ಶ್ರೀ ಸನಾತನ ವೇದಪಾಠ ಶಾಲೆಯ ಅವಿಸ್ಮರಣೀಯ ಮಹಾ ರುದ್ರಯಾಗ

ವೇ.ಬ್ರ.ಶ್ರೀ. ಹರೀಶ್ ಶರ್ಮಾರವರ ನೇತೃತ್ವದಲ್ಲಿ ಶ್ರೀ ಸನಾತನ ವೇದಪಾಠ ಶಾಲೆ ಕಳೆದ ನಾಲ್ಕು ವರ್ಷಗಳಿಂದಲೂ ಬೆಂಗಳೂರಿನ ವಿದ್ಯಾರಣ್ಯಪುರದ ಸುತ್ತಮುತ್ತಲಿನ ಆಸ್ತಿಕ ಬಂಧುಗಳಿಗೆ ಹೆಂಗಸರು ಮತ್ತು ಗಂಡಸರು ಎಂಬ ಬೇಧ ಭಾವವಿಲ್ಲದೇ, ವೇದ ಮಂತ್ರಗಳು, ದೇವಾತಾರ್ಚನೆ, ನಿತ್ಯಪೂಜೆ ಮತ್ತು ವೇದ ಮಂತ್ರಗಳನ್ನು ವಿದ್ಯಾರಣ್ಯಪುರದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಲಿಸುಕೊಡುತ್ತಿದ್ದಾರೆ. ತನ್ಮೂಲಕ ಆಬಾಲಾವೃದ್ಧರಾದಿಗಾಗಿ ನೂರಾರು ವಿದ್ಯಾರ್ಥಿಗಳು ಸಂಧ್ಯಾವಂದನೆ ಮಂತ್ರಗಳು, ರುದ್ರ, ಚಮಕ, ಎಲ್ಲಾ ದೇವಾನು ದೇವತೆಗಳ ಸೂಕ್ತವನ್ನು ಕಲಿತುಕೊಂಡು ಸನಾತನ ಧರ್ಮಾಧಾರಿತವಾಗಿ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

2020-21ರಲ್ಲಿ ವಿಶ್ವಾದ್ಯಂತ ಕರೋನಾ ಮಹಾಮಾರಿ ಆವರಿಸಿಕೊಂಡು ಒಂದು ರೀತಿಯಲ್ಲಿ ಇಡೀ ವಿಶ್ವವನ್ನೇ ತಲ್ಲಣ ಗೊಳಿಸಿದ್ದಲ್ಲದೇ, ಸ್ಥಬ್ಧವನ್ನಾಗಿಸಿತ್ತು. ಲಕ್ಷಾಂತರ ಮಂದಿಯ ಅಕಾಲಿಕ ಮರಣವಲ್ಲದೇ ಅದಕ್ಕ್ ಹತ್ತು ಪಟ್ಟು ಜನ ಕರೋನಾ ಮಾಹಾಮಾರಿಗೆ ತುತ್ತಾಗಿ ಸತ್ತು ಸತ್ತು ಬದುಕುವ ಮೂಲಕ ಒಂದು ರೀತಿಯ ಅಸಹನೀಯವಾದ ವಾತಾವರಣವನ್ನು ಮೂಡಿಸಿತ್ತು. ಇಂತಹ ಸಂದರ್ಭದಲ್ಲಿ ಶ್ರೀ ಸನಾತನ ವೇದಪಾಠ ಶಾಲೆಯ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಅನ್ಯೋನ್ಯ ಸಹಾಯಾರ್ಥವಾಗಿ ಮಹಾರುದ್ರಯಾಗವನ್ನೇಕೆ ಮಾಡಬಾರದು ಎಂದು ವೇ.ಬ್ರ.ಶ್ರೀ. ಹರೀಶ್ ಶರ್ಮ ಮತ್ತು ಜ್ಯೋತಿಷ್ಯ ವಿದ್ವಾನ್ ನಿರಂಜನ ಶಾಸ್ತ್ರಿಗಳು ಸಂಕಲ್ಪ ಮಾಡಿ, ಅದರಂತೆ ಶಾರ್ವರಿ ಸಂವತ್ಸರ ಫಾಲ್ಗುಣಮಾಸ ಶುದ್ಧ ಪಾಡ್ಯಮಿ ಅರ್ಥಾತ್ 14.03.2021 ಭಾನುವಾರದಂದು ಬೆಂಗಳೂರಿನ ವಿದ್ಯಾರಣ್ಯಪುರದ ಶ್ರೀ ವಿದ್ಯಾಗಣಪತಿ ಮತ್ತು ಶ್ರೀ ಸಾಯಿಬಾಬ ದೇವಾಲಯಗಳ ಸಂಕೀರ್ಣದ ಆವರಣದಲ್ಲಿ ಮಹಾ ರುದ್ರಯಾಗವನ್ನು ನಡೆಸಲು ನಿರ್ಧರಿಸಲಾಯಿತು.

ಇದರ ಪ್ರಯುಕ್ತವಾಗಿ 1×1=1 ಒಬ್ಬರು ಒಂದುದಲ ರುದ್ರಮಂತ್ರ ಪಠಿಸಿದರೆ, ಏಕವಾರ. 1×11=11 ಒಬ್ಬರೇ 11 ಸಲ ಪಠಿಸಿದರೆ, ಏಕಾದಶವಾರ, 11×11=121 ಒಬ್ಬರೇ 11 ದಿನಗಳ ಕಾಲ ಪ್ರತೀ ದಿನವೂ 11 ಸಲ ಪಠಿಸಿದರೆ, ರುದ್ರೈಕಾದಶನಿ (ಶತ ರುದ್ರಾಭಿಷೇಕ), 121×11=1331 ಅಂತಹ 11 ಜನರು 121 ಬಾರಿ ಪಠಿಸಿದರೆ, ಮಹಾ ರುದ್ರಾವಾಗುತ್ತದೆ ಎಂಬ ಲೆಖ್ಖಾಚಾರದಲ್ಲಿ ವೇದಪಾಠ ಶಾಲೆಯ ಹಿರಿಯ 11ವಿದ್ಯಾರ್ಥಿಗಳು 11 ದಿನ 11 ಬಾರಿ ಒಟ್ಟು 1331 ರುದ್ರ ಪಠಣ ಮಾಡುವ ಸಂಕಲ್ಪವನ್ನು ಮಾಡಲಾಯಿತಾದರೂ ಭಗವಂತನ ಅನುಗ್ರಹದಿಂದ ಅಂದು ಕೊಂಡಿದ್ದಕ್ಕಿಂತಲೂ ಮೂರ್ನಾಲ್ಕು ಪಟ್ಟು ಹೆಚ್ಚಿನ online & offline ವಿದ್ಯಾರ್ಥಿಗಳು ರುದ್ರ ಪಠಣದ ಸಂಕಲ್ಪದಲ್ಲಿ ಭಾಗಿಯಾಗಿದ್ದದ್ದು ಗಮನಾರ್ಹವಾಗಿತ್ತು.

ಚೊಚ್ಚಲ ಈ ಪ್ರಯತ್ನದಲ್ಲಿ ಸರಳವಾಗಿ ಸಂಭ್ರಮದಿಂದ ಮಾಡುವ ಸಂಕಲ್ಪ ತೊಟ್ಟಿದ್ದೇ ತಡಾ, ಒಳ್ಳೆಯ ಕೆಲಸಕ್ಕೆ ಭಗವಂತನ ಅನುಗ್ರಹ ಸದಾಕಾಲವೂ ಇರುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಹತ್ತಾರು ಸಹೃದಯೀ ಆಸ್ತಿಕ ಬಂಧುಗಳು ವಿವಿಧ ರೀತಿಯಲ್ಲಿ ಸಹಾಯ ಮಾಡಲು ಮುಂದಾದಂತೆಲ್ಲಾ ಕಾರ್ಯಕ್ರಮದ ಗತಿಯೇ ಬದಲಾಯಿತು. ಮುಂದೆ ಗುರಿ ಇದ್ದು ಹಿಂದೆ ಒಳ್ಳೆಯ ಗುರುವಿದ್ದಲ್ಲಿ ಎಂತಹ ಕಾರ್ಯವನ್ನಾದರೂ ಯಶಸ್ವಿಯಾಗಿ ಸಾಧಿಸಬಹುದು ಎಂಬಂತೆ ಇಂತಹ ಮಹಾಯಾಗಕ್ಕೆ ಒಳ್ಳೆಯ ಗುರುಗಳ ಸಾರಥ್ಯದಲ್ಲಿಯೇ ನಡೆಸೋಣ ಎಂದು ತೀರ್ಮಾನಿಸಿ, ಸಂಗೀತದಲ್ಲಿ ಹೇಗೆ ಎಂ.ಎಸ್. ಸುಬ್ಬಲಕ್ಷ್ಮಿಯವರು ಪ್ರಖ್ಯಾತರೋ ಹಾಗೆಯೇ ವೇದ ಮಂತ್ರ ಪಠಣದಲ್ಲಿ ಪ್ರಖ್ಯಾತರಾದ ಚಳ್ಳಕೆರೆ ಸಹೋದರರಾದ ವೇ.ಬ್ರ.ಶ್ರೀ ವೇಣುಗೋಪಾಲ ಗುರೂಜಿ ಮತ್ತು ವೇ.ಬ್ರ.ಶ್ರೀ ಶ್ರೀನಿವಾಸನ್ ಗುರೂಜಿ ಅವರನ್ನೊಮ್ಮೆ ವಿಚಾರಿಸಿ ನೋಡೋಣ ಎಂದು ತೀರ್ಮಾನಿಸಿ, ಬಹಳ ಗೌರವಾದರಗಳಿಂದ ಅವರ ಬಳಿ ನಮ್ಮ ಮನವಿಯನ್ನಿಟ್ಟ ಕೂಡಲೇ ಮರುಮಾತಿಲ್ಲದೇ ಒಪ್ಪಿಕೊಂಡದ್ದು ಆಯೋಜಕರಿಗೆ ನೂರು ಆನೆಗಳ ಬಲ ಬಂದಿತ್ತು. ಕೂಡಲೇ ಕರಪತ್ರ ಮತ್ತು ಭಿತ್ತಿಪತ್ರವನ್ನು ಮುದ್ರಿಸಿ ಎಲ್ಲಾ ಆಸ್ತಿಕ ಬಂಧುಗಳಿಗೆ ಈ ಶುಭಸಮಾಚಾರವನ್ನು ತಿಳಿಸಿ, ದೇವಸ್ಥಾನಗಳು ಮತ್ತು ಸಮಾಜದ ಗಣ್ಯವ್ಯಕ್ತಿಗಳನ್ನು ಖುದ್ದಾಗಿ ಭೇಟಿ ಮಾಡಿ ಎಲ್ಲರನ್ನೂ ಆಹ್ವಾನಿಸಿ ಬಂದಾಯಿತು.

ಮಹಾರುದ್ರ ಯಾಗದ ತಯಾರಿ ಮತ್ತು ಆಚರಣೆಯ ಕುರಿತಂತೆ ಕೆಲಸಗಳನ್ನು ಪಟ್ಟಿ ಮಾಡಿ ಮೂರ್ನಾಲ್ಕು ಬೈಠಕ್ಕುಗಳು ನಡೆಸಿ ಎಲ್ಲಾ ಕೆಲಸ ಕಾರ್ಯಗಳನ್ನು ಸ್ವಯಂಸೇವಕರುಗಳಿಗೆ ಹಂಚಿಕೆ ಮಾಡಿದ್ದೂ ಮುಗಿದಿತ್ತು. ಶಿವರಾತ್ರಿ ಮುಗಿದ ಮಾರನೇ ದಿನದಿಂದಲೇ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಒಂದು ರೀತಿಯ ಸಂಭ್ರಮ ಸಡಗರಗಳು ಅರಂಭವಾಗಿದ್ದವು. ಕಾರ್ಯಕ್ರಮಕ್ಕೆ ಎರಡು ದಿನಗಳ ಮುಂಚೆಯೇ ದೇವಸ್ಥಾನದ ಆವರಣದಲ್ಲಿ ಶಾಮಿಯಾನ ಹಾಕಿ ಅಲ್ಲಿ ವೇದಿಕೆ ಸಿದ್ಧವಾಗುತ್ತಿದ್ದಂತೆಯೇ ಬಾಕಿ ಇದ್ದ ಕೆಲಸಗಳೆಲ್ಲವೂ ಚುರುಕಾದವು. ಮಹಾರುದ್ರಯಾಗದ ಹಿಂದಿನ ದಿನ ಶನಿವಾರ ಬೆಳಿಗ್ಗೆಯಿಂದಲೇ ಹೋಮಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳೂ ಒಂದೊಂದಾಗಿ ಬಂದು ಸೇರ ತೊಡಗಿದವು. ಸಂಜೆ 5 ಗಂಟೆಯ ಹೊತ್ತಿಗೆಲ್ಲಾ ವೇದಿಕೆಯ ಎತ್ತರದ ಸ್ಥಳದಲ್ಲಿ ಭವ್ಯವಾದ ಶಿವ ಪಾರ್ವತಿಯರು ವಿರಾಜಮಾನವಾದರೆ ಅದರ ಕೆಳಗೆ ಕಳಸಗಳು ವಿವಿಧ ದೇವರುಗಳ ಪಟಗಳು ಮತ್ತು ಅಭಿಷೇಕ ಮಾಡುವುದಕ್ಕಾಗಿ ಶಿವ ಲಿಂಗ ಎಲ್ಲವೂ ಸಿದ್ದವಾಗಿದ್ದವು. ಯಾಗ ಮಂಟಪದ ಸುತ್ತ ಮುತ್ತಲೂ ತಳಿರು ತೋರಣಗಳು ಮತ್ತು ಹೂವಿನ ಅಲಂಕಾರದಿಂದ ನಳ ನಳಿಸುತ್ತಿತ್ತು.

13.03.21 ಶನಿವಾರ ಸಂಜೆ ಸುಮಾರು 6:30 ಕ್ಕೆ ದೀಪಾರಾಧನೆ ಮತ್ತು ಗುರು ಪ್ರಾರ್ಥನೆಯ ಮುಖಾಂತರ ಅರಂಭವಾಗಿ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಲೆಂದು ಗಣಪತಿಯ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ ಮತ್ತು ಮಹಾ ಸಂಕಲ್ಪಗಳು ನಡೆದು, ಪಂಚ ಗವ್ಯ ಸ್ನಪನ, ಋತ್ವಿಕ್ಚರಣ ನಡೆಸಿ, ಕಳಸಗಳನ್ನು ಸ್ಥಾಪಿಸಿ, ಏಕವಾರ ರುದ್ರಾಭಿಷೇಕ ನಡೆಸಿ ಅಷ್ಟಾವಧಾನ ಸೇವೆಯನ್ನು ಮಾಡಿದ ನಂತರ ಸುಮಾರು 9;15 ರ ಆಸುಪಾಸಿನಲ್ಲಿ ಮಹಾಮಂಗಳಾರತಿ ಮುಗಿಸಿ ಬಂದಿದ್ದ ಎಲ್ಲಾ ಋತ್ವಿಕರಿಗೂ ಮತ್ತು ಭಕ್ತಾದಿಗಳಿಗೂ ತೀರ್ಥ ಪ್ರಸಾದವನ್ನು ವಿನಿಯೋಗ ಸುಲಲಿತವಾಗಿ ನಡೆದಾಗ ಪಾಠಶಾಲೆಯ ವಿದ್ಯಾರ್ಥಿಗಳಲ್ಲಿ ಸಣ್ಣನೆಯ ಗೆಲುವಿನ ನಗೆ ಮೂಡಿದ್ದಂತೂ ಸುಳ್ಳಲ್ಲ.

ವಿದ್ಯಾರ್ಥಿಗಳೆಲ್ಲರೂ ಮತ್ತೊಮ್ಮೆ ಒಂದೆಡೆ ಸೇರಿ ಮಾರನೇ ದಿನ ಕಾರ್ಯಕ್ರಮ ಮತ್ತು ಎಲ್ಲರ ಜವಾಬ್ಧಾರಿಗಳನ್ನು ಮತ್ತೊಮ್ಮೆ ಮನನ ಮಾಡಿಕೊಂಡು ಮನೆ ಸೇರುವಷ್ಟರಲ್ಲಿ ಗಂಟೆ 11.00 ಆಗಿತ್ತು. ಮಾರನೇ ದಿನದ ಆತಂಕದಿಂದಾಗಿ ರಾತ್ರಿ ನಿದ್ದೆಯೇ ಬಾರದೇ ಬೆಳಿಗ್ಗೆ ಐದಕ್ಕೆಲ್ಲಾ ಎದ್ದು ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಆರಕ್ಕೇಲ್ಲಾ ಬಹುತೇಕರು ಯಾಗಮಂಟಪಲ್ಲಿ ಉಪಸ್ಥಿತರಿದ್ದು ತಮ್ಮ ತಮ್ಮ ಜವಾಬ್ಧಾರಿಗಳಲ್ಲಿ ತೊಡಗಿಸಿಕೊಂಡರು. ಒಂದು ತಂಡ ಪಾಕಶಾಲೆಯತ್ತ ಗಮನ ಹರಿಸಿದರೆ, ಮತ್ತೊಂದು ತಂಡ ಯಾಗಕ್ಕೆ ಬಂದವರಿಗೆ ಕೊಡುವ ಪ್ರಸಾದ ಕಿಟ್ ತಯಾರಿ ನಡೆಸಿತ್ತು, ಮತ್ತೊಂದು ತಂಡ ಗಣ್ಯಾತಿ ಗಣ್ಯರು ಮತ್ತು ವಿಶೇಷ ಆಹ್ವಾನಿತರಿಗೆ ಕೊಡಲು ನಿಶ್ಚಯಿಸಿದ್ದ ಫಲ ಪುಷ್ಪಗಳು ಮತ್ತು ಉಡುಗೊರೆಗಳ ಸಿದ್ದತೆ ನಡೆಸಿತ್ತು. ಋತ್ವಿಕರು ದೇವರುಗಳು ಮತ್ತು ಯಜ್ಣಮಂಟಪದ ಅಲಂಕಾರದಲ್ಲಿ ತೊಡಗಿಸಿಕೊಂಡಿದ್ದರೆ, ಪಾಠ ಶಾಲೆಯ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳು ಬಂದವರ ಪಾದರಕ್ಷೆಗಳನ್ನು ಸಾಲಾಗಿ ಜೋಡಿಸಿ ಅವರ ಆದರಾಥಿತ್ಯವನ್ನು ನೋಡಿಕೊಳ್ಳುತೊಡಗಿದರು.

ಯಾಗ ಕಾರ್ಯಗಳು ಸುಸೂತ್ರವಾಗಿ ನಡೆಸುವ ಸಲುವಾಗಿ ಯಾಗದಲ್ಲಿ ನೇರವಾಗಿ ಭಾಗಿಯಾಗಿದ್ದವರನ್ನು ಒಟ್ಟು 4 ತಂಡಗಳಾಗಿ ವಿಂಗಡಿಸಲಾಗಿತ್ತು. ಮೊದಲಿಗೆ ಪ್ರಧಾನ ಆಚಾರ್ಯರು ಕೆಂಪು ಬಣ್ಣದ ವಸ್ತ್ರದಲ್ಲಿದ್ದು ಅವರಿಗೆ ಇಡೀ ಯಾಗಮಂಟಪದ ಎಲ್ಲಾ ಕಡೆಗೂ ಓಡಾಡುವ ಅನುಮತಿ ಇತ್ತು. ಎರಡನೆಯದಾಗಿ ಯಜ್ಞದಲ್ಲಿ ನೇರವಾಗಿ ಭಾಗಿಗಳಾಗಿದ್ದ ಋತ್ವಿಕರು ಹಳದಿ ಬಣ್ಣದ ವಸ್ತ್ರದಲ್ಲಿದ್ದು ಅವರನ್ನು ಹೋಮ ಕುಂಡ 1 & 2 ರಲ್ಲಿ ವಿಭಜಿಸಿ ಅವರವರ ಹೋಮ ಕುಂಡದ ಬಳಿಯೇ ಇರಬೇಕೆಂದು ಸೂಚಿಸಲಾಗಿತ್ತು. ಇನ್ನು ಮೂರನೇಯ ತಂಡ ಮಹಾರುದ್ರಯಾಗದ ಪದಾಧಿಕಾರಿಗಳ ತಂಡವಾಗಿದ್ದು ಅವರೆಲ್ಲರೂ ಕೇಸರಿ ವಸ್ತ್ರಧಾರಿಗಳಾಗಿದ್ದು, ಅವರುಗಳು ಅವಶ್ಯಕತೆ ಇದ್ದಾಗ ಮಾತ್ರ ಸಭಾಂಗಣದಲ್ಲಿ ಪ್ರವೇಶ ಮಾಡುವ ಮತ್ತು ಉಳಿದ ಸಮಯದಲ್ಲಿ ಅವರಿಗೆ ನಿಯೋಜಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸ ಬೇಕೆಂಬ ಸೂಚನೆ ನೀಡಲಾಗಿತ್ತು. ಇನ್ನು ನಾಲ್ಕನೇ ತಂಡದ ಸ್ವಯಂಸೇವಕರು ಬಿಳೀ ವಸ್ತ್ರದಲ್ಲಿದ್ದು ಅವರಿಗೆ ನಿಯೋಜಿಸಿದ್ದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಕೋರಿಕೊಳ್ಳಲಾಗಿತ್ತು.

ಈ ಎಲ್ಲಾ ಸಿದ್ಧತೆಗಳು ಮುಗಿಯುತ್ತಿದ್ದಂತೆಯೇ ಲಗುಬಗನೆ ಉಪಹಾರವನ್ನು ಸೇವಿಸುವ ಹೊತ್ತಿಗೆ, ನಿಗಧಿತ ಸಮಯಕ್ಕೆ ಸರಿಯಾಗಿ ಚಳ್ಳಕೆರೆಯ ಸಹೋದರರು ಯಾಗ ಮಂಟಪಕ್ಕೆ ಆಗಮಿಸಿ ಅಲ್ಲಿನ ಸಿದ್ಧತೆಗಳನ್ನೊಮ್ಮೆ ಪರಿಶೀಲಿಸಿ ಅಂತಿಮ ಸೂಚನೆ ಮತ್ತು ಸಲಹೆಗಳನ್ನು ನೀಡಿದರು.

ಗಂಟೆ ಎಂಟಾಗುತ್ತಿದ್ದಂತೆಯೇ ಒಬ್ಬೊಬ್ಬರಾಗಿ ಯಾಗಕ್ಕೆ ಬರತೊಡಗಿದಂತೆಯೇ ನಿಗಧಿತ ಸಮಯಕ್ಕೆ ಸರಿಯಾಗಿ ಎರಡೂ ಹೋಮ ಕುಂಡಗಳ ಸುತ್ತಲೂ 13 ಋತ್ವಿಕರುಗಳು ಎಲ್ಲಾ ಪರಿಕರಗಳೊಂದಿಗೆ ಸಿದ್ಧವಾಗಿದ್ದರು. ಅವರ ಪರಿಚಾರಿಕೆಗೆಂದೇ ಒಂದು ತಂಡವೂ ಸಹಾ ಸಿದ್ಧವಾಗಿತ್ತು. ಚಳ್ಳಕೆರೆಯ ಸಹೋದರರು ಮತ್ತು ಅವರ ನಾಲ್ಕೈದು ಶಿಷ್ಯವೃಂದ ತಮಗೆ ನಿಗಧಿ ಪಡಿಸಿದ್ದ ಸ್ಥಳದಲ್ಲಿ ಆಸೀನರಾಗಿ ಆರಂಭದಲ್ಲಿ ಗಣಪತಿ ಪೂಜೆ, ಕರ್ಮಣಃ ಪುಣ್ಯಾಹ ಮತ್ತು ಮಹಾಸಂಕಲ್ಪ ಪ್ರಾರಂಭಿಸುವ ಹೊತ್ತಿಗೆ ಬಹುತೇಕ ಆಸ್ತಿಕ ಬಂಧುಗಳು ಯಾಗ ಮಂಟಪಕ್ಕೆ ಬಂದಿದ್ದ ಕಾರಣ ಅವರನ್ನೆಲ್ಲಾ ಅಧಿಕೃತವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಯಾಗ ಸುಸೂತ್ರವಾಗಿ ನಡೆಯುವಂತಾಗಲು ಅನುಸರಿಸ ಬೇಕಾದ ನಿಯಮಗಳನ್ನು ಸೂಕ್ಶ್ಮವಾಗಿ ತಿಳಿಸುತ್ತಿದ್ದಂತೆಯೇ, ಎರಡೂ ಹೋಮಕುಂಡಗಳಲ್ಲಿ ಶಾಸ್ತ್ರೋಕ್ತವಾಗಿ ಅಗ್ನಿ ಪ್ರತಿಷ್ಠಾಪನೆ ಮಾಡಿ ನಿಗಧಿತ ಸಮಯದಲ್ಲಿ ಮಹಾ ರುದ್ರ ಯಾಗ ಆರಂಭವಾಯಿತು.


ಎರಡೂ ಹೋಮ ಕುಂಡಗಳ ಸುತ್ತಲೂ ಕುಳಿತಿದ್ದ ಋತ್ವಿಕರ ರುದ್ರ ಪಠಣ ಒಂದೆೆಡೆಯಾದರೇ ಚಳ್ಳಕೆರೆ ಸಹೋದರ ಕಂಚಿನ ಕಂಠದ ರುದ್ರ ಪಠಣವೇ ಮತ್ತೊಂದು ಮಜಲಿನದ್ದಾಗಿತ್ತು. ಅಂತಹ ದಿಗ್ಗಜರ ರುದ್ರಪಠಣ ಅಕ್ಷರಶಃ ಬಂದವರೆಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದ್ದಲ್ಲದೇ ಅಂತಹ ಗೌಜು ಗದ್ದಲದ ನಡುವೆಯೂ ನಿಶ್ಯಬ್ಧವಾದ ಮೌನವನ್ನು ಮೂಡಿಸಿತ್ತು. ಒಂದು ಬಾರಿ, ಎರಡು ಬಾರಿ, ಮೂರು ಬಾರಿ ರುದ್ರಪಠಣಗಳು ನಿರ್ವಿಘ್ನವಾಗಿ ಮತ್ತು ನಿರರ್ಗಳವಾಗಿ ನಡೆಯುತ್ತಾ ಹೋದಂತೆಲ್ಲಾ ಭಕ್ತಾದಿಗಳೂ ಸೇರ ತೊಡಗಿ ಇಡೀ ಪ್ರಾಂಗಣವೇ ತುಂಬಿ ತುಳುಕುತ್ತಿತ್ತು. ಸತತವಾದ ರುದ್ರಪಠಣದ ಆಯಾಸವನ್ನು ಪರಿಹರಿಸಿಕೊಳ್ಳುವ ಸಲುವಾಗಿ ಮಧ್ಯದಲ್ಲಿ ನೀಡಿದ್ದ ಸಣ್ಣ ವಿರಾಮದಲ್ಲಿ ಭಗವಂತನಿಗೆ ಮತ್ತು ಭಕ್ತಾದಿಗಳಿಗೆ ಸಂಗೀತ ಸೇವೆ ನಡೆದರೆ, ಕಾರ್ಯಕ್ರಮದ ನಿರೂಪಕರಿಂದ ಇಂದಿನ ಯುಗದಲ್ಲಿಯೂ ಯಜ್ಞಯಾಗಗಳ ಔಚಿತ್ಯ ಮತ್ತು ಯಾಗ ಮಾಡುವುದರಿಂದ ಪರಿಸರದ ಮೇಲೇ ಆಗುವ ಸತ್ಪರಿಣಾಮಗಳನ್ನು ಭೂಪಾಲ್ ಯೂನಿಯನ್ ಕಾರ್ಬೈಡ್ ಅನಿಲ ದುರಂತದಲ್ಲಿ ಅಗ್ನಿಕಾರ್ಯ ಮಾಡಿ ಜೀವವನ್ನು ಉಳಿಸಿಕೊಂಡ ಋತ್ವಿಕರ ಉದಾಹರಣೆಯ ಸಮೇತ ವಿವರಿಸಿದಾಗಲಂತೂ ನೆರೆದಿದ್ದ ಎಲ್ಲರಿಗೂ ಯಾಗದ ಮೇಲೆ ಮತ್ತಷ್ಟು ಭಕ್ತಿ ಭಾವನೆಗಳನ್ನು ಮೂಡಿಸಿದ್ದಂತೂ ಸುಳ್ಳಲ್ಲ.

ಇವೆಲ್ಲದರ ಮಧ್ಯೆ ಆಸ್ತಿಕ ಬಂಧುಗಳ ಅನುಕೂಲಕ್ಕಾಗಿ ಸನಾತನ ಧರ್ಮಧಾರಿತ ಶ್ಲೋಕಗಳು, ಮಂತ್ರಗಳು ಮತ್ತಿತರ ಪುಸ್ತಕಗಳ ಮಳಿಗೆಯ ವ್ಯವಸ್ಥೆಯನ್ನು ಆಯೋಜಕರು ಏರ್ಪಡಿಸಿದ್ದನ್ನು ಬಂದ ಭಕ್ತಾದಿಗಳು ಸದುಪಯೋಗ ಪಡಿಸಿಕೊಂಡಿದ್ದು ಗಮನಾರ್ಹವಾಗಿತ್ತು. ಪುಸ್ತಕ ಕೊಳ್ಳುವುದರ ಜೊತೆ ಜೊತೆಯಲ್ಲಿಯೇ ಅವರ ಪಕ್ಕದಲ್ಲಿಯೇ ಕುಳಿತಿದ್ದ ಪಾಠಶಾಲೆಯ ಸ್ವಯಂಸೇವಕರ ಬಳಿ ಬಂದು ಯಾಗಕ್ಕೆ ತಮ್ಮ ಕೈಲಾದ ಮಟ್ಟಿಗಿನ ದೇಣಿಗೆ ನೀಡಿ ಸಂತೃಪ್ತ ಭಾವನೆ ಹೊಂದುತ್ತಿದ್ದದ್ದು ನಿಜಕ್ಕೂ ಮನೋಹರವಾಗಿತ್ತು.

ಸಾಮಾನ್ಯವಾಗಿ ಒಂದೆರಡು ಬಾರಿ ರುದ್ರ ಪಠಣ ಮಾಡುವಷ್ಟರಲ್ಲಿ ಬಹುತೇಕರು ಸುಸ್ತಾಗಿ ಹೋಗಿರುತ್ತಾರೆ. ಆರಂಭದಲ್ಲಿದ್ದ ಸ್ವರ ಮತ್ತು ಲಯಬದ್ಧತೆ ನಿಧಾನವಾಗಿ ಹೆಚ್ಚು ಕಡಿಮೆಯಾಗುವುದು ಸಹಜ ಪ್ರಕ್ರಿಯೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಚಳ್ಳಕೆರೆ ಸಹೋದರರು ಆರಂಭದಲ್ಲಿದ್ದ ಸ್ವರ ಮತ್ತು ಲಯಬದ್ಧತೆ ಆರನೇ ಬಾರಿ ಪಠಣ ಮಾಡುವಾಗಲೂ ಇದದ್ದು ಅವರ ಕಂಠದಿಂದ ಝೇಂಕಾರದ ಠೇಂಕಾರ ನಿಜಕ್ಕೂ ಅನನ್ಯ ಮತ್ತು ಅನುಕರಣೀಯವೇ ಸರಿ. ಹೋಮ ಕುಂಡಕ್ಕೆ ಬಗೆ ಬಗೆಯ ಸಮಿತ್ತುಗಳು, ಆಜ್ಯ, ತಿಲ ವ್ರೀಹೀ ಹವಿಸ್ಸುಗಳು ಮತ್ತು ವಿವಿಧ ಪರಿಕರಗಳನ್ನು ಸ್ವಾಹಾಕಾರದ ಮೂಲಕ ಅರ್ಪಿಸುತ್ತಿದ್ದರೆ ಅದರಿಂದ ಹೊರಬರುತ್ತಿದ್ದ ಆಹ್ಲಾದಕರ ಪರಿಮಳವನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಚೆಂದ. ಯಾಗವೆಲ್ಲವೂ ಸುಸೂತ್ರವಾಗಿ ಮತ್ತು ನಿರ್ವಿಘ್ನವಾಗಿ ನಿಗಧಿತ ಸಮಯದಲ್ಲೇ ನಡೆದು ಸಕಲ ಭಕ್ತಾದಿಗಳ ಕರಕಮಲಗಳಿಂದ ಪೂರ್ಣಾಹುತಿಯ ಪರಿಕರಗಳನ್ನು ಮುಟ್ಟಿಸಿದ ನಂತರ ಗುರುಗಳ ಸಮ್ಮುಖದಲ್ಲಿ ಏರು ಧನಿಯಲ್ಲಿ ಪೂರ್ಣಾಹುತಿ ಮಂತ್ರವನ್ನು ಪಠಿಸುತ್ತಾ ಎರಡೂ ಹೋಮ ಕುಂಡಗಳಲ್ಲಿ ಪೂರ್ಣಾಹುತಿಯನ್ನು ಸಮರಿಪಿಸುತ್ತಿದ್ದಂತೆಯೇ, ನೆರೆದಿದ್ದವರೆಲ್ಲರ ಜೋರಾದ ಕರತಾಡಣಗಳ ಸದ್ದು ಬಹುಶಃ ಕೈಲಾಸವಾಸಿ ಮಹಾರುದ್ರನಿಗೆ ಕೇಳಿಸಿರ ಬಹುದೇನೋ ಎಂದರೆ ಅತಿಶಯವೇನಲ್ಲ.

ಯಾಗ ಸುಸಂಪನ್ನವಾಗಿತ್ತಿದ್ದಂತೆಯೇ ಪ್ರಧಾನ ಆಚಾರ್ಯರರಲ್ಲಿ ಒಬ್ಬರಾದ ಶ್ರೀ ನಿರಂಜನ ಶಾಸ್ತ್ರಿಗಳು ಮಹಾರುದ್ರನಿಗೆ ಮತ್ತು ವೇದಿಕೆ ಮೇಲೆ ಸ್ಥಾಪಿಸಲಾಗಿದ್ದ ಆಷ್ಟೂ ದೇವಾನು ದೇವತೆಗಳಿಗೆ ಮತ್ತು ಕಳಸಗಳಿಗೆ ಅಷ್ಠಾವಧಾನ ಸೇವೆಯ ಜೊತೆಗೆ ಮಹಾಮಂಗಳಾರತಿ ಮಾಡಿ ಎಲ್ಲರಿಗೂ ಕುಳಿತಲ್ಲಿಯೇ ಮಹಾಮಂಗಳಾರತಿ ನೀಡಲಾಯಿತು.

ಆದಾದ ನಂತರ ಪ್ರಧಾನ ಆಚಾರ್ಯರರಲ್ಲಿ ಒಬ್ಬರಾದ ಶ್ರೀ ಹರೀಶ್ ಶರ್ಮರವರು ಯಾಗದ ಫಲಶೃತಿಯನ್ನು ಅತ್ಯಂತ ಸಂಕ್ಷಿಪ್ತವಾಗಿ ವಿವರಿಸುತ್ತಾ, ಇಂತಹ ಯಜ್ಞಯಾಗಾದಿಗಳು ಕೇವಲ ಒಬ್ಬರ ಕೈಯಲ್ಲಿ ಮಾಡುವುದು ಇಂದಿನ ಮಟ್ಟಿಗೆ ಅಸಾಧ್ಯವೇ ಸರಿ. ಇಂತಹ ಪುಣ್ಯ ಕಾರ್ಯಕ್ಕೆ ನೂರಾರು ಸಹೃದಯಿಗಳ ಸಹಕಾರದಿಂದ ಮಾತ್ರವೇ ಸಾಧ್ಯ ಎಂದು ತಿಳಿಸಿದರಲ್ಲದೇ, ಒಂದು ಕರ್ಮಕ್ಕೆ ನಾಲ್ಕು ಜನ ಸಮಭಾಗಿಗಳು ಎಂದು ತಿಳಿಸುತ್ತಾ, ಕರ್ತಾ ಕಾರಯಿತಾಶ್ಚೈವ ಪ್ರೇರಕಾಶ್ಚಾನುಮೋದಕಃ | ಸುಕೃತೇಃ ದುಕೃತೇಶ್ಚೈವ ಚತ್ವಾರಿ ಸಮಭಾಗಿನಃ || ಎಂಬ ಸುಭಾಷಿತವನ್ನು ಉಲ್ಲೇಖಿಸಿ, ಒಳ್ಳೆಯ ಕೆಲಸವೇ ಇರಲಿ, ಕೆಟ್ಟ ಕೆಲಸವೇ ಇರಲಿ, ಅದನ್ನು ಮಾಡಿದವರು, ಮಾಡಿಸಿದವರು, ಅದಕ್ಕೆ ಪ್ರೇರಣೆ ಕೊಟ್ಟವನು, ಅದನ್ನು ನೋಡಿ ಸರಿ ತಪ್ಪುಗಳನ್ನು ವಿಶ್ಲೇಷಿಸಿದೆ ಸುಮ್ಮನಿದ್ದು ಆ ಕಾರ್ಯವನ್ನು ಅನುಮೋದಿಸಿದವನು. ಈ ನಾಲ್ಕೂ ಜನರೂ ಆ ಕರ್ಮಗಳಿಗೆ ಸಮಭಾಗಿಗಳಾಗಿ ಫಲವನ್ನು ಪಡೆಯುತ್ತಾರೆ ಎಂದು ವಿವರಿಸಿದರು.

ಇದಾದ ನಂತರ ಅಂದಿನ ಯಾಗದ ಸಾರಥ್ಯವಹಿಸಿದ್ದ ಚಳ್ಳಕೆರೆ ಸಹೋದರರಲ್ಲಿ ಒಬ್ಬರಾದ, ವೇ.ಬ್ರ.ಶ್ರೀ ಶ್ರೀನಿವಾಸನ್ ಗುರೂಜಿಯವರು ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿ, ನಗರ ಪ್ರದೇಶದಲ್ಲಿ ಇಂತಹ ದೊಡ್ಡ ಪ್ರಮಾಣದಲ್ಲಿ ಯಾಗವನ್ನು ಆಯೋಜಿಸಿದ ಎಲ್ಲರನ್ನೂ ಅಭಿನಂದಿಸಿದ್ದಲ್ಲದೇ, ವಿಶೇಷವಾಗಿ ಯಾಗ ನಡೆಯುವಾಗ ಅತ್ಯಂತ ಶಾಂತ ಚಿತ್ತದಿಂದಿದ್ದು ಯಾವುದೇ ರೀತಿಯ ಅಡ್ಡಿ ಆತಂಕಗಳನ್ನು ಉಂಟು ಮಾಡದೇ ಭಗವಂತನ ಅನುಗ್ರಹಕ್ಕೆ ಪಾತ್ರರಾದ ಎಲ್ಲಾ ಭಕ್ತಾದಿಗಳನ್ನು ಅಭಿನಂದಿಸಿದರು. ಹಾಗೆಯೇ ತಮ್ಮ ಮಾತನ್ನು ಮುಂದುವರೆಸಿ, ಅಲಂಕಾರ ಪ್ರಿಯೋ ವಿಷ್ಣುಃ, ಅಭಿಷೇಕ ಪ್ರಿಯಃ ಶಿವಃ, ನಮಸ್ಕಾರಃ ಪ್ರಿಯೋ ಭಾನುಃ ಎಂಬ ಶ್ಲೋಕವನ್ನು ಉಲ್ಲೇಖಿಸಿ, ಮಹಾವಿಷ್ಣು ಅಲಂಕಾರ ಪ್ರಿಯನಾದರೇ, ಆ ಪರ ಶಿವ ಅಭಿಷೇಕ ಪ್ರಿಯನೂ ಹೌದು, ನಾದ ಪ್ರಿಯನೂ ಹೌದು. ಇನ್ನು ಪ್ರತ್ಯಕ್ಷ ದೇವರಾದ ಸೂರ್ಯ ನಮಸ್ಕಾರ ಪ್ರಿಯ. ಇಲ್ಲಿನ ಋತ್ವಿಕರ ರುದ್ರಪಠಣ ಮತ್ತು ಅರ್ಚಕರ ಆಭಿಷೇಕಗಳಿಂದಾಗಿ ಆ ಪರಶಿವ ಖಂಡಿತವಾಗಿಯೂ ತೃಪ್ತನಾಗಿರುತ್ತಾನೆ ಎಂದು ತಿಳಿಸಿದರಲ್ಲದೇ, ಎಲ್ಲರಿಗೂ ಆ ಪರಶಿವನ ಅನುಗ್ರಹವಿರಲಿ ಎಂದು ಹಾರೈಸಿದರು.

ಇಂತಹ ಮಹಾಯಾಗದ ಸಾರಥ್ಯ ವಹಿಸಿದ್ದ ವೇ.ಬ್ರ.ಶ್ರೀ. ಚಳ್ಳಕೆರೆ ಸಹೋದರರಿಗೂ, ಮತ್ತು ಈ ಯಾಗದಲ್ಲಿ ದೇಶದ ನಾನಾ ಪ್ರದೇಶಗಳಿಂದ ಆಗಮಿಸಿದ್ದ ಋತ್ವಿಕರಿಗೂ ಮತ್ತು ಯಾಗ ನಡೆಸಲು ಅನುವು ಮಾಡಿಕೊಟ್ಟ ಶ್ರೀ ವಿದ್ಯಾ ಗಣಪತಿ ದೇವಸ್ಥಾನ ಮತ್ತು ಶ್ರೀ ಸಾಯಿಬಾಬಾ ದೇವಸ್ಥಾನದ ಆಡಳಿತ ಮಂಡಳಿಯವರಿಗೂ ಮತ್ತು ಈ ಕಾರ್ಯಕ್ರಮಕ್ಕೆ ತನು ಮನ ಧನ ಮತ್ತು ವಿವಿಧ ರೀತಿಯ ಕಾಣಿಕೆಗಳನ್ನು ಸಮರ್ಪಿಸಿ ಇಡೀ ಯಾಗವನ್ನು ಅತ್ಯಂತ ಯಶಸ್ವಿಗೊಳಿಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕಾರ್ಯಕ್ರಮದ ನಿರೂಪಣೆಯ ಜವಾಬ್ಧಾರಿಯನ್ನು ಹೊತ್ತಿದ್ದ ಪಾಠಶಾಲೆಯ ವಿದ್ಯಾರ್ಥಿ ಶ್ರೀ ಶ್ರೀಕಂಠ ಬಾಳಗಂಚಿಯವರು ವಂದನಾರ್ಪಣೆಯನ್ನು ಸಲ್ಲಿಸಿ, ಪಾಠಶಾಲೆಯ ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೂ ಎಲ್ಲರ ಸಹಕಾರಗಳು ಇದೇ ರೀತಿಯಾಗಿ ಇರಲಿ ಎಂದು ಕೇಳಿಕೊಳ್ಳುವ ಮೂಲಕ ಇಡೀ ಕಾರ್ಯಕ್ರಮ ಅತ್ಯಂತ ಶಾಸ್ತ್ರೋಕ್ತವಾಗಿ ಮತ್ತು ಅರ್ಥಪೂರ್ಣವಾಗಿ ಸಂಪೂರ್ಣವಾಯಿತು.

ಪಾಠಶಾಲೆಯ ವಿದ್ಯಾರ್ಥಿಗಳೆಲ್ಲರೂ ಪಾಠಶಾಲೆಯ ಗುರುಗಳು ಮತ್ತು ಚಳ್ಳಕೆರೆ ಸಹೋದರರ ಆಶೀರ್ವಾದವನ್ನು ಪಡೆದದ್ದಲ್ಲದೇ, ಈ ಕಾರ್ಯಕ್ರಮದ ಸವಿನೆನಪಿಗಾಗಿ ಅವರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡು ಸಂಭ್ರಮಿಸಿದರು.

ಬಂದಿದ್ದ ಎಲ್ಲಾ ಋತ್ವಿಕರಿಗೆ, ವಿಶೇಷ ಆಹ್ವಾನಿತರಿಗೆ ಮತ್ತು ಅವರ ಕುಟುಂಬದವರಿಗೆ ರುಚಿ ರುಚಿಯಾದ ಅಚ್ಚುಕಟ್ಟಾದ ಸುಗ್ರಾಸ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದೇ ರೀತಿ ಬಂದಿದ್ದ ಎಲ್ಲಾ ಭಕ್ತಾದಿಗಳಿಗೂ ಸಹಾ ದೇವಸ್ಥಾನದ ಆವರಣದಲ್ಲಿ ರುಚಿಯಾದ ಪ್ರಸಾದ ವಿತರಣೆಯ ವ್ಯವಸ್ಥೆಯನ್ನು ಮಾಡಿದ್ದು ಎಲ್ಲಾ ಭಕ್ತಾದಿಗಳು ತಮ್ಮ ಹೊಟ್ಟೆ ತುಂಬುವಷ್ಟು ಪ್ರಸಾದವನ್ನು ಸ್ವೀಕರಿಸಿ, ಅನ್ನದಾತಾ ಸುಖೀಭವ ಎಂದು ಹರಸಿ,, ಹರ ನಮಃ ಪಾರ್ವತೀ ಪತಯೇ ಹರ ಹರ ಮಹಾದೇವ ಎಂದು ಪರಶಿವನನ್ನು ಧ್ಯಾನಿಸುತ್ತಾ ಮತ್ತೊಮ್ಮೆ ಹೋಮ ಕುಂಡಕ್ಕೆ ಪ್ರದಕ್ಷಿಣೆ ಹಾಕಿ ಹೋಮದ ರಕ್ಷೆಯನ್ನು ತೆಗೆದುಕೊಂಡು ನಿಮ್ಮ ಪಾಠಶಾಲೆಯ ವತಿಯಿಂದ ಮುಂದಿನ ಕಾರ್ಯಕ್ರಮ ಯಾವಾಗ? ಮತ್ತು ಯಾವ ಕಾರ್ಯಕ್ರಮ? ಎಂದು ಕೇಳುತ್ತಿದ್ದದ್ದು ಅಂದಿನ ಕಾರ್ಯಕ್ರಮದ ಯಶಸ್ಸಿನ ದ್ಯೋತಕವಾಗಿತ್ತಲ್ಲದೇ, ಆಯೋಜಕರ ಜವಾಬ್ಧಾರಿಯನ್ನೂ ಹೆಚ್ಚಿಸಿದ್ದಲ್ಲದೇ ಶ್ರೀ ಸನಾತನ ಪಾಠ ಶಾಲೆಯವತಿಯಿಂದ ಪ್ರತೀ ವರ್ಷವೂ ಇಂತಹ ಪುಣ್ಯ ಕಾರ್ಯಗಳನ್ನು ನಡೆಸುವ ಸಂಕಲ್ಪಕ್ಕೆ ಪ್ರೇರಣೆ ನೀಡಿತು. ಭಗವಂತನ ಅನುಗ್ರಹ ಮತ್ತು ಸಹೃದಯೀ ಕಾರ್ಯಕರ್ತರ ತಂಡವಿದ್ದಲ್ಲಿ ಎಂತಹ ಕೆಲಸಗಳೂ ಅಸಾಧ್ಯವಲ್ಲ ಅಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s