ಹಾಸ್ಯ ಮನುಷ್ಯರ ಜೀವನದ ಅವಿಭಾಜ್ಯ ಅಂಗ. ಜೀವನದ ಏಕಾನತೆಯಿಂದಾಗಲೀ ದುಃಖದಿಂದಾಗಲೀ ಹೊರಬರಲು ಜನರಿಗೆ ಸಹಾಯ ಮಾಡುವುದೇ, ತಿಳಿಹಾಸ್ಯ ಹಾಗಾಗಿಯೇ ಸರ್ಕಸ್, ನಾಟಕ, ಚಲನಚಿತ್ರಗಳಲ್ಲಿ ಮನೋರಂಜನೆಯ ಭಾಗವಾಗಿ ಒಂದಷ್ಟು ಹಾಸ್ಯ ದೃಶ್ಯಗಳನ್ನು ಅಳವಡಿಸಿಕೊಂಡು ಅವುಗಳನ್ನು ನೋಡುತ್ತಾ ಅನುಭವಿಸುತ್ತಾ ಕೆಲ ಕಾಲ ತಮ್ಮ ನೋವುಗಳನ್ನು ಮರೆಯುವಂತೆ ಮಾಡುವುದರಲ್ಲಿ ಸಫಲತೆಯನ್ನು ಕಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು, ದಿನೇಶ್, ಉಮೇಶ್, ಇತ್ತೀಚಿನ ಜಗ್ಗೇಶ್, ಚಿಕ್ಕಣ್ಣ, ಕುರಿಪ್ರತಾಪ್ ರಂತಹ ದಂಡೇ ಇದೆ. ಅದೇ ರೀತಿ ಎಂಭತ್ತರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಗೌಂಡಮಣಿ ಮತ್ತು ಸೆಂದಿಲ್ ಅವರಿಬ್ಬರ ಜೋಡಿ ಹಾಸ್ಯಪಾತ್ರಗಳಿಗೆ ಹೇಳಿಮಾಡಿಸಿದ ಜೋಡಿಯಾಗಿತ್ತು. ಚಿತ್ರಕತೆಯ ಜೊತೆ ಜೊತೆಯಲ್ಲಿಯೇ ಇವರಿಬ್ಬರ ಹಾಸ್ಯ ತುಣುಕುಗಳು ಜನರನ್ನು ರಂಜಿಸುತ್ತಿದ್ದವು. ಅದೆಷ್ಟೋ ಸಂದರ್ಭದಲ್ಲಿ ನಾಯಕ ನಾಯಕಿಯರಿಂಗಿಂತಲೂ ಮೊದಲು ಈ ಹಾಸ್ಯನಟರ ಕಾಲ್ ಶೀಟ್ ತೆಗೆದುಕೊಳ್ಳುವಂತಹ ಸಂದರ್ಭವೂ ಇತ್ತು ನೋಡ ನೋಡಿತ್ತಿದ್ದಂತೆಯೇ ಇವರಿಬ್ಬರ ಹಾಸ್ಯಗಳು ಹಾಸ್ಯಾಸ್ಪದ ಎನಿಸುವಂತಾಗುತ್ತಿದ್ದ ಕಾಲದಲ್ಲಿಯೇ ತಮಿಳು ಚಿತ್ರರಂಗಕ್ಕೆ ಧುತ್ತೆಂದು ಧೂಮಕೇತುವಿನಂತೆ ಧುಮಿಕಿದವರೇ ಹಾಸ್ಯ ನಟ ವಿವೇಕ್.
ಆರಂಭದಲ್ಲಿ ಹೆಗಲಿಗೆ ಹಡಪವೊಂದನ್ನು ನೇತು ಹಾಕಿಕೊಂಡು ಮೆಡಿಮಿಕ್ಸ್ ಸೋಪನ್ನು ಮಾರುವ ಅಮಾಯಕ ಸೇಲ್ಸ್ ಮ್ಯಾನ್ ನಂತೆ ಕಾಣಿಸಿಕೊಂಡು ನಂತರ ವೀಗಾರ್ಡ್ ಸೇರಿದಂತೆ ಅನೇಕ ಉತ್ಪನ್ನಗಳ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಯುವ ಹಾಸ್ಯನಟ ವಿವೇಕ್ ನೋಡ ನೋಡುತ್ತಿದ್ದಂತೆಯೇ ತಮಿಳು ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬಂದರು. ಖ್ಯಾತ ನಟ ರಜನಿಕಾಂತ್ ಅವರ ಹಾವಭಾವಗಳನ್ನು ನಕಲು ಮಾಡುತ್ತಲೇ ಜನರ ಹೃದಯವನ್ನು ವಿವೇಕ್ ಗೆದ್ದರು ಎಂದರೂ ತಪ್ಪಾಗಲಾರದು. ಉಳಿದೆಲ್ಲ ನಟರುಗಳು ನಿರ್ದೇಶಕರು ಮತ್ತು ಸಂಭಾಷಣಾಕಾರರು ಹೇಳಿಕೊಟ್ಟಂತೆ ನಟಿಸುತ್ತಿದ್ದರೆ, ಬುದ್ಧಿವಂತ ಮತ್ತು ವಿವೇಕವಂತ ವಿವೇಕ್ ಅದಕ್ಕಿಂತಲೂ ಒಂದು ಹೆಜ್ಜೆ ಮುಂದುವರೆದು ತಮ್ಮ ಪಾತ್ರಗಳಿಗೆ ತಾವೇ ಸಂಭಾಷಣೆಯನ್ನು ಬರೆದು ಅಭಿನಯಿಸುವಷ್ಟರ ಮಟ್ಟಿಗೆ ಪ್ರಭುದ್ಧರಾಗಿ ಬೆಳೆದರು. ನಿರ್ದೇಶಕ ಹೇಳುತ್ತಿದ್ದ ಸನ್ನಿವೇಶಗಳಿಗೆ ತಕ್ಕಂತೆ ತಮ್ಮದೇ ಆದ ಪಂಚಿಂಗ್ ಸಂಭಾಷಣೆಗಳ ಮೂಲಕ ಕೆಲವೇ ಕೆಲವೇ ದಿನಗಳಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ದಳಪತಿ ವಿಜಯ್, ಅಜಿತ್ ಸೇರಿದಂತೆ ಎಲ್ಲಾ ಪ್ರಮುಖ ನಟರೊಂದಿಗೆ ತೆರೆಯನ್ನು ಹಂಚಿಕೊಳ್ಳುವಷ್ಟರ ಮಟ್ಟಿಗೆ ಬೆಳೆದದ್ದಲ್ಲದೇ, ಸಿನಿಮಾ ಪೋಸ್ಟರ್ ಗಳಲ್ಲಿ ಸಿನಿಮಾದ ನಾಯಕ ನಾಯಕಿಯರ ಸರಿಸಮಾನವಾಗಿ ಖಡ್ಡಾಯವಾಗಿ ವಿವೇಕ್ ಅವರ ಚಿತ್ರವಿರುತ್ತಿತ್ತು ಎಂದರೆ ಅವರ ಸಾಧನೆಗೆ ಎಷ್ಟರ ಮಟ್ಟಿಗಿತ್ತು ಎಂಬುದರ ಅರಿವಾಗುತ್ತದೆ.
ತೊಂಬತ್ತರ ದಶಕದಲ್ಲಿ ಈಗಿನಷ್ಟು ಕನ್ನಡ ಟಿವಿ ಛಾನಲ್ಗಳು ಇಲ್ಲದಿದ್ದ ಸಂದರ್ಭದಲ್ಲಿ ಸನ್ ಟಿವಿಯೇ ಮನಗೆಲ್ಲಾ ಪ್ರಮುಖ ಆಕರ್ಷಣೆಯಾಗಿರುತ್ತಿತ್ತು. ಅದರಲ್ಲೂ ಪ್ರತಿದಿನ ರಾತ್ರಿ ಹತ್ತರ ನಂತರ ಪ್ರಸಾರವಾಗುತ್ತಿದ್ದ ಹಾಸ್ಯ ಕಾರ್ಯಕ್ರಮದಲ್ಲಿ ವಿವೇಕ್ ಅವರ ಒಂದೆರಡು ಹಾಸ್ಯ ತುಣುಕುಗಳನ್ನು ನೋಡಿದರೇನೇ ಕಣ್ತುಂಬ ನಿದ್ದೆ ಬರುತ್ತಿತ್ತು ಎಂದರೂ ಅತಿಶಯೋಕ್ತಿಯೇನಲ್ಲ. ಅದರಲ್ಲೂ ಅವರ ಈ ಒಂದು ದೃಶ್ಯ ಮಾತ್ರ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ.
ಯಾವುದೋ ಸಣ್ಣ ತಪ್ಪಿಗಾಗಿ ಪೋಲೀಸರ ಕೈಗೆ ಸಿಕ್ಕಿ ಕೊಳ್ಳುವ ವಿವೇಕ್ ಅವರಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳುವ ಸಲುವಾಗಿ ನನಗೆ ಪೋಲೀಸ್ ಕಮಿಷಿನರ್ ಗೊತ್ತು, ಐಜಿ ಗೊತ್ತು ಎಂದು ಒಂದೇ ಸಮನೇ ಪೋಲಿಸರ ಮೇಲೆ ಒತ್ತಡ ಹಾಕುತ್ತಾರೆ. ಅಯ್ಯೋ ರಾಮ! ಇಷ್ಟೊಂದು ಜನರನ್ನು ಗೊತ್ತಿರುವ ಪ್ರಭಾವಿ ವ್ಯಕ್ತಿಯನ್ನು ನಾವು ಹಿಡಿದಿದ್ದೇವೆ. ಇದರಿಂದ ನಮಗೇ ತೊಂದೆರೆಯಾಗಬಹುದೇನೋ ಎಂದು ಪೋಲಿಸರು ಯೋಚಿಸಿ ಅವರನ್ನು ಬಿಟ್ಟು ಕಳುಹಿಸಿದಾಗಾ, ಅವರಿಂದ ಬಹಳ ದೂರ ಹೋದ ನಂತರ ವಿವೇಕ್ ನನಗೆ ಪೋಲೀಸ್ ಕಮಿಷಿನರ್ ಗೊತ್ತು, ಐಜಿ ಗೊತ್ತು ಆದರೆ ಅವರಿಗೆ ನಾನು ಗೊತ್ತಿಲ್ಲ! ಎಂದು ಹೇಳಿ ತನ್ನ ಸಿಗ್ನೇಚರ್ ಸ್ಟೈಲ್ ಆದ ಬಾಯಿಯಲ್ಲಿ ಬೆರಳನ್ನು ಮಡಿಚಿಟ್ಟುಕೊಂಡು ಟುಪ್ ಎಂದು ಶಬ್ಧ ಮಾಡುತ್ತಾ ಓಡಿ ಹೋಗುವ ದೃಶ್ಯವನ್ನು ಅದೆಷ್ಟು ಬಾರಿ ನೋಡಿದ್ದೇನೋ ಲೆಖ್ಖವಿಲ್ಲ.
ಆರಂಭದಲ್ಲಿ ನಾಯಕನ ಗೆಳೆಯ, ನಾಯಕಿಯ ಸಹೋದರ ಪಾತ್ರಗಳ ಮೂಲಕ ಹಾಸ್ಯವನ್ನು ಮಾಡುತ್ತಾ ಚಿತ್ರರಂಗದಲ್ಲಿ ತನ್ನ ಸ್ಥಾನಮಾನವನ್ನು ಗುರುತಿಸಿಕೊಂಡ ನಂತರ. ಅನ್ನಿಯನ್, ಶಿವಾಜಿಯಲ್ಲಿ ನಾಯಕರುಗಳಿಗೇ ಸಮಾನಾಂತರವಾಗಿ ನಾಯಕರಿಗಿಂತಲೂ ಒಂದು ಗುಲಗಂಚಿ ಹೆಚ್ಚಾಗಿರುವ ಪಾತ್ರಗಳನ್ನು ಮಾಡಿದ ನಂರರ ಇತ್ತೀಚಿನ ದಿನಗಳಲ್ಲಿ ವೆಳ್ಳೈ ಪೂಕ್ಕಳ್, ಬೃಂದಾವನಂ ಚಿತ್ರಗಳಲ್ಲಿ ಗಂಭೀರ ಪಾತ್ರಗಳಲ್ಲಿ ಅಭಿನಯಿಸುವುದರ ಮೂಲಕ ತನ್ನ ವಿಭಿನ್ನ ನಟನಾ ಶೈಲಿಯ ಮೂಲಕ ಜನರಿಗೆ ಹತ್ತಿರವಾಗಿದ್ದರು. ಮುಂದೆ ವಡಿವೇಲು ಮೈಲುಸ್ವಾಮಿ ಸಂತಾನಮ್, ಯೋಗಿ ಬಾಬು ಮುಂತಾದ ಹಾಸ್ಯನಟರುಗಳು ಹಾಸ್ಯಕ್ಕೆ ಜನರು ಮನಸೋಲುತ್ತಿದ್ದಂತೆಯೇ ಕೆಲ ಕಾಲ ನೇಪಥ್ಯಕ್ಕೆ ಸರಿದ ವಿವೇಕ್ ನಂತರ ಹಾಸ್ಯಪಾತ್ರಗಳಿಂದ ಹೊರಬಂದು ಗಂಭೀರ ಪಾತ್ರಗಳ ಮೂಲಕ ತಮ್ಮ ಅಸ್ತಿತ್ವವನ್ನು ಕಂಡುಕೊಂಡರು.
2016ರಲ್ಲಿ ಕೈಗೆ ಬಂದಿದ್ದ ಮಗನನ್ನು ಅಚಾನಕ್ಕಾಗಿ ಕಳಕೊಂಡ ನಂತರ ಮಾನಸಿಕವಾಗಿ ಬಹಳವಾಗಿಯೇ ಕುಗ್ಗಿಹೋದ ವಿವೇಕ್ ನಂತರದ ದಿನಗಳಲ್ಲಿ ಅಂತರ್ಮುಖಿಯಾಗಿದ್ದರು. ಪುತ್ರ ಶೋಕ ನಿರಂತರಂ ಎನ್ನುವಂತೆ ಅವರ ಮಗನ ಅಗಲಿಕೆ ಅವರನ್ನು ಬಹಳವಾಗಿಯೇ ಕಾಡುತ್ತಿದ ಪರಿಣಾಮ ಅದರಿಂದ ಹೊರಬರುವ ಸಲುವಾಗಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಮತ್ತು ಮರಗಳನ್ನು ಕಡಿದು ಪರಿಸರ ಹಾಳು ಮಾಡುತ್ತಿರುವುದನ್ನು ಸರಿಪಡಿಸುವ ಸಲುವಾಗಿ ಗ್ರೀನ್ ಕಲಾಂ ಪ್ರಾಜೆಕ್ಟ್ ಅಡಿಯಲ್ಲಿ ಸುಮಾರು ಒಂದು ಕೋಟಿ ಗಿಡಗಳ ನೆಟ್ಟು ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಲ್ಲದೇ ಅದರ ಅಂಗವಾಗಿ ಮೂರು ಲಕ್ಷಕ್ಕೂ ಹೆಚ್ಚು ಮರಗಳನ್ನು ಮೂರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ನೆಡುವ ಮೂಲಕ ಆ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದರು. ವಿವೇಕ್ ಅವರ ನಟನೆ ಮತ್ತು ಸಾಮಜಿಕ ಕಳಕಳಿಯನ್ನು ಗಮನಿದ ಭಾರತ ಸರ್ಕಾರವೂ ಸಹಾ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಬಹುತೇಕರಿಗೆ ತಿಳಿಯದಿದ್ದ ವಿಷಯವೇನೆಂದರೆ, ವಿವೇಕ್ ಅವರಿಗೆ ಸುಲಲಿತವಾಗಿ ಕನ್ನಡ ಅರ್ಥವಾಗುತ್ತಿತ್ತು. ಸಾಲು ಮರದ ತಿಮ್ಮಕ್ಕ ಅವರನ್ನು ತಮಿಳುನಾಡಿನಲ್ಲಿ ಸನ್ಮಾನಿಸುವ ಸಂದರ್ಭದಲ್ಲಿ ಆಕೆ ಕನ್ನಡದಲ್ಲಿ ಮಾತಾನಾಡಿದ್ದನ್ನು ಅಲ್ಲಿಯೇ ಇದ್ದ ಕನ್ನಡದ ನಟಿ ರಶ್ಮಿಕ ಮಂದಣ್ಣ ಅವರನ್ನು ಕನ್ನಡದವರೆಂದು ಅನುವಾದಿಸಲು ವೇದಿಕೆಗೆ ಕರೆದರು. ಆದರೆ ಆ ನಟಿ ಕನ್ನಡವನ್ನು ಪರಭಾಷಿಕರಿಗಿಂತ ಕೆಟ್ಟದಾಗಿ ಮಾತನಾಡಿ ಮುಜುಗರ ತಂದರು. ಆಗ ತಮಿಳಿಗ ನಟ ವಿವೇಕ್ ತಿಮ್ಮಕ್ಕನವರ ಸಾಧನೆ ಮತ್ತು ಆಕೆಗೆ ದೊರೆತ ಗೌರವ ಮತ್ತು ಪ್ರಶಸ್ತಿಗಳ ಬಗ್ಗೆ ಬೆಳಕು ಚೆಲ್ಲಿದ್ದಲ್ಲದೇ ಆಕೆಯ ಕನ್ನಡ ಭಾಷೆಯ ಭಾಷಣವನ್ನು ನಿರರ್ಗಳವಾಗಿ ತಮಿಳಿಗೆ ಭಾಷಾಂತರಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.
ಕೇವಲ ಕೆಲವೇ ವಾರಗಳ ಹಿಂದೆ, ಕೊರೋನ ಲಸಿಕೆ ಕುರಿತಂತೆ ಸರ್ಕಾರದ ಆರೋಗ್ಯ ಇಲಾಖೆಯ ಜಾಹೀರಾತಿನಲ್ಲಿ ರೂಪದರ್ಶಿಯಾಗಿ ನಟಿಸುವ ಮೂಲಕ ಸಮಾಜದಲ್ಲಿ ತಮ್ಮ ಸಾಮಾಜಿಕ ಬದ್ಧತೆ ಮತ್ತು ಕಳಕಳಿಯನ್ನು ಎತ್ತಿ ಹಿಡಿಯುವಂತಹ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ಒಳ್ಳೆಯವರು ಬಹಳ ದಿನಗಳ ಕಾಲ ನಮ್ಮೊಂದಿಗೆ ಇರಲಾರರು ಎನ್ನುವಂತೆ ಕೇವಲ ಒಂದು ವಾರಗಳ ಹಿಂದೆ ಕರೋನಾ ಲಸಿಕೆ ತೆಗೆದುಕೊಂಡು ಎರಡು ದಿನಗಳಾದ ನಂತರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದಾಗ ಅವರಿಗೆ ಹೃದಯ ಸ್ತಂಭನ ಉಂಟಾಗಿರುವುದು ತಿಳಿದು ಬಂದಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಿಂದಾಗಿ ವೈದ್ಯರುಗಳ ತಂಡ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದಲ್ಲದೇ, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆಯನ್ನು ಆರಂಭಿಸಿದ್ದರು.
ದುರಾದೃಷ್ಟವಾಶಾತ್ ವೈದ್ಯರುಗಳ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ದಿ. 17.04.2021 ರ ಬೆಳಗಿನ ಜಾವ ಹೃದಯಾಘಾತದಿಂದಾಗಿ ವಿವೇಕ್ ಅವರು ನಮ್ಮೆಲ್ಲರನ್ನೂ ಅಗಲುವ ಮೂಲಕ ಪ್ರಪಂಚಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ದುಃಖದ ಕಡಲಿಗೆ ದೂಡಿ ಹೋಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ತಮಿಳು ಚಿತ್ರರಂಗದಲ್ಲಿ ಜನ ಪ್ರಿಯ ನಟರಾಗಿ ಸರಿ ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಾ ಅತ್ಯಂತ ಬೇಡಿಕೆಯ ನಟನಾಗಿದ್ದ ವಿವೇಕ್ ಇನ್ನಿಲ್ಲ ಎಂದು ನಂಬುವುದಕ್ಕೆ ಅಸಾಧ್ಯವೆನಿಸಿದೆ. ಭೌತಿಕವಾಗಿ ವಿವೇಕ್ ಇನ್ನು ಮುಂದೆ ನಮ್ಮೊಂದಿಗೆ ಇರುವುದಿಲ್ಲವಾದರೂ ಅವರ ನಟನೆ ಮತ್ತು ಹಾಸ್ಯ ಭರಿತ ಸಂಭಾಷಣೆಗಳ ಮೂಲಕ ಆಚಂದ್ರಾರ್ಕವಾಗಿ ಅಜರಾಮರವಾಗಿರುತ್ತಾರೆ.
ಆರಂಭದ ದಿನಗಳಲ್ಲಿ ಯಾವುದೇ ಗಾಡ್ ಫಾದರ್ ಗಳು ಇಲ್ಲದೇ ಕೇವಲ ತನ್ನ ಪ್ರತಿಭೆಯ ಮೂಲಕ ಅತ್ಯಂತ ಕಷ್ಟ ಪಟ್ಟು ಈ ಹಂತಕ್ಕೆ ಏರಿದ್ದ ವಿವೇಕ್ ನಂತರದ ದಿನಗಳಲ್ಲಿ ತಮ್ಮ ವಿವೇಕಯುತ ಹಾಸ್ಯಭರಿತ ಸಂಭಾಷಣೆಗಳ ಮೂಲಕ ಉತ್ತಮ ಸಂದೇಶಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವುದರಲ್ಲಿ ಯಶಸ್ವಿಯಾಗಿದ್ದರು. ನಂತರ ದಿನಗಳಲ್ಲಿ ಅವರ ಬದುಕು ಮತ್ತು ವೃತ್ತಿ ಬದುಕು ಎರಡೂ ಸಹಾ ತೂಗು ಉಯ್ಯಾಲೆಯಂತ ಅತ್ತಿತ್ತ ತೂಗುವಂತಿದ್ದರೂ ಅದನ್ನು ಸರಿಪಡಿಸಿಕೊಂಡು ಮತ್ತೆ ಯಶಸ್ವಿಯಾಗುವತ್ತ ಸಾಗುತ್ತಿದ್ದರು. ನಾವೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಕೇವಲ 59 ವರ್ಷಗಳ ಸಾಯ ಬಾರದ ವಯಸ್ಸಿನಲ್ಲಿ ಜೀವನದ ಒತ್ತಡಗಳನ್ನು ತಾಳಲಾರದೇ ಅಸುನೀಗಿದ್ದು ನಿಜಕ್ಕೂ ದುಃಖಕರ. ಅವರು ಹಾಸ್ಯಕ್ಕಾಗಿ ಹೇಳಿದ್ದ ಸಾಲು, ಇನ್ನೀಕ್ಕಿ ಸತ್ತಾ ನಾಳೈಕ್ಕಿ ಪಾಲು. ಎನ್ನುವಂತೆ ನಮ್ಮೆಲ್ಲರನ್ನೂ ಅಗಲಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟವೇ ಸರಿ. ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ಕೊಡಲಿ ಮತ್ತು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಅವರ ಅಕಾಲಿಕ ಅಗಲಿಕೆಯ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಕೊಡಲಿ ಎಂದು ಕೇಳಿಕೊಳ್ಳೋಣ
ಏನಂತೀರೀ?
ನಿಮ್ಮವನೇ ಉಮಾಸುತ
ವಿವೇಕ್ ಅವರ ಅಕಾಲ ಮರಣಕ್ಕೆ ಖಂಡಿತ ಮನ ಮಿಡಿಯಿತು. ನಿಮಗೆ ಗೊತ್ತೇನು ಅವರಿಗೆ ಸುಲಲಿತವಾಗಿ ಕನ್ನಡ ಮಾತನಾಡಲು ಬರುತ್ತಿತ್ತು. ಸಾಲು ಮರದ ತಿಮ್ಮಕ್ಕ ಅವರನ್ನು ಸನ್ಮಾನಿಸುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಇತ್ತೀಚೆಗೆ ಉದಯಿಸಿದ ನಟಿ ರಶ್ಮಿಕ ಮಂದಣ್ಣ ಅವರನ್ನು ಕನ್ನಡದವರೆಂದು ಸಂಭಾಷಣೆ ಅನುವಾದಿಸಲು ವೇದಿಕೆಗೆ ಕರೆದರು. ಆದರೆ ಆ ನಟಿ ಕನ್ನಡವನ್ನು ಪರಭಾಷಿಕರಿಗಿಂತ ಕೆಟ್ಟದಾಗಿ ಮಾತನಾಡಿ ಮುಜುಗರ ತಂದರು. ಆಗ ತಮಿಳಿಗ ನಟ ವಿವೇಕ್ ಕನ್ನಡದಲ್ಲಿ ನುಡಿಯುತ್ತಾ ತಿಮ್ಮಕ್ಕನ ಸಾಧನೆ ಮತ್ತು ಆಕೆಗೆ ದೊರೆತ ಗೌರವ ಮತ್ತು ಪ್ರಶಸ್ತಿಗಳ ಬಗ್ಗೆಯೂ ಬೆಳಕು ಚೆಲ್ಲಿದರು.
LikeLiked by 1 person
ತುಂಬಾ ದುಃಖಕರ ವಾದ ಲೇಖನ. ದೇವರು ಒಳ್ಳೆಯವರನ್ನು ಬೇಗ ಕರೆಸಿ ಕೊಳ್ಳುತ್ತಾನೆ
LikeLiked by 1 person