ಮನೆಯಲ್ಲಿ ಮೊಸರು ಹೆಚ್ಚಿಗೆ ಉಳಿದು ಬಿಟ್ಟಲ್ಲಿ ಅಥವಾ ಮನೆಗೆ ಇದ್ದಕ್ಕಿದ್ದಂತೆಯೇ ಯಾರಾದ್ರೂ ಸಂಬಂಧೀಕರು ಬಂದು ಬಿಟ್ಟಲ್ಲಿ ಅಷ್ಟು ಹೊತ್ತಿನಲ್ಲಿ ಹುಳಿ, ಸಾರು ಮುಂತಾದವುಗಳನ್ನು ಮಾಡಲು ಪುರುಸೊತ್ತು ಇಲ್ಲದಿದ್ದಲ್ಲಿ, ದಿಡೀರ್ ಎಂದು ತಯಾರಿಸಬಹುದಾದ ಮತ್ತು ದೇಹದ ಆರೋಗ್ಯಕ್ಕೂ ಉತ್ತಮವಾದ ಸೌತೇಕಾಯಿ ಹಸೀ ಮಜ್ಜಿಗೆ ಹುಳಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಸೌತೇಕಾಯಿ ಹಸೀ ಮಜ್ಜಿಗೆ ಹುಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಎಳೆಯ ಸೌತೇಕಾಯಿ – 1
- ತೆಂಗಿನತುರಿ – 1 ಬಟ್ಟಲು
- ಮೊಸರು – 1 ಬಟ್ಟಲು
- ಜೀರಿಗೆ – 1/2 ಚಮಚ
- ಹುರಿಗಡಲೆ – 2 ಚಮಚ
- ಮೆಂತ್ಯ – 1/2 ಚಮಚ
- ಸಾಸಿವೆ – 1/2 ಚಮಚ
- ಹಸೀ ಮೆಣಸಿನಕಾಯಿಗಳು – 5 ರಿಂದ 6
- ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು
- ಅಡುಗೆ ಎಣ್ಣೆ – 2 ಚಮಚ
- ಸಾಸಿವೆ – 1 ಚಮಚ
- ಕರಿಬೇವಿನ ಸೊಪ್ಪು – 4-6 ಎಲೆಗಳು
- ಒಣ ಮೆಣಸಿನಕಾಯಿ – 2-3
- ಚಿಟುಕಿ ಇಂಗು
- ಚಿಟುಕಿ ಅರಿಶಿನ
ಹಸೀ ಮಜ್ಜಿಗೆ ಹುಳಿ ತಯಾರಿಸುವ ವಿಧಾನ
- ಸೌತೇಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೇ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ.
- ಮೊಸರನ್ನು ಕಡಗೋಲು (ಮಂತು) ಸಹಾಯದಿಂದ ಚೆನ್ನಾಗಿ ಕಡೆದುಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ.
- ಸಣ್ಣ ಬಾಣಲಿಯಲ್ಲಿ ಮೆಂತ್ಯ, ಸಾಸಿವೆ ಮತ್ತು ಜೀರಿಗೆಯನ್ನು ಹಸೀ ಹೋಗುವ ವರೆಗೂ ಹುರಿದುಕೊಳ್ಳಿ
- ಮಿಕ್ಸಿ ಜಾರಿಗೆ ತೆಂಗಿನತುರಿ, ಹುರಿಗಡಲೆ, ಹಸೀ ಮೆಣಸಿನಕಾಯಿ ಮತ್ತು ಹುರಿದುಕೊಂಡ ಪದಾರ್ಥಗಳನ್ನು ಹಾಕಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ.
- ಸಣ್ಣ ಬಾಣಲಿಯಲ್ಲಿ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ, ಸಾಸಿವೆ ಸಿಡಿಸಿಕೊಂಡ ನಂತರ, ಕರೀಬೇವು, ಇಂಗು, ಅರಿಶಿನ, ಕತ್ತರಿಸಿದ ಒಣಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
- ರುಬ್ಬಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಕಡೆದ ಮೊಸರು, ಹೆಚ್ಚಿದ ಸೌತೇಕಾಯಿ ಮತ್ತು ಒಗ್ಗರಣೆಯನ್ನು ಬೆರೆಸಿ, ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಹದಕ್ಕೆ ತಕ್ಕಷ್ಟು ನೀರನ್ನು ಸೇರಿಸಿ ಕಲಸಿದಲ್ಲಿ ರುಚಿ ರುಚಿಯಾದ ಸೌತೇಕಾಯಿ ಹಸೀ ಮಜ್ಜಿಗೆ ಹುಳಿ ಸವಿಯಲು ಸಿದ್ದ.
ಮೊದಲೇ ತಿಳಿಸಿದಂತೆ ಈ ಹಸೀ ಮಜ್ಜಿಗೆ ಹುಳಿಯನ್ನು ದೋಸೆ, ಚಪಾತಿಗಳಲ್ಲದೇ, ಅನ್ನದ ಜೊತೆಯೂ ಕಲಸಿಕೊಂಡು ತಿನ್ನಲು ಮಜವಾಗಿರುತ್ತದೆ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ನಿಮ್ಮವನೇ ಉಮಾಸುತ
ಮನದಾಳದ ಮಾತು : ಈ ಬೇಸಿಗೆ ಕಾಲದಲ್ಲಂತೂ ಬಿಸಿಲಿನ ಪ್ರಮಾಣ ಜಾಸ್ತಿಯಾಗಿ ಮೈಯಲ್ಲಿರುವ ನೀರಿನ ಪ್ರಮಾಣವೆಲ್ಲಾ ಬೆವರಿನ ಮೂಲಕ ಹೊರ ಹೋಗಿ, ನಿರ್ಜಲೀಕರಣದ ಸಮಸ್ಯೆಗೆ ಸೌತೇಕಾಯಿ ಮತ್ತು ಮೊಸರು ಎರಡೂ ಸಹಾ ರಾಮಬಾಣವಾಗಿದೆ. ಸೌತೆಕಾಯಿ, ದೇಹದಲ್ಲಿರುವ ಅನುಪಯುಕ್ತ ಹಾಗೂ ವಿಷಕಾರಕ ವಸ್ತುಗಳನ್ನು ಹೊರಹಾಕುವುದಲ್ಲದೇ, ಪ್ರತೀ ದಿನವೂ ಹಸೀ ಸೌತೇಕಾಯಿಯನ್ನು ಸೇವಿಸುವುದರಿಂದ ಮೂತ್ರ ಪಿಂಡದಲ್ಲಿರಬಹುದಾದ ಕಲ್ಲುಗಳನ್ನು ಕರಗಿಸುತ್ತದೆ, ಎದೆ, ಗರ್ಭಾಶಯ, ಅಂಡಾಶಯದ ಕ್ಯಾನ್ಸರ್ ಗಳನ್ನೂ ತಪ್ಪಿಸುತ್ತದೆ. ತೆಳುವಾದ ಸೌತೆಕಾಯಿಯ ಹೋಳನ್ನು ನಾಲಿಗೆಯ ಮೇಲೆ ಇಟ್ಟುಕೊಂಡು ಅರ್ಧ ನಿಮಿಷಗಳ ಕಾಲಾ ಬಾಯಿಯ ಒಳಗೆಲ್ಲಾ ಹೋಗುವಂತೆ ಮುಕ್ಕಳಿಸಿದಲ್ಲಿ, ಬಾಯಲ್ಲಿರ ಬಹುದಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದಲ್ಲದೇ, ಬಾಯಿಯ ದುರ್ವಾಸನೆಯನ್ನೂ ಸಹಾ ಕಡಿಮೆ ಮಾಡುತ್ತದೆ.