ಅರೇ ಇದೇನಿದು! ಇದು ಯಾವ ಭಾಷೆಯ ಶೀರ್ಷಿಕೆ? ಅಂತಾ ಯೋಚಿಸ್ತಿದ್ದೀರಾ? ಇದು ಸರಳ ಸಂಸ್ಕೃತ ಭಾಷೆಯ ಪದ. ಕೋಯ ಎಂದರೆ ಕಳೆದು ಹೋದದ್ದು ಮತ್ತು ಪಾಯ ಎಂದರೆ ಸಿಕ್ಕಿದ್ದು ಅಂದರೆ ಕಳೆದುಕೊಂಡದ್ದು ಸಿಕ್ಕಿದೆ ಎಂದರ್ಧ. ದೇವರ ಅಸ್ಮಿತೆ ಮತ್ತು ಅಸ್ತಿತ್ವದ ಬಗ್ಗೆಯೇ ಮಾತನಾಡಿ ದೇವಾಲಯದಿಂದ ಹೊರ ಬಂದ ಕೂಡಲೇ ದೇವರ ಶಕ್ತಿಯ (ಪವಾಡ) ಅನುಭವ ಪಡೆದ ಸರಳ ಸುಂದರ ಪ್ರಸಂಗ ಇದೋ ನಿಮಗಾಗಿ.
ಪ್ರತೀ ತಿಂಗಳ ಅಮಾವಾಸ್ಯೆಯ ಹಿಂದಿನ ದಿನ ನಮ್ಮ ವಿದ್ಯಾರಣ್ಯಪುರದ ಸನಾತನ ವೇದ ಪಾಠಶಾಲೆಯ ವತಿಯಿಂದ ತಿಂಗಳ ಮಾಸಶಿವರಾತ್ರಿ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಬಹಳ ಸುಂದರವಾಗಿ ಆಚರಿಸುವ ಪದ್ದತಿ ರೂಢಿಯಲ್ಲಿದೆ. ಮೊನ್ನೆ ಅದೇ ರೀತಿಯ ಮಾಸಶಿವರಾತ್ರಿಯ ಪೂಜೆಗೆ ಹೋಗಿ, ಪೂಜಾ ಕೈಂಕರ್ಯವೆಲ್ಲವನ್ನೂ ಮುಗಿಸಿಕೊಂಡು ಪ್ರಸಾದವನ್ನೂ ಸ್ವೀಕರಿಸಿ ಅಂದಿನ ಸತ್ಸಂಗದಲ್ಲಿ ಉಪನಿಷತ್ತಿನ ಬಗ್ಗೆ ಅತ್ಯಂತ ಸರಳವಾಗಿ, ಅಷ್ಟೇ ಮನೋಜ್ಞವಾಗಿ ಮನಸ್ಸಿಗೆ ಮುಟ್ಟುವಂತೆ ಕಟ್ಟಿಕೊಟ್ಟ ನಮ್ಮ ವೇದಪಾಠಶಾಲೆಯ ವಿದ್ಯಾರ್ಥಿಗಳು ಮತ್ತು ವಯಕ್ತಿಕವಾಗಿ ಬಹಳ ವರ್ಷಗಳಿಂದ ಆತ್ಮೀಯರಾದವರೊಂದಿಗೆ ಮಾತಾನಾಡುತ್ತಾ ಏ ಕರೋನಾದ ಗೀರೋನಾ ಯಾವುದು ಇಲ್ಲಾ ರೀ.. ಅದೆಲ್ಲಾ ಈ ಭ್ರಷ್ಟ ರಾಜಕಾರಣಿಗಳು ಮತ್ತು ಆಸ್ಪತ್ರೆಯವರು ದುಡ್ಡು ಹೊಡೆಯಲು ಮಾಡುತ್ತಿರುವ ಹುನ್ನಾರ ಎಂಬುದನ್ನು ಹೀಗೇ ಯಾರೋ ನನಗೆ ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದಕ್ಕೆ ನನ್ನ ಪ್ರತಿಕ್ರಿಯೆಯ ಬಗ್ಗೆ ಮಾತನಾಡುತ್ತಿದ್ದೆವು.
ಹೌದು ನಿಜ. ಕೊರೋನ ಮತ್ತು ದೇವರು ಎರಡೂ ಸಹಾ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರೆಡೂ ಇಲ್ಲಾ ಎಂದೂ ಸ್ಪಷ್ಟವಾಗಿ ಹೇಳಲಾಗದು. ಎರಡೂ ಸಹಾ ತಮ್ಮ ತಮ್ಮ ಅಸ್ತಿತ್ವವನ್ನು ಮತ್ತು ಪ್ರಭಾವವನ್ನು ಅಗೋಚರವಾಗಿ ಮೂಡಿಸಿವೆ. ಕೊರೋನ ಎಂಬ ವೈರಾಣು ಇಲ್ಲದೇ ಇದ್ದಿದ್ದಲ್ಲಿ ಏಕಾಏಕಿ ಪ್ರಪಂಚಾದ್ಯಂತ 28 ಲಕ್ಷಕ್ಕೂ ಅಧಿಕ ಜನರು ಸಾಯುತ್ತಿರಲಿಲ್ಲ ಅದೇ ರೀತಿ ಭಗವಂತನೇ ಇಲ್ಲ ಎಂದಾದಲ್ಲಿ ಆತನ ನಂಬಿದವರಿಗೆ ಆಗುವ ದಿವ್ಯಾನುಭವವೇ ಇರುತ್ತಿರಲಿಲ್ಲ. ಹೀಗೆ ಅವರವರ ಭಾವಕ್ಕೆ ಅವರವರ ಭಕುತಿ. ಎಂಬುದಾಗಿ ಅವರಿಗೆ ವಿವರಿಸಿದೆ ಎಂದದ್ದಕ್ಕೆ ಅವರೂ ಸಹಾ ಸಹಮೋದನೆ ನೀಡುತ್ತಿದ್ದಾಗಲೇ ಎಲ್ಲರೂ ಹೊರಡುವ ಸಮಯವಾದಾಗ ಹಾಗೆಯೇ ಪೂಜೆ ನೆಡೆದ ಸ್ಥಳವನ್ನು ಒಮ್ಮೆ ಕಣ್ಣಾಡಿಸಿ ಏನಾದರೂ ಬಿಟ್ಟಿದ್ದೇವೆಯೇ ಎಂದು ನೋಡುತ್ತಿದ್ದಾಗಲೇ. ನಮ್ಮ ಮತ್ತೊಬ್ಬ ಆತ್ಮೀಯ ಸ್ನೇಹಿತರಿಗೆ ಸ್ಮಾರ್ಟ್ ಫೋನ್ ಒಂದು ಕಣ್ಣಿಗೆ ಬಿತ್ತು. ಯಾರೋ ನಮ್ಮ ಪಾಠಶಾಲೆಯ ವಿದ್ಯಾರ್ಥಿಗಳೋ ಇಲ್ಲವೇ ಪೂಜೆಗೆ ಬಂದಿದ್ದ ಭಕ್ತಾದಿಗಳು ಬಿಟ್ಟು ಹೋಗಿರಬಹುದು ಎಂದು ತಿಳಿದು ಅದರಲ್ಲಿ last dialed No. ಗಳನ್ನು ನೋಡಿದಾಗ ನನ್ನ ಪರಿಚಯಿಸ್ಥರದ್ದೇ ಮೊಬೈಲ್ ಎಂದು ತಿಳಿದು ಹಾಗೇ ಮನೆಗೆ ಹೊಗುವಾಗ ಅವರ ಮನೆಗೆ ತಲುಪಿಸಿ ಹೋದರಾಯ್ತು ಎಂದು ತೀರ್ಮಾನಿಸಿ ಮೊಬೈಲ್ ನನ್ನ ಬಳಿಯೇ ಇಟ್ಟುಕೊಂಡೆ.
ಅಷ್ಟರಲ್ಲಿ ಅದೇ ಮೊಬೈಲಿಗೆ ಕರೆಯೊಂದು ಬಂದು ಅದನ್ನು ನನ್ನ ಗೆಳೆಯರು ಸ್ವೀಕರಿಸಿದಾಗ ಸರ್, ನನ್ನ ಮೊಬೈಲ್ ಕಳೆದುಹೋಗಿದೆ ದಯವಿಟ್ಟು ಅದನ್ನು ಹಿಂದಿರುಗಿಸುವಿರಾ ಎಂದು ಅತ್ತ ಕಡೆಯಿಂದ ವಿನಮ್ರಿಸಿಕೊಂಡಾಗ, ನನ್ನ ಗೆಳೆಯರು ಮೊಬೈಲ್ ನನ್ನ ಬಳಿ ಇದೆಯೆಂದೂ ನಾನೇ ಅವರ ಮನೆಗೆ ಬಂದು ತಲುಪಿಸುತ್ತೇನೆ ಎಂದು ತಿಳಿಸಿದರು. ಅದಕ್ಕವರು. ಅಯ್ಯೋ ಸುಮ್ಮನೇ ಅವರಿಗೇಕೆ ತೊಂದರೆ, ಈ ಕೂಡಲೇ ನನ್ನ ಮಗನನ್ನು ಕಳುಹಿಸುತ್ತೇನೆ. ಅವನ ಕೈಯ್ಯಲ್ಲಿ ಕೊಟ್ಟು ಕಳುಹಿಸಿ. ಎಂದಾಗ ಸರಿ ಹಾಗೇ ಆಗಲಿ ನಾವು ಇಲ್ಲೇ ದೇವಸ್ಥಾನದ ಆವರಣದಲ್ಲೇ ಇರುತ್ತೇವೆ ಎಂದು ತಿಳಿಸಿ ದೇವಸ್ಥಾನದ ಹೊರಗೆ ಚಪ್ಪಲಿ ಹಾಕಿಕೊಳ್ಳಲು ಬಂದೆವು.
ದೇವಸ್ಥಾನದ ಒಂದು ಬದಿಯಲ್ಲಿರುವ ಚಪ್ಪಲಿ ಸ್ಟಾಂಡಿನಲ್ಲಿ ಬಿಟ್ಟಿದ್ದ ನನ್ನ ಚಪ್ಪಲಿ ಆ ಸ್ಥಳದಲ್ಲಿ ಕಾಣುತ್ತಿಲ್ಲ. ಸ್ವಲ್ಪ ಸೂಕ್ಷ್ಮವಾಗಿ ತಡಕಾಡಿದಾಗ ಮತ್ತೊಂದು ಮೂಲೆಯಲ್ಲಿ ನನ್ನ ಚಪ್ಪಲಿ ಕಾಣಿಸಿದಾಗ ಅರೇ, ಸ್ಟಾಂಡಿನಲ್ಲಿ ಬಿಟ್ಟಿದ್ದ ಚಪ್ಪಲಿ ಇಲ್ಲಿಗೆ ಹೇಗೇ ಬಂತಪ್ಪಾ? ಎಂದು ಉದ್ಗಾರ ತೆಗೆದು, ಬಹುಶಃ ಯಾರೋ ತಮ್ಮ ಚಪ್ಪಲಿ ತೆಗೆಯುವ ಬರದಲ್ಲಿ ನನ್ನ ಚಪ್ಪಲಿಯನ್ನು ಈ ರೀತಿ ಮೂಲೆಗೆ ಎಸೆದಿರಬಹುದು ಎಂದು ಭಾವಿಸಿ ಚಪ್ಪಲಿಯನ್ನು ಕಾಲಿಗೆ ಹಾಕಿಕೊಂಡ ತಕ್ಷಣವೇ, ಅದು ನನ್ನ ಚಪ್ಪಲಿಯಲ್ಲ ಎಂದು ತಿಳಿದು ಬಂದಿತು. ಛೇ.. ಯಾರೋ ತಿಳಿಯದೇ ಒಂದೇ ರೀತಿಯಿದ್ದ ನನ್ನ ಚಪ್ಪಲಿಯನ್ನು ಅವರ ಚಪ್ಪಲಿ ಎಂದು ಭಾವಿಸಿ ಹಾಕಿಕೊಂಡು ಹೋಗಿರಬಹುದು. ಬೇರೆಯವರ ಚಪ್ಪಲಿ ಹಾಕಿಕೊಳ್ಳುವುದು ಸರಿಯಲ್ಲ ಎಂದು ಹೇಳಿ ಹಾಗೇ ಸ್ನೇಹಿತರೊಂದಿಗೆ ಮಾತನಾಡುತ್ತಾ ಮೊಬೈಲ್ ತೆಗೆದುಕೊಂಡು ಹೋಗಲು ಬರುವ ಹುಡುಗನಿಗಾಗಿ ಕಾಯುತ್ತಾ ದೇವಸ್ಥಾನದ ಮುಂದೆಯೇ ನಿಂತೆವು.
ಗೆಳೆಯರೊಂದಿಗೆ ಮಾತನಾಡುತ್ತಿದ್ದರೂ ಮನಸ್ಸಿನಲ್ಲಿ ಛೇ.. ಕೆಲವೇ ದಿನಗಳ ಹಿಂದೆ ತೆಗೆದು ಕೊಂಡ ಚಪ್ಪಲಿ ಕಳೆದು ಹೋಗಬೇಕೇ? ಅದೂ ಈಗ ಕೆಲಸ ಇಲ್ಲದ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಅನಗತ್ಯವಾಗಿ ಮತ್ತೊಂದು ಹೊಸಾ ಚಪ್ಪಲಿ ಖರೀದಿಸಬೇಕೇ? ಎಂದು ಯೋಚಿಸುತ್ತಿದ್ದ ಹಾಗೆ ಚಪ್ಪಲಿ ಕಳೆದು ಕೊಂಡರೆ ಹಿಡಿದ ಶಾಪ ಹೋಗುತ್ತದೆ ಎಂದು ಅಮ್ಮಾ ಹೇಳುತ್ತಿದ್ದದ್ದು ನೆನಪಾಗಿ ನನಗೆ ನಾನೇ ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಆ ಹುಡುಗ ಬಂದು ಅಂಕಲ್ ಅಪ್ಪನ ಮೊಬೈಲ್ ಕೊಡೀ ಎಂದಾಗ ಅವನಿಗೆ ಮೊಬೈಲ್ ಕೊಟ್ಟು ಇನ್ನೇನು ಮನೆಗೆ ಹಿಂದಿರುಗಬೇಕು ಎನ್ನುವಷ್ಟರಲ್ಲಿ ಮುಚ್ಚಿದ್ದ ದೇವಸ್ಥಾನದ ಮುಂದೆ ಬಂದವರೊಬ್ಬರು ತಮ್ಮ ಪಾದರಕ್ಷೆಗಳನ್ನು ಕಳಚಿ ದೇವರಿಗೆ ಕೈ ಮುಗಿಯುತ್ತಿದ್ದನ್ನು ಗಮನಿಸಿದೆ.
ಹಾಗೇ ಸುಮ್ಮನೆ ಅವರತ್ತ ಕಣ್ಣಾಡಿಸಿದರೆ ಅವರು ಬಿಟ್ಟಿದ್ದ ಚಪ್ಪಲಿ ನನ್ನದೇ ರೀತಿಯದ್ದಾಗಿತ್ತು. ಕೂಡಲೇ ಅಲ್ಲಿಗೆ ಹೋಗಿ ಅದನ್ನೊಮ್ಮೆ ಕಾಲಿಗೆ ಹಾಕಿಕೊಂಡು ನೋಡಿದರೆ ಏನಾಶ್ಚರ್ಯ ಆ ಚಪ್ಪಲಿ ನನ್ನದೇ ಆಗಿರಬೇಕೇ?. ನಾನು ಯಾವ ಚಪ್ಪಲಿಯನ್ನು ಕೆಳೆದುಕೊಂಡೇ ಎಂದು ಭಾವಿಸಿದ್ದೆನೋ ಅದೇ ಚಪ್ಪಲಿ ಕಳೆದು ಕೊಂಡ ಜಾಗದಲ್ಲಿಯೇ ಕೆಲವೇ ಕೆಲವು ಕ್ಷಣಗಳಲ್ಲಿ ನನಗೆ ಸಿಕ್ಕಿ ಬಿಟ್ಟಿತ್ತು.
ಅದೇ ಸಂತೋಷದಲ್ಲಿ ಕೂಡಲೇ ಏನು ಸ್ವಾಮೀ, ಈ ಚಪ್ಪಲಿ ನಿಮ್ಮ ಬಳಿ ಹೇಗೆ ಬಂದಿತು? ಎಂದು ಕೇಳಿದೆ. ಅದಕ್ಕವರು, ಈ ಸ್ವಲ್ಪ ಮುಂಚೆ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು ಹೋಗಿದ್ದೆ. ಅದೇಕೋ ಏನೋ ದೇವರ ದರ್ಶನ ಮಾಡಿದ ಸಮಾಧಾನವಾಗಿರಲಿಲ್ಲ. ಅದಕ್ಕೇ ಈಗ ಮತ್ತೊಮ್ಮೆ ದೇವರಿಗೆ ಕೈ ಮುಗಿಯುವಾ ಎಂದು ಮತ್ತೆ ಬಂದೇ ಎಂದರು. ಅದು ಸರಿ ನೀವು ಚಪ್ಪಲಿ ಹಾಕಿಕೊಂಡಾಗ ಅದು ನಿಮ್ಮ ಚಪ್ಪಲಿಯಲ್ಲಾ ಎಂದು ಗೊತ್ತಾಗಲಿಲ್ಲವೇ ಎಂದು ಕೇಳಿದಾಗ. ದಯವಿಟ್ಟು ಕ್ಷಮಿಸಿ. ನನಗೂ ವಯಸ್ಸಾಗಿದೆ. ಒಂದೇ ರೀತಿಯ ಚಪ್ಪಲಿಯಾಗಿದ್ದರಿಂದ ನನಗೂ ಗೊತ್ತಾಗಲಿಲ್ಲ ಎಂದು ಕೈ ಮುಗಿದರು. ಬಹುಶಃ ದೇವರ ದರ್ಶನವಾದ ನಂತರ ಅವರಿಗೇ ಅರಿವಿಲ್ಲದಂತೆಯೇ ಒಂದೇ ರೀತಿ ಇದ್ದ ನನ್ನ ಚಪ್ಪಲಿಯನ್ನು ಅವರು ಹಾಕಿಕೊಂಡು ಹೋಗಿದ್ದರು.
ಕೆಲವೇ ನಿಮಿಷಗಳ ಹಿಂದೆಯಷ್ಟೇ ಕಣ್ಣಿಗೆ ಕಾಣದ ದೇವರ ಅಸ್ತಿತ್ವದ ಬಗ್ಗೆ ಮಾತನಾಡಿದ್ದೆವು. ನನ್ನ ಚಪ್ಪಲಿ ಕಳೆದು ಹೋಗಿದ್ದಾಗ ಅಯ್ಯೋ ದೇವರೇ ನನ್ನ ಚಪ್ಪಲಿಯೇ ಕಳೆದುಹೋಗಬೇಕೇ? ಎಂದು ದೇವರಲ್ಲಿ ಮೊರೆ ಹೋಗಿದ್ದೆ. ಈಗ ಚಪ್ಪಲಿ ಸಿಕ್ಕ ನಂತರ ನನ್ನ ಮನಸ್ಸಿನಲ್ಲಿ ಮೂಡಿದ್ದೇನೆಂದರೆ ಬಹುಶಃ ನನ್ನ ಚಪ್ಪಲಿ ಮರಳಿ ನನಗೇ ಸಿಗಲೆಂದೇ ದೇವರು ಮೊಬೈಲ್ ಹಿಂದಿರಿಗಿಸುವ ನೆಪದಲ್ಲಿ ನನ್ನನ್ನು ಅಲ್ಲಿಯೇ ಕಾಯಿಸಿದನೇ? ಇಲ್ಲವೇ ಮತ್ತೊಬ್ಬರ ಚಪ್ಪಲಿ ಹಾಕಿಕೊಂಡು ಹೋಗಿದ್ದರ ಅರಿವಿಲ್ಲದವರು, ಮತ್ತೊಮ್ಮೆ ದೇವಸ್ಥಾನಕ್ಕೆ ಮರಳಿ ಬರುವಂತೆ ಪ್ರೇರಣೆ ನೀಡಿದನೇ?
ಬಹುಶಃ ಪೂಜೆ ಮುಗಿದ ನಂತರ ಯಾರಿಗೂ ಕಾಯುವ ಪ್ರಮೇಯವಿಲ್ಲದಿದ್ದಲ್ಲಿ, ನನ್ನ ಚಪ್ಪಲಿ ಕಾಣದಿದ್ದಾಗ ನನ್ನ ದುರ್ವಿಧಿಗೆ ನನ್ನನ್ನೇ ನಾನು ಶಪಿಸಿಕೊಂಡು ಹೋಗಿಬಿಡುತ್ತಿದೆ. ನನ್ನ ಚಪ್ಪಲಿ ಅದೇ ಸ್ಥಾನಕ್ಕೆ ಮರಳಿ ಬಂದ್ದಿದ್ದರೂ ಅದನ್ನು ದಕ್ಕಿಸಿಕೊಳ್ಳಲು ನಾನು ಅಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ.
ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ ಎಂಬ ದಾಸರ ವಾಣಿಯಂತೆ, ಸುಖಾ ಸುಮ್ಮನೆ ದೇವರ ಅಸ್ತಿತ್ವ ಮತ್ತು ಅಸ್ಮಿತೆಗಳ ಬಗ್ಗೆ ನಿರರ್ಥಕ ವಿತಂಡ ವಾದಗಳನ್ನು ಮಾಡುತ್ತಾ ಎಲ್ಲರ ಅತ್ಯಮೂಲ್ಯವಾದ ಸಮಯವನ್ನು ಹಾಳು ಮಾಡುತ್ತಾ ವಯಕ್ತಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಬದಲು, ನಿಷ್ಕಲ್ಮಶವಾಗಿ ಆ ಭಗವಂತನನ್ನು ಧ್ಯಾನ ಮಾಡೋಣ. ಫಲಾ ಫಲಗಳನ್ನು ನೀಡುವುದನ್ನು ಆ ಭಗವಂತನಿಗೇ ಬಿಟ್ಟು ಬಿಡೋಣ. ನಂಬಿ ಕೆಟ್ಟವರು ಇಲ್ಲವೋ ಶ್ರೀ ಹರಿಯೇ ನಿನ ನಾಮವ ಜಪಿಸಿದವರು, ನಂಬಿ ಕೆಟ್ಟವರು ಇಲ್ಲವೋ ಎನ್ನುವಂತೆ ಭಗವಂತನನ್ನು ನಂಬಿದವರಿಗೆ ಎಂದೂ ಕೆಡುಕಾಗದು ಎಂಬುದಕ್ಕೆ ಈ ಅಧ್ಭುತ ಪ್ರಸಂಗವೇ ಜ್ವಲಂತ ಸಾಕ್ಷಿಯಾಗಿದೆ.
ಏನಂತೀರೀ?
ನಿಮ್ಮವನೇ ಉಮಾಸುತ