ಉಷ್ಟ್ರಾರೂಢಾ ಹನುಮಂತ

ವಾಯುಪುತ್ರ ಆಂಜನೇಯನಿಗೆ ಗಾಳಿಯಲ್ಲಿ ಸ್ವತಃ ತಾನೇ ನೂರಾರು ಯೋಜನಗಳಷ್ಟು ದೂರ ಹಾರುವ ಸಾಮರ್ಥ್ಯವನ್ನು ಹೊಂದಿದ್ದ ಮತ್ತು ಅದನ್ನು ಸೀತಾನ್ವೇಷಣೆಯ ಸಂಧರ್ಭದಲ್ಲಿ ಸಮುದ್ರ ಲಂಘನದ ಸಮಯದಲ್ಲಿ ನಿರೂಪಿಸಿಯೂ ಇದ್ದ ಆದರೂ, ಆಂಜನೇಯಯನ ಅನೇಕ ದೇವಾಲಯಗಳಲ್ಲಿ ಅಂಜನೇಯಯನ ವಿಗ್ರಹದ ಮುಂದೆ ಒಂಟೆಯನ್ನು ಇಟ್ಟಿರುತ್ತಾರಲ್ಲದೇ ಅವರನ್ನು ಉಷ್ಟ್ರಾರೂಡಾ ಎಂದೂ ಕರೆಯಲಾಗುತ್ತದೆ. ರಾಮಾಯಣ ಮತ್ತು ಪರಾಶರ ಸಂಹಿತೆಯಲ್ಲಿಯೂ ಹನುಮಂತ ಗಾಳಿಯ ವೇಗದಲ್ಲಿ ಹಾರಬಲ್ಲ ಎಂಬುವ ಅನೇಕ ಉದಾಹರಣೆಗಳನ್ನು ವಿವರಿಸುತ್ತಾರೆ ಮತ್ತು ಲಂಕೆಯನ್ನು ತಲುಪಲು ಸಾಗರದಾದ್ಯಂತ ಹಾರಾಟ, ಸಂಜೀವೀನಿಯನ್ನು ತರುವ ಸಲುವಾಗಿ ಲಂಕೆಯಿಂದ ಹಿಮಾಲಯಕ್ಕೆ ಹಾರಾಟ, ಪಾತಾಳ ಲೋಕಕ್ಕೆ ಹಾರುವುದು ಹೀಗೆ ಶರವೇಗದಲ್ಲಿ ಎಲ್ಲಾ ಕಡೆಯೂ ಹಾರುವುದನ್ನೇ ಬಿಂಬಿಸಿರುವಾಗ ಒಂಟೆಯಂತಹ ನಿಧಾನವಾಗಿ ಚಲಿಸುವ ಪ್ರಾಣಿಯೇಕೆ ಹನುಮಂತನ ವಾಹನ? ಎಂಬ ಜಿಜ್ಞಾಸೆ ಬಹಳವಾಗಿ ಕಾಡಿದ ಕಾರಣ ಅದರ ಬಗ್ಗೆ ಸೂಕ್ಷ್ಮವಾಗಿ ಜಾಲಾಡಿದಾಗ ದೊರೆತ ಕೆಲವೊಂದು ಮಾಹಿತಿಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

hanuman2ಎಲ್ಲರಿಗೂ ತಿಳಿದಂತೆ ಹನುಮಂತ ಆಜನ್ಮ ಬ್ರಹ್ಮಚಾರಿಯಾಗಿ ಅತ್ಯಂತ ಶ್ರದ್ಧೆಯಿಂದ ಬ್ರಹ್ಮಚರ್ಯವನ್ನು ಪಾಲಿಸಿದವನು. ನಮ್ಮ ಪುರಾಣಗಳ ಪ್ರಕಾರ ಈ ರೀತಿಯಾಗಿ ಕಠೋರ ಬ್ರಹಚರ್ಯ ಪಾಲಿಸಿದವರೆಂದರೆ ಭೀಷ್ಮಾಚಾರ್ಯರು ಮತ್ತು ಹನುಮಂತ ಇಬ್ಬರೇ. ಇಂತಹ ಹನುಮಂತನಿಗೆ ನವ ವೈಕರ್ಣವನ್ನು (9 ವ್ಯಾಕರಣ ನಿಯಮಗಳು) ಕಲಿಯಲು ಬಯಸಿದರಂತೆ. ಆದರೆ ಕೇವಲ ಗೃಹಸ್ಥರಾಗಿದ್ದವರು ಮಾತ್ರವೇ ಇದನ್ನು ಅಧ್ಯಯನ ಮಾಡಬಹುದು ಎಂಬ ನಿಯಮವಿದ್ದ ಕಾರಣ, ಆಜನ್ಮ ಬ್ರಹ್ಮಚಾರಿ ಹನುಮಂತ ಇದನ್ನು ಕಲಿಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಹನುಮಂತನಿಗೆ ಬಹಳ ದುಃಖವಾಗಿತ್ತು. ಇದನ್ನು ಕಂಡ ಸೂರ್ಯ ದೇವರು, ಇಂತಹ ಸಮರ್ಥನೊಬ್ಬನು ಕಲಿಕೆಯಿಂದ ದೂರವಾಗಬಾರದೆಂದು ಬಯಸಿ ತನ್ನ ಮಗಳಾದ ಸುವರ್ಚಲೆಯನ್ನು ಮದುವೆ ಮಾಡಿಕೊಟ್ಟು ಅವನಿಗೆ ಪ್ರಜಾಪತ್ಯ ಬ್ರಹ್ಮಚಾರಿ ಎಂಬ ವರವನ್ನು ಕರುಣಿಸುತ್ತಾನೆ. ಈ ವರದ ಪ್ರಕಾರ ಆಂಜನೇಯನು ಮದುವೆಯಾದ ನಂತರವೂ ತನ್ನ ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳುತ್ತಾನೆ. ಆಂಜನೇಯನನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡ ಕುರುಹಿಗಾಗಿ ಅವರಿಬ್ಬರಿಗೂ ಒಂಟೆಯೊಂದನ್ನು ಬಹುಮಾನವಾಗಿ ಕೊಟ್ಟ ಕಾರಣದಿಂದಾಗಿ ಇಂದಿಗೂ ಸಹಾ ಅನೇಕ ದೇವಾಲಯಗಳಲ್ಲಿ ಆಂಜನೇಯನ ಪತ್ನಿ ಸಮೇತವಿರುವ ವಿಗ್ರಹಗಳ ಮುಂದೆ ಒಂಟೆಯ ಪ್ರತಿಮೆ ಇರುತ್ತದೆ ಎಂಬ ಪ್ರತೀತಿ ಇದೆ. ನಿಜವಾಗಿಯೂ ಸುವರ್ಚಲ ದೇವಿ ಎಂಬುವರು ಹೆಣ್ಣಾಗಿರದೆ ಅದೊಂದು ದೈವಿಕ ಶಕ್ತಿಯಾಗಿದ್ದು, ಸೂರ್ಯ ದೇವರ ಅನುಗ್ರಹದಿಂದ, ಹನುಮಂತನ ಜ್ಞಾನಾರ್ಜನೆಗಾಗಿ ಮತ್ತು ಧಾರ್ಮಿಕ ಪೂಜೆಯ ಉದ್ದೇಶಕ್ಕಾಗಿ ಹನುಮನೊಂದಿಗೆ ಅವಳನ್ನು ವಿವಾಹ ಮಾಡಿಕೊಡಲಾಗಿದೆ. ಸಾಮಾನ್ಯವಾಗಿ ಎಲ್ಲಾ ದೇವರುಗಳಿಗೂ ಶಕ್ತಿ (ಹೆಂಡತಿ), ವಾಹಕ (ವಾಹನಾ) ಮತ್ತು ಆಯುಧ (ಶಸ್ತ್ರಾಸ್ತ್ರ)ಗಳು ಇರಬೇಕೆಂಬ ನಿಯಮವಿರುವುದರಿಂದ ಹನುಮಂತನಿಗೆ ಸುವರ್ಚಲಾ ದೇವಿ ಹೆಂಡತಿ, ಒಂಟೆ ವಾಹನವಾಗಿ ಮತ್ತು ಗದೆ ಆಯುಧವಾಗಿದೆ ಎನ್ನುತ್ತಾರೆ ತಿಳಿದವರು.

pampaಇನ್ನು ವೈಜ್ಞಾನಿಕವಾಗಿರುವ ಮತ್ತೊಂದು ದೃಷ್ಟಾಂತದ ಪ್ರಕಾರ,  ಎಲ್ಲಾ ವಾನರರು ಪಂಪಾ ಸರೋವರದ ತಟದಲ್ಲಿದ್ದ ಕಿಷ್ಕಿಂದೆಯಲ್ಲಿ ವಾಸಿಸುತ್ತಿದ್ದರು. ಪಂಪಾ ಸರೋವರದ ತಟ ಬಹಳಷ್ಟು ಮರಳುಗಳಿಂದ ತುಂಬಿರುವ ಕಾರಣ ವಾನರರಿಗೆ ನಡೆಯಲು ಬಹಳ ಕಷ್ಟವಾಗಿತ್ತು , ನೀಳ ಕಾಲ್ಗಳ ಒಂಟೆಗಳು ಮರಳುಗಾಡಿನಲ್ಲಿ ಸರಾಗವಾಗಿ ನಡೆಯಲು ಸಾಧ್ಯವಿದ್ದ ಕಾರಣ ಈ ಮಾರ್ಗದಲ್ಲಿ ಒಂಟೆಗಳನ್ನು ಪ್ರಯಾಣಿಸುವ ಮಾಧ್ಯಮವಾಗಿ ಬಳಸುತ್ತಿದ್ದರು. ಹನುಮಂತನೂ ಸಹಾ ಕಿಷ್ಕಿಂದೆಯಲ್ಲಿಯೇ ವಾಸಿಸುತ್ತಿದ್ದ ಕಾರಣ ಆ ಭೂಭಾಗದಲ್ಲಿ ಸುಲಭವಾಗಿ ಓಡಾಡುವ ಸಲುವಾಗಿ ಒಂಟೆಯನ್ನು ತನ್ನ ವಾಹನವಾಗಿ ಬಳಸುತ್ತಿದ್ದನು ಎಂಬ ಉದಾಹರಣೆಯು   ವಾಸ್ತವಕ್ಕೆ ಸ್ವಲ್ಪ ಹತ್ತಿರವಾದಂತಿದೆ.

hanuman1ಇನ್ನೊಂದು ಕತೆಯ ಪ್ರಕಾರ, ಹನುಮಂತನ ಪರಮ ಭಕ್ತರೊಬ್ಬರು, ಹನುಮಂತನ ದರ್ಶನಕ್ಕಾಗಿ ದೀರ್ಘಕಾಲ ಪ್ರಾರ್ಥಿಸುತ್ತಿದ್ದರು. ತನ್ನ ಭಕ್ತರ ಅಭೀಷ್ಟೆಯನ್ನು ಈಡೇರಿಸುವ ಸಲುವಾಗಿ ಹನುಮಂತನು ಅವರಿಗೆ ತನ್ನ ದರ್ಶನದ ಪ್ರಾಪ್ತಿಯನ್ನು ಕರುಣಿಸಿ ಆಶೀರ್ವದಿಸಿದನು. ಹೀಗೆ ಬಂದು ಹಾಗೆ ಹೋದ ಹನುಮಂತನ ದರ್ಶನದಿಂದ ತೃಪ್ತರಾಗದ ಆ ಭಕ್ತರು, ಮತ್ತೊಮ್ಮೆ ಹನುಮಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸಿ, ಅಯ್ಯಾ ಭಗವಂತ, ನೀನು ವಾಯು ವೇಗ, ಮನೋ ವೇಗದ ಸ್ವಭಾವ ಹೊಂದಿರುವ ಕಾರಣ ನೀನು ಕ್ಷಣಾರ್ಧದಲ್ಲಿ ಬಂದು ನಿನ್ನ ದರ್ಶನ ಕರುಣಿಸಿದೆ. ಹಲವಾರು ಸಮಯದಿಂದ ನಿನ್ನ ದರ್ಶನಕ್ಕಾಗಿ ಕಾದಿದ್ದ ನಾನು, ನನ್ನ ಕಣ್ಣುಗಳನ್ನು ತೆರೆಯುವ ಮೊದಲೇ ನೀನು ಮಾಯವಾಗಿ ಹೋದೆ. ಹಾಗಾಗಿ ನಿಧಾನವಾಗಿ ಚಲಿಸುವ ಒಂಟೆಯ ಮೇಲೆ ಬಂದು ನಿನ್ನ ದರ್ಶನ ಕರುಣಿಸಿದರೆ, ಆನಂದದಿಂದ ನಿನ್ನನ್ನು ಕಣ್ತುಂಬಿಸಿಕೊಂಡು ಸಂತೋಷ ಪಡುತ್ತೇನೆ ಎಂದು ಕೋರಿಕೊಂಡರಂತೆ. ಭಕ್ತನ ಭಕ್ತಿಯಿಂದ ಬಂಧಿಸಲ್ಪಟ್ಟ ಹನುಮಂತ ತನ್ನ ಭಕ್ತನ ಆಶೆಯಂತೆಯೇ ಉಷ್ಟ್ರಾರೂಢನಾಗಿ ಒಂಟೆಯ ಮೇಲೆ ನಿಧಾನವಾಗಿ ಬಂದು ತನ್ನ ಭಕ್ತನ ಮನಸ್ಸಿಗೆ ತೃಪ್ತಿಯಾಗುವಷ್ಟು ಹೊತ್ತು ದರ್ಶನವನ್ನು ನೀಡಿ ಸಂತೃಷ್ಟಗೊಳಿಸಿದನಂತೆ.

ಲೇಖನ ಓದಿದ ಓದುಗರಾದ ಶ್ರೀ ‌ಗಣಪತಿ ಶಾಸ್ತ್ರಿಗಳು, ಮತ್ತೊಂದು ದೃಷ್ಟಾಂತವನ್ನು ವಿವರಿಸಿದ್ದಾರೆ.  ಅವರ ಪ್ರಕಾರ, ಹನುಮನು ಹುಟ್ಟಿ ಮಗುವಿದ್ದಾಗಲೇ ಬಾನಿನಲ್ಲಿ ಸೂರ್ಯನ ಕಂಡು ಹಣ್ಣೆಂದು ಗ್ರಹಿಸಿ ಸೂರ್ಯನನ್ನು ಹಿಡಿಯಲು ಮುಂದಾಗುತ್ತಾನೆ. ಅದನ್ನು ಕಂಡ ಪ್ರಜಾಪತಿ ಇಂದ್ರನು ಸೂರ್ಯನಿಲ್ಲದೆ ಇದ್ದರೆ ಮುಂದೆ‌ ಕಷ್ಟವೆಂದು ಗ್ರಹಿಸಿ ಬಾಲ ಹನುಮನಿಗೆ ತನ್ನ ವಜ್ರಾಯುಧದಲ್ಲಿ ಹೊಡೆಯುತ್ತಾನೆ. ಇಂದ್ರನು ಹೊಡೆದ ಘಾತಕ್ಕೆ ಹನುಮ ಭೂಮಿ ಮೇಲೆ ಬೀಳುತ್ತಾನೆ ಅದನ್ನು ಕಂಡ ಆತನ ತಂದೆ ವಾಯುದೇವ, ತನ್ನ ಮಗನನ್ನು ರಕ್ಷಣೆ ಮಾಡಿ ಇಂದ್ರನ ಮೇಲೆ ಕೋಪಗೊಂಡು, ತನ್ನ ಮಗನ ಸಹಿತ ಗುಹಾಂತರ್ಗಾಮಿಯಾಗುತ್ತಾನೆ. ಉಸಿರಾಡಲು ವಾಯುವೇ ಇಲ್ಲದೇ ಇಡೀ ಲೋಕವೆ ಅಲ್ಲೋಲ ಕಲ್ಲೋಲವಾಗಿ ಅನೇಕರು  ಸಾಯ ತೊಡಗುತ್ತಾರೆ. ಇದನ್ನು ಕಂಡ ತ್ರಿಮೂರ್ತಿಗಳು ಮತ್ತು  ದೇವಾನು ದೇವತೆಗಳು ವಾಯುದೇವ ಇರುವ ಗುಹೆಯ ಹತ್ತಿರ ಬಂದು ಪ್ರಾರ್ಥನೆ ಮಾಡುತ್ತಾರೆ. ಆಗ ಮಗನೊಂದಿಗೆ ಬಂದ ವಾಯುದೇವ ತನ್ನ‌ ಮಗನಿಗಾದ ಕಷ್ಟವನ್ನು ಹೇಳುತ್ತಾರೆ‌. ಅವನ ಎಲ್ಲಾ ಕಷ್ಟಗಳು ನಿವಾರಣೆಯಾಗಲಿ ಎಂದು ಇಂದ್ರನು ಕ್ಷಮೆಯನ್ನೂ ಕೇಳಿದ್ದಲ್ಲದೇ ಬಾಲ ಹನುಮನಿಗೆ ಆಗಿದ್ದ  ಆಘಾತವು ಕ್ಷಣಾರ್ಧದಲ್ಲಿ ಶಮನವಾಗುತ್ತದೆ. ಇದರಿಂದ ಸಂತೃಪ್ತಿ ಹೊಂದಿದ ಸೂರ್ಯದೇವ ಅವನಿಗೆ ತನ್ನ ಮಗಳನ್ನೇ ಕೊಡುವೆ. ಅವನು ಅವಳ ಲಾಲನೆ ಮಾಡಿಕೊಂಡಿರಲಿ ಎಂದು ಸೂರ್ಯ ದೇವನ ಅನುಗ್ರಹವಾಗುತ್ತದೆ.  ಹಾಗೆ ಅವಳು ಮಾತೃಸ್ವರೂಪದಲ್ಲಿ ಹನುಮನ ರಕ್ಷಣೆ ಮಾಡುತ್ತಾಳೆ ಅಂದು ಹನುಮಂತ ಗೋಕರ್ಣದ ಸಮುದ್ರ ತೀರದಲ್ಲಿ‌ ಬಿದ್ದ ಕಾರಣ ಅವನಿಗೆ ನಡೆಯಲು ಕಷ್ಟವಾದ ಕಾರಣ ಒಂಟೆಯ ವಾಹನವನ್ನು ಅವಳು ಕರುಣಿಸುತ್ತಾಳೆ ಮುಂದೆ ಅದು ಹನುಮಗಿರಿಯೆಂದು ಪ್ರಸಿದ್ದವಾಗುತ್ತದೆ ಅವನ ಜನ್ಮವೂ ಅಲ್ಲೇ ಆದ ಕಾರಣ ಈ ಗಿರಿದಾಮ ಇಂದು ಪ್ರಸಿದ್ದ ಕ್ಷೇತ್ರವಾಗ ತೊಡಗಿದೆ ಇದು ನಿಜ ಕತೆಯಾಗಿರ ಬೇಕು ಎಂದಿದ್ದಾರೆ.

ಯಧ್ಭಾವಂ ತದ್ಭವತಿ ಎನ್ನುವಂತೆ ಅವರವರ ಭಾವಕ್ಕೆ ಅವರವರ ಭಕುತಿ. ಒಟ್ಟಿನಲ್ಲಿ ದೇವನೊಬ್ಬ ನಾಮ ಹಲವು ಎನ್ನುವಂತೆ, ಹನುಮಂತನ ವಾಹನಕ್ಕೂ ಹಲವಾರು ಕಥೆಗಳು. ಎಷ್ಟು ಸುಂದರ ಮತ್ತು ಶ್ರೀಮಂತವಾಗಿದೆಯಲ್ಲವೇ ನಮ್ಮ ಸನಾತನ ಧರ್ಮ ಮತ್ತು ಪುರಾಣಗಳು.

ಏನಂತೀರೀ?
ನಿಮ್ಮವನೇ ಉಮಾಸುತ

ಆಂಜನೇಯನೇಕೆ ಉಷ್ಟ್ರಾರೂಢ ಎಂಬ ಜಿಜ್ಞಾಸೆಯನ್ನು ನನ್ನ ಮುಂದಿಟ್ಟು ನನ್ನ ಚಿಂತನೆಗಳನ್ನು ಗರಿಕೆದರುವಂತೆ ಮಾಡಿದ ಆತ್ಮೀಯರಾದ ಶ್ರೀ ಜಯದೇವ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

2 thoughts on “ಉಷ್ಟ್ರಾರೂಢಾ ಹನುಮಂತ

  1. ಹನುಮಂತನ ವಾಹನ ಒಂಟೆ ಎಂದು ಬಹಳ ಜನರಿಗೆ ತಿಳಿದಿರುವುದಿಲ್ಲ ಇದನ್ನು ತಮ್ಮ ಅತ್ತ್ಯ್ತಮ ಲೇಖನ ದಿಂದ ವಿವರಿಸಿರುವುದಕ್ಕೆ ತಮಗೆ ಧನ್ಯವಾದಗಳು

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s