ಆಪರೇಷನ್ ಬ್ಲೂ ಸ್ಟಾರ್

ಅದು ಎಂಭತ್ತರ ದಶಕ. ಈಗಿನಂತೆ ದೃಶ್ಯ ಮಾಧ್ಯಮಗಳ ಹಾವಳಿಯೇ ಇರಲಿಲ್ಲ. ಸುದ್ಧಿಯ ಮೂಲವೆಂದರೆ, ಸರ್ಕಾರಿ ಸುಪರ್ಧಿಯಲ್ಲಿದ್ದ ರೇಡಿಯೋ ಇಲ್ಲವೇ ವೃತ್ತ ಪತ್ರಿಕೆಗಳು ಮಾತ್ರ. ರೇಡಿಯೋದಲ್ಲಿನ ವಾರ್ತೆಗಳಲ್ಲಿ ಮತ್ತು ಪ್ರತಿ ದಿನ ಪತ್ರಿಕೆಗಳಲ್ಲಿ ಕಂಡು ಬರುತ್ತಿದ್ದ   ಒಂದೇ ಒಂದು ಅಂಶವೆಂದರೆ, ಪಂಜಾಬಿನಲ್ಲಿ ಇವತ್ತು ಉಗ್ರಗಾಮಿಗಳ ಧಾಳಿಯಿಂದಾಗಿ ಇಷ್ಟು ಜನ ಮೃತಪಟ್ಟರು ಅಷ್ಟು ಜನ ಮೃತಪಟ್ಟರು ಎಂಬುದೇ ಆಗಿತ್ತು. ಆರಂಭದಲ್ಲಿ  ಎಲ್ಲರೂ ಇದರ ಬಗ್ಗೆ ಆತಂಕ ಪಟ್ಟು ಕೊಳ್ಳುತ್ತಿದ್ದರಾದರೂ ನಂತರದ ದಿನಗಳಲ್ಲಿ ದಿನ ಸಾಯುವವರಿಗೆ ಅಳುವವರು ಯಾರು? ಎನ್ನುವಂತಾಗಿತ್ತು.  ಇನ್ನು ಪಂಜಾಬಿನ ಸ್ಥಳೀಯರೂ ಗುಂಡಿನ ಧಾಳಿ ಅಥವಾ ಬಾಂಬ್ ಸ್ಪೋಟವನ್ನು ಕೇಳಿದಾಗ ಆರಂಭದಲ್ಲಿ ಬೆಚ್ಚಿ ಬೀಳುತ್ತಿದ್ದವರು ನಂತರದ ದಿನಗಳಲ್ಲಿ ಕೋಯೀ ನಾ ಕೋಯಿ ಪಟಾಕಾ ಮಾರ್ ರಹಾ ಹೈ ಎಂದೋ ಇಲ್ಲವೇ ಕೋಯಿ ನಾ ಕೋಯಿ ಗಯಾ! ಖತಂ ಹೋಗಯಾ! ಸತ್ ಶ್ರೀ ಅಕಾಲ್ ಎಂದು ಹೇಳಿ ಸುಮ್ಮನಾಗುವಷ್ಟು ರೋಸಿ ಹೋಗಿದ್ದರು.

ಆ ಸಮಯದಲ್ಲಿ ಕೆಲಸವನ್ನು ಅರಸುತ್ತಿದ್ದ ಪಂಜಾಬ್ ತರುಣರಿಗೆ ಕೇವಲ ಎರಡೇ ಆಯ್ಕೆಗಳು ಇರುತ್ತಿದ್ದವು  ಒಂದು ಭಾರತದ ದೇಶವನ್ನು ಕಾಯುವ ಸಿಖ್ ರೆಜಿಮೆಂಟಿನ ಸೇನೆಗೆ ಸೇರುವುದು ಇಲ್ಲವೇ ಮತ್ತೊಂದು ಭಾರತದ ವಿರುದ್ಧ ಹೋರಾಟ ಮಾಡುತ್ತಿದ್ದ ಉಗ್ರರ ಸೇನೆಗೆ ಸೇರಬೇಕಿತ್ತು.  ಮೊದಲನೆಯ ಆಯ್ಕೆಗಿಂತಲೂ ಎರಡನೆಯದ್ದರಲ್ಲಿ ಕೈ ತುಂಬಾ ಹಣ ದೊರಕುತ್ತಿತ್ತಾದರೂ, ನಾಳಿನ ಬದುಕಿನ ಬಗ್ಗೆ ನಂಬಿಕೆಯೇ ಇಲ್ಲದೇ, ಯಾವಾಗಲಾದರೂ ಪೋಲೀಸರ ಗುಂಟೇಟಿಗೆ ಬಲಿಯಾಗ ಬಹುದಾದಂತಹ ಘನ ಘೋರ ಪರಿಸ್ಥಿತಿ ಬಂದೊದಗಿತ್ತು.

ಸ್ವಾತಂತ್ರ್ಯ ಪೂರ್ವದ ಅಖಂಡ ಭಾರತದಲ್ಲಿ ದೆಹಲಿ, ಪಂಜಾಜ್, ಲಾಹೋರ್, ರಾವಲ್ಪಿಂಡಿ ಮುಲ್ತಾನ್ ಪ್ರಾಂತ್ಯಗಳಲ್ಲಿಯಷ್ಟೇ  ಪಂಜಾಬಿಗಳು  ಬಹುಸಂಖ್ಯಾತರಾಗಿದ್ದಿದ್ದಲ್ಲದೇ, ಬ್ರಿಟನ್ ಮತ್ತು ಕೆನಡಾ ದೇಶಗಳಲ್ಲಿಯೂ ತಮ್ಮ ವ್ಯವಹಾರಗಳನ್ನು ಆರಂಭಿಸಿ ಅತ್ಯಂತ ಶ್ರೀಮಂತರೆಂದೇ ಖ್ಯಾತಿ ಪಡೆದಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲೂ ಭಗತ್ ಸಿಂಗ್, ಸುಖದೇವ್, ಲಾಲಾ ರಜಪತ್ ರಾಯ್, ಉಧಮ್ ಸಿಂಗ್, ಮದಲ್ ಲಾಲ್ ಢಿಂಗ್ರಾ, ಬಾಬಾ ಗುರ್ಜೀತ್ ಸಿಂಗ್, ಸೋಹನ್ ಸಿಂಗ್, ದುಲ್ಲಾ ಭಟ್ಟಿ ಮುಂತಾದ  ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದರು.

ಖಲಿಸ್ಥಾನ್ ಬಗ್ಗೆ ತಿಳಿಯುವ ಮುನ್ನಾ ಪಂಜಾಬ್ ಪ್ರಾಂತ್ಯದ ಇತಿಹಾಸವನ್ನೊಮ್ಮೆ ತಿಳಿಯ ಬೇಕು.

18ನೇ ಶತಮಾನದ ಆದಿಯಲ್ಲಿ ಮಹಾರಾಜ ರಂಜಿತ್‌ ಸಿಂಗ್ ಪ್ರವರ್ಧಮಾನಕ್ಕೆ ಬರುವವರೆಗೂ, ಸುಮಾರು 12 ಸಿಖ್‌ ರಾಜಮನೆತನಗಳು ಪಂಜಾಬ್‌ ಪ್ರದೇಶವನ್ನು ಆಳುತ್ತಿದ್ದವು. 18ನೇ ಶತಮಾನದ ಆದಿಯಲ್ಲಿ ಮಹಾರಾಜ  ರಣಜಿತ್ ಸಿಂಗ್ ತನ್ನ ಶಕ್ತಿ ಸಾಮರ್ಥ್ಯದಿಂದ ಪಂಜಾಬ್ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಆಡಳಿತವನ್ನು ನಡೆಸಲಾರಂಭಿಸಿದನು.

1849 ರಲ್ಲಿ  ಮಹರಾಜ ರಣಜಿತ್ ಸಿಂಗ್  ಅವರ ಕಿರಿಯ ಮಗನಾದ ದುಲೀಪ್ ಸಿಂಗ್ ಪಂಜಾಬ್ ಪ್ರಾಂತ್ಯವನ್ನು ಆಳುತ್ತಿದ್ದ ಸಮಯದಲ್ಲಿಯೇ ಬ್ರಿಟಿಷ್ ಅಧಿಕಾರಿ ಸರ್ ಜಾನ್ ಲಾರೆನ್ಸ್ ಪಂಜಾಬ್ ಪ್ರಾಂತ್ಯದಲ್ಲಿ ಆಕ್ರಮಣ ನಡೆಸಿ ಪಂಜಾಬನ್ನು  ವಶಪಡಿಸಿಕೊಂಡಿದ್ದಲ್ಲದೇ, ಪ್ರತಿಷ್ಠೆಯ ಸಂಕೇತವಾಗಿ  ಇಟ್ಟುಕೊಂಡಿದ್ದ ಸುಮಾರು 793 ಕ್ಯಾರಟ್ ಅಂದರೆ 158.6 ಗ್ರಾಂ ತೂಕವಿದ್ದ ಅಮೂಲ್ಯವಾದ ಕೋಹಿನೂರ್ ವಜ್ರವನ್ನು ಮೋಸದಿಂದ ಕದ್ದೊಯ್ದ, ಅ ಆಪವಾದ ತಮ್ಮ ಮೇಲೆ ಬಾರದಂತೆ ಅದನ್ನು ಯುದ್ದದ ಖರ್ಚು ಎಂದು ದಾಖಲಿಸಿದ್ದಲ್ಲದೇ, ಕುತಂತ್ರದಿಂದ  ಈ ಕೊಹಿನೂರು ವಜ್ರವನ್ನು ರಾಜ ಕಾಣಿಕೆಯನ್ನಾಗಿ ನೀಡಿರುವಂತೆ ದಾಖಲೆಯಲ್ಲಿ ನಮೂದಿಸಲಾಗಿತ್ತು.

1940 ರಷ್ಟರಲ್ಲಿ ಮುಸ್ಲಿಂ ಲೀಗ್ ಭಾರತೀಯ ಮುಸ್ಲಿಮ್‌ರಿಗಾಗಿ ಪ್ರತ್ಯೇಕ  ರಾಷ್ಟ್ರ ಬೇಕೆಂದು ಆಗ್ರಹ ಪಡಿಸಿದಾಗಲೇ, ಪಂಜಾಬಿ ಮಾತನಾಡುವ ಜನರಿಗೆ ಮತ್ತು ಸಿಖ್ಖರಿಗಾಗಿ ಪ್ರತ್ಯೇಕ ಖಲಿಸ್ತಾನ್  ರಾಜ್ಯದ ವಿಚಾರ ಮೊಳಕೆಯೊಡೆಯಿತು.

1947 ರಲ್ಲಿ ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಧರ್ಮಾಧಾರಿತವಾಗಿ ದೇಶ ಇಭ್ಭಾಗವಾಗಿ ಹೋದಾಗ ನಿಜವಾಗಿಯೂ ಧಕ್ಕೆಯಾದದ್ದು ಪಂಜಾಬ್ ಪ್ರಾಂತ್ಯದವರಿಗೆ  ಎಂದರೂ ತಪ್ಪಾಗಲಾರದು. ದೇಶ ವಿಭಜನೆಯ ಸಮಯದಲ್ಲಿ   ಪಂಜಾಬ್  ಇಭ್ಭಾಗವಾದಾಗ ಲಕ್ಷಾಂತರ ಪಂಜಾಬಿಗಳು  ತಮ್ಮ ಅಸ್ತಿ ಪಾಸ್ತಿ ಮನೆ ಮಠ ಬಿಟ್ಟು ಬರಲು ಇಚ್ಚಿಸದೇ ಅಲ್ಲಿಯೇ ಉಳಿಯಲು ಇಚ್ಚಿಸಿದರಾದರೂ, ಅಂದು ನಡೆದ  ಲೂಟಿ, ಅತ್ಯಾಚಾರ ಮತ್ತು ನರಮೇಧದ ಕಾರಣದಿಂದಾಗಿ ಲಕ್ಷಾಂತರ ಸಿಖ್ಖರ ಮಾರಣ ಹೋಮ ನಡೆದಿದ್ದ ಕಾರಣ  ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಸೂತಕದ ಛಾಯೆ ಮೂಡಿದ್ದ ಕಾರಣ ಸಿಖ್ಖರಿಗಾಗಿಯೇ ಪ್ರತ್ಯೇಕ ರಾಜ್ಯದ ಬೇಡಿಕೆ ಕೆಲ ಕಾಲ ತಣ್ಣಗಾಗಿತ್ತು.

1950  ಭಾಷಾವಾರು ಆಧಾರದಲ್ಲಿ ರಾಜ್ಯಗಳನ್ನು ವಿಭಜಿಸಿ ಗಣತಂತ್ರ ದೇಶವಾದಾಗ,ಮತ್ತೆ ಈ ಪ್ರತಿಭಟನೆಗೆ ಚಾಲನೆ ನೀಡಿದ ಅಕಾಲಿ ದಳ,  ಪಂಜಾಬಿ ಬಹುಸಂಖ್ಯಾತರಿಗಾಗಿಯೇ ಪ್ರತ್ಯೇಕ ರಾಜ್ಯ ನೀಡಬೇಕೆಂದು ಪಂಜಾಬಿ ಸುಬಾ ಚಳವಳಿ ಆರಂಭಿಸಿತು.

ಪಂಜಾಬಿಗಳ ಹೋರಾಟ ದಿನೇ ದಿನೇ  ತೀವ್ರವಾಗಿ 1955 ಜುಲೈ 4 ರಂದು ಪಂಜಾಬಿ ಭಾಷಿಕರಿಗಾಗಿ ಪ್ರತ್ಯೇಕ ರಾಜ್ಯ ನೀಡಬೇಕೆಂದು ಒತ್ತಾಯಿಸಿ ಅಮೃತಸರದ ಸುವರ್ಣ ಮಂದಿರದ  ಹರ್ಮಿಂದಿರ್‌ ಸಾಹಿಬ್‌ನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದನ್ನು ಚದುರಿಸಲು ಮೊಟ್ಟ ಮೊದಲ ಬಾರಿಗೆ ಸಿಖ್ಖರ ಪವಿತ್ರ ಮಂದಿರಕ್ಕೆ ಪೊಲೀಸರನ್ನು ನುಗ್ಗಿಸಿ ಪ್ರತಿಭಟನಾಕಾರರನ್ನು ಬಂಧಿಸುವ ಮೂಲಕ ಕೆಲ ವರ್ಷಗಳ ಕಾಲ ಈ ವಿಷಯ ತಣ್ಣಗಾಗುವಂತೆ ಮಾಡಿದರು.

ಬೂದಿ ಮುಚ್ಚಿದ ಕೆಂಡದಂತಿದ್ದ ಈ ಪ್ರತಿಭಟನೆಯ ಕಾವನ್ನು ಶಾಶ್ವತವಾಗಿ ಹತ್ತಿಕ್ಕುವ ಸಲುವಾಗಿ 1966ರಲ್ಲಿ ವಿಶಾಲ ಪಂಜಾಬ್‌ ಪ್ರಾಂತ್ಯವನ್ನು ನಾಲ್ಕು ಭಾಗಗಳಾಗಿ ತುಂಡರಿಸಿ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢ್‌ಗಳನ್ನು ಹೊಸದಾಗಿ ರಚಿಸಲಾಯಿತು. ತಾವೊಂದು ಬಗೆದರೆ, ದೈವವೊಂದು ಬಗೆದೀತು ಎನ್ನುವಂತೆ ಈ ವಿಭಜನೆಯ ನಂತರ ಮೂಲ ಪಂಜಾಬ್  ಸಿಖ್ ಅಲ್ಪಸಂಖ್ಯಾತರ ರಾಜ್ಯವಾಗಿ ಹೋಯಿತು.

1969 ರಲ್ಲಿ, ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಕಾಲಿದಳ ಸೋತು ಪಂಜಾಬ್ ಕಾಂಗ್ರೇಸ್ ಪಕ್ಷದ ತೆಕ್ಕೆಗೆ ಬಿದ್ದ ಎರಡು ವರ್ಷಗಳ ನಂತರ, 1971ರಲ್ಲಿ ಪಂಜಾಬ್‌ನ ಮಾಜಿ ಹಣಕಾಸು ಸಚಿವ ಜಗ್ಜಿತ್ ಸಿಂಗ್ ಚೌಹಾನ್  ಸಿಖ್ಖರು ಬಹಳವಾಗಿ ವಾಸವಿದ್ದ ಇಂಗ್ಲೇಂಡ್ ಮತ್ತು ಕೆನಡ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಿಖ್ ಮುಖಂಡರನ್ನು ಒಗ್ಗೂಡಿಸಿ ನಿಧಾನವಾಗಿ  ಅವರ ತಲೆಯಲ್ಲಿ ಸಿಖ್ಖರಿಗೇ ಪ್ರತೇಕವಾದ ಖಲಿಸ್ತಾನ್ ದೇಶದ ಸೃಷ್ಟಿಗೆ ಮರು ಹುಟ್ಟನ್ನು ಹಾಕಿದ್ದಲ್ಲದೇ  ಅಮೇರಿಕಾದ  ಇಂಗ್ಲಿಷ್ ದಿನ‌ಪತ್ರಿಕೆಯೊಂದರಲ್ಲಿ ಖಲಿಸ್ತಾನ್ ಸ್ಥಾಪನೆ ಕುರಿತಾದ ಜಾಹೀರಾತು ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

1973 ಅಕಾಲಿ ದಳದ ಮುಖಂಡರು ಸಭೆ ಸೇರಿ ಸಿಖ್ ಧರ್ಮವನ್ನು ಹಿಂದೂ ಧರ್ಮದಿಂದ ಪ್ರತ್ಯೇಕವಾದ ಧರ್ಮವೆಂದು ಗುರುತಿಸಲು ಕೋರಿದ್ದಲ್ಲದೇ, ಪಂಜಾಬ್‌ಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡ ಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಕೈಗೊಂಡಿತು. ಈ ನಿರ್ಣಯವು ಆನಂದಪುರ ಸಾಹಿಬ್ ನಿರ್ಣಯ  ಎಂದೇ ಖ್ಯಾತಿ ಪಡೆದಿದೆ.

ಮುಂದೆ 1976 ರಾವಿ ಮತ್ತು ಬಿಯಾಸ್‌ ನದಿ ನೀರಿನ ಹಂಚಿಕೆ ವಿಷಯದಲ್ಲಿ ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ಮಧ್ಯೆ ವಿವಾದ ತಲೆದೋರಿಸಿದಾಗ ಕೇಂದ್ರ ಮತ್ತು ರಾಜ್ಯದಲ್ಲಿದ್ದ ಕಾಂಗ್ರೇಸ್ ಸರ್ಕಾರದ ವಿರುದ್ಧ ಅಕಾಲಿ ದಳ ತೀವ್ರತರವಾದ ಹೋರಾಟವನ್ನು ಆರಂಭಿಸಿತು.  ಇದು ರಾಜಕೀಯ ಅಸ್ತಿತ್ವದ ಹೋರಾಟವಾಗಿದ್ದರೂ ಅದಕ್ಕೆ ಧಾರ್ಮಿಕ ನಾಯಕರ ಪರೋಕ್ಷವಾದ ಬೆಂಬಲವಿತ್ತು.

ಆಗ ಕೇಂದ್ರದಲ್ಲಿ ಪ್ರಧಾನಿಗಳಾಗ್ಗಿದ್ದ ಶ್ರೀಮತಿ ಇಂದಿರಾಗಾಂಧಿಯವರು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ನಿಯಮದಂತೆ  ಪಂಜಾಬಿನಲ್ಲಿ ಧಾರ್ಮಿಕ ಗುರುವಾಗಿದ್ದ ತಕ್ಸಲ್‌ನ ನಾಯಕನಾಗಿದ್ದ ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆಯನ್ನು ಪ್ರವರ್ಧಮಾನಕ್ಕೆ ತರುವ ಮೂಲಕ ಪರಿಸ್ಥಿತಿಯನ್ನು ತನ್ನ ಕೈವಶ ಮಾಡಿಕೊಳ್ಳುವುದರಲ್ಲಿ ಸಫಲರಾದವೆಂದು ಮಂದಹಾಸ ಬೀರಿದ್ದರು. ಆದರೆ ಬಾಣಲೆಯಿಂದ ಬೆಂಕಿಗೆ ನೇರವಾಗಿ ಬಿದ್ದಿದ್ದೇವೆ ಎಂಬ ನಿಜಾಂಶ ತಿಳಿಯುವ ಹೊತ್ತಿಗೆ ಕೈ ಮೀರಿ ಹೋಗಿತ್ತು.ಪ್ರಧಾನಿಗಳ ಪರೋಕ್ಷ ಬೆಂಬಲ ಸಿಕ್ಕ ಕೂಡಲೇ ಬಿಂದ್ರನ್ವಾಲೆ ತನ್ನ ಅಸಲೀ ಮುಖವನ್ನು ಪ್ರದರ್ಶನ ಮಾಡತೊಡಗಿದ. ಪಂಜಾಬಿನ  ಮೂಲದವರೆಲ್ಲರೂ ಸಿಖ್‌ ಧರ್ಮವನ್ನು ಕಡ್ಡಾಯವಾಗಿ ಅನುಸರಿಸಲೇ ಬೇಕೆಂದು ಆಗ್ರಹಪಡಿಸುತ್ತಾ, ಪಂಜಾಬಿನ ಅಂದಿನ ಯುವಕರ ಮೇಲೆ ಬಹಳವಾಗಿ ಪ್ರಭಾವ ಬೀರಿದ್ದಲ್ಲದೇ, ನೋಡ ನೋಡುತ್ತಿದ್ದಂತೆಯೇ, ಕೆಲವೇ ಕೆಲವು ವರ್ಷಗಳಲ್ಲಿ ಸಿಖ್ ಧರ್ಮಕ್ಕಾಗಿ ಪ್ರಾಣವನ್ನೇ ಕೊಡಲು ಸಿದ್ಧವಾಗಿದ್ದ  ಒಂದು ಬಲಿಷ್ಟ ತಂಡವನ್ನೇ ಕಟ್ಟಿಯೇ ಬಿಟ್ಟಿದ್ದ. ನಾನು ಬರುವ ವರೆಗೂ ಬೇರೆಯವರ ಹವ. ನಾನು ಬಂದ ಮೇಲೆ ನನ್ನದೇ ಹವಾ ಎನ್ನುವ ಸಿನಿಮಾದ ಸಂಭಾಷಣೆಯಂತೆ ತನ್ನ ಭಯೋತ್ಮಾದನಾ ಚಟುವಟಿಕೆಗಳ ಮೂಲಕ ಅಕ್ಷರಶಃ ಇಡೀ ಪಂಜಾಬ್ ಪ್ರಾಂತ್ಯವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳಲಾರಂಬಿಸಿದ್ದಲ್ಲದೇ ತನ್ನ ಕಾರ್ಯ ಚಟುವಟಿಕೆಗಳಿಗೆ ಅಡ್ಡಿ ಪಡಿಸುವವರನ್ನು ನಿರ್ದಾಕ್ಷಿಣ್ಯವಾಗಿ  ನಿರ್ನಾಮ ಮಾಡ ತೊಡಗಿದ್ದ.

ಅತ್ಯಂತ ಕಡಿಮೆ ಸಮಯದಲ್ಲಿ ಈ ಪರಿಯಾಗಿ ಪ್ರವರ್ಧಮಾನಕ್ಕೆ ಬಂದ ಬಿಂದ್ರನ್ ವಾಲೆ ಮತ್ತವನ ಬಲಿಷ್ಟ ತಂಡಕ್ಕೆ ದೂರದ ಇಂಗ್ಲೇಂಡ್ ಮತ್ತು ಕೆನಡಾದ ಶ್ರೀಮಂತ ಖಟ್ಟರ್ ಸಿಖ್ಖರು ಆರ್ಥಿಕ ನೆರವನ್ನು ನೀಡಲು  ಸಿದ್ದರಾದರು. ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಭಾರತದ ವಿರುದ್ಧ ಸದಾಕಾಲವೂ ಕತ್ತಿ ಮಸೆಯುತ್ತಿದ ಪಾಕೀಸ್ಥಾನವೂ ಸಹಾ ಪರೋಕ್ಷವಾಗಿ ಬಿಂದ್ರನ್ವಾಲೆಗೆ ಸಹಾಯ ಹಸ್ತವನ್ನು ನೀಡಿತ್ತು. ಇವೆಲ್ಲವುಗಳಿಂದ ಮತ್ತಷ್ಟು ಬಲಿಷ್ಟನಾಗಿ 1977ರಲ್ಲಿ ಮೊಟ್ಟ ಮೊದಲ ಬಾರಿಗೆ ಬಾಹ್ಯ ಜಗತ್ತಿಗೆ ತನ್ನ ಖಟ್ಟರ್ ನಿಜ ಸ್ವರೂಪವನ್ನು ಜಗಜ್ಜಾಹೀರಾತು ಪಡಿಸಿದ ಬಿಂದ್ರನ್ವಾಲೇ, ಅನೇಕ ದಶಕಳಿಂದ ಮೊಳಕೆಯೊಡೆದು ಕೇವಲ ಗಿಡವಾಗಿಯೇ ಇದ್ದ ಖಲೀಸ್ಥಾನ್ ಹೋರಾಟಕ್ಕೆ  ಗೊಬ್ಬರ ಮತ್ತು ನೀರನ್ನು ಹಾಕಿ, ಪೋಷಿಸಿ ಹೆಮ್ಮರವಾಗಿ ಬೆಳೆಯುವಂತೆ  ಪ್ರಾಮುಖ್ಯತೆ ತಂದು ಕೊಟ್ಟ. ನಿಧಾನವಾಗಿ ಸ್ವತಂತ್ರ್ಯ ಖಲೀಸ್ಥಾನದ ಹುಳವನ್ನು ಎಲ್ಲರ ತಲೆಯಲ್ಲಿ ಬಿತ್ತಿದ್ದಲ್ಲದೇ, ಅಮೃತಸರದಲ್ಲಿದ್ದ ಸಿಖ್ ಧರ್ಮದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾದ ಸ್ವರ್ಣಮಂದಿರವನ್ನೇ ತನ್ನ ಸುರಕ್ಷಿತ  ಅಡಗುತಾಣವನ್ನಾಗಿ ಮಾಡಿಕೊಂಡ.

ಸ್ವರ್ಣ ಮಂದಿರದ  ಅಕಾಲ್‌ ತಖ್ತಿನ‌ ಸಂಕೀರ್ಣದಲ್ಲಿ ಸದ್ದಿಲ್ಲದೇ  ಅಕ್ರಮವಾಗಿ ಮದ್ದು ಗುಂಡುಗಳು ಮತ್ತು ಆಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸತೊಡಗಿದ. ಹೇಳಿ ಕೇಳಿ ಖ್ಯಾತ ಧಾರ್ಮಿಕ ಕ್ಷೇತ್ರವಾಗಿದ್ದ ಕಾರಣ ಯಾರಿಗೂ  ಇವರ ಕುಕೃತ್ಯದ ಮೇಲೆ ಅನುಮಾನವೇ ಬಿದ್ದಿರಲಿಲ್ಲ. ಇಲ್ಲಿಂದಲೇ,  ಭಿಂದ್ರನ್‌ವಾಲೆ ತನ್ನ ಬಂಡುಕೋರ ಸಹಚರರಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಾ ಎಂಭತ್ತರ ದಶಕದಲ್ಲಿ  ಪಂಜಾಬ್ ಪ್ರಾಂತ್ಯದಲ್ಲಿ ಗೆರಿಲ್ಲಾ ಮಾದರಿಯ ಹೋರಾಟ ಮತ್ತು ದಂಗೆಯನ್ನು ಎಬ್ಬಿಸಿತೊಡಗಿದ್ದಲ್ಲದೇ ತನಗೆ ರಾಜಾಶ್ರಯ ನೀಡಿದ್ದ ಸ್ಥಳೀಯ ರಾಜಕೀಯ ನಾಯಕರುಗಳಿಗೇ ತಲೆನೋವಾಗಿದ್ದಲ್ಲದೇ, ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರದ ಬೇಡಿಕೆ ಇಟ್ಟು ಅಮೃತಸರದ ಸ್ವರ್ಣಮಂದಿರವನ್ನು ವಶಪಡಿಸಿಕೊಂಡು ಸ್ವರ್ಣ ಮಂದಿರದಿಂದಲೇ ಹೋರಾಟವನ್ನು ಆರಂಭಿಸಿದ್ದಲ್ಲದೇ ಅಕ್ಷರಶಃ ಆತ ಅಲ್ಲಿಂದಲೇ ತನ್ನದೇ ಆದ ಪ್ರತ್ಯೇಕವಾದ ಸರಕಾರವನ್ನೇ ನಡೆಸುತ್ತಿದ್ದ ಎಂದರೆ  ಅಚ್ಚರಿಯಾಗುತ್ತದೆ.

ತಾನೇ ಬೆಳಸಿದ ಹುಡುಗನೇ ತನಗೆ ಮಗ್ಗಲ ಮುಳ್ಳಾಗಿ ಪ್ರತ್ಯೇಕ ಖಲಿಸ್ತಾನ ರಾಷ್ಟ್ರಕ್ಕಾಗಿ ವಿಧ್ವಂಸಕ ಮಾರ್ಗ ಹಿಡಿದಿದ್ದು ಇಂದಿರಾ ಗಾಂಧಿಯವರಿಗೆ ಕೋಪವನ್ನು ತರಿಸಿತ್ತು. ಸಿಖ್ಖರ ಪವಿತ್ರ ಕ್ಷೇತ್ರ ಅಮೃತಸರದ ಸ್ವರ್ಣಮಂದಿರವನ್ನೇ ತನ್ನ ಆಶ್ರಯ ತಾಣವಾಗಿಸಿಕೊಂಡು,  ಶಸ್ತ್ರಾಸ್ತ್ರಗಳೊಂದಿಗೆ ಅಡಗಿಕೊಂಡಿದ್ದ ಬಂಡುಕೋರರ ನಾಯಕ ಭಿಂದ್ರನ್‌ವಾಲೆ ಮತ್ತು ಅವನ ಬಂಡುಕೋರರನ್ನು ಹೊರದಬ್ಬಲು ಸೇನೆ ಮತ್ತು ಅಂದಿನ ಪ್ರಧಾನ ಮಂತ್ರಿ ಶ್ರೀಮತಿ  ಇಂದಿರಾಗಾಂಧಿಯವರು ದಿಟ್ಟತನದಿಂದ ತೆಗೆದುಕೊಂಡ ನಿರ್ಣಯವೇ ಆಪರೇಷನ್‌ ಬ್ಲೂಸ್ಟಾರ್‌. 1984ರ ಜೂನ್‌ 3ರಿಂದ 8ರವರೆಗೆ 6 ದಿನಗಳ ಕಾಲ ನಡೆದ ಈ ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆ ಭಾರತೀಯ ಇತಿಹಾಸದಲ್ಲಿ ಅತ್ಯಂತ ಮಹತ್ತರ ಎನಿಸಿಕೊಂಡಿದ್ದಲ್ಲದೇ, ಮುಂದೆ ಶ್ರೀಮತಿ ಇಂದಿರಾ ಗಾಂಧಿ ಅವರ ಹತ್ಯೆಗೂ ಇದೇ  ಕಾರ್ಯಾಚರಣೆಯೇ ಕಾರಣವಾಗಿ ಹೋಗಿದ್ದು ನಿಜಕ್ಕೂ ವಿಷಾಧನೀಯ.

ಜೂನ್‌ 3ರಿಂದ 8ರವರೆಗೆ ಸೇನೆಯು ನಡೆಸಿದ  ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆನ್ನು  ಸಿಖ್‌ ಸೇನಾಧಿಕಾರಿಯಾದ ಜನರಲ್‌ ಕುಲ್ದೀಪ್‌ ಸಿಂಗ್‌ ಬ್ರಾರ್‌ ಅವರು  ನೇತೃತ್ವ ವಹಿಸಿಕೊಂಡಿದ್ದರು. ಎರಡು ಹಂತದಲ್ಲಿ ನಡೆದ ಈ ಕಾರ್ಯಾಚರಣೆಯ ಮೊದಲ ಹಂತವೇ ಆಪರೇಷನ್‌ ಮೆಟಲ್‌. ಇದು ಹರ್ಮಂದಿರ್‌ ಸಾಹಿಬ್‌ ಕಾಂಪ್ಲೆಕ್ಸ್‌ಗೆ ಸೀಮಿತವಾಗಿ ಸತತವಾಗಿ ಗುಂಡಿನ ಧಾಳಿ ನಡೆಸಿ, ಬಂಡುಕೋರ ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆ ಮತ್ತು ಮಾಜಿ ಮೇಜರ್‌ ಜನರಲ್‌ ಶಬೇಗ್‌ ಸಿಂಗ್ ಮತ್ತವರ ತಂಡವನ್ನು ಹತ್ಯೆ ಮಾಡಿ, ಸ್ವರ್ಣಮಂದಿರವನ್ನು ಸಂಪೂರ್ಣವಾಗಿ ಸೇನೆಯ ವಶಕ್ಕೆ ತೆಗೆದುಕೊಂಡಿತು. ಇದಾದ ನಂತರ ನಡೆದಿದ್ದೇ ಆಪರೇಷನ್‌ ಶಾಪ್‌. ಈ ಕಾರ್ಯಾ ಚರಣೆಯನ್ನು ಪಂಜಾಬ್‌ನ ಗ್ರಾಮಾಂತರ ಪ್ರದೇಶದಲ್ಲಿ ಕೈಗೊಂಡು, ಶಂಕಿತ ಬಂಡುಕೋರರನ್ನು ಸೆರೆ ಹಿಡಿಯ ಲಾಯಿತು. ಇದಾದ ಬಳಿಕ ಆಪರೇಷನ್‌ ವುಡ್‌ರೋಸ್‌  ಕಾರ್ಯಾಚರಣೆಯನ್ನು  ಪಂಜಾಬ್‌ ರಾಜ್ಯಾದ್ಯಂತ, ಹೆಲಿಕಾಪ್ಟರ್‌, ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿದಳವನ್ನು ಬಳಸಿಕೊಂಡು ಅಳಿದುಳಿದ್ದ ಬಂಡುಕೋರರನ್ನು ಮಟ್ಟ ಹಾಕಿದ್ದಲ್ಲದೇ,  ಅಕಾಲಿದಳ ಮತ್ತು ಆಲ್‌ ಇಂಡಿಯಾ ಸಿಖ್‌ ಫೆಡರೇಷನ್‌ನ ಪ್ರಮುಖ ನಾಯಕರನ್ನು ಬಂಧಿಸುವ ಮೂಲಕ  ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಗೆ ತಾರ್ಕಿಕ ಅಂತ್ಯವನ್ನು ಮಾಡಲಾಯಿತು. ಈ ಆಪರೇಷನ್‌ ವೇಳೆ ಪ್ರತ್ಯಕ್ಷದರ್ಶಿಗಳ ಪ್ರಕಾರ ಸಾವಿರಾರು ಜನರು ಸಾವಿಗೀಡಾದರೂ ಸರ್ಕಾರೀ ಧಾಖಲೆಗಳ ಪ್ರಕಾರ ಕೇವಲ 575 ಜನರು ಮಾತ್ರ ಸಾವಿಗೀಡಾದರು ಎಂದು ಅಧಿಕೃತವಾಗಿ ಘೋಷಿಸಿತು.

ಸರ್ಕಾರದ ಈ ದಿಟ್ಟ ತನಕ್ಕೆ ಇಡೀ ದೇಶವೇ ಕೊಂಡಾಡಿದರೂ ಸಿಖ್ ಸಮುದಾಯದಲ್ಲಿ ಮಾತ್ರಾ ಅಸಹನೆಯ ಕೆಂಡ ಬೂದಿ ಮುಚ್ಚಿದಂತಿದ್ದು ಈ ಕಾರ್ಯಾಚರಣೆಗೆ ಪ್ರತಿಧಾಳಿಯನ್ನು ಮಾಡಲು ಸಂಚು ಹಾಕುತ್ತಲೇ ಇದ್ದರು. ಇದರ ಪ್ರತೀಕವೆಂಬತೆಯೇ 1984 ಅಕ್ಟೋಬರ್‌ 31ರಂದು ಇಂದಿರಾ ಗಾಂಧಿಯವರ ಅಧಿಕೃತ ನಿವಾಸದಲ್ಲಿಯೇ  ಅವರ ಅಂಗರಕ್ಷಕರಾಗಿದ್ದ ಸತ್ವಂತ್‌ ಸಿಂಗ್‌ ಹಾಗೂ ಬಿಯಾಂತ್‌ ಸಿಂಗ್‌  33 ಬಾರಿ ಗುಂಡು ಹಾರಿಸಿ ಅವರನ್ನು ಹತ್ಯೆ ಮಾಡಲಾಯಿತು.

ಇಂದಿರಾ ಗಾಂಧಿಯವರ ಹತ್ಯೆಯ ಪ್ರತೀಕಾರವನ್ನು ತೆಗೆದುಕೊಳ್ಳುವ ಸಲುವಾಗಿ 1984 ಅಕ್ಟೋಬರ್‌ 31ರಿಂದ ನವೆಂಬರ್‌3ರವರೆಗೆ ದೆಹಲಿ ಮತ್ತು ದೇಶಾದ್ಯಂತ ಸಿಖ್ಖರ ಮೇಲೆ ದಾಳಿ ಆರಂಭವಾಗಿ ಸಾವಿರಾರು ಸಿಖ್ಖರ ಮಾರಣಹೋಮ ನಡೆದು ಹೋದದ್ದು ಈಗ ಕೆಟ್ಟ ಇತಿಹಾಸ.

ಇವೆಲ್ಲಕ್ಕೂ ಪ್ರತೀಕಾರವಾಗಿ 1985, ಜೂನ್‌ ತಿಂಗಳಿನಲ್ಲಿ ಕೆನಡಾದಿಂದ ಮುಂಬೈಗೆ ಹೊರಟಿದ್ದ ಏರ್‌ ಇಂಡಿಯಾ ಕನಿಷ್ಕ ವಿಮಾನವನ್ನು ಸಿಖ್‌ ಬಂಡುಕೋರರು ಆಕಾಶದಲ್ಲೇ ಸ್ಫೋಟಿಸಿ ಐರಿಷ್‌ ಕರಾವಳಿಯಲ್ಲಿ ಪತನವಾಗುವ ಮೂಲಕ ಅಮಾಯಕ 329 ಪ್ರಯಾಣಿಕರ ಹತ್ಯೆಗೆ ಕಾರಣವಾಗಿದದ್ದು ದೇಶದ ಇತಿಹಾಸದಲ್ಲಿ ಕಪ್ಪು ಚುಕ್ಕಿಯಾಗಿದೆ.

1985 ಜುಲೈ ನಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ, ಅಕಾಲಿ ದಳದ ಪ್ರಕಾಶ್‌ ಸಿಂಗ್‌ ಬಾದಲ್‌ ಬಣ ಮತ್ತು ಅನೇಕ ನಾಯಕರು ತೀವ್ರತರ ವಿರೋಧದ ನಡುವೆಯೂ. ಮೃದು ಧೋರಣೆಯ ಅಕಾಲಿ ದಳದ ನಾಯಕ ಹರ್ಚರಣ್‌ ಸಿಂಗ್‌ ಲೊಂಗ್ವೊಲಾ ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳುವ ಒಪ್ಪಂದ ಮಾಡಿಕೊಂಡ ಪರಿಣಾಮ, ರಾಜಕೀಯ ಪ್ರತಿಭಟನೆಯನ್ನು ಹಿಂಪಡೆಯುವಂತಾಯಿತು.

ಆಪರೇಷನ್‌ ಬ್ಲೂ ಸ್ಟಾರ್‌ ನಂತರವೂ ಅಳಿದುಳಿದ ಖಲಿಸ್ತಾನ್ ಬಂಡುಕೋರರು ಮತ್ತೆ ತಮ್ಮ ಕಾರ್ಯಾಚರಣೆಗೆ ಸುವರ್ಣ ಮಂದಿರವನ್ನೇ ಆಶ್ರಯ ತಾಣವನ್ನಾಗಿ ಮಾಡಿಕೊಂಡಿದ್ದನ್ನು ಹಿಮ್ಮೆಟ್ಟಿಸುವುದಕ್ಕಾಗಿಯೇ 1986 ಏಪ್ರಿಲ್‌ 30ರಂದು ಆಪರೇಷನ್‌ ಬ್ಲ್ಯಾಕ್‌ ಥಂಡರ್‌ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ಭದ್ರತಾ ದಳದ ಬ್ಲ್ಯಾಕ್‌ ಕ್ಯಾಟ್‌ ಕಮಾಂಡೊ ಪಡೆಯನ್ನು ಬಳಸಿಕೊಳ್ಳಲಾಗಿತ್ತು, ಮತ್ತೊಮ್ಮೆ 1988 ಮೇ 9ರಂದು ಪಂಜಾಬ್‌ ಪೊಲೀಸ್‌ನ ಡಿಜಿಪಿ ಆಗಿದ್ದ ಕೆ.ಪಿ.ಗಿಲ್‌. ಅವರ ನೇತೃತ್ವದಲ್ಲಿ ನಡೆಸಿ  ಅಳಿದುಳಿದ ಬಂಡುಕೋರರನ್ನು ಮಟ್ಟಹಾಕುವಲ್ಲಿ ಈ ಬ್ಯ್ಲಾಕ್‌ ಥಂಡರ್‌ ಕಾರ್ಯಾಚರಣೆ ಯಶಸ್ವಿಯಾಗುವ ಮೂಲಕ ಖಲಿಸ್ಥಾನ್  ಹೋರಾಟಕ್ಕೆ ಶಾಶ್ವತವಾದ  ಅಂತ್ಯವನ್ನು ಮಾಡಲಾಗಿತ್ತು. ನಂತರ ಅಲ್ಲಿ ಪ್ರಜಾತಾಂತ್ರಿಕವಾಗಿ ಶಾಂತಿಯುತವಾಗಿ ಚುನಾವಣೆ ನಡೆದು ಸರ್ಕಾರ ಆಡಳಿತಕ್ಕೆ ಬಂದಿತ್ತು. ಈಗಲೂ ಅದೇ ರೀತಿ ಎಲ್ಲಾ ಹೋರಾಟಗಳೂ ತಣ್ಣಗಾಗಿ ಶಾಂತಿ ನೆಲೆಸಲಿ.

ಏನಂತೀರೀ?

ನಿಮ್ಮವನೇ ಶ್ರೀಕಂಠ ಬಾಳಗಂಚಿ

2 thoughts on “ಆಪರೇಷನ್ ಬ್ಲೂ ಸ್ಟಾರ್

  1. ದೇಶದ ಹಿತಕ್ಕಾಗಿ ಆಪರೇಷನ್ ಬ್ಲೂಸ್ಟಾರ್ ನಂತಹ ಕಾರ್ಯಾಚರಣೆಯನ್ನು ಕೈಗೊಂಡ ಇಂದಿರಾಗಾಂಧಿಯವರ ಧೈರ್ಯವನ್ನು ಎಷ್ಟು ಕೊಂಡಾಡಿದರೂ ಸಾಲದು. ಆ ಕಾರ್ಯಾಚಾರಣೆಯ ನಂತರ ಸಿಖ್ ಅಂಗರಕ್ಷಕರನ್ನು ತೆಗೆಯುವಂತೆ ಅವರಿಗೆ ಹಲವರು ಸಲಹೆ ನೀಡಿದರೂ ತನಗೆ ಸಿಖ್ಖರ ಮೇಲೆ ನಂಬಿಕೆ ಇದೆ ಎಂದು ಅವರನ್ನು ಹಾಗೆಯೇ ತನ್ನ ಅಂಗರಕ್ಷಕರನ್ನಾಗಿ ಉಳಿಸಿಕೊಂಡಿದ್ದು ಅವರಲ್ಲಿರುವ ವಿಶ್ವಾಸವನ್ನು ತೋರಿಸುತ್ತದೆ.

    Like

    1. ಅದರಲ್ಲಿ ಧೈರ್ಯ ಏನು ಬಂತು. ತಾನೇ ಚೆಳೆಸಿದ ಬಿಂದ್ರನ್ವಾಲೆ ಯಾವಾಗ ಮಗ್ಗಲ ಮುಳ್ಳಾದನೋ ಆಗ ಹೊಡೆದು ಹಾಕಲೇಬೇಕಾದ ಆನಿವಾರ್ಯ ಅಷ್ಟೇ. ಇದರಲ್ಲಿ ದಿಟ್ಟ ತನ ತೋರಿದ್ದು.ಸಿಖ್‌ ಸೇನಾಧಿಕಾರಿಯಾದ ಜನರಲ್‌ ಕುಲ್ದೀಪ್‌ ಸಿಂಗ್‌ ಬ್ರಾರ್‌ ಅವರದ್ದು. ಇಂದಿರಾಗಾಂಧಿ ನಿಮಿತ್ತ ಮಾತ್ರ

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s