ತದಿಗೆ/ಸೌಭಾಗ್ಯ ಗೌರಿ ವ್ರತ

t3ಸ್ವರ್ಣಗೌರಿ ಗೌರಿ ವ್ರತ ಗೊತ್ತು, ಮಂಗಳ ಗೌರಿ ವ್ರತ ಪೂಜೆ ಗೊತ್ತು. ಅದ್ರೇ ಇದೇನಿದು ತದಿಗೆ ಗೌರಿ ವ್ರತ ಅಥವಾ ಸೌಭಾಗ್ಯ ಗೌರಿವ್ರತ ಅಂತ ಯೋಚನೆ ಮಾಡುತ್ತಿದ್ದೀರಾ? ಚೈತ್ರ ಮಾಸದ ಮೊದಲ ದಿನ ಅಂದರೆ ಪಾಡ್ಯದಂದು ಮೊದಲ ಹಬ್ಬವಾದ ಯುಗಾದಿಯನ್ನು ಆಚರಿಸುತ್ತೆವೆ. ಇನ್ನು ಎರಡನೇ ದಿನ ಬಿದಿಗೆ ವರ್ಷತೊಡಕನ್ನು ಆಚರಿಸುತ್ತೇವೆ ಮತ್ತು ಈ ದಿನ ಚಂದ್ರನ ನೋಡಿದರೆ ಶುಭ ಎಂದು ಪರಿಗಣಿಸಲಾಗುತ್ತದೆ. ಯುಗಾದಿಯಾದ ಮೂರನೇ ದಿನ ತೃತೀಯ ಅಥವಾ ತದಿಗೆಯಂದು ಕೆಲವೆಡೆ ಗೌರಿಯ ವ್ರತವನ್ನು ಮಾಡುವ ಪದ್ದತಿ ಇದ್ದು ಇದನ್ನು ಸೌಭಾಗ್ಯ ಗೌರಿವ್ರತವೆಂದೂ ಕರೆಯಲಾಗುತ್ತದೆ.

ಈ ಸೌಭಾಗ್ಯ ಗೌರಿ ವ್ರತದ ವಿಧಿವಿಧಾನಗಳು ವಿವಿಧ ಭಾಗಗಳಲ್ಲಿ ಆಲ್ಲಿಯ ಸಂಪ್ರದಾಯಗಳ ಅನುಸಾರವಾಗಿ ಆಚರಿಸಲ್ಪಡುವುದಾದರೂ ಬಹುತೇಕ ಪೂಜಾವಿಧಿಗಳು ಈ ಕೆಳಗಿನಂತಿದೆ.

  • ಕೆಲವು ಕಡೆ ಚೈತ್ರ ಗೌರಿ ವ್ರತ ಎಂದೂ ಕರೆಯಲ್ಪಡುವ ಈ ವತ್ರವನ್ನಾಚರಿಸುವ ಮಹಿಳೆಯರು ಹಿಂದಿನ ಸಂಜೆ ಉಪವಾಸ ಇಲ್ಲವೇ ಫಲಾಹಾರವನ್ನು ಸೇವಿಸುವ ಮೂಲಕ ದೇವಿಯ ಪೂಜೆಗೆ ಸನ್ನದ್ಧರಾಗುತ್ತಾರೆ.
  • ತದಿಗೆಯ ದಿನದಂದು ಬೆಳಿಗ್ಗೆ ವಿಧ್ಯುಕ್ತವಾಗಿ ಅಭ್ಯಂಜನ ಮಾಡಿ ಪೂಜೆ ಮಾಡುವ ಸ್ಥಳವನ್ನು ಶುಭ್ರಗೊಳಿಸಿ, ಅರಿಶಿನ ಕುಂಕುಮದ ಪೂಜೆ ಮಾಡಿ ಅದರ ಮೇಲೆ ಬೆಳ್ಳೆ ತಟ್ಟೆಯಲ್ಲಿ ಅಕ್ಕಿಯನ್ನು ಇಡುತ್ತಾರೆ.
  • ಅದರ ಮೇಲೆ ಪಂಚಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಅದರ ಮೇಲೆ ವಿಳ್ಳೇದೆಲೆ ಜೋಡಿಸಿ ಅದರ ಮೇಲೆ ಅರಿಶಿನ ಮತ್ತು ಕುಂಕುಮ ಹಚ್ಚಿದ ತೆಂಗಿನ ಕಾಯಿಯನ್ನು ಕಳಸ ರೂಪದಲ್ಲಿ ಇಡುತ್ತಾರೆ.
  • ಈ ಕಳಸದ ಮುಂದೆ ಅರಿಶಿನದಲ್ಲಿ ಗೌರಮ್ಮನನ್ನು ಮಾಡಿಕೊಂಡು ಪ್ರತಿಷ್ಠಾಪಿಸಿ ಅದರ ಪಕ್ಕದಲ್ಲಿ ಬಳೆ, ಬಿಚ್ಚೋಲೆ, ಕನ್ನಡಿಯನ್ನು ಇಡುತ್ತಾರೆ.
  • ಗೌರಿ ಪೂಜೆಯನ್ನು ಪ್ರಾರಂಭಿಸುವ ಮೊದಲು ಯಥಾಪ್ರಕಾರ ವಿಘ್ನವಿನಾಶಕ ವಿಘ್ನೇಶನಿಗೆ ಪೂಜೆ ಮಾಡಿ ನಿರ್ವಿಘ್ನವಾಗಿ ಪೂಜೆಯನ್ನು ನಡೆಸಿಕೊಡುವಂತೆ ಪೂಜಿಸಲಾಗುತ್ತದೆ.
  • ಪ್ರತಿಷ್ಠಾಪಿಸಿದ ಗೌರಿಗೆ ಬಗೆ ಬಗೆಯ ಪುಷ್ಪ ಮತ್ತು ಪತ್ರೆಗಳಿಂದ ತರ ತರಹದ ಗೆಜ್ಜೆವಸ್ತ್ರಗಳಿಂದ ಅಲಂಕರಿಸಿ, ಗೌರಿ ಅಷ್ಟೋತ್ತರವನ್ನು ಜಪಿಸಿ, ಶೋಡಶೋಪಚಾರ ಪೂಜೆ ಮಾಡಲಾಗುತ್ತದೆ.
  • ಈ ಪೂಜೆಯಂದು ಸುಮಧುರಯುಕ್ತವಾದ ಧವನ, ಮರುಗ ಮತ್ತು ಮಾಚಿಪತ್ರೆಯನ್ನು ಬಳಸುವುದು ವಿಶೇಷವಾಗಿದೆ.
    ಯಥಾಶಕ್ತಿ ಫಲ ಪುಷ್ಪ ಮತ್ತು ವಿಶೇಷ ಭಕ್ಷಗಳನ್ನು ತಯಾರಿಸಿ ಅದರಲ್ಲೂ ಸಜ್ಜಿಗೆ, ಪಾಯಸ ಇಲ್ಲವೇ ಹಯಗ್ರೀವವನ್ನು ದೇವಿಗೆ ನೈವೇದ್ಯ ಮಾಡುತ್ತಾರೆ
  • ಇದಾದ ನಂತರ ನಾನಾ ದೇವೀಸ್ತುತಿಗಳನ್ನು ಭಕ್ತಿಯಿಂದ ಹಾಡುತ್ತಾರೆ.
  • ಪೂಜೆ ಎಲ್ಲವೂ ಮುಗಿದ ನಂತರ ದೇವಿಗೆ ಮಹಾ ಮಂಗಳಾರತಿ ಮತ್ತು ಆರತಿ ಎತ್ತುವ ಮೂಲಕ ಪೂಜೆ ಸಂಪನ್ನವಾಗುತ್ತದೆ.
  • ಪೂಜೆ ಮುಗಿದ ನಂತರ ಮುತ್ತೈದೆಯರನ್ನು ಕರೆದು ಅರಿಶಿನ ಕುಂಕುಮವನ್ನು ಕೊಟ್ಟು ಅವರಿಗೆ ಕೋಸಂಬರಿ ಪಾನಕವನ್ನು ನೀಡಿ ತಾಂಬೂಲವನ್ನು ನೀಡಿ ಸತ್ಕರಿಸಲಾಗುತ್ತದೆ.

ಈ ಪೂಜೆ ಮಾಡುವವರು ಅದರಲ್ಲೂ ಸಾಧಾರಣವಾಗಿ ಮಕ್ಕಳನ್ನು ಬಯಸುವವವರು ಈ ದಿನ ಶಿವ ಪಾರ್ವತಿಯರ ಪ್ರತಿಮೆಯನ್ನು ಸಣ್ಣದಾದ ಉಯ್ಯಾಲೆಯಲ್ಲಿ ಇಟ್ಟು ಡೋಲೊತ್ಸವವನ್ನು ಮಾಡುವ ರೂಢಿಯೂ ಇದೆ.

t1ಇದಾದ ನಂತರ ಎಲ್ಲಾ ಹಬ್ಬಗಳಲ್ಲಿಯೂ ಮಾಡುವಂತೆೆ ಎರಡು ಪಲ್ಯ, ಎರಡು ಕೋಸಂಬರಿ, ಗೊಜ್ಜು, ಅನ್ನಾ ಸಾರು, ಹುಳಿ ಮತ್ತು ನೈವೇದ್ಯಕ್ಕೆ ಮಾಡಿದ್ದ ಭಕ್ಷಗಳನ್ನು ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಮೂಲಕ ತದಿಗೆ ಗೌರಿ ವ್ರತ/ಸೌಭಾಗ್ಯ ಗೌರೀ ವ್ರತ/ಚೈತ್ರ ಗೌರಿ ವ್ರತ ಸಂಪನ್ನವಾಗುತ್ತದೆ.

t2ಸಂಜೆ ಪುನಃ ಕೈಕಾಲು ತೊಳೆದು ಕೊಂಡು ಶುಚಿರ್ಭೂತರಾಗಿ ದೇವಿಗೆ ಮತ್ತೊಮ್ಮೆ ಪೂಜೆ ಮಾಡಿದ ನಂತರ ಅರಿಶಿನದ ಗೌರಮ್ಮನನ್ನು ಕದಲಿಸಿ ನೀರಿನಲ್ಲಿ ವಿಸರ್ಜಿಸುತ್ತಾರೆ. ಇನ್ನೂ ಕೆಲವರ ಮನೆಗಳಲ್ಲಿ ಈ ಅರಿಶಿನ ಗೌರಮ್ಮನನ್ನು ಅಕ್ಷಯ ತದಿಗೆಯವರೆಗೂ ದೇವರ ಮೆನೆಯಲ್ಲಿಟ್ಟು ಪೂಜಿಸಿದ ನಂತರ ಸಕಲ ಮರ್ಯಾದೆಯೊಂದಿಗೆ ನೀರಿನಲ್ಲಿ ವಿಸರ್ಜಿಸುತ್ತಾರೆ.

ಈಗಾಗಲೇ ತಿಳಿಸಿದಂತೆ ಆಚರಣೆಗಳು ಮತ್ತು ಪೂಜಾವಿಧಿವಿಧಾನಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾದರೂ ಎಲ್ಲರೂ ಅಭೀಷ್ಟೆಯೂ ದೇವಿಯನ್ನು ಒಲಿಸಿಕೊಳ್ಳುವುದೇ ಆಗಿರುತ್ತದೆ. ಹಾಗಾಗಿ ಆಡಂಬರದ ತೋರಿಕೆಗಿಂತ, ಆನಂದದಿಂದ ಭಕ್ತಿ ಭಾವದಿಂದ ದೇವಿಯನ್ನು ಪೂಜೆಸುವ ಮೂಲಕ ಮತ್ತು ಅವಳ ಕೃಪೆಗೆ ಪಾತ್ರರಾಗೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ತದಿಗೆ ಪೂಜೆಯ ಫೋಟೋಗಳನ್ನು ಕಳುಹಿಸಿದ ಆತ್ಮೀಯರಾದ ಶ್ರೀಮತಿ ಬೃಂದ ಅವರಿಗೆ ಧನ್ಯವಾದಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s