ವರ್ಷದ ಕೂಳು, ಹರ್ಷದ ಕೂಳು

ರಾಮ್ ಮತ್ತು ಶ್ಯಾಮ್ ಇಬ್ಬರೂ ಬಾಲ್ಯ ಸ್ನೇಹಿತರು. ಒಟ್ಟೊಟ್ಟಿಗೆ ಆಟ ಪಾಠವಾಡಿ ಬೆಳೆದವರು. ಏನೇ ಕೆಲಸ ಮಾಡಿದರೂ ಅವರಿಬ್ಬರೂ ಒಟ್ಟಿಗೇ ಮಾಡುತ್ತಿದ್ದರು. ಹಾಗಾಗಿ ಅವರಿಬ್ಬರೂ ಒಂದೇ ಶಾಲೆ, ಒಂದೇ ಕಾಲೇಜಿನಲ್ಲಿಯೇ ವ್ಯಾಸಂಗ ಮಾಡುತ್ತಿದ್ದರು.  ರಾಮ್ ತಂದೆ ಹೆಸರಾಂತ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಶ್ಯಾಮ್ ತಂದೆ ಒಂದು ವೈಜ್ಣಾನಿಕ ತರಭೇತಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರಾದರೂ ಅವರ ಇಡೀ ಕುಟುಂಬ ಫೋಟೋಗ್ರಾಫಿ ವೃತ್ತಿಯಲ್ಲಿ ನಿರತರಾಗಿದ್ದರು. ನಗರದ ಹಲವಾರು ಬಡಾವಣೆಗಳಲ್ಲಿ ಅವರ ಕುಟುಂಬದ ಸದಸ್ಯರ ಹತ್ತಾರು ಸ್ಟುಡಿಯೋಗಳು ಇದ್ದವು. ಶ್ಯಾಮ್ ಮತ್ತು ಅವನ ತಮ್ಮ ಶ್ರೀನಿ ಸಮಯ ಸಿಕ್ಕಾಗಲೆಲ್ಲಾ ಆವರ ಸಹೋದರರ ಸ್ಟುಡಿಯೋಗಳಿಗೆ ಹೋಗಿ ಕುಟುಂಬದ ವೃತ್ತಿಯಾದ ಫೋಟೋಗ್ರಾಫಿ ಕಲೆಯನ್ನು ಕಲಿತುಕೊಳ್ಳುತ್ತಿದ್ದರು ಮತ್ತು  ಕೆಲವೊಮ್ಮೆ ಅವರ ಸಹೋದರರ ಜೊತೆ ಸಹಾಯಕರಾಗಿ ಸಭೆ ಸಮಾರಂಭಗಳಿಗೂ ಹೋಗಿ  ಫೋಟೋಗ್ರಫಿ ಕಲಿಯುತ್ತಿದ್ದದ್ದೂ ಉಂಟು.

ರಾಮ್ ಮತ್ತು ಶ್ಯಾಮ್ ಕಾಲೇಜ್ ವಿದ್ಯಾಭ್ಯಾಸ ಮುಗಿದ ನಂತರ ರಾಮ್ ಕೆಲವು ಕೋರ್ಸ್ಗಳನ್ನು ಮಾಡಲು ನಿರ್ಧರಿಸಿದ್ದರೆ, ಶ್ಯಾಮ್ ಮತ್ತು ಅವನ ತಮ್ಮ ಶ್ರೀನಿ ಇಬ್ಬರೂ ಸೇರಿ ಪ್ರತಿಷ್ಠಿತ ಬಡಾವಣೆವೊಂದರಲ್ಲಿ ತಮ್ಮದೇ ಆದ ಒಂದು ಸ್ವಂತ ಸ್ಟುಡಿಯೋವೊಂದನ್ನು ಆರಂಭಿಸಿ ತಕ್ಕ ಮಟ್ಟಿಗೆ ಸಂಪಾದನೆ ಆರಂಭಿಸಿದ್ದರು. ರಾಮ್ ತಂದೆಯವರಿಗೆ ತಮ್ಮಂತೆಯೇ ತಮ್ಮ ಮಗನೂ ತಮ್ಮ ಕಾರ್ಖಾನೆಯಲ್ಲಿಯೇ ಕೆಲಸ ಮಾಡುವ ಬಯಕೆ. ಅದಕ್ಕನುಗುಣವಾಗಿಯೇ ಅವರ ಕಾರ್ಖಾನೆಯಲ್ಲಿ ಒಂದು ವರ್ಷದ ತರಭೇತಿ ಆರಂಭವಾಗುತ್ತಿದ್ದ ಕಾರಣ ತಮ್ಮ ಮಗನನ್ನು ಅದಕ್ಕೆ ಸೇರಿಸಲು ಇಚ್ಚಿಸಿದ್ದರು. ತರಭೇತಿಯಲ್ಲಿ ಉತ್ತಮ ಅಂಕಗಳಿಸುವವರನ್ನು ಅಲ್ಲಿಯೇ ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಪದ್ದತಿ ಇದ್ದದ್ದರಿಂದ ತಮ್ಮ ಮಗನಿಗೂ ಕೆಲಸ ಸಿಗಬಹುದೆಂಬ ದೂರಾಲೋಚನೆಯಾಗಿತ್ತು.  ರಾಮ್ಗೆ ಅಲ್ಲಿ ಕೆಲಸ ಮಾಡಲು ಇಚ್ಚೆ ಇಲ್ಲದಿದ್ದರೂ ಅಪ್ಪನ ಮಾತಿಗೆ ಮರುಮಾತನಾಡದೆ ಅರ್ಜಿ ಹಾಕಿದ್ದ. ಎಂದಿನಂತೆ ರಾಮನ ಜೊತೆ ಸುಮ್ಮನೆ ತನ್ನದೂ ಇರಲಿ ಎಂದು ಶ್ಯಾಮ್ ಕೂಡ ಅರ್ಜಿ ಗುಜರಾಯಿಸಿದ್ದ.  ಅವರಿಬ್ಬರ ಗೆಳೆತನದ  ಅದೃಷ್ಟವೋ ಏನೋ ಇಬ್ಬರೂ ಅಲ್ಲಿಯೂ ಒಟ್ಟಿಗೆ ನೇಮಕವಾದರು.

ರಾಮ್ ಅಪ್ಪನ ಆಸೆಯಂತೆ ಕಾರ್ಖಾನೆಯಲ್ಲಿ  ಬೇಗ ಬೇಗನೆ ಕೆಲಸ ಕಲಿತು ಎಲ್ಲರ ಮನಗೆದ್ದು ಅಲ್ಲಿಯೇ ಕೆಲಸ ಗಿಟ್ಟಿಸಲು ಪ್ರಯತ್ನಿಸುತ್ತಿದ್ದರೆ, ಶ್ಯಾಮ್ ಕೆಲಸ ಕಡೆ ಅಷ್ಟೇನೂ ಗಮನ ಹರಿಸದೆ ಎಲ್ಲರೊಡನೆ ಕಲೆತು ತನ್ನ  ಸ್ಟುಡಿಯೋ ವ್ಯವಹಾರದ ಬಗ್ಗೆ ಪ್ರಚಾರ ಪಡಿಸುತ್ತಾ ಗಿರಾಕಿಗಳನ್ನು ಗಿಟ್ಟಿಸುವ ಪ್ರಯತ್ನ ಮಾಡುತ್ತಾ  ಒಂದೆರಡು ತಿಂಗಳುಗಳ ಒಳಗೆಯೇ ನಾಲ್ಕಾರು ಆರ್ಡರ್ಗಳನ್ನೂ ಗಿಟ್ಟಿಸಿಕೊಂಡಿದ್ದ. ಹಾಗೂ ಹೀಗೂ ಒಂದು ವರ್ಷದ ತರಭೇತಿಯನ್ನು ಇಬ್ಬರೂ ಮುಗಿಸಿ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿದ್ದರು.

ಅಷ್ಟರೊಳಗೆ ರಾಮ್ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಾಗ ಶ್ಯಾಮ್ ಕೂಡಾ ತಾನೂ ಏನೂ ಕಮ್ಮಿ ಇಲ್ಲದಂತೆ ಪೀಣ್ಯಾದ ಬಳಿ ಒಂದು ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿಯೇ ಬಿಟ್ಟ. ಅಲ್ಲಿಯೂ ಕೂಡಾ ಕೆಲಸಕ್ಕಿಂತ ತನ್ನ ವ್ಯವಹಾರವನ್ನೇ ಮುಂದುವರಿಸುತ್ತಾ ಹಾಗೂ ಹೀಗೂ ಕಾಲ ಕಳೆಯುತ್ತಿದ್ದ. ಒಮ್ಮೆ ದೂರದ ಸಂಬಂಧಿಯೊಬ್ಬರ ಮದುವೆಗೆಂದು ಮೂರ್ನಾಲ್ಕು ದಿನ ರಜೆ ಹಾಕಿ ಊರಿಗೆ ಹೋಗಿ ತಿರುಗಿ ಬಂದಾಗ ಅವನ ತಮ್ಮ ಮೂರ್ನಾಲ್ಕು  ಸಮಾರಂಭಗಳ  ಆರ್ಡರ್ ಬಂದಿರುವುದಾಗಿಯೂ ಅದರಲ್ಲಿ ಹಾಸನದ ಮದುವೆಯೂ ಒಂದಿತ್ತು. ಅಂದಿನ ದಿನದ  ಮಹೂರ್ತ ತುಂಬಾ ವಿಶೇಷವಾಗಿದ್ದರಿಂದ  ಅವರ ಬಂಧುಗಳೆಲ್ಲಾ ಅವರವರ ಅರ್ಡರ್ನಲ್ಲಿ  ತೊಡಗಿಕೊಂಡು ಇವರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಗೋಳಾಡತೊಡಗಿದ. ಅತ್ತ ದರಿ ಇತ್ತ ಪುಲಿ ಎನ್ನುವ ಪರಿಸ್ಥಿತಿ ಶ್ಯಾಮನದ್ದಾಗಿತ್ತು.

ಸರಿ ಒಂದು ಪ್ರಯತ್ನ ಮಾಡಿಯೇ ಬಿಡೋಣ ಎಂದು ತನ್ನ ಬಾಸ್ ಅವರಿಗೆ ಕರೆ ಮಾಡಿ ತುಂಬಾ ಮೆಲುಧನಿಯಲ್ಲಿ ನರಳುವನಂತೆ ನಟಿಸುತ್ತಾ, ಸಾರ್, ಊರಿನಿಂದ ಮದುವೆ ಮುಗಿಸಿಕೊಂಡು ಬಂದೆ. ಆದರೆ ಅಲ್ಲಿಯ ಹವಾಮಾನದ ಪ್ರಭಾವವೋ ಅಥವ ಬಿಸಿಲಿನ ಝಳದಿಂದಾಗಿಯೋ ಏನೋ, ನನ್ನ ಆರೋಗ್ಯ ಹದಗೆಟ್ಟಿದೆ. ಹಾಸಿಗೆಯಿಂದ ಮೇಲೇ ಏಳಲೂ ಆಗುತ್ತಿಲ್ಲ. ಹಾಗೂ ಹೀಗೂ ಮಾಡಿಕೊಂಡು ವೈದ್ಯರ ಬಳಿ ಹೋಗಿದ್ದೆ. ಅವರ ಔಷಧೋಪಚಾರ ಮಾಡಿ ಒಂದೆರಡು ದಿನ ವಿಶ್ರಾಂತಿ ಪಡೆದುಕೊಳ್ಳಲು ಹೇಳಿದ್ದಾರೆ. ದಯವಿಟ್ಟು ಎರಡು ಮೂರು ದಿನ ರಜೆಗಳನ್ನು ಮುಂದುವರಿಸಿ ನಾನು ಹುಷಾರಾದ ಕೂಡಲೇ ಕೆಲಸಕ್ಕೆ ಬಂದು ಬಿಡುತ್ತೇನೆ ಎಂದು ದೈನ್ಯದಿಂದ ಕೇಳಿಕೊಂಡ. ಮಾನವೀಯತೆ ದೃಷ್ಠಿಯಿಂದ ಅವನ ಮೇಲಧಿಕಾರಿಗಳ ಮನ ಕರಗಿ ಸರಿ. ಅತಿ ಶೀಘ್ರವಾಗಿ ಗುಣಮುಖರಾಗಿ ಕೆಲಸಕ್ಕೆ ಬನ್ನಿ, ಹೇಗೂ ನಾನು ಕೂಡ ಮೂರು ದಿನ ಕೆಲಸಕ್ಕೆ ಬರುವುದಿಲ್ಲ ನಮ್ಮ ಅಣ್ಣನ ಮಗನ ಮದುವೆಗೆ ಹೋಗುತ್ತಿದ್ದೇನೆ ಎಂದರು.  ಶ್ಯಾಮನಿಗೆ ರೋಗಿ ಬಯಸಿದ್ದೂ ಹಾಲೂ ಅನ್ನ . ವೈದ್ಯರು ಹೇಳಿದ್ದೂ ಹಾಲೂ ಅನ್ನ ಎಂಬಂತಾಗಿ ಸರಿ ಸಾರ್ ಎಲ್ಲೂ ಹೋಗದೆ ಮನೆಯಲ್ಲಿಯೇ ವಿಶ್ರಾಂತಿ ಪಡೆದುಕೊಂಡು ಅತೀ ಶೀಘ್ರದಲ್ಲಿ ಹುಶಾರಾಗಿ ಕೆಲಸಕ್ಕೆ ಬಂದು ಬಿಡುತ್ತೇನೆ ಎಂದು ಹೇಳಿದ.

ತಮ್ಮನ ಬಳಿ ಮದುವೆ ಮನೆಯ ವಿಳಾಸ ಪಡೆದುಕೊಂಡು ಹೆಗಲಿಗೆ ಕ್ಯಾಮೆರಾ ಚೀಲವನ್ನು ಏರಿಸಿಕೊಂಡು ವಾಹನದಲ್ಲಿ ಜೋಂಯ್ ಎಂದು ಹೊರಟೇ ಬಿಟ್ಟ. ಮೊದಲನೇ ದಿನದ ಚಪ್ಪರದ ಪೂಜಾ ಕಾರ್ಯಕ್ರಮಗಳನ್ನೆಲ್ಲಾ ಮುಗಿಸಿಕೊಂಡು ಅಲ್ಲಿಯೇ ಊಟ ಮುಗಿಸಿಕೊಂಡು ಮಾರನೇ ದಿನ ಹಾಸನದ ಮದುವೆ ಮಂಟಪಕ್ಕೆ ಹೋಗುವ ವ್ಯವಸ್ಥೆಗಳನ್ನೆಲ್ಲಾ ಕೂಲಂಕುಶವಾಗಿ ವಿಚಾರಿಸಿಕೊಂಡು ಮಾರನೇ ಅವರು ಹೇಳಿದ್ದಕ್ಕಿಂತ  ಅರ್ಧ ಗಂಟೆಗೆ ಮುಂಚೆಯೇ ಹಾಜರಾಗಿ ತನಗೆ ಅನುಕೂಲವಾಗಿದ್ದ ಆಸನದಲ್ಲಿ ಆಸೀನನಾಗಿದ್ದ. ಮನೆಯ ನೆಂಟರಿಷ್ಟರೆಲ್ಲಾ ಬಂದ ಕೂಡಲೇ ವಾಹನ ಹಾಸನದತ್ತ ಹೊರಟಿತ್ತು. ದಾರಿಯ ಮಧ್ಯೆಯಲ್ಲಿ ಮದುವೆಯ ಮನೆಯವರು ಆಡುತ್ತಿದ್ದ ಅಂತ್ಯಾಕ್ಷರಿಯಲ್ಲಿ ತಾನೂ ಪಾಲ್ಗೊಂಡು ತನಗೆ ಗೊತ್ತಿದ್ದ ಹಾಡುಗಳನ್ನು ಹಾಡುತ್ತಾ ಮನೆಯವರಲ್ಲಿ ಅವನು ಒಬ್ಬನಾಗಿಯೇ ಹೋದ. ಆಷ್ಟರಲ್ಲಾಗಲೇ ಹಾಸನ ಮದುವೆ ಮಂಟಪಕ್ಕೆ ಬಂದಾಗಿತ್ತು. ಎಲ್ಲರೂ ವಾಹನವಿಳಿದು ಬೆಳಗಿನ ಕಾರ್ಯಕ್ರದ ಸಿದ್ಧತೆಯಲ್ಲಿ ತೊಡಗಿದ್ದರು. ನೋಡಲು ನಿಜಕ್ಕೂ ಸುಂದರನಾಗಿದ್ದ ಶ್ಯಾಮ ಮದುವೆಗೆ ಬಂದಿದ್ದ ಚೆಂದದ ಹುಡುಗಿಯರ ತರ ತರಹದ ಫೋಟೋಗಳನ್ನು ತೆಗೆಯುತ್ತಾ ಎಲ್ಲರ ಮನ ಗೆದ್ದು ಬೆಳಗಿನ ಕಾರ್ಯಕ್ರಮ ಮುಗಿಸಿ ಅವರ ಜೊತೆಯಲ್ಲಿಯೇ ಊಟ ಮಾಡಿ ಸಂಜೆ ಮೈಸೂರಿನಿಂದ ಬರುವ ಮಧುಮಗನ ಆಗಮನವನ್ನೇ ಕಾಯುತ್ತಿದ್ದ. ಆಷ್ಟರಲ್ಲಿ ವರಪೂಜೆಗೆ ಸಿಧ್ದವಾಗಿದ್ದ ವಧುವಿನ ನಾನಾ ಭಂಗಿಗಳ ಫೋಟೋ ತೆಗೆಯುತ್ತಾ ಅವಳ ಜೊತೆಯಲ್ಲಿದ್ದ ಹುಡುಗಿಯರನ್ನು ಛೇಡಿಸುತ್ತಿದ್ದಾಗಲೇ ಹೊರಗಿನಿಂದ ಯಾರೋ ಗಂಡಿನ ಕಡೆಯ ಬಸ್ ಬಂದಾಯ್ತು. ಎಲ್ಲರೂ ಸಿಧ್ಧರಾಗಿ ಎಂದು ಕೂಗಿ ಹೇಳಿದ್ದನ್ನು ಕೇಳಿದ ಶ್ಯಾಮ, ಹೊರಗಡೆ ಬಂದ. ಅಷ್ಟರಲ್ಲಾಗಲೇ ನಾದಸ್ವರ ತಂಡದವರು ಪಿ, ಪ್ಪಿ , ಪ್ಪೀ ಎಂದು ಶಬ್ಧಮಾಡಿತ್ತಿದ್ದರೆ ಡೋಲಿನವರು ಡ. ಡ್ದ, ಡಬ್, ಡಕ್ ಎಂದು ಸರಿ ಮಾಡಿಕೊಂಡು ಶೃತಿಪೆಟ್ಟಿಗೆಯವನ ಸಂಗಡ ಕೃತಿಯೊಂದನ್ನು ನುಡಿಸಲಾರಂಭಿಸಿದರು.

ಬಸ್ ಬಂದು ನಿಂತ ಕೂಡಲೇ  ದಡ ದಡ ಅಂತ  ಎಲ್ಲರೂ ಇಳಿಯಲು ಅನುವಾದಾಗ ಕೆಲವು ಕ್ಷಣ ಅಲ್ಲಿ ಗೊಂದಲದ ವಾತಾವರಣ ಮೂಡಿದರೂ, ನಂತರ ಎಲ್ಲವೂ ತಿಳಿಯಾಗಿ  ಮೊದಲು ಕಳಸಗಿತ್ತಿ ಅವಳ ಹಿಂದೆ ಕೊಬ್ಬರಿ ಗಿಟುಕನ್ನು ಹಿಡಿದ ವರ ಅವನ ಪಕ್ಕದಲ್ಲಿ ವರನ ತಂದೆ ತಾಯಿಯರು ಅವರ ಹಿಂದೆ ಸಂಬಂಧಿಕರು ನಿಂತು ಕೊಂಡಿದ್ದರು. ಇದೇ ಸರಿಯಾದ ಸಮಯವೆಂದು ನಾಲ್ಕಾರು ಫೋಟೋಗಳನ್ನು ಕ್ಲಿಕ್ಕಿಸಿ,

ವರನನ್ನು ಹತ್ತಿರದಿಂದ ಸೆರೆ ಹಿಡಿಯಲು, ಏರು ಧನಿಯಲ್ಲಿ ಸಾರ್ ಸ್ವಲ್ಪ ಜಾಗ ಬಿಡಿ, ಆಮ್ಮಾ ಸ್ವಲ್ಪ ಈ ಕಡೆ ಬನ್ನಿ ಎನ್ನುತ್ತ ಶ್ಯಾಮ ವರನ ಸಮೀಪಕ್ಕೆ ಬಂದು ಕ್ಯಾಮೆರಾವನ್ನು ಝೂಮ್ ಮಾಡುತ್ತಿದ್ದಾಗ ಕ್ಯಾಮೆರಾದಲ್ಲಿ ಕಂಡ ವ್ಯಕ್ತಿಯೊಬ್ಬರನ್ನು ಕಂಡ ಕೂಡಲೇ ಶ್ಯಾಮ ಬೆವರಲಾರಂಭಿಸಿದ. ಕೈ ಕಾಲುಗಳು ನಡುಗಲಾರಂಭಿಸಿತು.  ನಿಂತ ಜಾಗದಲ್ಲಿಯೇ  ಕಣ್ಣು ಕತ್ತಲಾಗ ತೊಡಗಿದವು. ಗಂಟಲು ಗದ್ಗತವಾಗಿ ಬಾಯಿಯಿಂದ ಮಾತೇ ಹೊರಡಲಾರದಾಯಿತು.  ಪಕ್ಕದಲ್ಲಿ ನುಡಿಸುತ್ತಿದ್ದ ನಾದಸ್ವರವೂ ಅವನಿಗೆ ಕೇಳದಂತಾಗಿತ್ತು.  ಅವನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಆ ವ್ಯಕ್ತಿ ಶ್ಯಾಮನ ಬಳಿ ಬಂದು ಮೆಲ್ಲಗೆ ಅವನ ಹೆಗಲು ಮೇಲೆ ಕೈ ಹಾಕಿ ರೀ ಶ್ಯಾಮ್, ಹಾಸಿಗೆಯಿಂದ ಮೇಲೇ ಏಳಲೂ ಆಗದಷ್ಟು ಬಳಲಿದ್ದೀರಿ. ಹಾಗೆಂದು ಫೋಟೋ ಸರಿಯಾಗಿ ತೆಗೆಯದೇ ಇರಬೇಡಿ. ಇದು ನಮ್ಮ ಹುಡುಗನ ಜೀವಮಾನ ಇರುವ ವರೆವಿಗೂ ನೆನಪಿನಲ್ಲಿ ಇರಬೇಕಾದಂತಹ ಸಂಧರ್ಭ. ಹಾಗಾಗಿ ನೋಡಿಕೊಂಡು ಫೋಟೋ ತೆಗೆಯಿರಿ ಎಂದು ಮೆಲು ಧನಿಯಲ್ಲಿ ಶ್ಯಾಮನಿಗೆ ಮಾತ್ರವೇ ಕೇಳುವಂತೆ ವ್ಯಂಗವಾಗಿ ಹೇಳಿ ಹೋದರು. ಅವರ ಮಾತನ್ನು ಕೇಳುತ್ತಿದ್ದ ಶ್ಯಾಮನಿಗೆ ತನ್ನ ಪ್ಯಾಂಟ್ ಒದ್ದೆಯಾದ ಅನುಭವ.

ಸ್ವಲ್ಪ ದುಡ್ಡಿನ ಆಸೆಯಿಂದ ಕೆಲಸಕ್ಕೆ  ಅನಾರೋಗ್ಯ ಎಂದು  ಸುಳ್ಳು ಹೇಳಿ ಹಾಸನಕ್ಕೆ ಛಾಯಾಗ್ರಹಣಕ್ಕೆಂದು ಬಂದರೆ, ಆ ಮದುವೆ ಅವನ ಮೇಲಧಿಕಾರಿಯ ಅಣ್ಣನ ಮಗನದ್ದೇ ಆಗಿರ ಬೇಕೆ?  ಇಡೀ ಮದುವೆ ಮನೆಯಲ್ಲಿ ಪದೇ ಪದೇ ಅವನ ಮೇಲಧಿಕಾರಿಯ ಮುಖವನ್ನೇ ನೋಡುವ ಸಂಧರ್ಭ ಬರುತ್ತಿದ್ದಾಗ,  ಅಯ್ಯೋ ಇದೇನಪ್ಪಾ ಹೀಗಾಗಿ ಹೋಯ್ತು? ಯಾಕಾದರೂ ಇಲ್ಲಿಗೆ ಬರಲು ಒಪ್ಪಿಕೊಂಡನೋ? ಎಂದು ಹಾಗೂ ಹೀಗೂ ಮದುವೆ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಹಿಂದಿರುಗಿ ಒಂದು ವಾರವಾದರೂ ಸ್ಟುಡಿಯೋಗಾಗಲೀ,  ಕೆಲಸಕ್ಕಾಗಲೀ ಹೋಗಲು ಅವನಿಗೆ ಮನಸ್ಸೇ ಬರಲಿಲ್ಲ.  ಕೆಲಸಕ್ಕೆ ಹೋಗಿ ಅವರ ಮೇಲಧಿಕಾರಿಗಳ ಬಳಿ ಹೇಗೆ ಮುಖ ತೋರಿಸುವುದು ಎಂಬ ಪಾಪ ಪ್ರಜ್ಞೆ ಕಾಡಿ ಕೊನೆಗೂ ಒಂದು ನಿರ್ಧಾರ ತಳೆದು ಮಾರನೇ ದಿನ ಕೆಲಸಕ್ಕೆ  ಹೊತ್ತಿಗೆ ಮುಂಚೆಯೇ  ಹೋಗಿಯೇ ಬಿಟ್ಟ. ಕಛೇರಿಗೆ ಅವರ ಮೇಲಧಿಕಾರಿಗಳು ಬಂದೊಡನೆಯೇ ಅವರ ಕೊಠಡಿಗೆ ತೆರಳಿ  ಜೋಬಿನಲ್ಲಿಟ್ಟು ಕೊಂಡಿದ್ದ ರಾಜೀನಾಮೆ ಪತ್ರವನ್ನು ಅವರ ಕೈಗಿತ್ತು ಏನನ್ನೂ ಮಾತನಾಡದೆ ಅವರನ್ನು ಹಿಂತಿರುಗಿಯೂ ನೋಡದೆ ಸರ ಸರನೆ ಮನೆಯ ಕಡೆ ಹೊರಟೇ ಬಿಟ್ಟ.

ಆದರೆ ಮನೆ ಕಡೆಗೆ ಹೋಗಲು ಮನಸ್ಸಾಗದೆ, ತನ್ನ ಕಛೇರಿಯಿಂದ  ಸೀದಾ ರಾಮ್ ಕಛೇರಿಗೆ ತೆರಳಿ ಅವನೊಂದಿಗೆ ಬಿಸಿ ಬಿಸಿಯಾದ ಕಾಫಿ ಕುಡಿಯುತ್ತಾ ನಡೆದದ್ದನ್ನೆಲ್ಲಾ ಅವನ ಬಳಿ  ಹೇಳಿ ಮನಸ್ಸನ್ನು ಹಗುರ ಮಾಡಿಕೊಂಡ. ಅವನ ಮಾತನ್ನೆಲ್ಲಾ ತದೇಕ ಚಿತ್ತದಿಂದ ಕೇಳಿದ ರಾಮ್, ಶ್ಯಾಮ  ಇನ್ನು ಮುಂದೆ ನೀನು ಎಲ್ಲಿಯೂ ಕೆಲಸ ಮಾಡುವ ಅವಶ್ಯಕತೆಯಿಲ್ಲ. ನಿನ್ನ ಸ್ಟುಡಿಯೋ ಕಡೆ ಗಮನ ಹರಿಸು ಎಂದು ಬುದ್ದಿವಾದ ಹೇಳಿದ್ದನ್ನು ಮನಸಾರೆ ಕೇಳಿಕೊಂಡ ಶ್ಯಾಮ್ ಇಂದು ನಾಲ್ಕಾರು ದೊಡ್ಡ ದೊಡ್ಡ  ಆಧುನಿಕ ಸ್ಟುಡಿಯೋ ಮಾಲಿಕ. ಹತ್ತಾರು ಕೆಲಸದವರಿಗೆ ಕೆಲಸ ಕೊಟ್ಟಿರುವ ಯಶಸ್ವೀ ಮಾಲಿಕ ಮತ್ತು ವ್ಯವಹಾರಸ್ಥ.  ಅದಕ್ಕೇ ದೊಡ್ಡವರು ಹೇಳಿರುವುದು ಹರ್ಷದ ಕೂಳಿಗೆ ಮರುಳಾಗಿ ವರ್ಷದ ಕೂಳನ್ನು ಕಳೆದುಕೊಳ್ಳಬಾರದು ಎಂದು

ಏನಂತೀರಿ?

ನಿಮ್ಮವನೇ ಉಮಾಸುತ

One thought on “ವರ್ಷದ ಕೂಳು, ಹರ್ಷದ ಕೂಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s