ರತ್ನಗಿರಿ ಅಲ್ಫೊನ್ಸೊ ಮಾವಿನಹಣ್ಣು

ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತೀಳೆ

ಬೀದರ ಜಿಲ್ಲೆಯ ಸೀಬೆಯ, ಹಣ್ಣು ಬೆಂಗಳೂರಿನ ಸೇಬಿನ ಹಣ್ಣು ||

ಕೊಳ್ಳಿರಿ ಹಿಗ್ಗನು ಹರಿಸುವವು,ಕಲ್ಲುಸಕ್ಕರೆಯ ಮರೆಸುವವು

ಕೊಳ್ಳಿರಿ ಮಧುಗಿರಿ ದಾಳಿಂಬೆ, ಬೆಳವಲ ಬಯಲಿನ ಸಿಹಿಲಿಂಬೆ ||

ಬೆಳಗಾವಿಯ ಸವಿ ಸಪೋಟ. ದೇವನಹಳ್ಳಿಯ ಚಕ್ಕೋತ

ನಾಲಿಗೆ ಬರವನು ಕಳೆಯುವವು, ದೇಹದ ಬಲವನು ಬೆಳೆಸುವವು ||

ಗಂಜಾಮ್ ಅಂಜೀರ್, ತುಮಕೂರ್ ಹಲಸು, ಧಾರವಾಡದ ಆಪೂಸು, ಮಲೆನಾಡಿನ ಅನಾನಸು

ಸವಿಯಿರಿ ಬಗೆಬಗೆ ಹಣ್ಣುಗಳ ಕನ್ನಡ ನಾಡಿನ ಹಣ್ಣುಗಳ ||

mango2

ಸದ್ಯಕ್ಕೆ ಆಡಳಿತಾತ್ಮಕವಾಗಿ ಕೇರಳದ ಭಾಗವಾಗಿದ್ದರೂ ಅಪ್ಪಟ್ಟ ಕನ್ನಡಿಗರೇ ಇರುವ ಕಾಸರಗೋಡಿನ ಹೆಮ್ಮೆಯ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರು ಬರೆದಿದ್ದ ಕನ್ನಡನಾಡಿನ ಹಣ್ಣುಗಳ ಹಾಡು ಎಪ್ಪತ್ತರ ದಶಕದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಬಹುತೇಕರಿಗೆ ಕಂಠ ಪಾಟವಾಗಿರಲೇ ಬೇಕು. ಕಾಲಕಾಲಕ್ಕೆ ತಕ್ಕಂತೆ ಮತ್ತು ಸ್ಥಳೀಯ ಹವಾಗುಣಕ್ಕೆ ಅನುಗುಣವಾಗಿ ಹಣ್ಣುಗಳನ್ನು ಬೆಳೆಯುತ್ತವೆ. ಬೇಸಿಗೆ ಕಾಲ ಬಂತೆದರೆ ಸಾಕು, ಬಗೆ ಬಗೆಯ ಹಣ್ಣುಗಳು ಮಾರುಕಟ್ಟೆಯಲ್ಲಿ ಎಲ್ಲರ ನಾಲಿಗೆಯ ಬರವನ್ನು ನೀಗಿಸಲು ಲಭ್ಯವಿರುತ್ತದೆ.

mango1

ಅದರಲ್ಲೂ ಹಣ್ಣುಗಳ ರಾಜ ಮಾವಿನ ಹಣ್ಣು ಮತ್ತು ದೈತ್ಯಾಕಾರದ ಹಲಸಿನಹಣ್ಣು ಈ ಎರಡೂ ಹಣ್ಣುಗಳು ಬೇಸಿಗೆ ಕಾಲದಲ್ಲಿ ಲಭ್ಯವಿರುತ್ತದೆ. ಅದಕ್ಕಾಗಿಯೇ ಹಸಿದು ಹಲಸಿನಹಣ್ಣು ತಿನ್ನು, ಉಂಡು ಮಾವಿನ ಹಣ್ಣು ತಿಂದು ಎಂಬ ಗಾದೆಯ ಮಾತಿದ್ದರೆ, ಅದಕ್ಕೆ ಅನುಗುಣವಾಗಿ ಹಿಸಿದು ಹಲಸಿನ ಹಣ್ಣು ತಿನ್ನು, ಉಂಡೇ ಮಾವಿನ ಹಣ್ಣು ತಿನ್ನು ಎನ್ನುವ ಮತ್ತೊಂದು ಗಾದೆಯ ಮಾತೂ ಪ್ರಚಲಿತದಲ್ಲಿದೆ. ಒಟ್ಟಿನಲ್ಲಿ ಹಸಿದೋ, ಇಲ್ಲವೇ ಹಿಸಿದೋ (ಬಿಡಿಸಿದ) ಉಂಡಾದ ನಂತರವೋ ಇಲ್ಲವೇ, ಉಂಡೇಯಾಗಿಯೋ (ಇಡೀ ಮಾವಿನ ಹಣ್ಣು) ಕಾಲ ಕಾಲಕ್ಕೆ ಸಿಗುವ ಹಣ್ಣುಗಳನ್ನು ತಿಂದು ಸಧೃಢರಾಗಿರಿ ಎಂಬುದಷ್ಟೇ ನಮ್ಮ ಹಿರಿಯರ ಆಶಯವಾಗಿತ್ತು ಎಂದರೂ ತಪ್ಪಾಗದು.

ಎಷ್ಟೋಂದು ಬಗೆಯ ಹಣ್ಣುಗಳಿದ್ದರೂ ಅದೇಕೋ ಏನೋ ಮಾವಿನ ಹಣ್ಣಿಗೆ ಮಾತ್ರ, ಹಣ್ಣುಗಳ ರಾಜನ ಪಟ್ಟ ಕಟ್ಟಲಾಗಿದೆ. ಬಹುಶಃ ಕೇಸರಿ ಮತ್ತು ಹಳದಿ ಮಿಶ್ರಿತ ಅದರ ಆಕರ್ಷಕ ಬಣ್ಣ, ಸಿಹಿಯಾದ ಅದರ ರುಚಿ ಮತ್ತು ಅದರಲ್ಲಿರುವ ಪೋಷಕಾಂಶಗಳು ಇರುವ ಕಾರಣ ಆ ಪಟ್ಟ ಬಂದಿರಬಹುದೇನೋ?

ಮಾವಿನ ಎಲೆ, ಮರ, ಮಾವಿನ ಕಾಯಿ, ಮಾವಿನ ಹಣ್ಣು, ಕಡೆಗೆ ಮಾವಿನ ಹಣ್ಣಿನ ವಾಟೆಯೂ(ಗೊರಟೆ) ನಮ್ಮ ಸಂಸ್ಕೃತಿಯ ಅವಿನಾಭಾವ ಸಂಬಂಧವಿದೆ. ಮನೆಯಲ್ಲಿ ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿಯೂ ಮಾವಿನ ಸೊಪ್ಪಿನ ತಳಿರು ತೋರಣವಿರಲೇ ಬೇಕು. ಕಳಸ ಸ್ಥಾಪನೆ ಮಾಡುವುದಕ್ಕೂ ಮತ್ತು ಪೂಜೆಯ ನಂತರ ಕಳಸದ ನೀರನ್ನು ಪ್ರೋಕ್ಷಿಸುವುದಕ್ಕೂ ಮಾವಿನ ಸೊಪ್ಪು ಅತ್ಯಾವಶ್ಯಕ. ಇನ್ನು ಮಾವಿನರ ಮರ ಮಟ್ಟುಗಳಿಂದ ಮನೆಯ ಕಿಟಕಿ ಬಾಗಿಲುಗಳನ್ನು ಮಾದಿಸಿಕೊಳ್ಳಲಾಗುತ್ತದೆ. ಮಾವಿನ ಕಾಯಿಯಂತೂ ನಮ್ಮ ಅಡಿಗೆ ಮನೆಯಲ್ಲಿ ಶಾಶ್ವತವಾದ ಸ್ಥಾನ ಪಡೆದಿದೆ. ಮಾವಿನ ಕಾಯಿಯ ತಂಬುಳಿ, ಮಾವಿನ ಕಾಯಿ ಚಿತ್ರಾನ್ನ, ಕಾಯಿಸಾಸಿವೆ ಅನ್ನ, ಮಾವಿನ ಕಾಯಿ ಗೊಜ್ಜು, ಅಪ್ಪೇ ಸಾರು, ಮಾವಿನ ಕಾಯಿಯ ಉಪ್ಪಿನ ಕಾಯಿಯಂತೂ ವರ್ಷವಿಡೀ ಇರುತ್ತದೆ, ಮಾವಿನ ಹಣ್ಣನ್ನು ಹಾಗೆಯೇ ತಿನ್ನಲು ಮಜವಾಗಿದ್ದರೆ, ಇನ್ನೂ ಕೆಲವರು ಮಾವಿನ ಹಣ್ಣಿನ ಮೊರಬ್ಬಾ, ಜ್ಯಾಮ್, ಸೀಕರಣೆ, ಲಸ್ಸೀ ಹೀಗೆ ಬಗೆ ಬಗೆಯ ರೀತಿಯಲ್ಲಿ ಸಂಗ್ರಹಿಸಿಟ್ಟುಕೊಂಡು ವರ್ಷವಿಡೀ ಮಾವಿನ ಹಣ್ಣುಗಳನ್ನು ಸೇವಿಸಲಾಗುತ್ತದೆ.

ಪುರಾಣದಲ್ಲೂ ಮಾವಿನ ಹಣ್ಣಿನ ಉಲ್ಲೇಖವಿದ್ದು ಮಹಾಭಾರತದಲ್ಲಿ ಅಭಿಮನ್ಯುವಿನ ಮಗ ಪರೀಕ್ಷಿತ ರಾಜನಿಗೆ ಮೃತ್ಯು ಬಂದಿದ್ದೂ ಕೂಡಾ ಮಾವಿನ ಹಣ್ಣಿನಲ್ಲಿದ್ದ ತಕ್ಷಕ ಎಂಬ ನಾಗನಿಂದಲೇ ಎಂಬ ಕಥೆ ಇದೆ.

ಮಾವಿನಹಣ್ಣಿನಲ್ಲಿರುವ ವಿವಿಧ ಪೋಷಕಾಂಶಗಳು ಹೆಂಗಸರ ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ರಕ್ತದ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತವೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾವಿನಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ಕರಗುವ ನಾರು ಮತ್ತು ಪೆಕ್ಟಿನ್ ಇದ್ದು, ಇವೆಲ್ಲವೂ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟಗಳು ಆರೋಗ್ಯಕರ ಮಿತಿಗಳಲ್ಲಿ ಇರುವಂತೆ ನಿಯಂತ್ರಿಸಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಮಾವಿನ ಹಣ್ಣುಗಳನ್ನು ಸೇವಿಸುವುದರಿಂದ ತ್ವಚೆಯ ಶುದ್ಧೀಕರಣಕ್ಕೆ ಪೂರಕವಾಗಿದೆ. ಮಾವಿನ ಹಣ್ಣಿನಲ್ಲಿ ಅತ್ಯಂತ ಸಿಹಿ ಅಂಶವಿದ್ದರೂ, 5-6 ಮಾವಿನ ಎಲೆಗಳನ್ನು ಕುದಿಸಿ ಅದನ್ನು ಶೋಧಿಸಿ ನಿರಂತರವಾಗಿ ಸೇವಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ. ಕೆಲವೊಂದು ಮಾವಿನ ಕಾಯಿಗಳಲ್ಲಿ ಟಾರ್ಟಾರಿಕ್ ಆಮ್ಲ, ಮಾಲಿಕ್ ಆಮ್ಲ ಮತ್ತು ಲಿಂಬೆಯಲ್ಲಿರುವ ಸಿಟ್ರಿಕ್ ಆಮ್ಲದ ಹುಳಿಯ ಅಂಶ ಇರುವ ಕಾರಣ ಆಡುಗೆಯಲ್ಲಿ ಹುಣಸೇ ಹಣ್ಣು ಅಥವಾ ನಿಂಬೇಹಣ್ಣಿಗ ಬದಲಿಗೆ ಮಾವಿನ ಕಾಯಿಯನ್ನು ತುರಿದೂ ಸಹಾ ಬಳಸಲಾಗುತ್ತದೆ. ಒಂದು ಇಡೀ ಮಾವಿನಹಣ್ಣನ್ನು ತಿಂದಾಗ, ತಕ್ಷಣವೇ ಹೊಟ್ಟೆ ತುಂಬಿದ ಅನುಭವವಾಗುವ ಕಾರಣ, ಬೇರೆ ಆಹಾರವನ್ನು ತಿನ್ನಲು ಮನಸ್ಸಾಗುವುದಿಲ್ಲ. ಇದರಲ್ಲಿ ಕರಗುವ ನಾರು ಸಹಾ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ದೇಹದಲ್ಲಿ ಹೆಚ್ಚಿಗಿರುವ ಕ್ಯಾಲೋರಿಗಳನ್ನು ಬಳಸಿಕೊಳ್ಳುವ ಕಾರಣ, ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಇದು ಸಹಕಾರಿಯಾಗಿದೆ.

ಮಾವಿನ ಹಣ್ಣನ್ನು ತಿನ್ನುವುದರಿಂದ ಬಿಸಿಲಿನ ಬೇಗೆಯಿಂದ ಬೆಂದಿದ್ದ ದೇಹವನ್ನು ತಕ್ಷಣವೇ ತಂಪಾಗಿಸುತ್ತದೆ ಮತ್ತು ಮಾವಿನಲ್ಲಿರುವ ಸಕ್ಕರೆ ಮತ್ತು ಇತರ ಪೋಷಕಾಂಶಗಳು ದೇಹವನ್ನು ಉಲ್ಲಾಸಗೊಳಿಸುವ ಕಾರಣ ದೇಹಕ್ಕೇ ತಕ್ಷಣದ ಆರಾಮವನ್ನು ಕೊಡುವ ಕಾರಣ ಇದು ಬೇಸಿಗೆ ಕಾಲದ ಶಾಖದ ಹೊಡೆತವನ್ನು ತಡೆಗಟ್ಟಲು ಪರಿಣಾಮಕಾರಿಯಾಗಿದೆ.

mango6

ಇಂತಹ ಬಹುಯೋಗಿ ಪರಿಪೂರ್ಣ ಹಣ್ಣಾದ ಮಾವಿನ ಹಣ್ಣನ್ನು ಕರ್ನಾಟದಕದ ಕೋಲಾರ ಮತ್ತು ಅದಕ್ಕೆ ಅಂಟಿಕೊಂಡಿರುವ ಮದನಪಲ್ಲಿ ಚಿಲ್ಲೆಗಳಲ್ಲಿ ಹೆಚ್ಚಾಗಿ ಬಗೆ ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಾರಾದರೂ ಪಾಶ್ಚಿಮಾತ್ಯ ಭಾರತದಲ್ಲಿ ಹ್ಯಾಪಸ್ ಕನ್ನಡದಲ್ಲಿ ಅಪೂಸು ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅಲ್ಫೊನ್ಸೊ ಮಾವಿನ ಹಣ್ಣನಿಗೆ ಮಾತ್ರಾ ಮಾವಿನ ಹಣ್ಣುಗಳಲ್ಲೇ ರಾಜ ಎಂಬ ಕೀರ್ತಿಗೆ ಪಾತ್ರವಾಗಿದೆ. ಉಳಿದೆಲ್ಲಾ ಹಣ್ಣುಗಳು ಕಾಸಿಗೊಂದು ಕೊಸರಿಗೊಂದು ಬೆಲೆಗೆ ಲಭ್ಯವಿದ್ದರೆ, ಅಲ್ಫೊನ್ಸೊ ಹಣ್ಣುಗಳಿಗೆ ಮಾತ್ರಾ ಚಿನ್ನದ ಬೆಲೆಯಿದೆ.

mango8

ಈ ಅಲ್ಫೊನ್ಸೊ ಹಣ್ಣು ಅಪ್ಪಟ ಭಾರತದದ್ದಾದರೂ ತನ್ನ ಅದ್ಭುತ ರುಚಿ ಮತ್ತು ವಿದೇಶೀ ಹೆಸರಿನಿಂದಾಗಿ ಪ್ರಪಂಚಾದ್ಯಂತ ಹೆಸರುವಾಸಿಯಾಗಿದೆ. ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಸುಮಾರು 65,000 ಎಕರೆಗೂ ಹೆಚ್ಚು ಭೂಮಿಯಲ್ಲಿ ಬೆಳೆಯುವ ಮಾವಿನ ಹಣ್ಣಿಗೆ ದೇಶ ವಿದೇಶಗಳ್ಳಿ ಹೆಚ್ಚಿನ ಬೇಡಿಕೆ ಇದೆ. ರತ್ನಗಿರಿಯ ಬಿಸಿ ಮತ್ತು ಆರ್ದ್ರ ಗಾಳಿ ಮತ್ತು ಅದರ ಕೆಂಪು ಮಣ್ಣು ಮಾವಿನ ಕೃಷಿಗೆ ಹೇಳಿಮಾಡಿಸಿದಂತಿದ್ದು, ಅಲ್ಲಿನ ಪರ್ವತದ ಇಳಿಜಾರುಗಳಲ್ಲಿ ನೀರು ಸರಾಗವಾಗಿ ಹರಿಯುವ ಮೂಲಕ ಅಲ್ಲಿನ ಹವಾಮಾನ ಮಾವಿನ ಕೃಷಿಗೆ ಪೂರಕವಾಗಿದೆ ಎಂದರೂ ತಪ್ಪಾಗಲಾರದು.

ನಮ್ಮ ವೇದ ಉಪನಿಷತ್ತುಗಳು, ಮೌರ್ಯ ಶಾಸನಗಳು ಮತ್ತು ಮೊಘಲ್ ವೃತ್ತಾಂತಗಳಲ್ಲಿ ಮಾವಿನಹಣ್ಣಿನ ಬಗ್ಗೆ ಉಲ್ಲೇಖವಿದ್ದು ಅಪ್ಪಟ ಭಾರತೀಯ ತಳಿಯಾಗಿದ್ದರೂ ಅಲ್ಫೊನ್ಸೊ ಎಂಬ ವಿದೇಶೀ ಹೆಸರನ್ನು ಮಾವಿನ ಹಣ್ಣಿಗೆ ಇಡಲು ಒಂದು ರೋಚಕ ಕಥೆ ಮತ್ತು ವ್ಯಥೆಯೂ ಇದೆ.

mango7

15 ನೇ ಶತಮಾನದಲ್ಲಿ ಸಾಂಬಾರು ಪದಾರ್ಥಗಳ ವ್ಯಾಪಾರಕ್ಕೆಂದು ಬಂದ ಪೋರ್ಚುಗೀಸರು ಇಲ್ಲಿನ ಹವಾಮಾನ, ಪ್ರಕೃತಿ ಸಂಪತ್ತುಗಳಿಗೆ ಮಾರುಹೋಗಿ, ಗೋವಾವನ್ನು ವಶಪಡಿಸಿಕೊಳ್ಳುವ ಮೂಲಕ ಏಷ್ಯಾದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ಅಡಿಪಾಯವನ್ನು ಹಾಕುತ್ತಾರೆ, ಹಾಗೆ ಪೋರ್ಚುಗೀಸರ ವೈಸ್‌ರಾಯ್ ಆಗಿ ಬಂದ ಅಲ್ಫೊನ್ಸೊ ಡಿ ಅಲ್ಬುಕರ್ಕ್ (ಕ್ರಿ.ಶ. 1453-1515) ಅವರ ಹೆಸರನ್ನೇ ಈ ಸುಂದರ ಮತ್ತು ರುಚಿಕರ ಮಾವಿನ ಹಣ್ಣಿಗೆ ಇಡುತ್ತಾರೆ. ಸಸ್ಯಶಾಸ್ತ್ರೀಯವಾಗಿ ಮ್ಯಾಂಗಿಫೆರಾ ಇಂಡಿಕಾ ಎಂದು ಕರೆಯಲ್ಪಡುವ ಅಪ್ಪಟ ಭಾರತದ ದೇಸೀ ಹಣ್ಣು ಈ ರೀತಿಯಾಗಿ ವಿದೇಶೀ ಹೆಸರನ್ನು ಪಡೆದುಕೊಂಡಿದ್ದರೂ, ತನ್ನ ಬಣ್ಣ, ಸುವಾಸನೆ ಮತ್ತು ರುಚಿಯ ಮೂಲಕ ಅಪ್ಪಟ ದೇಸೀ ತಳಿಯಾಗಿಯೇ ಪ್ರಸಿದ್ಧಿಯನ್ನು ಪಡೆದಿದೆ

ಗಟ್ಟಿಯಾಗಿದ್ದ ಮತ್ತು ಬಹುದಿನಗಳ ಕಾಲ ಕೆಡದಂತೆ ಇಡಬಹುದಾಗಿದ್ದ ಈ ಆಲ್ಪೊನ್ಸೊ ಹಣ್ಣುಗಳನ್ನು ಪೋರ್ಚುಗೀಸರು ಯುರೋಪಿಗೆ ರಫ್ತು ಮಾಡುವ ಮೂಲಕ ಈ ಹಣ್ಣಿಗೆ ಅಂತರಾಷ್ಟ್ರೀಯ ಮನ್ನಣೆಯನ್ನು ಪೋರ್ಚುಗೀಸರು ತಂದುಕೊಂಡುತ್ತಾರೆ.

ಇದೇ ಸಮಯದಲ್ಲಿ ಕೇವಲ ಅಲ್ಫೊನ್ಸೊ ಅಲ್ಲದೇ ಅನೇಕ ದೇಸೀ ತಳಿಗಳಿಗೆ, ಪೋರ್ಚುಗೀಸ್ ಹೆಸರುಗಳಾದ ಪೆರೆಸ್, ರೆಬೆಲ್ಲೊ, ಫರ್ನಾಂಡಿನಾ, ಫಿಲಿಪಿನಾ, ಪೆರೆಸ್, ಆಂಟೋನಿಯೊ ಹೀಗೆ ಹತ್ತು ಹಲವಾರು ಹೆಸರುಗಳನ್ನು ಇಟ್ಟು ರಫ್ತು ಮಾಡುತ್ತಾರಾದರೂ, ಅಲ್ಫೊನ್ಸೊ ಜನಪ್ರಿಯತೆಯ ಮುಂದೆ ಉಳಿದೆಲ್ಲಾ ಪ್ರಬೇಧಗಳೂ ಕಡಿಮೆಯಾದಾಗ ಸದ್ದಿಲ್ಲದೇ ಆ ಪ್ರಭೇಧಗಳು ಕಣ್ಮರೆಯಾಗಿ ಹೋಗಿರುವುದು ದುರಂತವೇ ಸರಿ.

ಈ ರೀತಿಯಲ್ಲಿ ವಿದೇಶಿಯರು ಕೇವಲ ನಮ್ಮ ಧರ್ಮ ಸಂಸ್ಕೃತಿ, ಶಿಕ್ಷಣ ಮತ್ತು ಜನರನ್ನು ಮಾತ್ರವಲ್ಲದೇ ಹಣ್ಣುಗಳನ್ನೂ ಮತಾಂತರಿಸಿದ್ದು ವಿಪರ್ಯಾಸವೇ ಸರಿ.

2007 ರಲ್ಲಿ ಅಮೇರಿಕಾ ತನ್ನ ಹಾರ್ಲೆ ಡೇವಿಡ್ಸನ್ ಬೈಕ್‌ಗಳಿಗೆ ಬದಲಾಗಿ ಭಾರತದ ರತ್ನಗಿರಿ ಅಲ್ಫೊನ್ಸೊ ಮಾವಿನ ಹಣ್ಣುಗಳ ರಫ್ತು ಮಾಡುವ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದೆ ಎಂದರೆ, ಈ ಅಲ್ಫೊನ್ಸೊ ಮಾವಿನಹಣ್ಣಿನ ರುಚಿ ಮತ್ತು ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಎಂಬುದರ ಕಲ್ಪನೆ ಮೂಡುತ್ತದೆ.

mango4

ಮಧ್ಯಮ ಗಾತ್ರದ ತೆಳ್ಳನೆ ಕಡು ಹಳದೀ ಬಣ್ಣದ ಸಿಪ್ಪೆಯನ್ನು ಹೊಂದಿರುವ ರತ್ನಗಿರಿ ಅಲ್ಫೊನ್ಸೊ ಮಾವಿನ ಹಣ್ಣುಗಳನ್ನು ಈ ರೀತಿಯಾಗಿ ವರ್ಣಿಸುವುದಕ್ಕಿಂತಲೂ ಸ್ವಲ್ಪ ಹೆಚ್ಚಿನ ಹಣ ಕೊಟ್ಟಾದರೂ ಖರೀದಿಸಿ ಸವಿದಾಗಲೇ ಅದರ ರುಚಿಯ ಮಹತ್ವ ತಿಳಿಯುವುದು.

ಇನ್ನೇಕೆ ತಡಾ ಓದ್ಕೊಳೀ, ತಿನ್ಕೊಳೀ, ಮಸ್ತ್ ಮಜಾ ಮಾಡಿ

ಏನಂತೀರೀ?

ನಿಮ್ಮವನೇ ಉಮಾಸುತ

One thought on “ರತ್ನಗಿರಿ ಅಲ್ಫೊನ್ಸೊ ಮಾವಿನಹಣ್ಣು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s