ಸೂಯೆಜ್ ಕಾಲುವೆ ಮತ್ತು ಮೈಸೂರು ಸ್ಯಾಂಡಲ್

suz1

ಸುಯೆಜ್ ಕಾಲುವೆ, ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಒಂದು ಮಹಾಕಾಲುವೆಯಾಗಿದ್ದು ಈಜಿಪ್ಟ್ ದೇಶದಲ್ಲಿದೆ. ಇದು ಸುಮಾರು 162 ಕಿಮೀ ಉದ್ದವಿದ್ದು ಇದರ ಅಗಲ ಅತ್ಯಂತ ಕಡಿಮೆ ಇರುವ ಸ್ಥಳದಲ್ಲಿ 300 ಮೀ ಇದೆ. ಈ ಕಾಲುವೆ ಏಷ್ಯಾ ಮತ್ತು ಯೂರೋಪ್ ಖಂಡಗಳ ನಡುವೆ ಪಯಣಿಸುವ ಹಡಗುಗಳಿಗೆ ಪ್ರಮುಖ ಜಲಮಾರ್ಗವಾಗಿದೆ. ಇದು ಇಲ್ಲದಿದ್ದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಆಫ್ರಿಕಾದ ಕೇಪ್‌ ಆಫ್‌ ಗುಡ್‌ ಹೋಪ್‌ ಭೂಶಿರ ಸುತ್ತಿ ಸುದೀರ್ಘ ಹಾದಿಯಲ್ಲಿ ಪ್ರಯಾಣ ಬೆಳೆಸ ಬೇಕಾದ ಕಾರಣ ಅದು ಬಹಳಷ್ಟು ಇಂಧನ, ಹಣ ಮತ್ತು ಸಮಯವೂ ವ್ಯರ್ಥವಾಗುತ್ತದೆ.

suz3

ಕಳೆದ ಒಂದು ವಾರದ ಹಿಂದೆ ಇಂತಹ ಜಗತ್ಪ್ರಸಿದ್ಧ ಸೂಯೆಜ್‌ ಕಾಲುವೆಯಲ್ಲಿ ತೈವಾನ್‌ ಮೂಲದ ಎವರ್‌ಗ್ರೀನ್‌ ಕಂಪನಿಯ ಹಡಗೊಂದು ಕಾಲುವೆಯ ಪೂರ್ವ ದಂಡೆಯ ಹೂಳಿನಲ್ಲಿ ಸಿಲುಕಿದ್ದರಿಂದಾಗಿ ಸುಮಾರು 367 ಕ್ಕೂ ಹೆಚ್ಚಿನ ಸರಕು ಸಾಗಣೆ ಹಡಗುಗಳು ಆ ಕಾಲುವೆಯನ್ನು ದಾಟಲಾದದೇ, ಪ್ರತಿನಿತ್ಯವೂ ಜಾಗತಿಕ ವ್ಯಾಪಾರಿ ಕಂಪನಿಗಳಿಗೆ ಸುಮಾರು 65 ಸಾವಿರ ಕೋಟಿಗಳಿಗೂ ಅಧಿಕವಾದ ನಷ್ಟವಾಗುತ್ತಿತ್ತು. ಹರ ಸಾಹಸ ಪಟ್ಟು ಈ ಸಿಲುಕಿದ್ದ ಬೃಹತ್‌ ಸರಕು ಸಾಗಣೆ ಹಡಗನ್ನು ಆ ಹೂಳಿನಿಂದ ಹೊರತೆಗೆದು ಜಲಮಾರ್ಗವನ್ನು ಎರಡು ದಿನಗಳ ಹಿಂದೆ ಸುಗಮಗೊಳಿಸಲು ಯಶಸ್ವಿಯಾಗಿದ್ದಾರೆ.

mysore_sandle2

ಇಂತಹ ಸೂಯೆಜ್ ಕಾಲುವೆಗೂ ಮೈಸೂರು ಸ್ಯಾಂಡಲ್ ಸೋಪಿಗೂ ಎಲ್ಲಿಯ ಸಂಬಂಧ ಎಂದು ಆಶ್ಚರ್ಯವಾದಲ್ಲಿ, ದೂರದ ಬೆಟ್ಟದ ನೆಲ್ಲಿಕಾಯಿ ಮತ್ತು ಸಮುದ್ರ ಉಪ್ಪಿಗೆ ಹೇಗೆ ಅವಿನಾಭಾವ ಸಂಬಂಧವಿದೆಯೂ ಹಾಗೆಯೇ ಇದೇ ರೀತಿ 106 ವರ್ಷಗಳ ಹಿಂದೆ ಒಂದನೇ ಮಹಾಯುದ್ದದ ಸಮಯದಲ್ಲಿ ಸೂಯೆಜ್ ಕಾಲುವೆಯನ್ನು ಬಂದ್ ಮಾಡಿದ್ದರಿಂದಾಗಿಯೇ ಮೈಸೂರು ಸ್ಯಾಂಡಲ್ ಸೋಪಿನ ಕಾರ್ಖನೆಯ ಆರಂಭಕ್ಕೆ ನಾಂದಿಯಾಗಿತ್ತು.

ನಮಗೆಲ್ಲರಿಗೂ ಈಗಾಗಲೇ ತಿಳಿದಿರುವಂತೆ ಮೈಸೂರು ಪ್ರಾಂತ್ಯಕ್ಕೆ ಗಂಧದ ಬೀಡು ಎಂಬ ಹೆಸರಿದ್ದು ಮೈಸೂರು ರಾಜ್ಯ ಶ್ರೀಗಂಧಕ್ಕೆ ಹೆಸರುವಾಸಿಯಾಗಿದೆ. 19ನೇ ಶತಮಾನದಲ್ಲಿ ಮೈಸೂರಿನ ಅರಸರಾಗಿದ್ದ ಶ್ರೀ ನಾಲ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಇಲ್ಲಿಂದ ಸಮುದ್ರ ಮಾರ್ಗವಾಗಿ ಪಾಶಿಮತ್ಯ ದೇಶಗಳಿಗೆ ಅಪಾರ ಪ್ರಮಾಣದ ಶ್ರೀಗಂಧವನ್ನು ರಫ್ತು ಮಾಡಲಾಗುತ್ತಿತ್ತು. 1916ರ ಮೊದಲನೇ ಮಹಾಸಮರದಲ್ಲಿ ಸೂಯೆಜ್ ಕಾಲುವೆ ದಿಗ್ಬಂಧನಗೊಂಡಿದ್ದರಿಂದ ಮೈಸೂರಿನಿಂದ ಪ್ರಮುಖ ಪಾಶ್ಚಿಮಾತ್ಯ ದೇಶಗಳಿಗೆ ಶ್ರೀಗಂಧದ ರಫ್ತಾಗುವುದು ನಿರ್ಭಂದವಾದ ಕಾರಣ ಅಪಾರ ಪ್ರಮಾಣದ ಶ್ರೀಗಂಧವು ನಮ್ಮಲ್ಲಿಯೇ ಉಳಿದು ಹೋದದ್ದನ್ನು ಗಮನಿಸಿದ ಮಹಾರಾಜರು, ಆ ದಾಸ್ತಾನಿನಿಂದ ಶ್ರೀಗಂಧ ತೈಲವನ್ನು ಹೊರತೆಗೆಯಲು ಆದೇಶಿಸಿದರು. ಅದರ ಪ್ರಕಾರ ಆ ಮರಗಳಿಂದ ಶ್ರೀಗಂಧದ ಎಣ್ಣೆಯನ್ನು ಬಟ್ಟಿ ಇಳಿಸುವ ಕಾರ್ಖಾನೆಯನ್ನು ಮೈಸೂರಿನಲ್ಲಿ ಸ್ಥಾಪಿಸಲಾಯಿತು.

ಇದಾಗಿ ಸುಮಾರು ಎರಡು ವರ್ಷಗಳ ನಂತರ, ವಿದೇಶದಿಂದ ಉಡುಗೊರೆಯಾಗಿ ಬಂದಿದ್ದ ಅಪರೂಪದ ಶ್ರೀಗಂಧದ ಸಾಬೂನನ್ನು ನೋಡಿ, ನಮ್ಮ ಮೈಸೂರಿನಲ್ಲಿಯೂ ಇಂತಹ ಸಾಬೂನುಗಳ ಉತ್ಪಾದನೆಯನ್ನು ಪ್ರಾರಂಭಿಸುವ ಯೋಜನೆಯನ್ನು ರೂಪಿಸುವಂತೆ ಆಗಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನನ್ನು ಕೇಳಿಕೊಂಡರು. ಮಹಾರಾಜರ ಸಲಹೆಯ ಮೇರೆಗೆ ಆ ರೀತಿಯ ಸಾಬೂನಿನ ತಯಾರಿಕೆಯ ಕಲೆಯನ್ನು ಕರಗತ ಮಾಡಿಕೊಳ್ಳುವ ಸಲುವಾಗಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ರಸಾಯನ ಶಾಸ್ತ್ರಜ್ಞರಾಗಿದ್ದ ಶ್ರೀ ಸೋಸಲೆ ಗರಳಪುರಿ ಶಾಸ್ತ್ರಿಗಳನ್ನು ವಿದೇಶಕ್ಕೆ ಕಳುಹಿಸಿಕೊಟ್ಟರು.

mysore_sandle3

ಗರಳಪುರಿ ಶಾಸ್ತ್ರಿಗಳು ವಿದೇಶದಿಂದ ಮೈಸೂರಿಗೆ ಹಿಂದಿರುಗಿದ ನಂತರ, 1916 ರಲ್ಲಿ ಶ್ರೀಗಂಧದ ಎಣ್ಣೆಯನ್ನು ಮುಖ್ಯ ಘಟಕಾಂಶವಾಗಿ ಬಳಸಿಕೊಂಡು ಮೈಸೂರು ಸ್ಯಾಂಡಲ್ ಸೋಪ್ ಎಂಬ ಬ್ರಾಂಡ್ ಹೆಸರಿನಲ್ಲಿ ಸಾಬೂನು ತಯಾರಿಸುವ ಕಾರ್ಖಾನೆಯನ್ನು ಕೆ.ಆರ್. ನಗರದಲ್ಲಿ ಆರಂಭಿಸಿ ಕೆಲವು ಯಶಸ್ವಿ ಪ್ರಯೋಗಗಳ ನಂತರ, 1918 ರಲ್ಲಿ ಮೊದಲ ಬಾರಿಗೆ ಸೋಪ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿದ್ದಲ್ಲದೇ ಸೋಪ್ ಶಾಸ್ತ್ರಿ ಎಂದೇ ಜನಪ್ರಿಯರಾದರು. ಮೈಸೂರು ಸ್ಯಾಂಡಲ್ ಉತ್ಪನ್ನಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿದ್ದಂತೆಯೇ ಮಲೆನಾಡಾದ ಶಿವಮೊಗ್ಗದಲ್ಲಿ ಮತ್ತೊಂದು ಘಟಕವನ್ನು ಸ್ಥಾಪಿಸುವ ಮೂಲಕ ಕಚ್ಚಾವಸ್ತುಗಳ ಸಾಗಣೆವೆಚ್ಚವನ್ನು ಕಡಿಮೆ ಮಾಡಿದ್ದಲ್ಲದೇ ಸ್ಥಳೀಯರಿಗೂ ಉದ್ಯೋಗವಕಾಶವನ್ನು ಕಲ್ಪಿಸಲಾಯಿತು.

mysore_sandle

ಸೋಪ್ ಶಾಸ್ತ್ರಿಗಳು ಮೈಸೂರು ಸ್ಯಾಂಡಲ್ ಸೋಪ್ ಅನ್ನು ಮಾರುಕಟ್ಟೆಗೆ ಐಷಾರಾಮಿ ವಸ್ತುವಾಗಿ ಪರಿಚಯಿಸಲು ಬಯಸಿದ್ದ ಕಾರಣ ಆಭರಣಗಳ ಪೆಟ್ಟಿಗೆಯಂತೆಯೇ ಆಯತಾಕಾರದ ಪೆಟ್ಟಿಗೆಯಲ್ಲಿ ಈ ಸೋಪುಗಳನ್ನು ಪ್ಯಾಕ್ ಮಾಡುವ ಮೂಲಕ ಶ್ರೀಮಂತ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದಲ್ಲದೇ, ಈ ಸೋಪ್ ಒಂದು ಆಭರಣಕ್ಕಿಂತ ಕಡಿಮೆಯಿಲ್ಲ ಎಂಬ ಕಲ್ಪನೆಯನ್ನು ಮೂಡಿಸುವಲ್ಲಿ ಸಫಲರಾದರು. ಈ ಸೋಪನ್ನು ಬಳಸುವುದೇ ಐಶಾರಾಮ್ಯದ ಕುರುಹು ಎಂದು ಮಧ್ಯಮ ವರ್ಗದ ಜನರೂ ಭಾವಿಸಿದ್ದ ಕಾರಣ ಅಂದಿನಿಂದ ಇಂದಿನ ವರೆಗೂ ಅದೇ ಗುಣ ಮಟ್ಟವನ್ನು ಉಳಿಸಿಕೊಂಡು ಬಂದಿದೆ.

1980 ರ ದಶಕದಲ್ಲಿ, ಎರಡು ಸಾಬೂನು ಘಟಕಗಳನ್ನು ವಿಲೀನಗೊಳಿಸಿ ಕರ್ನಾಟಕ ಸಾಬೂನು ಮತ್ತು ಡಿಟರ್ಜೆಂಟ್ ಲಿಮಿಟೆಡ್ (ಕೆಎಸ್‌ಡಿಎಲ್) ಸ್ಥಾಪಿಸಲಾಯಿತು. 1992 ರಲ್ಲಿ, ಸಾರ್ವಜನಿಕ ವಲಯದ ಸಂಸ್ಥೆಯು ಕಳೆದ ಕೆಲವು ವರ್ಷಗಳಲ್ಲಿ ಸ್ಥಿರವಾದ ಲಾಭವನ್ನು ಗಳಿಸಿದ ಕಂಪನಿ ಎನಿಸಿದ್ದು ಗಮನಾರ್ಹವಾಗಿದೆ.

ಸಿಂಹದ ದೇಹ ಮತ್ತು ಆನೆಯ ತಲೆಯನ್ನು ಹೊಂದಿರುವ ಪೌರಾಣಿಕ ಜೀವಿ ಶರಭಾ ಬುದ್ಧಿವಂತಿಕೆ, ಧೈರ್ಯ ಮತ್ತು ಶಕ್ತಿಯ ಸಂಯೋಜಿತ ಸದ್ಗುಣಗಳನ್ನು ಪ್ರತಿನಿಧಿಸುವ ಕಾರಣದಿಂದಾಗಿ ಅದನ್ನೇ ಈ ಕಂಪನಿಯ ಲಾಂಛನವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ಅಂದಿನಿಂದ ಅಂದಿನಿಂದ ಇಂದಿನವರೆಗೂ ವೈವಿಧ್ಯಮಯವಾಗಿ ಕೇವಲ ಸಾಬೂನು ಮಾತ್ರವಲ್ಲದೇ, ಸುಗಂಧದ್ರವ್ಯ, ಗಂಧದ ಕಡ್ಡಿ, ಧೂಪ ದ್ರವ್ಯದ ತುಂಡುಗಳು, ಟಾಲ್ಕಮ್ ಪೌಡರ್ ಮತ್ತು ಡಿಟರ್ಜೆಂಟ್‌ಗಳನ್ನು ತಯಾರಿಸುತ್ತದೆ.

ವರ್ಷಕ್ಕೆ 26,000 ಟನ್ ಸೋಪ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವುದಲ್ಲದೇ, ಭಾರತೀಯ ಕ್ರಿಕೆಟ್ ತಂಡದ ಮಾಜೀ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ರಾಯಭಾರಿಯನ್ನಾಗಿ ಮಾಡಿಕೊಂಡು ಮಾಸಿಕ ಸರಾಸರಿ ರೂ. 75 ಮಿಲಿಯನ್ ನಷ್ಟು ವ್ಯಾಪಾರವನ್ನು ಮಾಡುತ್ತಿದೆ. ಪ್ರಸ್ತುತವಾಗಿ ಕರ್ನಾಟಕದ ಶ್ರೀಗಂಧದ ಮೀಸಲು ಖಾಲಿಯಾಗಿರುವ ಕಾರಣ, ಶ್ರೀಗಂಧದ ಕೊರತೆಯಿಂದಾಗಿ ಕಂಪನಿಯು ತನ್ನ ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯದ ಕೇವಲ 25% ರಷ್ಟನ್ನು ಮಾತ್ರಾ ಉತ್ಪಾದಿಸುತ್ತಿದೆ. ಈ ಕೊರತೆಯನ್ನು ನಿವಾರಿಸಲು, ಕೆಎಸ್‌ಡಿಎಲ್ ತೆರೆದ ಮಾರುಕಟ್ಟೆಯಲ್ಲಿ ಬಿಡ್ಡಿಂಗ್ ಮಾಡುವ ಮೂಲಕ ಶ್ರೀಗಂಧದ ಮರವನ್ನು ಖರೀದಿಸಲು ಪ್ರಾರಂಭಿಸಿದೆಯಲ್ಲದೇ, ದೇಶ ವಿದೇಶಗಳಿಂದಲೂ ಶ್ರೀಗಂಧವನ್ನು ಆಮದು ಮಾಡಿಕೊಳ್ಳುವ ಯೋಜನೆಯಲ್ಲಿದೆ.

10 ಮೇ 2016ರಲ್ಲಿ ಕಂಪನಿಯು ತನ್ನ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿತಲ್ಲದೇ, ಅದರ ನೆನಪಿನಲ್ಲಿಯೇ ಮೈಸೂರು ಸ್ಯಾಂಡಲ್ ಸೆಂಟೆನಿಯಲ್ ಸೋಪ್ ಅನ್ನು ಪರಿಚಯಿಸುವ ಮೂಲಕ ಇಂದಿಗೂ ದೇಶ ವಿದೇಶದ ಸೋಪು ಮಾರುಕಟ್ಟೆಯಲ್ಲಿ ತನ್ನ ವಿಶಿಷ್ಟವಾದ ಛಾಪನ್ನು ಹೊಂದಿದೆ. ಇಂದಿಗೂ ಸಂಪೂರ್ಣವಾಗಿ ಸಸ್ಯ ಆಧಾರಿತ ಸಾಬೂನುಗಳಲ್ಲಿ ಒಂದಾಗಿರುವ ಮತ್ತು 100% ಶುದ್ಧ ಶ್ರೀಗಂಧದ ಎಣ್ಣೆಯಿಂದ ತಯಾರಿಸಿದ ವಿಶ್ವದ ಏಕೈಕ ಸಾಬೂನು ಎಂಬ ವಿಶಿಷ್ಟತೆಯನ್ನು ಹೊಂದಿದೆ.

ಸಾಧಾರಣವಾಗಿ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ನಮ್ಮ ಹಿರಿಯರನ್ನು ನೋಡಿಯೇ ಕಲಿತುಕೊಂಡು ಬರುತ್ತಿರುತ್ತೇವೆ. ಅರ್ಥಾತ್ ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎನ್ನುವ ಗಾದೆಯ ಹಾಗೆ. ಅದೇ ರೀತಿ ನಾವು ಚಿಕ್ಕವರಿದ್ದಾಗ ನಮ್ಮ ತಾತನ ಮನೆ ಹಾಸನದ ಬಾಳಗಂಚಿಗೆ ಹೋದಾಗ, ಬಚ್ಚಲು ಮನೆಯಲ್ಲಿ ನೋಡುತ್ತಿದ್ದದ್ದೇ, ನಂಜನಗೂಡು ಸದ್ವೈದ್ಯ ಶಾಲೆಯ ಹಲ್ಲುಪುಡಿ ಮತ್ತು ಮೈಸೂರು ಸ್ಯಾಂಡಲ್ ಸೋಪು. ನಮ್ಮ ತಾತಾ ಅಜ್ಜಿ ಹಲ್ಲು ಉಜ್ಜಲು ಕೆಂಡಸ ಇದ್ದಿಲನ್ನೋ ಇಲ್ಲವೇ ಬೂದಿಯನ್ನೋ ಬಳಸುತ್ತಿದ್ದರೆ, ಮೊಮ್ಮಕ್ಕಳು ಬರ್ತಾ ಇದ್ದಾರೆ ಅಂತ ಗೊತ್ತಾದ ತಕ್ಷಣ ಚೆಂದದ ಹಲ್ಲುಪುಡಿ ಮತ್ತು ಸೋಪನ್ನು ದೂರದ ಹಿರೀಸಾವೆಗೆ ಹೋಗಿ ತಂದು ಇಡುತ್ತಿದ್ದರು. ನಿದ್ದೇ ಗಣ್ಣಿನಲ್ಲಿ ಎದ್ದು ಅದೆಷ್ಟೋ ಬಾರಿ ರುಚಿಕರವಾದ ಹಲ್ಲುಪುಡಿಯನ್ನು ಉಲ್ಲುಉಜ್ಜುವುದರ ಬದಲು ತಿಂದಿರುವ ಪ್ರಸಂಗಗಳೇ ಹೆಚ್ಚು. ಸ್ವಲ್ಪ ಬುದ್ದಿ ತಿಳಿದ ನಂತರ ಅಜ್ಜೀ ನೀವು ಯಾಕೆ ಮೈಸೂರು ಸಾಂಡಲ್ ಸೋಪನ್ನೇ ಬಳಸೋದು? ಅಂತಾ ಕೇಳಿದ್ದಕ್ಕೆ,‌ ಅಜ್ಜಿ ಹೇಳಿದ ಉತ್ತರ ನಮ್ಮನ್ನೆಲ್ಲರನ್ನು ಅವಾಕ್ಕಾಗಿಸಿತ್ತು. ಮೈಸೂರು ಸಾಂಡಲ್ ನಮ್ಮ ಮಹಾರಾಜರು ಆರಂಭಿಸಿದ್ದು. ಇನ್ನು ಅದು ಅಕಸ್ಮಾತ್ ಚಿಕ್ಕಮಕ್ಕಳ ಕಣ್ಣಿನೊಳಗೆ ಹೋದರೂ, ಇತರೇ ಸಾಬೂನಿನಂತೆ ಕಣ್ಣು ಉರಿಯುವುದಿಲ್ಲ. ಇನ್ನು ಸದ್ವೈದ್ಯಶಾಲಾ ನಂಜನಗೂಡಿನದ್ದು. ನಮ್ಮವರನ್ನು ನಾವೇ ಬೆಂಬಲಿಸದಿದ್ದರೆ ಹೇಗೆ? ಎಂದು ಅಂದೇ, ನಿಜವಾಗಿಯೂ ನಮ್ಮ ಪ್ರಧಾನಿಗಳ ಹೆಮ್ಮೆಯ ಆತ್ಮನಿರ್ಭರತೆಗೆ ರಾಯಭಾರಿಯಾಗಿದ್ದರು. ಅಜ್ಜಿಯ ಮಾತು ವೇದವಾಕ್ಯವಲ್ಲವೇ? old is always gold.

ಏನಂತೀರೀ?

ನಿಮ್ಮವನೇ ಉಮಾಸುತ

ಈ ಲೇಖನ ಬರೆಯಲು ಪ್ರೇರೇಪಿಸಿದ ಶ್ರೀ ಜಯಸಿಂಹ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s