ಕಡೇಗಾಲದಲ್ಲಿ ಹೊರುವುದಕ್ಕಾದರೂ ನಾಲ್ಕು ಜನರನ್ನಾದರೂ ಸಂಪಾದಿಸಿ

ಅರೇ ಇದೇನಿದು ಇಂತಹ ವಿಲಕ್ಷಣ ಮತ್ತು ಹೃದಯವಿದ್ರಾವಕ ಶೀರ್ಷಿಕೆ ಅಂದುಕೊಳ್ತಾ ಇದ್ದೀರಾ? ಖಂಡಿತವಾಗಿಯೂ ಇದು ವಿಲಕ್ಷಣವಾಗಿರದೇ ಇಂದಿನ ಜೀವನದ ಕಠು ಸತ್ಯವಾಗಿದೆ. ಇದೇ ವಾರದಲ್ಲಿ ನಡೆದ ಎರಡು ಕರುಣಾಜನಕ ಕತೆ ಮತ್ತು ವ್ಯಥೆ ಇದೋ ನಿಮಗಾಗಿ.

ಶ್ರೀಯುತ ಆಚಾರ್ ಮೂಲತಃ ಬಳ್ಳಾರಿಯ ಹೊಸಪೇಟೆಯವರು. ಸಾಕಷ್ಟು ಸ್ಥಿತಿವಂತರಾಗಿದ್ದು ಕಾರು ಬಾರು ನಡೆಸಿದ್ದವರು. ಗಂಡು ಮಕ್ಕಳಿಬ್ಬರು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ತಮ್ಮ ಬದಕನ್ನರಿಸಿ ರಾಜಧಾನಿ ಬೆಂಗಳೂರಿಗೆ ಬಂದಾಗ ನಮಗೆ ಪರಿಚಯವಾದವರು. ಮಕ್ಕಳು ತಮ್ಮ ಕಛೇರಿಯ ಮೂಲಕ ವಿದೇಶಕ್ಕೆ ಹೋಗಿ ನಂತರದ ದಿನಗಳಲ್ಲಿ ಅಲ್ಲಿಯೇ ನೆಲೆಸಲು ನಿರ್ಧರಿಸಿದಾಗ, ಹೆಮ್ಮೆಯಿಂದ ಎಲ್ಲರ ಬಳಿ ನಮ್ಮ ಹುಡುಗರು ಫಾರಿನ್ ನಲ್ಲಿದ್ದಾರೆ ಎಂದು ಹೇಳಿ ಸಂಭ್ರಮ ಪಟ್ಟಿದ್ದವರು. ಮಕ್ಕಳಿಗೆ ಇಲ್ಲಿಯೇ ಮದುವೆಯಾಗಿ ವಿದೇಶದಲ್ಲಿ ಮಕ್ಕಳಾದಾಗ ಅದನ್ನು ಇಲ್ಲಿಂದಲೇ Online ಮುಖಾಂತರ ನೋಡಿ ಸಂಭ್ರಮಪಡುತ್ತಿದ್ದಂತಹ ಅತ್ಯಂತ ಸರಳ ಸಜ್ಜನರಾಗಿದ್ದರು.

ಆಚಾರ್ಯರಿಗೆ ಸಂಗೀತ ಸಾಹಿತ್ಯದ ಜೊತೆ, ಆರೋಗ್ಯದ ಮೇಲೆಯೂ ಅಪಾರವಾದ ಕಾಳಜಿ ಇತ್ತು. ಹಾಗಾಗಿಯೇ ದೇವರ ಮೇಲೆ ಹೂವು ತಪ್ಪಿದರೂ, ಪ್ರತೀ ದಿನ ಮುಂಜಾನೆ ವಾಯುವಿಹಾರಕ್ಕೆ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ಈ ರೀತಿಯ ಸರಳ ಸಜ್ಜನಿಕೆ ಮತ್ತು ಮೃದುಭಾಷಿತನಾಗಿ ಅತ್ಯಂತ ಶೀಘ್ರವಾಗಿ ಹತ್ತು ಹಲವಾರು ಸ್ನೇಹಿತರನ್ನು ಸಂಪಾದಿಸಿ ಆಗ್ಗಾಗ್ಗೆ ನಮ್ಮ ಬಡಾವಣೆಯ ಸುತ್ತಮುತ್ತಲೂ ನಡೆಯುತ್ತಿದ್ದ ಸಾಂಸ್ಕೃತಿಕ ಮತ್ತು ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ನನ್ನ ಎಲ್ಲಾ ಲೇಖನಗಳನ್ನೂ ಅತ್ಯಂತ ಖುಷಿಯಿಂದ ಓದಿ ಮೆಚ್ಚುಗೆ ಸೂಚಿಸುತ್ತಿದ್ದದ್ದಲ್ಲದೇ, ವಯಕ್ತಿಕವಾಗಿ ಭೇಟಿಯಾದಾಗಲೆಲ್ಲಾ ಕೆಲವು ಲೇಖನಗಳ ಕುರಿತಂತೆ ಸುದೀರ್ಘವಾದ ಚರ್ಚೆ ನಡೆಸಿ ನನ್ನ ಬರವಣಿಗೆಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿದ್ದಂತಹ ಹಿತೈಷಿಗಳಾಗಿದ್ದರು.

hena3

ಮೊನ್ನೆ ಭಾನುವಾರ ಬೆಳ್ಳಂಬೆಳಿಗ್ಗೆ ಎದ್ದು ಅಭ್ಯಾಸ ಬಲದಿಂದ ಮೊಬೈಲ್ ಕಡೆ ಕಣ್ಣಾಡಿಸುತ್ತಿದ್ದಂತೆಯೇ, ತಡ ರಾತ್ರಿಯಲ್ಲಿ ಹೃದಯಾಘಾತದಿಂದಾಗಿ ಅಚಾರ್ಯರು ನಿಧನರಾದ ಸುದ್ದಿ ಕೇಳುತ್ತಿದ್ದಂತೆಯೇ ಮನಸ್ಸಿಗೆ ಒಂದು ರೀತಿಯ ಬೇಸರವಾಗಿ ವ್ಯಾಯಾಮ ಮಾಡಲು ಮನಸ್ಸಾಗದೇ. ಸ್ವಲ್ಪ ಸಮಯದ ನಂತರ ಅವರ ಅಂತಿಮ ದರ್ಶನ ಪಡೆಯಲು ಅವರ ಮನೆಗೆ ಹೋದಾಗಾ ಮನೆಯ ಮುಂದೆ ಬೆಂಕಿ ಹಚ್ಚಿತ್ತಾದಾರೂ, ಮನೆಯೆಲ್ಲಾ ಬಿಕೋ ಎನ್ನುತ್ತಿತ್ತು. ಆಚಾರ್ಯರ ಮನೆಯಾಕಿ ಮತ್ತು ಅವರ ಮನೆಯ ಮಾಲಕಿ ಇಬ್ಬರ ಹೊರತಾಗಿ ಮತ್ತಾರೂ ಇರಲಿಲ್ಲ. ವಿದೇಶದಲ್ಲಿದ್ದ ಮಕ್ಕಳಿಬ್ಬರಿಗೂ ವಿಷಯ ತಿಳಿಸಿಯಾಗಿತ್ತು. ಎಷ್ಟೇ ಲಗು ಬಗೆ ಪ್ರಯತ್ನಿಸಿದರೂ ಆವರು ಇಲ್ಲಿಗೆ ಬರಲು ಕನಿಷ್ಠಪಕ್ಷ ಎರಡು ದಿನಗಳಾದರೂ ಬೇಕಿತ್ತು. ಆಚಾರ್ಯರ ಪುಣ್ಯ ಅವರ ಮನೆಯ ಮಾಲಿಕರು ಹೃದಯವಂತರಾಗಿದ್ದ ಕಾರಣ ಅವರೇ ಮುಂದಾಳತ್ವವನ್ನು ವಹಿಸಿ ಅವರ ಮಕ್ಕಳು ಬರುವವರೆಗೂ ಆಚಾರ್ಯರ ಶವವನ್ನು ಶೈತ್ಯಗಾರದಲ್ಲಿ ಇಡುವ ವ್ಯವಸ್ಥೆಯನ್ನು ಮಾಡಿದ್ದರು. ನಾನು ಸಹಾ ಅವರ ಮನೆಯವರಿಗೆ ನನ್ನ ನಂಬರ್ ಕೊಟ್ಟು ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ ಕರೆ ಮಾಡಿ ಎಂದು ತಿಳಿಸಿ ಆಚಾರ್ಯರಿಗೆ ನಮಸ್ಕರಿಸಿ ಮನೆಗೆ ಬಂದಿದ್ದೆ.

ಅನಾನುಕೂಲದ ಪರಿಸ್ಥಿತಿಯಿಂದಾಗಿ ಆಚಾರ್ಯರ ಹಿರಿಯ ಮಗ ಬರಲು ಸಾದ್ಯವಾಗದಿದ್ದರೂ, ಕಿರಿಯ ಮಗ ಕೇವಲ 36 ಗಂಟೆಗಳಲ್ಲಿಯೇ ಬೆಂಗಳೂರಿಗೆ ಬಂದು ತಲುಪಿದಾಗ ಅಂತಿಮ ಸಂಸ್ಕಾರಕ್ಕಾಗಿ ಪುರೋಹಿತರ ಹುಡುಕಾಟದಲ್ಲಿ ನಾನು ಸಹಾ ಪಾಲ್ಗೊಂಡಿದ್ದೆ. ಕೊರೋನಾದಿಂದಾಗಿ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಪುರೋಹಿತರು ಸಿಗುವುದು ಕಷ್ಟವಾಗಿತ್ತು. ಮನುಷ್ಯ ಸತ್ತಾಗಲೂ ಜಾತಿಯನ್ನು ಕೇಳಿ ಅಬ್ರಾಹ್ಮಣರಿಗೆ ಕರ್ಮಗಳನ್ನು ಮಾಡಿಸಲು ಹಿಂದೇಟು ಹಾಕಿದ ಕೆಲವು ಪುರೋಹಿತರ ಮನಸ್ಥಿತಿ ನಿಜಕ್ಕೂ ಅಸಹ್ಯಕರವೆನಿಸಿತ್ತು. ಜಾತಿ ಜಾತಿಗೊಂದು ಮಠ ಕಟ್ಟಿಕೊಂಡು ಮಠಾಧೀಶರನ್ನು ಮಾಡಿಕೊಂಡು ಮೀಸಲಾತಿ ಕೇಳುತ್ತಾ ಅವರಿಗರಿವಿಲ್ಲದಂತೆಯೇ ದೇಶದಲ್ಲಿನ ಸಮಾನತೆಯನ್ನು ಈ ರೀತಿಯಾಗಿ ಚಿದ್ರ ವಿಛಿದ್ರಗೊಳಿಸುತ್ತಿರುವ ಇಂತಹ ಪ್ರಸಂಗಗಳು ಮಠಮಾನ್ಯಗಳಿಗೆ ಎಚ್ಚರಿಕೆಯ ಸಂದೇಶವಾಗಬೇಕು.

ಅಂತಿಮ ಸಂಸ್ಕಾರದ ವೇಳೆ ಅಕ್ಷರಶಃ ಪುರೋಹಿತರನ್ನು ಸೇರಿಸಿ ಸ್ಮಶಾನದಲ್ಲಿ ಇದ್ದವರ ಸಂಖ್ಯೆ ಕೇವಲ ಏಳು ಮಂದಿ. ಆಚಾರ್ಯರ ಕಿರಿಯ ಮಗ, ನಾಲ್ಕು ಜನ ಹೊರುವವರು (ಮನೆಯ ಮಾಲಿಕರೇ ಇಬ್ಬರು, ಮತ್ತೊಬ್ಬರು ಅವರ ದೂರದ ಸಂಬಂಧಿಗಳು) ಮತ್ತೊಬ್ಬ ವಯಸ್ಸಾದ ಹಿರಿಯರು ಅಂತಿಮ ಸಂಸ್ಕಾರದ ವಿಧಿಗಳನ್ನು ಹಿರಿಯ ಮಗನಿಗೆ mobile ಮುಖಾಂತರ Live ತೋರಿಸುವುದರಲ್ಲಿ ನಿರತಾಗಿದ್ದರು. ಮಾನವೀಯತೆಯ ದೃಷ್ಟಿಯಿಂದ ಇಂತಹ ಸಂದರ್ಭದಲ್ಲಿ ಸಹಾಯ ಮಾಡಲೇ ಬೇಕು ಎಂಬುದನ್ನೇ ನಮ್ಮ ತಂದೇ ತಾಯಿಯರು ಕಲಿಸಿರುವ ಪರಿಣಾಮ, ನಾನೇ ಖುದ್ದಾಗಿ ಆಚಾರ್ಯರ ಹೆಣಕ್ಕೆ ಹೆಗಲು ಕೊಟ್ಟಿದ್ದೆ.

cremation

ಸಾವಿನ ಮನೆಯ ಮುಂದಿನ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವವರು ಕೆಲವರಾದರೆ, ಅದೇ ಬೆಂಕಿಯಲ್ಲಿ ಬೀಡಿ ಹತ್ತಿಸಿಕೊಂಡು ಧುತ್ ಎಂದು ಹೊಗೆ ಬಿಡುವವರು ಮತ್ತೆ ಕೆಲವರು ಎಂಬಂತೆ, ಇಂತಹ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡ ಆಂಬ್ಯುಲೆನ್ಸ್, ಶವಾಗಾರ, ಸ್ಮಶಾನದ ಸಿಬ್ಬಂಧಿ ಮತ್ತು ಪುರೋಹಿತರು ಎಗ್ಗಿಲ್ಲದೇ ಆಚಾರ್ಯರ ಮನೆಯವರನ್ನು ನನ್ನ ಕಣ್ಣ ಮುಂದೆಯೇ ದೋಚಿದ್ದು ನನಗೆ ನಿಜಕ್ಕೂ ಹೇಸಿಗೆ ತರಿಸಿತು.

ಇನ್ನು ಮತ್ತೊಂದು ಕುಟುಂಬ. ಗಂಡ ಹೆಂಡತಿಿ ಇಬ್ಬರು ಮಕ್ಕಳು. ದೊಡ್ಡ ಮಗ ದೂರದ ವಿದೇಶದಲ್ಲಿದ್ದಾನೆ. ಇಬ್ಬರು ಮಕ್ಕಳಿಗೂ ಮದುವೆಯಾಗಿ ಮಕ್ಕಳಾಗಿವೆ. ಕುಟುಂಬದ ಹಿರಿಯರು ತಮ್ಮ ಕೆಲಸದಿಂದ ನಿವೃತ್ತರಾದ ನಂತರ ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳದೇ ಸಮಾಜಮುಖಿಗಳಾಗಿ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಎರಡು ಉತ್ತಮ ಶಾಲೆ, ಬಡವರಿಗೂ ಬ್ಯಾಂಕಿಂಗ್ ಸೌಲಭ್ಯಗಳು ಸಿಗುವಂತಾಗಲಿ ಎಂದು ಅವರು ಆರಂಭಿಸಿದ ಎರಡು ಸಹಕಾರಿ ಬ್ಯಾಂಕುಗಳು ಇಂದು ಸಾವಿರಾರು ಜನರ ಸದಸ್ಯರೊಂದಿಗೆ ಕೋಟ್ಯಾಂತರ ರೂಪಾಯಿಗಳ ವ್ಯವಹಾರ ಮಾಡುತ್ತಿದೆ. ನನಗೇ ತಿಳಿದ ‌ಮಟ್ಟಿಗೆ ನಮ್ಮ ಬಡಾವಣೆಯ ಸುತ್ತಮುತ್ತಲೇ ಅವರ ಸಂಬಂಧೀಕರದ್ದೇ ಸುಮಾರು ಹತ್ತು ಹದಿನೈದು ಕುಟುಂಬಗಳಿದ್ದು ಪ್ರತೀ ವಾರವೂ ಭಜನೆ ಸಂಕೀರ್ತನಗಳನ್ನು ಮಾಡುತ್ತಿದ್ದಂತಹ ಜೇನುಗೂಡು ಕುಟುಂಬ ಅವರದ್ದಾಗಿತ್ತು.

ದುರಾದೃಷ್ಟವಶಾತ್, ಅದೆಲ್ಲಿಂದಲೋ ಆ ಹಿರಿಯರಿಗೆ, ಆವರ ಥರ್ಮಪತ್ನಿಯವರಿಗೆ ಮತ್ತು ಅವರ ಕಿರಿಯ ಮಗನಿಗೆ ಕೊರೋನಾ ಮಹಾಮಾರಿ ವಕ್ಕರಿಸಿಕೊಂಡು ಎಲ್ಲರೂ ಆಸ್ಪತ್ರೆಯಲ್ಲಿ ICUವಿನಲ್ಲಿ ಚಿಕಿತ್ಸೆ ಪಡೆಯಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಬಂದೊದಗಿ ಚಿಕಿತ್ಸೆ ಫಲಕಾರಿಯಾಗದೇ ಕುಟುಂಬದ ಹಿರಿಯರು ಮೃತಪಡುತ್ತಾರೆ.

chite

ಇತರೇ ಸಂದರ್ಭಗಳಲ್ಲಾದರೇ ಶ್ರೀಯುತರ ಅಂತಿಮ ದರ್ಶನವನ್ನು ಪಡೆಯಲು ಸಾವಿರಾರು ಮಂದಿ ಅವರ ಮನೆಯ ಮುಂದಿರುತ್ತಿದ್ದರು. ದುರಾದೃಷ್ಟವಷಾತ್ ಅವರು ಕೊರೋನಾದಿಂದಾಗಿ ಮೃತಪಟ್ಟ ಕಾರಣ ಕೇವಲ ಕೆಲವೇ ಕೆಲವು ಅತ್ಯಂತ ಆಪ್ತ ಕುಟುಂಬವರ್ಗದವರು ಅಲ್ಲಿಗೆ ಬಂದಿದ್ದರೇ ವಿನಃ ಅಕ್ಷರಶಃ ಚಿತಾಗಾರದಲ್ಲಿ ಅವರ ಹೆಣಕ್ಕೆೆ ಹೆಗಲು ಕೊಡಲು ಮೂರು ಮತ್ತೊಂದು ಜನರು ಇದ್ದರು. ಕೊರೋನಾದಿಂದ ಮೃತಪಟ್ಟ ಕಾರಣ ಶವವನ್ನು ಹೆಚ್ಚು ದಿನ ಇಡಲು ಸಾಧ್ಯವಾಗದ ಕಾರಣ ವಿದೇಶದಲ್ಲಿ ಇರುವ ದೊಡ್ಡ ಮಗ ಬರಲು ಸಾಧ್ಯವಿರಲಿಲ್ಲ. ಇನ್ನು ಮಡದಿ ಮತ್ತು ಚಿಕ್ಕಮಗ ಇನ್ನೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವನೂ ತನ್ನ ತಂದೆಯ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ದೊಳ್ಳಲು ಸಾಧ್ಯವಾಗದೇ ಅವರ ಹತ್ತಿರದ ಸಂಬಧಿಯೊಬ್ಬರೇ ಮುಂದೆ ಬಂದು ಕಾರ್ಯಗಳನ್ನು ಮುಗಿಸಬೇಕಾದಂತಹ ಸಂದರ್ಭ ಬಂದೊದಿಗಿತ್ತು. ಈ ಲೇಖನ ಬರೆಯುತ್ತಿರುವಾಗಲೇ ಆಸ್ಪತ್ರೆಯಲ್ಲಿದ್ದ ಅವರ ಮಡದಿಯೂ ಸಹಾ ನಿಧನರಾಗಿದ್ದು ಗಾಯದ ಮೇಲೆ ಬರೆ ಎಳೆದಂತೆ ಈಗ ಅವರ ಮನೆಯಲ್ಲಿ ಶೋಕ ಸಾಗರವಾಗಿದೆ.

ಇವೆಲ್ಲವನ್ನೂ ವಿದೇಶದಲ್ಲಿ ಕುಳಿತು Internet ಮುಖಾಂತರವೇ ನೋಡುತ್ತಿರುವ ಅವರ ದೊಡ್ಡ ಮಗ ಹೇಳಿದ ಮಾತು ನಿಜಕ್ಕೂ ಇಂದಿನ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಅಪ್ಪಾ ಅಮ್ಮಾ ಕಷ್ಟ ಪಟ್ಟು ತಮಗಿಲ್ಲದಿದ್ದರೂ ಮಕ್ಕಳಿಗೆ ಕೊರತೆಯಾಗಬಾರದೆಂದು ನಮ್ಮನ್ನು ಚೆನ್ನಾಗಿ ಸಾಕಿ ಸಲಹಿ ಯಾವುದೇ ಕುಂದು ಕೊರತೆ ಬಾರದಂತೆ ಗಮನವಹಿಸಿ ದೊಡ್ಡವರನ್ನಾಗಿ ಮಾಡಿ ಅತ್ಯುತ್ತಮ ವಿದ್ಯಾಭ್ಯಾಸ ಕೊಡಿಸಿದ ಪರಿಣಾಮ ನಾನಿಂದು ವಿದೇಶದಲ್ಲಿ ಕೋಟ್ಯಾಂತರ ಹಣವನ್ನು ಗಳಿಸುವಂತಾಗಿದೆ. ಆದರ ನಾನು ಗಳಿಸಿದ ಅ ಕೋಟ್ಯಾಂತರ ಹಣ ಈಗ ನನ್ನ ತಂದೆ ತಾಯಿಯರ ಅಂತಿಮ ದರ್ಶನ ಮತ್ತು ಅವರ ಅಂತಿಮ ಸಂಸ್ಕಾರ ಮಾಡುವುದಕ್ಕೂ ಸಹಾಯವಾಗದಿದ್ದಾಗ ಅಷ್ಟು ದುಡಿತದಿಂದ ಸಿಕ್ಕಿದ್ದಾದರು ಏನು?

ಮಕ್ಕಳು ಹುಟ್ಟಿದಾಗ, ಆಹಾ! ವಂಶೋದ್ಧಾರಕ ಹುಟ್ಟಿದ ಎಂದು ಸಂತೋಷ ಪಟ್ಟರೆ, ಇನ್ನೂ ಕೆಲವು ಹಿರಿಯರು ನಮ್ಮ ಅಂತಿಮ ದಿನಗಳಲ್ಲಿ ನಮ್ಮನ್ನು ನೋಡಿಕೊಳ್ಳುವವ ಮತ್ತು ನಮ್ಮ ಚಿತೆಗೆ ಅಗ್ನಿ ಸ್ಪರ್ಶಮಾಡಲು ಒಬ್ಬನಾದರೂ ಜನಿಸಿದನೆಲ್ಲಾ ಎಂದುಕೊಂಡಿರುತ್ತಾರೆ. ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ತಮ್ಮ ಮಕ್ಕಳನ್ನು ಸಾಕಿ ಸಲಹಿ ವಿದ್ಯಾಭ್ಯಾಸವನ್ನು ಕೊಡಿಸಿರುತ್ತಾರೆ. ಅದರೆ ಇಂದಿನ ಮಕ್ಕಳು ಅವೆಲ್ಲವನ್ನೂ ಮರೆತು ಹೆತ್ತವರಿಂದ ದೂರವಿದ್ದು ಕಡೆಗೆ ನಾನಾ ನೆಪಗಳಿಂದ ತಮ್ಮ ಜನ್ಮದಾತರ ಅಂತಿಮ ಸಂಸ್ಕಾರಕ್ಕೂ ಬಾರದಿರುವಾಗ, ಹಾವಿಗೆ ಹಾಲೆರೆದಂತೆ ಇಂತಹ ಮಕ್ಕಳಿಗಾ ತಮ್ಮೆಲ್ಲ ಸರ್ವಸ್ವವನ್ನು ಅವರು ತ್ಯಾಗ ಮಾಡಿದ್ದು ಎನಿಸುತ್ತದೆ. ಹಣ, ಆಸ್ತಿ ಎಲ್ಲವೂ ಇದ್ದರೂ ಅದು ನಾಯಿ ಮೊಲೆಯಲ್ಲಿ ಹಾಲಿದ್ದಂತೆ ಸಮಯಕ್ಕೆ ಅನುಕೂಲವಾಗದೇ ಹೆತ್ತಕರುಳಿನ ಸಂಬಂಧಕ್ಕೂ ಬೆಲೆಯಿಲ್ಲದ ಹಾಗೆ ಆಗುತ್ತಿರುವುದು ನಿಜಕ್ಕೂ ವಿಯರ್ಯಾಸವೇ ಸರಿ.

ತಮ್ಮ ತಂದೆ ತಾಯಿಯರನ್ನು ಸುಖಃವಾಗಿ ಇಟ್ಟು ಕೊಳ್ಳಲೆಂದೇ ನಮ್ಮ ದೇಶ ಬಿಟ್ಟು ಇಲ್ಲಿಗೆ ಬಂದು ಕಷ್ಟ ಪಟ್ಟು ಬೆವರು ಸುರಿಸಿ ದುಡಿದು ಪ್ರತೀ ತಿಂಗಳು ಲಕ್ಷ ಲಕ್ಷ ಹಣವನ್ನು ಕಳುಹಿಸುತ್ತೇವೆ. ಆ ಹಣದಿಂದಲೇ ಆಸ್ತಿ ಪಾಸ್ತಿ ಮಾಡಿ ನಮ್ಮನ್ನು ಹೆತ್ತವರನ್ನು ಸುಖಃ ಸಂತೋಷವಾಗಿಡುತ್ತೇವೆ ಎನ್ನುವ ವಿತಂಡ ವಾದ ಮಂಡಿಸುವವರಿಗೇನೂ ಕಡಿಮೆ ಇಲ್ಲ.

ನಿಜ ಹೇಳ ಬೇಕೆಂದರೆ, ಬಹುತೇಕ ತಂದೆ ತಾಯಿಯರು ತಮ್ಮ ಮಕ್ಕಳಿಂದ ಬಹಸುವುದು ಪ್ರೀತಿ ಮತ್ತು ವಿಶ್ವಾಸವೇ ಹೊರತು ಹಣ, ಆಸ್ತಿ ಆಂತಸ್ತನ್ನಲ್ಲ. ಅವರ ಅಂತಿಮ ಕಾಲದಲ್ಲಿ ಅವರ ಜೊತೆಗೇ ಇದ್ದು ನಾವು ತಿನ್ನುವುದನ್ನೇ ಅವರೊಂದಿಗೆ ಹಂಚಿಕೊಂಡರೇ ಅದೇ ಅವರಿಗೆ ಮೃಷ್ಟಾನ್ನ ಭೋಜನ. ಹೊತ್ತು ಹೊತ್ತಿಗೆ ಊಟ ಹಾಕುವುದಕ್ಕೂ ತೊಂದರೆ ಇದ್ದಲ್ಲಿ ಅವರೊಂದಿಗೆ ಅತ್ಮೀಯತೆಯಿಂದ ಒಟ್ಟಿಗೆ ಬಾಳಿದರೂ ಸಾಕು ಅವರಿಗೆ ಆತ್ಮತೃಪ್ತಿಯಾಗುತ್ತದೆ. ಅಂತಿಮವಾಗಿ ಯಾರೂ ಏನನ್ನೂ ಇಲ್ಲಿಂದ ಹೊತ್ತಿಕೊಂಡು ಹೋಗುವುದಿಲ್ಲ. ಅಂತಿಮ ಕಾಲದಲ್ಲಿ ಅವರ ಹೆಣವನ್ನು ಹೊರುವುದಕ್ಕಾದರೂ ನಾಲ್ಕು ಜನರನ್ನಾದರೂ ಸಂಪಾದಿಸಿಕೊಂಡರೂ ಸಾಕು ಎಂದುಕೊಂಡಿರುತ್ತಾರೆ. ಹಾಗೆ ಹೆಣಕ್ಕೆ ಹೆಗಲು ಕೊಡುವ ನಾಲ್ಕು ಮಂದಿಯಲ್ಲಿ ನಾವೂ ಒಬ್ಬರಾಗೋಣ ಎನ್ನುವುದನ್ನು ಬೆಳಸಿಕೊಳ್ಳೋಣ ಅವರ ಆಸೆಯನ್ನು ಈಡೇರಿಸೋಣ.

ಏನಂತೀರೀ?

ನಿಮ್ಮವನೇ ಉಮಾಸುತ

One thought on “ಕಡೇಗಾಲದಲ್ಲಿ ಹೊರುವುದಕ್ಕಾದರೂ ನಾಲ್ಕು ಜನರನ್ನಾದರೂ ಸಂಪಾದಿಸಿ

  1. ಇದು ಕರುಣಾಜನಕವಾದ ಬಹಳ ಬೇಸರದ ಸಂಗತಿ. ಇಂತಹ ಕೆಟ್ಟ ಸಾವು ಯಾರಿಗೂ ಸಹ ಬಾರದೇ ಇರಲಿ ಈ ಲೇಖನ ಓದಿ ಮನಸ್ಸಿಗೆ ಬಹಳ ಬೇಸರವಾಯ್ತು
    ಓಂ ಶಾಂತಿ

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s