ಸ್ವರಾಂಜಲಿ

ರಘೋತ್ತಮ ಧನ್ವಂತ್ರಿ ಎಲ್ಲರ ಪ್ರೀತಿಯ ರಘು, ಬೆಂಗಳೂರಿನ ಪ್ರತಿಷ್ಟಿತ ಶೇಷಾದ್ರಿಪುರದಲ್ಲಿ ಹುಟ್ಟಿ ಬೆಳೆದ ಹುಡುಗ. ಬಾಲ್ಯದಿಂದಲೂ ಬಹಳ ಬುದ್ದಿವಂತ ಮತ್ತು ಚುರುಕಿನ ಹುಡುಗನಾಗಿದ್ದ. ಬಾಲ್ಯದಲ್ಲಿರುವಾಗಲೇ ಮನೆಯ ಪಕ್ಕದಲ್ಲಿಯೇ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಡೆಗೆ ಆಕರ್ಷಿತನಾಗಿ, ಅಣ್ಣನ ಜೊತೆ ನಿತ್ಯ ಶಾಖೆಗೆ ಹೋಗುತ್ತಿದ್ದ. ಅನೇಕರಿಗೆ ಈಗಾಗಲೇ ತಿಳಿದಿರುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಿಗೆ ಬರುವ ಹುಡುಗರಿಗೆ ಆಟಗಳು ಮತ್ತು ಅನುಶಾಸನಗಳ ಮುಖಾಂತರ ಶಾರೀರಿಕ ಮತ್ತು ದೈಹಿಕ ಬೆಳವಣಿಗೆಯಲ್ಲದೇ, ಆ ಹುಡುಗರಿಗೇ ಗೊತ್ತಿಲ್ಲದಂತೆಯೇ ಹಾಡು, ಶ್ಲೋಕ, ಅಮೃತವಚನ ಮತ್ತು ಕಥೆಗಳ ಮೂಲಕ ಅವರ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ. ಸಂಘದ ಮೂಲಕ ಈ ರೀತಿಯಾಗಿ ವ್ಯಕ್ತಿತ್ವ ವಿಕಸನಗೊಂಡ ಕೋಟ್ಯಾಂತರ ಸ್ವಯಂಸೇವಕರಿಲ್ಲಿ ನಮ್ಮ ರಘು ಕೂಡಾ ಒಬ್ಬ.

ಸಂಘದ ಎಂಥ ಸುಮಧುರ ಬಂಧನ ಸಂಘಕಿಂದು ಬಂದೆನಾ ಎಂಬ ಹಾಡಿನ ಚರಣವೊಂದರಲ್ಲಿ ಬರುವಂತೆ

ಗುರಿಯ ಅರಿಯದೆ ತಿರುಗುತ್ತಿದ್ದೆನು ಮರೆತು ತನುವಿನ ಪರಿವೆಯ

ಗುರುವು ದೊರೆಯದೆ ಮರುಗುತಿದ್ದೆನು ಪಡೆದೆ ಸದ್ಗುರು ಭಗವೆಯ ಎನ್ನುವಂತೆ,

ಸಂಘದಲ್ಲಿ ಆತನಿಗೆ ಒಳ್ಳೆಯ ಗುರುಗಳು, ಮಾರ್ಗದರ್ಶಕರು ದೊರೆತು ಬೌಧ್ದಿಕವಾಗಿ ಬೆಳೆಯ ತೊಡಗಿದ. ಸಂಗೀತದ ಅರಿವಿಲ್ಲದಿದ್ದರೂ, ಶಾಖೆಯಲ್ಲಿ ಕಲಿತ ಹಾಡುಗಳನ್ನು ಸುಶ್ರಾವ್ಯವಾಗಿ ಹೇಳುತ್ತಲೇ, ಹಾಗೆಯೇ ಸಂಘದ ಘೋಶ್ ಟೋಳಿಯತ್ತ ಚಿತ್ತವನ್ನು ಹರಿಸಿ, ಘೋಶ್ ತಂಡದೊಂದಿಗೆ ಅಭ್ಯಾಸ ಮಾಡುತ್ತಲೇ, ವಂಶಿ, ಶಂಖ, ಆನಕ ಹೀಗೆ ವಿವಿಧ ಪ್ರಕಾರದ ಸಂಗೀತ ವಾದ್ಯಗಳನ್ನು ಸುಲಲಿತವಾಗಿ ನುಡಿಸುವುದನ್ನು ಕಲಿತೇ ಬಿಟ್ಟ.

ತನ್ನ ಪ್ರೌಢ ಶಿಕ್ಷಣವನ್ನು ಮುಗಿಸಿದ ನಂತರ ಮನೆಯಲ್ಲಿದ್ದ ಆರ್ಥಿಕ ಪರಿಸ್ಥಿತಿಯಿಂದಾಗಿ ಓದನ್ನು ಹೇಗಪ್ಪಾ ಮುಂದುವರೆಸುವುದು ಎಂಬ ಯೋಚನೆಯಲ್ಲಿದ್ದಾಗಲೇ ರಘುವಿಗೆ ಸಂಗೀತದಲ್ಲಿ ಇದ್ದ ಆಸಕ್ತಿಯನ್ನು ಅವನಿಗೆ ಅರಿವಿಲ್ಲದಂತೆಯೇ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿದ್ದಂತಹ ಶ್ರೀಯುತ ಪ. ರಾ. ಕೃಷ್ಣಮೂರ್ತಿಗಳು ಗಮನಿಸಿದ್ದರು. ಹಾಗಾಗಿ ಪರಾಕೃ ಸಂಗೀತದಲ್ಲಿ ಉನ್ನತ ಅಧ್ಯಯನಕ್ಕಾಗಿ ತಮ್ಮ ಆತ್ಮೀಯರು ಮತ್ತು ಕನ್ನಡ ಚಲನಚಿತ್ರರಂಗದಲ್ಲಿ ಸಂಗೀತ ದಿಗ್ಗಜರೆಂದೇ ಅದಾಗಲೇ ಖ್ಯಾತರಾಗಿದ್ದ ಶ್ರೀಯುತ ಹಂಸಲೇಖರವರ ಬಳಿ ರಘುನನ್ನು ಕರೆದುಕೊಂಡು ಹೋಗಿ, ಒಂದು ರೀತಿಯ ಘರಾನ ಪದ್ದತಿಯಂತೆ ಸೇರಿಸಿಯೇ ಬಿಟ್ಟರು.

ನಮ್ಮ ಶಿಷ್ಯನನ್ನು ನಿಮ್ಮ ಬಳಿ ಕರೆತಂದು ಬಿಟ್ಟಿದ್ದೇನೆ. ಹಾಲಲ್ಲಾದರೂ ಹಾಕೀ ನೀರಲ್ಲಾದರೂ ಹಾಕಿ ಒಟ್ಟಿನಲ್ಲಿ ಆತನನ್ನು ನಿಮ್ಮ ಸಂಗೀತ ಗರುಡಿ ಮನೆಯಲ್ಲಿ ಪಳಗಿಸಿ ಒಬ್ಬ ಉತ್ತಮ ಸಂಗೀತಗಾರನಾಗಿ ಮತ್ತು ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯನ್ನಾಗಿಸಿ ಎಂದು ಹೇಳಿದರು. ಆಗಷ್ಟೇ ಹಂಸಲೇಖಾರವರು ತಮ್ಮ ದೇಸೀ ಸಂಗೀತ ಶಾಲೆಯ ಕನಸನ್ನು ಕಾಣುತ್ತಿದ್ದ ಸಮಯಕ್ಕೆ ಸರಿಯಾಗಿ ರಘು ಹಂಸಲೇಖರ ಬಳಿ ಶಿಷ್ಯವೃತ್ತಿಯನ್ನು ಸ್ವೀಕರಿಸಿದ್ದ. ಅಲ್ಲಿಂದಲೇ ರಘು ಶಾಸ್ತ್ರೀಯವಾಗಿ ಸಂಗೀತ ಪಾಠವನ್ನು ಆರಂಭಿಸಿ, ಬೆರಳು ಕೊಟ್ಟರೇ ಹಸ್ತವನ್ನು ನುಂಗಿವಷ್ಟು ಚುರುಕಾಗಿದ್ದವ, ನೋಡ ನೋಡುತ್ತಿದ್ದಂತೆಯೇ ಹಂಸಲೇಖಾರ ಸಂಗೀತ ಗರುಡಿಯಲ್ಲಿ ಪಳಗಿ ಹಾಡುಗಾರಿಕೆ, ಕೀಬೋರ್ಡ್, ಮೆಲೋಡಿಕಾ, ಗಿಟಾರ್ ಹೀಗೆ ಹತ್ತು ಹಲವಾರು ವಿಧಗಳ ಸಂಗೀತ ಪ್ರಾಕಾರಗಳಲ್ಲಿ ತಕ್ಕಮಟ್ಟಿಗೆ ಸಿದ್ಧ ಹಸ್ತನಾಗಿ ಹೋದ. ಹಂಸಲೇಖಾರವರ ತಂಡದ ಟ್ರಾಕ್ ಸಿಂಗರ್ ಆಗಿ, ಕೀಬೋರ್ಡ್ ಪ್ಲೇಯರ್ ಆಗಿ ಖಾಯಂ ಸದಸ್ಯನಾಗುವಷ್ಟರಲ್ಲಿ ಎಂಟು ವರ್ಷಗಳಷ್ಟು ಸುದೀರ್ಘವಾದ ಕಾಲ ಕಳೆದು ಹೋದದ್ದೇ ಗೊತ್ತಾಗಲೇ ಇಲ್ಲ.

ಹಂಸಲೇಖರವರ ದೇಸೀ ಸಂಗೀತ ಶಿಕ್ಷಣ ಪದ್ದತಿಯನ್ನು ಚೆನ್ನಾಗಿ ಅಭ್ಯಸಿದ್ದರಿಂದ ಅದನ್ನೇ ಹತ್ತಾರು ವಿದ್ಯಾರ್ಥಿಗಳಿಗೆ ಕಲಿಸುತ್ತಲೇ ತನ್ನ ಜೀವನನ್ನೇಕೆ ರೂಪಿಸಿಕೊಳ್ಳಬಾರದು ಎಂದು ತೀರ್ಮಾನಿಸಿ, ಗುರುವಿನ ಆಶೀರ್ವಾದ ಪಡೆದು ಮೊದಲ ನಾಲ್ಕೈದು ವರ್ಷಗಳ ಕಾಲ ನಗರದ ಅನೇಕ ಪ್ರಖ್ಯಾತ ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠವನ್ನು ಹೇಳಿಕೊಡುತ್ತಲೇ ದೂರ ಶಿಕ್ಷಣದಡಿಯಲ್ಲಿ ತನ್ನ ಪದವಿಯನ್ನೂ ಪೂರೈಸಿದ ರಘುವಿಗೆ ಕ್ರಮೇಣ ಒಂದೊಂದೇ ಸಣ್ಣ ಸಣ್ಣ ಕೆಲಸಗಳು ಲಭಿಸುತ್ತಾ, ತನ್ನ ಸಂಗೀತ ಸಂಯೋಜನೆಯಲ್ಲಿನ ಅನುಭವವನ್ನು ವೃದ್ಧಿಸಿಕೊಂಡು ಹತ್ತಾರು ಸಂಗೀತದ ಆಲ್ಬಂಗಳಿಗೆ ಸಂಗೀತ ಸಂಯೋಜನೆ ಮಾಡಿ ನಂತರ ಕನ್ನಡ ಮತ್ತು ತುಳು ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡುವುದರಲ್ಲಿಯೂ ಯಶಸ್ವಿಯಾದ. ಸಂಗೀತದಲ್ಲಿ ಇಷ್ಟೆಲ್ಲಾ ಪ್ರಗತಿಗಳನ್ನು ಸಾಧಿಸಿದ್ದರೂ ಸಹಾ ಹಂಸಲೇಖರವರೊಂದಿಗಿನ ಗುರು ಶಿಷ್ಯ ಅನುಬಂಧವಂತೂ ಹಾಗೆಯೇ ಅವಿನಾಭಾವವಾಗಿ ಮುಂದುವೆರೆದುಕೊಂಡು ಹೋಗುತ್ತಲೇ ಇತ್ತು.

ತನ್ನ ಸಂಗೀತ ಸಂಯೋಜನೆಗಾಗಿ, ಹಾಡುಗಳ ಧ್ವನಿಮುದ್ರಣಕ್ಕೆ, ಸಂಕಲನ ಮಾಡುವುದಕ್ಕೆ ಹೀಗೆ ಒಂದು ಹಾಡು ಸುಂದರವಾಗಿ ತನ್ನ ಮನದಲ್ಲಿರುವಂತೆಯೇ ಮೂಡಿ ಬರಲು ಹತ್ತಾರು ಸ್ಟುಡಿಯೋಗಳನ್ನು ಸುತ್ತಿ ಬರುವುದರಲ್ಲಿಯೇ ತನ್ನ ಅಮೂಲ್ಯ ಸಮಯ ಕಳೆದುಹೋಗುತ್ತಿದ್ದದ್ದನ್ನು ಮನಗಂಡ ರಘು ಎಲ್ಲಾ ಸಂಗೀತಗಾರರ ಅಪೇಕ್ಷೆಯಂತೆಯೇ ತನ್ನದೇ ಆದ ಸ್ವಂತದ್ದೊಂದು ಸ್ಟುಡಿಯೋವೊಂದನ್ನು ಏಕೆ ಆರಂಭಿಸಬಾರದು? ಎಂದು ಯೋಚನೆ ಮಾಡುತ್ತಿದ್ದಂತೆಯೇ ಅದಕ್ಕೆ ರಾಯರ ಅನುಗ್ರಹವೂ ದೊರೆತು ಹತ್ತಾರು ಹಿತೈಷಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ಸಹಕಾರಗಳಿಂದಾಗಿ ಚಿಕ್ಕದಾದರೂ, ಚೊಕ್ಕದಾದ ರಘುವಿನ ಕನಸಿನ ಕೂಸಾದ ಸ್ವರಾಂಜಲಿ ಸ್ಟುಡಿಯೋ ಸಿದ್ಧವಾಯಿತು.

ಕೈಯ್ಯಲ್ಲಿ ಹತ್ತಾರು ಕೆಲಸವಿದೆ. ಸ್ಟುಡಿಯೋ ಕೂಡಾ ಸಿದ್ಧವಾಗಿದೆ. ಅದರ ಅಧಿಕೃತ ಉದ್ಘಾಟನೆಯನ್ನು ತನಗೆ ಸಂಗೀತದ ಓಂಕಾರವನ್ನು ಕಲಿಸಿದ ಗುರುಗಳಾದ ಹಂಸಲೇಖಾರವರ ಅಮೃತ ಹಸ್ತದಿಂದಲೇ ಆಗಬೇಕು ಎಂಬುದು ರಘುವಿನ ಧೃಢ ಸಂಕಲ್ಪವಾಗಿತ್ತು. ಹೇಳೀ ಕೇಳೀ ಹಂಸಲೇಖರವರು ಹತ್ತಾರು ಕೆಲಸಗಳಲ್ಲಿ ಸದಾಕಾಲವೂ ನಿರತರಾಗಿರುವ ಕಾರಣ, ಅವರ ಸಮಯ ಸಿಗುವುದೇ ಸ್ವಲ್ಪ ಕಷ್ಟವಾದರೂ, ಏನೇ ಆಗಲೀ, ಎಷ್ಟೇ ದಿನವಾಗಲೀ ಗುರುಗಳಿಂದಲೇ ತನ್ನ ಸ್ಟುಡಿಯೋ ಆರಂಭ ಮಾಡಿಸಲೇಬೇಕು ಎನ್ನುವುದು ರಘುವಿನ ಆಸೆಯಾಗಿತ್ತು.

ಛಲ ಬಿಡದ ತ್ರಿವಿಕ್ರಮನಂತೆ, ಗುರುವಿನ ಬೆನ್ನು ಹತ್ತಿದ. ಗುರುಗಳೂ ಸಹಾ ಬರಲು ಒಪ್ಪಿಗೆ ಸೂಚಿಸುತ್ತಿದ್ದಂತೆಯೇ ರಘುವಿಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿತ್ತು ಕೂಡಲೇ ತನ್ನ ಸ್ಟುಡಿಯೋ ಉದ್ಘಾಟನೆಗಾಗಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿರುವಾಗ, ತನ್ನ ಸ್ಟುಡಿಯೋ ಇತರೇ ಸ್ಟುಡಿಯೋಗಳಿಗಿಂತಲೂ ವಿಭಿನ್ನವಾಗಿರಬೇಕು. ತನ್ನ ಸ್ಟುಡಿಯೋ ಒಳಗೆ ಬರುತ್ತಿದ್ದಂತೆಯೇ ಸಂಗೀತ ವಾತಾವರಣ ತಂತಾನೇ ಬರಬೇಕು ಎಂಬ ಕಲ್ಪನೆ ಮನದಲ್ಲಿ ಮೂಡಿತು.

ಸಾಧಾರಣವಾಗಿ ಎಲ್ಲರ ಮನೆಗಳಲ್ಲಿನ ದೇವರ ಮನೆಗಳಲ್ಲಿ ದೇವರ ಪ್ರತಿಮೆಗಳು ಮತ್ತು ಫೋಟೋಗಳನ್ನು ಇಟ್ಟು ಪೂಜಿಸುತ್ತೇವೆ. ಅದೇ ರೀತಿ ಮನೆಗಳಲ್ಲಿ ಗುರು ಹಿರಿಯರ ಮತ್ತು ನಮ್ಮ ನೆಚ್ಚಿನ ನಾಯಕರುಗಳ ಫೋಟೋವನ್ನು ಇಟ್ಟು ಆದನ್ನು ಪ್ರತಿ ದಿನವೂ ನೋಡುವ ಮುಖಾಂತರ ಅವರ ಪ್ರಭಾವ ನೆಮ್ಮೆಲ್ಲರ ಮೇಲೂ ಆಗಲಿ ಎನ್ನುವುದು ಇದರ ಉದ್ದೇಶವಾಗಿದೆ. ಅಂದು ಏಕಲವ್ಯ ಗುರು ದ್ರೋಣಾಚಾರ್ಯರ ಮಣ್ಣಿನ ಪ್ರತಿಮೆ ಮಾಡಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ, ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ತಮ್ಮ ಗುರುಗಳಾದ ಶ್ರೀ ಹಂಸಲೇಖರವರ ತೈಲವರ್ಣಚಿತ್ರವನ್ನು ತಮ್ಮ ಈ ಸ್ಟುಡಿಯೋವಿನ ಮುಂದೆ ಮೂಡಿಸಿದ್ದಾರೆ ರಘು. ಈ ಮೂಲಕ ಸ್ವರಾಂಜಲೀ ಸ್ಟುಡಿಯೋ ಪ್ರವೇಶ ಮಾಡುವ ಪ್ರತಿಯೊಬ್ಬರಿಗೂ ಹಸನ್ಮುಖಿ ಹಂಸಲೇಖಾರವರ ಮುಖಾರವಿಂದವನ್ನು ನೋಡುತ್ತಿದ್ದಂತೆಯೇ ಮನಸ್ಸಿಗೆ ಆಹ್ಲಾದಕರ ಅನುಭವವಾಗಿ ಹಂಸಲೇಖರಂತೆಯೇ ಸ್ಪೂರ್ತಿ ಹೊಮ್ಮಿ ಅನನ್ಯವಾದ ಮಾಧುರ್ಯಗಳು ಮೂಡಿ ಬರುತ್ತದೆ ಎಂದರೂ ತಪ್ಪಾಗಲಾರದು.

ಶಾರ್ವರೀ ಸಂವತ್ಸರದ ಮಾಘ ಬಹುಳ ಚೌತಿ ಅಂದರೆ 3.3.2021 ಬುಧವಾರದಂದು ನಾದಬ್ರಹ್ಮ ಹಂಸಲೇಖರವರು ನಿಗಧಿತ ಸಮಯಕ್ಕೆ ಸರಿಯಾಗಿ ಆಗಮಿಸಿ ಚಿಕ್ಕದಾದರೂ ಶಿಷ್ಯನಿಗೆ ಅತ್ಯಂತ ಹೃದಯಸ್ಪರ್ಶಿ ಮತ್ತು ಉತ್ತೇಜಕರೀತಿಯಲ್ಲಿ ಹಿತವಚನಗಳನ್ನು ನುಡಿದು, ಗುರುಡಿ (ಗುರು+ಗರುಡಿ) ಎಂಬ ಹೊಸಾ ಪದವನ್ನು ಪರಿಚಯಿಸಿ, ಸ್ಟುಡಿಯೋವನ್ನು ಉಧ್ಘಾಟನೆ ಮಾಡಿ, ತಮ್ಮ ನೆಚ್ಚಿನ ಹಾರ್ಮೋನಿಯಂ ನುಡಿಸುವ ಮೂಲಕ ಸಾಂಕೇತಿಕವಾಗಿ ಮುದ್ರಣವನ್ನೂ ಮಾಡುವ ಮೂಲಕ ಸ್ವರಾಂಜಲಿಗೆ ಅಧಿಕೃತವಾಗಿ ಚಾಲನೆ ನೀಡಿದರು.

ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗಬೇಕಿದ್ದರೆ, ಮುಂದೆ ಒಂದು ಸ್ಪಷ್ಟವಾದ ಗುರಿ ಇರಬೇಕು ಮತ್ತು ಹಿಂದೆ ದಿಟ್ಟತನದ ನಿಸ್ವಾರ್ಥ ಗುರು ಇರಬೇಕು ಎನ್ನುವಂತೆ ತಮ್ಮ ಶಿಷ್ಯನ ಗುರಿಯು ಯಶಸ್ವಿಯಾಗಲೆಂದು ಅತನೊಂದಿಗೆ ಸದಾಕಾಲವೂ ಇದ್ದು ಆತನ ಯಶಸ್ವಿಗೆ ಕಾರಣೀಭೂತರಾಗುತ್ತಿರುವ ಹಂಸಲೇಖಾರವರು ನಿಜಕ್ಕೂ ಅಭಿನಂದನಾರ್ಹರು ಮತ್ತು ಶ್ಲಾಘನೀಯರು ಎಂದರೂ ಅತಿಶಯೋಕ್ತಿಯೇನಲ್ಲ.

ನಮ್ಮ ಮಕ್ಕಳು ಕೇವಲ ಡಾಕ್ಟರ್, ಇಂಜಿನಿಯರ್ ಇಲ್ಲವೇ ಚಾರ್ಟಡ್ ಅಕೌಂಟೆಂಟ್ ಆಗಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡಬೇಕು ಎಂದು ಯೋಚಿಸುವವರಿಗೆ ಕೇವಲ ಈ ವೃತ್ತಿಯಿಂದಲ್ಲದೇ, ಸಂಗೀತದ ಪ್ರವೃತ್ತಿಯಿಂದಲೂ ನೆಮ್ಮದಿಯ ಜೀವನ ನಡೆಸ ಬಹುದು ಎನ್ನುವುದಕ್ಕೆ ರಘು ಧನ್ವಂತ್ರಿಯ ಈ ಸ್ವರಾಂಜಲೀ ಸ್ಟುಡಿಯೋ ಮಾಸರಿಯಾಗಿದೆ ಮತ್ತು ಪ್ರೇರಣೆಯಾಗಿದೆ.

ತಮ್ಮ ಜೀವನದಲ್ಲಿ ,ತನ್ನ ಸಾಧನೆಗೆ ಗುರುವಾಗಿ ಮಾರ್ಗದರ್ಶಕರಾಗಿ, ನಿಂತು ಸಹಾಯ ಮಾಡಿದ ಹಂಸಲೇಖರನ್ನು ಮರೆಯದೇ ಅವರಿಂದಲೇ ತನ್ನ ಹೊಸಾ ಕನಸಿಗೆ ಓಂಕಾರವನ್ನು ಹಾಡಿಸಿದ ರಘು ಧನ್ವಂತ್ರಿಯ ಸ್ವರಾಂಜಲೀ ಸ್ಟುಡಿಯೋ ಅತ್ಯಂತ ಯಶಸ್ವಿಯಾಗಲಿ ಮತ್ತು ಈ ಸ್ಟುಡಿಯೋವಿನ ಮೂಲಕ ಸಾವಿರಾರು ಸಂಗೀತ ಕಲಾವಿದರುಗಳು ಈ ನಾಡಿಗೆ ಪರಿಚಯವಾಗಲಿ, ತನ್ಮೂಲಕ ನಮ್ಮೆಲ್ಲರ ಮನಸ್ಸಿಗೆ ಮುದ ನೀಡುವ ಸಂಗೀತ ಮೂಡಿಬರಲಿ ಎಂದು ಹಾರೈಸೋಣ.

ಏನಂತೀರೀ?

ನಿಮ್ಮವನೇ ಉಮಾಸುತ

One thought on “ಸ್ವರಾಂಜಲಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s