ದೇವರಮನೆ

ಇತ್ತೀಚೆಗೆ ನೀವು ಕಲರ್ಸ್ ಕನ್ನಡ ಛಾನೆಲ್ಲಿನ ಮಿಥುನರಾಶಿ ಅಥವಾ ಗೀತ ಸೀರಿಯಲ್ಗಳನ್ನು ಕಳೆದ ಎರಡು ಮೂರು ವಾರಗಳಿಂದ ನೋಡಿದ್ರೇ ವಿಹಾರಾರ್ಥವಾಗಿ ನಾಯಕ ನಾಯಕಿಯರು ಒಂದು ಸುಂದರ ಪ್ರಕೃತಿ ತಾಣಕ್ಕೆ ಹೋಗಿದ್ದಾರೆ. ಭೂಲೋಕವೇ ಸ್ವರ್ಗಕ್ಕೆ ಇಳಿದು ಬಂದೆಯೇನೋ ಎನ್ನುವಷ್ಟರ ಮಟ್ಟಿಗಿನ ಎತ್ತರೆತ್ತರದ ಬೆಟ್ಟ ಅಷ್ಟೇ ಮನಮೋಹಕವಾದ ಇಳಿಜಾರು. ಇಡೀ ಬೆಟ್ಟಕ್ಕೆ ಹಸಿರು ಬಣ್ಣದ ಹೊದಿಗೆ ಹಾಸಿದೆಯೇನೋ ಎನ್ನುವಷ್ಟು ಸುಂದರವಾದ ತಾಣ. ಅಲ್ಲಲ್ಲಿ ಕಣ್ಣಿಗೆ ಮುದ ನೀಡುವ ಬಣ್ಣ ಬಣ್ಣದ ಕಾಡು ಹೂವಿನ ಗಿಡಗಳು, ಅತ್ಯದ್ಭುತ ಪರ್ವತಗಿರಿಗಳು, ಪ್ರಪಾತಗಳು, ಕಾಡುಗಳು, ಪ್ರಶಾಂತತೆ ಮೈಮನವನ್ನೆಲ್ಲ ಪುಳಕಿತಗೊಳಿಸುತ್ತವೆ. ಇವೆಷ್ಟೇ ಅಲ್ಲದೇ ಕನ್ನಡ ಮತ್ತು ಇತರೇ ಭಾಷೆಗಳ ನೂರಾರು ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆಯಲ್ಲದೇ, ದೇವರ ಮೇಲೆ ಹೂವು ತಪ್ಪಿದರೂ ಇಲ್ಲಿ ಯಾವುದಾದರೂ ಚಲಚಿತ್ರ ಅಥವಾ ಸೀರಿಯಲ್ ಚಿತ್ರೀಕರಣ ಆಗುವುದು ತಪ್ಪುವುದಿಲ್ಲ ಎಂದರೂ ಅತಿಶಯೋಕ್ತಿ ಏನಲ್ಲ. ಇಂತಹ ಮನಮೋಹಕ ದೃಶ್ಯವನ್ನು ಹೊರ ರಾಜ್ಯ ಅಥವಾ ವಿದೇಶದಲ್ಲಿ ಚಿತ್ರೀಕರಿಸಿದ್ದಾರೆ ಎಂದು ಭಾವಿಸಿದರೆ ಖಂಡಿತವಾಗಿಯೂ ತಪ್ಪಾಗುತ್ತದೆ. ಇಂತಹ ಸುಂದರವಾದ ಸ್ಥಳ ನಮ್ಮ ಕರ್ನಾಟಕದ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಗಡಿಯಲ್ಲಿದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ವಾ?

ಕರ್ನಾಟಕದ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳು ಸುಂದರವಾದ ನೈಸರ್ಗಿಕವಾದ ಪ್ರಕೃತಿ ತಾಣಗಳಿಗೆ ಹೆಸರುವಾಸಿಯಾಗಿದ್ದು ಮಲೆನಾಡು ಎನಿಸಿಕೊಂಡಿದೆ. ವರ್ಷದ 365 ದಿನಗಳೂ ನಿರಂತರವಾಗಿ ಹರಿಯುವ ನದಿಗಳು ಇಲ್ಲವೇ, ನೀರಿನ ಝರಿಗಳಿಂದಾಗಿ ಇಲ್ಲಿನ ನಿತ್ಯಹರಿದ್ವರ್ಣ ಕಾಡುಗಳು ಅತ್ಯಂತ ಅದ್ಭುತವಾಗಿದ್ದು ಪ್ರಕೃತಿ ಆರಾಧಕರಿಗೆ ಮತ್ತು ಚಾರಣಿಗರಿಗೆ ಹೇಳಿ ಮಾಡಿಸಿದಂತಿದೆ. ನಾನೀಗ ಹೇಳ ಹೊರಟಿರುವುದೂ ಅಂತಹದ್ದೇ ಸುಂದರವಾದ ಸಣ್ಣ ಗ್ರಾಮವಾದ ದೇವರಮನೆ ಗ್ರಾಮದ ಬಗ್ಗೆಯೇ.

ಬೆಂಗಳೂರಿನಿಂದ ಹಾಸನ, ಬೇಲೂರು, ಮೂಡಿಗೆರೆ ದಾಟಿ ಚಾರ್ಮಡಿ ಘಾಟಿನಲ್ಲಿ ಸಿಗುವ ಕೊಟ್ಟಿಗೆಹಾರಕ್ಕೆ (ಅಲ್ಲಿಂದ ಬಲಕ್ಕೆ ಹೊರನಾಡು ಅನ್ನಪೂರ್ಣೆ ದೇವಾಲಯಕ್ಕೆ ಹೋಗ ಬಹುದಾಗಿದೆ) ಒಂದು 3 ಕಿ.ಮೀ ಮುಂಚೆ ಎಡಗಡೆ ತಿರುಗೆ ಅಲ್ಲಿಂದ ಸ್ವಲ್ಪ ಕಚ್ಚಾ ರಸ್ತೆಯಲ್ಲಿ ಸುಮಾರು 8-10 ದೂರ ಕ್ರಮಿಸಿದರೆ ಬಲಬಾಗಕ್ಕೆ ತುಂಬಾ ಹಳೆಯದಾದ ಭೈರವೇಶ್ವರ ದೇವಸ್ಥಾನ ಸಿಗುತ್ತದೆ. ನಿಖರವಾಗಿ ಹೇಳಬೇಕೆಂದಲ್ಲಿ, ಬೆಂಗಳೂರಿನಿಂದ 259 ಕಿಮೀ, ಮೂಡಿಗೆರೆಯಿಂದ 25 ಕಿಮೀ, ಚಿಕ್ಕಮಗಳೂರಿನಿಂದ 30 ಕಿಮೀ, ಹಾಸನದಿಂದ 62 ಕಿಮೀ, ಮಂಗಳೂರಿನಿಂದ 124 ಕಿಮೀ) ದೂರವಿದೆ. ಸಮುದ್ರ ಮಟ್ಟದಿಂದ ಸುಮಾರು 3200 ಎತ್ತರದಲ್ಲಿರುವ ದೇವರಮನೆಗೆ ಮೂಡಿಗೆರೆಯಿಂದ ಅಲ್ಲೊಂದು ಇಲ್ಲೊಂದು ಬಸ್ಸುಗಳು ಇರುವ ಕಾರಣ ಖಾಸಗಿ ಇಲ್ಲವೇ ಸ್ವಂತ ವಾಹನದಲ್ಲಿ ದೇವರಮನೆಗೆ ಹೋಗುವುದು ಉತ್ತಮವಾಗಿದೆ.

ಕೊಟ್ಟಿಗೆ ಹಾರದ ಕಡೆಯಿಂದ ಹೋದಾಗ ಮೊದಲಿಗೆ ಸಿಗುವ ಸುಮಾರು 800 ವರ್ಷಗಳಷ್ಟು ಹಳೆಯದಾದ ನೋಡಲು ಸಾಧಾರಣವಾಗಿ ಕಾಣುವ ಭೈರವೇಶ್ವರ ದೇವಸ್ಥಾನ ಸಿಗುತ್ತದೆ. ಇಲ್ಲಿರುವ ಕಾಲಭೈರವೇಶ್ವರ ದೇವಾಲಯವು ನೋಡಲು ಆಕರ್ಷಕವಾಗಿದ್ದು ಈ ದೇವಸ್ಥಾನದ ಯಾರು ಕಟ್ಟಿಸಿರಬಹುದೆಂದು ನಿಖರವಾಗಿತಿಳಿದಿಲ್ಲವಾದರೂ, ನಕ್ಷತ್ರಾಕಾರದಲ್ಲಿ ನಿರ್ಮಿಸಲ್ಪಟ್ಟಿರುವ ಕಾರಣ ಇದು ಹೊಯ್ಸಳ ರಚನೆ ಇರಬಹುದು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಕೆಲವರು ಹೇಳುವ ಪ್ರಕಾರ, ಇದನ್ನು ಚೋಳರು ಇಲ್ಲವೇ, ವೇಣೂರು ರಾಜರುಗಳು ಕಟ್ಟಿಸಿರಬಹುದೆಂದು ಹೇಳುತ್ತಾರೆ. ದೇವಸ್ಥಾನದ ಪಕ್ಕದಲ್ಲಿಯೇ ಅರ್ಚಕರ ಮನೆಯಿದ್ದು ನಿತ್ಯವೂ ಸಾಂಗೋಪಾಂಗವಾಗಿ ಪೂಜೆ ನಡೆಯುತ್ತಲಿದೆ. ಈ ದೇವಸ್ಥಾನಕ್ಕೆ ಅನೇಕ ಭಕ್ತಾದಿಗಳಿದ್ದು ಅದರಲ್ಲೂ ಈ ದೇವಸ್ಥಾನದ ಒಕ್ಕಲಿನವರು (ಮನೆ ದೇವರು) ಹತ್ತು ಹಲವಾರು ಕಡೆ ಹಂಚಿ ಹೋಗಿದ್ದರೂ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಸಮಯದಲ್ಲಿ ತಪ್ಪದೇ ಬಂದು ಸಡಗರ ಸಂಭ್ರಮದಿಂದ ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸುತ್ತಾರೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದರು. ಇಲ್ಲಿನ ಕಾಡುಗಳಲ್ಲಿ ಪ್ರತೀ 12 ವರ್ಷಗಳಿಗೊಮ್ಮೆ ಅರಳುವ ಹಾರ್ಲು ಹೂವುಗಳು ಇಲ್ಲಿನ ಮತ್ತೊಂದು ವೈಶಿಷ್ಟ್ಯವಾಗಿದೆ.

ಆ ದೇವಸ್ಥಾನದ ಎದುರಿಗೆ ಸುಂದರವಾದ ಬೆಟ್ಟದ ತಪ್ಪಲಿನಲ್ಲಿಯೇ, ರಮಣೀಯವಾದ ವಿಶಾಲವಾದ ಕೆರೆಯಿದೆ. ಆ ಕೆರೆಯ ಮಧ್ಯ ಭಾಗದಲ್ಲಿ ಭಾವಿ ಇರುವುದು ನಿಜಕ್ಕೂ ಆಕರ್ಶಣಿಯವಾಗಿದೆ. ಈ ಕೆರೆಗಳಲ್ಲಿ ಒಂಟಿ ಕಾಲಿನ ನೂರಾರು ಕೊಕ್ಕರೆಗಳನ್ನು ನೋಡುವುದಕ್ಕೆ ಎರಡು ಕಣ್ಗಲು ಸಾಲವು. ರಾತ್ರಿಯ ಹೊತ್ತು ಸುತ್ತ ಮುತ್ತಲಿನ ಕಾಡುಗಳಿಂದ ಆನೆಗಳು ಮತ್ತು ಇತರೇ ಕಾಡು ಪ್ರಾಣಿಗಳು ಇಲ್ಲಿಗೆ ನೀರು ಕುಡಿಯಲು ಮತ್ತು ಸ್ನಾನ ಮಾಡಲು ಬರುತ್ತವೆ ಎನ್ನುತ್ತಾರೆ ಸ್ಥಳೀಯರು.

ಈ ದೇವರ ಮನೆಯ ಕುರಿತಾಗಿ ಮತ್ತೊಂದು ಪೌರಾಣಿಕ ಕಥೆಯಿದ್ದು, ಅದೊಮ್ಮೆ ಪರಶಿವನು ತನ್ನ ವಾಹನವಾದ ನಂದಿಯನ್ನು ಕರೆದು ಭೂಲೋಕಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿಗಳನ್ನು ನೋಡಿಕೊಂಡು ಬರಲು ತಿಳಿಸುತ್ತಾನೆ. ಶಿವನ ಆಜ್ಞೆಯ ಮೇರೆಗೆ ಭೂಲೋಕಕ್ಕೆ ಬಂದ ನಂದಿಯು ನಂದಿಯು ಬರಗಾಲದಿಂದಾಗಿ ನೀರೇ ಇಲ್ಲದೇ ಎಲ್ಲೆಡೆಯಲ್ಲಿಯೂ ಹಸಿವು ಮತ್ತು ಅನಾರೋಗ್ಯಗಳಿಂದ ನರಳುತ್ತಿರುವವರನ್ನು ನೋಡಿ ಬೇಸರಗೊಂಡು ಅದನ್ನು ಯಥಾವತ್ತಾಗಿ ಶಿವನಿಗೆ ಹೇಳಿದರೆ, ಶಿವನು ಬೇಸರಗೊಳ್ಳಬಹುದೆಂದು ತಿಳಿದು, ಕೈಲಾಸಕ್ಕೆ ಹಿಂದಿರುಗಿ, ಭೂಲೋಕದಲ್ಲಿ ಎಲ್ಲರೂ ಸೌಖ್ಯವಾಗಿಯೂ ಕ್ಶೇಮದಿಂದ ಇದ್ದಾರೆ ಎಂಬ ಸುಳ್ಳು ಹೇಳುತ್ತಾನೆ. ಶಿವನು ತನ್ನ ದಿವ್ಯದೃಷ್ಟಿಯಿಂದ ಭೂಲೋಕದ ಪರಿಸ್ಥಿತಿಯನ್ನು ಗಮನಿಸಿ, ನಂದಿ ಹೇಳಿದ್ದು ಸುಳ್ಳು ಎಂದು ತಿಳಿದ ಮೇಲೆ ಕೋಪಗೊಂಡು, ನಂದಿಗೆ ಭೂಲೋಕಕ್ಕೆ ಹೋಗಿ ನರ ಮನುಷ್ಯರಿಗೆ ಅದರಲ್ಲೂ ರೈತರಿಗೆ ಬೇಸಾಯದಲ್ಲಿ ಸಹಾಯ ಮಾಡುವಂತೆ ಶಿಕ್ಢೆಯನ್ನು ಕೊಟ್ಟ ಕಾರಣ, ನಂದಿಯು ಈ ಕ್ಷೇತ್ರದಲ್ಲಿ ಬಂದು ನೆಲೆಸುತ್ತಾನೆ. ಪರ ಶಿವನಿಗೆ ತನ್ನ ಪರಮ ಭಂಟ ನಂದಿಯನ್ನು ಹೆಚ್ಚು ಕಾಲ ಬಿಟ್ಟಿರಲು ಸಾಧ್ಯವಾಗದೇ, ನಂದಿ ನೆಲೆಸಿರುವ ಈ ಜಾಗದಲ್ಲಿ ಕಾಲಭೈರವೇಶ್ವರನ ರೂಪದಲ್ಲಿ ನೆಲೆಸಿ, ಬರವೆಲ್ಲ ನೀಗಿ ನಿತ್ಯಹರಿದ್ವರ್ಣದ ಪ್ರದೇಶವಾಗಿ ಮಾರ್ಪಟ್ಟ ಕಾರಣ ಈ ಪ್ರದೇಶಕ್ಕೆ ದೇವರ ಮನೆ ಎಂಬ ಹೆಸರು ಬಂದಿತೆಂಬ ಐತಿಹ್ಯವಿದೆ.

ಭೈರವೇಶ್ವರ ದೇವಸ್ಥಾನದಿಂದ ಒಂದು ಅರ್ಧ ಕಿಮೀ ದೂರ ದಾಟಿದಲ್ಲಿ ಬಲಕ್ಕೆ ಸಿಗುವ ಬೆಟ್ಟಗಳನ್ನು ಹತ್ತುತ್ತಿದ್ದಂತೆಯೇ ಆಳದ ಪ್ರಪಾತಗಳು, ಕಣಿವೆಗಳು ಮತ್ತು ಹಚ್ಚ ಹಸಿರಿನ ಬೆಟ್ಟ ಗುಡ್ಡಗಳು ನೋಡುತ್ತಿದ್ದಂತೆಯೇ ಭೂಲೋಕವೇ ಧರೆಗೆ ಇಳಿದು ಬಂದಿದೆಯೇನೋ ಎನ್ನುವಂತಿದೆ. ಈ ಕಾರಣದಿಂದಾಗಿಯೇ ಈ ಸುಂದರ ಪ್ರಕೃತಿಯ ತಾಣದಲ್ಲಿ ಪ್ರತಿನಿತ್ಯವೂ ಒಂದಲ್ಲಾ ಒಂದು ಚಿತ್ರೀಕರಣಗಳು ನಡೆಯುತ್ತಲೇ ಇರುತ್ತವೆ. ಇನ್ನು ವಾರಾಂತ್ಯದಲ್ಲಿ ಈ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ತಂಡೋಪ ತಂಡವಾಗಿ ನೂರಾರು ಕುಟುಂಬಗಳು ಮತ್ತು ಚಾರಣಿಗರು ಬರುತ್ತಾರೆ. ಎತ್ತರದ ಬೆಟ್ಟಗಳು ಏರುವಾಗ ಏದುಸಿರು ಬಂದು ಹತ್ತಲು ಪ್ರಯಾಸವಾಗುತ್ತಾದರೂ, ಕಷ್ಟ ಪಟ್ಟು ಬೆಟ್ಟದ ತುದಿಗೆ ಹೋಗಿ ಶೋಲಾ ಹೊದಿಕೆಯ ಕಣಿವೆಯ ಕಡೆ ಕಣ್ಣು ಹಾಯುಸುತ್ತಿದ್ದಂತೆಯೇ ಆಯಾಸವೆಲ್ಲವೂ ಕ್ಷಣಮಾತ್ರದಲ್ಲಿ ಮಾಯವಾಗಿ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಕೆಲವೊಮ್ಮೆ ದಟ್ಟವಾದ ಮೋಡಗಳು ಪ್ರವಾಸಿಗರನ್ನು ಆವರಿಸಿಕೊಂಡು ಮೋಡಗಳಲ್ಲಿನ ನೀರಿನ ಆರ್ದ್ರತೆಯ ಮುದವನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಚೆಂದವೇನೋ ಎನಿಸುತ್ತದೆ.

ದೇವರಮನೆಯ ಸುತ್ತ ಮುತ್ತಲಿನ ಪ್ರದೇಶವು ಚಾರಣಿಗರಿಗೆ ಸ್ವರ್ಗದಂತಿದೆ. ಇಲ್ಲಿಂದ ಸ್ವಲ್ಪವೇ ದೂರದಲ್ಲಿರುವ ಶಿಶಿರ ಬೆಟ್ಟವೂ ಸಹಾ ಅತ್ಯಂತ ರಮಣೀಯವಾಗಿದ್ದು ಚಾರಣಿಗರಿಗೆ ಸವಾಲನ್ನು ಎಸೆಯುವಂತಿದೆ, ದೂರದಿಂದ ಈ ಬೆಟ್ಟ ನೋಡಲು ಎತ್ತಿನ ಬುಜದಂತೆ ಕಾಣುವುದರಿಂದ ಇದು ಎತ್ತಿನ ಬುಜ ಎಂದೇ ಖ್ಯಾತವಾಗಿದ್ದು ಈ ಬೆಟ್ಟದ ಬುಡದಲ್ಲಿಯೇ ಅನೇಕ ನದಿಗಳ ಉಗಮಸ್ಥಾನವಾಗಿದೆ. ಪ್ರಸಿದ್ಧ ಕಪಿಲಾ ಮೀನುಗಾರಿಕೆ ಶಿಬಿರವು ಇದೇ ದೇವರಮನೆಯಿಂದ ಸುಮಾರು 15ಕಿ.ಮೀ ದೂರದಲ್ಲಿದೆ.

ಇಲ್ಲಿ ತಿನ್ನಲು ‌ಮತ್ತು ಕುಡಿಯಲು ಯಾವುದೇ ರೀತಿಯ ಆಹಾರ‌ ಮತ್ತು ನೀರಿನ ವ್ಯವಸ್ಥೆ ಇಲ್ಲದಿರುವ ಕಾರಣ ಪ್ರವಾಸಿಗರು ಎಲ್ಲವನ್ನೂ ತೆಗೆದುಕೊಂಡು ಹೋಗುವುದೇ ಸೂಕ್ತ. ಅದೇ ರೀತಿ ಹೋಗುವ ಎಲ್ಲ ಪ್ರವಾಸಿಗರೂ ಆದಷ್ಟೂ ಕಡಿಮೆ ಪ್ಲಾಸ್ಟಿಕ್ ಬಳಸಿ, ಯಾವುದೇ ರೀತಿಯ ತ್ಯಾಜ್ಯಗಳನ್ನು ಅಲ್ಲಿ ಬಿಸಾಡದೇ ಪರಿಸರವನ್ನು ಸುಂದರವಾಗಿಯೇ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ.

ದೇವರಮನೆಯಿಂದ ಸುಮಾರು 20-30 ದೂರದಲ್ಲಿಯೇ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ದೇವವೃಂದ ಎಂಬ ಸಣ್ಣ ಗ್ರಾಮವಿದ್ದು ಪರಶುರಾಮರು ಇಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಇಲ್ಲಿ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಅವರೇ ಪ್ರತಿಷ್ಠಾಪಿಸಿದ ಶ್ರೀ ಪ್ರಸನ್ನ ರಾಮೆಶ್ವರ ದೇವಾಲಯ ಬಹಳ ಆಕರ್ಷಣೀಯವಾಗಿದೆ.

ದೇವರವೃಂದ ಅಕ್ಕ ಪಕ್ಕದಲ್ಲಿಯೇ ಹಲವಾರು ರಿಸಾರ್ಟುಗಳು ಮತ್ತು ಹೋಂ ಸ್ಟೇಗಳಿದ್ದು ಪ್ರವಾಸಿಗರಿಗರು ಆರಾಮವಾಗಿ ಒಂದೆರಡು ದಿನಗಳ ಮಟ್ಟಿಗೆ ನಗರದ ಜಂಜಾಟಗಳಿಂದ ದೂರವಾಗಿ ಪ್ರಕೃತಿಯ ಮಡಿಲಿನಲ್ಲಿ ಸ್ವಚ್ಚಂದವಾಗಿ ಕುಟುಂಬ ಸಮೇರತಾಗಿ ಕಾಲಕಳೆಯಬಹುದಾಗಿದೆ. ನೈಸರ್ಗಿಕವಾಗಿ ಧುಮಕುವ ಜಲಪಾತಗಳು ಮತ್ತು ಸಣ್ಣ ಪುಟ್ಟ ನೀರಿನ ಝರಿಗಳು ಮತ್ತು ಉಪನದಿಗಳಲ್ಲಿ ಸ್ವಚ್ಚಂದವಾಗಿ ಮೈಯೊಡ್ಡಿ ಕೂರುವುದು ನಿಜಕ್ಕೂ ಮನಸ್ಸಿಗೆ ಮುಂದ ನೀಡುವುದಲ್ಲದೇ, ಪ್ರಕೃತಿಯೊಡನೆ ಅತಿ ನಿಕಟವಾಗಿ ಬೆರೆಯಬಹುದಾದಂತಹ ಸುವರ್ಣಾವಕಾಶವನ್ನು ಪಡೆಯಬಹುದಾಗಿದೆ.

ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿಯೋ ಇಲ್ಲವೇ ಗೆಳತಿ/ಗೆಳೆಯರೊಂದಿಗೆ ದೇವರಮನೆಗೆ ಹೋಗಿ ಕರ್ನಾಟಕದ ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಸವಿದು ಅದರ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರೀ?

ನಿಮ್ಮವನೇ ಉಮಾಸುತ

2 thoughts on “ದೇವರಮನೆ

  1. Dear Sri. Srikhant Balagangi you are Explained Devaramane with Photo & Message is too good
    Ramu, Ramanna, Ramachandra. GH

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s