ನಗು ಮನುಷ್ಯರ ಜೀವನದ ಅತ್ಯಂತ ಶ್ರೇಷ್ಠವಾದ ಔಷಧ ಎಂದೇ ಪರಿಗಣಿಸಲಾಗುತ್ತದೆ. ಸದಾಕಾಲವೂ ಹಸನ್ಮುಖಿಯಾಗಿರುವರು ದೀರ್ಘಕಾಲ ಆರೋಗ್ಯವಂತರಾಗಿರುತ್ತಾರಲ್ಲದೇ ಸಮಾಜದಲ್ಲಿ ಆರೋಗ್ಯಕರವಾದ ಪರಿಸರವನ್ನು ಬೆಳಸುತ್ತಾರೆ. ಇಂತಹ ನಗುವಿನ ಹಿಂದೆ ಶುದ್ಧವಾದ ಮನಸ್ಸು ಇರುತ್ತದಾದರೂ ಅಂತಹ ನಗುವನ್ನು ವ್ಯಕ್ತಪಡಿಸುವುದು ಮಾತ್ರ ಮುಖದ ಮೇಲೆ. ಹಾಗೆ ಮುಖದ ಮೇಲೆ ನಗು ವ್ಯಕ್ತವಾದಾಗ ಎಲ್ಲರಿಗೂ ಎದ್ದು ಕಾಣುವುದೇ ಹಲ್ಲುಗಳು. ಹಲ್ಲುಗಳೇ ಮನುಷ್ಯರ ಮುಖಕ್ಕೆ ಹೆಚ್ಚಿನ ಅಂದವನ್ನು ನೀಡುತ್ತದೆ ಎಂದರೂ ಆತಿಶಯೋಕ್ತಿಯೇನಲ್ಲ. ಹಾಗಾಗಿ ಸಮಾನ್ಯವಾಗಿ ಎಲ್ಲರೂ ಸಹಾ ತಮ್ಮ ಹಲ್ಲುಗಳನ್ನು ಆದಷ್ಟೂ ಶುದ್ಧವಾಗಿ ಫಳ ಫಳನ ಹೊಳೆಯುವಂತೆ ಮತ್ತು ಆದಷ್ಟೂ ಗಟ್ಟಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಹಾಗಾಗಿಯೇ ನಮ್ಮ ಪೂರ್ವಜರು ತಮ್ಮ ಹಲ್ಲುಗಳನ್ನು ಶುಧ್ಧೀಕರಿಸಲು ಬೇವಿನ ಕಡ್ಡಿಗಳನ್ನೋ, ಇದ್ದಿಲನ್ನೋ ಇಲ್ಲವೇ ಬತ್ತದ ಹೊಟ್ಟನ್ನು ಹಂಡೆ ಒಲೆ ಉರಿಯಲ್ಲಿ ನೀರು ಕಾಯಿಸಲು ಬಳಸಿಕೊಂಡ ಇದ್ದಿಲನ್ನು ಕುಟ್ಟಿ ಪುಡಿಮಾಡಿ ಅದನ್ನು ಜರಡಿ ಹಿಡಿದು ಅದಕ್ಕೆ ಸ್ವಲ್ಪ ಪುಡಿ ಉಪ್ಪು, ಚೂರು ಪಚ್ಚ ಕರ್ಪೂರ ಮತ್ತು ಲವಂಗದ ಪುಡಿ ಎಲ್ಲವನ್ನೂ ಹದವಾಗಿ ಬೆರಸಿ ಉಪಯೋಗಿಸುತ್ತಿದ್ದರು. ಇಷ್ಟೆಲ್ಲಾ ಮಾಡಲು ಪುರುಸೊತ್ತು ಇಲ್ಲದಿದ್ದವರು ಒಲೆಯ ಬೂದಿಯನ್ನೇ ಕೈಯ್ಯಲ್ಲಿ ತೆಗೆದುಕೊಂಡು ಹಲ್ಲನ್ನು ಉಜ್ಜುತ್ತಿದ್ದರು.
ನಂಜನಗೂಡು ಎಂದಾಕ್ಷಣ ನಮಗೆ ಥಟ್ ಎಂದು ನೆನಪಾಗುವುದೇ ನಂಜನಗೂಡಿನ ಶ್ರೀ ನಂಜುಂಡೇಶ್ವರ (ಶ್ರೀಕಂಠೇಶ್ವರ) ನಂಜನಗೂಡಿನ ರಸಬಾಳೆ ಅದರ ಜೊತೆಯಲ್ಲಿಯೇ ಕಳೆದ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ನಂಜನಗೂಡಿನ ಸದ್ವೈದ್ಯಶಾಲೆಯ ಹಲ್ಲುಪುಡಿ ಎಂದರೂ ಅತಿಶಯೋಕ್ತಿಯಾಗಲಾರದು. ಇಂತಹ ನಂಜನೂಡಿನ ಹಲ್ಲುಪುಡಿಯ ಅವಿಷ್ಕಾರ ಹಿಂದೆ ಒಂದು ಹೃದಯಸ್ಪರ್ಶಿ ಕಥೆ ಇದೆ
ನಂಜನಗೂಡಿನಲ್ಲಿ ವೇದ ಶಿಕ್ಷಕರಾಗಿದ್ದ ಸ್ಚರಾವಧಾನಿ ಶ್ರಿ ನಂಜುಂಡಾವಧಾನಿ ಮತ್ತು ಶ್ರೀಮತಿ ಕೆಂಚಮ್ಮ ದಂಪತಿಗಳಿಗೆ 1887ರಲ್ಲಿ ಮಗುವಿನ ಜನನವಾಗುತ್ತದೆ. ದುರಾದೃಷ್ಟವೆಂದರೆ ತಾಯಿಯ ಗರ್ಭದಲ್ಲಿ 5 ತಿಂಗಳ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದ ಆ ಮಗುವಿಗೆ ವೆಂಕಟ ಸುಬ್ರಮಣ್ಯ ಎಂದು ನಾಮಕರಣ ಮಾಡಿ ಆ ಮಗುವಿನ ಸಂಪೂರ್ಣ ಜವಾಬ್ಧಾರಿಯನ್ನು ತಾಯಿಯೇ ವಹಿಸಿಕೊಳ್ಳುವಾಗ ಆ ತಾಯಿಯ ವಯಸ್ಸು ಕೇವಲ 16 ಅಗಿರುತ್ತದೆ. ಮನೆಯಲ್ಲಿ ಕಿತ್ತು ತಿನ್ನುತಿದ್ದ ಬಡತನ. ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದಂತಹ ಸ್ಥಿತಿ. ಮನೆ-ಮದ್ದು ನೀಡುವ ಕಲೆ ಕೆಂಚಮ್ಮನವರಿಗೆ ತಮ್ಮ ಕುಟುಂಬದಿಂದ ಬಂದ ಬಳುವಳಿಯಾಗಿದ್ದು ಅವರ ಕೈಗುಣವೂ ಚೆನ್ನಾಗಿತ್ತು. ತಮ್ಮ ಮನೆಯ ಹತ್ತಿರದಲ್ಲಿಯೇ ಇದ್ದ ಮತ್ತು ಮಧ್ಯಾಹ್ನದ ಬಿಸಿಯೂಟ ಕೊಡುತ್ತಿದ್ದ ಆಯುರ್ವೇದದ ಶಾಲೆಗೆ ತಮ್ಮ ಮಗನನ್ನು ಸೇರಿಸಿ, ಅದೇ ಶಾಲೆಯ ಆಯುರ್ವೇದ ಪಂಡಿತರ ಮನೆಯಲ್ಲಿಯೇ 3 ರೂಪಾಯಿ ಬಾಡಿಗೆಗೆ ವಾಸವಾಗಿದ್ದು ಜೀವನನವನ್ನು ಹಾಗೂ ಹೀಗೂ ನಡೆಸಿಕೊಂಡು ಹೋಗುತ್ತಿದ್ದರು.
ಯೌವನಾವಸ್ಥೆಗೆ ಬಂದ ನಂತರ ಮೈಸೂರಿನ ಆಯುರ್ವೇದ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿಯಾಗಿ ಸೇರಿದ ವೆಂಕಟ ಸುಬ್ರಮಣ್ಯರವರು ಅದೊಮ್ಮೆ ತಮ್ಮ ಹುಟ್ಟೂರಾದ ನಂಜನಗೂಡಿನಲ್ಲಿ ನಡೆದ ಹೋಮ-ಹವನದ ಧಾರ್ಮಿಕ ಕಾರ್ಯಕ್ರಮ ಮುಗಿದ ನಂತರ ಆ ಹೋಮಕುಂಡದಲ್ಲಿದ್ದ ಭಸ್ಮವನ್ನು ವಿಭೂತಿಯಾಗಿಯೋ ಇಲ್ಲವೇ ಗಿಡಗಳಿಗೆ ಗೊಬ್ಬರದ ರೀತಿಯಲ್ಲಿ ಹಾಕುವ ಬದಲು ಅದೇ ಭಸ್ಮದಿಂದಲೇ ಹಲ್ಲಿನ ಪುಡಿಯನ್ನೇಕೆ ತಯಾರಿಸಬಾರದೆಂಬ ಆಲೋಚನೆ ತಲೆಗೆ ಹೊಳೆದ ನಂತರ, ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಅದರ ಜೊತೆಗೆ ಭತ್ತದ ಹೊಟ್ಟನ್ನು ಬೆರೆಸಿ ಅದಕ್ಕೆ ಕೆಲ ಗಿಡಮೂಲಿಕೆಗಳನ್ನು ಕುಟ್ಟಿ ಪುಡಿ ಮಾಡಿದ ಮಿಶ್ರಣವನ್ನು ತಯಾರಿಸಿ ಆರೋಗ್ಯಕರವಾದ ಘಮ ಘಮ ಎನ್ನುವ ಹಲ್ಲಿನಪುಡಿ ಸಿದ್ಧಗೊಳಿಸಿ 1913ರ ಫೆಬ್ರುವರಿ ತಿಂಗಳಲ್ಲಿ ನಂಜನಗೂಡಿನ ನಾರಾಯಣ ಅಗ್ರಹಾರದಲ್ಲಿದ್ದ ತಮ್ಮ ಮನೆಯಲ್ಲಿಯೇ ಈ ಹಲ್ಲಿನಪುಡಿಯನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಈ ಹಲ್ಲಿನಪುಡಿಯ ಮಾರಾಟ ಅವರು ನಿರೀಕ್ಷಿಸಿದ್ದಷ್ಟು ಸುಲಭವಾಗಿರಲಿಲ್ಲ. ನಂಜನಗೂಡು, ಹುಲ್ಲಹಳ್ಳಿ ಮೈಸೂರು ಮತ್ತು ಚಾಮರಾಜ ನಗರದಲ್ಲಿ ನಡೆಯುತ್ತಿದ್ದ ಸಂತೆಗಳಿಗೆ ತಮ್ಮ ಸೈಕಲ್ಲಿನಲ್ಲಿ ಹಲ್ಲುಪುಡಿಯನ್ನು ತೆಗೆದುಕೊಂದು ಒಂದಾಣೆಗೆ ಒಂದು ಹಲ್ಲುಪುಡಿಯನ್ನು ಮಾರಾಟ ಮಾಡುತ್ತಿದ್ದರಿಂದ ಆರಂಭದಲ್ಲಿ ಇದು ಒಂದಾಣೆ ಹಲ್ಲುಪುಡಿ ಎಂದೇ ಪ್ರಖ್ಯಾತಿಯನ್ನು ಪಡೆದಿತ್ತು. ಇವೆಲ್ಲದರ ನಡುವೆಯೂ ಸುಮಾರು 20 ಕಿಮೀ ದೂರದ ಮೈಸೂರು ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಪ್ರಕೃತಿದತ್ತವಾಗಿ ಸಿಗುತ್ತಿದ್ದ ಗಿಡಮೂಲಿಕೆಗಳನ್ನು ಕೊಯ್ದು ತಂದು, ಅದನ್ನು ಸಂಸ್ಕರಿಸಿ, ಗುಲಾಬಿ ಬಣ್ಣದ ಪುಡಿಮಾಡಿ ಸಣ್ಣ ಮಾಸಲು ಬಣ್ಣದ ಕವರ್ನಲ್ಲಿ, ಶೇಖರಿಟ್ಟು ಎಲ್ಲಡೆಯಲ್ಲಿಯೂ ಮಾರಾಟ ಮಾಡಿದ ಫಲವಾಗಿ ನೋಡ ನೋಡುತ್ತಿದ್ದಂತೆಯೇ ಹತ್ತಾರು ಕಡೆಯಲ್ಲಿ ಪ್ರಖ್ಯಾತವಾಗಿದ್ದಲ್ಲದೇ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶಗಲ್ಲಿ ಪ್ರಖ್ಯಾತವಾಯಿತು.
ಇದರಿಂದ ಪ್ರೇರಿತಗೊಂಡ ಬಿ ವೆಂಕಟ ಸುಬ್ರಮಣ್ಯ ರವರು ತಮ್ಮ ಮುಂದಿನ ಬದುಕನ್ನು ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಸಲು ನಿರ್ಧರಿಸಿ, ಮೈಸೂರಿನಿಂದ 15 ಮೈಲಿ ದೂರದ ನಂಜನಗೂಡು ದಂತಧಾವನ ಚೂರ್ಣ ಕಾರ್ಖಾನೆ ಸದ್ವೈದ್ಯಶಾಲೆಯನ್ನು ಸ್ಥಾಪಿಸಿದ್ದಲ್ಲದೇ ಆಗಿನ ಕಾಲದಲ್ಲಿಯೇ ಎಲ್ಲಾ ರೀತಿಯ ಪರಿಸ್ಥಿತಿಯ ಒತ್ತಡವನ್ನು ಬದಿಗಿಟ್ಟು ಸಾಧಾರಣ ಗೃಹೋದ್ಯಮಿಯಾಗಿದ್ದವರು ಯಶಸ್ವೀ ಉದ್ಯಮಿಯಾಗುವ ಮುಖಾಂತರ ಬಿ.ವಿ. ಪಂಡಿತರೆಂದೇ ಪ್ರಖ್ಯಾತರಾದರು.
ಹೀಗೆ ಬಿ.ವಿ.ಪಂಡಿತರೆಂದು ಎಲ್ಲರ ಮನ-ಮನೆಗಳಲ್ಲಿ ಹೆಸರುಮಾಡಿದ ನಂತರ ಕಸ್ತೂರಿಮಾತ್ರೆಯ ತಯಾರಿಕೆಯನ್ನು ಆರಂಭಿಸಿದರು. 1918 ರಲ್ಲಿ ಫ್ಲ್ಯೂ ಜ್ವರ, ತೀವ್ರ ಸ್ವರೂಪದಲ್ಲಿದ್ದಾಗ ಈ ಮಾತ್ರೆಯ ಬೇಡಿಕೆ ಹೆಚ್ಚಿದ್ದನ್ನು ಕಂಡು ಅದೇ ರೀತಿಯ ಅನೇಕ ಆಯುರ್ವೇದ ಔಷಧಿಗಳನ್ನು ತಯಾರಿಕೆಯನ್ನು ಆರಂಭಿಸಿದರು. ಹೀಗೆ ಬೆಳೆಯುತ್ತಾ ಸಾಗಿದಲ್ಲದೇ ಸಾವಿರಾರು ಜನರಿಗೆ ಅವರ ಕಾರ್ಖಾನೆಯಲ್ಲಿ ನೇರವಾಗಿ ಉದ್ಯೋಗ ಕೊಟ್ಟಿದ್ದಲ್ಲದೇ, ಅವರ ಉತ್ಪನ್ನಗಳನ್ನು ದೇಶ ವಿದೇಶಗಳಲ್ಲಿ ಮಾರಾಟ ಮಾಡುವ ಮೂಲಕ ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗತರಗಿದ್ದರು. ಅಗರಬತ್ತಿಗಳು, ನೀಲ, ಜ್ಯೋತಿಷ್ ಮರ, ಬಗೆ ಬಗೆಯ ಕೇಶತೈಲಗಳು, ಶುಂಠಿ ಬಾಣಂತಿ ಲೇಹ್ಯ ಮುಂತಾದ ಉತ್ಪನ್ನಗಳು ಬಿಸಿದೋಸೆಯಂತೆ ಖರ್ಚಾಗ ತೊಡಗಿದವು. ಕಣ್ಣನ್ನು ಶುಧ್ಧೀಕರಿಸುವ ನಾರಿಕೇಳಾಂಜನ ಅವರ ಮತ್ತೊಂದು ಜನಪ್ರಿಯ ಉತ್ಪನ್ನವಾಗಿತ್ತು. ಇಂತಹ ಅನೇಕ ಹೊಸ-ಉತ್ಪನ್ನಗಳನ್ನು ಅವಿಷ್ಕರಿಸಿ ಅದನ್ನು ತಯಾರಿಸಿ, ಮಾರಾಟ ಮಾಡುವ ಮುಖಾಂತರ ಅನೇಕರಿಗೆ ಸ್ವಂತ ಉದ್ಯೋಗವನ್ನು ಆರಂಭಿಸಲು ಪ್ರೇರೇಪಣೆ ನೀಡಿದರು ಎಂದರೂ ತಪ್ಪಾಗಲಾರದು.
ತಮ್ಮ ಸದ್ವೈದ್ಯಶಾಲಾ ಆಯುರ್ವೇದ ಕಾರ್ಖಾನೆ ಜನಪ್ರಿಯವಾದ ನಂತರ ಬಿ.ವಿ.ಪಂಡಿತರು ಮತ್ತು ಅವರ ಮಕ್ಕಳು 1962ನೇ ಇಸವಿಯಲ್ಲಿ ನಂಜನಗೂಡಿನ ಊಟಿ ರಸ್ತೆಯಲ್ಲಿ ಶ್ರೀ ಧನ್ವಂತರಿ ಆರೋಗ್ಯಾಶ್ರಮ ಎಂಬ ಹೆಸರಿನಲ್ಲಿ ಆಯುರ್ವೇದ ಆಸ್ಪತ್ರೆಯನ್ನು ಸ್ಥಾಪಿಸಿದ್ದಲ್ಲದೇ, ಶಾಸ್ತ್ರೀಯ ಪದ್ದತಿಯಲ್ಲಿ ಆಯುರ್ವೇದ ಪರಿಣಿತರಾದ ವೈದ್ಯರು ಜನಸಾಮಾನ್ಯರಿಗೂ ಕೈಗೆಟಕುವ ಸುಲಭ ದರದಲ್ಲಿ ಪಂಚಕರ್ಮ ಮತ್ತಿತರ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿರುವ ಹೆಗ್ಗಳಿಗೆ ಇಲ್ಲಿಯದ್ದಾಗಿದೆ. ಇಂದಿಗೂ ಸಹಾ ದೇಶ ವಿದೇಶಗಳಿಂದ ಆಯುರ್ವೇದ ಚಿಕಿತ್ಸೆಯನ್ನು ಪಡೆಯಲು ಇಲ್ಲಿ ಆಗಮಿಸುತ್ತಿದ್ದಾರೆ ಎಂದರ ಈ ಆಸ್ಪತ್ರೆಯ ಖ್ಯಾತಿ ಎಲ್ಲರಿಗೂ ಅರಿವಾಗುತ್ತದೆ.
1975ರಲ್ಲಿ ಬಿ.ವಿ. ಪಂಡಿತರು ವಿಧಿವಶರಾದ ನಂತರ ಅವರ ಪುತ್ರರು ತಮ್ಮ ತಂದೆಯವರು ಆರಂಭಿಸಿದ ವೃತ್ತಿಯನ್ನೇ ಮುಂದುವರೆಸಿಕೊಂಡು ಹೋದರಾದರೂ, ಎಂಬತ್ತರ ದಶಕದದಲ್ಲಿ ತರೆ ತರಹದ ಆಕರ್ಷಣೀಯವಾದ ಜಾಹೀರಾತುಗಳೊಂದಿಗೆ ಮಾರುಕಟ್ಟೆಗೆ ದಾಂಗುಡಿ ಇಟ್ಟ ವಿದೇಶೀ ಕಂಪನಿಗಳ ಬೆಳ್ಳನೆಯ ಟೂಟ್ ಪೌಡರು ಮತ್ತು ಟೂತ್ ಪೇಸ್ಟ್‌ಗಳ ಮುಂದೆ ಕೇವಲ ಬಾಯಿ ಮಾತಿನಲ್ಲಿಯೇ ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದ ನಂಜನಗೂಡಿನ ಹಲ್ಲಿನ ಪುಡಿಯ ಬೇಡಿಕೆ ಕುಸಿಯಿತಾದರೂ ಇಂದಿಗೂ ಸಹಾ ನಂಜನಗೂಡು ಹಲ್ಲುಪುಡಿ ಮತ್ತು 200ಕ್ಕೂ ಹೆಚ್ಚು ಬಗೆಯ ಆಯರ್ವೇದ ಔಷಧಗಳನ್ನು ಸಂಸ್ಥೆ ತಯಾರಿಸುತ್ತಿದೆ. ಇತ್ತೀಚಿನವರೆಗೆ ವರ್ಷಕ್ಕೆ ಸರಿ ಸುಮಾರು 10 ಲಕ್ಷ ಹಲ್ಲಿನ ಪುಡಿ ಪೊಟ್ಟಣ ಮಾರಾಟವಾಗುತ್ತಿದ್ದ್ದರೂ ಈಗ ಬದಲಾದ ಕಾಲಮಾನದಲ್ಲಿ ಒಂದು ಲಕ್ಷ ಪೊಟ್ಟಣಕ್ಕೆ ಇಳಿದಿದ್ದನ್ನು ಗಮನಿಸಿ, ಮಾರುಕಟ್ಟೆಯಲ್ಲಿ ಸಧೃಢರಾಗುವ ಸಲುವಾಗಿ ಹಲ್ಲುಪುಡಿಯ ಸ್ವಾದವೇ ಇರುವ ಟೂತ್ ಪೇಸ್ಟ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ತಮ್ಮ ವ್ಯಾಪಾರವನ್ನು ಉಳಿಸಿಕೊಳ್ಳುವುದರ ಜೊತೆಗೆ ಮುಂದಿನ ತಲೆಮಾರಿನವರೆಗೂ ಮುಂದುವರೆಸಿಕೊಂಡು ಹೋಗಲು ಸಿದ್ಧವಾಗಿದ್ದಾರೆ.
ಪ್ರಪಂಚ ತಂತ್ರಜ್ಞಾನ ಎಷ್ಟೆಲ್ಲಾ ಮುಂದುವರೆದಿದ್ದರೂ ಇಂದಿಗೂ ಸಹಾ ಪಾರಂಪರಿಕ ಭತ್ತದ ಹೊಟ್ಟಿನ ಬೂದಿಯಿಂದಲೇ ಹಲ್ಲಿನಪುಡಿಯನ್ನು ತಯಾರಿಸಲಾಗುತ್ತಿದೆ ಮತ್ತು ಇದಕ್ಕೆ ಯಾವುದೇ ರೀತಿಯ ಮೂಳೆಗಳನ್ನು ಬೆರಸಲಾಗುವುದಿಲ್ಲ. ಈ ಹಲ್ಲಿನ ಪುಡಿಯಲ್ಲಿ ಗಿಡಮೂಲಿಕೆಗಳ ಮಿಶ್ರಣ ಇರುವುದರಿಂದ ಹಲ್ಲಿನ್ನು ಶುದ್ಧೀಕರಿಸುವುದಲ್ಲದೇ, ಎಲೆ-ಅಡಿಕೆ, ತಂಬಾಕು ಸೇವನೆಯಿಂದ ಹಲ್ಲಿನ ಮೇಲೆ ಉಂಟಾಗುವ ಕೆಂಪು ಬಣ್ಣವೂ ಕೂಡಾ ಹೋಗುತ್ತದೆ. ಇದರ ಜೊತೆಗೆ ಒಸಡಿನ ನೋವು ನಿವಾರಣೆಯಾಗುವುದಲ್ಲದೇ ಒಸಡು ಹಲ್ಲನ್ನು ಧೃಢವಾಗಿ ಹಿಡಿದಿಟ್ಟುಕೊಳ್ಳವ ಶಕ್ತಿಯನ್ನು ಕೊಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ ಈ ನಂಜನಗೂಡಿನ ಹಲ್ಲಿನ ಪುಡಿಯಿಂದ ಹಲ್ಲನ್ನು ಉಜ್ಜುವುದರಿಂದ ಹಲ್ಲುಗಳು ಸುರಕ್ಷಿತವಾಗಿರುತ್ತವೆ ಮತ್ತು ಇಡೀ ದಿನ ಬಾಯಿ ಆಹ್ಲಾದಕರವಾದ ಪರಿಮಳವನ್ನು ನೀಡುತ್ತದೆ. ಎಲ್ಲದ್ದಕಿಂತಲೂ ಮುಖ್ಯವಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲದಿರುವುದು ಅತ್ಯಂತ ಗಮನಾರ್ಹನಾದ ಅಂಶವಾಗಿದೆ. ಬ್ರಷ್ ಮುಖಾಂತಹ ಹಲ್ಲನ್ನು ಉಜ್ಜುವುದಕ್ಕಿಂತ ಕೈಬೆರಳಿನಿಂದ ಹಲ್ಲನ್ನು ತಿಕ್ಕುವುದರಿಂದ ಹಲ್ಲುಗಳು ಸ್ವಚ್ಛಗೊಳ್ಳುತ್ತವೆ ಮತ್ತು ಒಸಡಿಗೂ ಮಸಾಜ್ ಮಾಡಿದಂತಾಗುತ್ತದೆ.
1913ರಲ್ಲಿ ಚಿಕ್ಕ ಮನೆಯೊಂದರಲ್ಲಿ ಆರಂಭವಾದ ಸದ್ವೈದ್ಯ ಶಾಲಾ ನೂರರ ನೆನಪು ಸ್ಮರಣ ಸಂಚಿಕೆಯನ್ನು 2016 ರಲ್ಲಿ ಹೊರತಂದಿದ್ದಲ್ಲದೇ ತಮ್ಮ ಸಂಸ್ಥೆಯಲ್ಲಿ ಹಲವಾರು ವರ್ಷದಿಂದ ಕೆಲಸ ಮಾಡಿದ ಹಿರಿಯ ಕಾರ್ಮಿಕರನ್ನು ಸನ್ಮಾನಿಸುವಂತ ಶ್ಲಾಘನೀಯವಾದ ಕೆಲಸವನ್ನೂ ಈ ಸಂಸ್ಥೆ ಮಾಡಿದೆ. ಬಿ.ವಿ. ಪಂಡಿತರ ನಂತರ ಅವರ ಪುತ್ರರಾದ ಬಿ.ವಿ. ನಂಜುಂಡಸ್ವಾಮಿ, ಬಿ.ವಿ. ರಾಮಸ್ವಾಮಿ, ಬಿ.ವಿ. ಬಾಲಸುಬ್ರಹ್ಮಣ್ಯ ಹಾಗೂ ಬಿ.ವಿ. ವೆಂಕಟೇಶಮೂರ್ತಿ ಯವರು ಆಯುರ್ವೇದ ಉತ್ಪನ್ನಗಳ ಕಾರ್ಖಾನೆ ಮತ್ತು ಆಸ್ಪತೆಗಳನ್ನು ನೋಡಿ ಕೂಂಡರೆ, ಸದ್ಯಕ್ಕೆ ಮೂರನೇ ತಲೆಮಾರಿನ ಬಿ.ಎಸ್. ಜಯಂತ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಅವರ ಸೋದರರಾದ ರಾಜೇಶ್ ಹಾಗೂ ರಾಮಗೋಪಾಲ್ ಕಂಪೆನಿಯ ನಿರ್ದೇಶಕರಾಗಿ, ಪಾರಂಪರಿಕ ರೀತಿಯಲ್ಲಿಯೇ ಹೊಸ ಹೊಸಾ ಆವಿಷ್ಕಾರಗಳನ್ನು ಮಾಡುವ ಮುಖಾಂತರ ಬಹು ರಾಷ್ಟ್ರೀಯ ಕಂಪನಿಗಳ ದಂತ ಮಂಜನಗಳಿಗೆ ಸಡ್ಡು ಹೊಡೆದು ನಂಜನಗೂಡಿನ ಸದ್ವೈದ್ಯಶಾಲೆಯ ದಂತ ಮರ್ಜನವನ್ನು ಮತ್ತೆ ಎತ್ತರಕ್ಕೇರಿಸುವ ಸಂಕಲ್ಪವನ್ನು ತೊಟ್ಟಿದ್ದಾರೆ.
ಅಂದು ಹಲ್ಲನ್ನು ಉಜ್ಜಲು ಉಪ್ಪು-ಇದ್ದಿಲನ್ನು ಬಳಸುತ್ತಿದ್ದನ್ನು ಥೂ ,ಛೀ ಎಂದಿದ್ದಲ್ಲದೇ, ಇದನ್ನು ಬಳಸುವವರು ಅನಾಗರೀಕರು ಎಂದು ತಮ್ಮ ತಮ್ಮ ಬಣ್ಣ ಬಣ್ಣದ ಜಾಹೀರಾತಿನ ಮುಖಾಂತರ ಹಾದಿ ತಪ್ಪಿಸಿ ಮಾರುಕಟ್ಟೆಯನ್ನು ಬಹುರಾಷ್ಟ್ರೀಯ ಕಂಪನಿಗಳು ಅತಿಕ್ರಮಿಸಿದ್ದನ್ನು ಮನಗಂಡ ಜನರು ಈಗ ಮತ್ತೆ ಸ್ವದೇಶೀ ಉತ್ಪನ್ನಗಳ ಆಯುರ್ವೇದದ ಉತ್ಪನ್ನಗಳತ್ತ ಮೊರೆ ಹೊದದ್ದನ್ನು ಗಮನಿಸಿದ ಬಹುರಾಷ್ಟ್ರೀಯ ಕಂಪನಿಗಳು ಈಗ ನಿಮ್ಮ ದಂತ ಮಂಜನದಲ್ಲಿ ಉಪ್ಪು ಇದೆಯೇ? ಇದ್ದಿಲು ಇದೆಯೇ, ಬೇವು ಇದೆಯೇ?, ಪುದೀನ ಇದೆಯೇ? ಎಂದು ಮತ್ತೆ ಬೊಬ್ಬಿರಿಯುವ ಜಾಹೀರಾತಿನ ಮುಖಾಂತರ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿರುವುದು ವಿಪರ್ಯಸವೇ ಸರಿ. ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವಂತೆ ಈಗ ನಮಗೆ ನಮ್ಮ ಪಾರಂಪಾರಿಕ ಉತ್ಪನ್ನಗಳ ಅರಿವು ಮೂಡಿರುವುದರಿಂದ ಆದಷ್ಟೂ ಸ್ವದೇಶೀ ಉತ್ಪನ್ನಗಳನ್ನು ಬಳಸುವ ಮೂಲಕ ನಮ್ಮ ಋಷಿ ಮುನಿಗಳು ಮತ್ತು ಪೂರ್ವಿಕರ ಜ್ಞಾನ ಭಂಡಾರದ ಸದುಪಯೋಗ ಪಡೆದುಕೊಳ್ಳೋಣ ಮತ್ತು ಆರೋಗ್ಯದಿಂದಿರೋಣ.
ಏನಂತೀರೀ?
ನಿಮ್ಮವನೇ ಉಮಾಸುತ
*ಭಾರತೀಯ ಉತ್ಪನ್ನ-ಭಾರತದಲ್ಲಿ ತಯಾರಿಕೆ*
ವ್ಯಾಪ್ತಿಯಲ್ಲಿ ನಿರ್ವಿವಾದವಾಗಿ ನಿಲ್ಲುವ ಬಿ.ವಿ.ಪಂಡಿತರ ಆಯಯರ್ವೇದ ಶಾಲೆಯ ಉತ್ಪನ್ನಗಳನ್ನು ಬಳಸಿ ಪ್ರೋತ್ಸಾಹಿಸುವ ಕೆಲಸ ಖಂಡಿತ ಅಗಬೇಕಿದೆ..ಆ ನಿಟ್ಟಿನಲ್ಲಿ ಸತ್ಯಾಂಶಗಳ ಸಮೇತ ಕಣ್ತೆರೆಸುವಂತಿದೆ ಲೇಖನ..
LikeLiked by 1 person