ಪಂಚಾಂಗದ ಪಜೀತಿ

ಯುಗಾದಿ ಹಬ್ಬ ಎಂದರೆ ಹಿಂದೂಗಳಿಗೆ ಹೊಸ ವರ್ಷ. ಹಾಗಾಗಿ ಒಂದು ಇದರ ತಯಾರಿ ಒಂದೆರಡು ವಾರಗಳ ಹಿಂದೆಯಿಂದಲೇ ತಯಾರಾಗಿರುತ್ತದೆ. ಮನೆ ಮಂದಿಗೆಲ್ಲಾ ಬಟ್ಟೆ ತಂದು ಹೆಣ್ಣುಮಕ್ಕಳ ಬಟ್ಟೆಗಳನ್ನು ದರ್ಜಿ(ಟೈಲರ್)ಗೆ ಕೊಟ್ಟು ಅವರ ಬೇಕಾದ ರೀತಿಯಲ್ಲಿ ಬೇಕದ ಅಳತೆಗೆ ಹೊಂದಿಕೊಳ್ಳುವಂತೆ ಹೊಲಿಸಿಕೊಂಡಾಗಿತ್ತು. ಮಗನಿಗೂ ಆನ್ ಲೈನಿನಲ್ಲಿಯೇ ಟಿ-ಶರ್ಟ್ ತರಿಸಿಯಾಗಿತ್ತು. ನನ್ನ ಹತ್ತಿರ ಹೋದ ವರ್ಷ ಕೊಂಡ ಹೊಸಬಟ್ಟೆಯೇ ಇದ್ದ ಕಾರಣ ಮತ್ತೊಮ್ಮೆ ಕೊಂಡು ಕೊಳ್ಳುವ ಪ್ರಮೇಯ ಬಂದಿರಲಿಲ್ಲ ಇನ್ನು ಮಡದಿ ಹಬ್ಬಕ್ಕೆ ಬೇಕಾದ ಸಾಮಾನುಗಳ ಪಟ್ಟಿ ಮಾಡಿ, ಬೇಳೆ, ಬೆಲ್ಲ, ಕಾಯಿ ತಂದಿಟ್ಭಿಡಿ. ಹೂವು ಹಣ್ಣುಗಳನ್ನು ಹಬ್ಬದ ಹಿಂದಿನ ದಿನ ತಂದರಾಯ್ತು. ಹಾಗೇ ಬರುವಾಗ ಶೆಟ್ರ ಅಂಗಡಿಯಂದ ಒಂಟಿಕೊಪ್ಪಲ್ ಪಂಚಾಂಗ ತಂದ್ಬಿಡಿ ಎಂದು ಹತ್ತು ಸಲಾ ನೆನಪಿಸಿದರೂ ಹೂಂ. ಗುಟ್ಟತ್ತಲೇ ಇದ್ದೆ. ನಿಜ ಹೇಳ್ಬೇಕೂ ಅಂದ್ರೇ ಯುಗಾದಿ ಹಬ್ಬದಲ್ಲಿ ಹೊಸಾ ಬಟ್ಟೆ ತರದೇ ಹೋದ್ರೂ ಚಿಂತೆ ಇಲ್ಲ. ಪಂಚಾಂಗವಂತೂ ಇರಲೇ ಬೇಕು. ಬೆಳಿಗ್ಗೆ ದೇವರ ಪೂಜೆ ಮಾಡುವಾಗ ಪಂಚಾಂಗಕ್ಕೂ ಪೂಜೇ ಮಾಡಿ ಸಂಜೆ ಅದೇ ಪಂಚಾಂಗವನ್ನು ಭಕ್ತಿಯಿಂದ ಹೊಸಾ ವರ್ಷದಲ್ಲಿ ಮನೆಯವರೆಲ್ಲರ ರಾಶಿ ಫಲವನ್ನು ಶ್ರವಣ ಮಾಡಿದ ನಂತರವೇ ಹಬ್ಬ ಸಮಾಪ್ತಿಯಾಗುತ್ತದೆ.

tor2

ಮೂರ್ನಾಲ್ಕು ವರ್ಷಗಳ ಹಿಂದೆ ಅಪ್ಪಾ ಇರುವವರೆಗೂ ಇದೆಲ್ಲದರ ಜವಾಬ್ಧಾರಿ ಅವರದ್ದೇ ಆಗಿರುತ್ತಿತ್ತು. ಅವರು ಬಿಇಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಒಂಟಿಕೊಪ್ಪಲ್ ಪಂಚಾಗ ತಯಾರಕರ ಸಂಬಂಧೀಕರೊಬ್ಬರು ಕೆಲಸ ಮಾಡುತ್ತಿದ್ದ ಕಾರಣ ಹಬ್ಬಕ್ಕೆ ತಿಂಗಳ ಮುಂಚೆಯೇ ಪಂಚಾಗ ತಂದು ಕೊಡುತ್ತಿದ್ದರು. ಅಪ್ಪಾ ಬಿಇಎಲ್ ಕಾರ್ಖಾನೆಯಿಂದ ನಿವೃತ್ತರಾದ ಮೇಲೂ ಸುಮಾರು ವರ್ಷಗಳು ಯಾರ ಮೂಲಕವಾದರೂ ತಲುಪಿಸುತ್ತಿದ್ದರು. ಇನ್ನು ಯುಗಾದಿ ಹಬ್ಬ ನಮ್ಮ ಸುತ್ತಮುತ್ತಲ ಪ್ರದೇಶಗಳೆಲ್ಲಾ ಹಚ್ಚ ಹಸಿರನ್ನು ಹೊತ್ತು ಪ್ರಕೃತಿಯೇ ನಮ್ಮೆಲ್ಲರ ಸಂಭ್ರಮವನ್ನು ಇಮ್ಮಡಿಗೊಳಿಸಿರುವಂತಹ ಹಬ್ಬ. ಇಂತಹ ಹಬ್ಬದಂದು ಮನೆಯಲ್ಲಿಯೂ ಅದೇ ವಾತಾವರಣ ಮೂಡಿಸುವ ಸಲುವಾಗಿಯೇ ಮನೆಯ ಎಲ್ಲಾ ಬಾಗಿಲುಗಳಿಗೂ ತಳಿರು ತೋರಣಗಳಿಂದ ಸಿಂಗರಿಸುವುದು ರೂಢಿಯಲ್ಲಿದೆ. ಹಬ್ಬದ ಹಿಂದಿನ ದಿನವೇ, ತಂದೆಯವರು ಅಕ್ಕ ಪಕ್ಕದ ಯಾರ ಮನೆಯಲ್ಲಿ ಚಿಗುರಾದ ಮಾವಿನ ಎಲೆ ಇದೆ ಎಂಬುದನ್ನು ಗಮನಿಸಿ, ಬೇವಿನ ಸೊಪ್ಪುನ್ನೂ ಅದರ ಜೊತೆಗೆ ತಂದು ಅದನ್ನು ತೊಳೆದು, ಶುಭ್ರವಾಗಿ ಒರೆಸಿ ಒಂದೇ ಸಮಾನಾದ ಎಲೆಗಳನ್ನೆಲ್ಲಾ ಜೋಡಿಸಿ ತುದಿಯನ್ನು ಸರಿಸಮನಾಗಿ ಕತ್ತರಿಸಿ, ಮನೆಯ ಮುಖ್ಯ ದ್ವಾರ ಮತ್ತು ದೇವರ ಮನೆಗಳ ಬಾಗಿಲಿನ ಹಳೆಯ ತೋರಣಗಳನ್ನು ತೆಗೆದು., ದಾರವನ್ನು ಮತ್ತೊಮ್ಮ ಹುರಿಗೊಳಿಸಿ, ಬಾರೋ ಬಾರೋ ಮಗು ಬಾರೋ, ಇಲ್ಲವೇ ಬಾರೋ ಬಾರೋ ಅಕ್ಕಾ, ಅಪ್ಪಾ ಬರುವ ಹೊತ್ತಿಗೆ ತೋರಣ ಎಲ್ಲಾ ಕಟ್ಟಿ ಬಿಡೋಣ ಎಂದು ನಮ್ಮ ಮಗ ಇಲ್ಲವೇ ಮಗಳನ್ನು ಪೂಸಿ ಹೊಡೆಯುತ್ತಾ ಅವರ ಸಹಾಯದೊಂದಿಗೆ ಚೆಂದದ ತೋರಣಗಳನ್ನು ಕಟ್ಟಿ ಉಳಿದ ಎಲ್ಲಾ ಬಾಗಿಲುಗಳಿಗೆ ಮಾವಿನ ಕುಡಿ ಮತ್ತು ಬೇವಿನ ಕುಡಿಯನ್ನು ಸಿಕ್ಕಿಸಿ, ಮನೆಯ ಕೈ ತೋಟದಲ್ಲಿಯೇ ಬಿಟ್ಟ ಹೂವುಗಳನ್ನು ಮತ್ತು ಪತ್ರೆಗಳನ್ನು ಮಾರನೇ ದಿನದ ಪೂಜೆಗೆ ಬಿಡಿಸಿಡುತ್ತಿದ್ದರು.

ಎಂದಿನಂತೆ ನಮ್ಮಾಕಿ, ರೀ ಪಂಚಾಂಗ ಮತ್ತು ತೆಂಗಿನಕಾಯಿ ತನ್ರೀ ಅಂತ ಒಂದು ವಾರದ ಹಿಂದೆಯಿಂದ ಹೇಳುತ್ತಿದ್ದರೂ, ಕಿವಿಯ ಮೇಲೇ ಹಾಕಿಕೊಳ್ಳದೇ ಓಡಾಡುತ್ತಿದ್ದೆ. ನೆನ್ನೆ ಬೆಳಿಗ್ಗೆ ಕೋಲಿಗೆ ಕುಡುಗೋಲು ಕಟ್ಟಿಕೊಂಡು ತಾತ್ಕಾಲಿಕ ದೋಟಿ ಮಾಡಿಕೊಂಡು ಕೊನೇ ಮನೆಯಲ್ಲಿ ಬೇವಿನ ಚಿಗರನ್ನು ಕತ್ತರಿಸಿಕೊಂಡು ಹಾಗೆಯೇ ಎದರು ಮನೆಗೆ ಹೋಗಿ ಅವರ ಮನೆಗೂ ಸೇರಿದಂತೆ ಮಾವಿನ ಸೊಪ್ಪನ್ನು ಕತ್ತರಿಸಿಕೊಂಡು ಮನೆಯಲ್ಲಿ ಇಟ್ಟು ಬಾರೀ ಕೆಲಸ ಮಾಡಿದವನಂತೆ ಫೋಸ್ ಕೊಡುತ್ತಾ ಅಬ್ಬಾ ಸುಸ್ತಾಯ್ತು ಅಂತ ಮಂಚದ ಕೂರುತ್ತಿದ್ದ ಹಾಗೆಯೇ, ರೀ ಪಂಚಾಂಗ ತನ್ರೀ ಅಂತ ಮತ್ತೊಮ್ಮೆ ನೆನಪಿಸಿದಾಗ, ಪಂಚಾಂಗ ತಾನೇ ಸಂಜೆ ಹೋಗಿ ತರ್ತೀನಿ ಎಂದು ಆರಾಮಾಗಿ ಮಲಗಿಬಿಟ್ಟೆ.

ಸಂಜೆ ನಮ್ಮ ಮಾವನವರ ಮನೆಗೆ ಹೋಗಿ ಮಾವಿನ ಮತ್ತು ಬೇವಿನ ಸೊಪ್ಪು ಜೊತೆಗೆ ತೆಂಗಿನ ತುರಿ (ಸಂಜೆಯೇ ಹೂರಣ ಮಾಡಿಕೊಂಡಲ್ಲಿ ಮಾರನೇ ದಿನ ಒಬ್ಬಟ್ಟನ್ನು ಸುಲಭವಾಗಿ ಮಾಡಬಹುದು) ಕೊಟ್ಟು ಭದ್ರಯ್ಯ & ಸನ್ಚ್ ಅಂಗಡಿಗೆ ಹೋಗಿ ಒಂಟೀಕೊಪ್ಪಲ್ ಪಂಚಾಂಗ ಕೊಡಿ ಎಂದಾಗ, ಸಾರ್ ಈಗ ತಾನೇ ಖಾಲಿ ಆಯ್ತು. ಅರ್ಧ ಗಂಟೆ ಬಿಟ್ಟು ಬನ್ನಿ ಸಾರ್ ತರಿಸಿರ್ತಿವಿ ಎಂದು ಹೇಳಿದಾಗ ಸರಿ ಎಂದು ಹೇಳಿ ಬಂದೆ

ಮತ್ತೆ ಪಂಚಾಂಗ ತರದೇ ಮನೆಗೆ ಬಂದಾಗ ರೀ ಪಂಚಾಂಗ ಎಲ್ರೀ? ಎಂದಾಗ ಪಂಚಾಂಗ ಅಂಗಡಿಯಲ್ಲಿ ಖಾಲಿಯಾಗಿದೆಯಂತೆ ಇನ್ನರ್ಧಗಂಟೆಯಲ್ಲಿ ಬರುತ್ತದೆ ಎಂದಾಗ, ನಿಮ್ಮ ಹತ್ರ ಕಿರುಚಾಡೇ ನನಗೆ ಎದೆ ನೋವು ಬಂದು ಬಿಡುತ್ತದೆ. ಮಾವ ಇರ್ಬೇಕಾಗಿತ್ತು. ಎರಡು ಮೂರು ವಾರಕ್ಕೂ ಮುಂಚೆಯೇ ಪಂಚಾಂಗ ತಂದಿರೋರು. ಇಷ್ಟು ಹೊತ್ತಿಗೆಲ್ಲಾ ತೋರಣ ಕಟ್ಟಿ ಬಿಡುತ್ತಿದ್ದರು ಎಂದು ನಮ್ಮ ತಂದೆಯವರನ್ನು ನೆನಪಿಸಿಕೊಂಡಾಗ ನನಗೇ ಅರಿವಿಲ್ಲದಂತೆಯೇ ಕಣ್ಣಂಚಿನಲ್ಲಿ ನೀರೂರಿತ್ತು.

ಅರ್ಧ ಏಕೆ ಅಂತಾ ಒಂದು ಗಂಟೆ ಬಿಟ್ಟು ಮತ್ತೇ ಪಂಚಾಂಗ ತರಲು ಅಂಗಡಿಗೆ ಹೊದರೆ ಸುಮಾರು ಹತ್ತು ಹದಿನೈದು ಜನರು ಅಲ್ಲಿಯೇ ಪಂಚಾಂಗಕ್ಕಾಗಿ ಕಾಯ್ದು ಕುಳಿತಿದ್ದಾರೆ ಇನ್ನೂ ಅರ್ಧ ಮುಕ್ಕಾಲು ಗಂಟೆಯಲ್ಲಿ ಬಂದು ಬಿಡ್ತಾರೆ ಎಂದಾಗ ಸುಮ್ಮನೇ ಇಲ್ಲಿ ಕಾಯುವುದು ಸಮಯ ಹಾಳು ಎಂದು ಶೆಟ್ರ ಅಂಗಡಿಗೆ ಹೋಗಿ, ಶೆಟ್ರೇ ಒಂಟಿಕೊಪ್ಪಲ್ ಪಂಚಾಂಗ ಕೊಡಿ ಅಂತ ಕೇಳ್ದ್ರೇ, ಸಾರ್ ಈಗ ತಾನೇ ಖಾಲಿ ಆಯ್ತು. ಸಂಜೆ ಎಂಟು – ಎಂಟೂವರೆಗೆ ಬನ್ನಿ ಸಾರ್. ತರಿಸಿಡ್ತೀನಿ ಎಂದರು. ಛೇ ಬಂದ ದಾರಿಗೆ ಸುಂಕವಿಲ್ಲ ಎಂದು ಕೊಂಡು ಅಲ್ಲಿಂದ ಸೀದ ತಿಂಡ್ಲು ವೀರಭದ್ರಸ್ವಾಮಿ ದೇವಸ್ಥಾನದ ಮುಂದಿನ ಗ್ರಂಧಿಗೆ ಅಂಗಡಿಗೆ ಹೋಗಿ ಒಂಟಿಕೊಪ್ಪಲ್ ಪಂಚಾಂಗ ಕೊಡೀ ಎಂದು ಕೇಳಿದ್ರೇ, ಪಂಚಾಂಗ ಖಾಲಿ ಆಗಿದೆ ಎನ್ನಬೇಕೆ. ಯಾವಾಗ ಬರತ್ತೇ ಸಾರ್ ಎಂದು ಕೇಳಿದ್ರೇ, ಇಲ್ಲಾ ಸಾರ್ ಇನ್ನು ತರಿಸಲ್ಲಾ ಅಂದಾಗ ಎದೆ ಧಸಕ್ಕೆಂದಿತು. ಇದೆನಪ್ಪಾ, ಇದೊಳ್ಳೇ ಪಂಚಾಂಗದ ಪಜೀತಿಯಾಯ್ತಲ್ಲಪ್ಪಾ. ಪಂಚಾಂಗ ಇಲ್ದೇ ಮನೆಗೆ ಹೇಗಪ್ಪಾ ಹೋಗೋದು? ಪಂಚಾಂಗ ಇಲ್ದೇ ಮನಗೇ ಹೋಗೋದಿಲ್ಲ ಎಂದು ಮನಸ್ಸಿನಲ್ಲಿಯೇ ಪ್ರತಿಜ್ಞೆ ಮಾಡಿ ಅದೇ ಮುಖ್ಯರಸ್ತೆಯಲ್ಲಿ ನಾಲ್ಕಾರು ಅಂಗಡಿಗಳನ್ನು ವಿಚಾರಿಸಿದರೆ ಅಲ್ಲೂ ಅದೇ ರಾಮಾಯಣ. ಸರಿ ಕಡೆಗೆ ನಮ್ಮ ಭಾವನಿಗೆ ಕರೆ ಮಾಡಿ ದೊಡ್ಡಬೊಮ್ಮಸಂದ್ರದಲ್ಲಿ ಪಂಚಾಂಗ ಎಲ್ಲಿ ಸಿಗುತ್ತದೆ? ಎಂದು ಕೇಳಿದಾಗ, ಏ, ಭೀಮನ ಕಟ್ಟೆ ರಾಯರ ಮಠದ ಎದುರಿನ ಅಂಗಡಿಯಲ್ಲಿ ಸಿಗುತ್ತೇ ಎಂದಾಗ ಮರುಭೂಮಿಯಲ್ಲಿ ನೀರು ಸಿಗುವ ಓಯಸಿಸ್ ನಂತಾಗಿ ಸೀದಾ ಗಾಡಿಯನ್ನು ರಾಯರ ಮಠದ ಕಡೆಗೆ ತಿರುಗಿಸಿ, ಅಂಗಡಿಯ ಬಳಿ ಹೋಗಿ, ಗಾಡಿಯನ್ನೂ ನಿಲ್ಲಿಸದೇ ಒಂಟಿಕೊಪ್ಪಲ್ ಪಂಚಾಂಗ ಇದ್ಯಾ? ಎಂದು ಒಂದೇ ಉಸಿರನಲ್ಲಿ ಕೇಳಿದೆ. ಹೂಂ ಇದೇ ಎಂದಾಕ್ಷಾಣ ಏನೋ ಕೋಟಿ ರೂಪಾಯಿ ಲಾಟರಿ ಹೊಡೆದ ಹಾಗಾಯ್ತು. ಕೂಡಲೇ, ಅಂಗಡಿಯ ಪಕ್ಕದಲ್ಲೇ ಗಾಡಿ ನಿಲ್ಲಿಸಿ ನೂರು ರೂಪಾಯಿ ನೋಟೊಂದನ್ನು ಕೊಟ್ಟು ಪಂಚಾಂಗ ಕೈಯಲ್ಲಿ ತೆಗೆದುಕೊಂಡು ಪ್ರಿಂಟ್ ಎಲ್ಲಾ ಸರಿ ಎಂದು ನೋಡಿ ಅಲ್ಲಿಂದಲೇ ಹಿಂದಿರುಗಿ ರಾಯರ ಬೃಂದಾವನಕ್ಕೊಂದು ಭಕ್ತಿಯಿಂದ ನಮಸ್ಕಾರ ಹಾಕಿ, ಒಂದೇ ಉಸಿರನಲ್ಲಿ ಮನೆಕಡೆ ಗಾಡಿ ತಿರುಗಿಸಿದೆ.

panchanga

ದಾರಿಯಲ್ಲಿ ಮೊಬೈಲ್ ಒಂದೇ ಸಮನೇ ಹೊಡೆದುಕೊಳ್ಳುತ್ತಿತ್ತು. ಬಹುಶಃ ಪಂಚಾಂಗ ತರ್ತೀನೀ ಅಂತ ಹೋದವರು ಯಾರ ಹತ್ರಾನೋ ಪಟ್ಟಾಗಿ ಹರಟುತ್ತಾ ಇರ್ತಾರೆ ಅಂತ ಮಡದಿ ಪೋನ್ ಮಾಡಿರ್ಬೇಕು ಅಂದು ಕೊಂಡು ಫೋನ್ ತೆಗೆಯದೇ ಸೀದಾ ಮನೆಗೆ ಬಂದು ಕೈಕಾಲು ತೊಳೆದುಕೊಂಡು ಪಂಚಾಂಗವನ್ನು ದೇವರಮನೆಯಲ್ಲಿ ಇಟ್ಟು ಏನೋ ಭಾರೀ ಘನಾಂಧಾರಿ ಕೆಲಸ ಮಾಡಿದಂತೆ ನೋಡಮ್ಮಾ ಪಂಚಾಂಗ ತಂದು ಬಿಟ್ಟಿದ್ದೀನಿ ಎಂದರೆ, ನನ್ನ ಕಡೆಯೇ ನೋಡದೇ, ಸರಿ ಸರಿ ಹೊತ್ತಾಯ್ತು, ಬೇಗ ಬೇಗ ತೋರಣ ಕಟ್ಬಿಡಿ ಎಂದಾಗ ಕೇವಲ ಒಂದು ಪಂಚಾಂಗಕ್ಕೆ ಅಷ್ಟೆಲ್ಲಾ ಕಷ್ಟ ಪಟ್ಟು ಹತ್ತಾರು ಕಿಮೀ ಸುತ್ತಿ ಪಂಚಾಂಗ ತಂದು ಉಬ್ಬಿ ಹೋಗಿದ್ದ ನನ್ನ ಮನಸ್ಸು ಎಂಬ ಬಲೂನು ಒಂದೇ ಕ್ಷಣಕ್ಕೆ ಠುಸ್ ಎಂದಿತ್ತು,

ಆಷ್ಟರಲ್ಲಿ ಮತ್ತೆ ಪೋನ್ ರಿಂಗಣಿಸಿದ್ದನ್ನು ನೋಡಿ, ಯಾರಪ್ಪಾ ಎಂದು ತೆಗೆದುಕೊಂಡರೆ ಆ ಕಡೆಯಿಂದ ಕರೆ ಮಾಡಿದ ಮತ್ತೊಬ್ಬ ಆತ್ಮೀಯರು ಸಾರ್, ಬಿಸೀನಾ ಸ್ವಲ್ಪ ಮಾತನಾಡ್ಬೋದಾ ಎಂದ್ರು. ಸಾರಿ ಸಾರ್ ಗಾಡಿ ಓಡಿಸ್ತಾ ಇದ್ದೆ ಅದಕ್ಕೆ ನಿಮ್ಮ ಫೋನ್ ತೆಗೆಯಲಾಗಲಿಲ್ಲ ಹೇಳಿ ಏನು ಸಮಾಚಾರ ಎಂದಾಗ, ಏನು ಇಲ್ಲಾ. ಇಲ್ಲೆಲ್ಲೂ ಪಂಚಾಂಗ ಸಿಕ್ತಾ ಇಲ್ಲಾ. ನೀವು ಎಲ್ಲಿಂದ ತಂದ್ರೀ ಎನ್ನಬೇಕೇ? ಹ. ಹ. ಹ. ಎಂದು ಗಹಗಹಿಸಿ ನಕ್ಕು ಸಾರ್ ನಂದೂ ಇದೇ ಪಜೀತಿ ಎಂದು ನಡೆದದ್ದೆಲ್ಲವನ್ನು ಸೂಕ್ಷ್ಮವಾಗಿ ವಿವರಿಸಿ ರಾಯರ ಮಠದ ಎದುರಿಗಿನ ಅಂಗಡಿಯಲ್ಲಿ ಕೊಳ್ಳಲು ಸೂಚಿಸಿ, ತೋರಣ ಕಟ್ಟಲು ಮಾವಿನ ಎಲೆಯನ್ನೆಲ್ಲಾ ಜೋಡಿಸಿ ಸರಿಯಾಗಿ ಕತ್ತರಿಸಿಟ್ಟುಕೊಂಡು ಇನ್ನೇನು ತೋರಣ ಕಟ್ಟಬೇಕು ಎನ್ನುವಷ್ಟರ ಹೊತ್ತಿಗೆ ಮತ್ತೊಬ್ಬ ಆತ್ಮೀಯರಿಂದ ಕರೆ ಬಂದಿದ್ದನ್ನು ಸ್ವೀಕರಿಸಿ, ನಮಸ್ಕಾರ ಸಾರ್ ಎಂದೆ. ಎಲ್ಲೀದ್ದೀರೀ? ಎಂದು ಕೇಳಿದ್ದಕ್ಕೆ ಮನೆಯಲ್ಲೇ ತೋರಣ ಕಟ್ಟುತ್ತಿದ್ದೇನೆ ಎಂದಾಗ ಸರಿ. ಎರಡು ನಿಮಿಷ ಬಂದೇ ಎಂದರು.

tor1

ಹೇಳಿದ ಸಮಯಕ್ಕೆ ಸರಿಯಾಗಿ ಅವರು ಬಂದಾಗ ಮಗನ ಕೈಗೆ ಮಾವಿನ ಸೊಪ್ಪನ್ನು ಕೊಟ್ಟು ತೋರಣ ಕಟ್ತಾ ಇರು ಬಂದು ಬಿಡ್ತೀನಿ ಎಂದು ಅವರನ್ನು ಮಾತನಾಡಿಸಲು ಹೋದೆ. ನಮಸ್ಕಾರ ಸಾರ್ ಎಂದು ಹೇಳಿದ ತಕ್ಷಣ ಪಂಚಾಂಗ ತಂದ್ರಾ? ಎಂದು ಅವರೂ ಕೇಳ ಬೇಕೇ? ಸರಿ ಹೋಯ್ತು. ಇವತ್ತು ನನಗೂ ಪಂಚಾಂಗಕ್ಕೂ ಏನೋ ಅವಿನಾಭಾವ ಸಂಬಂಧ ಎಂದು ಮನಸ್ಸಿನಲ್ಲಿಯೇ ಅಂದು ಕೊಂಡು ಅವರಿಗೂ ನನ್ನ ಪಂಚಾಂಗ ಪುರಾಣವನ್ನು ಒದರಿದೆ. ಹೇ ಹಾಗಿದ್ರೇ ಆ ಶ್ರೀಧರ್ ಕೂಡಾ ಪಂಚಾಂಗ ಬೇಕು ಅಂತಾ ಹೇಳ್ತಾ ಇದ್ರೂ ಅವರಿಗೂ ಸ್ವಲ್ಪ ಹೇಳಿಬಿಡಿ ಎಂದಾಗ ಸರಿಹೋಯ್ತು ಎಂದುಕೊಂಡು ಶ್ರೀಧರ್ ಅವರಿಗೆ ಕರೆಮಾಡಿದರೆ ಎಂಗೇಜ್ ಬರ್ತಾ ಇತ್ತು. ಸರಿ ಎಂದು ವಾಟ್ಸಾಪ್ ಸಂದೇಶವೊಂದನ್ನು ಕಳುಹಿಸಿ ನನ್ನ ಸ್ನೇಹಿತರನ್ನು ಕಳುಹಿಸಿ ಬರುವಷ್ಟರಲ್ಲಿ ಮಗ ಮುಂದಿನ ಬಾಗಿಲಿಗೆ ತೋರಣ ಕಟ್ಟಿ ಮುಗಿಸಿ ದೇವರ ಮನೆಯ ಬಾಗಿಲಿಗೆ ಅರ್ಧ ಕಟ್ಟಿ ಮುಗಿಸಿದ್ದ. ಅವನಿಗೆ ಉಳಿದದ್ದನ್ನು ಕಟ್ಟಲು ಸಹಾಯ ಮಾಡಿ ಉಳಿದೆಲ್ಲಾ ಬಾಗಿಲುಗಳಿಗೂ ಬೇವಿನ ಕಡ್ಡಿ ಮತ್ತು ಮಾವಿನ ಸೊಪ್ಪು ಸಿಕ್ಕಿಸಿ ನಿರಾಳನಾದೆ. ತಾನೊಬ್ಬನೇ ತೋರಣ ಕಟ್ಟಿದ್ದಕ್ಕಾಗಿ ತಾತ ಇಲ್ಲದಿರುವ ಕಾರಣ ಮಗ ನನ್ನಿಂದಲೇ ಭಕ್ಷೀಸು ಪಡೆದು ಎಲ್ಲರಿಗೂ ಐಸ್ ಕ್ರೀಂ ತಂದು ಕೊಟ್ಟದ್ದನ್ನು ತಿಂದಾಗ ಮನಸ್ಸೂ ಕೂಡ ತಣ್ಣಗಾಯಿತು.

ಪಂಚಾಂಗ ತಂದಿದ್ದಲ್ಲದೇ ತಳಿರು‌ತೋರಣಗಳನ್ನೆಲ್ಲಾ ಕಟ್ಟಿ ಮುಗಿಸಿದ ನಿರಾಳದಲ್ಲಿ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಿ ಬೆಳಿಗ್ಗೆ ಎದ್ದು ಮನೆ ಮುಂದೆ ರಂಗೋಲಿ ಹಾಕೋದಿಕ್ಕೆ ಮಡದಿಗೆ ಸಹಾಯ ಮಾಡಿ, ನಮ್ಮಮ್ಮನ ಪ್ರತಿರೂಪಳಾದ ನನ್ನ ಮಗಳ ಕೈಯಲ್ಲಿ ತಲೆಗೆ ಎಣ್ಣೆ ಹಚ್ಚಿಸಿ ಕೊಂಡು‌ ಅಭ್ಯಂಜನ ಮುಗಿಸಿ ಸಂಧ್ಯಾವಂದನೆ ಮುಗಿಸಿ ತುಳಸೀ ಕಟ್ಟೆಗೆ ಕೈ ಮುಗಿಯುತ್ತಿದ್ದಾಗ, ಪಕ್ಕದ ಮನೆಯವರು ಲಗುಬಗೆ ಹೊರಗೆ ಹೊರಟಿದ್ದನ್ನು ಗಮನಿಸಿ ಅವರಿಗೆ ಹೊಸಾ ವರ್ಷದ ಶುಭಾಶಯಗಳನ್ನು ತಿಳಿಸಿ, ಏನ್ ಸಾರ್ ಪೂಜೆ ಎಲ್ಲಾ ಮುಗೀತಾ? ಬೆಳ್ಳಂ ಬೆಳಿಗ್ಗೆ ಎಲ್ಲೋ ಹೊರಟಹಾಗಿದೆ? ಎಂದು ಕೇಳಿದ್ದೇ ತಡಾ!, ಸಾರ್ ನನ್ನೆ ಪಂಚಾಂಗ ತರೋದು ಮರೆತು ಬಿಟ್ಟಿದ್ದೇ ಎನ್ನಬೇಕೇ? ಅಯ್ಯೋ ರಾಮಾ!, ಮಳೆ ನಿಂತು ಹೋದ ಮೇಲೆ ಮರದಡಿಯಲ್ಲಿ ಮಳೆ ಹನಿ ತೊಟ್ಟಿಕ್ಕುವ ರೀತಿಯಲ್ಲಿ ಇವತ್ತೂ ಪಂಚಾಂಗ ನನ್ನನ್ನು ಬೆನ್ನು ಬಿಡದ ಬೇತಾಳದ ರೂಪದಲ್ಲಿ ಕಾಡ್ತಾ ಇದ್ಯಲ್ಲಪ್ಪಾ! ಎಂದು ಮನಸ್ಸಿನಲ್ಲೇ ಹೇಳಿಕೊಂಡು ಸರ್ ಸೀದಾ ರಾಯರ‌ ಮಠಕ್ಕೆ ಹೋಗಿ ಬಿಡಿ. ಅಲ್ಲಿ ಪಂಚಾಂಗನೂ ಸಿಗತ್ತೆ ಹಬ್ಬದ ದಿನ ರಾಯರ ದರ್ಶನ ಕೂಡಾ ಮಾಡಿ ಬಿಡಬಹುದು ಎಂದೆ. ಅವರೂ ಸರೀ‌ ಸಾರ್ ಒಳ್ಳೆಯ ಸಲಹೆ ಎಂದು ಗಾಡಿ ಏರಿ‌ ಜರ್.. ಎಂದು ಹೊರಟರು.

ಇಂದಿನ ಆಧುನಿಕ ಜಗತ್ತಿನಲ್ಲಿ ಬೆರಳಿನ ತುದಿಯಲ್ಲಿಯೇ ಮೊಬೈಲಿನಲ್ಲೇ ಪಂಚಾಂಗ ನೋಡುವಂತಿದ್ದರೂ, ಇಂದಿಗೂ ಸಹಾ ಪೂಜೆಗೋಸ್ಕರವಾದರೂ, ಮುಗಿಬಿದ್ದು ಪಂಚಾಂಗವನ್ನು ಖರೀದಿಸುತ್ತಿರುವುದನ್ನು ನೋಡಿ ಸಂತೋಷವಾಯಿತು ಮತ್ತು ಇಷ್ಟೆಲ್ಲಾ ಪಂಚಾಂಗಕ್ಕೆ ಪರದಾಡುವ ಬದಲು, ನಾಳಿನ ಕೆಲಸವನ್ನು ಇಂದೇ ಮಾಡು ಇಂದಿನ ಕೆಲಸವನ್ನು ಈಗಲೇ ಮಾಡು ಎಂದು ಹೇಳುತ್ತಿದ್ದ ಅಪ್ಪನ ನೆನಪಾಗಿದ್ದಂತೂ ಸುಳ್ಳಲ್ಲ. ಹಾಗಾಗಿ ಈ ಲೇಖನ ಓದಿದ ಮೇಲಾದ್ರೂ ಅಂಗಡಿಗೆ ಹೋಗಿ ಪಂಚಾಂಗ ಖರೀದಿಸಿ ಹಬ್ಬದ ದಿನ ಪಜೀತಿ ಪಡೋದನ್ನು ತಪ್ಪಿಸಿಕೊಳ್ತಿರೀ ತಾನೇ?

panchangaಕಳೆದ ಸಲದಂತೆ ಈ ಬಾರಿ ಪಜೀತಿ ಪಡಬಾರದೆಂದು ಇಂದು ವಾರ ಮುಂಚಿತವಾಗಿಯೇ ಪಂಚಾಗ ಖರೀದಿಸಿ ನಿಮಗೂ ಸಹಾ ಪಂಚಾಂಗ ಖರೀದಿ ಮಾಡಲು ನೆನಪಿಸುತ್ತಿದ್ದೇನೆ. ನಾಳಿನ ಕೆಲಸವ ಇಂದೇ ಮಾಡು. ಇಂದಿನ ಕೆಲಸವನ್ನು ಈಗಲೇ ಮಾಡು ಎಂಬ ಗಾದೆ ಎಷ್ತು ನಿಜ ಅಲ್ವೇ?

ಏನಂತೀರೀ?

ಸಮಸ್ತ ಬಂಧು ಮಿತ್ರರಿಗೂ ಶೋಭಾಕೃತ್ ನಾಮ ಸಂವತ್ಸರದ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು. ಈ ಸಂವತ್ಸರ ಎಲ್ಲರ ಬಾಳಿನಲ್ಲಿಯೂ ಸುಖಃ ಸಂವೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.

ನಿಮ್ಮವನೇ ಉಮಾಸುತ

One thought on “ಪಂಚಾಂಗದ ಪಜೀತಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s