ಹೇಳಿ ಕೇಳಿ ಇದು ಬೇಸಿಗೆ ಕಾಲ ಬಿಸಿಲು ಬಹಳವಿರುವ ಕಾರಣ ಈ ಸಮಯದಲ್ಲಿ ದೇಶವನ್ನು ತಂಪಾಗಿ ಮತ್ತು ಸಧೃಢವಾಗಿ ಇಟ್ಟುಕೊಳ್ಳಬೇಕಾಗಿದೆ. ಹಾಗಾಗಿ ತೆಂಗಿನ ಮರ ಕಲ್ಪವೃಕ್ಷವಾದರೆ, ಬಾಳೆ ಗಿಡವನ್ನು ಕಾಮಧೇನು ಎಂದರೂ ತಪ್ಪಾಗದು. ತೆಂಗಿನ ಮರದಂತೆಯೇ, ಬಾಳೇಗಿಡದ ಪ್ರತಿಯೊಂದು ಭಾಗವೂ ಹಲವಾರು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಬಾಳೇ ಹೂವು, ಬಾಳೇಕಾಯಿ, ಬಾಳೇಹಣ್ಣು, ಬಾಳೇ ದಿಂಡುಗಳ ಮೂಲಕ ಬಗೆ ಬಗೆಯ ಖಾದ್ಯವನ್ನು ತಯಾರಿಸಬಹುದಾದರೆ, ಬಾಳೇ ಪಟ್ಟೆಯಲ್ಲಿ ನಾರು ತೆಗೆಯುವುದಕ್ಕೆ, ಮತ್ತು ವಸ್ತುಗಳನ್ನು ಪ್ಯಾಕ್ ಮಾಡಲು ಬಳಸ ಬಹುದಾಗಿದೆ. ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು ಪ್ರದೇಶಗಳಲ್ಲಿ ಹೆಚ್ಚಿನವರು ಮಾಡುವ ಆರೋಗ್ಯಕರವಾದ ಬಾಳೇ ದಿಂಡು ಮತ್ತು ಹೆಸರುಬೇಳೆ ಕೋಸಂಬರಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಬಾಳೇ ದಿಂಡು ಕೋಸಂಬರಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಬಾಳೇ ದಿಂಡು – 1
- ಹೆಸರುಬೇಳೆ 1/4 ಬಟ್ಟಲು
- ಹಸಿರು ಮೆಣಸಿನಕಾಯಿಗಳು – 3-4 (ನಿಮ್ಮ ಖಾರಕ್ಕೆ ಅನುಗುನವಾಗಿ)
- ತೆಂಗಿನಕಾಯಿ ತುರಿ – 1/4 ಬಟ್ಟಲು
- ನಿಂಬೆ ರಸ – 1 ಚಮಚ
- ಕರಿಬೇವಿನ ಎಲೆಗಳು 4-6
- ಕತ್ತರಿಸಿದ ಕೊತ್ತಂಬರಿ ಸೊಪ್ಪು
ಒಗ್ಗರಣೆಗಾಗಿ ಬೇಕಾಗುವ ಸಾಮಗ್ರಿಗಳು
- ಅಡುಗೆ ಎಣ್ಣೆ – 1 ಚಮಚ
- ಸಾಸಿವೆ – 1/2 ಚಮಚ
- ಉದ್ದಿನ ಬೇಳೆ – 1/2 ಚಮಚ
- ಕಡಲೇ ಬೇಳೆ – 1/2 ಚಮಚ
- ಸ್ವಲ್ಪ ಇಂಗು
- ರುಚಿಗೆ ತಕ್ಕಷ್ಟು ಉಪ್ಪು
ಬಾಳೇ ದಿಂಡು ಕೋಸಂಬರಿ ತಯಾರಿಸುವ ವಿಧಾನ ತಯಾರಿಸುವ ವಿಧಾನ
- ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಅರ್ಧ ಮುಕ್ಕಾಲು ಗಂಟೆ ನೀರಿನಲ್ಲಿ ನೆನೆಯಲು ಬಿಡಿ
ಬಾಳೆ ದಿಂಡನ್ನು ಸಣ್ಣ ಸಣ್ಣದಾಗಿ ನಾರಿಲ್ಲದಂತೆ ಕತ್ತರಿಸಿಕೊಳ್ಳಿ - ಸಣ್ಣ ಬಾಣಲೆಯನ್ನು ತೆಗೆದುಕೊಂದು ಅದರಲ್ಲಿ ಒಂದು ಚಮಚ ಅಡುಗೆ ಎಣ್ಣೆ ಹಾಕಿ ಸಾಸಿವೆ ಮತ್ತು ಇಂಗನ್ನು ಹಾಕಿ ಚಟ ಪಟ ಸಿಡಿದ ನಂತರ ಅದಕ್ಕೆ ಉದ್ದಿನ ಬೇಳೆ ಮತ್ತು ಕಡಲೇ ಬೇಳೆ, ಕತ್ತರಿಸಿದ ಕರಿಬೇವು ಮತ್ತು ಹಸೀ ಮೇಣಸಿನಕಾಯಿಯನ್ನು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ.
- ಹೆಸರು ಬೇಳೆ ಚೆನ್ನಾಗಿ ನೆನದ ನಂತರ ನೀರನ್ನು ಬಸಿದು ಅದಕ್ಕೆ ಕತ್ತರಿಸಿದ ಬಾಳೇ ದಿಂಡನ್ನು ಸೇರಿಸಿ ಅದಕ್ಕೆ ತುರಿದ ತೆಂಗಿನ ತುರಿ, ಮಾಡಿಟ್ಟುಕೊಂಡ ಒಗ್ಗರಣೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ.
- ಈಗ ಅದಕ್ಕೆ ನಿಂಬೇ ಹಣ್ಣು ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿ ರುಚಿಯಾದ ಮತ್ತು ಆರೋಗ್ಯಕರವಾದ ಬಾಳೇ ದಿಂಡಿನ ಕೋಸಂಬರಿ ಸವಿಯಲು ಸಿದ್ಧ.
ಈ ಕೋಸಂಬರಿಯನ್ನು ದೋಸೆ, ಚಪಾತಿ ಜೊತೆ ನೆಂಚಿಕೊಂಡು ತಿನ್ನಬಹುದಲ್ಲದೇ, ಸಂಜೆಯ ಹೊತ್ತಿಗೆ ಹಾಗೆಯೂ ತಿನ್ನಬಹುದಾಗಿದೆ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ನಿಮ್ಮವನೇ ಉಮಾಸುತ
ಮನದಾಳದ ಮಾತು : ಬಾಳೆ ದಿಂಡಿನಲ್ಲಿ ನಾರಿನಂಶ, ಪೊಟ್ಯಾಸಿಯಮ್ ಮತ್ತು ಹಲವಾರು ವಿಟಮಿನ್ ಇರುವ ಸಮೃದ್ಧ ಆಹಾರವಾಗಿದೆ. ಬಾಳೇ ದಿಂಡನ್ನು ನಿಯಮಿತವಾಗಿ ಬಳಸುವುದರಿಂದ ಮೂತ್ರಕೋಶದಲ್ಲಿರುವ ಕಲ್ಲು ಮತ್ತು ಗೊತ್ತಿಲ್ಲದೇ ಹೊಟ್ಟೆಯಲ್ಲಿ ಸೇರಿಕೊಂಡಿರುವ ಕೂದಲನ್ನು ಅರಗಿಸಲು ಸಹಾಯ ಮಾಡುತ್ತದೆ, ತೂಕ ಇಳಿಸಿಕೊಳ್ಳಲೂ ಸಹಾ ಬಾಳೇ ದಿಂಡು ಅತ್ಯುತ್ತಮ ಪದಾರ್ಥವಾಗಿದೆ.
ಸಾಥಾರಣವಾಗಿ ಬಹುತೇಕರು ಬಾಳೇ ದಿಂಡನ್ನು ಬಿಲ್ಲೆಯಾಕಾರದಲ್ಲಿ ಹೆಚ್ಚಿಕೊಂಡು ಪ್ರತಿಬಾರಿ ಬೆರಳಿನಲ್ಲಿ ನಾರನ್ನು ತೆಗೆದು ಸಣ್ಣ ಸಣ್ಣದಾಗಿ ಹೆಚ್ಚುತ್ತಾರೆ. ಇದರ ಬದಲು ಬಾಳೇ ದಿಂಡನ್ನು ಉದ್ದುದ್ದವಾಗಿ ಸೀಳಿ ನಂತರ ಅದನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಪಾತ್ರೆಯಲ್ಲಿದ್ದ ನೀರಿಗೆ ಹಾಕಿ, ಆ ನೀರಿನಲ್ಲಿ ಒಂದು ಸಣ್ಣ ಹಂಚೀ ಕಡ್ಡಿಯನ್ನು ಚೆನ್ನಾಗಿ ವೃತ್ತಾಕಾರವಾಗಿ ತಿರುಗಿಸಿದಲ್ಲಿ ನಾರೆಲ್ಲಾ ಕಡ್ಡಿಗೆ ಅಂಟಿಕೊಳ್ಳುತ್ತದೆ ಈ ಮೂಲಕ ನಾರನ್ನು ಸುಲಭವಾಗಿ ತೆಗೆಯಬಹುದಾಗಿದೆ.
ಕತ್ತರಿಸಿದ ಬಾಳೇ ದಿಂದು ಕಂದು ಬಣ್ಣವಾಗುವುದನ್ನು ತಪ್ಪಿಸಲು ನೀರಿಗೆ ಒಂದೆರಡು ಚಮಚ ಮಚ್ಚಿಗೆ ಅಥವಾ ಸ್ವಲ್ಪ ನಿಂಬೇ ರಸವನ್ನು ಬೆರಸಿದಲ್ಲಿ ಬಾಳೇ ದಿಂಡು ಬಣ್ಣಗೆಡುವುದಿಲ್ಲ.
ಕರುಂ ಕುರುಂ ಎಂಬ ಸದ್ದು ಕೇಳುತ್ತದೆ ಈ ಖಾದ್ಯ ತಿನ್ನುವಾಗ…ನನಗಂತೂ ಬಹಳ ಇಷ್ಟ..ಆದರೆ ನಮ್ಮ ಮನೆಯಲ್ಲಿ ತಿಥಿ ವೈದೀಕ ದಿನಗಳಲ್ಲಿ ಮಾತ್ರ ಬಾಳೆ ದಿಂಡು ಬಳಸುವ ಪದ್ಧತಿ..ಆದರೆ ಬಸುರಿ ಹೆಣ್ಣು ಮಕ್ಕಳಿಗೆ ನಿಷಿದ್ಧ ಎಂದು ಕೇಳಿದ್ದೇನೆ…
LikeLiked by 1 person
ಬಾಳೆದಿಂಡಿನಲ್ಲಿ ಚಟ್ನಿ ಸಹಮಾಡಬಹುದು ತುಂಬಾಚೆನ್ನಾಗಿರುತ್ದೆ , ಬಳೆ ಹೂವು( ಮಾತೆ ಅಂತಲೂ ಕರೆಯುತ್ತಾರೆ ಇದರಲ್ಲಿ ಸಹ ಗೊಜ್ಜು ಮಾಡುತ್ತಾರೆ ಪ್ರತ್ಯೇಕ ವಾಗಿ ವ್ಯದೀಕ ದಂದುಬಾಳೆ ದಿಂಡಿ ಮತ್ತು ಬಾಳೆ ಮಾತೆ ಇದರ ಗೊಜ್ಜು ಮಾಡಲೇಬೇಕು ಮನೆಯಲ್ಲಿ ಅದು ಹಳ್ಳಿಗಳಲ್ಲಿ ನಮ್ಮ್ ಪಿತ್ರು ಗಳ ವೇದೀಕ ಮಾಡುತ್ತಿದ್ದಾಗ ಇದು ಬೇಕೇಬೇಕು ಎರಡು ಗೊಜ್ಜುಗಳ ರುಚಿ ತುಂಬಾಚನ್ನಾಗಿರುತ್ತದೆ
ಬಾಕಿದಿನಗಳಲ್ಲಿ ಸಹ ಮಾಡಬಹುದು ಎಂದು ನಾನುತಿಳಿದಿರುತ್ತೇನೆ
ಆದರೆ ವೈದೀಕ ದಂದು ದಿಂಡು ಮತ್ತು ಮಾತೆ ಎರಡನ್ನು ಮನೆಗೆ ತರಬಹುದು
ಬಾಕಿದಿವಸಗಳಲ್ಲಿ ಎರಡನ್ನು ಒಟ್ಟಿಗೆ ಮನೆಗೆ ತರಬಾರದು ಎಂದು ನಮ್ಮ ತಂದೆ ಹೇಳುತ್ತಿದ್ದರು ಕಾರಣ ಮಾತ್ರ ಕೇಳಬಾರದು ಎಂದು ಹೇಳುತ್ತಿದ್ದರು
LikeLiked by 1 person