ಜನರಲ್ ಕೆ. ಎಸ್ ತಿಮ್ಮಯ್ಯ ಅವರ ಜನ್ಮದಿನಾಚರಣೆ

timಭಾರತೀಯ ಸೇನೆಗೂ ನಮ್ಮ ಕರ್ನಾಟಕದ ಕೊಡಗಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಇಂದಿಗೂ ಸಹಾ ಕೊಡಗಿನ ಬಹುತೇಕ ಕುಟುಂಬದ ಒಬ್ಬ ಸದಸ್ಯನಾದರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ. ಸ್ವಾತಂತ್ರ್ಯ ಭಾರತದ ಪ್ರಥಮ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರೂ ಕೊಡಗಿನವರೇ. ಅವರಂತೆಯೇ ಭಾರತದ ಭೂಸೇನೆಯ ದಂಡನಾಯಕರಾಗಿದ್ದ, ಅಪ್ಪಟ ಕನ್ನಡಿಗ ಜನರಲ್  ಕೊಡಂದೆರ ಸುಬ್ಬಯ್ಯ ತಿಮ್ಮಯ್ಯನವರು ಅರ್ಥಾತ್ ಕೆ. ಎಸ್ ತಿಮ್ಮಯ್ಯನವರು 30 ಮಾರ್ಚ್ 1906ರಲ್ಲಿ ಕೊಡಗಿನ ಮಡಿಕೇರಿಯ ಆಗರ್ಭ ಶ್ರೀಮಂತ ಪ್ಲಾಂಟರ್ ಆಗಿದ್ದ ತಿಮ್ಮಯ್ಯ ಮತ್ತು  ಸೀತವ್ವ ದಂಪತಿಗಳ ಪುತ್ರನಾಗಿಜನನವಾಗುತ್ತದೆ. ಆದರೆ ಶಾಲೆಯಲ್ಲಿ ಅವರ ಪೂರ್ಣ ಹೆಸರು ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ಎಂದಾದ್ದರಿಂದ ಸಣ್ಣದಾಗಿ      ಕೆ ಎಸ್ ತಿಮ್ಮಯ್ಯ ಮಾಡಿದ್ದರಿಂದ  ಆಪರೂಪಕ್ಕೆ ತಂದೆ ಮತ್ತು ಮಗ  ತಿಮ್ಮಯ್ಯ ಎಂಬ ಒಂದೇ ಹೆಸರಿನಿಂದ  ಪ್ರಸಿದ್ಧರಾದರು.

ತಿಮ್ಮಯ್ಯನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೂನೂರು ಮತ್ತು  ಬೆಂಗಳೂರಿನ ಬಿಶಪ್ ಕಾಟನ್ ಬಾಲಕರ ಶಾಲೆಯಲ್ಲಿ  ಆರಂಭಿಸಿ ನಂತರ ದೆಹ್ರಾಡೂನಿನ ಪ್ರಿನ್ಸ್ ಆಫ್ ವೇಲ್ಸ್ ರಾಯಲ್ ಇಂಡಿಯನ್ ಮಿಲಿಟ್ರಿ ಕಾಲೆಜ್(ಈಗ ರಾಷ್ಟ್ರೀಯ ಇಂಡಿಯನ್ ಮಿಲಿಟ್ರಿ ಕಾಲೆಜ್)ನ್ನು ಸೇರಿದರು. ಭಾರತೀಯ ಸೇನೆಯ ಕಮಿಶನ್ ಹುದ್ದೆಗೆ ಸೇರಬೇಕಾಗಿದ್ದಲ್ಲಿ ಇಲ್ಲಿಯ ಪದವಿಯನ್ನು ಪಡೆಯುವುದು  ಅತ್ಯವಶ್ಯವಾಗಿತ್ತು. ಅಲ್ಲಿ ಪದವಿ ಪಡೆದ  ಬಳಿಕ ಬ್ರಿಟನ್ನಿನ ರಾಯಲ್ ಮಿಲಿಟ್ರಿ ಅಕ್ಯಾಡೆಮಿ ಸ್ಯಾಂಡ್ಹರ್ಸ್ಟ್‌ಗೆ ತರಭೇತಿಗೆ ಆಯ್ಕೆಯಾದ  ಆರು ಮಂದಿ ಭಾರತೀಯರಲ್ಲಿ ತಿಮ್ಮಯ್ಯನವರೂ ಒಬ್ಬರಾಗಿದ್ದರು ಎನ್ನುವುದು ಗಮನಾರ್ಹ.

ಅಲ್ಲಿ ತರಬೇತಿ ಶಿಕ್ಷಣವನ್ನು ಮುಗಿಸಿ1926ರಲ್ಲಿ ಬ್ರಿಟಿಶ್ ಇಂಡಿಯನ್ ಆರ್ಮಿಯಲ್ಲಿ ಕಮಿಶನ್ ಹುದ್ದೆಯನ್ನು ಪಡೆದು ನಂತರ ತಮ್ಮ ಸಾಮರ್ಥ್ಯದಿಂದ ಸೇನೆಯಲ್ಲಿ ಹಂತ ಹಂತವಾಗಿ ವಿವಿಧ ಭಡ್ತಿಗಳನ್ನು ಪಡೆಯುತ್ತಾ. 1928ರಲ್ಲಿ ಲೆಫ್ಟಿನಂಟ್ ಆಗಿದ್ದಲ್ಲದೇ, 1930ರಲ್ಲಿ ರೆಜಿಮೆಂಟಲ್ ಅಡ್ಜಟಂಟ್ ಆಗಿ ನೇಮಕಗೊಂಡರು. ತಿಮ್ಮಯ್ಯನವರು ತಮ್ಮ ಯುದ್ಧ ಚಾತುರ್ಯವನ್ನು ವಾಯವ್ಯ ಗಡಿನಾಡಿನ (ಅಂದರೆ ಈಗಿನ ಪಾಕಿಸ್ತಾನದ) ರಣರಂಗದಲ್ಲಿ ನಡೆದ ಬಂಡುಕೋರ ಪಠಾಣ್ ಪಂಗಡಗಳ ವಿರುದ್ಧದ ಕದನದಲ್ಲಿ ಉತ್ತಮಪಡಿಸಿಕೊಂಡರು. ಫೆಬ್ರವರಿ 1935ರಲ್ಲಿ ಕ್ಯಾಪ್ಟನ್ ಆದರು. ಮರುವರ್ಷ ಚೆನ್ನೈಯಲ್ಲಿರುವ ಯೂನಿವರ್ಸಿಟಿ ಟ್ರೈನಿಂಗ್ ಕೋರ್‌ನಲ್ಲಿ ಅಡ್ಜಟಂಟ್ ಆಗಿ ನೇಮಕಗೊಂಡು, ಭಾರತೀಯ ಸೈನ್ಯಕ್ಕೆ  ಸೇವೆ ಸಲ್ಲಿಸುವ ನವ ತರುಣರಿಗೆ ಉತ್ತಮ ಸೈನಿಕನಾಗಿರ ಬೇಕಾದ  ಜೀವಂತ ನಿದರ್ಶನಗಳನ್ನು ತಮ್ಮ ಅನುಭವದ ಮೂಲಕ ಬೋಧಿಸಿದರು.

ಎರಡನೇ ಮಹಾ ಯುದ್ಧದ ಸಮಯದಲ್ಲಿ ಸಿಂಗಪುರದಲ್ಲಿಯೂ ಕೆಲಕಾಲ ಸೇವೆ ಸಲ್ಲಿಸಿದ ನಂತರ 1941ರಲ್ಲಿ ಭಾರತಕ್ಕೆ ಹಿಂದಿರುಗಿ,  ಆಗ್ರಾದ ಹೊಸ ಹೈದ್ರಾಬಾದ್ ರೆಜಿಮೆಂಟಲ್ ಸೆಂಟರ್‌ನಲ್ಲಿ ಸೆಕಂಡ್-ಇನ್-ಕಮಾಂಡರ್ ಆಗಿ ಭಢ್ತಿ ಪಡೆದರು. ಫೆಬ್ರವರಿ 1943ರಲ್ಲಿ ಮೇಜರ್ ಆಗಿ ಬಡ್ತಿ ಪಡೆದು ಅವರು 25ನೇ ಇಂಡಿಯನ್ ರೆಜಿಮೆಂಟಿನಲ್ಲಿ ಆ ಹುದ್ದೆಯನ್ನಲಂಕರಿಸಿದ ಪ್ರಥಮ ಅಧಿಕಾರಿಯಾದರು.

ಮೇ 1944ರಲ್ಲಿ ಅವರಿಗೆ ತಾತ್ಕಾಲಿಕ ಲೆಫ್ಟಿನಂಟ್ ಕರ್ನಲ್ ಆಗಿ ಬಡ್ತಿ ನೀಡಿ, ಎರಡನೇ ವಿಶ್ವ ಯುದ್ಧದಲ್ಲಿ ಜಪಾನೀ ಸೈನ್ಯವನ್ನು ಬರ್ಮಾದಲ್ಲಿ ಎದುರಿಸಲು ತಿಮ್ಮಯ್ಯನವರ ಸೇನೆಯನ್ನು ಕಳುಹಿಸಲಾಯಿತು.  ಬರ್ಮಾದ ಮಾಂಗ್ದಾ ಯುದ್ಧದಲ್ಲಿ ಅದ್ವಿತೀಯ ಶೌರ್ಯ ಪ್ರದರ್ಶಿಸಿ ಹೋರಾಡಿ, ಜಪಾನೀ ಸೈನ್ಯದ ರಕ್ಷಣಾ ರೇಖೆಯನ್ನು ಚಾಣಾಕ್ಷತನದಿಂದ ಭೇದಿಸಿ ಒಳನುಗ್ಗಿ ಹಿಲ್ 009 ಎಂದು ಗುರುತಿಸಲಾಗಿದ್ದ ಭೂಪ್ರದೇಶವನ್ನು ವಶಪಡಿಸಿಕೊಂಡರು. ತರುವಾಯ ಜಪಾನೀ ಸೈನ್ಯವು ಮೊದಲು ಸಿಂಗಪುರದಲ್ಲಿ ಆಮೇಲೆ ಫಿಲಿಪೈನ್ಸ್‌ನಲ್ಲಿ ಶರಣಾದಾಗ ತಿಮ್ಮಯ್ಯನವರು ಆ ಎರಡೂ ಸ್ಥಳಗಳಲ್ಲಿ ಬ್ರಿಟಿಶ್-ಭಾರತದ ಪ್ರತಿನಿಧಿಯಾಗಿ ಸಂಧಾನಪತ್ರಗಳಿಗೆ ರುಜು ಮಾಡಿದರು.

ಬರ್ಮಾ ಯುದ್ಧದ ಧೈರ್ಯ, ಪರಾಕ್ರಮ ಹಾಗೂ ಚಾಣಾಕ್ಷತನಕ್ಕೆ ತಿಮ್ಮಯ್ಯನವರಿಗೆ ಡಿಸ್ಟಿಂಗ್ವಿಶ್ಡ್ ಸರ್ವಿಸ್ ಆರ್ಡರ್ (DSO) ಇತ್ತು ಗೌರವಿಸಲಾಯಿತು. ತದನಂತರ ಅವರನ್ನು 36ನೇ ಬ್ರಿಟಿಶ್ ಬ್ರಿಗೇಡಿನ ಆಜ್ಞಾಧಿಕಾರಿಯ ಹುದ್ದೆಯನ್ನಿತ್ತರು. ಅದುವರೆಗೂ ಬರೇ ಆಂಗ್ಲರಿಗೇ ಮೀಸಲಾಗಿದ್ದ ಈ ಪದವಿಯನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ತಿಮ್ಮಯ್ಯನವರದಾಗಿತ್ತು.

7ನೇ ಮೇ 1957ರಂದು ತಿಮ್ಮಯ್ಯನವರು ಭಾರತೀಯ ಭೂಸೈನ್ಯದ 6ನೇ ಮುಖ್ಯಸ್ಥನಾಗಿ ಅಧಿಕಾರವನ್ನು ವಹಿಸಿಕೊಂಡರು.1959ರಲ್ಲೇ ಭಾರತ-ಚೀನಾ ಯುದ್ಧದ ಮುನ್ಸೂಚನೆಯಿದ್ದು, ಅದಕ್ಕೆ ಭಾರತೀಯ ಸೈನ್ಯವನ್ನು ಸಜ್ಜುಗೊಳಿಸಬೇಕೆಂಬ ತಿಮ್ಮಯ್ಯನವರ ಸಲಹೆಯನ್ನು ಆಗಿನ ರಕ್ಷಣಾ ಮಂತ್ರಿ ವಿ ಕೆ ಕೃಷ್ಣ ಮೆನನ್ ತಳ್ಳಿಹಾಕಿದ್ದನ್ನು ಪ್ರತಿಭಟಿಸಿ ತಿಮ್ಮಯ್ಯನವರು ಅಂದಿನ ಪ್ರಧಾನಿಗಳಾಗಿದ್ದ ನೆಹರು ಬಳಿ ರಾಜಿನಾಮೆಯನ್ನು ಸಲ್ಲಿಸಿದ್ದರು. ಹಾಗೂ ಹೀಗೂ ಮಾಡಿ ತಿಮ್ಮಯ್ಯನವರ ಮನವೊಲಿಸಿ ರಾಜೀನಾಮೆಯನ್ನು ಹಿಂತೆಗೆಕೊಳ್ಳುವಂತೆ ನೆಹರುರವರು ಮಾಡಿದರೂ, ಅವರ ಅಲಿಪ್ತ ನೀತಿ ಮತ್ತು ವಿಶ್ವನಾಯಕನಾಗುವ ನೆಹರು ಅವರ ತೆವಲಿನಿಂದಾಗಿ ತಿಮ್ಮಯ್ಯನವ್ವರ  ಸಲಹೆ-ಸೂಚನೆಗಳನ್ನು ಕಾರ್ಯಗತ ಮಾಡದೇ ಕಸದ ಬುಟ್ಟಿಗೆ ಎಸೆದು ಬಿಟ್ಟರು. ಈ ಮಧ್ಯದಲ್ಲಿ 35 ವರ್ಷಗಳ ಕಾಲ ಸೈನ್ಯದಲ್ಲಿ  ಸೇವೆ ಸಲ್ಲಿಸಿದ ನಂತರ 7ನೇ ಮೇ 1961ರಲ್ಲಿ ತಿಮ್ಮಯ್ಯನವರು ನಿವೃತ್ತರಾದರು. ನೆಹರು ಹಿಂದಿ ಚೀನೀ ಬಾಯಿ ಬಾಯಿ ಎನ್ನುವ ಜಪದಲ್ಲೇ ಇದ್ದಾಗ ಚೀನಾದವರು ಏಕಾ ಏಕಿ ಭಾರತದ ಮೇಲೆ ಅಕ್ರಮಣ ಮಾಡಿ ಸಾವಿರಾರು ಚದುರ ಆಡಿಗಳಷ್ಟು ಭೂಭಾಗವನ್ನು ಕಬಳಿಸಿದ್ದು ಈಗ ಇತಿಹಾಸ.

ತಿಮ್ಮಯ್ಯನವರ ಸೇವೆಯನ್ನು ಗುರುತಿಸಿದ ಸಂಯುಕ್ತ ರಾಷ್ಟ್ರಗಳು ಭಾರತೀಯ ಸೈನ್ಯದಿಂದ ಅವರು ನಿವೃತ್ತರಾದ ನಂತರವೂ ಸೈಪ್ರಸ್‌ನಲ್ಲಿ ಸಂಯುಕ್ತ ರಾಷ್ಟ್ರಗಳ ಸೇನೆಯ ಆಧಿಪತ್ಯವನ್ನು ವಹಿಸಿ ಜುಲೈ 1964ರಲ್ಲಿ ಅಧಿಕಾರವನ್ನು ತೆಗೆದುಕೊಂಡು  ಅಲ್ಲಿನ ಅತ್ಯಂತ ವಿಸ್ಪೋಟಕ ಪರಿಸ್ಥಿತಿಯನ್ನು ಸೂಕ್ತವಾಗಿ ಬಗೆಹರಿಸಿದ್ದಕ್ಕೆ ತುರ್ಕಿಯ ವಿದೇಶಾಂಗ ಸಚಿವರು , ಅವರ ಬೌದ್ಧಿಕ ಪ್ರಾಮಾಣಿಕತೆ ಮತ್ತು ಅಚಲ ನಿಷ್ಪಕ್ಷಪಾತದಿಂದ ಶಾಂತಿಯನ್ನು ಸ್ಥಾಪಿಸಿದ ಅತಿಮಾನುಷ ಪ್ರಯತ್ನ’ವನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದರು. ಗ್ರೀಕ್ ಸರ್ಕಾರವೂ ಸಹಾ ಅವರ ಚಾರಿತ್ರ್ಯಬಲ, ವಾಸ್ತವವಾದಿತ್ವ ಮತ್ತು ನ್ಯಾಯಪ್ರಜ್ಞೆಯನ್ನು ಹೊಗಳಿ ಗೌರವಿಸಿತ್ತು.

ಅಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ತಮ್ಮ ವಯೋಸಹವಾಗಿ  18ನೇ ಡಿಸೆಂಬರ್ 1965ರಂದು ನಿಧನರಾದಾಗ ಸಕಲ ಗೌರವದೊಂದಿಗೆ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತಂದು ಅಂತಿಮ ಸಂಸ್ಕಾರ ಮಾಡುವ ಮೂಲಕ ಒಬ್ಬ ದೇಶಭಕ್ತ ನಿಷ್ಟಾಂವತ ಯೋಧನಿಗೆ ಗೌರವವನ್ನು ಸಲ್ಲಿಸಲಾಯಿತು.

WhatsApp Image 2021-04-10 at 8.06.27 AMಇಂತಹ ವೀರಯೋಧನ ಜನ್ಮದಿನಾಚರಣೆಯನ್ನು ಆರ್ಥಪೂರ್ವವಾಗಿ ಅಚರಿಸಬೇಕೆಂದು ನಿರ್ಧರಿಸಿದ ಬೆಂಗಳೂರಿನ ವಿದ್ಯಾರಣ್ಯಪುರದ ತ್ರಿಧಾರ ಕಮ್ಯೂನಿಟಿ ಡೆವಲಪ್ಮೆಂಟ್ ಸೊಸೈಟಿ ಸಂಸ್ಥೆ, ಕೊರೋನಾದಿಂದಾಗಿ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಎದುರಿಸುತ್ತಿರುವುದನ್ನು ಗಮನಿಸಿ, ಆರೋಗ್ಯ ಭಾರತಿಯ ಸಹಭಾಗಿತ್ವದಲ್ಲಿ ವಿದ್ಯಾಪುರದ ಶ್ರೀ ಇಗುತಪ್ಪ ಕೊಡವ ಕ್ಷೇಮಾಭಿವೃದ್ಧಿ ಸಂಘದಲ್ಲಿ ದಿನಾಂಕ 10.4.2021 ಶನಿವಾರ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದರು.

WhatsApp Image 2021-04-10 at 9.47.59 PMರೆಡ್ ಕ್ರಾಸ್ ಸಂಸ್ಥೆಯವರು ತಮ್ಮ ಸಿಬ್ಬಂಧಿಗಳೊಂದಿಗೆ ಸಕಲ ಸಲಕರಣೆಗಳೊಂದಿಗೆ ನಿಗಧಿತ ಸಮಯಕ್ಕೆ ಆಗಮಿಸಿದ್ದರು.  ಬಿಬಿಎಂಪಿ ವಾರ್ಡ್ ನಂ. 10ರ ಮಾಜೀ ಸದಸ್ಯ ಪಿಳ್ಳಪ್ಪನವರ ಉಪಸ್ಥಿತಿಯಲ್ಲಿ,  ಕೊಡವ ಸಮಾಜದ ಅಧ್ಯಕ್ಷರಾದ ಶ್ರೀ ಪುಣಚ್ಚ ಅವರ ಅಮೃತಹಸ್ತದಲ್ಲಿ ದೀಪವನ್ನು ಬೆಳಗುವ ಮೂಲಕ ರಕ್ತದಾನ ಶಿಬಿರ ಆರಂಭವಾಗಿ ಉತ್ತಮ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನಿಗಳು ಬಂದು ಶಿಬಿರವನ್ನು ಯಶಸ್ವಿಗೊಳಿಸಿದರು.

ರಕ್ತದಾನ ಮಾಡಲು ಅತ್ಯಂತ ಉತ್ಸಾಹಿತರಾಗಿ ಬಂದಿದ್ದ ಅನೇಕ ಮಾತೆಯರಿಗೆ ಹಿಮೋಗ್ಲೋಬಿನ್ ಕಡಿಮೆ ಪ್ರಮಾಣದಲ್ಲಿ ಇದ್ದ ಕಾರಣ ರಕ್ತವನ್ನು ತೆಗೆದುಕೊಳ್ಳದ್ದಕ್ಕಾಗಿ ಬೇಸರ ಪಟ್ಟುಕೊಂಡರೇ, ಇನ್ನೂ ಅನೇಕರು ಕೆಲವೇ ದಿನಗಳ ಹಿಂದೆ ಕೋವಿಡ್ ಲಸಿಕೆ ಹಾಕಿಸಿಕೊಂಡ ಪರಿಣಾಮ ರಕ್ತವನ್ನು ತೆಗೆದುಕೊಳ್ಳದಿದ್ದಕ್ಕೆ ಹುಸಿ ಮುನಿಸನ್ನು ವ್ಯಕ್ತ ಪಡಿಸಿದ್ದು ಗಮನಾರ್ಹವಾದ ವಿಷಯವಾಗಿತ್ತು.

WhatsApp Image 2021-04-10 at 9.49.09 PMರಕ್ತದಾನ ಮಾಡಿದವರಿಗೆ ಹಣ್ಣಿನ ರಸ ಮತ್ತು ಸರ್ಟಿಫಿಕೇಟ್ ಅಲ್ಲದೇ ಲಘು ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ರಕ್ತದಾನಿಗಳ ಜೊತೆ ಬಂದವರಿಗೂ ಮತ್ತು ವಿವಿಧ ಕಾರಣಗಳಿಂದ ರಕ್ತದಾನ ಮಾಡಲಾಗದೇ ಬೇಸರಗೊಂಡಿದ್ದವರಿಗೂ ಸಹಾ ಆಯೋಜವರು ಬಲವಂತದಿಂದ ಹೊಟ್ಟೆ ತುಂಬಾ ಉಪಹಾರವನ್ನು ಉಣಬಡಿಸಿ ಕಳುಹಿಸಿದ್ದದ್ದು ಮೆಚ್ಚುಗೆಯ ಅಂಶವಾಗಿತ್ತು.

WhatsApp Image 2021-04-10 at 9.49.27 PMರಾಷ್ಟ್ರಕ್ಕಾಗಿ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದಂತಹ ವ್ಯಕ್ತಿಗೆ ಈ ರೀತಿಯಾದ ಅರ್ಥಪೂರ್ಣವಾದ ಮತ್ತು ಕೃತಜ್ಞತಾಪೂರ್ವಕವಾಗಿ ಆಚರಿಸಿದ ಆಯೋಜಕರ ಚಿಂತನೆ ನಿಜಕ್ಕೂ ಅನುಕರಣಿಯ ಮತ್ತು ಶ್ಲಾಘನೀಯ.

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s