ಕುಂಭಲ್ ಘಡ್ ಭಾರತದ ಮಹಾ ಗೋಡೆ

k1

ವಿಶ್ವದ ಅತಿ ಉದ್ದದ ಗೋಡೆ ಎಂದ ತಕ್ಷಣ ಥಟ್ ಅಂತಾ ನೆನಪಾಗೋದೇ, ಚೀನಾ ದೇಶದ ಮಹಾಗೋಡೆ. ಆದರೇ, ಅದೇ ರೀತಿಯಲ್ಲಿರುವ ಮತ್ತೊಂದು ಮಹಾನ್ ಗೋಡೆ ಚೀನಾ ಗೋಡೆಗಿಂತಲೂ ಕಡಿಮೆ ಸಮಯದಲ್ಲಿ ನಿರ್ಮಾಣವಾದ, ಇಂದಿಗೂ ಅತ್ಯಂತ ಗಟ್ಟಿ ಮುಟ್ಟಾಗಿ, ವೈಭವೋಪೇತವಾಗಿ ಮತ್ತು ವಾಸ್ತು ಶಿಲ್ಪದಲ್ಲಿ ಚೀನಾ ಗೋಡೆಗೂ ಸಡ್ಡು ಹೊಡೆಯಬಲ್ಲಂತಹ ಮತ್ತೊಂದು ಉದ್ದನೆಯ ಗೋಡೆ ನಮ್ಮ ದೇಶದಲ್ಲಿ ಎನ್ನುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ.

k2

ಹೇಳೀ ಕೇಳಿ ರಾಜಸ್ಥಾನ ಮರುಭೂಮಿ ಮತ್ತು ಎತ್ತರದ ಪರ್ವತಗಳಿಂದ ಆವೃತವಾಗಿರುವ, ಹೆಚ್ಚು ಜನಸಂದಣಿ ಇಲ್ಲದ ಕಾರಣ, ಉತ್ತರದಿಂದ ದೆಹಲಿಯ ಸುಲ್ತಾನರ ಆಕ್ರಮಣಕ್ಕೆ ಆಗ್ಗಿಂದ್ದಾಗ್ಗೆ ತುತ್ತಾಗುತ್ತಿದ್ದದ್ದನ್ನು ತಡೆಯಲೆಂದೇ, 15 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಗೋಡೆಯು ರಾಜಸ್ಥಾನದ ಮರುಭೂಮಿಯಲ್ಲಿರುವ ಹದಿಮೂರು ಎತ್ತರದ ಅರಾವಳಿ ಬೆಟ್ಟ- ಕಣಿವೆಗಳ ನಡುವೆ ಭಯ ಹುಟ್ಟಿಸುವ ಕಾಡಿನ ಮಧ್ಯೆ ಹೆಬ್ಬಾವಿನಂತೆ ಮಲಗಿರುವ ಈ ಮಹಾ ಕೋಟೆ ಮೇವಾಡ ರಜಪೂತರ ಸಾಹಸ ಹಾಗೂ ಶೌರ್ಯದ ಕುರುಹಾಗಿ ಇಂದಿಗೂ ನಮ್ಮ ಮುಂದಿದೆ. ಸುಮಾರು 36 ಕಿಮಿ ಉದ್ದದ ಈ ಮಹಾಗೋಡೆಯ ಮಧ್ಯೆ ಮಡಿಕೆಗಳನ್ನು ಜೋಡಿಸಿಟ್ಟಿರುವಂತೆ ಕಾಣುವುದರಿಂದ ಇದನ್ನು ಕುಂಭಳಘಡ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮೂರು ಪ್ರಕಾರಗಳ ಕೋಟೆಗಳನ್ನು ಭಾರತಾದ್ಯಂತ ಕಾಣ ಬಹುದಾಗಿದೆ. ಆ ಮೂರೂ ಪ್ರಕಾರಗಳಾದ ವನದುರ್ಗ, ಗಿರಿದುರ್ಗ ಹಾಗೂ ನೆಲದುರ್ಗದ ಮೂರು ಪ್ರಕಾರಗಳನ್ನೂ ಈ ಕುಂಭಲ್ಘಡಲ್ಲಿಯೇ ನೋಡಬಹುದಾಗಿರುವುದು ಗಮನಾರ್ಹವಾಗಿದೆ.

k4

14ನೇ ಶತಮಾನದ ಅಂತ್ಯದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಉತ್ತರದಿಂದ ದಕ್ಷಿಣದ ಕಡೆ ದಾಳಿ ನಡೆಸಿಕೊಂಡು ಬರುವಾಗ, ರಾಜಸ್ಥಾನದ ಬಹುತೇಕ ಭಾಗವನ್ನು ಆಕ್ರಮಿಸಿ ಮೇವಾಡ್ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದದ್ದು ಒಂದು ಕಡೆಯಾದರೆ, ಗುಜರಾತಿನ ಅರಸರು ಸಹಾ ಅಗ್ಗಿಂದ್ದಾಗೆ ಮೇವಾಡದೊಂದಿಗೆ ಕಾಲು ಕೆರೆದುಕೊಂಡು ಯುದ್ದಕ್ಕೆ ಬರುತ್ತಿದ್ದರು. ಇವರಿಬ್ಬರನ್ನೂ ಎದುರಿಸಬೇಕೆಂದರೆ, ಗಡಿ ಭಾಗದಲ್ಲಿ ಒಂದು ಬಲಿಷ್ಠ ಕೋಟೆಯ ಅವಶ್ಯಕತೆ ಇದ್ದದ್ದನು ಮನಗಂಡ ಮಹಾರಾಜ ರಾಣ ಕುಂಭ ಈ ಧಾಳಿಯಿಂದ ಮೇವಾಡವನ್ನು ರಕ್ಷಿಸುವ ಸಲುವಾಗಿ ಒಂದು ಉದ್ದನೆಯ ಗೋಡೆಯನ್ನು ನಿರ್ಮಿಸಿ, ಯಾವುದೇ ರಜಪೂತ ರಾಜರು ತಮ್ಮ ಅರಮನೆಗಳು ಅಸುರಕ್ಷಿತ ಎಂದು ಭಾವಿಸಿದಲ್ಲಿ ಈ ಬೃಹತ್ ಗೋಡೆಯೊಂದಿಗಿರುವ ಕೋಟೆಗಳಲ್ಲಿ ಆಶ್ರಯ ಪಡೆಯಬಹುದೆಂಬ ಕಲ್ಪನೆಯೊಂದಿಗೆ ಮೇವಾಡ್ ಪ್ರದೇಶವನ್ನು ಮಾರ್ವಾಡ್ ನಿಂದ ಬೇರ್ಪಡಿಸಲು ಈ ಬೃಹತ್ ಗೋಡೆಯನ್ನು ಸಹ ನಿರ್ಮಿಸಿ ಶತ್ರುಗಳಿಂದ ಶಾಶ್ವತವಾದ ಪರಿಹಾರವನ್ನು ಕಂಡುಕೊಂಡಿದ್ದಲ್ಲದೇ, ಈ ಪ್ರದೇಶಕ್ಕೆ ಸಮೃದ್ಧಿ ಮತ್ತು ಪ್ರಗತಿಯನ್ನು ತಂದುಕೊಟ್ಟರು. ಇಲ್ಲಿ ಗಮನಿಸಬೇಕಾದ ಮತ್ತೊಂದು ಗಮನಾರ್ಹವಾದ ಅಂಶವೆಂದರೆ, ಚೀನಾ ಮಹಾ ಗೋಡೆಯನ್ನು ಕಟ್ಟಲು ಸುಮಾರು 1,800 ವರ್ಷಗಳಷ್ಟು ಸಮಯ ತೆಗೆದುಕೊಂಡರೆ, ಕುಂಭಳ್ ಘಡ್ ಮಹಾ ಗೋಡೆಯನ್ನು ಕೇವಲ 15 ವರ್ಷಗಳಲ್ಲಿ ಕಟ್ಟಿ ಮುಗಿಸಲಾಯಿತು ಎಂದರೆ ನಮ್ಮವರ ವೃತ್ತಿಪರತೆಯನ್ನು ಎತ್ತಿ ಹಿಡಿಯುತ್ತದೆ.

k3

ಈ ಕೋಟೆ ಕಟ್ಟಿದ್ದರ ಹಿಂದಿರುವ ಕತೆಯೇ ರೋಚಕ ಮತ್ತು ಹೃದಯವಿದ್ರಾವಕವಾಗಿದೆ. ಈ ಮೊದಲು ರಾಣಾ ಕುಂಭಾ ಅವರು ಈ ಕೋಟೆಯನ್ನು ಇಲ್ಲಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಕೆಲಿವಾಡದಲ್ಲಿ ಕೋಟೆಯನ್ನು ನಿರ್ಮಿಸಲು ಬಯಸಿ ಅಲ್ಲಿ ಕೋಟೆಯನ್ನು ಕಟ್ಟಲು ಅನೇಕ ಬಾರೀ ಪ್ರಯತ್ನಿದರೂ, ಒಂದಲ್ಲಾ ಒಂದು ಕಾರಣಕ್ಕೆ ಕೋಟೆ ಮಧ್ಯದಲ್ಲಿ ಕುಸಿಯುತ್ತಿದ್ದನ್ನು ಕಂಡು ವಿಚಲಿತರಾಗಿ ಇದಕ್ಕೊಂದು ಪರಿಹಾರವನ್ನು ಸೂಚಿಸುವಂತೆ ತಮ್ಮ ಗುರುಗಳಲ್ಲಿ ಕೇಳಿಕೊಳ್ಳುತ್ತಾರೆ. ಸಂತರು ಆ ಪ್ರದೇಶಕ್ಕೆ ಬಂದು ಕೂಲಂಕುಶವಾಗಿ ಪರಿಶೀಲಿಸಿ, ಈ ಕೋಟೆಯು ನಿರ್ವಿಘ್ನವಾಗಿ ನಿರ್ಮಾಣವಾಗಲೂ ಒಂದು ನರಬಲಿಯ ಅಗತ್ಯವಿದೆ ಎಂದು ಸೂಚಿಸುತ್ತಾರೆ. ಆ ರೀತಿಯಾಗಿ ನರಬಲಿಯಾಗಲು ಯಾರೂ ಸಹಾ ಸ್ವಯಂಪ್ರೇರಿತವಾಗಿ ಮುಂದಾಗದಿದ್ದಾಗ, ಸಂತರು ಇರುವುದೇ ಲೋಕ ಕಲ್ಯಾಣಕ್ಕಾಗಿ ಎಂದು ಹೇಳಿ ಇಂತಹ ಮಹತ್ಕಾರ್ಯದಲ್ಲಿ ತಮ್ಮನ್ನು ತಾವೇ ಅರ್ಪಿಸಿಕೊಳ್ಳುವುದಾಗಿ ಹೇಳಿ, ನಾನು ಬೆಟ್ಟವನ್ನು ಏರಿ ಮೊದಲು ನಿಲ್ಲುವ ಸ್ಥಳದಲ್ಲಿ ಕೋಟೆಯ ಮುಖ್ಯ ದ್ವಾರವನ್ನು ನಿರ್ಮಿಸಬೇಕು. ನಂತರ ಅಲ್ಲಿಂದ ಮುಂದೆ ಹೋಗಿ ಎರಡನೇ ನಿಂತು ದೇಹ ತ್ಯಾಗ ಮಾಡಿದ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಬೇಕು. ನನ್ನ ದೇಹ ಬಿದ್ದ ಜಾಗವು ಈ ದೊಡ್ಡ ಗೋಡೆಯ ಕೊನೆಯ ಹಂತವಾಗಿರುತ್ತದೆ ಎಂದು ತಿಳಿಸಿದರು. ಮಹಾರಾಜರು ಒಲ್ಲದ ಮನಸ್ಸಿನೊಂದಿಗೆ ಸಂತರು ಹೇಳಿದಂತೆಯೇ ಸಂತರನ್ನು ಹಿಂಬಾಲಿಸಿ ಆ ಎಲ್ಲಾ ಪ್ರದೇಶಗಳನ್ನು ಗುರುತು ಮಾಡಿಕೊಂಡು ಸಂತರ ಆಜ್ಞೆಯಂತೆಯೇ ಕೋಟೆಯನ್ನು ನಿರ್ವಿಘ್ನವಾಗಿ ಕಟ್ಟಿ ಲೋಕಾರ್ಪಣೆ ಮಾಡುತ್ತಾರೆ ಎನ್ನುತ್ತದೆ ಇತಿಹಾಸದ ಪುಟಗಳು.

ರಾಣ ಕುಂಭರ ಆಸ್ಥಾನದ ಅತ್ಯಂತ ಪ್ರಸಿದ್ಧ ವಾಸ್ತುಶಿಲ್ಪಿಗಳು, ಸಿದ್ಧಾಂತಿಗಳು ಮತ್ತು ಲೇಖಕರಲ್ಲಿ ಒಬ್ಬರಾಗಿದ್ದ ಮಂದನ್ ಎನ್ನುವರು ಸಮುದ್ರ ಮಟ್ಟದಿಂದ ಸುಮಾರು 3,600 ಅಡಿ ಎತ್ತರದ ಬೆಟ್ಟದ ಮೇಲೆ ಸುಂದರವಾಗಿ ವಿನ್ಯಾಸಗೊಳಿಸಿರುವ ಈ ಕೋಟೆಯ ಮುಖ್ಯ ಗೋಡೆಯು, ಹಾವಿನಂತೆ ಅಂಕುಡೊಂಕಾಗಿದ್ದು ಅದನ್ನು ಏರುತ್ತಾ ಹೋದರೆ, ಮೋಡಗಳನ್ನೇ ನೇರವಾಗಿ ತಲುಪುವಂತೆ ಭಾಸವಾಗುವಂತಿದೆ. . ಈ ಕೋಟೆಯಲ್ಲಿ 15 ಅಡಿ ದಪ್ಪದ ಮುಂಭಾಗದ ಗೋಡೆಗಳಿದ್ದು, ಕೋಟೆಯನ್ನು ಪ್ರವೇಶಿಸುತ್ತಿದ್ದಂತೆಯೇ ಗಟ್ಟಿಮುಟ್ಟಾದ ಬುರುಜುಗಳು ರಜಪೂತ ಪ್ರಾಬಲ್ಯವನ್ನು ಎತ್ತಿ ತೋರುವುದಲ್ಲದೇ, ಬೆಟ್ಟದ ತುದಿಗೆ ಹೋಗುವ ಕೋಟೆಯ ಅಂಕು ಡೊಂಕಿನ ರಸ್ತೆಗಳು ಸುಮಾರು ನಾಲ್ಕು ಕುದುರೆ ಸವಾರರು ಒಟ್ಟಿಗೆ ಪ್ರಯಾಣ ಮಾಡಬಹುದಾದಷ್ಟು ವಿಸ್ತಾರವಾಗಿದ್ದು ಏರಿಳಿತ ಮತ್ತು ಅನೇಕ ತೀಕ್ಷ್ಣವಾದ ತಿರುವುಗಳಿಂದ ಕೂಡಿವೆ. ಈ ರಸ್ತೆಯ ಏರಿಳಿತ ಮತ್ತು ತಿರುವುಗಳಿಂದಾಗಿ ಶತ್ರು ಸೈನ್ಯದ ಆನೆಗಳು ಮತ್ತು ಕುದುರೆಗಳು ಆ ಪ್ರದೇಶದಲ್ಲಿ ವೇಗವಾಗಿ ಮತ್ತು ಸರಾಗವಾಗಿ ಹೋಗ ಬಾರದೆಂಬ ಉದ್ದೇಶದಿಂದಾಗಿಯೇ ಹಾಗೆ ನಿರ್ಮಾಣ ಮಾಡಲಾಗಿದೆ. ಅದೂ ಅಲ್ಲದೇ ಶತ್ರುಗಳ ಅರಿವಿಗೇ ಬಾರದಂತೇ ಅನೇಕ ಸ್ಥಳಗಳಲ್ಲಿ ಬುದ್ಧಿವಂತ ಬಲೆಗಳನ್ನು ಸಹಾ ನಿರ್ಮಿಸಿರುವುದು ಈ ಕೋಟೆಯ ವಿಸ್ಮಯಗಳಲ್ಲಿ ಒಂದಾಗಿದೆ. ಈ ಕೋಟೆಗೆ ಒಟ್ಟು ಮುಖ್ಯದ್ವಾರಗಳಿದ್ದು ಹಾತಿ ಪೋಲ್, ಹನುಮಾನ್ ಪೋಲ್ ಮತ್ತು ರಾಮ್ ಪೋಲ್ ಪ್ರಮುಖ ದ್ವಾರಗಳಾಗಿವೆ. ಸ್ಥಳೀಯ ಆಡು ಭಾಷೆಯಲ್ಲಿ ‘ಪೋಲ್’ ಎಂದರೆ ಮುಖ್ಯ ದ್ವಾರ ಎಂದರ್ಥವಿದೆ.

ಇನ್ನು ಸುರಕ್ಷತೆಯ ಭಾಗವಾಗಿ, ಕೋಟೆಯ ಗೋಡೆಗಳ ಮಧ್ಯೆ ಎರಡು ಕಡೆ ಚಿಕ್ಕ ಬಾಗಿಲುಗಳಿದ್ದು, ಇದು ಅಪಾಯದ ಸಮಯದಲ್ಲಿ ಜನರ ಅವಶ್ಯಕತೆ ಪೂರೈಸುವುದಕ್ಕಾಗಿ (ನಮ್ಮ ಚಿತ್ರದುರ್ಗದ ಒನಕೆ ಒಬ್ಬವ್ವನ ಕಿಂಡಿಯಂತೆ) ಬಳಸಲಾಗುತ್ತಿತ್ತು. ಜೊತೆಗೆ ಶತೃಗಳ ಆಕ್ರಮಣದ ಕಾಲದಲ್ಲಿ ಅಥವಾ ಕ್ಲಿಷ್ಟಕರ ಸಮಯದಲ್ಲಿ ಅರಸರು ತಪ್ಪಿಸಿಕೊಳ್ಳೋದಕ್ಕಾಗಿಯೇ, ಕೋಟೆಯೊಳಗೆ ಸರಿ ಸುಮಾರು 5 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗವಿದ್ದು ಅದರ ಮೂಲಕ ಅರಸರುಗಳು ಸುರಕ್ಷಿತವಾಗಿ ತಪ್ಪಿಸಿಕೊಳ್ಳಬಹುದಾಗಿರುವುದು ಈ ಕೋಟೆಯ ವಿಶೇಷತೆಗಳಲ್ಲಿ ಒಂದಾಗಿದೆ.

ಶತ್ರುಗಳು ಮೇವಾಡದ ಮೇಲೆ ದಾಳಿ ಮಾಡಿದ ಸಮಯದಲ್ಲಿ ಚಿತ್ತೋರ್ ಘಡ ಮತ್ತು ರಣತಂಬೋರ್ ಗಿಂತ ಈ ಕುಂಭಲ್ಘಡ್ ಹೆಚ್ಚು ಭದ್ರತೆಯನ್ನು ಒದಗಿಸುತ್ತಿದ್ದ ಕಾರಣ, ಈ ಕುಂಭಲ್ ಘಡ್ ಕೋಟೆ ಕೆಲ ಸಮಯ ಮೇವಾಡದ ರಾಜಧಾನಿಯಾಗಿದ್ದ ಕಾರಣ, ಮೇವಾಡದ ಅರಸರು ಅಲ್ಲಿಗೆ ಬಂದು ನೆಲೆಸುತ್ತಿದ್ದರು. ಯುದ್ದದ ಸಮಯದಲ್ಲಿ ಈ ಕೋಟೆಯ ಒಳಗೆ ಅಂದಿನ ರಾಜಸ್ಥಾನದ ಅರ್ಧದಷ್ಟು ಜನ ಬಂದು ಆಶ್ರಯ ಪಡೆದುಕೊಳ್ಳುತ್ತಿದ್ದರು ಎಂದರೆ ಈ ಕೋಟೆಯ ಅಗಾಧತೆ ಎಷ್ಟಿತ್ತು ಎಂಬುದನ್ನು ಉಹಿಸಿಕೊಳ್ಳಬಹುದಾಗಿದೆ.

ಆ ಕಾಲದಲ್ಲಿ ದೆಹಲಿ ಸುಲ್ತಾನರು ಎಷ್ಟೇ ಬಲಶಾಲಿಗಳಾಗಿದ್ದರೂ ಅವರ ಬಳಿ ಫಿರಂಗಿಗಳು ಇಲ್ಲದಿದ್ದರಿಂದ ಈ ಕೋಟೆಯನ್ನು ಗೆಲ್ಲಲು ಅವರಿಂದ ಸಾಧ್ಯವಾಗಿರಲೇ ಇಲ್ಲ ಎಂಬುದು ಗಮನಾರ್ಹವಾದ ಅಂಶವಾಗಿದೆ. ಮಾಳ್ವದ ಅರಸ ರಾಣಕುಂಭ ಆಡಳಿತ ಕಾಲವನ್ನು ಮಾಳ್ವದ ಪಾಲಿನ ಸುವರ್ಣ ಯುಗ ಎಂದೇ ಹೇಳಲಾಗುತ್ತದೆ. ತನ್ನ ಕಾಲಘಟ್ಟದಲ್ಲಿ ರಾಣಾಕುಂಭ ಸುಮಾರು ಎಂಬತ್ತಕ್ಕೂ ಅಧಿಕ ಕೋಟೆಗಳನ್ನು ನವೀಕರಿಸಿದ ಹಾಗೂ ನಿರ್ಮಾಣ ಮಾಡಿದ್ದಲ್ಲದೇ, ಸುಮಾರು 34 ಹೊಸ ಕೋಟೆಗಳನ್ನು ಹೊಸದಾಗಿ ನಿರ್ಮಿಸಿದ ಕೀರ್ತಿಯೂ ರಾಣ ಕುಂಭನದ್ದಾಗಿದೆ. ಅಂದಿನ ಕಾಲದಲ್ಲಿ ರಾಜನ ಪರಾಕ್ರಮವನ್ನು ಆತ ಎಷ್ಟು ಕೋಟೆಗಳ ಮೇಲೆ ಹಿಡಿತ ಸಾಧಿಸಿದ್ದ ಎನ್ನುವುದರ ಮೇಲೆ ಅಳೆಯಲಾಗುತ್ತಿದ್ದರಿಂದ ನಿಸ್ಸಂದೇಹವಾಗಿ ರಾಣಾಕುಂಭ ಮೇವಾಡದ ಪ್ರಭಾವೀ ರಾಜ ಎಂದೇ ಇಂದಿಗೂ ಪ್ರಖ್ಯಾತರಾಗಿದ್ದಾರೆ.

ಭಾರತದ ಇತಿಹಾಸದಲ್ಲಿ ಮೊಘಲರ ಸರಿ ಸಮನಾಗಿ ತನ್ನ ಜೀವನ ಪರ್ಯಂತವೂ ಹೋರಾಡಿದ ರಜಪೂತ ಅರಸರಲ್ಲೇ ಅತ್ಯಂತ ಪ್ರಭಾವಿ, ಶೂರ ಎನಿಸಿಕೊಂಡಿದ್ದ ಮಹಾರಾಣಾ ಪ್ರತಾಪ ಜನ್ಮಸ್ಥಾನವೂ ಇದೇ ಕುಂಬಳ್ ಘಡ ಎನ್ನುವುದು ಈ ಸ್ಥಳದ ಮತ್ತೊಂದು ವಿಶೇಷವಾಗಿದೆ. ದೆಹಲಿಯ ಸುಲ್ತಾನ ಅಕ್ಬರ್ ಸಾಕಷ್ಟು ರಜಪೂತರನ್ನು ಸೋಲಿಸಿದರೂ ಮಹಾರಾಣ ಪ್ರತಾಪ ಮಾತ್ರ ತನ್ನಿಡೀ ಜೀವನದಲ್ಲಿ ಅಕ್ಬರನಿಗೆ ಕೊಂಚವೂ ಸೊಪ್ಪು ಹಾಕದೇ, ತನ್ನ ಜೀವಿತಾವಧಿಯ ಪೂರಾ ಅಕ್ಬರನ ವಿರುದ್ದವೇ ಹೋರಾಟ ಮಾಡಿದ.

ಹಲ್ದಿಘಾಟ್ ಯುದ್ದದಲ್ಲಿ ಅಕ್ಬರ್ ಮಹಾರಾಣನ ವಿರುದ್ಧ ಮೇಲುಗೈ ಸಾಧಿಸಿದರೂ, ರಾಣಾ ಪ್ರತಾಪ್ ಅಕ್ಬರನಿಗೆ ಶರಣಾಗದೇ, ಅಲ್ಲಿಂದ ತಪ್ಪಿಸಿಕೊಂಡು ಇದೇ, ಕುಂಭಳ್ ಘಡದಲ್ಲಿ ಕೆಲ ಕಾಲ ಆಶ್ರಯ ಪಡೆದಿದ್ದರು. ಒಂದು ಹಂತದಲ್ಲಿ ಅಕ್ಬರ್ ಈ ಕೋಟೆಯನ್ನು ಮೋಸದಿಂದ ವಶಪಡಿಸಿಕೊಂಡಾಗ, ಕುಂಭಳ್ ಘಡವನ್ನು ವಿಧಿ ಇಲ್ಲದೇ, ತೊರೆದ ರಾಣಾ ಪ್ರತಾಪ್ ಸ್ವಲ್ಪ ಸಮಯದ ಬಳಿಕ ಅನೇಕ ರಜಪೂತ ರಾಜರುಗಳನ್ನುಒಗ್ಗೂಡಿಸಿ ಮತ್ತೆ ಈ ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡದ್ದು ಈಗ ಇತಿಹಾಸ.

k5

ಈ ಕೋಟೆಯಲ್ಲಿ ರಾಣಾ ಕುಂಭ ನಿರ್ಮಿಸಿರುವ ಶಿವನ ದೇಗುಲ ಮತ್ತು ಜೈನ ಮಂದಿರ ವಾಸ್ತುಶಿಲ್ಪದ ಅಗರವಾಗಿದೆ. ಇಪ್ಪತ್ನಾಲ್ಕು ಶಿಲಾ ಕಂಬಗಳಿಂದ ಅತ್ಯಂತ ಸುಂದರವಾಗಿ ಕಟ್ಟಲಾಗಿರುವ ನೀಲಕಂಠ ದೇವಾಲಯದಲ್ಲಿರುವ ಐದು ಅಡಿ ಎತ್ತರದ ಸಾಲಿಗ್ರಾಮ ಶಿಲೆಯ ಲಿಂಗವನ್ನು ನೋಡಲು ಎರಡು ಕಣ್ಗಳು ಸಾಲದು ಎಂದರೂ ಅತಿಶಯೋಕ್ತಿಯೇನಲ್ಲ. ಈ ದೇವಾಲಯದಲ್ಲಿನ ಶಿಲಾ ಕೆತ್ತನೆಗಳು, ಒಂದನ್ನೊಂದು ಮೀರಿಸುತ್ತವೆ. ಬ್ರಹ್ಮ ವಿಷ್ಣು ಮಹೇಶ್ವರನ ಕೆತ್ತನೆಗಳು ನೋಡುಗರನ್ನು ಮಂತ್ರ ಮುಗ್ದಗೊಳಿಸುತ್ತವೆ. ಇದರ ಜೊತೆಯಲ್ಲಿಯೇ ಐವತ್ತೆರಡು ಶಿಖರಗಳನ್ನು ಹೊಂದಿರುವ ಜೈನ ಭವನ ಕುಂಭಳ್ ಘಡದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೂ ತಪ್ಪಾಗಲಾರದು. ವಿಸ್ತಾರವಾದ ಅಂಗಳವನ್ನು ಹೊಂದಿರುವ ವಿಶಾಲವಾದ ಮತ್ತು ಅಷ್ಟೇ ಸುಂದರ ಕೆತ್ತನೆಯ ಶಿಲಾ ಕಂಬಗಳಿರುವ ಈ ಜೈನ ಭವನದ ಪ್ರಾಕಾರದ ಒಳಗಿರುವ ಗೋಪುರದಲ್ಲಿರುವ ಹಿಂದೂ ದೇವಾನು ದೇವತೆಗಳ ಕೆತ್ತನೆಗಳು ಮತ್ತು ಈ ಭವನದ ಹೊರ ಭಾಗದಲ್ಲಿ ಕಲ್ಲಿನಲ್ಲಿ ನಿರ್ಮಿಸಲಾಗಿರುವ ಪರದೆ ಈ ಭವನದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

k1

ರಾಜಾಸ್ಥಾನದ ಸರೋವರಗಳ ನಗರ ಉದಯಪುರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಕುಂಭಲ್ ಘಡ್ ರಸ್ತೆಯ ಮುಖಾಂತರ ಸುಮಾರು 2-3 ಗಂಟೆಗಳ ಪ್ರಯಾಣದಲ್ಲಿ ತಲುಪಬಹುದಾಗಿದೆ. ಉದಯಪುರದಿಂದ ಒಂದು ದಿನದ ಪ್ರವಾಸಕ್ಕೆ ಕುಂಭಳ್ ಘಡ್ ಉತ್ತಮ ಆಯ್ಕೆಯಾಗಿದೆ. ಉದಯಪುರದಿಂದ ಕುಂಭಳ್ ಘಡ್ ಕೋಟೆಯ ಕೆಲ್ವಾರ ಗ್ರಾಮಕ್ಕೆ ಸಾಕಷ್ಟು ಬಸ್ಸುಗಳು ಲಭ್ಯವಿದ್ದು ಸುಮಾರು 100/- ರೂಗಳ ವೆಚ್ಚದಲ್ಲಿ ಮೂರು ಗಂಟೆಗಳಲ್ಲಿ ತಲುಪಬಹುದಾಗಿದೆ. ಇದಲ್ಲದೇ ಸ್ಥಳೀಯ ಟ್ರಾವೆಲ್ಸ್ ಗಳ ಮುಖಾಂತರ ಅನುಕೂಲಕ್ಕೆ ತಕ್ಕಂತೆ ಕಾರು ಇಲ್ಲವೇ ಮಿನಿ ವ್ಯಾನ್ ಗಳನ್ನು ಬಾಡಿಗೆ ತೆಗೆದುಕೊಂಡು ಸಹಾ ಈ ಕುಂಭಳ್ ಘಡ್ ನೋಡಿಕೊಂಡು ಬರಬಹುದಾಗಿದೆ.

ಇಷ್ಟೆಲ್ಲಾ ಸವಿವರವಾಗಿ ತಿಳಿಸಿದ ಮೇಲೆ ಇನ್ನೇಕ ತಡಾ ಸಮಯ ಮಾಡಿಕೊಂಡು ಪ್ರತ್ಯಕ್ಷವಾಗಿ ನೋಡಿದರೂ ಪ್ರಾಮಾಣಿಸಿನೋಡು ಎನ್ನುವಂತೆ ಕುಂಭಲ್ ಘಡ್ ಕೋಟೆಗೆ ಹೋಗಿ ಇಲ್ಲಿ ಓದಿದ್ದೆಲ್ಲವನ್ನೂ ಕಣ್ಗುಂಬಿಸಿಕೊಳ್ತೀರಿ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s