ಸೂರ್ಯವಂಶದ ಕೌಶಿಕ ಮಹಾರಾಜ ವಸಿಷ್ಠ ಮುನಿಗಳ ಆಶ್ರಮದಲ್ಲಿ ಅವಮಾನಿತನಾಗಿ. ಘೋರ ತಪಸ್ಸನ್ನು ಮಾಡಿ ವಿಶ್ವಾಮಿತ್ರ ಎಂಬ ರಾಜರ್ಷಿ ಪಟ್ಟವನ್ನು ಪಡೆಯುತ್ತಾನೆ. ನಂತರ ತನ್ನ ಅನುಯಾಯಿ ತ್ರಿಶಂಕುವನ್ನು ಸ್ವರ್ಗಕ್ಕೆ ಸೇರಿಸಿಕೊಳ್ಳಲು ಒಪ್ಪದ ಇಂದ್ರನ ವಿರುದ್ಧವೇ ಸಿಡಿದೆದ್ದು ತ್ರಿಂಶಂಕು ಸ್ವರ್ಗವನ್ನೇ ಸೃಷ್ಟಿಸಿದ್ದಲ್ಲದೇ, ಇಂದ್ರ ಪಟ್ಟವನ್ನೇ ಪಡೆಯಬೇಕೆಂದು ನಿರ್ಧರಿಸಿದ ವಿಶ್ವಾಮಿತ್ರರು ಘನ ಘೋರ ತಪಸ್ಸನ್ನು ಮಾಡುವುದನ್ನು ಗಮನಿಸಿದ ಇಂದ್ರ, ಭಯಭೀತನಾಗಿ ಪರಮ ಸುಂದರಿಯಾದ ಮೇನಕೆಯನ್ನು ವಿಶ್ವಾಮಿತ್ರರ ತಪ್ಪಸ್ಸನ್ನು ಭಂಗ ಮಾಡಲು ಕಳುಹಿಸಿ ಯಶಸ್ವಿಯಾಗಿದ್ದಲ್ಲದೇ, ಅವರಿಬ್ಬರ ದಾಂಪತ್ಯದ ಫಲವಾಗಿ ಶಕುಂತಲೆಯ ಜನನಕ್ಕೆ ಕಾರಣೀಭೂತವಾಗುತ್ತದೆ.
ಮೈಸೂರು ಅರಸರುಗಳಲ್ಲಿ ಅತ್ಯಂತ ಅಜಾನುಬಾಹುವಾಗಿದ್ದ, ಶೂರರು ಮತ್ತು ಸ್ವತಃ ಮಲ್ಲ ಯುದ್ಧದ ಜಟ್ಟಿಗಳಾಗಿದ್ದ ಶ್ರೀ ರಣಧೀರ ಕಂಠೀರವ ಅವರು ಆಗಿನ ಕಾಲದಲ್ಲಿಯೇ ತಿರುಚನಾಪಳ್ಳಿಯ ಜಟ್ಟಿಯೊಬ್ಬ ಕಟ್ಟಿದ್ದ ಚೆಲ್ಲವನ್ನು ಮಾರುವೇಷದಲ್ಲಿ ಹೋಗಿ ಕಿತ್ತೊಗೆದು ಅವನನ್ನು ಸೋಲಿಸಿ ಬಂದಿದ್ದ ವಿಷಯವನ್ನು ತಿಳಿದು. ರಣಧೀರ ಕಂಠೀರವರನ್ನು ಮೋಸದಿಂದ ಸಾಯಿಸುವ ಸಲುವಾಗಿ ದೊಡ್ಡಮ್ಮಣ್ಣಿ ಎಂಬ ಹೆಣ್ಣು ಮಗಳನ್ನು ಮೈಸೂರಿನ ಅರಮನೆಗೆ ಕಳುಹಿಸಿ, ಪ್ರಭುಗಳನ್ನು ತನ್ನ ಮೋಹದ ಪಾಶಕ್ಕೆ ಸಿಲುಕಿಸಿಕೊಂಡು ಅದೊಂದು ದಿನ ಅವರಿಬ್ಬರೇ ಅಂತಃಪುರದಲ್ಲಿ ಇರುವಾಗ ಅವರನ್ನು ಸಾಯಿಸಲು ಬಂದಿದ್ದ ಸುಮಾರು 26ಕ್ಕೂ ಅಧಿಕ ಜಟ್ಟಿಗಳನ್ನು ತಮ್ಮ ವಿಜಯನಾರಸಿಂಹ ಎಂಬ ಬಾಕುವಿನಿಂದ ಇರಿದು ಕೊಂದು ಹಾಕಿದ್ದರು. ರಣಧೀರ ಕಂಠೀರವರವರ ಈ ಅಧ್ಭುತ ಸಾಹಸವನ್ನು ಕಣ್ಣಾರೆ ಕಂಡು ಅಚ್ಚರಿಗೊಂಡ ದೊಡ್ಡಮ್ಮಣ್ಣಿಯವರು ರಣಧೀರ ಕಂಠೀರವರತ್ತ ನಿಜಕ್ಕೂ ಆಕರ್ಷಿತರಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡು ಕಡೆಗೆ ಮಹಾರಾಜರನ್ನು ವಿದ್ಯುಕ್ತವಾಗಿ ಮದುವೆಯಾಗಿ ಅಧಿಕೃತವಾಗಿ ಪಟ್ಟದರಸಿಯಾಗುತ್ತಾರೆ. ಆಕೆಯ ಹೆಸರಿನಲ್ಲಿಯೇ, ಬಂಗಾರದ ದೊಡ್ಡಿ ನಾಲೆಯನ್ನು ಕಟ್ಟಿ ಕಾವೇರೀ ನದಿಯ ನೀರನ್ನು ತಮ್ಮ ಪ್ರಾಂತದ ರೈತರ ಅಗತ್ಯಗಳಿಗೆ ಪೂರೈಸುವ ಮೂಲಕ ದೊಡ್ಡಮ್ಮಣ್ಣಿಯವರ ಹೆಸರು ಚಿರಸ್ಥಾಯಿಯಾಗುತ್ತದೆ.
ಇನ್ನು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿಯೂ ಬ್ರಿಟಿಷರು ನೆಹರು ಅವರ ರಸಿಕತೆ ಮತ್ತು ಕಚ್ಚೆಹರುಕುತನವನ್ನು ಚೆನ್ನಾಗಿಯೇ ಅವರಿಗೆ ಅನುಕೂಲವಾಗುವಂತೆ ಬಳಸಿಕೊಂಡದ್ದು ಈಗೇನು ಗುಟ್ಟಾಗಿಲ್ಲ.
ಇಷ್ಟೆಲ್ಲಾ ಪೀಠಿಕೆಗಳು ಏಕೆಂದರೆ, ಯಾವಾಗ ತನ್ನ ಶತ್ರುವನ್ನು ನೇರ ನೇರವಾಗಿ ಸೋಲಿಸಲು ಸಾಧ್ಯವಿಲ್ಲಾ ಎಂದು ಅರಿತನಂತರ, ಹೇಗಾದರೂ ಮಾಡಿ ಶತ್ರುವನ್ನು ನಾಶಮಾಡಲೇ ಬೇಕೆಂದು ನಿರ್ಧರಿಸಿ, ಶತ್ರುವಿನ ದೌರ್ಬಲ್ಯಕ್ಕೆ ಅನುಗುಣವಾಗಿ ವೆಲೆವೆಣ್ಣುಗಳ ಸಹಾಯದಿಂದ ಆಕೆಯ ಮೋಹಪಾಶದಲ್ಲಿ ಶತ್ರುವನ್ನು ಸಿಲುಹಿಸಿಕೊಂಡು ಸಮಯ ಬಂದಾಗ ಆತನನ್ನು ಸೋಲಿಸುವುದು ಪುರಾಣ ಕಾಲದಿಂದ ಇಂದಿನ ವರೆಗೂ ನಡೆದುಕೊಂಡು ಬಂದಿರುವ ಸಂಗತಿಯಾಗಿದೆ. ಇದಕ್ಕೆ ಅನೇಕ ದೇಶ ವಿದೇಶಗಳ ಹಿರಿಯ ಸೈನ್ಯಾಧಿಕಾರಿಗಳೂ ಈ ರೀತಿಯ ಹನಿಟ್ರ್ಯಾಪ್ ನಿಂದ ಹೊರತಾಗಿಲ್ಲ.
ಅದೇ ರೀತಿ ಮನೆಯಲ್ಲಿ ಮುದ್ದಾದ ಮಡದಿಯಿದ್ದರೂ ಕಂಡ ಕಂಡ ಹೆಣ್ಣು ಮಕ್ಕಳತ್ತ ಕಣ್ಣು ಹಾಕುವ ರಾಜಕಾರಣಿಗಳಿಗೇನೂ ಕರ್ನಾಟಕ ರಾಜಕೀಯದಲ್ಲಿ ಕಡಿಮೆ ಇರಲಿಲ್ಲ. ರಾಮಕೃಷ್ಣ ಹೆಗಡೆ ಮತ್ತು ಜೀವರಾಜ್ ಆಳ್ವಾ ಮತ್ತು ಇನ್ನೂ ಅನೇಕ ರಾಜಕಾರಣಿಗಳು ಇಂತಹದ್ದರಲ್ಲಿ ಪಳಗಿದ್ದು ಸದ್ದಿಲ್ಲದ್ದೇ ಮೆದ್ದು ಬಂದರೂ ಸುದ್ದಿಯಾಗುತ್ತಿರಲಿಲ್ಲ. ಇನ್ನು ಜೆ. ಹೆಚ್. ಪಟೇಲರಂತೂ ನಿರ್ಭಿಡೆಯಿಂದ Women & Wine are my weakness 3-W ಹೇಳಿಕೆಯಿಂದಲೇ ಕುಖ್ಯಾತಿ ಹೊಂದಿದರೆ, ಇದೇ ರೀತಿ ಕಳ್ಳಾಟವಾಡಿಯೇ ಮಗನ ವಯಸ್ಸಿನ ಹೆಣ್ಣು ಮಗಳಿಗೆ ಮಗುವೊಂದನ್ನು ಕರುಣಿಸಿದ ಕೀರ್ತಿಗೆ ಕುಮಾರ ಸ್ವಾಮಿಯದ್ದಾದರೆ, ಚಪಲ ಚನ್ನಿಗರಾಯರಾದ ರೇಣುಕಾಚಾರ್ಯ, ಹರತಾಳು ಹಾಲಪ್ಪ, ಮೈಸೂರಿನ ರಾಮದಾಸ್ ಹುಣಸೇ ಮರೆಕ್ಕೆ ಮುಪ್ಪಾದರೂ ಹುಳಿಗೆ ಮುಪ್ಪೇ ಎನ್ನುವಂತೆ ಸಿಕ್ಕಿ ಹಾಕಿಕೊಂಡ ಮೇಟಿಯ ಜೊತೆಗೆ ಈಗ ರಮೇಶ್ ಜಾರಕೀಹೊಳೆ ಯಂತಹ ಮತ್ತೊಬ್ಬರ ಜೋಡಣೆಯಾಗಿದೆ ಅಷ್ಟೇ.
ಹಿಂದೆ ಕೈ, ಕಚ್ಚೆ ಮತ್ತು ಬಾಯಿ ಚೆನ್ನಾಗಿದ್ದಲ್ಲಿ ಮಾತ್ರವೇ ಆತ ನೈಜ ನಾಯಕ ಎಂಬುದಾಗಿದ್ದರೆ, ಇಂದು ಅವರೆಲ್ಲದರ ತದ್ವಿರುದ್ಧವಾಗಿ, ಜೈಲಿಗೆ ಹೋಗಿಬಂದವನು, ಹತ್ತಾರು ಅನೈತಿಕ ಸಂಬಂಧವನ್ನು ಹೊಂದಿರುವವನು ಮತ್ತು ಸಮಯಕ್ಕೊಂದು ಹಸೀ ಸುಳ್ಳುಗಳನ್ನು ಹೇಳುತ್ತಾ ಬ್ಲಾಕ್ ಮೇಲ್ ಮಾಡುವವನೇ ನಿಜವಾದ ನಾಯಕ ಎಂಬಂತಾಗಿರುವುದು ವಿಪರ್ಯಾಸವೇ ಸರಿ. ಈ ಮಾತು ಕೇವಲ ರಾಜಕಾರಣಿಗಳಿಗೆ ಮಾತ್ರವೇ ಸೀಮಿತವಾಗಿರದೇ, ಇದು ಜನಸಾಮಾನ್ಯರಿಗೂ, ವಿವಿಧ ಸ್ಥರದ ಸಮಾಜಿಕ ಹೋರಾಟಗಾರರಿಗೂ ಮತ್ತು ಅರಿಶಡ್ವರ್ಗಗಳನ್ನು ಮೀರಿ ಮಠ ಮಾನ್ಯಗಳನ್ನು ಮುನ್ನಡೆಸುವ ಮಠಾಧಿಪತಿಗಳಿಗೂ ಅನ್ವಯಿಸುವಂತಿರುವುದು ನಿಜಕ್ಕೂ ದುಃಖಕರವಾದ ಸಂಗತಿ.
ಅದೇ ರೀತಿಯಲ್ಲಿ ಪ್ರತಿಯೊಬ್ಬರ ಖಾಸಗೀ ಬದುಕಿಗೂ ಅವರವರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ಅದರಲ್ಲಿ ಮತ್ತೊಬ್ಬರು ಅನಾವಶ್ಯಕವಾಗಿ ಮೂಗು ತೂರಿಸಿ, ನಾಲ್ಕು ಗೋಡೆಗಳ ಮಧ್ಯೆ ನಡೆದಂತಹ ವಿಷಯಗಳನ್ನು ಅವರಿಗೇ ತಿಳಿಯದಂತೆ ಮುದ್ರಿಸಿಕೊಂಡು, ಹಣ, ಅಧಿಕಾರ ಅಥವಾ ಮತ್ತಾವುದೇ ಸ್ವಾರ್ಥಕ್ಕಾಗಿ ಬ್ಲಾಕ್ ಮೇಲ್ ಮಾಡುವುದಾಗಲೀ ಅಥವಾ ಅಂತಹ ವಿಚಾರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಸರಿಯಲ್ಲ.
ಹೀಗೆ ಹೇಳುವ ಮುಖಾಂತರ ಅಂತಹ ಲಂಪಟರ ಪರವಾಗಿ ಸಮರ್ಥನೆ ಮಾಡಿಕೊಳ್ಳುತ್ತಿದ್ದೇನೆ ಎಂದಲ್ಲ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಅದರಲ್ಲೂ, ಜನ ಸಾಮಾನ್ಯರ ಮೇಲೆ ಪ್ರಭಾವ ಬೀರಬಲ್ಲ ಜನನಾಯಕರ, ಕ್ರೀಡಾಸ್ಪರ್ಧಿಗಳು, ಚಲನಚಿತ್ರ ನಟನಟಿಯರ ಜೀವನ ಅವರ ಕೋಟ್ಯಾಂತರ ಅನುಯಾಯಿಗಳಿಗೆ ಒಳ್ಳೆಯ ರೀತಿಯಲ್ಲಿ ಆದರ್ಶವಾಗಬೇಕೆ ಹೋರತು ಈ ರೀತಿಯಲ್ಲಿ ಬೀದಿ ಬೀದಿಗಳಲ್ಲಿ ಸಣ್ಣ ಪುಟ್ಟ ಮಕ್ಕಳೂ ಅಸಹ್ಯ ಪಡುವ ರೀತಿಯಲ್ಲಿ ಆಗಬಾರದು.
ಇತ್ತೀಚೆಗೆ ವಂಚನೆ ಮಾಡೋದಕ್ಕಾಗಿಯೇ ಬೆಲೆವಣ್ಣೆಗಳ ಮುಖಾಂತರ ಉದ್ಯಮಿಗಳು, ಸಮಾಜದ ಗಣ್ಯರು, ರಾಜಕಾರಣಿಗಳನ್ನು ಸೆಳೆದು, ಖಾಸಗಿಯಗಿ ಅದರ ವಿಡಿಯೋ ಮಾಡಿಕೊಂಡು ಹೆದರಿಸುವುದು, ಬೆದರಿಸುವುದು, ಹಣ್ಣಕ್ಕಾಗಿ ಪೀಡಿಸುವುದು ಮತ್ತು ಇದಕ್ಕೆ ಬಗ್ಗದಿದ್ದಲ್ಲಿ, ಅಂತಿಮವಾಗಿ ಮಾಧ್ಯಮಗಳ ಮುಖಾಂತರ ತೇಜೋವಧೆ ಮಾಡುವುದೇ ಒಂದು ದೊಡ್ಡ ದಂಧೆಯಾಗಿದೆ. ಇನ್ನು ಮಾಧ್ಯಮಗಳು ತಮ್ಮ ಟಿ.ಆರ್.ಪಿ ತೆವಲುಗಳಿಗಾಗಿ ದಿನದ 24ಗಂಟೆಯೂ ಇದೇ ವಿಷವನ್ನು ಬಿತ್ತರಿಸುತ್ತಾ ಸಮಾಜದ ಮೇಲೆ ಕೆಟ್ಟ ಪರಿಣಾಮವವನ್ನು ಬೀರುತ್ತಿರುವುದು ಕಳವಳಕಾರಿಯದ ವಿಷಯವಾಗಿದೆ
ಜಾರಕಿಹೊಳೆ ಪ್ರಕರಣದಲ್ಲಿ ಮೇಲ್ನೋಟದಲ್ಲಿ ಗಮನಿಸಿದರೆ, ಇದು ಒಂದು ಪಕ್ಕಾ ಹನಿಟ್ರ್ಯಾಪ್ ಪ್ರಕರಣ ಎಂದೇ ಭಾಸವಾಗುತ್ತದೆ. ಆರಂಭದಲ್ಲಿ ಆಕೆಯೇ ಸರ್ ಸರ್ ಎಂದು ಕೊಂಡು ಯಾವುದೋ ಅಣೆಕಟ್ಟೆಯ ಚಿತ್ರೀಕರಣಕ್ಕೆ ಅನುಮತಿ ಕೊಡಿಸಿ ಎಂದು ಕೇಳಿಕೊಂಡು ಬಂದಳೇ ಹೊರತು, ರಮೇಶ್ ಜಾರಕೀಹೊಳೆ ಆಕೆಯ ಹತ್ತಿರ ಹೋಗಿಲ್ಲ ಎನ್ನುವುದು ಗಮನಾರ್ಹವಾಗಿದೆ. ಆರಂಭದಲ್ಲಿದ್ದ ಬಹುವಚನದಲ್ಲಿ ಮಾತನಾಡಿಸುತ್ತಿದ್ದವಳು ನಂತರದ ದಿನಗಳಲ್ಲಿ ಏಕವಚನದಲ್ಲಿ ಮಂತ್ರಿಯಾದವನನ್ನು ಅಸಭ್ಯ ರೀತಿಯಲ್ಲಿ ಮಾತನಾಡಿಸುವಷ್ಟು ಮಟ್ಟಿಗೆ ಬಂದಿದ್ದಾಳೆ ಎಂದರೆ ಇದು ಕೇವಲ ಒಂದೆರದು ದಿನಗಳ ಸ್ನೇಹವಾಗಿರದೇ, ಇದು ವಾರಗಟ್ಟಲೇ ಅಥವಾ ತಿಂಗಳಾನುಗಟ್ಟಲೆಯ ಮಿಲನ ಮಹೋತ್ಸವ ನಡೆಸಿದಿರಬಹುದು ಎಂಬುದು ಸಾಮಾನ್ಯರೂ ಗುರುತಿಸಬಹುದಾಗಿದೆ. ಇದು ಇಬ್ಬರು ಪ್ರಾಯಸ್ಥರು ಪರಸ್ಪರ ಒಪ್ಪಿಗೆಯಿಂದಾಗಿಯೇ ದೈಹಿಕ ಸಂಪರ್ಕ ಬೆಳಸಿದ್ದಾರೆ ಎಂಬುದು ತಿಳಿಯುತ್ತದೆ. ಸುಪ್ರೀಂ ಕೋರ್ಟಿನ ಇತ್ತೀಚಿನ ಆದೇಶದ ಪ್ರಕಾರ, ಹೆಣ್ಣು ಗಂಡು ಒಪ್ಪಿ ನಡೆಸಿದ ದೈಹಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದಿದೆ.
ಈ ಪ್ರಕರಣ ಕುರಿತಂತೆ ಎಲ್ಲಾ ಮಾಧ್ಯಮಗಳು ಆಕೆಯನ್ನು ಸಂಸ್ತ್ರಸ್ತೆ ಎಂದೇ ಸಂಬೋಧಿಸುತ್ತಿದೆ. ಆದರೆ ಸೂಕ್ಷ್ಮವಾಗಿ ನೋಡಿದಲ್ಲಿ ಆಕೆಯನ್ನು ಸಂಸ್ತ್ರಸ್ತೆ ಎನ್ನುವ ಬದಲು ಸಂತೃಪ್ತೆ ಎನ್ನಬೇಕಾಗುತ್ತದೆ. ಖಂಡಿತವಾಗಿಯೂ ಜಾರಕೀಹೊಳೆಯವರೊಂದಿಗೆ ಪ್ರತೀ ಬಾರಿ ದೈಹಿಕ ಸಂಪರ್ಕ ನಡೆಸಿದಾಗಲೂ ಅದರ ಬದಲಾಗಿ ಆಕೆ ಒಂದಲ್ಲಾ ಒಂದು ರೀತಿ ಉಪಕೃತಳೇ ಆಗಿರುತ್ತಾಳೆ. ಯಾವ ಕಾಣದ ಕೈಗಳ ಒತ್ತಡವೋ ಇಲ್ಲವೇ ಆಕೆಯೇ ದುರಾಸೆಯಿಂದಾಗಿ ನಾಲ್ಕು ಗೋಡೆಗಳ ನಡುವೆ ನಡೆದ ಆ ಕಾಮಕೇಳಿಯನ್ನು ಸಾರ್ವಜನಿಕವಾಗಿ ಮೂರನೇ ವ್ಯಕ್ತಿಯ ಮೂಲಕ ಬಿಡುಗಡೆ ಮಾಡಿಸುವ ಮುಖಾಂತರ ರಮೇಶ್ ಜಾರಕಿಹೊಳೆಯ ಖಾಸಗಿ ತನಕ್ಕೆ ಪೆಟ್ಟು ನೀಡಿರುವ ಕಾರಣ ಈ ಪ್ರಕರಣದಲ್ಲಿ ನಿಜಕ್ಕೂ ರಮೇಶ್ ಜಾರಕೀಹೊಳೆಯೇ ಸಂತ್ರಸ್ತರಾಗುತ್ತಾರೆ. ನೈತಿಕವಾಗಿ ನೋಡಿದರೆ ರಮೇಶ್ ದೋಷಿ ಎನಿಸಬಹುದಾದರೂ, ಕಾನೂನತ್ಮಕವಾಗಿ ಈ ಪ್ರಕರಣದಲ್ಲಿ ದೋಷಿ ಎನ್ನಲು ಸಾಧ್ಯವಿಲ್ಲ.
ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತೆ ಆಕೆ ಮತ್ತು ರಮೇಶ್ ಜಾರಕಿಹೊಳೆಯ ಖಾಸಗೀ ವೀಡಿಯೋಗಳನ್ನು ಮೂರನೇ ವ್ಯಕ್ತಿ ಬಿಡುಗಡೆ ಮಾಡಿರುವುದು ಸಹಾ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಪತ್ರಿಕಾಗೋಷ್ಟಿಯಲ್ಲಿ ಆ ಮೂರನೆಯ ವ್ಯಕ್ತಿ ಮಾತನ್ನು ಮುಂದುವರೆಸಿ, ತನ್ನ ಬಳಿ ಮತ್ತಷ್ಟು ಗಣ್ಯರ ಇಂತಹ ಸಿಡಿಗಳು ಇರುವುದಾಗಿಯೂ ಅದನ್ನು ಸಮಯ ನೋಡಿ ಬಿಡುಗಡೆ ಮಾಡುತ್ತೇನೆ ಎಂದಿರುವುದು ಆತನ ಪ್ರಾಮಾಣಿಕತೆಯನ್ನು ಅನುಮಾನಾಸ್ಪದವಾಗಿ ನೋಡುವಂತೆ ಮಾಡಿದೆ. ಸಮಾಜದಲ್ಲಿ ತಪ್ಪು ನಡೆಯುತ್ತಿದೆ ಎಂದು ಗೊತ್ತಾದ ಕೂಡಲೇ ಅದನ್ನು ಸಂಬಂಧ ಪಟ್ಟವರಿಗೆ ತಿಳಿಸಿ ಅದರ ಬಗ್ಗೆ ತನಿಖೆ ನಡೆಸುವಂತೆ ನೋಡಿಕೊಳ್ಳದೇ ಹೋದರೆ ಅಪರಾಧವನ್ನು ಮುಚ್ಚಿಟ್ಟ ಕಾರಣಕ್ಕಾಗಿ ಆತನನ್ನೂ ತಪ್ಪಿತಸ್ಥ ಎಂದೇ ಭಾವಿಸಬೇಕಾಗುತ್ತದೆ.
ಪೋಲೀಸರು ರಮೇಶ್ ಜಾರಕೀಹೊಳೆ ಪ್ರರಣದ ಜೊತೆ ಆ ಮೂರನೇ ವ್ಯಕ್ತಿಯ ಮೇಲೂ ದೂರನ್ನು ಧಾಖಲಿಸಿ ಅತನ ವಿರುದ್ಧವೂ ನಿಶ್ಪಕ್ಷಪತವಾಗಿ ತನಿಖೆ ಮಾಡುವ ಮೂಲಕ ಸತ್ಯವನ್ನು ಈ ಕೂಡಲೇ ಬಯಲಿಗೆ ತರಬೇಕಾಗುತ್ತದೆ. ಅಪರಾಧ ನಿಗ್ರಹಿಸುವ ಭರದಲ್ಲಿ ಈಗಂತೂ ರಸ್ತೆ ರಸ್ತೆಗಳಲ್ಲಿ ಸಿಸಿ ಟಿವಿ ಅಳವಡಿಸುವ ಮೂಲಕೆ ಎಲ್ಲರ ಖಾಸಗೀ ತನಕ್ಕೆ ಧಕ್ಕೆಯಾಗಿರುವಾಗ ಇಂತಹ ಪ್ರಕರಣಗಳನ್ನು ಸುಖಾ ಸುಮ್ಮನೇ ತಿಂಗಳಾನುಗಟ್ಟಲೇ ಇಲ್ಲವೇ ವರ್ಷಾನುಗಟ್ಟಲೇ ಎಳೆದಾಡದೇ, ಶೀಘ್ರಾತೀಶೀಘ್ರವಾಗಿ ತನಿಖೆ ನಡೆಸಿ ನಿಜವಾದ ತಪ್ಪಿತಸ್ತರಿಗೆ ಶಿಕ್ಷೆ ಕೊಡಿಸಬೇಕಾಗಿದೆ. ಇಲ್ಲದೇ ಹೋದಲ್ಲಿ ಯಾರ್ಯಾರೋ ಎಲ್ಲೆಲ್ಲಿಯೋ, ಯಾವಾದೋ ಉದ್ದೇಶಗಳಿಗಾಗಿ ರಹಸ್ಯವಾಗಿ ವಿಡಿಯೋ ಮಾಡುತ್ತಾ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವುದರಲ್ಲಿ ಅನುಮಾನವೇ ಇಲ್ಲದಾಗಿದೆ. ಹಾಗಾಗಿ ಇದರ ವಿರುದ್ಧ ಯಾವುದೇ ಜಾತೀ ಧರ್ಮ ಮತ್ತು ಪಕ್ಷಗಳ ಹಂಗಿಲ್ಲದೇ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಾಗಿದೆ. ನಿಜಕ್ಕೂ ಆ ಮೂರನೇ ವ್ಯಕ್ತಿಯ ಬಳಿ ಸಿಡಿಗಳು ಇದ್ದಲ್ಲಿ ಅವೆಲ್ಲವನ್ನೂ ಈ ಕೂಡಲೇ ಹೊರತಂದಾಗಲೇ ಸಮಾಜ ಸ್ವಚ್ಛವಾಗುತ್ತದೆ ಇಲ್ಲದೇ ಹೋದಲ್ಲಿ, ನಾಳೆ ನಾವಾಗಲೀ ನಮ್ಮ ಮಕ್ಕಳಾಗಲೀ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರವಿಸರ್ಜನೆ ಮಾಡುವುದಕ್ಕೂ ಭಯ ಪಡಬೇಕಾಗುತ್ತದೆ.
ಇಂದು ಬಿಜೆಪಿ ಪಕ್ಷದ ರಾಜಕಾರಣಿ ಖೆಡ್ಡಾಕ್ಕೆ ಬಿದ್ದಿದ್ದಾರೆಂದು ಕಾಂಗ್ರೇಸ್ಸಿಗರು ರಾಜಕೀಯ ಲಾಭ ಪಡೆಯಲು ಹೋದರೆ, ಬಿಜೆಪಿಯವರು ರಮೇಶ್ ಮೂಲತಃ ಕ್ರಾಂಗ್ರೇಸ್ಸಿನವರೇ ಅಲ್ಲವೇ? ಎಂದು ಸಮಾಜಾಯಿಸಿ ಕೊಡುತ್ತಾ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಆಗಬಹುದಾದ ಮುಜುಗರವನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಜಿಡಿಎಸ್ ಪಕ್ಷದವರಿಗಂತೂ ಈ ಪ್ರಕರಣ ಕುರಿತು ಮಾತನಾಡುವುದು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆದಂತೆ ಎನ್ನುವುದರ ಅರಿವಾಗಿರುವ ಕಾರನ ಸದ್ಯದಲ್ಲಿ ತಟಸ್ಥರಾಗಿದ್ದಾರೆ. ಈ ಎಲ್ಲಾ ಪಕ್ಷಗಳ ಅವ್ಯವಸ್ಥೆಯನ್ನೇ ಬಂಡವಾಳ ಮಾಡಿಕೊಂಡಿರುವವ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹನಿ ಟ್ರ್ಯಾಪ್ ದಂಧೆಯನ್ನು ಎಗ್ಗಿಲ್ಲದೇ ನಡೆಸುತ್ತಿದ್ದಾರೆ. ಹಾಗಾಗಿ ಪಕ್ಷಾತೀತವಾಗಿ ಅಂತಹವರನ್ನು ಮಟ್ಟ ಹಾಕಲು ಕಠಿಣವಾದ ಕಾನೂನನನ್ನು ಈ ಕೂಡಲೇ ಜಾರಿಗೆ ತರಲೇ ಬೇಕಾಗಿದೆ. ಇಲ್ಲದೇ ಹೋದಲ್ಲಿ ನಿನ್ನೆ ಕಾಂಗ್ರೆಸ್ ನಾಯಕರು, ಇಂದು ಬಿಜೆಪಿ ನಾಯಕ ನಾಳೆ ಜೆಡಿಎಸ್ ನಾಯಕ ನಾಡಿದ್ದು ಮತ್ತೊಂದು ಪಕ್ಷದ ಕಾರ್ಯಕರ್ತರೋ ಇಲ್ಲವೇ ಉದ್ಯಮಿಗಳ ಇಂತಹ ಕೃತ್ಯದಲ್ಲಿ ಬಲಿ ಪಶುಗಳಾಗುವ ಸಂಭವೇ ಹೆಚ್ಚಾಗಿರುತ್ತದೆ.
ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಪ್ಪು ಮಾಡಿದವರು ಯಾರೇ ಆಗಲಿ, ಎಷ್ಟೇ ಗಣ್ಯರೇ ಆಗಿದ್ದರೂ ಶಿಕ್ಷೆಯಾಗಲೇ ಬೇಕು
ಏನಂತೀರೀ?
ನಿಮ್ಮವನೇ ಉಮಾಸುತ