ಮನುಷ್ಯ ಸಂಘ ಜೀವಿ ಮತ್ತು ಭಾವುಕ ಜೀವಿಯೂ ಹೌದು. ಹಾಗಾಗಿ ಆತ ಕಾಲ ಕಾಲಕ್ಕೆ ತನ್ನ ಮನಸ್ಸಿನಲ್ಲಾಗುವ ತುಮುಲಗಳನ್ನು ಮತ್ತು ಭಾವನೆಗಳನ್ನು ಮತ್ತೊಬ್ಬರ ಹತ್ತಿರ ಹಂಚಿಕೊಳ್ಳುವ ಮೂಲಕ ನಿರಾಳನಾಗುತ್ತಾನೆ. ಹಾಗಾಗಿಯೇ ಮನುಷ್ಯರು ಸದಾಕಾಲವೂ ಉತ್ತಮ ಗುರುಗಳು, ಸ್ನೇಹಿತರು ಮತ್ತು ಸಂಗಾತಿಯ ಅನ್ವೇಷಣೆಯಲ್ಲಿದ್ದು, ಒಮ್ಮೆ ತಮ್ಮ ಅಭಿರುಚಿಗೆ ತಕ್ಕಂತಹವರು ಸಿಕ್ಕ ಕೂಡಲೇ ತಮ್ಮ ಜೀವನದ ಗುಟ್ಟು ರಟ್ಟುಗಳನ್ನೆಲ್ಲಾ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊಳ್ಳುವುದಕ್ಕೆ ಪ್ರಮುಖ ಕಾರಣ ತಮ್ಮ ಗೆಳೆಯ ಈ ಎಲ್ಲಾ ಗೌಪ್ಯತೆಯನ್ನು ಕಾಪಾಡುತ್ತಾನೆ ಮತ್ತು ಅಗತ್ಯವಿದ್ದಲ್ಲಿ ತನಗೆ ಉತ್ತಮವಾದ ಸಲಹೆಗಳನ್ನು ನೀಡುತ್ತಾ ಜೀವನವೆಂಬ ಸುದೀರ್ಘಪಯಣದಲ್ಲಿ ಎಲ್ಲೂ ಎಡವಿ ಬೀಳದಂತೆ ಕಾಪಾಡುತ್ತಾನೆ ಎಂಬ ಭರವಸೆ ಆತನದ್ದಾಗಿರುತ್ತದೆ. ದುರಾದೃಷ್ಟವಶಾತ್ ಎಷ್ಟೋ ಬಾರಿ ನಮ್ಮೊಂದಿಗೆ ಇದ್ದು ನಮ್ಮ ಹಿತಚಿಂತಕರೆಂದೇ ಬಿಂಬಿಸಿಕೊಂಡು ಕಡೆಗೆ ಹಿತಶತ್ರುಳಾದ ಅದೇ ರೀತಿ ಇವರು ಹಿತಶತ್ರುಗಳು ಎಂದು ನಾವು ಭಾವಿಸಿದ್ದವರೇ ನಮಗೆ ಹಿತಚಿಂತಕರಾದ ಅನುಭವ ಬಹುಶಃ ಎಲ್ಲರಿಗೂ ಆಗಿರುತ್ತದೆ. ಇಂತಹ ಹಿತಚಿಂತಕರು ಮತ್ತು ಹಿತಶತ್ರುಗಳ ಪ್ರಕ್ರಿಯೆ ಇಂದು, ನೆನ್ನೆಯ ಮೊನ್ನೆಯ ಕಥೆಯಾಗಿರದೇ ಅನಾದಿಕಾಲದಿಂದಲೂ ಅನೂಚಾನವಾಗಿ ನಡೆದು ಬಂದಿರುವ ಸಂಗತಿ ಎನ್ನುವುದಕ್ಕೆ ಮಹಾಭಾರತದ ಎರಡು ಸುಂದರವಾದ ಪ್ರಸಂಗಗಳನ್ನು ಮೆಲುಕು ಹಾಕೋಣ.
ಪ್ರಸಂಗ – 1
ಇಂದ್ರಪಸ್ಥದಲ್ಲಿ ಪಾಂಡವರ ರಾಜ ಯುಧಿಷ್ಠಿರನು ಗುರು ಹಿರಿಯರ ಆಣತಿಯ ಮೇರೆಗೆ ರಾಜಸುಯಾಗವನ್ನು ಮಾಡಬೇಕೆಂದು ತೀರ್ಮಾನಿಸಿ ಅದಕ್ಕೆ ತಮ್ಮೆಲ್ಲಾ ಬಂಧು ಮಿತ್ರರನ್ನೂ ಆಹ್ವಾನಿಸಿರುತ್ತಾನೆ. ಅದರಲ್ಲೂ ತನ್ನ ತಮ್ಮ ನಕುಲನನ್ನು ಖುದ್ದಾಗಿ ಹಸ್ತಿನಾಪುರಕ್ಕೆ ಕಳುಹಿಸಿ, ಹಿರಿಯರಾದ ಭೀಷ್ಮ, ಗುರುಗಳಾದ ದ್ರೋಣ, ದೊಡ್ಡಪ್ಪನಾದ ಧುತರಾಷ್ಟ್ರ ಮತ್ತು ಚಿಕ್ಕಪ್ಪನಾದ ವಿದುರ ಆದಿಯಾಗಿ ಸಕಲ ಕೌರವರರನ್ನೂ, ಶಕುನಿ ಮತ್ತು ಕರ್ಣನನ್ನೂ ಸಹಾ ಈ ಮಹಾಯಾಗದಲ್ಲಿ ಪಾಲ್ಗೊಳ್ಳಬೇಕೆಂದು ಕೋರಿಕೊಂಡಿರುತ್ತಾನೆ.
ಧರ್ಮರಾಯನ ಆಹ್ವಾನವನ್ನು ಮನ್ನಿಸಿ ಸಕಲ ಬಂಧು-ಮಿತ್ರರೂ ಇಂದ್ರಪ್ರಸ್ಥಕ್ಕೆ ಆಗಮಿಸಿ ಯಾಗ ಮಂಟಪ ಮತ್ತು ಮಾಯಾನಗರಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಧುರ್ಯೋಧನನಂತೂ ಕೊಳ ಎಂದು ಭಾವಿಸಿ ಕನ್ನಡಿಗೆ ಡಿಕ್ಕಿ ಹೊಡೆದು ನಂತರ ಕನ್ನಡಿ ಎಂದು ಭಾವಿಸಿ ಕೊಳಕ್ಕೆ ಬಿದ್ದು ಮುಜುಗರಕ್ಕೀಡಾಗಿರುತ್ತಾನೆ. ಅಂತಹ ದೊಡ್ಡ ಯಾಗ ಮಾಡುತ್ತಿರುವಾಗ ಎಲ್ಲಾ ಕೆಲಸಗಳನ್ನೂ ಕೇವಲ ಪಾಂಡವರೇ ಮಾಡಲು ಅಸಾಧ್ಯವಾದ ಕಾರಣ ಬಂದಿದ್ದ ಬಂಧು-ಮಿತ್ರರಿಗೂ ಒಂದೊಂದು ಕೆಲಸದ ಉಸ್ತುವಾರಿಯನ್ನು ವಹಿಸುತ್ತಿರುವಾಗ ಯುಧಿಷ್ಟಿರನು ಬಂದು ತೋರಿಕೆಗಾಗಿ ಅಣ್ಣಾ, ಈ ಮಹಾನ್ ಯಾಗದಲ್ಲಿ ನನಗೂ ಒಂದು ಜವಾಬ್ಧಾರಿಯನ್ನು ಕೊಡು ಎಂದದ್ದನು ಕೇಳಿದ್ದೇ ತಡಾ ಶ್ರೀ ಕೃಷ್ಣಾ ಧುರ್ಯೋಧನನಿಗೆ ಯಾಗದ ಸಮಯದಲ್ಲಿ ದಾನ ಧರ್ಮದ ಉಸ್ತುವಾರಿಯನ್ನು ನೋಡಿ ಕೊಳ್ಳಲಿ ಎಂದು ಸೂಚಿಸುತ್ತಾನೆ.
ಶ್ರೀಕೃಷ್ಣನ ಸಲಹೆ ಅಲ್ಲಿಯೇ ಕುಳಿತಿದ್ದ ಭೀಮ ಮತ್ತು ಅರ್ಜುನರಿಗೆ ಆಚ್ಚರಿಯನ್ನುಂಟು ಮಾಡಿ ಅರೇ ಶ್ರೀಕೃಷ್ಣ ಹೀಗೇಕೆ ಹಿತಶತ್ರುವಿನಂತೆ ಮಾತನಾಡುತ್ತಿದ್ದಾನೆ. ನಾವು ಕಷ್ಟ ಪಟ್ಟು ಕ್ರೋಢೀಕರಿಸಿದ ಸಂಪತ್ತನ್ನು ಒಂದೇ ದಿನದಲ್ಲಿ ಧುರ್ಯೋದನ ದಾನ ಮಾಡಿ ಬಿಟ್ಟರೆ ಇಡೀ ಯಾಗ ಹೇಗೆ ನಡೆಯುತ್ತದೆ ಎಂದು ಮಾತನಾಡಿಕೊಳ್ಳುವುದನ್ನು ಶ್ರೀಕೃಷ್ಣ ನೋಡಿದರೂ ನೋಡದಂತೆ ಸುಮ್ಮನಾಗುತ್ತಾನೆ. ಶ್ರೀಕೃಷ್ಣನ ಸಲಹೆಯನ್ನು ತಿರಸ್ಕರಿಸಲಾಗದ ಧರ್ಮರಾಯನೂ, ಒಲ್ಲದ ಮನಸ್ಸಿನಿಂದಲೇ ಅದಕ್ಕೆ ಒಪ್ಪಿಗೆ ಸೂಚಿಸುತ್ತಾನೆ.
ಅರೇ ಸುಮ್ಮನೆ ಬಾಯಿ ಮಾತಿಗೆ ಯಾವುದಾದರೂ ಜವಾಬ್ಘಾರಿಯನ್ನು ವಹಿಸು ಎಂದು ಕೇಳಿದರೆ, ದಾನ ಮಾಡುವ ತುಚ್ಚ ಕೆಲಸವನ್ನು ನನಗೆ ಕೊಡುತ್ತಿದ್ದಾರಲ್ಲಾ ಎಂದು ಧುರ್ಯೋಧನ ಕೋಪಗೊಂಡದ್ದನ್ನು ಗಮನಿಸಿದ ಅವನ ಮಾವ ಶಕುನಿ, ಅವನ ಬಳಿ ಬಂದು ನಿನ್ನ ಭಾವನೆಗಳು ಅರ್ಥವಾಗುತ್ತಿದೆ. ಆದರೆ ಇಂತಹ ಸುವರ್ಣಾವಕಾಶವನ್ನು ಬಿಡದೇ ಈ ಕೂಡಲೇ ಒಪ್ಪಿಕೋ. ಸಾಧಕ ಬಾಧಕಗಳನ್ನು ಆನಂತರ ಸವಿವರವಾಗಿ ತಿಳಿಸುತ್ತೇನೆ ಎನ್ನುತ್ತಾನೆ. ತನ್ನ ಹಿತಚಿಂತಕ ಮಾವ ಹೇಳಿದ್ದಕ್ಕಾಗಿ ಬಲವಂತದಿಂದಲೇ ಒಪ್ಪಿಕೊಳ್ಳುತ್ತಾನೆ.
ರಾಜಸುಯ ಯಾಗದ ಅಷ್ಟೂ ದಿನಗಳೂ ಬಂದವರಿಗೆ ಇಲ್ಲಾ ಎನ್ನದಂತೆ ದಾನ ಮಾಡಬೇಕು. ಅಕಸ್ಮಾತ್ ದಾನ ಮಾಡಲು ತಪ್ಪಿದಲ್ಲಿ ಆ ಯಾಗದ ಫಲ ಲಭಿಸದು ಹಾಗಾಗಿ ಪಾಂಡವರು ಸಂಗ್ರಹಿಸಿಟ್ಟಿರುವ ಸಂಪತ್ತನ್ನು ಒಂದೆರದು ದಿನಗಳಲ್ಲಿಯೇ ಖಾಲಿ ಮಾಡುವ ಮೂಲಕ ಯಾಗದ ಫಲವನ್ನು ಪಾಂಡವರಿಗೆ ಸಿಗದಂತೆ ಮಾಡಿಬಿಡಬಹುದು ಎಂದು ಶಕುನಿ ಹೇಳಿದ್ದಕ್ಕೆ ಹಿರಿಹಿರಿ ಹಿಗ್ಗಿದ ದುರ್ಯೋಧನ ಯಾಗ ಆರಂಭವಾದ ಮೊದಲನೆ ದಿನವೇ ಪಾಂಡವರು ದಾನ ಮಾಡಲು ತಂದಿಟ್ಟಿದ್ದಂತಹ ಎಲ್ಲಾ ವಸ್ತುಗಳನ್ನೂ ಖಾಲಿ ಮಾಡಿ ಮನಸ್ಸಿನಲ್ಲಿಯೇ ಮಂಡಿಗೆ ತಿಂದಿರುತ್ತಾನೆ. ಇದನ್ನು ಸದ್ದಿಲ್ಲದೇ ದೂರದಿಂದಲೇ ಗಮನಿಸುತ್ತಿದ್ದ ಭೀಮ ಮತ್ತು ಅರ್ಜುನರಿಗೆ ಇಂದೇ ಎಲ್ಲವೂ ಖಾಲಿಯಾಗಿ ಹೋದಲ್ಲಿ ಮಾರನೆಯ ದಿನ ದಾನ ಹೇಗೆ ಮಾಡುವುದೆಂಬ ಆತಂಕದಲ್ಲಿಯೇ ನಿದ್ದೇಯೇ ಬಾರದೆ ಹೋಗಿರುತ್ತದೆ.
ದುರ್ಯೋಧನನು ಯಾಗದ ಎರಡನೆಯ ದಿನ ಬಂದು ನೋಡಿದಲ್ಲಿ ಹಿಂದಿನ ದಿನ ಇದ್ದ ಸಂಗ್ರಹಕ್ಕಿಂತಲೂ ದುಪ್ಪಟ್ಟು ಇರುವುದನ್ನು ಗಮನಿಸಿ ಆಶ್ಚರ್ಯ ಚಕಿತನಾದರೂ, ಮತ್ತೆ ಇಡೀ ದಿನ ಉಗ್ರಾಣವನ್ನು ಖಾಲಿ ಮಾಡುತ್ತಿದ್ದರೆ, ಮಾರನೆಯ ದಿನ ಯಥಾಪ್ರಕಾರ ಹಿಂದಿನ ದಿನಕ್ಕಿಂತಲೂ ದುಪ್ಪಟ್ಟು ಸಂಗ್ರಹವಿರುತ್ತಿದ್ದದ್ದರ ಹಿನ್ನಲೆ ತಿಳಿಯದೇ ಗೊಂದಲದ ಗೂಡಾಗಿರುತ್ತಾನೆ. ಭೀಮಾರ್ಜುನರೂ ಎರಡು ಮೂರು ದಿನ ಇದನ್ನು ಗಮನಿಸಿ ಇದೆಲ್ಲವೂ ಶ್ರೀಕೃಷ್ಣನ ಲೀಲೆ ಎಂದೇ ನೆನೆದು ನೆಮ್ಮದಿಯಾಗಿರುತ್ತಾರೆ. ಯಾಗದ ಅಷ್ಟೂ ದಿನವೂ ಇದೇ ರೀತಿಯಾಗಿಯೇ ಮುಂದುವರೆದು, ಯಾಗವು ಸುಸಂಪನ್ನವಾಗಿ ನಡೆದು ಎಲ್ಲರೂ ಇಂತಹ ಯಾಗ ನಭೂತೋ ನಭವಿಷ್ಯತಿ ಎಂದು ಕೊಂಡಾಡಿದ್ದಲ್ಲದೇ, ಧರ್ಮರಾಯನ ದಾನಕಾರ್ಯಕ್ಕೆ ವಿಶೇಷವಾದ ಮೆಚ್ಚುಗೆಯನ್ನು ಸೂಚಿಸಿ ಮನಃಪೂರ್ವಕ ಆಶೀರ್ವಾದ ಮಾಡುತ್ತಾರೆ.
ಪ್ರಸಂಗ -2
ಕುರುಕ್ಷೇತ್ರದ ಯುದ್ಧವು ಅಂತಿಮ ಘಟ್ಟವನ್ನು ತಲುಪಿರುತ್ತದೆ. ಯುದ್ಧದಲ್ಲಿ ಅರ್ಜುನ ಮತ್ತು ಕರ್ಣ ಪರಸ್ಪರ ಘನಘೋರ ಯುದ್ದವನ್ನು ಮಾಡುತ್ತಿರುತ್ತಾರೆ. ಅವರಿಬ್ಬರ ಬಾಣ ಪ್ರಯೋಗಗಳು ಬಹಳ ವೈಶಿಷ್ಟ್ಯವಾಗಿರುವುದನ್ನು ಕಣ್ತುಂಬಿಸಿಕೊಳ್ಳಲು ಅಲ್ಲಿನ ಪ್ರಜೆಗಳಲ್ಲದೇ, ದೇವಾನು ದೇವತೆಗಳು ಸಹಾ ಆಕಾಶದಿಂದ ಕುತೂಹಲಭರಿತರಾಗಿ ನೋಡುತ್ತಿರುತ್ತಾರೆ.
ಅರ್ಜುನನು ಪ್ರಯೋಗಿಸಿದ ಬಾಣಗಳ ಪ್ರಭಾವದಿಂದಾಗಿ ಕರ್ಣನ ರಥವು ಸುಮಾರು 25-30 ಅಡಿಗಳಷ್ಟು ಹಿಂದಕ್ಕೆ ಹೋದದ್ದನ್ನು ಕಂಡು ಎಲ್ಲರೂ ಅರ್ಜುನನ ಕೌಶಲ್ಯಕ್ಕೆ ಮೆಚ್ಚುಗೆ ಸೂಚಿಸುತ್ತಾರೆ. ಬಿಲ್ವಿದ್ಯೆಯಲ್ಲಿ ಅರ್ಜುನಿಗಿಂತ ಯಾವುದೇ ರೀತಿಯಲ್ಲಿ ಕಡಿಮೆ ಇರದ ಕರ್ಣನೂ ಸಹಾ ಇದಕ್ಕೆ ಪ್ರತಿಯಾಗಿ ಬಾಣಗಳನ್ನು ಪ್ರಯೋಗಿಸಿದಾಗ, ಅರ್ಜುನನ ರಥವೂ ಜಗ್ಗಿ ಸುಮಾರು 3-4 ಅಡಿ ಹಿಂದಕ್ಕೆ ಹೋಗುತ್ತದೆ.
ಪ್ರತೀ ಬಾರಿ ಕರ್ಣನು ವಿವಿಧ ರೀತಿಯ ಬಾಣಗಳನ್ನು ಪ್ರಯೋಗಿಸಿದಾಗ ಅರ್ಜುನನ ಸಾರಥಿಯಾಗಿದ್ದ ಕೃಷ್ಣ, ಭಲೇ ಕರ್ಣ ಭಲೇ ಎಂದು ಶ್ಲಾಘಿಸುತ್ತಿರುತ್ತಾನಾದರೂ, ಕರ್ಣನ ರಥವನ್ನು ನುಚ್ಚು ನೂರು ಮಾಡಿದರು ಒಮ್ಮೆಯೂ ಸಹಾ ಆತ ಅರ್ಜುನನ ಕೌಶಲ್ಯವನ್ನು ಶ್ಲಾಘಿಸದೇ ಹೋದದ್ದು ಅರ್ಜುನಿಗೆ ಬೇಸರ ತರಿಸಿ, ಅರೇ ಇದೇನಿದು, ನನ್ನ ಸಾರಥಿಯಾಗಿ ಶ್ರೀಕೃಷ್ಣ ನನಗೆ ಹಿತಶತ್ರುವಿನಂತಾಗಿದ್ದಾನಲ್ಲಾ? ಎಂದು ಯೋಚಿಸುವಂತಾಗುತ್ತದೆ.
ಮೇಲ್ನೋಟಕ್ಕೆ ಪ್ರಸಂಗ ಒಂದು ಮತ್ತು ಎರಡನ್ನು ಗಮನಿಸಿದಲ್ಲಿ ಪಾಂಡವರಿಗೆ ಶ್ರೀ ಕೃಷ್ಣ ಹಿತಶತ್ರುವಾಗಿ ಕಂಡಿದ್ದರೆ, ಕೌರವರಿಗೆ ಶಕುನಿ ಹಿತಚಿಂತಕನಾಗಿ ಕಂಡಿರುತ್ತಾನೆ. ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎಂದು ಸೂಕ್ಷ್ಮವಾಗಿ ಗಮನಿಸಿದಲ್ಲಿ ಅವರಿಬ್ಬರ ಪಾತ್ರ ಅದಲು ಬದಲಾಗಿರುತ್ತದೆ.
ದುರ್ಯೋಧನ ತಾಯಿ ಗಾಂಧಾರಿ ತನ್ನ ಪೂಜಾ ಫಲದಿಂದ ತನ್ನ ಮಗ ಎಷ್ಟು ದಾನ ಮಾಡುತ್ತಾನೋ ಅದರ ದುಪ್ಪಟ್ಟಷ್ಟು ಸಂಪತ್ತು ಅವನ ಖಖಾನೆ ತುಂಬುವಂತಹ ವರವನ್ನು ಪಡೆದಿರುತ್ತಾಳಾದರೂ ಅದನ್ನು ಮಗನಿಗೆ ತಿಳಿಸಿದರೆ ಆ ಫಲ ನಿಷ್ಪಲವಾಗುವುದೆಂಬ ಎಚ್ಚರಿಕೆಯಿಂದಾಗಿ ಅದನ್ನು ದುರ್ಯೋಧನನಿಗೆ ತಿಳಿಸಲು ಸಾಧ್ಯವಾಗಿರುವುದಿಲ್ಲ. ಈ ಗುಟ್ಟು ಶ್ರೀ ಕೃಷ್ಣ ಮತ್ತು ಶಕುನಿಗೆ ಗೊತ್ತಿದ್ದ ಕಾರಣ ಅವರಿಬ್ಬರೂ ಪ್ರಸಂಗ -1 ರಲ್ಲಿ ಧುರ್ಯೋಧನನಿಗೆ ಹಿತಚಿಂತಕನಾಗಿ ಕಂಡರು ಪರೋಕ್ಷವಾಗಿ ಹಿತಶತ್ರುಗಳಾಗಿರುತ್ತಾರೆ.
ಇನ್ನು ಎರಡನೇ ಪ್ರಸಂಗದಲ್ಲಿ ಕೃಷ್ಣನ ಕ್ರಿಯೆಯಿಂದ ಅಸಮಧಾನಗೊಂಡ ಅರ್ಜುನ ಯುದ್ದದ ಕೊನೆಯಲ್ಲಿ, ಓ ಸ್ವಾಮಿ, ಅದೆಷ್ಟು ಬಾರಿ ನಾನು ಕರ್ಣನ ರಥವನ್ನು ಧೂಳಿ ಪಟ ಮಾಡಿದರೂ ನೀನು ಒಮ್ಮೆಯೂ ನನ್ನನ್ನು ಪ್ರಶಂಸಿಸಲಿಲ್ಲ. ಆದರೆ ಕರ್ಣನ ಬಾಣಗಳು ನಮ್ಮ ರಥವನ್ನು ಸ್ವಲ್ಪಮಟ್ಟಿಗೆ ಅಲುಗಾಡಿಸಿದರೂ ಕರ್ಣನ ಕೌಶಲ್ಯವನ್ನು ಪ್ರಶಂಸಿದ್ದು ನನಗೆ ಬೇಸರ ತರಿಸಿದೆ ಎನ್ನುತ್ತಾನೆ.
ಅರ್ಜುನನ ಈ ಪ್ರಶ್ನೆಗೆ ಎಂದಿನಂತೆಯೇ ಮುಗುಳ್ನಗುತ್ತಾ. ಹೇ ಅರ್ಜುನ, ನಮ್ಮ ರಥದ ಧ್ವಜದ ಮೇಲ್ಭಾಗದಲ್ಲಿ ಹನುಮಂತನಿದ್ದ, ರಥದ ಮುಂಭಾಗದಲ್ಲಿ ಸಾರಥಿಯಾಗಿ ನಾನಿದ್ದರೆ, ರಥದ ಚಕ್ರಗಳಲ್ಲಿ ಸಾಕ್ಷಾತ್ ಶೇಷನಾಗರಿದ್ದರೂ, ಕರ್ಣನ ಬಾಣಗಳು ನಮ್ಮ ರಥವನ್ನು ಅಲುಗಾಡಿಸಿವೆ. ಆದರೆ ಕರ್ಣನ ರಥವನ್ನು ಕಾಪಾಡಲು ಅಂತಹ ಯಾವುದೇ ಶಕ್ತಿಗಳಲ್ಲಿದ್ದರೂ ಅತ ಅಧೀರನಾಗದೇ, ತನ್ನ ಶೌರ್ಯ ಪರಾಕ್ರಮದಿಂದ ಹೋರಾಡಿದ್ದಾನೆ. ಅದೂ ಅಲ್ಲದೇ ನಾನು ಪ್ರತೀ ಬಾರಿ ಅವನನ್ನು ಪ್ರಶಂಸಿಸಿ, ಹೊಗಳಿ ಹೊನ್ನ ಶೂಲಕ್ಕೇರಿಸುವ ಮೂಲಕ ಅತನ ಏಕಾಗ್ರತೆಗೆ ಭಂಗವನ್ನು ತರುವುದರಲ್ಲಿ ಸಫಲನಾದೆ. ಅದೇ ರೀತಿ ನಿನ್ನ ಅಧ್ಭುತವಾದ ಬಾಣ ಪ್ರಯೋಗಗಳಿಗೆ ಪ್ರತಿಕ್ರಿಯಸದೇ ನಿನ್ನಲ್ಲಿ ಕ್ಷಾತ್ರ ತೇಜವನ್ನು ಪ್ರಚೋದಿಸಿ ಇನ್ನೂ ಹೆಚ್ಚಿನ ಶೌರ್ಯದಿಂದ ಹೋರಾಡುವಂತೆ ಪರೋಕ್ಶವಾಗಿ ಪ್ರೇರಿಪಿಸಿದೆ ಎಂದು ಹೇಳಿ ಆ ಅರ್ಜುನನ್ನು ರಥದಿಂದ ಕೆಳಗೆ ಇಳಿಸಿ ಆತ ಸ್ವಲ್ಪ ದೂರ ಹೋದ ನಂತರ ತಾನೂ ರಥವನ್ನು ಇಳಿದು ಬಂದನು.
ಕೃಷ್ಣ ರಥದಿಂದ ಇಳಿದ ಕೂಡಲೇ ರಥಕ್ಕೆ ಬೆಂಕಿಯಾವರಿಸಿ ಕ್ಷಣ ಮಾತ್ರದಲ್ಲಿಯೇ ಸುಟ್ಟು ಕರಿಕಲಾಗಿ ಹೋಗಿ, ಸುಟ್ಟ ರಥದ ಬೂದಿ ಸಂಜೆಯ ಗಾಳಿಯಲ್ಲಿ ಲೀನವಾಗಿದ್ದನ್ನು ಕಂಡ ಅರ್ಜುನನು ಕೃಷ್ಣನ ಮುಂದೆ ನತಮಸ್ಥಕನಾದನು. ಆಗ ಶ್ರೀ ಕೃಷ್ಣನು ನೋಡು ಅರ್ಜುನ, ಕರ್ಣನ ಬಾಣಗಳು ಬಹಳ ಹಿಂದೆಯೇ ನಿನ್ನ ರಥವನ್ನು ನಾಶಪಡಿಸಿದ್ದರೂ, ನೀನ್ನ ಆತ್ಮಸ್ಥೈರ್ಯ ಕುಗ್ಗಬಾರದೆಂಬ ಕಾರಣದಿಂದಾಗಿ ನಾನು ಅದನ್ನು ರಕ್ಷಿಸಿದ್ದೆ ಎಂದು ಹೇಳುತ್ತಾನೆ.
ನಮ್ಮ ಜೀವನದಲ್ಲಿ ನಾವು ಎಷ್ಟೇೆ ಎತ್ತರಕ್ಕೇರಿದರೂ, ನಾವು ಏನನ್ನಾದರೂ ಸಾಧಿಸಿದರೂ ಅದರ ಸಂಪೂರ್ಣ ಶ್ರೇಯ ಕೇವಲ ನಮ್ಮದೇ ಎಂಬ ದುರಹಂಕಾರ ನಮ್ಮದಾಗದಿರಲಿ. ಇಂತಹ ಸಾಧನೆ ಗೈಯಲ್ಲಿ ಪತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಗವಂತನ ಅನುಗ್ರಹ ಮತ್ತು ಎಷ್ಟೋ ಜನರ ಸಹಕಾರ ಇರುತ್ತದೆ. ಪ್ರತಿಯೊಂದು ಬಾರಿಯೂ ದೇವರೇ ಪ್ರತ್ಯಕ್ಷವಾಗಿ ಎಲ್ಲರನ್ನೂ ಸಂಭಾಳಿಸಲು ಸಾಧ್ಯವಾದಗದ ಕಾರಣ ತಂದೆ ತಾಯಿ, ಗುರು ಹಿರಿಯರು ಮತ್ತು ಮಿತ್ರರ ರೂಪದಲ್ಲಿ ಕಳುಹಿಸಿರುತ್ತಾನೆ. ಅಂತಹವರ ಸೇವೆ ಮತ್ತು ಸಲಹೆಗಳನ್ನು ಪತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಕೂಲಂಕುಶವಾಗಿ ಪರೀಕ್ಷಿಸಿ ಅವರು ಹಿತಚಿಂತಕರೋ ಇಲ್ಲವೇ ಹಿತಶತ್ರುಗಳೋ ಎಂದು ನಿರ್ಧರಿಸುವ ಜವಾಬ್ಧಾರಿ ನಮ್ಮದೇ ಆಗಿರುತ್ತದೆ.
ಜೀವನದಲ್ಲಿ ನಾವು ಸದುದ್ದೇಶವನ್ನು ಹೊಂದಿದ್ದಲ್ಲಿ, ಅದು ಸದಾಕಾಲವೂ ನಮ್ಮನ್ನು ಒಳ್ಳೆಯ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ ಮತ್ತು ಒಳ್ಳೆಯ ವ್ಯಕ್ತಿಗಳನ್ನು ಗುರುತಿಸುವುದಲ್ಲಿ ಸಹಕಾರಿಯಾಗಿರುತ್ತದೆ. ಒಳ್ಳೆಯ ಆಲೋಚನೆಗಳನ್ನು ಹೊಂದಿದ ಮನಸ್ಸಿಗೆ ಕೆಟ್ಟ ಕೆಲಸಗಳನ್ನು ಮಾಡಲು ಎಂದಿಗೂ ಸಾಧ್ಯವಾಗುವುದೇ ಇಲ್ಲ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಮಹಾಭಾರತವನ್ನು ಉದಾಹರಣೆಯಾಗಿಟ್ಟುಕೊಂಡು ಬರೆದ ಉತ್ತಮ ಲೇಖನ. ಇದನ್ನು ನೋಡಿದಾಗ ನಮ್ಮ ತಾಳಮದ್ದಳೆಗಳ ನೆನಪಾಯಿತು.
LikeLiked by 1 person