ಅಮಾಯಕರು

ಉತ್ತರ ಪ್ರದೇಶದ ಅದೊಂದು ಹಳ್ಳಿ. ಹಳ್ಳಿ ಎಂದ ಮೇಲೆ ಅಲ್ಲಿ ಸವರ್ಣೀಯರು ಮತ್ತು ದಲಿತರು ಎಲ್ಲರೂ ವಾಸಿಸುತ್ತಿದ್ದರು ಎಂದು ಪ್ರತ್ಯೇಕವಾಗಿ ಹೇಳ ಬೇಕಿಲ್ಲ. ಅದೇ ರೀತಿ ಹಳ್ಳಿ ಎಂದ ಮೇಲೆ ನೆರೆ ಹೊರೆಯವರ ಜೊತೆ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅದೊಂದು ದಿನ ಒಬ್ಬರು ತಮ್ಮ ಸೊಸೆಯೊಂದಿಗೆ ಸೀದಾ ಪೋಲೀಸ್ ಠಾಣೆಗೆ ಹೋಗಿ ವಿಷ್ಣು ಎಂಬ 25ರ ತರುಣ ತಮ್ಮ ಮನೆಯ ಗರ್ಭಿಣಿ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಹೊಡೆದ ಆರೋಪವನ್ನು ಮಾಡಿದ್ದಲ್ಲದೇ, ತಮ್ಮ ಪ್ರಕರಣಕ್ಕೆ ಇನ್ನೂ ತೀವ್ರವಾದ ಮಹತ್ವ ಪಡೆಯಲೆಂದೇ, ವಿಷ್ಣು ತಮ್ಮ ಮೇಲೆ ಜಾತಿ ನಿಂದನೆ ಮಾಡಿದ್ದಾನೆ ಎಂಬ ಮತ್ತೊಂದು ಘನ ಘೋರ ಆರೋಪವನ್ನು ಮಾಡುತ್ತಾರೆ.

ಈ ರೀತಿಯ ಆರೋಪ ಬಂದ ಕೂಡಲೇ ಪೋಲೀಸರು ಆ ಗ್ರಾಮಕ್ಕೆ ತೆರಳಿ ಆರೋಪ ಪ್ರತ್ಯಾರೋಪವನ್ನು ವಿಚಾರಿಸುವುದಕ್ಕಿಂತಲೂ ಮುನ್ನಾ. ಅವರಿಬ್ಬರ ಹಿನ್ನಲೆಯನ್ನು ಪರಿಶೀಲಿಸಿದಾಗ ವಿಷ್ಣುವಿನ ಹೆಸರು ಪೂರ್ತಿ ಹೆಸರು ವಿಷ್ಣು ತಿವಾರಿ ಎಂದಾಗಿದ್ದು ಆತ ಜನ್ಮತಃ ಬ್ರಾಹ್ಮಣ ಎಂಬುದನ್ನು ಗಮನಿಸುತ್ತಾರೆ. ಇನ್ನು ಆರೋಪ ಮಾಡಿದವರು ಹರಿಜನರು ಎಂದು ತಿಳಿದ ಕೂಡಲೇ ಯಾವುದೇ ಹೆಚ್ಚಿನ ವಿಚಾರಣೆಗೆ ಆಸ್ಪದವೇ ನೀಡದಂತೆ ವಿಷ್ಣು ತಿವಾರಿಯನ್ನು ಜಾತಿ ನಿಂದನೆ ಆರೋಪದ ಮೇಲೆ ಕೂಡಲೇ ಬಂಧಿಸಿ ಸರೆಮನೆಗೆ ತಳ್ಳುತ್ತಾರೆ.

ವಿಷ್ಣು ಮತ್ತು ಆತನ ವಯೋವೃದ್ಧ ತಂದೆ ಮತ್ತು ತಾಯಿ, ತಮ್ಮ ಮಗ ಆ ರೀತಿಯವನಲ್ಲ. ಆ ರೀತಿಯ ಸಂಸ್ಕಾರ ನಮ್ಮದಲ್ಲ. ಆತ ಪರಸ್ತ್ರೀಯನ್ನು ಅತ್ತಿಗೆ ಎಂದೇ ಸಂಬೋಧಿಸುವಂತಹ ಸುಸಂಸ್ಕೃತ ಎಂದು ಪರಿ ಪರಿಯಾಗಿ ಬೇಡಿಕೊಂಡರೂ, ಸುಂಕದವನ ಮುಂದೆ ಸಂಕಟ ಹೇಳಿಕೊಂಡಂತಾಗುತ್ತದೇ ಹೊರತು ಪೋಲಿಸರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಐಪಿಸಿ 366 ಮತ್ತು 376 ರ ಅಡಿಯಲ್ಲಿ ದೂರುದಾರನು ದಲಿತನಾಗಿದ್ದು ಆರೋಪಿಯು ಸವರ್ಣೀಯ ಎಂದು ಕಂಡು ಬಂದಲ್ಲಿ ಯಾವುದೇ ವಿಚಾರಣೆಯಿಲ್ಲದೇ, ಬೇಲ್ ಕೂಡ ಇಲ್ಲದೇ ತಕ್ಷಣವೇ ಬಂಧಿಸುವ ಅಧಿಕಾರವಿರುವ ಕಾರಣ ಪೋಲೀಸರೂ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದರು.

ಕೆಲವು ತಿಂಗಳುಗಳ ನಂತರ ತಿವಾರಿ ಆವರಿಗೆ ಜಾಮೀನು ದೊರೆತರೂ, 2001ರಲ್ಲಿ ಮತ್ತೆ ಬಂಧಿಸಲ್ಪಟ್ಟು ಸುಮಾರು ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ ನಂತರ ಲಲಿತಪುರ ವಿಚಾರಣಾ ನ್ಯಾಯಾಲಯವು 2003 ರಲ್ಲಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುತ್ತದೆ.

ಸುಮಾರು ಎರಡು ವರ್ಷಗಳ ನಂತರ 2005 ತಿವಾರಿ ಅವರು ಈ ತೀರ್ಪಿನ ವಿರುದ್ದ ಮರುವಿಚಾರಣಾ ಅರ್ಜಿಯನ್ನು ಹಾಕಿದರಾದರೂ, ಅವರ ಅರ್ಜಿಯನ್ನು ದೋಷಯುಕ್ತವೆಂದು ಪರಿಗಣಿಸಿ ಯಾವುದೇ ಅವಕಾಶವನ್ನು ನೀಡದೇ, ಸುಮಾರು 16 ವರ್ಷಗಳ ಕಾಲ ಅವರು ಸೆರೆಮನೆಯಲ್ಲಿಯೇ ಕಾಲ ಕಳೆಯ ಬೇಕಾಗುತ್ತದೆ..

ಕೆಲ ವರ್ಷಗಳ ನಂತರ ಸೆರೆಮನೆಯಲ್ಲಿದ್ದೇ ಹಾಗೂ ಹೀಗೂ ತನ್ನ ಜಮೀನನ್ನು ಮಾರಿದ ಹಣದಿಂದ ಸೂಕ್ತ ವಕೀಲರನ್ನು ನೇಮಿಸಿಕೊಂಡು ಮೇಲ್ಮನೆ ಅರ್ಜಿಯನ್ನು ಸಲ್ಲಿಸಿದಾಗ ಅದನ್ನು ಪುರಸ್ಕರಿಸಿ ತನಿಖೆ ನಡೆಸಿದ ನ್ಯಾಯಾಲಯ, ವೈದ್ಯಕೀಯ ಸಾಕ್ಷಾಧಾರಗಳ ಪ್ರಕಾರ ಅಲ್ಲಿ ಬಲವಂತದ ಸಂಭೋಗದ ಯಾವುದೇ ಚಿಹ್ನೆಗಳಾಗಲೀ, ಆ ಮಹಿಳೆಯ ಖಾಸಗಿ ಭಾಗದಲ್ಲಿ ಯಾವುದೇ ಗಾಯಗಳಿಲ್ಲ ಮತ್ತು ಆ ಭಾಗದಲ್ಲಿ ಆರೋಪಿಯ ವೀರ್ಯವೇನೂ ಇರಲಿಲ್ಲ ಎಂದು ಪರಿಗಣಿಸಿದ್ದಲ್ಲದೇ, ಈ ಎರಡೂ ಕುಟುಂಬಗಳ ನಡುವೆ ಜಮೀನಿನ ವಿಷಯದಲ್ಲಿ ಸ್ವಲ್ಪ ತಕರಾರು ಇದ್ದನ್ನು ಪರಿಗಣಿಸಿ, ಹರಿಜನ ಕುಟುಂಬ ಹೇಗಾದರೂ ಮಾಡಿ ವಿಷ್ಣುವಿನ ಜಮೀನನ್ನು ಲಪಟಾಯಿಸುವ ಸಲುವಾಗಿ ಈ ರೀತಿಯ ಆರೋಪ ಮಾಡಿರ ಬಹುದಾದ ಕಾರಣ, ದಾಖಲೆಯ ಸಂಗತಿಗಳು ಮತ್ತು ಸಾಕ್ಷ್ಯಗಳ ದೃಷ್ಟಿಯಿಂದ, ಆರೋಪಿಯನ್ನು ತಪ್ಪಾಗಿ ಶಿಕ್ಷೆಗೊಳಪಡಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆಯಾದ ಕಾರಣ ಅವರನ್ನು ಜೀವಾವಧಿ ಶಿಕ್ಷೆಯಿಂದ ಖುಲಾಸೆಗೊಳಿಸಲಾಗುತ್ತಿದ್ದೇವೆ ಎಂದು ನ್ಯಾಯಾಲಯದ ಆದೇಶವು ತಿಳಿಸಿದೆ.

ನಿಜ ಹೇಳ ಬೇಕೆಂದರೆ, ಆತ್ಯಾಚಾರ ಸಾಭೀತಾಗಿ ಆತ ನಿಜವಾಗಿಯೂ ಆರೋಪಿ ಎಂದಾಗಿದ್ದಲ್ಲಿ ಆ ಅಪರಾಧಕ್ಕೆ ಅಧಿಕವೆಂದರೆ ಏಳು ವರ್ಷಗಳ ಶಿಕ್ಷೆಯನ್ನು ಮಾತ್ರಾ ವಿಧಿಸಬೇಕಿತ್ತು. ಅತ ಅಪರಾಧ ಮಾಡಿದ್ದರೂ 13 ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ ವಿನಾಕಾರಣ, 20 ವರ್ಷಗಳನ್ನು ವಿಷ್ಣು ತಿವಾರಿ ಕಳೆಯಬೇಕಾದದ್ದು ನಿಜಕ್ಕೂ ವಿಪರ್ಯಾಸವೇ ಸರಿ.

ಈ ಮೊದಲೇ ತಿಳಿಸಿದಂತೆ ತಿವಾರಿ 25 ವರ್ಷದ ಯುವಕನಾಗಿದ್ದಾಗ ಬಂಧಿಸಲ್ಪಟ್ಟವರು, ಈಗ 45 ವರ್ಷದ ವಯಸ್ಸಿನಲ್ಲಿ ಬಿಡುಗಡೆಯಾಗಿದ್ದಾರೆ. ಅಂದರೆ ತಮ್ಮ ಅಮೂಲ್ಯವಾದ ಯೌವನದ ಜೀವನವನ್ನೆಲ್ಲಾ ಸೆರೆಮನೆಯಲ್ಲಿಯೇ ಕಳೆದು ಬಿಟ್ಟಿದ್ದಾರೆ. ಈ ಇಪ್ಪತ್ತು ವರ್ಷಗಳಲ್ಲಿ ನಿರಪರಾಧಿಯಾದ ತಮ್ಮ ಮಗ ಸೆರೆಮನೆ ಸೇರಿದ ಕೊರಗಿನಲ್ಲಿಯೇ ಆತನ ತಂದೆ ಮತ್ತು ತಾಯಿ ವಿಧಿವಶರಾಗಿರುತ್ತಾರೆ. ಒಡ ಹುಟ್ಟಿದ ಅಣ್ಣನೂ ಸಹಾ ಮೃತಪಟ್ಟಿರುತ್ತಾನೆ. ದುರಾದೃಷ್ಟವೆಂದರೆ, ತನ್ನ ತಂದೆ,ತಾಯಿ ಮತ್ತು ಅಣ್ಣನ ಅಂತಿಮ ದರ್ಶನಕ್ಕೂ ಸಹಾ ನ್ಯಾಯಾಲಯ ಅನುಮತಿ ನೀಡದೇ ಹೋದದ್ದು ಅತ್ಯಂತ ನೋವಿನ ಸಂಗತಿ.

ಸ್ವಾತಂತ್ರ್ಯ ಪೂರ್ವದಲ್ಲಿ ದಲಿತರು ಸವರ್ಣೀಯರಿಂದ ಶೋಷಣೆಗೆ ಒಳಗಾಗಿದ್ದರು ಎಂಬ ಕಾರಣ ಅವರನ್ನು ಸಮಾಜದ ಮೇಲ್ಮಟ್ಟಕ್ಕೆ ತರುವ ಸಲುವಾಗಿ ಮತ್ತು ಸಾಮಾಜಿಕ ಸಮಾನತೆ ತರುವ ಸಲುವಾಗಿ ಸ್ವಾತಂತ್ರ್ಯಾ ನಂತರ ಸುಮಾರು ಹತ್ತು ವರ್ಷಗಳ ಕಾಲ ಮಾತ್ರವೇ ಈ ರೀತಿಯ ಮೀಸಲಾತಿ ಮತ್ತು ವಿಶೇಷ ಸವಲತ್ತುಗಳು ಇರಬೇಕು ನಂತರ ಆ ಎಲ್ಲಾ ವಿಶೇಷ ಸವಲತ್ತುಗಳು ರದ್ದಾಗಬೇಕೆಂದು ಸ್ವತಃ ಅಂಬೇಡ್ಕರ್ ಅವರೇ ಸಂವಿಧಾನದಲ್ಲಿ ತಿಳಿಸಿದ್ದರೂ, ಮುಗ್ಧ ದಲಿತರ ಓಟ್ ಬ್ಯಾಂಕಿಗಾಗಿ ಅವರನ್ನು ಮರುಳು ಮಾಡುವ ಸಲುವಾಗಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷದ ನಾಯಕರುಗಳೂ ಸುಖಾ ಸುಮ್ಮನೇ ದಲಿತರ ಓಲೈಕೆಗಾಗಿ ಈ ವಿಶೇಷ ಸೌಲಭ್ಯಗಳನ್ನು ಮುಂದುವರೆಸಿ ಕೊಂಡು ಬರುತ್ತಿರುವುದು ಈ ದೇಶದ ದೌರ್ಭಾಗ್ಯ ಎಂದರೂ ತಪ್ಪಾಗಲಾರದು.

ಈ ರೀತಿಯಾಗಿ ಜಾತಿ ನಿಂದನೆಯ ಆಪಾದನೆಯ ಸುಳ್ಳು ಆರೋಪಗಳ ಪ್ರಕರಣಗಳು ಇಂದೊಂದೇ ಏನಲ್ಲ. ಪ್ರತೀ ವರ್ಷವೂ ಇಂತಹ ಸಹಸ್ರಾರು ನಕಲಿ ಆರೋಪಗಳಿಂದಾಗಿ ಸಹಸ್ರಾರು ಅಮಾಯಕರು ಶಿಕ್ಷೆಯನ್ನು ಅನುಭವಿಸಬೇಕಾಗಿದೆ. ಕೆಲ ವರ್ಷಗಳ ಹಿಂದೆ ವಿಧಾನ ಸೌಧದ ಪಕ್ಕದಲ್ಲಿರುವ ಬಹುಮಹಡಿ ಕಟ್ಟಡದ ಲಿಫ್ಟ್ ಆಪರೇಟರ್ ಒಬ್ಬ ಲಿಫ್ಟ್ ನಲ್ಲಿ ಬರುವ ಒಂಟೀ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಲ್ಲದೇ, ಅವನ ವಿರುದ್ಧ ದೂರು ದಾಖಲಿಸಿದರೇ ಇದೇ ಜಾತಿ ನಿಂದನೆ ಕೇಸ್ ಜಡಿಯುವುದಾಗಿ ಬೆದರಿಕೆ ಹಾಕುತ್ತಿದ್ದರಿಂದ ಸುಮಾರು ವರ್ಷಗಳ ಕಾಲ ಅವನ ಅ ಕುಕೃತ್ಯ ಮುಂದುವರಿಯುತ್ತಲೇ ಇತ್ತು. ಕಡೆಗೊಮ್ಮೆ ಅದು ಹೇಗೋ ಈ ಪ್ರಕರಣ ಹೊರಗೆ ಬಂದಿತಾದರೂ ಮತ್ತೆ ತನ್ನ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಯಾವುದೇ ಶಿಕ್ಷೆ ಇಲ್ಲದೇ ಪಾರಾದ ಸಂಗತಿ ವೃತ್ತ ಪತ್ರಿಕೆಗಳಲ್ಲಿ ಓದಿದ್ದ ನೆನಪು.

ಇಂದಿಗೂ ಸಹಾ ಸರ್ಕಾರೀ ಕಚೇರಿಗಳಲ್ಲಿ ಈ ಜಾತಿನಿಂದನೆ ಎಂಬುದನ್ನೇ ಪ್ರಭಲವಾದ ಅಸ್ತ್ರವನ್ನಾಗಿಸಿಕೊಂಡು ಯಾವುದೇ ಕೆಲಸವನ್ನು ಮಾಡದೇ ಸುಮ್ಮನೆ ಸಂಬಳ ಪಡೆಯುತ್ತಿರುವ ಸಾವಿರಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ.

ಕೆಲ ವರ್ಷಗಳ ಹಿಂದೆ ನನ್ನ ಅತ್ಮೀಯ ಗೆಳೆಯನೊಬ್ಬನ ಮನೆಯ ಮುಂದಿನ ಕಸದ ತೊಟ್ಟಿಯನ್ನು ಶುದ್ಧೀಕರಿಸುವ ವಿಚಾರದಲ್ಲಿ ನನ್ನ ಗೆಳೆಯನಿಗೂ ಮತ್ತು ಪೌರ ಕಾರ್ಮಿಕನ ನಡುವೆ ವಾಗ್ವಾದ ನೆಡೆದಿತ್ತು. ಇಂತಹ ಕ್ಷುಲ್ಲಕ ವಿಚಾರಕ್ಕೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಆ ಪೌರಕಾರ್ಮಿಕ, ಕತ್ಯವ್ಯದ ಮೇಲಿದ್ದ ಸರ್ಕಾರೀ ಸೇವಕನ ಮೇಲೆ ಹಲ್ಲೆ ಮತ್ತು ಜಾತಿ ನಿಂದನೆ ಆರೋಪ ಮಾಡಿದ ಪರಿಣಾಮ ಸುಮಾರು ವರ್ಷಗಳ ಕಾಲ ನನ್ನ ಗೆಳೆಯ ಕೋರ್ಟು ಕಛೇರಿ ಅಲೆದು ಮಾನಸಿಕವಾಗಿ ಸುಸ್ತಾಗಿ ಕಡೆಗೆ ಇಬ್ಬರೂ ವಕೀಲರ ಸಮಕ್ಷಮದಲ್ಲಿ ತನ್ನ ತಪ್ಪಿಲ್ಲದಿದ್ದರೂ, ಆ ಪೌರ ಕಾರ್ಮಿಕ ಬಯಸಿದ್ದಷ್ಟು ಹಣವನ್ನು ನೀಡಿ ನ್ಯಾಯಾಲದ ಹೊರಗೆ ಪ್ರಕರಣ ಬಗೆ ಹರಿಸಿಕೊಂಡಿದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.

ಇದೇ ರೀತಿ ವರದಕ್ಷಿಣೆ ಕಾನೂನು ಸಹಾ ಹೆಣ್ಣಿನ ಪರವಾಗಿಯೇ ಇದ್ದು ಯಾವುದೇ ಜಾಮೀನು ಇಲ್ಲದೇ ಬಂಧಿಸುವ ಅಧಿಕಾರನ್ನೇ ಬಳಸಿಕೊಂದು ಧಿಮಾಕಿನ ಲಕ್ಷಾಂತರ ಹೆಂಗಸರು, ಅಮಾಯಕ ಗಂಡಸರ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ ಕೊನೆಯೇ ಇಲ್ಲವಾಗಿದೆ..

ಪ್ರಸಕ್ತ ಸರ್ಕಾರ ಜಾತಿ ನಿಂದನೆ ಮತ್ತು ವರದಕ್ಷಿಣೆ ದೂರಿನ ಪ್ರಕಾರ ಅಮಾಯಕರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿ ಆರೋಪ ಬಂದ ಕೂಡಲೇ ಆಪಾದಿತರು ತಮ್ಮ ಪರವಾಗಿ ವಕೀಲರನ್ನು ನೇಮಿಸಿಕೊಳ್ಳಬಹುದೆಂಬ ಕಾನೂನು ತಿದ್ದುಪಡಿಯನ್ನು ಕೆಲ ವರ್ಷಗಳ ಹಿಂದೆ ತಂದರೂ, ಕೆಲ ಪಟ್ಟಭದ್ರ ಹಿತಾಸಕ್ತಿಯ ಕೈವಾಡದಿಂದಾಗಿ ದೇಶಾದ್ಯಂತ ದಲಿತರ ಚಳುವಳಿ ನಡೆಸಿ ದೊಂಬಿ ಮತ್ತು ಗಲಾಟೆಗಳನ್ನು ಮಾಡೆಸಿ ಈ ಸರ್ಕಾರ ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂಬ ಆರೋಪ ಮಾಡಿ ಈ ಕಾನೂನು ಸೂಕ್ತವಾಗಿ ಜಾರಿಗೆ ಬಾರದಂತೆ ತಡೆಯುವುದರಲ್ಲಿ ಯಶಸ್ವಿಯಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಇಷ್ಟೆಲ್ಲಾ ಆದ ನಂತರ ಬಹುತೇಕರನ್ನು ಕಟ್ಟ ಕಡೆಯದಾಗಿ ಕಾಡುತ್ತಿರುವ ಪಶ್ನೆಯೆಂದರೇ,

  • ಆರೋಪ ಸುಳ್ಳು ಎಂದು ತಿಳಿದ ಮೇಲೂ ನಕಲಿ ಆರೋಪಿಗಳಿಗೆ ಶಿಕ್ಷೆ ಏಕಿಲ್ಲ?
  • ಹಣಕ್ಕಾಗಿ ವಿಚಾರಣೆಗೇ ಬಾರದೇ ವಿನಾಕಾರಣ ಕೇಸ್ಗಳನ್ನು ಮುಂದೂಡುವ ವಕೀಲರಿಗೆ ಏಕೆ ಶಿಕ್ಷೆ ಇಲ್ಲ?
  • ಪ್ರತೀ ವಿಚಾರಣೆಗೂ ಇಂತಿಷ್ಟು ಸಮಯವನ್ನೇಕೆ ನ್ಯಾಯಾಲಯ ನಿಗಧಿ ಮಾಡುವುದಿಲ್ಲ?

ನೂರು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ,ಒಬ್ಬ ನಿರಪರಾಧಿಗೆ ಶಿಕ್ಷೆಯಾಗಕೂಡದು. ಎಂಬುದು ನಮ್ಮ ದೇಶದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಧ್ಯೇಯ ಹಾಗೂ ಉದ್ದೇಶ ಆಗಿರುವುದಾದರೂ, ಈ ಎರಡು ಸಂಧರ್ಭದಲ್ಲಿ ಮಾತ್ರಾ ಇದಕ್ಕೆ ಹೊರತಾಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಸವರ್ಣೀಯರು ಆಡಿದ್ದು ಮತ್ತು ಮಾಡಿದ್ದೆಲ್ಲಾ ಅಪರಾಧವಲ್ಲ. ಎಲ್ಲಾ ಪ್ರಸಂಗಗಳಲ್ಲೂ ದಲಿತರೇ ಅಮಾಯಕರೇನೂ ಅಲ್ಲ. ಸಮಯ ಸಂಧರ್ಭ ಮತ್ತು ಪರಿಸ್ಥಿತಿಯ ಅನುಗುಣವಾಗಿ ಇಬ್ಬರದ್ದೂ ತಪ್ಪಿರುತ್ತದೆ. ಹಾಗಾಗಿ, ಅಪರಾಧಕ್ಕೆ ಯಾವುದೇ ಜಾತಿ, ಬಡವ ಮತ್ತು ಬಲ್ಲಿದ ಎಂಬ ಏಕಮುಖ ದೃಷ್ಟಿಕೋನದಿಂದ ವಿಚಾರಣೆ ನಡೆಸದೇ, ತಪ್ಪು ಮಾಡಿದವರು ಯಾವುದೇ ಜಾತಿ, ಮತ ಧರ್ಮ, ಅಂತಸ್ತು ಮತ್ತು ಅಧಿಕಾರ ಹೊಂದಿದ್ದರೂ ಶಿಕ್ಷೆಗೆ ಗುರಿ ಪಡಿಸಬೇಕಲ್ಲವೇ?

ಎಲ್ಲಕ್ಕೂ ಮಿಗಿಲಾಗಿ ನೂರಾರು ವರ್ಷಗಳ ಹಿಂದೆ ತುಳಿತಕ್ಕೆ ಒಳಗಾದವರು ಎಂಬ ನೆಪವನ್ನೇ ಮುಂದು ಮಾಡಿಕೊಂಡು ಈ ಆಧುನಿಕ ಯುಗದಲ್ಲೂ ಇದೇ ರೀತಿ ಜಾತಿ ಆಧಾರಿತವಾದ ಮೀಸಲಾತಿ ಮುಂದುವರೆಸಿಕೊಂಡು ಹೋದಲ್ಲಿ ಸಾಮಾಜಿಕ ಸಮಾನತೆ ಹೇಗೆ ತಾನೇ ಮೂಡಲು ಸಾಧ್ಯ?

ಜಾತಿ ಆಧಾರಿತವಾದ ಎಲ್ಲಾ ಮೀಸಲಾತಿಗಳನ್ನು ತೆಗೆದು, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಒಂದು ಬಾರೀ ಮಾತ್ರವೇ ಮೇಲೆತ್ತುವ ಕಾರ್ಯವಾದಲ್ಲಿ ಮಾತ್ರವೇ ದೇಶದಲ್ಲಿ ಸಾಮಾಜಿಕ ಸಮಾನತೆ ತರಬಹುದಾಗಿದೆ ಮತ್ತು ಜಾತಿ ಹೆಸರಿನಲ್ಲಿ ಅಮಾಯಕರು ಶಿಕ್ಷೆ ಅನುಭವಿಸುವುದನ್ನು ತಡೆಯಬಹುದಾಗಿದೆ.

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s