ಪೋಸ್ಟ್ ಮಾರ್ಟಂ ನಡೆಸಿ, ಆತ ಸಾವಿನ ಹಿಂದಿನ ನಿಜವಾದ ಕಾರಣವನ್ನು ತಿಳಿದು ಮುಂದೆ ಆ ರೀತಿಯಾಗಿ ಯಾರೂ ಸಾಯದಂತೆ ತಡೆಯುವುದು ಸರಿಯಾದ ಮಾರ್ಗವಾಗಿದೆಯೇ ಹೊರತು ಹೆಣವನ್ನು ಸುಮ್ಮನೇ ಕೊಳೆಯುವಂತೆ ಮಾಡುವುದು ಉತ್ತಮ ಲಕ್ಷಣವಲ್ಲ ಅಲ್ಲವೇ? ಈ ಸನ್ನಿವೇಶದಲ್ಲಿಯೂ ಸಹಾ ಅದೇ ರೀತಿಯನ್ನು ಅನುಸರಿಸಲಾಗಿದೆ.

ಮನೋರಂಜನೆ ಎನ್ನುವ ಹೆಸರಿನಲ್ಲಿ ಮತ್ತೊಂದು ಸಮಾಜವನ್ನು ಅವಹೇಳನ ಮಾಡುವಂತಹ ಚಿತ್ರಕಥೆ ಬರೆದವರೂ ಇಂತಹದ್ದೇ ಚಾರ್ವಾಕ ಮನಸ್ಥಿತಿಯವರೇನೋ ಎನ್ನುವ ಅನುಮಾನ ಮೂಡಿದೆ. ಸಮಾಜದಲ್ಲಿ ತಮ್ಮ ಪರಿಶ್ರಮದಿಂದ ಗೌರವಾದರಗಳನ್ನು ಗಳಿಸಿರುವಂತಹವರ, ಲೋಕಕಲ್ಯಾಣಕ್ಕಾಗಿ ಹೋಮ ಮಾಡುತ್ತಿದ್ದಂತಹವರ ವಿರುದ್ಧ ಕಾಲು ಕೆರೆದುಕೊಂಡು ಕುಚೋದ್ಯವನ್ನು ಮಾಡಿ ವಿಕೃತ ಅನುಭವವನ್ನು ಹೊಂದುವ ಮನಸ್ಸಿನ ವ್ಯಕ್ತಿಗಳಿಗೆ ಈ ಹೋರಾಟ ನಿಜಕ್ಕೂ ಪಾಠ ಕಲಿಸಿದೆ. ಸಮಾಜದಲ್ಲಿ ಯಾರೂ ಕೀಳಲ್ಲ. ಯಾರೂ ಮೇಲಲ್ಲ. ಎಲ್ಲರೂ ಅವರವರ ನಿಟ್ಟಿನಲ್ಲಿ ಅವರವರ ಕಾಯಕವನ್ನು ಮಾಡಿಕೊಂಡು ಹೋಗುತ್ತಾ, ಸಮಾಜದಲ್ಲಿ ಪರಸ್ಪರ ಸರಿ ಸಮಾನಾಗಿ ಜೀವನ ನಡೆಸುವ ಹಕ್ಕನ್ನು ಹೊಂದಿರುತ್ತಾರೆ ಎಂಬುದನ್ನು ಎತ್ತಿ ಹಿಡಿಯುವಂತೆ ಮಾಡಿದೆ.

ಸಾಕು ಪ್ರಾಣಿಗಳನ್ನು ಚಿತ್ರದಲ್ಲಿ ಬಳಸಿಕೊಂಡರೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಲು ಹಿಂದು ಮುಂದು ನೋಡುವ ಸೆನ್ಸಾರ್ ಮಂಡಲಿ, ಮನುಷ್ಯರನ್ನು ಪ್ರಾಣಿಗಳಿಗಿಂತಲೂ ಕೀಳು ಮಟ್ಟದಲ್ಲಿ ನಡೆಸಿಕೊಂಡಂತಹ ಅನೇಕ ದೃಶ್ಯಗಳು ಇರುವಂತಹ ಈ ಚಿತ್ರಕ್ಕೆ ಅದು ಹೇಗೆ ಸೆನ್ಸಾರ್ ಸರ್ಟಿಫಿಕೇಟ್ ಕೊಟ್ಟರು? ಎಂಬ ವಿಷಯವನ್ನೂ ತನಿಖೆ ನಡೆಸಬೇಕಿದೆ. ಹಿಂದೆ ಚಂದ್ರಶೇಖರ್ ಎಂಬ ಸೆನ್ಸಾರ್ ಮಂಡಳಿಯ ಅಧಿಕಾರಿಗಳು ತಮ್ಮ ಚಿತ್ರಗಳಿಗೆ ಅನವಶ್ಯಕ ತೊಂದರೆ ಕೊಡುತ್ತಿದ್ದಾರೆ. ನಮ್ಮ ಆಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪ ಮಾಡಿ ಅವರನ್ನು ಅಲ್ಲಿಂದ ಹೊರ ಹಾಕಲು ಪ್ರಯತ್ನಿಸಿದ್ದ ಕನ್ನಡ ಚಿತ್ರರಂಗದ ಮಂದಿ ಈಗ ಇಂತಹ ಕೀಳು ಅಭಿರುಚಿಯ ದೃಶ್ಯಗಳನ್ನು ಹೇಗೆ ಸಮರ್ಥಿಸಿಕೊಂಡರು? ಎಂಬುದು ಚಿದಂಬರ ರಹಸ್ಯವಾಗಿದೆ.

ಇಡೀ ದೇಶದಲ್ಲಿ ಕನ್ನಡ ಚಿತ್ರಗಳು ಎಂದರೆ ಸದಭಿರುಚಿಯ ಚಿತ್ರಗಳು ಎಂಬ ಅಭಿಪ್ರಾಯವಿತ್ತು. ಕನ್ನಡ ಚಿತ್ರಗಳನ್ನು ನೋಡುವ ಮೂಲಕ ಅನೇಕರು ಕುಡಿತವನ್ನು ಬಿಟ್ಟಿದ್ದು, ನಗರದಿಂದ ಮತ್ತೆ ಕೃಷಿಯತ್ತ ಮರಳಿದ್ದಂತಹ ಸಾಮಾಜಿಕ ಪರಿವರ್ತನೆಗಳಾದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿರುವಾಗ ಇತ್ತೀಚಿನ ದಿನಗಳಲ್ಲಿ ಅದೆಲ್ಲವೂ ಮಾಯವಾಗಿ ಲಾಂಗ್, ಮಚ್ಚು, ಪಿಸ್ತೂಲ್ಗಳನ್ನು ಹಿಡಿದು ಹೊಡೀ, ಬಡೀ, ಕಡೀ ಯಂತಹ ಚಿತ್ರಗಳನ್ನು ತಯಾರಿಸುತ್ತಾ ಯಾವುದೇ ಸಾಮಾಜಿಕ ಜವಾಬ್ಧಾರಿಯನ್ನೂ ಹೊಂದಿಲ್ಲದೇ ದುಡ್ಡು ಮಾಡುವುದೇ ಧ್ಯೇಯ ಎನ್ನುವಂತಹ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಒಂದು ಪಾಠವನ್ನಂತೂ ಕಲಿಸಿದೆ ಎಂದರೂ ತಪ್ಪಾಗಲಾರದು.

ತಪ್ಪು ಮಾಡುವುದು ಮನುಷ್ಯರ ಸಹಜ ಗುಣ. ಮಾಡಿದ ತಪ್ಪನ್ನು ಒಪ್ಪಿಕೊಂಡು ಸರಿದಾರಿಯಲ್ಲಿ ನಡೆಯುವುದು ಮೆಚ್ಚಬೇಕಾದ ಲಕ್ಷಣ. ಇಲ್ಲಾ ಮಾಡಿದ ತಪ್ಪನ್ನೇ ಪದೇ ಪದೇ ಮಾಡುತ್ತೇವೆ. ನಾವು ಮಾಡುವುದೇ ಸರಿ ಎಂದು ಹೋದಾಗಲೇ ಇಂತಹ ಸಂಘರ್ಷಕ್ಕೆ ಈಡು ಮಾಡುವುದಲ್ಲದೇ ಸಮಾಜದ ಸ್ವಾಸ್ಥ್ಯವನ್ನು ಮತ್ತು ನೆಮ್ಮದಿಯನ್ನು ಹಾಳು ಮಾಡುವುದಲ್ಲದೇ ವಿನಾ ಕಾರಣ ದ್ವೇಷ ಮತ್ತು ಅಸೂಯೆಗಳನ್ನು ಹರಡುತ್ತವೆ. ಬಹುಶಃ ಇಂತಹ ಕ್ಲಿಷ್ಟಕರ ಸಮಸ್ಯೆ ಅತ್ಯಂತ ಸುಗಮವಾಗಿ ಪರಿಹಾರವಾಗುವ ಮೂಲಕ ಇನ್ನು ಮುಂದೆ ಇಂತಹ ತಪ್ಪನ್ನು ಮರುಕಳಿಸಬಾರದು ಎಂಬ ಅಂಶ ಎಲ್ಲರ ಹೃನ್ಮನಗಳಿಗೆ ನಾಟಿದೆ ಎನಿಸುತ್ತದೆ ಅಲ್ವೇ?

ಕಡೆಯ ಹನಿ: ಎಲ್ಲಾ ಬ್ರಾಹ್ಮಣರೂ ಅರ್ಚಕರಲ್ಲಾ. ಹಾಗೆಯೇ ಎಲ್ಲಾ ಅರ್ಚಕರೂ ಬ್ರಾಹ್ಮಣರಲ್ಲ. ಹಾಗಾಗಿ ಅರ್ಚಕರನ್ನು ಅವಹೇಳನ ಮಾಡುವುದು ಕೇವಲ ಒಂದು ಜಾತಿಯ ಅವಹೇಳನವಾಗದೇ ಅದು ಇಡೀ ಹಿಂದೂ ಸಮಾಜವನ್ನು ಅವಹೇಳನ ಮಾಡಿದಂತಾಗುತ್ತದೆ. ಹಿಂದಿನಂತೆ ಹಿಂದುಗಳು ಹಿಂದುಳಿಯದೇ, ಜಾಗೃತರಾಗಿ ಒಗ್ಗಟ್ಟಾಗಿ ಮುಂದುವರೆದಿದ್ದಾರೆ. ಹಾಗಾಗಿ ಇನ್ನು ಮುಂದೇ ಯಾರೇ ಆಗಲೀ ಹಿಂದೂಗಳ ಭಾವನೆಗಳ ವಿರುದ್ಧ ಇಂತಹ ಚೆಲ್ಲಾಟವಾಡುವ ದುಸ್ಸಾಹಸಕ್ಕೆ ಕೈ ಹಾಕದಿರಿ.

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s