ಮಾರ್ಚ್ ತಿಂಗಳು ಮುಗಿದು ಏಪ್ರಿಲ್ ಬಂದಿತೆಂದರೆ ಶಾಲೆಯಲ್ಲಿ ಪರೀಕ್ಷೆ ಎಲ್ಲವೂ ಮುಗಿದು ಫಲಿತಾಂಶವೂ ಬಂದು ಮುಂದಿನ ತರಗತಿಗಳು ಆರಂಭವಾಗುವವರೆಗೂ ಸುಮಾರು ಎರಡು ತಿಂಗಳುಗಳ ಕಾಲ ಬೇಸಿಗೆ ರಜೆ ಇರುತ್ತದೆ. ಈ ರಜೆಯಲ್ಲಿ ಹೊರಗೆ ಬಿಸಿಲಿನಲ್ಲಿ ಮಕ್ಕಳನ್ನು ಆಟಕ್ಕೆ ಕಳುಹಿಸಿದಲು ಭಯ ಇನ್ನು ಮಕ್ಕಳಿಗೋ ಮನೆಯಲ್ಲಿಯೇ ಕುಳಿತುಕೊಳ್ಳಲು ಬೇಜಾರು. ಹಾಗಾಗಿ ಇದಕ್ಕೆಲ್ಲವೂ ಸುಲಭ ಪರಿಹಾರವೆಂದೇ ಮಕ್ಕಳನ್ನು ದೂರದ ಅಜ್ಜಾ-ಅಜ್ಜಿಯ ಮನೆಗೆ ಕಳುಹಿಸಿ ಅಲ್ಲಿನ ಸುಂದರ ವಾತಾವರಣದಲ್ಲಿ ರಮಣೀಯ ಪ್ರಕೃತಿಯ ಮಡಿಲಲ್ಲಿ, ಬೆಟ್ಟ ಗುಡ್ಡಗಳು, ನದಿ, ಹಳ್ಳ ಕೊಳ್ಳಗಳು, ಹೊಲ ಗದ್ದೆಗಳಲ್ಲಿ ಬೆಳಿಗ್ಗೆ ಸಂಜೆ ವಿಹರಿಸುತ್ತಾ ಸವಿ ಸವಿಯಾದ ಅಜ್ಜಿಯ ಕೈರುಚಿ, ತಾತನ ಮಡಿಲಲ್ಲಿ ಕುಳಿತು ರಸವತ್ತಾಗಿ ಕೇಳುವ ಕಥೆಗಳನ್ನು ಅನುಭವಿಸಿದವರಿಗೇ ಗೊತ್ತು ಅದರ ಆನಂದ.
ಪ್ರತೀ ವರ್ಷದಂತೆ ಈ ವರ್ಷವೂ ಮೂರ್ತಿಗಳು ತಮ್ಮ ಮಗ ಶಂಕರನನ್ನು ಬೇಸಿಗೆಯ ರಜೆಗೆಂದು ತಾತನ ಮನೆಗೆ ಬಿಟ್ಟು ಬರಲು ನಿರ್ಧರಿಸಿದರು. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಶಂಕರನಿಗೆ ಪ್ರಿಯವಾದ ರೈಲಿನಲ್ಲಿ ಕರೆದುಕೊಂಡು ಹೋಗಿ ಅವನ ತಾತನ ಮನೆಯಲ್ಲಿ ಬಿಟ್ಟು ಮಾರನೇಯ ದಿನ ಮೂರ್ತಿಗಳು ತಮ್ಮ ಊರಿಗೆ ಹಿಂದಿರುಗುತ್ತಿದ್ದರು. ರಜೆ ಮುಗಿದು ಇನ್ನೇನು ಶಾಲೆಗಳು ಆರಂಭವಾಗುವುದಕ್ಕೆ ಎಂಟು ಹತ್ತು ದಿನಗಳ ಮುಂಚೆ ತಾತಾ ಅಜ್ಜಿಯರೇ ಶಂಕರನನ್ನು ಕರೆದುಕೊಂಡು ಬಂದು ಮನೆಗೆ ಬಿಟ್ಟು ಒಂದೆರಡು ವಾರ ಇದ್ದು ಶಂಕರನ ಶಾಲೆ ಅರಂಭವಾದ ನಂತರ ತಮ್ಮ ಊರಿಗೆ ಮರಳುವುದು ಅಲ್ಲಿಯವರೆಗೂ ನಡೆದುಕೊಂಡು ಬಂದಿದ್ದ ವಾಡಿಕೆ.
ಶಂಕರ ಈ ಬಾರಿ 5ನೇ ತರಗತಿಯಿಂದ 6ನೇ ತರಗತಿಗೆ ತೇರ್ಗಡೆಯಾಗಿದ್ದ. ಸುಮಾರು 10 ವರ್ಷಗಳಾಗಿದ್ದು ತಕ್ಕ ಮಟ್ಟಿಗೆ ಲೋಕಜ್ಞಾನ ಮತ್ತು ವ್ಯವಹಾರಜ್ಞಾನವನ್ನು ಬೆಳಸಿಕೊಂಡಿದ್ದ. ಮನೆಗೆ ಬೇಕಾದ ಸಣ್ಣ ಪುಟ್ಟ ವಸ್ತುಗಳನ್ನು ಅಂಗಡಿಗೆ ಹೋಗಿ ತರುತ್ತಿದ್ದದಲ್ಲದೇ ಅವಶ್ಯಕತೆ ಇದ್ದಾಗ ಅದೇ ನಗರದಲ್ಲಿದ್ದ ಅವರ ಅತ್ತೆ, ಚಿಕ್ಕಪ್ಪ ಮತ್ತು ಮಾವನ ಮನಗಳಿಗೆ ಒಬ್ಬನೇ ಬಸ್ಸಿನಲ್ಲಿ ಹೋಗಿಬರುವಂತವನಾಗಿದ್ದ ಕಾರಣ ಅವನಿಗೆ ತಾನು ಎಲ್ಲಿ ಬೇಕಾದರೂ ಹೋಗಿ ಬರಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತ್ತು.
ಹಾಗಾಗಿಯೇ ಈ ಬಾರಿ ತಾತನ ಮನೆಗೆ ತಾನೋಬ್ಬನೇ ಹೋಗುತ್ತೇನೆಂದು ತನ್ನ ಜೊತೆ ಅಪ್ಪ ಬರುವುದು ಬೇಡವೆಂಬ ಪ್ರಸ್ತಾಪವನ್ನಿಟ್ಟ. ಮಗನ ಈ ಪ್ರಸ್ತಾಪ ಅಮ್ಮನಿಗೆ ಹಿಡಿಸಲಿಲ್ಲವಾದರೂ ಅಪ್ಪಾ, ಈಗಲಿಂದಲೇ ದೈರ್ಯವನ್ನು ಕಲಿಸಲಿಲ್ಲವೆಂದರೆ ಮುಂದೆ ಹೇಗೇ? ಸದಾ ನಿನ್ನ ಸೆರಗಿನಲ್ಲಿಯೇ ಮಗನನ್ನು ಎಷ್ಟು ದಿನಗಳು ಅಂತ ಹಿಡಿದಿಟ್ಟು ಕೊಳ್ಳುವೆ? ಅವನಿಗೂ ಹೊರಗಿನ ಪ್ರಪಂಚ ಮತ್ತು ಪ್ರಯಾಣದ ಅರಿವಾಗಲಿ ಎಂದಿದ್ದು ಕೇಳಿ ಶಂಕರ ಹಿರಿ ಹಿರಿ ಹಿಗ್ಗಿದ್ದ.
ಈ ಬಾರಿ ಇಂತಹ ದಿನ, ಇಂತಹ ರೈಲಿನಲ್ಲಿ ಶಂಕರ ಒಬ್ಬನೇ ಊರಿಗೆ ಬರುವ ಕಾರಣ ರೈಲು ನಿಲ್ದಾಣಕ್ಕೆ ಬಂದು ಅವನನ್ನು ಕರೆದುಕೊಂಡು ಹೋಗಲು ತಮ್ಮ ತಂದೆಯವರಿಗೆ ಪತ್ರವನ್ನೂ ಬರೆದು ಅವರೂ ಸಹಾ ಸಂತೋಷದಿಂದ ಅದಕ್ಕೆ ಒಪ್ಪಿಗೆಯ ಪತ್ರವನ್ನು ಬರೆದ್ದದ್ದು ಶಂಕರನಿಗೆ ಸ್ವರ್ಗ ಮೂರೇ ಗೇಣಿನ ಅಂತರದಲ್ಲಿತ್ತು. ಎಲ್ಲವೂ ಅಂದು ಕೊಂಡಂತೆಯೇ ನಡೆದು, ಅವನ ಪ್ರಯಾಣದ ದಿನ ಬಂದೇ ಬಿಟ್ಟಿತ್ತು. ಶಂಕರ ಮತ್ತು ಅಪ್ಪಾ ಇಬ್ಬರೂ ರೈಲು ನಿಲ್ದಾಣಕ್ಕೆ ಬಂದರು. ಅದಾಗಲೇ ನಿಗಧಿತವಾಗಿದ್ದ ಸೀಟಿನಲ್ಲಿ ಶಂಕರನ್ನು ಕೂರಿಸಿ, ಪಕ್ಕದವರಿಗೆ ಸ್ವಲ್ಪ ಇವನ ಬಗ್ಗೆ ಜಾಗೃತಿ ವಹಿಸಲು ತಿಳಿಸಿ, ಕಿಟಕಿಯ ಬಳಿ ಬಂದು ಜೋಪಾನ, ಹುಷಾರಾಗಿ ಹೋಗಿ ಬಾ. ಊರಿಗೆ ಹೋದ ಕೂಡಲೇ ಪತ್ರ ಬರೆಯುವುದನ್ನು ಮರೆಯಬೇಡ. ತಾತಾ ಅಜ್ಜಿಯರು ಹೇಳಿದಂತೆ ಕೇಳು. ಅವರನ್ನು ಅನಗತ್ಯವಾಗಿ ಗೋಳು ಹುಯ್ದುಕೊಳ್ಖಬೇಡ ಎಂದೆಲ್ಲಾ ಹೇಳುತ್ತಿದ್ದರೆ, ಮೊದಲ ಬಾರಿ ಒಬ್ಬಂಟಿ ಪ್ರಯಾಣದ ಅನುಭವ ಪಡೆಯಲು ಸಿದ್ಧನಾಗಿದ್ದ ಶಂಕರಿಗೆ ಅಪ್ಪನ ಮಾತುಗಳಾವುವೂ ಕಿವಿಗೆ ಕೇಳಿಸುತ್ತಲೇ ಇರಲಿಲ್ಲ. ಸುಮ್ಮನೆ ಕಾಟಾಚಾರಕ್ಕೆ ಅಪ್ಪಾ ಹೇಳಿದ್ದಕ್ಕೆಲ್ಲಾ ಹೂಂ.. ಗುಟ್ಟುತ್ತಿದ್ದ. ರೈಲು ಇನ್ನೇನು ಹೊರಡಲಿದೆ ಎಂದಾಗ ಅಪ್ಪಾ ಕಿಟಕಿಯಿಂದ ಮಗನಿಗೆ ಒಂದು ಸಣ್ಣ ಚೀಟಿಯೊಂದನ್ನು ಕೊಟ್ಟು ಪ್ರಯಾಣದ ಮಧ್ಯೆಯಲ್ಲಿ ಭಯಭೀತನಾದಲ್ಲಿ ಅಥವಾ ಅತ್ಯಂತ ತುರ್ತಾದ ಅವಶ್ಯಕತೆ ಬಿದ್ದಲ್ಲಿ ಮಾತ್ರವೇ ಈ ಚೀಟಿಯನ್ನು ತೆಗೆದು ನೋಡು ಎಂದು ಹೇಳಿ ಅವನ ಕೈಗೆ ಚೀಟಿಯೊಂದನ್ನು ಕೊಟ್ಟರು. ಮರು ಮಾತಿಲ್ಲದ ಅದನ್ನು ತೆಗೆದುಕೊಂಡು ತನ್ನ ಜೋಬಿನೊಳಗೆ ಇಟ್ಟುಕೊಂಡ. ರೈಲು ಹೊರಡುತ್ತಿದ್ದಂತೆಯೇ ಅಪ್ಪನಿಗೆ ಟಾಟ ಮಾಡಿದ ಶಂಕರ ತನ್ನ ಭ್ರಮಾ ಲೋಕದಲ್ಲಿ ಮುಳುಗಿದ.
ಮೊದಲ ಬಾರಿಗೆ ಒಬ್ಬಂಟಿಯಾಗಿ ರೈಲಿನಲ್ಲಿ ಅಷ್ಟು ದೂರ ಪ್ರಯಾಣ ಮಾಡುತ್ತಿದ್ದಾನೆ. ಮೊದಲ ಬಾರಿಗೆ ಅಕ್ಕ ಪಕ್ಕದಲ್ಲಿ ಅಪ್ಪ ಅಮ್ಮಾ ಇಲ್ಲದೇ ಅಪರಿಚಿತರೊಂದಿಗೆ ಹೊಗುತ್ತಿರುವುದು ಸ್ವಲ್ಪ ಅಳುಕೆನಿಸಿತಾದರೂ, ಅದನ್ನು ತೋರಿಸಿಕೊಳ್ಳದೇ ಕಿಟಕಿಯಲ್ಲಿ ಹೊರಗಿನ ದೃಶ್ಯಾವಳಿಗಳನ್ನು ನೋಡುತ್ತಾ ಹೋದ. ರೈಲಿನ ಹೊರಗೆ ನಿಂತು ಟಾಟಾ ಮಾಡುತ್ತಿದ್ದ ಪುಟ್ಟ ಮಕ್ಕಳತ್ತ ಇವನೂ ಸಂತೋಷದಿಂದ ಟಾಟಾ ಮಾಡಿದ. ರೈಲು ತನ್ನ ವೇಗವನ್ನು ಹೆಚ್ಚಿಸಿಕೊಂಡತೆ ಅಕ್ಕ ಪಕ್ಕದಲ್ಲಿದ್ದ ಮರ ಗುಡ್ಡಗಳೆಲ್ಲಾ ಅವನ ಜೊತೆ ಓಡುವಂತೆ ಭಾಸವಾಗುತ್ತಿರುವುದು ಅವನಿಗೆ ಅಚ್ಚರಿ ಮೂಡಿಸಿತು. ಅಷ್ಟರಲ್ಲಾಗಲೇ ರೈಲಿನಲ್ಲಿ ಚುರುಮುರಿ, ಕಡಲೇ ಕಾಯಿ ಸೌತೇಕಾಯಿ, ಟೀ ಕಾಫೀ ಮಾರುವವರು ಒಬ್ಬೊಬ್ಬರಾಗಿ ಬರತೊಡಗಿದರು. ಚುರುಮುರಿ ಕೊಂಡು ತಿನ್ನ ಬೇಕಿನಿಸಿ, ಜೋಬಿಗೆ ಕೈ ಹಾಕಿದರೂ, ರೈಲಿನಲ್ಲಿ ಹೊರಗಿನದ್ದೇನೂ ತಿನ್ನಬಾರದು ಮತ್ತು ಪರಿಚಿತರು ಏನು ಕೊಟ್ಟರೂ ತಿನ್ನಬಾರದೆಂದು ಅಮ್ಮಾ ಹೇಳಿದ್ದು ನೆನಪಾಗಿ ಹಾಗೇ ಸುಮ್ಮನೆ ಕುಳಿತುಕೊಂಡ. ಕೂಡಲೇ ಬ್ಯಾಗಿಗೆ ಕೈ ಹಾಕಿ ಅಮ್ಮ ಮಾಡಿಕೊಟ್ಟಿದ್ದ ಖಾರದ ಅವಲಕ್ಕಿ ತಿಂದು ನೀರು ಕುಡಿದ.
ಮನೆಯಿಂದ ತಂದಿದ್ದ ಪುಸ್ತವನ್ನು ತೆರೆದು ಸ್ವಲ್ಪ ಕಾಲ ಓದುತ್ತಿದ್ದಂತೆಯೇ. ಚಲಿಸುವ ರೈಲಿನಲ್ಲಿ ಓದುವಾಗ ಕಣ್ಣು ಒಂದು ರೀತಿ ಮಂಜು ಮಂಜಾದಂತಾದಾಗ ಪುಸ್ತಕ ಮುಚ್ಚಿಟ್ಟು ಕಿಟಕಿಯ ಹೊರಗಿನ ಪ್ರಕೃತಿಯತ್ತ ಕಣ್ಣು ಹಾಯಿಸುತ್ತಾ ಸುಂದರ ಪ್ರಕೃತಿಯನ್ನು ಆಹ್ಲಾದಿಸುತ್ತಿದ್ದಂತೆಯೇ ಇದ್ದಕ್ಕಿಂದಂತೆಯೇ ರೈಲಿನಲ್ಲಿ ಕತ್ತಲಾವರಿಸಿತು. ಎಲ್ಲರೂ ಜೋರಾಗಿ ಹೋ.. ಎಂದು ಕಿರುಚತೊಡಗಿದರು. ಶಂಕರನಿಗೂ ಕೊಂಚ ಭಯವಾಗಿ ಪಕ್ಕದ್ದಲ್ಲಿದವರನ್ನು ಬಾಚಿ ತಬ್ಬಿಕೊಂಡ. ಅವರೂ ಸಹಾ ಶಂಕರನನ್ನು ಸಂತೈಸುವಷ್ಟರಲ್ಲಿ ಬೋಗಿಯಲ್ಲಿ ಬೆಳಕು ಹರಿದಿತ್ತು. ರೈಲು ಬೆಟ್ಟವನ್ನು ಕೊರೆದು ಸುರಂಗ ಮಾರ್ಗದಲ್ಲಿ ಹೋಗಿದ್ದ ಕಾರಣ ಹಾಗಾಯಿತೆಂದೂ ಮುಂದೆ ಇಂತಹ ಹತ್ತಾರು ಸುರಂಗಳಲ್ಲಿ ರೈಲು ಹೋಗುತ್ತದೆ ಎಂಬುದನ್ನು ಪಕ್ಕದವರಿಂದ ತಿಳಿದುಕೊಂಡು ಸ್ವಲ್ಪ ಸಾವರಿಸಿಕೊಂಡ.
ಅದಾದ ಸ್ವಲ್ಪ ಹೊತ್ತಿನಲ್ಲಿಯೇ ರೈಲು ಮತ್ತೊಂದು ಸುರಂಗ ಮಾರ್ಗದೊಳಗೆ ಚಲಿಸುತ್ತಿದ್ದಂತೆಯೇ ಇಡೀ ಬೋಗಿ ಕತ್ತಲಾಗಿಹೋಯಿತು. ಮತ್ತೊಮ್ಮೆ ಎಲ್ಲರ ಗಡಚಿಕ್ಕುವ ಚೀರಾಟ. ಕಳೆದ ಬಾರಿಗಿಂತಲೂ ಈ ಬಾರಿಯ ಸುರಂಗ ದೊಡ್ಡದಿದ್ದ ಕಾರಣ ಶಂಕರನಿಗೆ ನಿಜಕ್ಕೂ ಭಯ ಮೂಡಿ ಒಮ್ಮೆ ಕೈ ಕಾಲು ನಡುಗಿ ಅವನಿಗೇ ಅರಿವಿಲ್ಲದಂತೆ ಅಪ್ಪಾ ಅಮ್ಮಂದಿರ ನೆನಪಾಗಿ ಕಣ್ಣುಗಳಲ್ಲಿ ನೀರೂರಿತು. ತನಗೆ ಅರಿವಿಲ್ಲದಂತೆ ಅವನೂ ಜೋರಾಗಿ ಕೂಗಿ, ತನ್ನನ್ನು ತಾನು ಸಂತೈಸಿಕೊಳ್ಳಲು ಪ್ರಯತ್ನಿಸಿದ. ಆದರೆ ಅದು ಸಾಲದೇ, ನಿನಗೆ ಭಯ ಅಥವಾ ತುರ್ತಾದ ಸಹಾಯದ ಅವಶ್ಯಕತೆ ಇದ್ದಲ್ಲಿ ಇದನ್ನು ತೆರೆದು ನೋಡು ಎಂದು ಅಪ್ಪಾ ಕೊಟ್ಟಿದ್ದ ಚೀಟಿಯ ನೆನಪಾಗಿ, ಅಪ್ಪಾ ಆ ಚೀಟಿಯಲ್ಲಿ ಏನು ಬರೆದಿರಬಹುದು? ಎಂದು ಕೂಡಲೇ ಜೋಬಿಗೆ ಕೈ ಹಾಕಿ ಚೀಟಿಯನ್ನು ತೆಗೆಯುವಷ್ಟರಲ್ಲಿ ಮತ್ತೆ ಬೆಳಕು ಮೂಡಿ ಅಪ್ಪಾ ಬರೆದಿದ್ದು ಸ್ಪಷ್ಟವಾಗಿ ಕಾಣ ತೊಡಗಿತು. ನಡುಗುವ ಕೈಗಳಿಂದಲೇ ಅಪ್ಪಾ ಬರೆದದ್ದನ್ನು ಓದುತ್ತಿದ್ದಂತೆಯೇ ಧಾರಾಕಾರವಾಗಿ ಕಣ್ಣಿರ ಕೋಡಿ ಹರಿದು, ಕೂಡಲೇ ತನ್ನ ಸೀಟಿನಿಂದ ಇಳಿದು ಅಪ್ಪನನ್ನು ಕಾಣಲು ಓಡತೊಡಗಿದ.
ಮಗನಿಗೆ ಧೈರ್ಯ ಬರಲೆಂದು ಆತನ ಆತ್ಮ ವಿಶ್ವಾಸ ಹೆಚ್ಚಿಸಲೆಂದು ಮಗನನ್ನು ಒಬ್ಬಂಟಿಯಾಗಿ ರೈಲಿನಲ್ಲಿ ತಾತನ ಮನೆಗೆ ಕಳುಹಿಸಲು ಒಪ್ಪಿಕೊಂಡರೂ, ಒಬ್ಬ ತಂದೆಯಾಗಿ ಮಗನ ವಾತ್ಸಲ್ಯದಿಂದ ಹೊರತಾಗಿರದೇ, ಮಗನಿಗೆ ತಿಳಿಸದೇ ತಾವೂ ಸಹಾ ಅದೇ ಬೋಗಿಯ ಕಡೆಯ ಸೀಟಿನಲ್ಲಿ ಪ್ರಯಾಣ ಮಾಡುತ್ತಿದ್ದರು ಮೂರ್ತಿಗಳು.
.
ಮಗನೇ, ನಿನಗೆ ಭಯವಾದಾಗ ಮತ್ತು ತುರ್ತು ಅವಶ್ಯಕತೆ ಬಂದ ಕೂಡಲೇ ಇದೇ ಬೋಗಿಯ ಸೀಟ್ ನಂ 72ಕ್ಕೆ ಬಾ. ನಿನ್ನ ಸಹಾಯಕ್ಕಾಗಿ ನಾನು ಇರುತ್ತೇನೆ. ಎಂದು ಆ ಚೀಟಿಯಲ್ಲಿ ಬರೆದು ಮಗನ ಕೈಗೆ ಕೊಟ್ಟಿದ್ದರು ಮೂರ್ತಿಗಳು.
ರೈಲು ಸುರಂಗ ಮಾರ್ಗದಲ್ಲಿ ಹೋದಾಗ ಮಗನ ಚೀರಾಟ ಕೇಳಿ ಕರುಳು ಚುರುಕ್ ಎಂದರೂ, ಮಗನ ದೈರ್ಯ ಮತ್ತು ಸ್ಥೈರ್ಯವನ್ನು ಪರೀಕ್ಷಿಸುವ ಸಲುವಾಗಿ ತಮ್ಮ ಸೀಟಿನಲ್ಲಿ ಗಟ್ಟಿಯಾಗಿ ಕುಳಿತು ಮನಗ ಆಗಮನದ ನಿರೀಕ್ಷೆಯಲ್ಲಿಯೇ ಇದ್ದ ಮೂರ್ತಿಗಳಿಗೆ, ಶಂಕರ ಅವರ ಬಳಿ ಬಂದು ತಬ್ಬಿಕೊಂಡಾಗ ಅವರಿಗೂ ಅರಿವಿಲ್ಲದಂತೆ ಕಣ್ಣಿನಲ್ಲಿ ನೀರು ಹರಿಯ ತೊಡಗಿತು. ಅಪ್ಪಾ ಮಗ ಒಬ್ಬರನ್ನೊಬ್ಬರು ತಬ್ಬಿಕೊಂಡು ಕೆಲ ನಿಮಿಷಗಳ ಕಾಲ ಪರಸ್ಪರ ಸಂತೈಸುವ ಸಮಯದಲ್ಲಿ ಕಣ್ಣಿರ ಧಾರೆ ಕೋಡಿಯಂತೆ ಹರಿಯಿತು. ಕೆಲ ಕಾಲದ ನಂತರ ಇಬ್ಬರೂ ಸಮಾಧಾನಗೊಂಡು ಪ್ರಯಾಣ ಮುಂದುವರೆಸಿ ಸಂಜೆಯ ಹೊತ್ತಿಗೆ ತಮ್ಮ ಊರು ತಲುಪಿದರು.
ಕೇವಲ ಮೊಮ್ಮಗನ ನೀರೀಕ್ಷೆಯಲ್ಲಿದ್ದ ತಾತನವರಿಗೆ ಮಗ ಮತ್ತು ಮೊಮ್ಮಗ ಇಬ್ಬರನ್ನೂ ಕಂಡು ಅಚ್ಚರಿಗೊಂಡರು. ಅಪ್ಪಾ ಮತ್ತು ಮಗ ತಾತನ ಕಾಲಿಗೆ ಎರಗುತ್ತಿದ್ದಂತೆಯೇ ಅವರಿಬ್ಬರನ್ನೂ ಸಾವರಿಸಿಕೊಂದು ಮೇಲಕ್ಕೆ ಎತ್ತಿದ ತಾತ, ಮತ್ತೊಮ್ಮೆ ಮೂರು ಜನ ಒಬ್ಬರನ್ನೊಬ್ಬರು ತಬ್ಬಿಕೊಂಡಾಗ ಧಾರಾಕಾರವಾಗಿ ಆನಂದ ಭಾಷ್ಪ ಹರಿಯಿತು. ಸ್ವಾಮೀ.. ನಡೀರೀ.. ನಡೀರೀ.. ಕತ್ಲಾಗೊಕ್ ಮುಂಚೆ, ಊರ್ ಸೇರ್ಕೊಂಡ್ ಬುಡಾಣಾ.. ಅಮ್ಮೋರು ನಮ್ಗಾಗಿ ಊರ್ನಾಗೆ ಕಾಯ್ತಾ ಇರ್ತಾರೆ ಎಂದು ತಾತನ ಜೊತೆಗೆ ಗಾಡಿಯನ್ನು ಹೊಡೆದುಕೊಂಡು ಬಂದಿದ್ದ ತಿಮ್ಮ ಜೋರಾಗಿ ಹೇಳಿದಾಗಲೇ ಎಲ್ಲರೂ ವಾಸ್ತವ ಲೋಕಕ್ಕೆ ಎಲ್ಲರೂ ಮರಳಿದರು.
ಎಲ್ಲರೂ ಸಂತೋಷದಿಂದ ಎತ್ತಿನ ಬಂಡಿಯನ್ನೇರಿದರು. ಶಂಕರ ತಿಮ್ಮನ ಜೊತೆ ತಾನೂ ಎತ್ತುಗಳ ಹಗ್ಗವನ್ನು ಹಿಡಿದು ಹೋಯ್ ಹೋಯ್ ಹಚ್ಚಾ ಹಚ್ಚಾ.. ನಡೀ ನಡೀ.. ಎಂದು ಎತ್ತುಗಳನ್ನು ಹುರಿದುಂಬಿಸುತ್ತಾ ಊರನ್ನು ತಲುಪುವ ಹೊತ್ತಿಗೆ ಸೂರ್ಯ ಪಶ್ಚಿಮದಿಕ್ಕಿನಲ್ಲಿ ಕಿತ್ತಳೇ ಆಕಾರದಲ್ಲಿ ಮುಳುಗುತ್ತಿದ್ದ. ಮತ್ತೊಂದು ದಿಕ್ಕಿನಲ್ಲಿ ಇವರ ಆಗಮನದ ನಿರೀಕ್ಷೆಯಲ್ಲಿಯೇ ಕಾಯುತ್ತಿದ್ದಂತೆ ಚಂದ್ರನೂ ಸಹಾ ನಗುಮುಖದಲ್ಲಿ ಸ್ವಾಗತಿಸಲು ಸಿದ್ಧನಾಗಿದ್ದ.
ಅಜ್ಜಿ ಮೂವರನ್ನು ಆರತಿ ಮಾಡಿ ಒಳಗೆ ಕರೆದುಕೊಂಡರು, ಮತ್ತೆ ಅಪ್ಪಾ ಮತ್ತು ಮಗ ಅಜ್ಜಿಯ ಕಾಲಿಗೆ ನಮಸ್ಕರಿಸಿ ಆಕೆಯ ಆಶೀರ್ವಾದ ಪಡೆದು ಸೀದಾ ಬಚ್ಚಲು ಮನೆಗೆ ಹೋಗಿ ಕೈಕಾಲು ತೊಳೆದುಕೊಂಡು ದೇವರ ಮನೆಗೆ ಹೋಗಿ ತಮ್ಮ ಕುಲದೈವಕ್ಕೆ ಕೈ ಮುಗಿಯುವಷ್ಟರಲ್ಲಿ, ಬಿಸಿ ಬಿಸಿ ಕಾಫೀ ಮತ್ತು ಹಾಲು ಮತ್ತು ಜೊತೆಗೆ ಮೊಮ್ಮಗನಿಗೆಂದು ಪ್ರೀತಿಯಿಂದ ಮಾಡಿದ ಕುರುಕುಲು ತಿಂಡಿಯೊಂದಿಗೆ ಅಜ್ಜಿ ಯಥಾಪ್ರಕಾರ ಹಾಜರ್. ಎಲ್ಲರೂ ಸಂತೋಷದಿಂದ ಸೇವಿಸುತ್ತಿರುವಾಗ, ಅಜ್ಜಿ, ಲೋ ಮಗೂ ಶಂಕರಾ.. ನಿಮ್ಜೊತೆ ನಿಮ್ಮಮ್ಮನನ್ನೂ ಕರೆದುಕೊಂಡು ಬಂದಿದ್ರೇ ಚೆನ್ನಾಗಿರ್ತಿತ್ತಲ್ವೇನೋ? ಅವಳನ್ನೋಬ್ಬಳೇ ಯಾಕೆ ಬಿಟ್ಟು ಬಂದ್ರೀ? ಎಂದು ಕೇಳಿದಾಗ, ಮೂರ್ತಿಗಳು ತಮ್ಮ ಮಗನ ಧೈರ್ಯ ಮತ್ತು ಶೌರ್ಯದ ಪ್ರತಾಪವನ್ನು ಪ್ರಲಾಪ ಮಾಡುತ್ತಿದ್ದಂತೆಯೇ, ಹೇ.. ಹೋಗಿಪ್ಪಾ.. ಎಂದು ಅಪ್ಪನ ಮೇಲೆ ಹುಸಿ ಕೋಪ ತೋರಿಸುತ್ತಾ ಅಜ್ಜಿನ ಸೆರಗಿನಲ್ಲಿ ಬಚ್ಚಿಟ್ಟುಕೊಂಡ ಶಂಕರ.
ಅಂದು ಅಜ್ಜಿಯ ಮನೆಗೆ ರೈಲಿನಲ್ಲಿ ಒಬ್ಬಂಟಿಯಾಗಿ ಹೋಗಲು ಭಯಪಟ್ಟವ ಇಂದು ಶತ್ರುಗಳಿಂದ ದೇಶವನ್ನು ಕಾಪಾಡುವ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತ, ನೂರಾರು ಸೈನಿಕರನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುರಕ್ಷಿತವಾಗಿ ತಲುಪಿಸುವ ಪೈಲೆಟ್ ಆಗಿರುವುದಲ್ಲದೇ, ಅಗತ್ಯಬಿದ್ದಾಗ ಫೈಟರ್ ಪೈಲೆಟ್ ಆಗಿ ಖುದ್ದಾಗಿ ಶತ್ರುಗಳ ಮೇಲೆ ಆಕ್ರಮಣ ಮಾಡಿ ದೇಶವನ್ನು ರಕ್ಷಿಸಬಲ್ಲಂತಹ ಸಮರ್ಥನಾಗಿದ್ದಾನೆ. ಆತ ಎಷ್ಟೇ ಉನ್ನತ ಹುದ್ದೆಗೇರಿದ್ದರೂ ಪ್ರತೀ ಬಾರಿಯೂ ತನ್ನ ಬೆಂಬಲಕ್ಕೆ ಆಪದ್ಭಾಂಧವರಂತೆ ನಿಂತ ತಂದೆ, ತಾಯಿಯರನ್ನು ಮತ್ತು ತನಗೆ ವೀರಪುರುಷರ ಕಥೆಗಳನ್ನು ಹೇಳಿ ದೇಶದ ಬಗ್ಗೆ ಜಾಗೃತಿ ಮೂಡಿಸಿದ ಅಜ್ಜಾ ಅಜ್ಜಿಯರನ್ನು ನೆನಪಿಸಿಕೊಳ್ಳುವುದನ್ನು ಮೆರೆಯುವುದಿಲ್ಲ. ಇದೇ ಅಲ್ಲವೇ ನಮ್ಮ ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿ.
ನೆನ್ನೆ ಕೆಲ ಲಜ್ಜೆಗೆಟ್ಟ ದೇಶ ವಿದ್ರೋಹಿಗಳಾದ ನಕ್ಸಲರು ಹೇಡಿಗಳಂತೆ ನಮ್ಮ ಸೈನಿಕರ ಮೇಲೆ ಹಿಂದಿನಿಂದ ಅಕ್ರಮಣ ಮಾಡಿ 20ಕ್ಕೂ ಹೆಚ್ಚಿನ ಸೈನಿಕರನ್ನು ಬಲಿ ತೆಗೆದುಕೊಂಡಿರುವುದು ನಿಜಕ್ಕೂ ಆಘಾತಕಾರಿ ಮತ್ತು ಖಂಡನಾರ್ಹವಾದ ಸಂಗತಿ. ಈ ದುರ್ಘಟನೆಯಲ್ಲಿ ಹುತಾತ್ಮರಾದವರ ಕುಟುಂಬದ ಕಣ್ಣೀರನ್ನು ಒರೆಸಿ ಅವರ ಸಾವಿಗೆ ಕಾರಣರಾದವರನ್ನೂ ನರಕ್ಕೆ ಅಟ್ಟಲು ಶಂಕರನಂತಹ ಲಕ್ಷಾಂತರ ವೀರ, ಧೀರ ಯೋಧರುಗಳು ಸನ್ನದ್ದರಾಗಿದ್ದಾರೆ ಎನ್ನುವುದಂತೂ ಸತ್ಯ. ಧರ್ಮ ಮತ್ತು ಅಧರ್ಮದ ಯುದ್ದದ ಆರಂಭದಲ್ಲಿ ಅಧರ್ಮೀಯರಿಗೇ ಜಯವಾದರೂ ಅಂತಿಮವಾದ ಜಯ ಧರ್ಮದ್ದೇ ಆಗಿರುತ್ತದೆ. ಅಧರ್ಮೀಯರು ಹೇಳ ಹೆಸರಿಲ್ಲದಂತೆ ನಾಶವಾಗುವುದಂತೂ ಸತ್ಯ ಸತ್ಯ ಸತ್ಯ.
ಏನಂತೀರೀ?
ನಿಮ್ಮವನೇ ಉಮಾಸುತ
ಸೂಚನೆ: ಬಹಳ ವರ್ಷಗ ಹಿಂದೆ ಓದಿದ್ದ ಸಂದೇಶ ಒಂದರಿಂದ ಸ್ಪೂರ್ತಿ ಪಡೆದು ಮೂಡಿ ಬಂದ ಕತೆ.