ದೋಸೆ, ಚಪಾತಿ ಅನ್ನದ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಗೊಜ್ಜುಗಳನ್ನು ಮಾಡುವುದು ಸಹಜ. ಈ ಎಲ್ಲಾ ಗೊಜ್ಜುಗಳನ್ನು ಮಾಡಲು ಬಹಳಷ್ಟು ಸಮಯ ಬೇಕಾಗುತ್ತದೆ. ಅದಕ್ಕಾಗಿಯೇ, ದಿಡೀರ್ ಎಂದು ತಯಾರಿಸಬಹುದಾದ ಮತ್ತು ಈ ಬೇಸಿಗೆಯಲ್ಲಿ ತಣ್ಣಗೆ ದೇಹದ ಆರೋಗ್ಯಕ್ಕೂ ಉತ್ತಮವಾದ ಸೌತೇಕಾಯಿ ಹಸೀ ಗೊಜ್ಜು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಸೌತೇಕಾಯಿ ಹಸೀ ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಎಳೆಯ ಸೌತೇಕಾಯಿ – 1
- ತೆಂಗಿನತುರಿ – 1 ಬಟ್ಟಲು
- ಜೀರಿಗೆ – 1 ಚಮಚ
- ಬಿಳಿ ಎಳ್ಳು – 2 ಚಮಚ (ಐಚ್ಚಿಕ)
- ಹುರಿಗಡಲೆ – 3-4 ಚಮಚ
- ಸಾಸಿವೆ – 1 ಚಮಚ
- ಹುರಿಗಡಲೆ – 4 ಚಮಚ
- ಹುಣಸೇಹಣ್ಣು – ನಿಂಬೇಹಣ್ಣೈನ ಗಾತ್ರದ್ದು
- ಹಸೀ/ಒಣ ಮೆಣಸಿನಕಾಯಿಗಳು – 5 ರಿಂದ 6
- ಕರಿಬೇವಿನ ಸೊಪ್ಪು – 8-10 ಎಲೆಗಳು
- ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಚಮಚ
- ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪು
- ಚಿಟುಕಿ ಅರಿಶಿನ
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು
- ಅಡುಗೆ ಎಣ್ಣೆ – 2 ಚಮಚ
- ಸಾಸಿವೆ – 1 ಚಮಚ
- ಕರಿಬೇವಿನ ಸೊಪ್ಪು – 4-6ಎಲೆಗಳು
- ಒಣ ಮೆಣಸಿನಕಾಯಿ – 2-3
- ಚಿಟುಕಿ ಇಂಗು
ಸೌತೇಕಾಯಿ ಹಸೀ ಗೊಜ್ಜು ತಯಾರಿಸುವ ವಿಧಾನ
- ಸೌತೇಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೇ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ
- ಸಣ್ಣ ಬಾಣಲಿಯಲ್ಲಿ ಎಳ್ಳು ಮತ್ತು ಜೀರಿಗೆಯನ್ನು ಹಸೀ ಹೋಗುವ ವರೆಗೂ ಹುರಿದುಕೊಳ್ಳಿ
- ಮಿಕ್ಸಿ ಜಾರಿಗೆ ತೆಂಗಿನತುರಿ, ಹುರಿಗಡಲೆ, ಸಾಸಿವೆ, ಹುಣಸೇಹಣ್ಣು, ಬೆಲ್ಲ, ಹುರಿದ ಎಳ್ಳು, ಜೀರಿಗೆ, ಹಸಿರು/ಒಣ ಮೆಣಸಿನಕಾಯಿ, ಕರೀಬೇವು, ಕೊತ್ತಂಬರಿ ಸೊಪ್ಪು ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಗಟ್ಟಿಯಾಗಿ ಚೆಟ್ನಿಯ ರೂಪದಲ್ಲಿ ರುಬ್ಬಿಕೊಳ್ಳಿ.
- ಸಣ್ಣ ಬಾಣಲಿಯಲ್ಲಿ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ, ಸಾಸಿವೆ ಸಿಡಿಸಿಕೊಂಡ ನಂತರ, ಕರೀಬೇವು, ಇಂಗು, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ
- ರುಬ್ಬಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಒಗ್ಗರಣೆಯನ್ನು ಸೇರಿಸಿ, ಹದಕ್ಕೆ ತಕ್ಕಷ್ಟು ನೀರನ್ನು ಸೇರಿಸಿ ಕಲಸಿದಲ್ಲಿ ರುಚಿ ರುಚಿಯಾದ ಸೌತೇಕಾಯಿ ಹಸೀ ಗೊಜ್ಜು ಸವಿಯಲು ಸಿದ್ದ.
ಮೊದಲೇ ತಿಳಿಸಿದಂತೆ ಈ ಸೌತೇಕಾಯಿ ಹಸೀ ಗೊಜ್ಜನ್ನು ದೋಸೆ, ಚಪಾತಿಗಳಲ್ಲದೇ, ಇಡ್ಲಿ, ವಡೆ ಮತ್ತು ಪೊಂಗಲ್ ಮತ್ತು ಅನ್ನದ ಜೊತೆಯೂ ತಿನ್ನಲು ಚೆನ್ನಾಗಿರುತ್ತದೆ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ನಿಮ್ಮವನೇ ಉಮಾಸುತ
ಮನದಾಳದ ಮಾತು : ಈ ಬೇಸಿಗೆ ಕಾಲದಲ್ಲಂತೂ ಬಿಸಿಲಿನ ಪ್ರಮಾಣ ಜಾಸ್ತಿಯಾಗಿ ಮೈಯಲ್ಲಿರುವ ನೀರಿನ ಪ್ರಮಾಣವೆಲ್ಲಾ ಬೆವರಿನ ಮೂಲಕ ಹೊರ ಹೋಗಿ, ನಿರ್ಜಲೀಕರಣದ ಸಮಸ್ಯೆಗೆ ಸೌತೇಕಾಯಿ ರಾಮಬಾಣವಾಗಿದೆ. ಹಸೀ ಸೌತೇಕಾಯಿ ಸೇವನೆಯಿಂದ ಚರ್ಮ ಸುಕ್ಕು ಕಟ್ಟುವುದನ್ನು ತಡೆಗಟ್ಟಬಹುದಲ್ಲದೇ, ಆರೋಗ್ಯವನ್ನು ಸಹಾ ಕಾಪಾಡುತ್ತದೆ. ಅಧಿಕ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡಲೂ ಸಹಾ ಇದು ಉಪಯೋಗಕಾರಿಯಾಗಿದೆ. ಹಸೀ ಸೌತೇಕಾಯಿಯ ಬಿಲ್ಲೆಗಳನ್ನು ಕಣ್ಣ ಸುತ್ತಲು ಇಟ್ಟು ಕೊಳ್ಳುವ ಮುಖಾಂತರ ಕಣ್ಣಿನ ಸುತ್ತಲೂ ಬರುವ ಕಪ್ಪು ಕಲೆಗಳನ್ನು ಕಡಿಮೆ ಮಾಡಬಹುದಾಗಿದೆ. ನಿರಂತವಾಗಿ ಹಸೀ ಸೌತೆಕಾಯಿ ಸೇವಿಸುವ ಮುಖಾಂತರ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳ ಬಹುದಾಗಿದೆ.
ಸೌತೆಕಾಯಿ ಹಸಿ ಗೊಜ್ಜು ಮಾಡುವ ವಿಧಾನವನ್ನು ಓದುತ್ತಿದ್ದರೇನೇ ಬಯಲ್ಲಿ ನೀರು ಬರುತ್ತದೆ. ಸಾರು ಸಾಂಬಾರ್ ಮಾಡುವುದು ತಡವಾಗುವುದರಿಂದ ತಕ್ಷಣಕ್ಕೆ ಈ ಗೊಜ್ಜು ಮಾಡಿ ಊಟ ಮಾಡಬಹುದು. ಮಧ್ಯಾಹ್ನ ಯಾರ ಮನೆಗೋ ಊಟಕ್ಕೆ ಹೋದಾಗ ಅಥವಾ ಮದುವೆ ಮುಂಜಿಗೆ ಬೇರೆ ಕಾರ್ಯಕ್ರಮಗಳಿಗೆ ಊಟಕ್ಕೆ ಹೋಗಿ ಮನೆಗೆ ಬಂದರೆ ಎಲ್ಲ ಹೆಂಗಸರಿಗೂ ರಾತ್ರಿ ಊಟಕ್ಕೆ ಒಂದು ಹೊತ್ತಿಗೋಸ್ಕರ ಯಾರಪ್ಪ ಹುಳಿ, ಸಾರು ಮಾಡೋದು ಅಂತ ಗೊಣಗಿಕೊಳ್ಳುತ್ತಾರೆ. ಅಂಥ ಸಂದರ್ಭದಲ್ಲಿ ಇಂಥ ಗೊಜ್ಜು ತುಂಬಾ ಉಪಯೋಗಕ್ಕೆ ಬರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಒಳ್ಳೆಯ ಅಡುಗೆಯನ್ನು ತೋರಿಸಿಕೊಟ್ಟಿದ್ದಕ್ಕಾಗಿ ವಂದನೆಗಳು.
LikeLiked by 1 person