ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು

ಅದು ಎಂಬತ್ತರ ದಶಕ ಆಗಿನ್ನೂ ದೂರದರ್ಶನ ಅಷ್ಟಾಗಿ ಪ್ರಖ್ಯಾತಿ ಹೊಂದಿರದಿದ್ದ ಕಾಲದಲ್ಲಿ ರೇಡಿಯೋ ಮನೋರಂಜನೆಯ ಪ್ರಮುಖ ಪಾತ್ರವಹಿಸುತ್ತಿತ್ತು. ಆಗೆಲ್ಲಾ ರೇಡಿಯೋಈ ಗಳಲ್ಲಿ ಚಲನಚಿತ್ರಗೀತೆಗಳು ಮತ್ತು ಭಾವಗೀತೆಗಳು ಪ್ರಸಾರವಾಗುವ ಮುಂಜೆ ಉದ್ಘೋಷಕಿಕರು ಆ ಹಾಡುಗಳ ಸಂಪೂರ್ಣ ವಿವರವನ್ನು ತಿಳಿಸುತ್ತಿದ್ದರು. ಗೀತೆ ಸಂಗೀತ, ಸಾಹಿತ್ಯ ಎಲ್ಲವನ್ನೂ ತಿಳಿಸುತ್ತಿದ್ದಾಗ ನಮಗೆ ಪದೇ ಪದೇ ಕೇಳಿ ಬರುತ್ತಿದ್ದ ಹೆಸರುಗಳೆಂದೆರೆ ಸಾಹಿತ್ಯ ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ ಸಂಗೀತ ಸಿ. ಅಶ್ವಥ್. ಇಂದಿನ ಬಹುತೇಕ ಮಧ್ಯವಯಸ್ಕರು ಭಟ್ಟರ ಸಾಹಿತ್ಯವನ್ನು ಕೇಳಿಕೊಂಡು ಬೆಳೆದವರು ಎಂದರೂ ತಪ್ಪಾಗಲಾರದು.

ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು 1936ಅಕ್ಟೋಬರ 29 ರಂದು ಶಿವಮೊಗ್ಗೆಯಲ್ಲಿ ಶ್ರೀ ಶಿವರಾಮ ಭಟ್ಟ ಮತ್ತು ಮೂಕಾಂಬಿಕೆ ಎಂಬ ದಂಪತಿಗಳ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ್ದರು. ಭಟ್ಟರ ಬಾಲ್ಯದಲ್ಲಿ ಆವರ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಅನೇಕ ಸಲಾ ಕಡಲೇಪುರಿ ತಿಂದೋ ಇಲ್ಲವೇ ಎಷ್ಟೋ ಬಾರಿ ನೀರನ್ನು ಕುಡಿದು ಹೊಟ್ಟೇ ತುಂಬಿಸಿಕೊಂಡಿರುವ ಉದಾಹರಣೆಗಳೂ ಉಂಟು. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವಂತೆ ಪ್ರತೀ ದಿನವೂ ರಾತ್ರಿ ಊಟವಾದ ನಂತರ ಅವರ ತಾಯಿಯವರು ತನ್ನ ಎಲ್ಲಾ ಮಕ್ಕಳನ್ನೂ ಒಂದು ಸೀಮೇ ಎಣ್ಣೆಯ ಬುಡ್ಡಿಯ ಸುತ್ತಲೂ ಕುಳ್ಳಸಿಕೊಂಡು ಅವರಿಗೆ ಪುರಾಣ ಪುಣ್ಯಕಥೆಗಳು ಮತ್ತು ಕಾವ್ಯವಾಚನಗಳನ್ನು ಹಾಡಿ ತೋರಿಸುತ್ತಿದ್ದದ್ದರ ಪರಿಣಾಮವಾಗಿಯೇ ಭಟ್ಟರಿಗೆ ಸಂಗೀತ ಮತ್ತು ಸಾಹಿತ್ಯ ಎಂಬುದು ರಕ್ತಗತವಾಗಿ ಅವರ ತಾಯಿಯವರಿಂದಲೇ ಬಂದಿತ್ತು ಎಂದು ಅವರೇ ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಹೇಳಿಕೊಂಡಿದ್ದರು. ದಾನವ ದೊರೆ ಹಿರಣ್ಯಕಷುವಿನ ಮಡದಿ ಖಯಾದು ತನ್ನ ಮಗನಾದ ಪ್ರಹ್ಲಾದನಿಗೆ ಹರಿ ಸ್ಮರಣೆಯನ್ನು ಹೇಳಿಕೊಟ್ಟಂತೆ, ಬಹುಮನಿ ಸುಲ್ತಾನರ ಸಾಮ್ರಾಟನಾಗಿದ್ದ ಶಾಹುಜೀ ಭೋಸ್ಲೆಯ ಮಗ ಶಿವಾಜಿಗೆ ಆತನ ತಾಯಿ ಜೀಜಾಬಾಯಿ ಹಿಂದೂ ಕ್ಷಾತ್ರತೇಜವನ್ನು ತುಂಬಿದಂತೆ ಭಟ್ಟರ ತಾಯಿಯವರಾದ ಶ್ರೀಮತಿ ಮೂಕಾಂಬಿಕೆಯವರೇ ಭಟ್ಟರ ಈ ಪರಿಯ ಸಾಹಿತ್ಯಾಸಕ್ತಿಗೆ ಮೂಲ ಪ್ರೇರಣೆೆ ಎನ್ನುಬಹುದಾಗಿದೆ.

ಮನೆಯಲ್ಲಿ ವಿಪರೀತ ಬಡತನವಿದ್ದದ್ದರಿಂದ ಚಿಕ್ಕವಯಸ್ಸಿನಲ್ಲಿ ಮನೆ ಮನೆಗೂ ವೃತ್ತಪತ್ರಿಕೆಗಳನ್ನು ಹಂಚಿ ಸಣ್ಣ ಪುಟ್ಟ ಹಣವನ್ನು ಸಂಪಾದಿಸಿಕೊಂಡೇ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ತಮ್ಮ ಹುಟ್ಟೂರಾದ ಶಿವಮೊಗ್ಗದಲ್ಲಿಯೇ ಇಂಟರ್ ಮೀಡಿಯೆಟ್ ಮುಗಿಸಿ ನಂತರ ಕನ್ನಡ ಎಂ.ಎ. ಆನರ್ಸ್ ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜ್ ನಲ್ಲಿ ಗಳಿಸಿದರು. ಬಡತನ ಬದುಕನ್ನು ಕಲಿಸುತ್ತದೆ ಎನ್ನುವಂತೆ, ತಮ್ಮ ಅಧ್ಯಯನದುದ್ದಕ್ಕೂ ಮೊದಲ ದರ್ಜೆಯಲ್ಲೇ ಉತ್ತೀರ್ಣರಾಗುತ್ತಿದ್ದರು ಭಟ್ಟರು.

ಬಾಲ್ಯದಿಂದಲೂ ಅಧ್ಭುತ ಸ್ಮರಣಶಕ್ತಿಯನ್ನು ಹೊಂದಿದ್ದಂತಹ, ಕಲ್ಲನ್ನೂ ಮಾತನಾಡಿಸ ಬಲ್ಲಂತಹ ಹರಟುವಿಕೆಯ ಸ್ವಭಾವವಾಗಿದ್ದರೂ, ಸರಳ ಮತ್ತು ಸಜ್ಜನಿಕೆಯ ಸಾಕಾರ ಮೂರ್ತಿಯಂತಗಿದ್ದ ಭಟ್ಟರು ತಮ್ಮ ಎಂ.ಎ ಮುಗಿದ ನಂತರ ತೀನಂಶ್ರೀ ಅವರ ಮಾರ್ಗದರ್ಶನದಲ್ಲಿ ಭಾಷಾಶಾಸ್ತ್ರದಲ್ಲಿ ಎರಡು ವರ್ಷಗಳ ಕಾಲ ಸಂಶೋಧನ ವೃತ್ತಿಯನ್ನು ಕೈಗೊಂಡು, 1965 ರಲ್ಲಿ ಬೆಂಗಳೂರು ವಿಶ್ವವಿಧ್ಯಾಲಯವನ್ನು ಸೇರಿ, ಅಧ್ಯಾಪಕ, ರೀಡರ್, ಪ್ರಾಧ್ಯಾಪಕ, ನಿರ್ದೇಶಕರಾಗಿ 1990 ರಲ್ಲಿ ಆರ್ಟ ಫ್ಯಾಕಲ್ಟಿ ಡೀನ್ ಆಗಿ ನಿವೃತ್ತರಾದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಧುನಿಕ ಕನ್ನಡ ಕಾವ್ಯ ಕುರಿತಾದ ಪ್ರಬಂಧವನ್ನು ಸಾದರಪಡಿಸಿ ಪಿ.ಎಚ್.ಡಿ ಪದವಿಯನ್ನು ಪಡೆಯುವ ಮೂಲಕ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಎನಿಸಿಕೊಂಡರು.

ತೀನಂಶ್ರೀ, ಸಿಡಿಎನ್, ಡಿಎಲ್ಎನ್ ಮತ್ತು ಶ್ರೀಕಂಠ ಶಾಸ್ತ್ರಿಗಳಂತಹ ಶ್ರೇಷ್ಟ ಮಟ್ಟದ ಆಚಾರ್ಯರ ಚಿಂತನ ಧಾರೆಯಿಂದ ಪ್ರಭಾವಿತರಾಗಿ ಹಳೆಗನ್ನಡ ಕಾವ್ಯಗಳನ್ನು ಮತ್ತು ಹೊಸಗನ್ನಡದ ನವೀನ ಸಾಹಿತ್ಯದ ಜೊತೆ ಸಮ್ಮಿಳನಗೊಳಿಸಿದ್ದರು. ಸಾಮಾನ್ಯವಾಗಿ ಹೆಚ್ಚಿನವರು, ಕನ್ನಡ – ಸಂಸ್ಕೃತ ಇಲ್ಲವೇ, ಕನ್ನಡ-ಇಂಗ್ಲೀಷ್, ಇಲ್ಲವೇ, ಸಂಸ್ಕೃತ – ಇಂಗ್ಲೀಷ್ ಭಾಷಾ ಪಾಂಡಿತ್ಯವನ್ನು ಪಡೆದಿದ್ದರೆ, ಭಟ್ಟರು ಅಪರೂಪವಾಗಿ ಕನ್ನಡ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಅದ್ಭುತವಾದ ಪಾಂಡಿತ್ಯವನ್ನು ಪಡೆದಿದ್ದಲ್ಲದೇ, ಈ ಭಾಷೆಗಳ ಅನೇಕ ಸಾಹಿತ್ಯಗಳನ್ನು ತರ್ಜುಮೆ ಮಾಡುವ ಮುಖಾಂತರ ಜನಮನ್ನಣೆ ಗಳಿಸಿದ್ದರು.

ಕನ್ನಡ ಸಾಹಿತ್ಯಲೋಕದಲ್ಲಿ ಮಾತ್ರವೇ ಕಾಣಬಹುದಾದ ಭಾವಗೀತೆಗಳನ್ನು ಅತ್ಯಂತ ಸರಳವಾಗಿ ಜನಸಾಮಾನ್ಯರ ಹೃದಯಗಳಿಗೆ ತಟ್ಟುವಂತೆ ಬರೆಯುವುದರಲ್ಲಿ ಎತ್ತಿದ್ದ ಕೈ ಹೊಂದಿದ್ದ ಭಟ್ಟರು ರಚಿಸಿದ ಅಪಾರ ಗೀತಕಾವ್ಯಗಳನ್ನು ಶಿವಮೊಗ್ಗ ಸುಬ್ಬಣ್ಣ, ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ, ಎಚ್.ಕೆ.ನಾರಾಯಣ ಮೊದಲಾದ ಸುಗಮ ಸಂಗೀತ ಗಾಯಕರು ಚಂದನೆಯ ರಾಗ ಸಂಯೋಜನೆ ಮಾಡಿ ಸುಶ್ರಾವ್ಯವಾಗಿ ಹಾಡುವ ಮೂಲಕ ಎಲ್ಲೆಡೆಯಲ್ಲಿಯೂ ಖ್ಯಾತಿ ಪಡೆಯುವಂತೆ ಮಾಡಿದರು. ನೀ ಸಿಗದೆ ಬಾಳೊಂದು ಬಾಳೇ ಕೃಷ್ಣಾ…, ಎಲ್ಲಿ ಜಾರಿತೋ ಮನವು. , ಎಲ್ಲ ನಿನ್ನ ಲೀಲೆ ತಾಯೆ, ನನ್ನ ಇನಿಯನ ನೆಲೆಯ. ಮೊದಲಾದವುಗಳು ಅತ್ಯಂತ ಜನಪ್ರಿಯ ಗೀತೆಗಳಾಗಿವೆ.

ಕನ್ನಡದ ತತ್ವಪದಗಳ ಪ್ರಾಕಾರದಲ್ಲಿ ಶಿಶುನಾಳ ಶರೀಫರ ಗೀತೆಗಳು ಅತ್ಯಂತ ಮಹತ್ತರವಾದ ಪಾತ್ರವನ್ನು ವಹಿಸಿವೆ. ಅಂತಹ ಅಧ್ಭುತ ಎಲೆಮರೆಕಾಯಿಯಾಗಿದ್ದಂತಹ ಶಿಶುನಾಳ ಶರೀಫ್ ಸಾಹೇಬರ ತತ್ವಪದಗಳನ್ನು ಊರಿಂದ ಊರಿಗೆ ಸುತ್ತಾಡಿ ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದ ತತ್ವಪದಗಳನ್ನು ಒಂದೆಡೆ ಕಲೆಹಾಕಿ ಅದಕ್ಕೆ ಸಮರ್ಥ ಟೀಕೆ-ಟಿಪ್ಪಣಿ ಪ್ರಸ್ತಾವನೆಗಳೊಂದಿಗೆ ಪ್ರಕಟಿಸುವ ಮೂಲಕ ಮರೆತು ಹೋಗಿದ್ದ ಶರೀಫಜ್ಜರಿಗೆ ಜನಪ್ರಿಯತೆಯನ್ನು ತಂದುಕೊಟ್ಟು ಷರೀಫ್ ಭಟ್ರು ಎಂದೇ ಸಾಹಿತ್ಯ ಲೋಕದಲ್ಲಿ ಪ್ರಖ್ಯಾತರಾಗಿದ್ದರು. ಭಟ್ಟರ ಮತ್ತೊಬ್ಬ ಒಡನಾಡಿ ಮತ್ತು ಅದ್ಭುತ ಕಲಾವಿರದಾಗಿದ್ದ ಸಿ. ಅಶ್ವಥ್ ಅವರು ಆ ಶರೀಫಜ್ಜರ ತತ್ವಪದಗಳಿಗೆ ಶಾರೀರವಾಗಿ ಶರೀಫರ ತತ್ವಪದಗಳನ್ನು ಕರ್ನಾಟಕಾದ್ಯಂತ ಕ್ಯಾಸೆಟ್ ಮತ್ತು ಸಿಡಿಗಳ ಮುಖಾಂತರ ಜನಪ್ರಿಯ ಗೊಳಿಸಿದ ಜೋಡಿ ಎಂಬ ಮನ್ನಣೆ ಗಳಿಸಿತು ಎಂದರೂ ತಪ್ಪಾಗಲಾರದು.

ಕನ್ನಡದ ಶಿಶುಸಾಹಿತ್ಯ ಪ್ರಕಾರದಲ್ಲಿ ಜಿ.ಪಿ.ರಾಜರತ್ನಂ ಅವರದ್ದು ಒಂದು ಕೈ ಆದರೆ ಅದನ್ನು ಮತ್ತಷ್ಟೂ ಸರಳೀಕರಿಸಿ ಮಧ್ಯೆ ಮಧ್ಯೆ ಇಂಗ್ಲೀಷ್ ಪದಗಳನ್ನೂ ಸೇರಿಸುವ ಮುಖಾಂತರ ಇಂದಿನ ಮಕ್ಕಳೂ ಸುಲಭವಾಗಿ ಆಕರ್ಷಿತರಾಗಿ ಆ ಹಾಡುಗಳನ್ನು ಕಲಿತುಕೊಳ್ಳಬಹುದಾದಂತಹ ಶಿಶುಸಾಹಿತ್ಯದಲ್ಲಿಯೂ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದರು. ಬಾಳಾ ಒಳ್ಳೇವ್ರು ನಮ್ಮಿಸ್ಸು.. ಗೇರ್ ಗೇರ್ ಮಂಗಣ್ಣನಂತಹ ಜನಪ್ರಿಯ ಹಾಡುಗಳು ಇಂದಿಗೂ ಸಹಾ ಶಿಶುವಿಹಾರಗಳಲ್ಲಿ ಪುಟ್ಟ ಪುಟ್ಟ ಮಕ್ಕಳ ಬಾಯಲ್ಲಿ ಕೇಳುವುದಕ್ಕೆ ಅಪ್ಯಾಯಮಾನವಾಗುತ್ತದೆ.

ಕನ್ನಡ ಸಾಹಿತಿಗಳು ಕೇವಲ ಪುಸ್ತಗಳನ್ನು ಬರೆದು ಪ್ರಕಟಿಸಿದರೆ ಮಾತ್ರಾ ಸಾಲದು ಅದನ್ನು ಜನರಿಗೆ ಸರಿಯಾಗಿ ಹೇಗೆ ತಲುಪಿಸಬೇಕು ಎಂಬುದನ್ನು ಭಟ್ಟರ ಬಳಿ ಕಲಿತುಕೊಳ್ಳಬೇಕು. ಪುಸ್ತಕ ಬಿಡುಗಡೆ ಸಮಾರಂಭಕ್ಕಾಗಲೀ, ಅಥವಾ ಮತ್ತಾವುದೇ ಭಾಷಣ/ಪ್ರವಚನಗಳಿಗೆ ಭಟ್ಟರನ್ನು ಆಹ್ವಾನಿಸಿದಲ್ಲಿ ಅವರು ಆಯೋಜಕರಿಗೆ ಮೊದಲು ಹೇಳುತ್ತಿದ್ದದ್ದೇ, ಅವರ ಸಂಸ್ಥೆಯ ಮುಖಾಂತರ ಅವರ ಪುಸ್ತಕಗಳನ್ನು ಕೊಂಡು ಕೊಳ್ಳಬೇಕು ಮತ್ತು ಆ ಸಭೆಯಲ್ಲಿ ಅವರ ಪುಸ್ತಕಗಳ ಮಾರಾಟದ ವ್ಯವಸ್ಥೆ ಮಾಡಲೇ ಬೇಕು ಷರತ್ತನ್ನು ಒಡ್ಡುವ ಮೂಲಕ ಕನ್ನಡ ಪುಸ್ತಕಗಳನ್ನು ಕನ್ನಡಿಗರು ಕೊಂಡು ಓದುವ ಸಂಸ್ಕೃತಿಯನ್ನು ಬೆಳೆಸಿದರು ಎನ್ನಬಹುದು.

ಸಭೆಯ ವೇದಿಕೆಯ ಮೇಲೆ ಕುಳಿತಿದ್ದವರನ್ನು ಅವರು ಗುರುಗಳ ಗುರು ಮಹಾನ್ ಗುರುಗಳಾದ ಬೃಹಸ್ಪತಿಗಳು ಎಂದೇ ಸಂಬೋಧಿಸಿದರೆ, ವೇದಿಕೆಯ ಮುಂದೆ ಕುಳಿತು ಈ ಬೃಹಸ್ಪತಿಗಳ ಮಾತುಗಳನ್ನು ಕೇಳುತ್ತಿದ್ದ ಸಭಿಕರನ್ನು ತಾಯಿ ಸರಸ್ವತಿಗೆ ಹೋಲಿಸುತ್ತಿದ್ದರು. ಅಂದರೆ ವೇದಿಕೆಯ ಮೇಲೆ ಕುಳಿತವರೇ ಬುದ್ದಿವಂತರೇನಲ್ಲ. ಅದೃಷ್ಟವಶಾತ್ ಅಂತಹವರಿಗೆ ಮನ್ನಣೆ ಸಿಕ್ಕಿ ಅವರು ವೇದಿಕೆ ಮೇಲೆ ಕುಳಿತುಕೊಳ್ಳುವ ಅವಕಾಶ ಸಿಕ್ಕಿರುತ್ತದಾದರೂ, ಅವರಿಗಿಂತಲೂ ಬುದ್ಧಿವಂತರೆನಿಸಿಕೊಂಡ ಅನೇಕ ಅವಕಾಶವಂಚಿತರು ಸಭಿಕರಾಗಿ ಅವರ ಮುಂದೆಯೇ ಕುಳಿತಿರುತ್ತಾರೆ. ಹಾಗಾಗಿ ಸಭಿಕರನ್ನು ಕಡೆಗಣಿಸದೇ ಎಚ್ಚರಿಕೆಯಿಂದಲೇ ಅವರ ಮುಂದೆ ಮಾತನಾಡಬೇಕು ಎಂದು ಹೇಳುವ ಮೂಲಕ ರಾಜಕುಮಾರ್ ಅವರು ಸದಾಕಾಲವೂ ಹೇಳುತ್ತಿದ್ದ ಅಭಿಮಾನಿ ದೇವರು ಎಂಬುದನ್ನು ಸಾಹಿತ್ಯ ಲೋಕದಲ್ಲಿಯೂ ಈ ರೀತಿಯಾಗಿ ಸಭಿಕರಿಗೆ ಗೌರವ ಸಲ್ಲಿಸುತ್ತಿದ್ದದ್ದು ಶ್ಲಾಘನೀಯವೇ ಸರಿ.

ಸಾರಸ್ವತ ಲೋಕದಲ್ಲಿ ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದ ಲಕ್ಷ್ಮೀನಾರಾಯಣ ಭಟ್ಟರಿಗೆ

  • 1974 ರಲ್ಲಿ ಹೊರಳು ದಾರಿಯಲ್ಲಿ ಕಾವ್ಯ ಎನ್ನುವ ವಿಮರ್ಶಾಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • 2012 ರಲ್ಲಿ ಅನಕೃ ಪ್ರಶಸ್ತಿಯೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಗೌರವಗಳು ದೊರಕಿದ್ದರೂ
  • 3 ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ
  • ರಾಜ್ಯೋತ್ಸವ ಪ್ರಶಸ್ತಿ,
  • ಶಿವರಾಮ ಕಾರಂತ ಪ್ರಶಸ್ತಿ,
  • ವರ್ಧಮಾನ್ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ದೊರಕಿದ್ದರೂ

ಅವರ ಸಾಹಿತ್ಯ ಕೃಷಿಗೆ ನಿಜವಾಗಿಯೂ ಸಲ್ಲಬೇಕಾಗಿದ್ದಂತಹ ಗೌರವಾದರಗಳು ಅವರಿಗೆ ಸಿಗದೇ ಹೋದದ್ದು ಅನೇಕ ಸಾಹಿತ್ಯಾಸಕ್ತರಲ್ಲಿ ಬೇಸರವನ್ನುಂಟು ಮಾಡಿದ್ದಂತೂ ಸತ್ಯ.

ಕನ್ನಡ ಸಾಹಿತ್ಯದ ಅಗ್ರಗಣ್ಯ ಕವಿ, ಜನಪ್ರಿಯ ಪ್ರಾಧ್ಯಾಪಕ, ಏಟ್ಸ್, ಎಲಿಯಟ್, ಷೇಕ್ಸ್ ಪಿಯರ್ ಮುಂತಾದವರ ಆಂಗ್ಲ ಕಾವ್ಯಗಳನ್ನು ಅನನ್ಯವಾಗಿ ಕನ್ನಡಕ್ಕೆ ಅನುವಾದಿಸಿದ್ದ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ದೀರ್ಘಕಾಲೀನ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದವರು 6.3.2021 ಶನಿವಾರದ ಮುಂಜಾನೆ ನಾಲ್ಕು ಮುಕ್ಕಾಲು ಗಂಟೆಯ ಹೊತ್ತಿಗೆ ನಮ್ಮನ್ನೆಲ್ಲಾ ಅಗಲಿದ್ದಾರೆ. ಭಟ್ಟರ ಅಗಲಿಕೆಯಿಂದಾಗಿ ಕನ್ನಡದ ಸಾರಸ್ವತ ಲೋಕದಲ್ಲಿನ ವಿದ್ವನ್ಮಣಿಯೊಂದು ಉರಿದುಹೋಗಿದೆ ಎಂದರೂ ಅತಿಶಯೋಕ್ತಿಯಾಗಲಾರದು.

ಅವರೇ ಬರೆದಿದ್ದಂತಹ ಜನಪ್ರಿಯ ಗೀತೆಯಾದ ಎಲ್ಲಿ ಜಾರಿತೋ ಮನವು, ಎಲ್ಲೆ ಮೀರಿತೋ, ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ ಎನ್ನುವಂತೆ ಕನ್ನಡ ಸಾರಸ್ವತ ಲೋಕದಲ್ಲಿ ನಿಲ್ಲದೇ ಮಿಂಚಿ ಮರೆಯಾದ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಎಲ್ಲರ ಪ್ರೀತಿಯ ಎನ್.ಎಸ್.ಎಲ್ ಅವರ ಆತ್ಮಕ್ಕೆ ಆ ಭಗವಂತ ಸದ್ಗತಿಯನ್ನು ಕೊಡಲಿ. ಅವರ ದುಃಖತಪ್ತ ಕುಟುಂಬಸ್ಥರಿಗೆ ಮತ್ತು ಅಪಾರ ಸಂಖ್ಯೆಯ ಅವರ ಅಭಿಮಾನಿಗಳಿಗೆ ಅವರ ಅಗಲಿಗೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ ಬರೆಯಲು ಸೂಕ್ತವಾದ ಸಮಯೋಚಿತ ಮಾಹಿತಿಗಳನ್ನು ಒದಗಿಸಿದ ಶ್ರೀ ವಿಜಯ ಭರ್ತೂರ್ ಮತ್ತು ಶ್ರೀ ದ್ವಾರಕಾನಾಥ್ ಅವರಿಗೆ ಅನಂತಾನಂತ ಧನ್ಯವಾದಗಳು

One thought on “ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು

  1. ದಿವಂಗತ ಲಕ್ಷ್ಮೀನಾರಾಯಣ ಭಟ್ಟರ ಬಗೆಗಿನ ಲೇಖನ ಚೆನ್ನಾಗಿದೆ.
    ಇನ್ನೊಂದು ಪ್ರಸಂಗ ಹೇಳಬಹುದೋ ಇಲ್ಲವೋ ಗೊತ್ತಿಲ್ಲ. ಒಂದು ಪೇಚಿನ ಪ್ರಸಂಗ. ಒಮ್ಮೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವೊಂದರಲ್ಲಿ ಸಮಾರಂಭ ಪ್ರಾರಂಭವಾಗುವ ಮೊದಲು ಸಣ್ಣಸಣ್ಣ ಮಕ್ಕಳಿಂದ ನೃತ್ಯ ಮತ್ತು ಹಾಡುಗಳ ಕಾರ್ಯಕ್ರಮ ನಡೆಯಿತು. ಲಕ್ಷ್ಮೀನಾರಾಯಣ ಭಟ್ಟರು ಎದ್ದು ಮಾತನಾಡಿ “ಅಯ್ಯೋ ಮುಂಡೇವು ಎಷ್ಟು ಚೆನ್ನಾಗಿ ಹಾಡಿದವು, ಎಷ್ಟು ಚೆನ್ನಾಗಿ ನೃತ್ಯ ಮಾಡಿದರು” ಅಂತ ಹೇಳಿದರು. ಅಲ್ಲಿದ್ದ ಮಕ್ಕಳ ಪೋಷಕರು ಲೊಚ್ ಲೊಚ್ ಎಂದಿದ್ದು ಕೇಳಿಸಿತು. ಕಾರಣ ಭಟ್ಟರು ಬಳಸಿದ “ಮುಂಡೇವು” ಎಂಬ ಶಬ್ದ. ತಕ್ಷಣವೇ ಎಚ್ಚೆತ್ತುಕೊಂಡ ಭಟ್ಟರು “ಪ್ರೀತಿಯಿಂದ, ಪ್ರೀತಿಯಿಂದ” ಎಂದು ಎರಡು ಬಾರಿ ಹೇಳಿದರು. ಮುಂಡೇವು ಪದದ ಅರ್ಥ ಕೆಟ್ಟದ್ದಾದ್ದರಿಂದ ಮಕ್ಕಳ ತಾಯಂದಿರಿಗೆ ಸ್ವಲ್ಪ ಬೇಜಾರಾಯಿತು. ಆದರೆ ಭಟ್ಟರಿಗೆ ಇರಿಸುಮುರಿಸಾಯಿತು. ಆದರೆ ಅವರು ಹೇಳಿದ್ದರಲ್ಲಿ ಪ್ರೀತಿ ಇತ್ತೇ ವಿನಾ ಬೇರೇನೂ ಇರಲಿಲ್ಲ ಎಂಬುದನ್ನು ಗಮನಿಸಿ ಸುಮ್ಮನಾದರು. ನಾವೂ ಮಕ್ಕಳಿಗೆ ” ಏ ಕಳ್ಳ, ಕಳ್ ನನ್ಮಗನೆ” ಅಂತೆಲ್ಲ ಬಳಸುತ್ತೇವೆ. ಅದರಲ್ಲಿನ ಅರ್ಥ ಗಮನಿಸದೆ ಪ್ರೀತಿ ಮಾತ್ರ ಮನಸ್ಸಿನಲ್ಲಿರುತ್ತಲ್ಲವೆ ?

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s