ಆತ ದೇಶ ಕಾಯುವ ವೀರ ಯೋಧ. ತನ್ನ ಸಂಸಾರವನ್ನು ಇಲ್ಲಿ ಬಿಟ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಸಲುವಾಗಿಯೇ ದೂರದ ಗಡಿಯಲ್ಲಿ ಚಳಿ ಮಳೆಯನ್ನು ಲೆಕ್ಕಿಸದೇ ತನ್ನ ಸೇವೆಯನ್ನು ಸಲ್ಲಿಸುತ್ತಾ ಕಾಲ ಕಾಲಕ್ಕೆ ತಾನು ದುಡಿಡಿದ್ದ ಹಣವನ್ನು ಕಳುಹಿಸುತ್ತಾ ಸಮಯ ಸಿಕ್ಕಾಗಲೆಲ್ಲಾ ಊರಿಗೆ ಬಂದು ಹೋಗುತ್ತಿರುತ್ತಾನೆ. ಇನ್ನು ಆತನ ಪತ್ನಿಯೂ ತಮ್ಮ ಮಕ್ಕಳಿಗೆ ಮನೆಯ ಯಜಮಾನರು ತಮ್ಮ ಜೊತೆ ಇಲ್ಲದಿರುವುದು ಗೊತ್ತೇ ಆಗದಂತೆ ಯಜಮಾನರು ಕಳುಹಿಸಿದ ಹಣದಲ್ಲಿಯೇ ಹಾಗೂ ಹೀಗೂ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಸಾಕಿ ಸಲಹಿ ಉತ್ತಮ ವಿದ್ಯಾಭ್ಯಾಸ ಮಾಡಿಸುತ್ತಾಳೆ. ಇನ್ನು ಮನೆಯಲ್ಲಿರುವ ಅಜ್ಜಿ ತನ್ನ ಮೊಮ್ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸುತ್ತಾ, ತಾನು ಬದುಕಿರುವಷ್ಟರಲ್ಲಿಯೇ ಮೊಮ್ಮಗಳ ಮದುವೆ ಮಾಡಿ ಮರಿಮೊಮ್ಮಕ್ಕಳನ್ನು ನೋಡಲು ಆಸೆ ಪಡುತ್ತಿದ್ದಂತಹ ಅಜ್ಜಿ. ಅಕ್ಕ ಚೆನ್ನಾಗಿ ಓದಿದರ ಅದೇ ಹಾದಿಯಲ್ಲಿ ತಾನೂ ಮುಂದುವರೆಯಬಹುದು ಎಂದು ಸಂಭ್ರಮಿಸುತ್ತಿದ್ದಂತಹ ತಮ್ಮ ಹೀಗಿತ್ತು ಆ ಸುಂದರ ಸಂಸಾರ.
ತಂದೆ,ತಾಯಿ, ಅಜ್ಜಿ ಮತ್ತು ತಮ್ಮಂದಿರ ಪ್ರೀತಿ ಮತ್ತು ಅದರಗಳಿಂದ ಮುದ್ದಾಗಿ ಬೆಳೆದ ಹುಡುಗಿ ನೋಡ ನೋಡುತ್ತಿದ್ದಂತೆಯೇ ಶಾಲಾ ಕಾಲೇಜುಗಳನ್ನು ದಾಟಿ ಬಿ.ಇ. ಪದವಿಯನ್ನು ಪಡೆಯುತ್ತಾಳೆ. ಅಷ್ಟು ಓದಿದ ನಂತರ ಮನೆಯಲ್ಲಿ ಸುಮ್ಮನೆ ಕೂಡುವುದೇಕೆ? ದೂರದ ಬೆಂಗಳೂರಿಗೆ ಹೋಗಿ ಕೆಲ ಕಾಲ ದುಡಿದು ನನ್ನ ಕಾಲ ಮೇಲೆ ನಾನು ನಿಂತುಕೊಳ್ಳುತ್ತೇನೆ ಎನ್ನುತ್ತಾಳೆ. ಬೇಡ ಮಗಳೇ, ನೀನು ದುಡಿದ ಹಣದಿಂದ ನಾವೇನೂ ಬದುಕಬೇಕಿಲ್ಲ ಎಂದು ತಂದೆ ತಾಯಿಯರು ಪರಿ ಪರಿಯಾಗಿ ಹೇಳಿದರೂ ವಯೋಸಹಜ ಹುಂಬು ತನದಿಂದ ಹಾಗೂ ಹೀಗೂ ಮನೆಯವರನ್ನು ಒಪ್ಪಿಸಿ ಬೆಂಗಳೂರಿಗೆ ಬಂದು ಪಿ,ಜಿ.ಒಂದರಲ್ಲಿ ಇದ್ದು ಕೊಂಡು ತಿಂಗಳಿಗೆ ಸುಮಾರು 40,000/- ಸಂಬಳ ಪಡೆಯುವಂತಹ ಕೆಲಸ ಗಿಟ್ಟಿಸಿಕೊಂಡಿದ್ದೇ ತಡಾ ಮನೆಯವರಿಗೆಲ್ಲರಿಗೂ ಮಗಳು ಏನೋ ಮಹತ್ಕಾರ್ಯ ಸಾಧಿಸಿದಂತಹ ಮಹದಾನಂದ. ತಾವು ಹೂಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಹೊತ್ತು ಹೆತ್ತು ಸಾಕಿ ಬೆಳಸಿ ದೊಡ್ಡವರನ್ನಾಗಿ ಮಾಡಿದ್ದಕ್ಕೆ ಒಂದು ಸಾರ್ಥಕತೆ ದೊರೆಯಿತೆಂಬ ಭಾವನೆ.
ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಸಂಸ್ಕಾರವಂತರ ಮನೆಯಲ್ಲಿ ಬೆಳೆದ್ದಿದ್ದ ಹುಡುಗಿ ಮನೆಯಿಂದ ಆಚೆ ಬರುತ್ತಿದ್ದಂತೆಯೇ ಬಿಚ್ಚಿ ಬಿಟ್ಟ ಕುದುರೆಯಂತಾಗಿ ಹೋಗುತ್ತಾಳೆ. ಅಕೆಯ ಆಸೆ ಆಕಾಂಕ್ಷೆ ಮತ್ತು ವಾಂಛೆಗಳಿಗೆ ಆಕೆ ದುಡಿಯುತ್ತಿದ್ದ ಸಂಬಳವು ಸಾಕಾಗದೇ ಹೋದಾಗಲೇ ಹೆಚ್ಚಿನ ಹಣಕ್ಕಾಕಿ ಹಾತೊರೆಯುತ್ತಿರುತ್ತಾಳೆ.
ಇಲ್ಲೊಬ್ಬ ಕಾನನಕೋಟೆಯ ಪುಡಾರಿ ಸಣ್ಣ ವಯಸ್ಸಿನಿಂದಲೂ ಮನೆ ಮಠ ಬಿಟ್ಟು ದುರ್ಜನರ ಸಹವಾಸ ಮಾಡುತ್ತಾ, ಅಕ್ರಮವಾಗಿ ಗಾಂಜಾ ಮಾರುತ್ತಾ, ಹಳ್ಳಿ ಹಳ್ಳಿಗಲ್ಲಿ ನೀಲೀಚಿತ್ರಗಳನ್ನು ತೋರಿಸುತ್ತಾ, ತನ್ನೂರಿನ ಸುತ್ತಲೂ ಪ್ರಕೃತಿ ದತ್ತವಾಗಿದ್ದ ಬಂಡೆಗಳನ್ನು ಸಮತಟ್ಟು ಮಾಡುತ್ತಾ ನೋಡ ನೋಡುತ್ತಿದ್ದಂತೆಯೇ ದಮ್ಮಯ್ಯಾ ಗುಡ್ಡಯ್ಯಾ ಎಂದು ಅವರಿವರ ಕೈಕಾಲು ಹಿಡಿದು ಸಮಯ ಸಂಧರ್ಭಕ್ಕೆ ತಲೆಯನ್ನೂ ಹಿಡಿದು, ರಾಜಕೀಯವಾಗಿ ಬೆಳೆದು ಶಾಸಕನಾಗುತ್ತಾನೆ. ಬರೀ ಗೈಯಲ್ಲಿ ಬೆಂಗಳೂರಿಗೆ ಬಂದವ ಕೋಟ್ಯಾಂತರ ರೂಪಾಯಿಗಳ ಒಡೆಯನಾಗಿ ಬೆಳೆಯುವ ಪರಿಯಲ್ಲಿ ಸ್ನೇಹಿತರನ್ನೂ, ಶತ್ರುಗಳನ್ನೂ ಸಮಪ್ರಮಾಣದಲ್ಲಿಯೇ ಗಳಿಸಿರುತ್ತಾನೆ.
ದೂರದ ಸಕ್ಕರೆ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಮಾಡುತ್ತಾ ಅಣ್ಣ ತಮ್ಮಂದಿರೆಲ್ಲರೂ ಒಂದೊಂದು ರಾಜಕೀಯ ಪಕ್ಷದಲ್ಲಿದ್ದು ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅವರ ಕುಟುಂಬದ ವ್ಯವಹಾರಕ್ಕೆ ಧಕ್ಕೆಯಾಗದಂತೆ ನೋಡಿಕೊಂಡು ಹೋಗುತ್ತಿರುತ್ತಾರೆ.
ಅಧಿಕಾರದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಭರದಲ್ಲಿ, ಬಂಡೆ ರಾಜಕಾರಣಿ ಸಕ್ಕರೆ ಜಿಲ್ಲೆಗೆ ಕಾಲಿಟ್ಟಿದ್ದು ಕುಟುಂಬ ರಾಜಕಾರಣಿಗಳಿಗೆ ಇಷ್ಟವಾಗದೇ ಒಂದೇ ಪಕ್ಷದಲ್ಲಿದ್ದರೂ ಸಣ್ಣದಾದ ವೈಮನಸ್ಯ ಕಡೆಗೆ ದೊಡ್ಡದಾಗಿ ಬೆಳೆದು ಸಮ್ಮೀಶ್ರಸರ್ಕಾರವನ್ನೇ ಉರುಳಿಸಿ ತಮ್ಮದೇ ಆದ ಅವಕಾಶವಾದಿ ಸರ್ಕಾರವನ್ನು ರಚಿಸುವುದರಲ್ಲಿ ಕುಟುಂಬ ರಾಜಕಾರಣಿ ಯಶಸ್ವಿಯಾಗುತ್ತಾನೆ. ಇದನ್ನ ಸಹಿಸದ ಬಂಡೇ ರಾಜಕಾರಣಿ ಹೇಗಾದರೂ ಮಾಡಿ ಕುಂಟುಂಬ ರಾಜಕಾರಣಿಯನ್ನು ಮಣಿಸಲೇ ಬೇಕೆಂಬ ಆಲೋಚನೆ ನಡೆಸುತ್ತಿದ್ದಾಗಲೇ ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡುವ ತಂಡವೊಂದು ಅವನ ಕಣ್ಣಿಗೆ ಬೀಳುತ್ತದೆ.
ಇತ್ತ ಹೆಚ್ಚಿನ ಹಣ ಸಂಪಾದಿಸಲು ಏನು ಮಾಡಲೂ ಸಿದ್ಧವಿದ್ದ ಹುಡುಗಿ ಅತ್ತ, ಹುಡುಗಿಯರನ್ನೇ ಮುಂದಿಟ್ಟುಕೊಂಡು ಹಣ ಮಾಡುತ್ತಿದ್ದ ತಂಡ ಎರಡೂ ಅದಾವುದೋ ಬಾದರಾಯಣ ಸಂಬಂಧದ ರೂಪದಲ್ಲಿ ಭೇಟಿಯಾಗಿದ್ದೇ ತಡಾ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗುತ್ತದೆ. ಸುಲಭರೂಪದಲ್ಲಿ ಹಣವನ್ನು ಸಂಪಾದಿಸುವ ಭರದಲ್ಲಿದ್ದ ಆ ಹುಡುಗಿಗೆ ತನ್ನ ಶೀಲ, ವಂಶದ ಗೌರವ, ಸಮಾಜದಲ್ಲಿನ ಸಭ್ಯತೆ ಮತ್ತು ಗೌರವವೆಲ್ಲವೂ ಗೌಣವಾಗಿ ತನ್ನ ಸೆರಗನ್ನು ಹಾಸಿ ಆ ಕುಟುಂಬರಾಜಕಾರಣಿಯನ್ನು ಪಲ್ಲಂಗದ ಮೇಲೆ ಖೆಡ್ಡಾಕ್ಕೆ ಕೆಡವಿಕೊಳ್ಳುತ್ತಾಳೆ. ಇದನ್ನು ಆ ಹನಿಟ್ರ್ಯಾಪ್ ತಂಡ ರೆಕಾರ್ಡ್ ಮಾಡಿಕೊಂಡು ತಮ್ಮ ಅಗತ್ಯಕ್ಕೆ ತಕ್ಕಂತೆ ಏಡಿಟ್ ಮಾಡಿ ಸಿಡಿ ತಯಾರಿಸಿ ಕುಟುಂಬ ರಾಜಕಾರಣಿಯನ್ನು ಬ್ಲಾಕ್ ಮಾಡಿಯೂ ಹಣ ಸಂಪಾದಿಸಿದ್ದಲ್ಲದೇ, ಮತ್ತೊಂದು ಸಿಡಿಯನ್ನು ಬಂಡೆ ರಾಜಕಾರಣಿಗೂ ಕೊಟ್ಟು ಅವನ ಆಣತಿಯ ಮೇರೆಗೆ ಏಕಾಏಕಿ ಅದೊಂದು ದಿನ ಇಡೀ ಪ್ರಪಂಚವೇ ನೋಡುವಂತೆ ಮಾಡಿ ಕುಟುಂಬ ರಾಜಕಾರಣಿಯ ಮಾನವನ್ನು ಹರಾಜು ಹಾಕುವುದರಲ್ಲಿ ಸಫಲರಾಗುವುದಲ್ಲದೇ, ಕುಟುಂಬ ರಾಜಕಾರಣಿಯನ್ನು ಮಂತ್ರಿಗಿರಿಯಿಂದ ಕೆಳಗೆ ಇಳಿಸುವುದರಲ್ಲಿಯೂ ಯಶಸ್ವಿಯಾಗುತ್ತಾರೆ.
ಮಗಳು ಬೆಂಗಳೂರಿನಲ್ಲಿ ಒಳ್ಳೆಯ ಕಂಪನಿಯಲ್ಲಿ ಮಾನ ಸನ್ಮಾನಗಳಿಂದ ದುಡಿಯುತ್ತಿದ್ದಾಳೆ ಎಂದು ಸಂಭ್ರಮಿಸುತ್ತಿದ್ದ ಕುಟುಂಬದವರಿಗೆ ತಮ್ಮ ಮಗಳನ್ನು ಈ ರೀತಿಯ ಅವತಾರದಲ್ಲಿ ನೋಡಿ ಬೆಚ್ಚಿ ಬೆರಗಾಗುತ್ತಾರೆ. ಮಗಳೇ ಇದ್ಯಾಕೆ ಬೇಕಿತ್ತು ಎಂದು ತಂದೆಕೇಳಿದರೆ ಅಕ್ಕಾ ಮೂರು ಹೊತ್ತು ನೆಮ್ಮದಿಯಾಗಿ ತಿನ್ನಲು ನೆಮ್ಮದಿಯಾದ ಕೆಲವಿದ್ದಾಗ ಇಂತಹ ಕೆಲಸ ಬೇಕಿತ್ತೇ ಎಂದು ಕೇಳುವ ತಮ್ಮನ ಅಳಲು ನಿಜಕ್ಕೂ ಹೇಳ ತೀರದು.
ಕಂಡವರ ಮನೆಯಲ್ಲಿ ಹೆಣ ಬಿದ್ದಿದ್ದು ಅಲ್ಲಿ ಹಾಕಿದ್ದ ಬೆಂಕಿಯಲ್ಲಿ ತಮ್ಮ ಚಳಿಯನ್ನು ಕಾಯಿಸಿಕೊಳ್ಳುವಂತಹ ಮಾಧ್ಯಮದವರು ಇಂತಹ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ದಿನದ 24 ಗಂಟೆಗಳೂ ಬ್ರೇಕಿಂಗ್ ನ್ಯೂಸ್ ಎನ್ನುತ್ತಾ ತೋರಿಸಬಾರದ್ದಲ್ಲವನ್ನೂ ತೋರಿಸುತ್ತಾ ಆ ಹುಡುಗಿ ಮತ್ತವರ ಕುಟುಂಬದ ಮಾನ ಮರ್ಯಾದೆಯನ್ನು ಮೂರು ಪಾಲು ಮಾಡಿ ಬಿಡುತ್ತಾರೆ.
ಇನ್ನು ಪಾಳು ಬಿದ್ದ ಮನೆಯಲ್ಲಿ ಗಳವನ್ನು ಹಿರಿದುಕೊಂಡು ತನ್ನ ಮನೆ ಕಟ್ಟಿಕೊಳ್ಳುವಂತೆ, ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕರೀ ತಂಪುಕನ್ನಡಕ ಹಾಕಿಕೊಂಡು ಮಾಧ್ಯಮಗಳ ಮುಂದೆಯೂ ಮತ್ತು FB Live ಮಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳಲು ಹಪಾಹಪಿ ಪಡುವ ವಕೀಲನೊಬ್ಬ ಇವರಿಗೆ ತಗಲು ಹಾಕಿಕೊಳ್ಳುತ್ತಾನೆ.
ಒಟ್ಟಿನಲ್ಲಿ ಅಪ್ಪಾ ಅಮ್ಮಾ ಜಗಳದಲಿ ಕೂಸು ಬಡವಾಯ್ತು ಎನ್ನುವಂತೆ ಈ ರಾಜಕಾರಣಿಗಳು, ಮಾಧ್ಯಮಗಳು ಮತ್ತು ಲಾಯರ್ ಗಳ ತೆವಲಿಗೆ ಒಂದು ಕುಟುಂಬದ ಮಾನ ಮರ್ಯಾದೆಯನ್ನು ಹೇಗೆ ನಾಶ ಪಡಿದಬಹುದು ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗುತ್ತದೆ.
ತಮ್ಮ ತಮ್ಮ ತೆವಲುಗಳನ್ನು ತೀರಿಸಿಕೊಳ್ಳುವ ಸಲುವಾಗಿಿ ಇಬ್ಬರು ಪ್ರೌಢರು ಒಪ್ಪಿಕೊಂಡು ನಾಲ್ಕು ಗೋಡೆಗಳ ಮಧ್ಯೆ ನಡೆಸಿದಂತಹ ಸಂಭೋಗವಾಗುತ್ತದೆಯೇ ಹೊರತು ಅದು ಅತ್ಯಾಚಾರ ಎನಿಸುವುದಿಲ್ಲ. ಇಂತಹ ಸಂಭೋಗದಲ್ಲಿ ಇಬ್ಬರೂ ಸಂತೃಪ್ತರೇ ಹೊರತು ಇಬ್ಬರಲ್ಲಿ ಯಾರೂ ಸಂತ್ರಸ್ತರಾಗಲು ಸಾಧ್ಯವೇ ಇಲ್ಲ. ಇಂತಹ ಅಕ್ರಮ ಸಂಬಂಧದ ಸಂಭೋಗವನ್ನು ರೆಕಾರ್ಡ್ ಮಾಡಲು ಸೂಚಿಸಿದವರು, ಮಾಡಿದವರು ಮತ್ತು ಅದನ್ನು ಇಡೀ ಪ್ರಪಂಚವೇ ನೋಡುವಂತೆ ಹರಿಬಿಡುವ ಮೂಲಕ ಕೇವಲ ಆ ರಾಜಕಾರಣಿಯ ಮತ್ತು ಆ ಒಂದು ಕುಟುಂಬದ ಮಾನ ಮರ್ಯದೆಯಲ್ಲದೇ ಇಡೀ ರಾಜ್ಯದ ಮರ್ಯಾದೆಯನ್ನೇ ಹರಾಜು ಹಾಕಿದವರೇ ನಿಜಕ್ಕೂ ಮೊದಲು ಅಪರಾಧಿ ಎನಿಸಿ ಕೊಳ್ಳುತ್ತಾರೆ. ಏಕೆಂದರೆ ಯಾರಿಗೇ ಆಗಲಿ ಮತ್ತೊಬ್ಬರ ಖಾಸಗೀ ವಿಡೀಯೋಗಳನ್ನು ಅವರ ಅನುಮತಿ ಇಲ್ಲದೇ ಸಾರ್ವಜನಿಕವಾಗಿ ಹರಿಬಿಡುವುದು ಕ್ರಿಮಿನಲ್ ಅಪರಾಧವಾಗುತ್ತದೆ.
- ಈ ಪ್ರಕರಣದಲ್ಲಿ ಅಕ್ಷಪಣೆ ಮಾಡ ಬೇಕಾದವರು ಆ ರಾಜಕಾರಣಿ ಮತ್ತು ಆ ಹೆಣ್ಣುಮಗಳ ಕುಟುಂಬದವರು. ದುರಾದೃಷ್ಣವಷಾತ್ ತೋಳ ಜಾರಿ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎನ್ನುವಂತೆ ಮಾಧ್ಯಮದವರು, ವಿರೋಧಪಕ್ಷದವರು, ವಕೀಲರೂ ಎಲ್ಲರೂ ಆ ರಾಜಕಾರಣಿಯ ಮೇಲೆ ಬೀಳುವುದಲ್ಲದೇ ಆತನನ್ನು ಆರೋಪಿ ಮತ್ತು ಆಕೆಯನ್ನು ಸಂಸ್ತ್ರಸ್ತೆ ಎಂದು ಷರ ಬರೆಯುವುದಲ್ಲದೇ ಪದೇ ಪದೇ ಅತ್ಯಾಚಾರಿ ಎನ್ನುವುದು ಸರಿ ಕಾಣದು. ‘
- ಇಡೀ ಪ್ರಕರಣವನ್ನು ನೋಡಿದರೆ ಎಂತಹ ಸಾಮಾನ್ಯ ಮನುಷ್ಯರಿಗೂ ಇದೊಂದು ಹನಿಟ್ರ್ಯಾಪ್ ಕೇಸ್ ಎಂದು ತಿಳಿದು ಬರುತ್ತದಲ್ಲದೇ ಈ ಪ್ರಕರಣದಲ್ಲಿ ಆಕೆ ಸ್ಪಷ್ಟವಾಗಿ ಬೆಲೆವೆಣ್ಣಿನ ಪಾತ್ರ ವಹಿಸಿರುವುದು ಸ್ಪಷ್ಟವಾಗುತ್ತದೆ. ಸಾಫ್ಘ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಗೆ ಅಣೆಕಟ್ಟೆಗಳ ವಿಡೀಯೋ ಮಾಡುವ ತೆವಲೇಕೆ? ಅದಾಗಲೇ ಕೈ ತುಂಬ ಸಂಬಳ ತೆಗೆದುಕೊಳ್ಳುತ್ತಿದ್ದವಳು ಯಕಚ್ಚಿತ್ ಸಂಬಳ ಕೊಡುವ ಸರ್ಕಾರಿ ಉದ್ಯೋಗಕ್ಕೆ ಹಾತೊರೆಯುತ್ತಾಳೆ ಎಂದರೆ ನಂಬಲು ಸಾಧ್ಯವೇ?
- ತನ್ನ ಹೊಟ್ಟೆ ಪಾಡಿಗಾಗಿ ರಸ್ತೆ ಬದಿಯ ಲೈಂಗಿಕ ಕಾರ್ಯಕರ್ತೆಯರನ್ನು ಹಿಡಿದು ಬಡಿದು ಅವರಿಂದ ನಾಲ್ಕಾರು ಕಾಸುಗಳನ್ನು ಕಿತ್ತಿ ಕಾಟ ಕೊಡುವ ಪೊಲೀಸರಿಗೆ ಇಂತಹ ಬೆಲೆವೆಣ್ಣನ್ನು ಹಿಡಿಯಲು ಒಂದು ತಿಂಗಳಾದರೂ ಆಗಲಿಲ್ಲವೆಂದರೆ ಅವರ ಮೇಲೆ ಒತ್ತಡ ಹಾಕುತ್ತಿರುವ ಕಾಣದ ಕೈಗಳಾವುವು?
- ರಾಜ್ಯದಲ್ಲಿ ಇರುವ ಸಮಸ್ಯೆಗಳನ್ನು ಕುರಿತಾಗಿ ವಿಧಾನ ಸಭೆಯಲ್ಲಿ ಚರ್ಚಿಸುವ ಸಲುವಾಗಿ ಅಧಿವೇಶನ ನಡೆಸಿದರೆ, ತಮ್ಮ ಪಕ್ಷದವರ ಪಾತ್ರವಿರುವುದು ಅಂಗೈನಲ್ಲಿ ಇರುವ ಹುಣ್ಣಿನಷ್ಟೇ ಸ್ಪಷ್ಟವಾಗಿ ಕಾಣಿಸುತ್ತಿದ್ದರೂ, ಅದರ ಕುರಿತಂತೆ ಗಲಾಟೆ ಎಬ್ಬಿಸಿ ಅಧಿವೇಶನವನ್ನೇ ಮೊಟುಕುಗೊಳಿಸಿ ಸಾಧಿಸಿದ್ದಾದರೂ ಏನು?
- ಈ ಹಿಂದೆ ಇದೇ ರೀತಿ ಖುಲ್ಲಂ ಖುಲ್ಲಂ ಆಗಿ ಸಿಕ್ಕಿ ಬಿದ್ದಿದ್ದ ನರ್ಸ್ ರೇಣುಕಾಚಾರ್ಯ, ಹರತಾಳು ಹಾಲಪ್ಪ ಮತ್ತು ಮೇಟಿ ಕೇಸಿನಲ್ಲಿ ನಡೆಸಿದ ತನಿಖೆ ಹಳ್ಳ ಹಿಡಿದು ಕಡೆಗೆ ಆಪಾದಿತರೆಲ್ಲರೂ ಖುಲಾಸೆ ಹೊಂದಿವುದು ಕಣ್ಣ ಮುಂದಿರುವಾಗ ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದೆಂಬ ಭರವಸೆ ಯಾರಿಗೂ ಇಲ್ಲವಾಗಿದೆ?
- ನಾಳೆ ಈ ಪ್ರಕರಣವೇ ಹಳ್ಳ ಹತ್ತಿ ಎಲ್ಲಾ ಆರೋಪಿಗಳೂ ನಿರಪರಾಧಿಗಳು ಎಂದು ಬಿಡುಗಡೆ ಹೊಂದಿದರೆ, ಆ ಎರಡೂ ಕುಟುಂಬದವರ ಬೀದಿ ಪಾಲಾದ ಮಾನದ ಬಗ್ಗೆ ಮಾಧ್ಯನದವರಿಗೂ, ಹನಿಟ್ರ್ಯಾಪ್ ಮಾಡಿದವರಿಗೂ ಮತ್ತು ಅದನ್ನು ಮಾಡಿಸಿದ ರಾಜಕಾರಣಿಗಳಿಗೆ ತಂದು ಕೊಡಲು ಸಾಧ್ಯವೇ?
- ಇಡೀ ಪ್ರಕರಣದಲ್ಲಿ ತಮ್ಮಿಬ್ಬರ ಸಮ್ಮತದ ಭಾಗವಹಿಸುವಿಗೆ ಸ್ಪಷ್ಟವಾಗಿದ್ದರೂ ಅದು ನಕಲಿ ಸಿಡಿ ಅದು ಗ್ರಾಫಿಕ್ಸ್ ಎಂದು ಬೊಬ್ಬಿರಿಯುವುದರ ಮೂಲಕ ಯಾರ ಕಿವಿ ಮೇಲೆ ಹೂವಿಡುವ ಪ್ರಯತ್ನ ಮಾಡುತ್ತೀರೀ?
ಒಟ್ಟಿನಲ್ಲಿ ಪಡ್ಡೆ ಹುಡುಗರಿಗೆ ಪುಕ್ಕಟೆ ಮನರಂಜನೆ, ವಯಸ್ಕರಿಗೆ ಮುಜುಗರ ಮಾಧ್ಯಮದವರಿಗೆ ಕಾಮಪುರಾಣದ ಬಾಡೂಟದ ಮೂಲಕ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವಿಕೆ, ಕರೀ ಕೋಟಿನ ಕಪ್ಪು ಕನ್ನಡಕದ ಲಾಯರಿಗೆ ಪುಕ್ಕಟ್ಟೆ ಪ್ರಚಾರ, ಈಗಾಗಲೇ ಮೂರು ಬಿಟ್ಟೇ ರಾಜಕೀಯ ನಾಯಕನಾಗಿರುವವನಿಗೆ ಆಡಳಿತ ಪಕ್ಷವನ್ನು ಹಳಿಯಲು ಮತ್ತೊಂದು ಅಸ್ತ್ರ ಒಟ್ಟಿನಲ್ಲಿ ಹುಚ್ಚು ಮುಂಡೇ ಮದುವೇಲಿ ಉಂಡವನೇ ಜಾಣ ಎಂದು ಎಲ್ಲರೂ ಹರಿದು ಮುಕ್ಕುವವರೇ.
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗದು ಎಂದು ಕಚ್ಚೆ ಬಿಚ್ಚಿದವ ಮತ್ತು ಅತಿಯಾಸೆಗಾಗಿ ಸೆರಗನ್ನು ಹಾಸಿದವರು ಬಟ್ಟೆ ಬಿಚ್ಚಾಕಿ ಸಂತೃಪ್ತರಾದರೇ, ಮಾನ ಮತ್ತು ಮರ್ಯಾದೆಯನ್ನು ಕಳೆದುಕೊಂಡಿದ್ದು ಮಾತ್ರಾ ಯಾವುದೇ ತಪ್ಪು ಮಾಡದ ಇಬ್ಬರ ಕುಟುಂಬವರು. ತಮ್ಮ ತಮ್ಮ ತೆವಲುಗಳಿಗಾಗಿ ಆ ಕುಟುಂಬವರ ಮತ್ತು ರಾಜ್ಯದ ಮರ್ಯಾದೆಯನ್ನು ಹಾಕುವುದು ಬೇಕಿತ್ತಾ? ಇದೇನಾ ಸಭ್ಯತೇ? ಇದೇನಾ ಸಂಸ್ಕೃತಿ?
ಏನಂತೀರೀ?
ನಿಮ್ಮವನೇ ಉಮಾಸುತ
Good article. Keep it up.
LikeLiked by 1 person
This perhaps foretells the possible line of argument, particularly from the defense. Good analysis. No proof of coercion on the part of the alleged accused. The victim being major besides fully aware of the consequences of the steps taken voluntarily cannot plead being trapped in the web. Lost is the honour of the girl’s family. All are losers with so much cost to the State exchequer and people
LikeLiked by 1 person
ಅಧಿಕಾರದಲ್ಲಿದ್ದವನು ಸಹಾಯದ ಆಸೆ ತೋರಿಸಿ ಮಾಡಿದ ಸಂಬಂಧ ರೇಪ್ ನ ಅಡಿಯಲ್ಲೇ ಬರುತ್ತದೆ. ಉನ್ನತ ಸ್ಥಾನದಲ್ಲಿದ್ದವರ ಅನೈತಿಕ ನಡವಳಿಕೆ ಸಮಾಜದ ಮೇಲೆ ಖಂಡಿತವಾಗಿಯೂ ದುಷ್ಪರಿಣಾಮ ಬೀರುತ್ತದೆ. ಈ ಪ್ರಕರಣದಲ್ಲಿ ರಮೇಶ ಜಾರಕೀಹೋಳಿಯವರು ಖಂಡಿತವಾಗಿಯೂ ಅನೈತಿಕ ಕೆಲಸವನ್ನೇ ಮಾಡಿದ್ದಾರೆ.
LikeLiked by 1 person
ಜಾರಕಿಹೊಳಿ ಕಚ್ಚೆ ಜಾರಿಸಿದ್ದು, ಹಾಗೆ ಹಾರಿಸಲು ಪ್ರೇರಿಪಿಸಿದವರು, ಅವರಿಬ್ಬರೂ ಜಾರಿದ ವಯಕ್ತಿಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರು ಮತ್ತು ಇವೆಲ್ಲದರ ಹಿಂದಿರು ಸೂತ್ರದಾರ ಎಲ್ಲರೂ ತಪ್ಪಿತಸ್ಥರೆ.
ಬವಣೆ ಮಾತ್ರಾ ಏನೂ ಮಾಡದ ಅವರಿಬ್ಬರ ಕುಟುಂಬವರದ್ದು.
LikeLike
ಆಳುವವರು ಒಳಗೊಂಡ ಇಂಥಾ ವಿಷಯಗಳ ತನಿಖೆ ತಾರ್ಕಿಕ ಅಂತ್ಯ ಕಂಡ ಉದಾಹರಣೆ
ಇತಿಹಾಸದಲ್ಲಿದೆಯಾ ??
ಇನ್ನು ನಾಲ್ಕು ಗೋಡೆಯ ನಡುವಿನ ವಿಚಾರ ಗೋಡೆಯಾಚೆಗೆ ಬಂದ ಮೇಲೆ, ಪರಿಣಾಮಗಳನ್ನು ಎದುರಿಸದೇ ಬೇರೆ ವಿಧಿ ಇಲ್ಲವಲ್ಲ…
ವೈಯಕ್ತಿಕ ಹಿತಾಸಕ್ತಿಗಳ ಮೇಲಾಟದಲ್ಲಿ ನ್ಯಾಯಾಂಗ, ಕಾರ್ಯಾಂಗಗಳ ಮೇಲೂ ಪ್ರಭಾವ,ಒತ್ತಡ ತಂದಿರುವುದು ಅಕ್ಷಮ್ಯ..
ಸರ್ಕಾರದ ಕಾರ್ಯ-ಕಲಾಪ, ಕೆಲಸಗಳಲ್ಲಿ ಕೂಡಾ ವೇಗ ಕುಗ್ಗುವುದು ಜನ ಸಾಮಾನ್ಯನಿಗಾಗುವ ಅನ್ಯಾಯ…
ಇಡೀ ಪ್ರಕರಣ ಒಟ್ಟಾಗಿ ಅರಿಯದವರಿಗೆ
“ಕುಡಿದದ್ದು ಬೆಕ್ಕಾ, ?? ಅದು ಕುಡಿದದ್ದು ಹಾಲೇನಾ??” ಎಂಬ ಅಯೋಮಯ ಸ್ಥಿತಿ.
ಕರುನಾಡ ರಾಜಕೀಯ ಸ್ಥಿತಿ ನೋಡಿ ದೇಶವೇ ನಗುವಂತಾಗಿರುವುದು ತಲೆ ತಗ್ಗಿಸುವ ವಿಚಾರ..
ತಾರ್ಕಿಕ ಅಂತ್ಯಕ್ಕೆ ಎದುರು ನೋಡೋಣ!!!???
LikeLiked by 1 person