ಸರ್ಜಿಕಲ್ ಸ್ಟ್ರೈಕ್, ಸಾರಿಗೆ ಸ್ಟ್ರೈಕ್, ರೈತರ ಸ್ಟ್ರೈಕ್ ಕೇಳಿದ್ದಿವಿ ಇದೇನು ಹೊಸಾ ಶ್ರೀರಾಮ ನವಮಿ ಸ್ಟ್ರೈಕ್ ಅಂತಾ ಯೋಚನೆ ಮಾಡ್ತಿರ್ತೀರಿ ಅಂತ ನನಗೆ ಚೆನ್ನಾಗಿ ಗೊತ್ತು. ಇದುವರೆಗೂ ಯಾರಿಗೂ ಹೇಳಿದಿದ್ದ ಶ್ರೀರಾಮ ನವಮಿ ಸ್ಟ್ರೈಕ್ ಅಂತಹ ರೋಚಕ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ತೀನಿ.
ಸುಮಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆಗ ತಾನೆ ಶುರುವಾಗಿದ್ದ ಸ್ಟಾರ್ಟಪ್ ಕಂಪನಿಯೊಂದರ ಎರಡನೇ ಉದ್ಯೋಗಿಯಾಗಿ ಸೇರಿಕೊಂಡಿದ್ದೆ. ಭಾರತೀಯರೊಬ್ಬರೇ ಅಮೇರಿಕಾದಲ್ಲಿ ಆರಂಭಿಸಿದ ಕಂಪನಿಯೊಂದರ ಶಾಖೆಯನ್ನು ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಆರಂಭಿಸಿದ್ದರು. ಬೆಂಗಳೂರು ಶಾಖೆಯ ಎರಡನೇ ಉದ್ಯೋಗಿ ಎಂದರೆ ಎಲ್ಲರಿಗೂ ಗೊತ್ತಿರುವ ಹಾಗೆ ಬಹಳ ಜವಾಬ್ಧಾರಿಯುತವಾಗಿ ಎಲ್ಲವನ್ನೂ ಹೊಸದರಿಂದಲೇ ಆರಂಭಿಸಿ ಕಂಪನಿ ದೊಡ್ಡದಾಗಿ ಬೆಳೆಯುವಂತೆ ಮಾಡುವ ಗುರುತರ ಜವಾಬ್ಧಾರಿ ನನ್ನ ಮೇಲಿತ್ತು.
ಹಾಗಾಗಿ ಪ್ರತಿಯೊಂದುಕ್ಕೂ ಅಳೆದೂ ತೂಗಿ ಹೆಚ್ಚು ಹಣ ಪೋಲು ಮಾಡದೇ, ಎಷ್ಟು ಬೇಕೋ ಅಷ್ಟನ್ನೇ ಖರ್ಚು ಮಾಡಿ ಅಗತ್ಯವಿದ್ದ Laptops, Desktops, Switches & Servers ಖರೀದಿಸಿ ಕಂಪನಿಯನ್ನು ಆರಂಭಿಸಿದ್ದ ದಿನಗಳು. ನಮ್ಮ ಕಂಪನಿಯ ಮಾಲಿಕರು ಭಾರತೀಯ ಹಿಂದೂಗಳು ಅದರಲ್ಲೂ ಮಾಜೀ ಸೈನ್ಯಾಧಿಕಾರಿಗಳೇ ಆಗಿದ್ದರೂ ಅಮೇರಿಕಾದಲ್ಲಿ ಮೊದಲು ಕಂಪನಿ ಆರಂಭಿಸಿದ್ದ ಕಾರಣ ಅವರು ನಮ್ಮ ಕಂಪನಿಯನ್ನು ಬಹುರಾಷ್ಟ್ರೀಯ ಕಂಪನಿಯೆಂದೇ ಕರೆಯಲು ಇಚ್ಚಿಸುತ್ತಿದ್ದಲ್ಲದೇ ಆಗ್ರಹ ಪಡಿಸುತ್ತಿದ್ದರು. ಇನ್ನು ನನ್ನದೋ ಅಪ್ಪಟ ಕನ್ನಡಿಗ ಮತ್ತು ಹಿಂದೂ ಮನಸ್ಥಿತಿಯವನಾಗಿದ್ದ ಕಾರಣ ಕೆಲಸದಲ್ಲಿಯೂ ಸಾಧ್ಯವಾದ ಕಡೆಯಲೆಲ್ಲಾ ನಮ್ಮ ತನವನ್ನು ಎತ್ತಿ ತೋರಿಸುತ್ತಿದ್ದೆ. ಹಾಗಾಗಿಯೇ ನಮ್ಮ Servers ಗಳಿಗೆ ಭೀಮಾ, ಕರ್ಣ, ಅಶ್ವಿನಿ, ಭರಣಿ, ಗಂಗಾ, ಯಮುನಾ ಸರಸ್ವತಿ ಕಾವೇರಿ, ನರ್ಮದಾ, ಮಲ್ಲಿಗೆ, ಸಂಪಿಗೆ, ಕೇದಿಗೆ, ಎಂದಿದ್ದರೆ, ಹೊಸದೊಂದು ಪ್ರಾಜೆಕ್ಟಿಗೆ ಕೊಟ್ಟಿದ್ದ ಎರಡು ಸರ್ವರ್ಗಳಿಗೆ ಲವ-ಕುಶ ಎಂದು ಹೆಸರು ಇಟ್ಟಿದ್ದೆ. ಇನ್ನು ನಮ್ಮ Conference Roomಗಳಿಗೆ ಅಜಂತಾ, ಎಲ್ಲೋರ, ಐಹೊಳೆ, ಬಾದಾಮಿ ಎಂದು ನಾಮಕರಣ ಮಾಡಲು ಸಫಲನಾಗಿ, ಇಲ್ಲಿನ ಮಣ್ಣಿನ ದೇಸೀ ಸೊಗಡನ್ನು ಹರಡಿಸಲು ಸಫಲನಾಗಿದ್ದೆ.
ನಮ್ಮ ಕಂಪನಿಗೆ ಹೊಸದಾಗಿ ಸೇರಿಕೊಳ್ಳುತ್ತಿದ್ದ ಸಹೋದ್ಯೋಗಿಗಳಿಗೂ ಈ ಹೆಸರುಗಳು ಬಲು ಅಪ್ಯಾಯಮಾನವಾಗಿದ್ದರೂ ನಮ್ಮ ಕಂಪನಿಯ ಮಾಲಿಕರಿಗೆ ಇದೇಕೋ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಹಾಗಾಗಿಯೇ ಆಯುಧಪೂಜೆ ಮಾಡುವುದಕ್ಕೂ ಬಿಟ್ಟಿರಲಿಲ್ಲ. ನಮ್ಮದು MNC ಕಂಪನಿ ಹಾಗಾಗಿ ಇಲ್ಲಿ ಯಾವುದೇ ಧಾರ್ಮಿಕ ಆವರಣೆಗೆ ಅವಕಾಶವಿಲ್ಲ ಹಾಗಾಗಿ ಆಯುಧ ಪೂಜೆಗೆ ಖರ್ಚು ಮಾಡಲಾಗದು ಎಂದಿದ್ದರು. ಹೇಗೂ ಆಯುಧ ಪೂಜೆ ಮಾಡಲು ಈ ಮೊದಲೇ ನಿರ್ಧರಿಸಿದ್ದರಿಂದ ನಾನೇ ಸ್ವಂತ ಖರ್ಚಿನಲ್ಲಿಯೇ ಸರಳವಾಗಿಯಾದರೂ ಅರ್ಥಪೂರ್ಣವಾಗಿ ಆಯುಧ ಪೂಜೆ ಮಾಡಿ ಮುಗಿಸಿದ್ದೆ.
ಇದಾಗಿ ಡಿಸೆಂಬರ್ ಎರಡನೇ ವಾರದಲ್ಲಿ ಬೆಳ್ಳಂಬೆಳಿಗ್ಗೆ ಕಛೇರಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಝಗಮಗಿಸುವ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಕ್ರಿಸ್ಮಸ್ ಗಿಡ ನೋಡುತ್ತಿದ್ದಂತೆ ಎದೆ ಝಲ್ ಎಂದಿದ್ದಂತೂ ಸುಳ್ಳಲ್ಲ. ನಮ್ಮ ಸ್ವಾಗತಕಾರಿಣಿ ಬಳಿ ಇದನ್ನು ಹಾಕಿದವರು ಯಾರು ಎಂದು ಕೇಳಿದೆ. ಅಕೆ ಅಷ್ಟೇ ಮುಗ್ಧವಾಗಿ ನೆನ್ನೆ ಸಂಜೆ ಅಡ್ಮಿನ್ ಡಿಪಾರ್ಟ್ಮೆಂಟಿನವರು ಇದನ್ನು ಮಾಡಿಹೋದರು ಎಂದಳು. ಛೇ!! ನಾವು ಇಲ್ಲಿನ ಸಂಪ್ರದಾಯದ ಅನುಗುಣವಾಗಿ ಆಯುಧಪೂಜೆ ಮಾಡ್ತೀವಿ ಅಂದಾಗ ಇಲ್ಲಾ ಎಂದವರು ಇದಕ್ಕೇ ಹೇಗೆ ಅನುವು ಮಾಡಿಕೊಟ್ಟಿದ್ದೀರಿ? ಎಂದು ಆಕೆಯನ್ನು ದಬಾಯಿಸಿದ್ದಕ್ಕೆ ಆಕೆ ಒಂದು ಚೂರು ಮಾತನಾಡದೇ ಸುಮ್ಮನಿದ್ದಳು. ಇದನ್ನೇ ಅಡ್ಮಿನ್ ಡಿಪಾರ್ಟ್ಮೆಂಟ್ ಬಳಿ ಹೋಗಿ ಅಲ್ಲಿಯೂ ಗಲಾಟೆ ಮಾಡಿದ್ದೆ. ಮಧ್ಯಾಹ್ನ ಊಟದ ಸಮಯದಲ್ಲಿ ನಮ್ಮ ಸಹೋದ್ಯೋಗಿಗಳ ಬಳಿ ಇದೇ ಕುರಿತಂತೆ ಚರ್ಚೆ ನಡೆಸುತ್ತಿದ್ದ ಸಮಯದಲ್ಲಿ ತಿಳಿದು ಬಂದ ವಿಷಯವೇನೆಂದರೆ ನಮ್ಮ ಸ್ವಾಗತಕಾರಣಿಯೂ ರೋಮನ್ ಕ್ಯಾಥೋಲಿಕ್ ಎಂದು ತಿಳಿಯುತಾದರೂ ಆಕೆ ತನ್ನ ಮೇಲಧಿಕಾರಿಯ ಆಜ್ಞೆಯನ್ನು ಪಾಲಿಸಿದ್ದಳು.
ಅದಾದ ನಂತರ ಎರಡು ಮೂರು ಬಾರಿ ಹೊಸಾ ಕಛೇರಿಗೆ ಸ್ಥಳಾಂತರ ಗೊಂಡಾಗ, ಪೂಜೆ ಮಾಡಿಸೋಣ ಎಂದರೂ ಮತ್ತೇ ಇದೇ ವರಾತೆ ತೆಗೆಯುತ್ತಿದ್ದರು. ಹಾಗೂ ಹೀಗೂ ಮಾಡಿ ಹೊಸಾ ಕಟ್ಟಡಕ್ಕೆ ಹೋದಾಗ ಇದೇ ಕ್ರಿಸ್ಮಸ್ ವಿಷಯವನ್ನು ಮುಂದಿಟ್ಟು ಕಂಪನಿಯ ಕಡೆಯಿಂದಲೇ ಹೋಮ ಮತ್ತು ಹವನ ಪೂಜೆ ಪುನಸ್ಕಾರಗಳನ್ನು ಮಾಡಿಸಲು ಸಫಲನಾಗಿದ್ದರೂ ಹೇಗಾದರೂ ಮಾಡಿ ಇಲ್ಲೊಂದು ನಮ್ಮ ಸಂಪ್ರದಾಯವನ್ನು ಪಾಲಿಸಲೇ ಬೇಕು ಎಂದು ಯೋಚಿಸುತ್ತಿರುವಾಗಲೇ ರಾಮನವಮಿ ಬಂದು ಬಿಟ್ಟಿತ್ತು.
ಪ್ರಭು ಶ್ರೀರಾಮ ಒಂದು ರೀತಿಯ ಸರ್ವಧರ್ಮ ಸರ್ವಜಾತಿಯವರೂ ಒಪ್ಪುವ ದೇವರು ಹಾಗಾಗಿ ಮಾರನೆಯ ದಿನ ಸರವಾಗಿಯಾದರೂ ಸಂಭ್ರಮವಾಗಿ ರಾಮನವಮಿ ಆಚರಿಸಲು ನಾಲ್ಕಾರು ಗೆಳೆಯರು ಸೇರಿ ನಿರ್ಧರಿಸಿದ್ದೇ ತಡಾ ಎಲ್ಲರೂ ಸ್ವಲ್ಪ ಹಣವನ್ನು ಹಾಕಿ ಕೆಲವು ಆಸ್ಥಿಕ ಸಹೋದ್ಯೋಗಿಗಳಿಂದ ಅಲ್ಪ ಸ್ವಲ್ಪ ಹಣವನ್ನು ಸಂಗ್ರಹಿಸಿದೆವು. ಕೂಡಲೇ ನಮ್ಮ ಕಂಪನಿಗೆ ಊಟವನ್ನು ತಂದು ಕೊಡುತ್ತಿದ್ದ ರಾಘವೇಂದ್ರನಿಗೆ ಕರೆ ಮಾಡಿ ಇಡೀ ನಮ್ಮ ಕಛೇರಿಯ ಎಲ್ಲಾ ಸಹೋದ್ಯೋಗಿಗಳಿಗೂ ಪ್ರಸಾದ ರೂಪದಲ್ಲಿ ಹಂಚಲು ಕೋಸಂಬರಿ, ಪಾನಕ ಮತ್ತು ನೀರು ಮಜ್ಜಿಗೆ ಮಾಡಿಕೊಂಡು ಬರಲು ತಿಳಿಸಿದೆ. ಉಳಿದವರಿಗೆಲ್ಲರಿಗೂ ಹಣ್ಣು, ಹೂವು ಮುಂತಾದ ಪೂಜೆ ಸಾಮಗ್ರಿಗಳನ್ನು ತರಲು ಸೂಚಿಸಲಾಯಿತು. ಕೂಡಲೇ ಇಂಟರ್ನೆಟ್ಟಿನಲ್ಲಿ ಶ್ರೀರಾಮನ ಫೋಟೋ ಡೌನ್ ಲೋಡ್ ಮಾಡಿ ಕಲರ್ ಪ್ರಿಂಟ್ ತೆಗೆದು ಅದನ್ನು ಚೆಂದವಾಗಿ ಒಂದು ರೊಟ್ಟಿಗೆ ಅಂಟಿಸಿ ರಾಮನ ಪೋಟೋ ಸಿದ್ದ ಪಡಿಸಿಯಾಗಿತ್ತು. ಹೀಗೆ ಕೆಲವೇ ಕೆಲವು ಜನರಿಗೆ ಮಾತ್ರವೇ ಗೊತ್ತಿರುವ ಹಾಗೆ ಸಿದ್ದತೆ ನಡೆಸಿ ಮಾರನೆಯ ದಿನ ಮಧ್ಯಾಹ್ನ ಸುಮಾರು 12ರ ಹೊತ್ತಿಗೆ ಎಲ್ಲರಿಗೂ ಕಾನ್ಫರೆನ್ಸ್ ರೂಮಿಗೆ ಬರಲು ಸೂಚಿಸಲಾಯಿತು. ಎಲ್ಲರೂ ಬಂದು ನೋಡುತ್ತಿದ್ದಂತೆಯೇ ಮೂಗಿನ ಮೇಲೆ ಬೆರಳಿಡುವಂತೆ ಅಚ್ಚುಕಟ್ಟಾಗಿ ಅಲಂಕರಿಸಲಾಗಿತ್ತು. ನಾನೇ ಪಂಚೆಯುಟ್ಟುಕೊಂಡು ಸಾಂಗೋಪಾಂಗವಾಗಿ ಪೂಜೆ ಮಾಡಿ ಎಲ್ಲರಿಗೂ ಪ್ರಸಾದ ಹಂಚುವ ಮೂಲಕ ಸದ್ದಿಲ್ಲದೇ ಶ್ರೀರಾಮ ನವಮಿ ಸ್ಟ್ರೈಕ್ ಮಾಡಿದ್ದು ಎಲ್ಲರಿಗೂ ಮೆಚ್ಚುಗೆಯಾಗಿತ್ತು.
ಮುಂದಿನ ವರ್ಷ ರಾಮನವಮಿಗೆ ಒಂದು ವಾರದ ಮುಂಚೆಯೇ ನಮ್ಮ ಸಹೋದ್ಯೋಗಿಗಳೇ ಈ ವರ್ಷ ಶ್ರೀ ರಾಮ ನವಮಿ ಮಾಡೋದಿಲ್ವಾ? ಎಂದು ಕೇಳಿದಾಗ ರೋಟ್ಟಿಯೇ ಜಾರಿ ತುಪ್ಪಕ್ಕೆ ಬಿದ್ದಂತಾಗಿ, ಹೇ.. ಯಾಕ್ ಮಾಡೋದಿಲ್ಲಾ? ಇನ್ನೂ ಒಂದು ವಾರ ಇದೆಯಲ್ಲಾ ಅಂತ ಸುಮ್ಮನಿದ್ದೆವು. ಎಂದು ಹೇಳಿ ಕೂಡಲೇ ಎಲ್ಲಾರ ಹತ್ತಿರವೂ ಹಣ ಸಂಗ್ರಹ ಮಾಡಲು ನಿರ್ಧರಿಸಿದಾಗ ಮಗಾ.. ಈ ವರ್ಷಾ ಹೋದ ವರ್ಷಕ್ಕಿಂತಲೂ ಗ್ರಾಂಡ್ ಆಗಿ ಮಾಡೋಣ ಎಂದು ನಮಗೆ ಮೊದಲು ದೇಣಿಗೆ ನೀಡಿದ್ದೇ ಹಿಮಾಯತ್ ಎಂಬ ಮ್ಯಾನೇಜರ್. ಇದೇ ಸಂಗತಿಯನ್ನೇ ಮುಂದಿಟ್ಟು ಕೊಂಡು ಹಿಮಾಯತ್ತೇ ಇಷ್ಟು ಕೊಟ್ಟಿದ್ದಾನೆ ಇನ್ನು ನೀವು ಎಂದು ಉಳಿದ ಮ್ಯಾನೇಜರ್ ಬಳಿಯೂ ಒಳ್ಳೆಯ ಮೊತ್ತವನ್ನು ಸಂಗ್ರಹಿಸಿ ಈ ಬಾರಿ ಕಳೆದ ಬಾರಿಗಿಂತಲೂ ಅದ್ಧೂರಿಯಾಗಿ ಶ್ರೀರಾಮ ನವಮಿಯನ್ನು ಆಚರಿಸಿದ್ದಲ್ಲದೇ, ಹಣ ಸಾಕಷ್ಟು ಸಂಗ್ರಹವಾಗಿದ್ದ ಕಾರಣ, ಪ್ರಸಾದಕ್ಕೆ ಕೋಸಂಬರಿ, ಪಾನಕ ನೀರು ಮಜ್ಜಿಗೆ ಜೊತೆಗೆ ಹುಳಿಯವಲಕ್ಕಿ (ಗೊಜ್ಜವಲಕ್ಕಿ) ಮತ್ತು ರಸಾಯನನೂ ಸೇರಿಕೊಂಡಿತು.
ಹೀಗೆ ವರ್ಷಾನು ವರ್ಷ ಕಳೆಯುತ್ತಿದ್ದಂತೆಯೇ ನಾನು ಆ ಕಂಪನಿಯಲ್ಲಿ ಇರುವವರೆಗೂ ಶ್ರೀ ರಾಮ ನವಮಿ ನಮ್ಮ ಬೆಂಗಳೂರು ಕಛೇರಿಯಲ್ಲಿ ಅಲ್ಲದೇ ಹೈದರಾಬಾದಿನಲ್ಲಿಯೂ ಬಹಳ ಅದ್ದೂರಿಯಿಂದ ಆಚರಣೆಗೆ ರೂಢಿಯಲ್ಲಿ ಬಂದಿತು. ಆರಂಭದಲ್ಲಿ ಪ್ರಸಾದ ರೂಪದಲ್ಲಿದ್ದದ್ದು ಕಡೆಗೆ ಇಡೀ ಕಛೇರಿಯ ನಾಲ್ಕುನೂರರಿಂದ ಐದು ನೂರು ಉದ್ಯೋಗಿಗಳಿಗೆ ಹೊಟ್ಟೆ ತುಂಬುವಷ್ಟು ಒಬ್ಬಟ್ಟಿನ ಊಟದವರೆಗೂ ಬೆಳೆದಿತ್ತು. ಒಟ್ಟಿನಲ್ಲಿ, ನಾವು ಹೆದರಿದರೆ, ನಮ್ಮ ತಲೆ ಮೇಲೆ ಕೂರುವವರು ಇದ್ದೇ ಇರುತ್ತಾರೆ. ಅದೇ ನಾವು ಆದನ್ನು ಧಿಕ್ಕರಿಸಿ ನಿಂತರೆ ನಮ್ಮ ದಾರಿಗೆ ಅವರೂ ಬರುತ್ತಾರೆ ಎಂಬುದಕ್ಕೆ ಈ ಶ್ರೀರಾಮ ನವಮಿ ಸ್ಟ್ರೈಕ್ ಜ್ವಲಂತ ಉದಾಹರಣೆಯಾಗಿತ್ತು.
ಶ್ರೀರಾಮ ನವಮಿಯನ್ನು ನಮ್ಮ ಕಛೇರಿಯಲ್ಲಿ ಮಾಡುತ್ತಿದ್ದಂತೆಯೇ ಸದ್ದಿಲ್ಲದೇ ನಮ್ಮ ಕಛೇರಿಯಲ್ಲಿ ಹಿಂದೂ ವಾತಾವರಣ ಮೂಡಿದ್ದಲ್ಲದೇ, ನಮ್ಮ ಯಾವುದೇ ಹಿಂದೂ ಹೆಣ್ಣು ಮಕ್ಕಳು ಹಣೆಗೆ ಕುಂಕುಮ ಇಟ್ಟು ಕೊಳ್ಳದಿದ್ದಲ್ಲಿ ಅಥವಾ ಕೈಗೆ ಬಳೇ ಹಾಕಿಕೊಂಡು ಬಾರದೇ ಇದ್ದು, ಅಕಸ್ಮಾತ್ ಅದನ್ನು ನಾನೇದಾದರೂ ಗಮನಿಸಿದಲ್ಲಿ ಕೂಡಲೇ ಹೋ!! ಸಾರಿ ಸಾರಿ ಎಲ್ಲೋ ಬಿದ್ದು ಹೋಗಿದೆ ಎಂದು ಹೇಳಿ ಮತ್ತೆ ಹಣೆಗೆ ಬಿಂದಿ ಇಟ್ಟುಕೊಳ್ಳುವಷ್ಟರ ಮಟ್ಟಿಗಿನ ವಾತಾವರಣ ಸೃಷ್ಟಿಯಾಗಿತ್ತು. . ಇವೆಲ್ಲವೂ ಆಗ್ರಹ ಪೂರ್ವಕವಾಗಿಯೋ ಇಲ್ಲವೇ ಬಲವಂತವಾಗಿ ಹೇರದೇ ಪ್ರೀತಿ ಪೂರ್ವಕವಾಗಿ ಹೇಳಿದ ಪರಿಣಾಮವಾಗಿತ್ತು. ಅರೇ ಗಂಡಸಾಗಿ ನಾನೇ ಹಣೆಗೆ ತಪ್ಪದೇ ಕುಂಕುಮ ಇಟ್ಟು ಕೊಳ್ಳುತ್ತೇನೆ. ಕಿವಿಗೆ ಕರ್ಣ ಕುಂಡಲಗಳಿವೆ. ಸಣ್ಣದಾದ ಶಿಖೆ ಇದೆ. ಇನ್ನು ಹೆಣ್ಣು ಮಕ್ಕಳಾಗಿ ನೀವೇ ಇಟ್ಟು ಕೊಳ್ಳದೇ ಹೋದರೆ ಹೇಗೇ ಎಂದು ಭಾವನಾತ್ಮಕವಾಗಿ ಅವರನ್ನು ಕಿಚಾಯಿಸುತ್ತಿದ್ದೆ. ಆರಂಭದಲ್ಲಿ ಒಂದಿಬ್ಬರು ಕಮಿಕ್ ಕಿಮಿಕ್ ಎಂದರೂ ನಂತರ ಅವರಿಗೆ ನಮ್ಮ ಭಾವನೆಗಳು ಅರ್ಥವಾಗಿ ಮನಃಪೂರ್ವಕವಾಗಿ ಅವರೆಲ್ಲರೂ ಸ್ಪಂದಿಸಿದ್ದರು.
ಸುಮಾರು ಹತ್ತು ವರ್ಷಗಳ ಕಾಲ ಆ ಕಂಪನಿಯಲ್ಲಿ ಕೆಲಸ ಮಾಡಿ ಆ ಕಂಪನಿ ಬಿಟ್ಟು ಸುಮಾರು ಹತ್ತು ವರ್ಷಗಳಾದರೂ ಇಂದಿಗೂ ಆ ಕಂಪನಿಯ ಮಾಜೀ ಸಯೋದ್ಯೋಗಿಗಳ ಪ್ರತಿಯೊಂದು ಶುಭ ಮತ್ತು ಅಶುಭಕಾರ್ಯಗಳಲ್ಲಿ ಬಹುತೇಕರೆಲ್ಲರೂ ಭಾಗಿಗಳಾಗುವ ಮೂಲಕ ಅದೇ ಭಾವನಾತ್ಮಕ ಸಂಬಂಧಗಳನ್ನು ಉಳಿಸಿಕೊಂಡು ಬೆಳಸಿಕೊಂಡು ಹೋಗಿದ್ದೇವೆ ಮತ್ತು ಪ್ರತೀ ಬಾರಿ ಭೇಟಿಯಾದಾಗಲೂ ನಮ್ಮ ಶ್ರೀರಾಮನವಮಿಯ ಆಚರಣೆಯ ಬಗ್ಗೆ ಒಂದಾದರೂ ಮಾತಾನಾಡುತ್ತೇವೆ. ಹೀಗೆ ಅಂದು ಗಟ್ಟಿ ಮನಸ್ಸು ಮಾಡಿ ಎಲ್ಲರೂ ಸೇರಿ ಮಾಡಿದ್ದ ಶ್ರೀರಾಮನವಮಿ ಸ್ಟ್ರೈಕ್ ಇಂದಿಗೂ ಉತ್ತಮ ಫಲಿತಾಂಶವನ್ನು ನೀಡುತ್ತಲಿದೆ. ನಾವು ಎಲ್ಲೇ ಇರಲಿ, ನಾವೆಲ್ಲರೂ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಗಳ ರಾಯಭಾರಿಗಳು ಹಾಗಾಗಿ ಅದನ್ನು ಉಳಿಸಿ ಬೆಳಸುವ ಗುರುತರ ಜವಾಬ್ಧರಿ ನಮ್ಮದೇ ಅಗಿರುತ್ತದೆ ಎನ್ನುವುದನ್ನು ಆ ಶ್ರೀರಾಮ ನವಮಿ ನೆನಪಿಸುತ್ತಲೇ ಇರುತ್ತದೆ.
ಏನಂತೀರೀ?
ನಿಮ್ಮವನೇ ಉಮಾಸುತ
👌👌👌
“ವಸುಧೈವ ಕುಟುಂಬಕಂ” ಎಂದ ಸಂಸ್ಕೃತಿ ನಮ್ಮದು. “ಸರ್ವೇ ಭವಂತು ಸುಖಿನಃ” ಎಂದವರು ನಾವು. ಸಮಸ್ತ ಸೃಷ್ಟಿಗೇ ಒಳಿತನ್ನು ಬಯಸುವ ನಮ್ಮ ಆಚರಣೆಗಳನ್ನು ನಾವಿರುವೆಡೆಯಲ್ಲೆಲ್ಲ ಪಸರಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ನಿಮ್ಮ ಈ ಕಾರ್ಯ ಶ್ಲಾಘನೀಯ.
ಪ್ರಭು ಶ್ರೀ ರಾಮ ಎಲ್ಲರಿಗೂ ಒಳಿತನ್ನು ಮಾಡಲಿ.
ಅಭಿನಂದನೆಗಳು.
ಶುಭಾಶಯಗಳು.
🙏🙏🙏
LikeLiked by 1 person
ನಿಜ ಸರ್. ಇಂತಹ ಕಾರ್ಯಕ್ಕೆ ಮುಂದಾಗಿ ಎಲ್ಲರೂ ಕೈ ಜೋಡಿಸಿದಲ್ಲಿ ನಮ್ಮ ಸಂಪ್ರದಾಯ ಸಂಸ್ಕೃತಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ
LikeLike