ಮನೆಯಲ್ಲಿ ಕುಳಿತು ತುಂಬಾನೇ ಬೋರ್ ಆಗ್ತಾ ಇದ್ಯಾ? ಎಲ್ಲಾದ್ರೂ ಹತ್ತಿರದಲ್ಲೇ ಸುತ್ತಾಡಿಕೊಂಡು ಬರೋಣಾ ಅನ್ನಿಸ್ತಾ ಇದ್ಯಾ? ಹಾಗಾರೇ ಇನ್ನೇಕೆ ತಡಾ, ಬನ್ನಿ ನನ್ನ ಸಂಗಡ, ಬೆಂಗಳೂರಿನಿಂದ ದೇವನಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೋ ದಾರಿಯಲ್ಲಿ ಎಡಗಡೆ ದೊಡ್ಡದಾಗಿ MV Solar ಕಂಪನಿ ಕಾಣಿಸುತ್ತದೆ ಅಲ್ಲಿಂದ ಸರ್ವಿಸ್ ರೋಡ್ ತೆಗೆದುಕೊಂಡರೆ ಸಿಗೋದೇ ವಿದ್ಯಾನಗರ. ಬಲಕ್ಕೆ ತಿರುಗಿ ವೆಂಕಟೇಶ್ವರ ಇಂಜೀನಿಯರಿಂಗ್ ಕಾಲೇಜ್ ದಾಟಿಕೊಂಡು ಸುಮಾರು ಎರಡು ಕಿ.ಮೀ, ದೂರ ಕ್ರಮಿಸಿದರೆ ಎಡಗಡೆಗೆ ಸಿಗುವ ಶ್ರೀಕ್ಷೇತ್ರವೇ, ಉತ್ತನಹಳ್ಳಿ ಅಕ್ಕಯ್ಯಮ್ಮನ ಬೆಟ್ಟ. ಇದು ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಗ್ರಾಮಕ್ಕೆ ಹೊಂದಿಕೊಂಡಿರುವ ಈ ಬೆಟ್ಟ ಪುರಾತನ ಕಾಲದಿಂದಲೂ ಉತ್ತನಹಳ್ಳಿ ಅಕ್ಕಯ್ಯಮ್ಮನ ಬೆಟ್ಟ ಎಂದೇ ಪ್ರಸಿದ್ಧಿಯಾಗಿದೆ.
ನಿಜ ಹೇಳ್ಬೇಕೂ ಅಂದ್ರೇ ಇದು ಧಾರ್ಮಿಕ ಕ್ಷೇತ್ರವೂ ಹೌದು ಮತ್ತು ರಮಣೀಯವಾದ ಪ್ರವಾಸೀ ತಾಣವೂ ಹೌದು. ಮಂಗಳವಾರ, ಶುಕ್ರವಾರ ಮತ್ತು ಇತ್ತಿಚಿನ ಕೆಲವು ವರ್ಷಗಳಿಂದ ಭಾನುವಾರವೂ ಇಲ್ಲಿ ಜಾತ್ರೆಯ ರೂಪದಲ್ಲಿ ನಡೆಯುತ್ತದೆ. ಸುಮಾರು 156 ಮೆಟ್ಟಿಲುಗಳನ್ನು ಹತ್ತಿಕೊಂಡು ಹೋದರೆ (ಬೆಟ್ಟದ ಮತ್ತೊಂದು ತುದಿಯಿಂದ ಸ್ವಲ್ಪ ತ್ರಾಸದಾಯಕವಾಗಿ ವಾಹನದ ಮೂಲಕವೂ ಬರಬಹುದಾಗಿದೆ.) ಕೆಲ ವರ್ಷಗಳ ಹಿಂದೆ ಎಲ್ಲರೂ ಸುಲಭವಾಗಿ ಹತ್ತ ಬಹುದಾದ ಮೆಟ್ಟಿಲುಗಲನ್ನು ಮಾಡಿ ಅದಕ್ಕೆ ಮೇಲು ಹಾಸುಗಳನ್ನು ಹಾಸಿರುವ ಕಾರಣ ಆಯಾಸವಿಲ್ಲದೇ ಬೆಟ್ಟವನ್ನು ಹತ್ತಬಹುದಾಗಿದೆ. ಬೆಟ್ಟ ಹತ್ತುತ್ತಿದ್ದಂತೆಯೇ, ಜಾತ್ರೆಯ ರೂಪದದಲ್ಲಿ ಬಣ್ಣ ಬಣ್ಣದ ಬೊಂಬೆಗಳನ್ನು ಮಾರುವವರು, ಬಳೆಯನ್ನು ತೊಡಿಸುವ ಬಳೆಗಾರರು ಒಂದೆಡೆಯಾದರೇ, ಅಣ್ಣಾ ಚೆಪ್ಪಲಿ ಇಲ್ಲೇ ಬಿಟ್ಟು ಪೂಜೇ ಸಾಮಾನು ತೆಗೆದು ಕೊಳ್ರೀ ಅಂತ ಸಾಲು ಸಾಲಾಗಿ ಹಣ್ಣು, ಕಾಯಿ, ಕರ್ಪೂರ ಮತ್ತು ಊದುಕಡ್ಡಿ ವ್ಯಾಪಾರ ಮಾಡುವವರ ದಂಬಾಲು ಕಣ್ಣಿಗೆ ಬೀಳುತ್ತದೆ. ಅವರೆಲ್ಲರನ್ನೂ ದಾಟಿ ಸ್ವಲ್ಪ ಮೇಲೆ ಹತ್ತಿದರೆ, ಭಕ್ತಾದಿಗಳಿಗಾಗಿ ಯಾರೋ ಪುಣ್ಯಾತ್ಮರು ಕಟ್ಟಿಸಿದ ಅರವಟ್ಟಿಕೆ ಕಾಣಿಸುತ್ತದೆ. ಆ ಅರವಟ್ಟಿಕೆಯ ನೆರಳಿನಲ್ಲಿ ಸ್ವಲ್ಪ ಕಾಲ ಕುಳಿತುಕೊಂಡು ಮೆಟ್ಟಿಲುಗಳನ್ನು ಹತ್ತಿದ ಆಯಾಸ ಕಳೆದುಕೊಳ್ಳ ಬಹುದಾಗಿದೆ.
ಇಲ್ಲಿರುವ ಶ್ರೀ ಸಪ್ತಮಾತೃಕೆಯರು ಮತ್ತು ಮುನೇಶ್ವರ ಸ್ವಾಮಿಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಅನೇಕ ಒಕ್ಕಲು ಭಕ್ತಾದಿಗಳು (ಮನೆ ದೇವರು) ಇದ್ದು ಇಲ್ಲಿಗೆ ತಮ್ಮ ಮಕ್ಕಳ ತಲೆ ಕೂದಲು ಕೂಡುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ.
ಇನ್ನು ಹಲವರು ಮುನೇಶ್ವರರಿಗೆ ಮಾತ್ರ ಕುರಿ ಮತ್ತು ಕೋಳಿಗಳನ್ನು ತಂದು ಪೂಜೆ ಮಾಡಿಸಿ ನಂತರ ಬೆಟ್ಟದ ಕೆಳಗೆ ಬಲಿ ಕೊಡುವ ಸಂಪ್ರದಾಯವೂ ಇಲ್ಲಿ ರೂಢಿಯಲ್ಲಿದೆ. ಇನ್ನು ಅಮ್ಮನವರಿಗೆ ಮೊಸರನ್ನ ಇಲ್ಲವೇ ಬೆಲ್ಲದನ್ನ ಮಾತ್ರ ನೈವೇದ್ಯ ಮಾಡಲಾಗುತ್ತದೆ.
ಇಷ್ಟು ಎತ್ತರದ ಬೆಟ್ಟದಲ್ಲಿಯೂ ಒಂದು ಸಣ್ಣದಾದ ಕೊಳವಿದೆ. ಹಸಿರು ಬಣ್ಣ ಪಾಚಿ ಕಟ್ಟಿರುವ ನೀರಿನಿಂದ ಕೂಡಿರುವ ಈ ಕೊಳ ಬಹುಶಃ ಮಳೆಯ ನೀರಿನಿಂದ ಸಂಗ್ರಹಿತವಾಗಿರಬಹುದಾದರು ವರ್ಷದ 365 ದಿನಗಳೂ ಇಲ್ಲಿನ ನೀರು ಬತ್ತದಿರುವುದು ಗಮನಾರ್ಹವಾಗಿದೆ. ದೇವಸ್ಥಾನದ ಒಕ್ಕಲು ತನದವರು ಭಕ್ತಿಯ ಪರಾಕಾಷ್ಟೆಯಿಂದ ಪುಣ್ಯ ಸ್ನಾನ ಮಾಡುವುದು ರೂಢಿಯಲ್ಲಿದೆಿ. ಈ ರೀತಿಯಾಗಿ ಹೊಂಡ ನೀರನ್ನು ಹಿತ್ತಾಳಿ ಬೋಗುಣಿಯಿಂದ ನೀರು ಹಾಕುವವರು ದಾಸಯ್ಯರಾಗಿರುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.
ಕೆಲವರು ಈ ಹೊಂಡ ನೀರಿನಲ್ಲಿ ಸ್ನಾನ ಮಾಡಿ ಮಡಿಯುಡುಗೆಯಲ್ಲಿ ಬಂದರೆ ಇನ್ನೂ ಕೆಲವರು ಅದೇ ಹೊಂಡ ನೀರಿನಿಂದ ಕೈ ಕಾಲು ತೊಳೆದುಕೊಂಡು ತಲೆಗೆ ನೀರನ್ನು ಪ್ರೋಕ್ಷಿಸಿಕೊಂಡು ಅಲ್ಲಿಯೇ ಇರುವ ಗರುಡಗಂಬಕ್ಕೆ ಅರಿಶಿನ ಕುಂಕುಮ ಹಚ್ಚಿ, ಹಣ್ಣು, ಕಾಯಿ ನೈವೇದ್ಯ ಮಾಡಿ, ಊದುಕಡ್ಡಿಯನ್ನು ಹಚ್ಚಿ ಭಕ್ತಿಯಿಂದ ಪೂಜೆ ಸಲ್ಲಿಸಿದ ನಂತರ ಸಪ್ತಮಾತೃಕೆಯರ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ತಾವು ತಂದ ಮಡಲಕ್ಕಿ ಅಥವಾ ಸೋಬಲಕ್ಕಿ, ಸೀರೆ, ಬಳಿ ಹಣ್ಣು ಕಾಯಿಗಳನ್ನು ಸಮರ್ಪಿಸಿ ಭಕ್ತಿಯಿಂದ ಇಲ್ಲಿನ ದೇವಿಯರಿಗೆ ವಿದ್ಯುಕ್ತವಾಗಿ ಶಾಸ್ತ್ರೋಕ್ತವಾಗಿ ಅರ್ಚಕರ ನೇತೃತ್ವದಲ್ಲಿ ನಡೆಯುವ ಪೂಜೆಯನ್ನು ಕಣ್ತುಂಬಿಸಿಕೊಂಡು ತೀರ್ಧಪ್ರಸಾದಗಳನ್ನು ಸೇವಿಸಿ ಭಕ್ತಿಯ ಪರವಶದಲ್ಲಿ ಮೈಮರೆಯುತ್ತಾರೆ ಎಂದರೂ ತಪ್ಪಾಗಲಾರದು.
ಈ ದೇವಸ್ಥಾನದ ಎದಿರುನಲ್ಲಿಯೇ ಇರುವ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನಲ್ಲಿಯೂ ಅರ್ಚಕರು ಮಂಗಳಾರತಿ ಮಾಡಿಕೊಡುವ ಮಂಗಳಾರ್ತಿ ತೆಗೆದುಕೊಂಡು ತಮ್ಮ ಇಷ್ಟಾರ್ಥಗಳನ್ನು ನೆರೆವೇರಿಸಿಕೊಡು ಎಂದು ಭಗವಂತನಲ್ಲಿ ಬೇಡಿಕೊಂಡು ಅಲ್ಲಿಂದ ಮುಂದೆ ಬಂದಲ್ಲಿ ದೊಡ್ಡದಾದ ಶಿವ ಪಾರ್ವತಿಯರ ವಿಗ್ರಹವನ್ನು ನೋಡಬಹುದಾಗಿದೆ ಅಲ್ಲಿಂದ ಬಲಕ್ಕೆ ನವಗ್ರಹ ದೇವಸ್ಥಾನ ಮತ್ತು ಅಲ್ಲಿಂದ ಮುಂದೆ ಛಾವಣಿ ಇಲ್ಲದೇ ಅರ್ಥ ನಿರ್ಮಿತವಾಗಿರುವ ದುರ್ಗೆಯ ದೇವಸ್ಥಾನವನ್ನು ನೋಡಬಹುದಾಗಿದೆ. ಕಾಲ ಕಾಲಕ್ಕೆ ನಿರ್ವಿಘ್ನವಾಗಿ ಯಜ್ಞ ಯಾಗಾದಿಗಳನ್ನು ಮಾಡುವ ಸಲುವಾಗಿ ಯಾಗ ಮಂಟಪ ಮತ್ತು ಪಾಕಶಾಲೆಯನ್ನು ಸಹಾ ಇತ್ತೀಚೆಗೆ ನಿರ್ಮಾಣ ಮಾಡಿದ್ದಾರೆ.
ಪಕ್ಕ ಹಳ್ಳಿಯ ಜಾತ್ರೆಯೋ ಇಲ್ಲವೇ ಸಂತೆಯನ್ನೇ ನೆನಪಿಸುವ ಹಾಗೆ ಕಡಲೇ ಪುರಿ, ಕಲ್ಯಾಣಸೇವೆ, ಬೆಂಡು ಬತ್ತಾಸು ಮಾರುವವರು ಒಂದೆಡೆಯಾದರೇ, ಹಲವಾರು ವರ್ಷಗಳಿಂದಲೂ ಇಲ್ಲಿ ಬಗೆ ಬಗೆಯ ಬೊಂಡ, ಬಜ್ಜಿ, ಆಂಬೋಡೇ, ಚಿತ್ರಾನ್ನ, ಮೈಸೂರು ಪಾಕ್ ಸವಿಯಲು ನಿಜಕ್ಕೂ ಮಜವಾಗಿದೆ.
ಇವಿಷ್ಟೂ ಉತ್ತನಹಳ್ಳಿ ಅಕ್ಕಯ್ಯಮ್ಮನ ಬೆಟ್ಟದ ಮೊದಲಾರ್ಧವಾದರೆ, ಇಲ್ಲಿಂದ ಸುಮಾರು ಅರ್ಧ ಮೈಲು ಮತ್ತೆ ಮೇಲಕ್ಕೆ ಹತ್ತಿದಲ್ಲಿ ಮತ್ತೆ ಶ್ರೀರಾಮ ಮಂದಿರ, ಕನ್ನಡತಾಯಿ ಭುವನೇಶ್ವರಿಯ ದೇವಾಲಯ, ಗುಹೆಯಂತಿರುವ ಸೋಮೇಶ್ವರ ದೇವಾಲಯ ಮತ್ತು ಗವಿ ಮಹೇಶ್ವರಿ ದೇವಸ್ಥಾನಗಳನ್ನು ನೋಡಬಹುದಾಗಿದೆ. ಶ್ರೀ ರಾಮಾಲಯದಲ್ಲಂತೂ ಶ್ರೀರಾಮ ಸೀತೆ ಲಕ್ಷಣ ಆಂಜನೇಯರಲ್ಲದೇ, ಆಚಾರ್ಯತ್ರಯರ ಮನಮೋಹಕ ವಿಗ್ರಹಗಳಲ್ಲದೇ, ಇತ್ತೀಚೆಗಷ್ಟೇ ಪ್ರತಿಷ್ಠಾಪನೆ ಮಾಡಿರುವ ಮಲಗಿರುವ ರಂಗನಾಥನ ಸುಂದರವಾದ ವಿಗ್ರಹಗಳು ಹೃನ್ಮನಗಳನ್ನು ಆಕರ್ಷಿಸುತ್ತದೆ.
ರಾಮ ಮಂದಿರದ ಮುಂದೆಯೇ ಇರುವ ಶ್ರೀ ಮಹಾಮೇರು ಚಕ್ರ ಸಮೇತ ಇರುವ ಭುವನೇಶ್ವರಿ ದೇವಿಯಯನ್ನು ನೋಡಲು ಎರಡು ಕಣ್ಗಳು ಸಾಲದಾಗಿದೆ.
ಅಲ್ಲಿಂದ ಸ್ವಲ್ಪ ದೂರದಲ್ಲಿಯೇ ಬಿಲ್ಪ ಪತ್ರೆ ಮರದದಡಿಯಲ್ಲಿಯೇ ಗುಹೆಯ ಒಳಗೆ ಇರುವ ಸೋಮೇಶ್ವರಸ್ವಾಮಿ ದೇವಸ್ಥಾನ ಮತ್ತು ಅಲ್ಲಿಂದ ಕೂಗಳತೆ ದೂರದಲ್ಲಿರುವ ಗವಿ ಮಹೇಶ್ವರಿ ದೇವಸ್ಥಾನಗಳನ್ನು ನೋಡುವಷ್ಟರಲ್ಲಿ ಕಣ್ಗಳು ಸುಮಾರು 120 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ತಂಪಾದ ಹವಾಗುಣ ಹೊಂದಿರುವ ಬೆಟ್ಟ ಮತ್ತು ಅದರ ತಪ್ಪಲಲ್ಲಿಯೇ ದೂರದಲ್ಲಿ ಕಾಣಿಸುವ ಕೆರೆ
ಪ್ರತೀ ಒಂದೆರಡು ನಿಮಿಷಕ್ಕೆ ಆಗಸಕ್ಕೇರುವ ಇಲ್ಲವ್ವೇ ಆಗಸದಿಂದ ಇಳಿಯುವ ವಿಮಾನಗಳನ್ನು ನೋಡುವುದೇ ಮನಸ್ಸಿಗೆ ಮುದನೀಡುತ್ತದೆ. ಅಲ್ಲಿಯೇ ಮನೆಯಿಂದ ಮಾಡಿಕೊಂಡು ಬಂದಿದ್ದ ತಿಂಡಿ ತೀರ್ಧಗಳೊಂದಿಗೆ ಕೆಳಗೆ ಕಟ್ಟಿಸಿಕೊಂಡಿದ್ದ ಸಂತೆ ಬೊಂಡ ನೆಂಚಿಕೊಂಡು ತಿಂದು ಸಣ್ಣಗೆ ಡರ್ ಎಂದು ತೇಗಿದಾಗ ಸಿಗುವ ಆನಂದ ನಿಜಕ್ಕೂ ವರ್ಣಿಸಲಾಗದು.
ಸುಮ್ಮನೇ ದೂಡಿದರೇ ಬಿದ್ದು ಹೋಗುವಂತೆ ಭಾಸವಾಗುವ ದೊಡ್ಡ ದೊಡ್ಡ ಬಂಡೆಗಳು ನಿಜಕ್ಕೂ ಆನಂದವನ್ನುಂಟು ಮಾಡುತ್ತದೆಯಾದರೂ, ಇತ್ತೀಚಿನ ಕೆಲ ವರ್ಷಗಳಿಂದ ಈ ಬೆಟ್ಟ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಬೆಟ್ಟದಲ್ಲಿ ಹಗಲು ಹೊತ್ತಲ್ಲಿ ಕಾಲೇಜು ಯುವಕ ಯುವತಿಯರ ಈ ಕಲ್ಲುಗಳ ಹಿಂದೆ ಸರಸ ಸಲ್ಲಾಪಕ್ಕಿಳಿದರೆ, ರಾತ್ರಿ ಹೊತ್ತು ಕುಡುಕರ ಮತ್ತು ಪುಂಡರ ಅಡ್ಡೆಯಾಗುತ್ತಿದೆ.
ಬೆಟ್ಟದ ತಪ್ಪಲಿನಲ್ಲಿಯೇ ಇರುವ ಇಂಜೀನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಹುಡುಗ ಹುಡುಗಿಯರು ಕಾಲೇಜಿಗೆ ಬಂಕ್ ಮಾಡಿ ಇಲ್ಲಿನ ಬೆಟ್ಟದ ಮೇಲಿರುವ ಬಂಡೆಗಳ ಮರೆಯಲ್ಲಿ ಕುಳಿತು ತಮ್ಮ ತೆವಲುಗಳನ್ನು ತೀರಿಸಿಕೊಂಡರೆ, ಇನ್ನೂ ಕೆಲವು ಪುಂಡರು ಡ್ರಗ್ಸ್ ಸೇವಿಸಿ ಬೆಟ್ಟಕ್ಕೆ ಬರುವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವ ಘಟನೆಗಳೂ ನಡೆದಿರುವುದು ಈ ಬೆಟ್ಟಕ್ಕೆ ಬರುವ ಭಕ್ತದಾಗಿಳನ್ನು ಆತಂಕಕ್ಕೀಡು ಮಾಡಿದೆ.
ಹಗಲಿನಲ್ಲಿ ಪ್ರೇಮಿಗಳ ಸಲ್ಲಾಪದಿಂದ ನಲುಗುವ ಬೆಟ್ಟ ಸಂಜೆಯಾಗುತ್ತಲೇ ಸುತ್ತ ಮುತ್ತಲ ಹಳ್ಳಿಯ ಕುಡುಕರ ಅಡ್ಡೆಯಾಗಿ ಮಾರ್ಪಾಡಾಗುತ್ತದೆ. ಸುತ್ತಮುತ್ತಲ ಪುಂಡರು ಮದ್ಯದ ಬಾಟಲಿಗಳು ಹಾಗೂ ಆಹಾರದ ಪೊಟ್ಟಣಗಳೊಂದಿಗೆ ಬಂದು ಮೋಜು ಮಸ್ತಿ ಮಾಡಿ ಬೆಟ್ಟವನ್ನು ಗಬ್ಬೆಬ್ಬಿಸಿ ಹೋಗುವುದಲ್ಲದೇ, ಕುಡಿದ ಮತ್ತಿನಲ್ಲಿ ಮಧ್ಯದ ಬಾಟೆಲ್ಲುಗಳನ್ನು ಎಲ್ಲೆಂದರಲ್ಲಿ ಒಡೆದು ಹಾಕುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.
ಇವೆಲ್ಲವಗಳ ಹೊರತಾಗಿಯೂ ಬೆಂಗಳೂರಿನ ಸಮೀಪದಲ್ಲಿಯೇ ಅರ್ಧ ದಿನಗಳನ್ನು ಆರಾಮವಾಗಿ ಭಕ್ತಿ ಭಾವ ಮತ್ತು ಮನಸ್ಸಿಗೆ ಮುದ ನೀಡುವಂತಹ ಸ್ಥಳಕ್ಕೆ ಭೇಟಿ ನೀಡಿ ನಗರದ ಜಂಜಾಟಗಳಿಂದ ಕೆಲವು ಗಂಟೆಗಳ ಕಾಲ ನೆಮ್ಮದಿಯಾಗಿ ಕಾಲ ಕಳೆದು ಹೋದದ್ದೇ ಗೊತ್ತಾಗುವುದೇ ಇಲ್ಲ.
ಬೆಟ್ಟದಿಂದ ಕೆಳಗೆ ಇಳಿಯುವ ಮುನ್ನಾ ಜಾತ್ರೆಯ ನೆನಪಿನಲ್ಲಿ ಕಡಲೇಪುರಿ, ಬೆಂಡು ಬತ್ತಾಸುಗಳನ್ನು ಕೊಂಡು ಕೊಂಡು, ಹೆಣ್ಣು ಮಕ್ಕಳ ಕೈಗೆ ಬಣ್ಣ ಬಣ್ಣದ ಬಳೆ ತೊಡಿಸಿಕೊಂಡು, ಸಣ್ಣ ಮಕ್ಕಳಿಗೆ ಆಟಿಕೆಗಳನ್ನು ಕೊಡಿಸಿಕೊಂಡು ನಿಧಾನವಾಗಿ ಜಾಗೃತಿಯಿಂದ ಬೆಟ್ಟ ಇಳಿಯುತ್ತಿದ್ದಂತೆಯೇ, ಮುನೇಶ್ವರ ಸ್ವಾಮಿಗೆ ಬಲಿಕೊಡಲು ಕಟುಕರು ಸಿದ್ಧವಾಗಿದ್ದರೆ, ದೇವರಿಗೆಂದು ಕೋಳಿ ಮತ್ತು ಕುರಿಗಳನ್ನು ಹರಕೆಂದು ಭಕ್ತರು ಕೊಡಲು ಅಣಿಯಾಗುವುದನ್ನು ನೋಡಲು ಮನಸ್ಸಿಗೆ ಮುಜುಗರ ಮತ್ತು ದುಃಖವನ್ನು ಉಂಟು ಮಾಡುವುದಂತೂ ಸತ್ಯ.
ಏನಂತೀರೀ?
ನಿಮ್ಮವನೇ ಉಮಾಸುತ