ಶಂಖನಾದ ಅರವಿಂದ್

ಜನರು ತಮ್ಮೆಲ್ಲಾ ದೈನಂದಿನದ ಕಷ್ಟ ಸುಖಃಗಳನ್ನು ಮರೆಯುವುದಕ್ಕಾಗಿ ಮನೋರಂಜನೆಗಾಗಿ ಕೆಲ ಕಾಲ ನಾಟಕ ಮತ್ತು ಚಲನಚಿತ್ರಗಳನ್ನು ನೋಡಿ ಅದರಲ್ಲಿ ಬರುವ ನಾಯಕ ಮತ್ತು ನಾಯಕಿಯರೊಂದಿಗೆ ತಮ್ಮ ಬದುಕನ್ನು ಹೋಲಿಸಿಕೊಂಡು ತಮ್ಮ ಕಷ್ಟಗಳನ್ನು ಮರೆಯುತ್ತಾರೆ. ಇವೆಲ್ಲವೂ ನಾಯಕ ನಾಯಕಿ ಪ್ರಧಾನವಾಗಿದ್ದರೂ ಅವರಿಬ್ಬರ ಕಥೆಯ ಏಕತಾನತೆಯನ್ನು ತಡೆಯುವ ಸಲುವಾಗಿ ನಾಯಕ ಮತ್ತು ನಾಯಕಿಯ ಕಥೆಗೆ ಸಮಾನಾಂತರವಾಗಿ ಹಾಸ್ಯ ದೃಶ್ಯಗಳನ್ನು ಅಳವಡಿಸಿಕೊಂಡಿರುತ್ತಾರೆ. ಹಾಗಾಗಿ ಅಂದೂ ಇಂದು ಮತ್ತು ಮುಂದೆಯೂ ಹಾಸ್ಯನಟರ ಕಾಲ್ ಶೀಟ್ ಮೊದಲು ಪಡೆದುಕೊಂಡು ನಂತರ ನಾಯಕರನ್ನು ಆರಿಸಿಕೊಳ್ಳುವ ಸಂಪ್ರದಾಯ ರೂಡಿಯಲ್ಲಿದೆ.

ARVIND7

ಹಾಸ್ಯನಟರುಗಳಲ್ಲಿ ಎರಡು ಬಗೆಯದ್ದಾಗಿದೆ ಕೇವಲ ತಮ್ಮ ಸಂಭಾಷಣೆಯಿಂದ ಜನರನ್ನು ನಗಿಸುವವರು ಹೆಚ್ಚಿನ ಹಾಸ್ಯನಟರಾಗಿದ್ದರೇ ಇನ್ನು ಕೆಲವೇ ಕೆಲವು ಹಾಸ್ಯನಟರನ್ನು ನೋಡಿದಾಕ್ಷಣವೇ ಬಿದ್ದು ಬಿದ್ದು ನಗಬೇಕೇನಿಸುತ್ತದೆ. ಅವರು ಪರದೆಯ ಮೇಲೆ ಸುಮ್ಮನೇ ಬಂದು ನಿಂತು ತಮ್ಮ ಆಂಗಿಕ ಅಭಿನಯದಿಂದಲೇ ಪ್ರೇಕ್ಷಕರಲ್ಲಿ ನಗೆಯನ್ನು ಉಕ್ಕಿಸಿಬಿಡುತ್ತಾರೆ. ಅಂತಹವರಲ್ಲಿ ಪ್ರಮುಖರೆಂದರೆ, ಕನ್ನಡದಲ್ಲಿ ನರಸಿಂಹರಾಜು, ದ್ವಾರಕೀಶ್ ಅವರಾದರೆ, ತಮಿಳಿನಲ್ಲಿ ಹುಟ್ಟು ಕನ್ನಡಿಗರೇ ಆಗಿದ್ದ ತಾಯ್ ನಾಗೇಶ್, ಹಿಂದಿಯಲ್ಲಿ ಜಾನೀ ಲಿವರ್ ಅಗ್ರಗಣ್ಯರು. ಇಂತಹ ಮೇರು ನಟರ ಸಾಲಿನಲ್ಲಿಯೇ ನಿಲ್ಲಬಹುದಾಗಿದ್ದ ಮತ್ತೊಬ್ಬ ನಟರೆಂದರೆ ಅದು ಅರವಿಂದ್ ಎಂದರೂ ತಪ್ಪಾಗಲಾರದು.

ಕೇವಲ ಅರವಿಂದ್ ಎಂದಾಕ್ಷಣ ಜನರಿಗೆ ಥಟ್ ಅಂತಾ ನೆನಪಾಗೋದಿಲ್ಲ. ಅದರೆ ಶಂಖನಾದ ಅರವಿಂದ್ ಅಥವಾ ಅನುಭವ/ಬೆಟ್ಟದ ಹೂ ಅರವಿಂದ್ ಎಂದಾಕ್ಷಣ ಎಲ್ಲರ ಮುಖದಲ್ಲಿಯೂ ಪರಿಚಾಯಾತ್ಮಕ ನಗು ಸಹಜವಾಗಿಯೇ ಮೂಡುತ್ತದೆ ಎಂದರೆ ಆ ಸಿನಿಮಾಗಳಲ್ಲಿ ಅ ನಟನ ಪರಕಾಯ ಪ್ರವೇಶದ ಅರಿವಾಗುತ್ತದೆ.

arvind5

ಮೂಲತಃ ಚಿಕ್ಕ‌ಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕ್ ಮಾಚಿಕೊಪ್ಪ ಗ್ರಾಮದವರಾಗಿದ್ದ ಅರವಿಂದ್ ರಂಗಭೂಮಿ‌ ಕಲಾವಿದರು. ಎಪ್ಪತ್ತರ ದಶಕದಲ್ಲಿ ಕಾಶೀನಾಥ್ ಅವರ ಅಪರೂಪದ ಅತಿಥಿಗಳು ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಅಲ್ಲಿಂದ ಮುಂದೆ ಕಾಶೀನಾಥ್ ಅವರ ಗರಡಿಯಲ್ಲಿ ಒಂದು ರೀತಿಯ ನಿಲಯದ ಕಲಾವಿದರೇ ಆಗಿ ಹೋಗಿ ಅವರ ಅಪರಿಚಿತ ಅನುಭವ ಮುಂತಾದ ಚಿತ್ರದಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದಿದ್ದರು.. ಖ್ಯಾತ ನಟ, ನಿರ್ದೇಶಕ ಮತ್ತು ನಿರ್ದೇಶಕರಾಗಿದ್ದ ದಿವಂಗತ ಕಾಶಿನಾಥ್‌ ಅವರ ಬಹುತೇಕ ಸಿನಿಮಾಗಳಲ್ಲಿ ಒಂದಲ್ಲಾ ಒಂದು ಪಾತ್ರದ ಮೂಲಕ ಜನರನ್ನು ಮನರಂಜಿಸುವ ಮೂಲಕ ಎಂಭತ್ತರ ದಶಕದಲ್ಲಿ ಬಹು ಬೇಡಿಕೆಯ ನಟರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

arind3

ಎಂಭತ್ತರ ದಶಕದಲ್ಲಿ ಅರವಿಂದ್ ಅವರನ್ನೇ ಪ್ರಮುಖರನ್ನಾಗಿಸಿಕೊಂಡು ತೆರೆಗೆ ಬಂದ ಶಂಖನಾದ ಸಿನಿಮಾ ಅವರ ಚಿತ್ರಬದುಕನ್ನೇ ಬದಲಿಸಿತು ಎಂದರೂ ತಪ್ಪಾಗಲಾರದು. ವರ್ಣ ವ್ಯವಸ್ಥೆಯಲ್ಲಿ ದಲಿತ ಸಮುದಾಯದ ಬದುಕು ಬಿಚ್ಚಿಟ್ಟಿದ್ದು ಶಂಖನಾದ ಸಿನಿಮಾದ ದಾಸಯ್ಯನ ಪಾತ್ರ. ಅದರಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಕುರಿತು ಇರುವ ಮೌಢ್ಯತೆಯನ್ನು ಹೊಡೆದುಹಾಕಿ ಜಾತ್ಯತೀತೆಯನ್ನು ಎತ್ತಿಹಿಡಿದಿತ್ತು. ಗಾರೆ ಕೆಲಸ ಕೂಲಿ ಮಾಡುತ್ತಾ ಸಮಯವಿದ್ದಾಗ ದಾಸಯ್ಯನಾಗಿಯೂ ಜನಪದ ಪೌರೋಹಿತ್ಯವನ್ನು ನಿಭಾಯಿಸುತ್ತಿದ್ದ ದಲಿತ ವ್ಯಕ್ತಿಯೊಬ್ಬ ಅಚಾನಕ್ಕಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ತಾನೇ ಮನೆ ಮನೆಗೂ ಹೋಗಿ ಜನಸಾಮಾನ್ಯರಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಪಾತ್ರದಲ್ಲಿ ಅತ್ಯಧ್ಭುತವಾಗಿ ನಟಿಸಿದ್ದರು. ಏಳು ರಾಷ್ಟ್ರಪ್ರಶಸ್ತಿ ಬಾಚಿಕೊಂಡ ಆ ಸಿನಿಮಾದ ಮೂಲಕ ಕೇವಲ ಅರವಿಂದ್ ಎಂದಾಗಿದ್ದವರು ರಾತ್ರೋ ರಾತ್ರಿ ಶಂಖನಾದ ಅರವಿಂದ್ ಆಗಿ ಪ್ರಖ್ಯಾತರಾಗಿ ಹೋದರು.

arvind8

ಅಲ್ಲಿಂದ ಮುಂದೆ ಅವರಿಗೆ ಕೀರ್ತಿ ಮತ್ತು ಯಶಸ್ಸನ್ನು ತಂದು ಕೊಟ್ಟ ಸಿನಿಮಾ ಎಂದರೆ, ರಾಷ್ಟ್ರಪಶಸ್ತಿ ಪಡೆದಿದ್ದ ಹಿರಿಯ ನಿರ್ದೇಶಕರಾದ ಶ್ರೀ ಲಕ್ಷ್ಮೀನಾರಾಯಣ್ ಅವರು ಪುನೀತ್ ರಾಜಕುಮಾರ್ ಅವರನ್ನು ಮುಖ್ಯಭೂಮಿಕೆಯಲ್ಲಿ ಇಟ್ಟುಕೊಂದು ತೆಗೆದ ಬೆಟ್ಟದ ಹೂವು ಸಿನಿಮಾದಲ್ಲಿ ರಾಮಾಯಣ ದರ್ಶನ ಪುಸ್ತಕಕ್ಕೆ 10ರೂಪಾಯಿ ಹೊಂದಿಸಲು ಮುಗ್ಧ ಬಾಲ ನಟನಾಗಿ ಪುನೀತ್ ಅಭಿನಯಿಸಿದರೆ, ಅವರೊಟ್ಟಿಗೆ ಅಡುಗೆ ಭಟ್ಟನಾಗಿ ಅರೆ ಬರೆ ಇಂಗ್ಲೀಷ್ ಮಾತನಾಡುವ ಅಡುಗೆ ಭಟ್ಟನಾಗಿ ನಟಿಸಿದ ಅರವಿಂದ್ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ಮಾ. ಪುನೀತ್ ಮತ್ತು ಅರವಿಂದ್ ಅವರಿಬ್ಬರ ನಡುವಿನ ಹಾಡಂತೂ ಇಂದಿಗೂ ಜನಮಾನಸದಲ್ಲಿ ಅಚ್ಚೊತ್ತಿದೆ.

arvind4

ಅದಾದ ಕೆಲ ಸಮಯ ಮತ್ತೊಬ್ಬ ಮಹಾನ್ ನಿರ್ದೇಶಕರಾದ ಸುರೇಶ್ ಹೆಬ್ಲೀಕರ್ ಅವರ ಜೊತೆ ಸಾಲು ಸಾಲು ಸಿನಿಮಾಗಳಲ್ಲಿ ಅರವಿಂದ್ ಅಭಿನಯಿಸಿದರು. ಪ್ರಮುಖವಾಗಿ ಕಾಡಿನ ಬೆಂಕಿ, ಪ್ರಥಮ ಉಷಾಕಿರಣ ಸಹಾ ಅವರಿಗೆ ಉತ್ತಮ ಹೆಸರನ್ನು ತಂದು ಕೊಟ್ಟಿತ್ತು. ಆದಾದ ನಂತರ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ ಪರಿಣಾಮ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಅವಕಾಶ ಕಡಿಮೆಯಾಗುತ್ತಿದ್ದಂತೆಯೇ ಟಿವಿ ಧಾರವಾಹಿಗಳಲ್ಲಿಯೂ ಸಹಾ ಅಭಿನಯಿಸಿದ್ದಲ್ಲದೇ, ಸ್ನೇಹಿತರೊಂದಿಗೆ ಸೇರಿಕೊಂಡು ಸಿಕ್ಸ್‌ ಟು ಸಿಕ್ಸ್‌ , ಗುಪ್‌ಚುಪ್‌ ಮುಂತಾದ ಎರಡು ಮೂರು ಸಿನಿಮಾಗಳನ್ನು ನಿರ್ಮಿಸಿದರೂ ಅದ್ಯಾವುದೂ ಅವರ ಕೈ ಹಿಡಿದಿರಲಿಲ್ಲ.

ಖ್ಯಾತ ಹಿನ್ನೆಲೆ ಗಾಯಕಿ ರಮಾ ಅವರನ್ನು ಮದುವೆಯಾಗಿ ಮಾನಸ ಹೊಳ್ಳ ಮತ್ತು ಪ್ರಾರ್ಥನ ಎಂಬ ಇಬ್ಬರು ಹೆಣ್ಣುಮಕ್ಕಳು ಹಾಗೂ ಅಭಿಷೇಕ್‌ ಎಂಬ ಒಬ್ಬ ಮಗ ಇದ್ದಾನೆ. ಅವರ ಪತ್ನಿಯವರೂ ಸಹಾ ಅವರೂ ಕನ್ನಡ ಸಿನಿ ರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಲ್ಲದೇ ಶಂಖನಾದ ಅರವಿಂದ ಕಲಾವೃಂದ ಎಂಬ ತಮ್ಮದೇ ಒಂದು ಕಲಾವಿದರ ತಂಡವನ್ನು ಕಟ್ಟಿಕೊಂಡು ಸುಗಮಸಂಗೀತ ರಸಸುಧೆಯನ್ನು ಹರಿಸುತ್ತಿದ್ದರು. ಅವರ ಮಗಳ ಹಿರಿಯ ಪುತ್ರಿ ಮಾನಸ ಹೊಳ್ಳ ಖ್ಯಾತ ಹಿನ್ನಲೆಗಾಯಕಿ ಮತ್ತು ಖ್ಯಾತ ಸಂಗೀತ ನಿರ್ದೇಶಕಿಯಾಗಿಯೂ ಪ್ರವರ್ಧಮಾನಕ್ಕೆ ಬರುತ್ತಿದ್ದರೆ ಅವರ ಉಳಿದಿಬ್ಬರು ಮಕ್ಕಳು ಕಲಾವಿದರಾಗಿದ್ದಾರೆ.

arvind

ದೀರ್ಘಕಾಲದ ಅನಾರೋಗ್ಯದಿಂದಾಗಿ ಅವರ ಪತ್ನಿ ರಮ್ಯಾ ಅರವಿಂದ್ ಇದೇ ಜನವರಿ 23 ರಂದು ನಿಧನರಾದ ನಂತರ ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದ ಸುಮಾರು 70ರ ಪ್ರಾಯದ ಅರವಿಂದ್ ಅವರಿಗೂ ಸಹಾ ಅದು ಹೇಗೋ ಕೊರೋನಾ ಸೋಂಕು ತಗುಲಿದ್ದ ಕಾರಣ ಕಳೆದ ಹತ್ತು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರುಗಳು ಎಷ್ಟೇ ಪ್ರಯತ್ನ ಪಟ್ಟರೂ ತೀವ್ರವಾದ ಉಸಿರಾಟದ ತೊಂದರೆಯಿಂದಾಗಿ ಇಂದು ಮಧ್ಯಾಹ್ನ ಮೇ 7, 2021ರಂದು ತಮ್ಮ ಕೊನೆಯುಸಿಳೆಯುವ ಮೂಲಕ ಕನ್ನಡ ಚಿತ್ರರಂಗದ ಒಂದು ಅನರ್ಘ್ಯ ರತ್ನವೊಂದು ಕಣ್ಮರೆಯಾಗಿದೆ ಎಂದರೆ ತಪ್ಪಾಗದು.

arvind2

ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕಿಗೆ ಬಹಳಷ್ಟು ಬಂಧು ಮಿತ್ರರನ್ನು ಕಳೆದುಕೊಳ್ಳುತ್ತಿದ್ದೇವೆ, ನೆನ್ನೆಯಷ್ಟೇ, ರಾಜ್ಕುಮಾರ್ ಅಭಿನಯದ ಕವಿರತ್ನ ಕಾಳಿದಾಸ, ರವಿಚಂದ್ರ ಅಭಿನಯದ ಅಂಜದ ಗಂದು ಸಿನಿಮಾ ನಿರ್ದೇಶಿಸಿದ್ದ ಶ್ರೀ ರೇಣುಕಾ ಶರ್ಮಾ ಅವರು ಇದೇ ಕೋವಿಡ್ ನಿಂದಾಗಿ ಅಸುನಿಗಿದ್ದರು. ಇಂದು ಖ್ಯಾತ ನಟ, ನಿರ್ಮಾಪಕ ಶಂಖನಾದ ಅರವಿಂದ್ ಅವರು ನಿಧರಾಗುವ ಮೂಲಕ ಅವರ ಮೂವರು ಮಕ್ಕಳು ಕೇಲವೇ ತಿಂಗಳಲ್ಲಿ ಅಮ್ಮಾ ಅಪ್ಪಾ ಅಜ್ಜಾ ಮಾವ ಅವರನ್ನು ಕಳೆದುಕೊಳ್ಳುವ ಮೂಲಕ ತಬ್ಬಲಿಗಳಾಗಿದ್ದಾರೆ.

ಇಂತಹ ಸಾವಿನಲ್ಲಿಯೂ ಅವರ ಮಗ‌ ಟಿವಿಯ ಸಂದರ್ಶನದಲ್ಲಿ ಸರ್ಕಾರದ ವಿರುದ್ಧ ಆಡಿದ ಮಾತುಗಳು,ಅನಗತ್ಯವಾಗಿ ಮೋದಿ ಸುಧಾಕರ್ ಎಳೆದು ತಂದದ್ಧು ಆಸ್ಪತ್ರೆ ವಿರುದ್ದ ಮಾಡಿದ ಕೊಲೆ ಆರೋಪಗಳು ಬಹುಶಃ ಆತನಿಗೇ ಗೊತ್ತಿಲ್ಲದಂತೆ ಯಾರದ್ದೋ ಷಡ್ಯಂತರದ ಭಾಗವಾಗಿದ್ದಾನೆ ಎಂದೆನಿಸುತ್ತಿದೆ.

ನಿಜ ಕೆಲವೇ ವಾರಗಳ ಅಂತರದಲ್ಲಿ ನಾಲ್ವರನ್ನು ಕಳೆದುಕೊಂಡ ನೋವು ಅರ್ಥ ಆಗುತ್ತದೆ ಆದರೆ ಅದಕ್ಕೆ ಸರ್ಕಾರವನ್ನಾಗಲೀ ಮಂತ್ರಿಯನ್ನಾಗಲೀ ಹೊಣೆ ಮಾಡಲಾಗದು.

ಯಾವುದೇ ಪಕ್ಷದ ಸರ್ಕಾರ ಇದ್ದರೂ ಇಂತಹ ಮಹಾಮಾರಿ ಸಂಧರ್ಭದಲ್ಲಿ ರಾಜಕೀಯ ಮಾಡಲು ಮುಂದಾಗುವುದಿಲ್ಲ. ಅರವಿಂದ್ ಅವರ ಬಗ್ಗೆ ಅಪಾರವಾದ ಅಭಿಮಾನವಿದೆ. ಈ ರೀತಿಯಾಗಿ ಅವರ ಸಾವಿನಲ್ಲಿಯೂ ರಾಜಕೀಯ ಬೆರೆಸಿ ತನ್ನ ತಂದೆಯ ಮೇಲಿರುವ ಅಭಿಮಾನವನ್ನು ಮಗನೇ ಕಡಿಮೆಯಾಗುವಂತೆ ಮಾಡಿದ್ದು ವಿಪರ್ಯಾಸವೇ ಸರಿ.

ಜೀವ ಇದ್ದಲ್ಲಿ ಮಾತ್ರವೇ ಜೀವನ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದಯವಿಟ್ಟು ಅನಾವಶ್ಯಕವಾಗಿ ಹೊರಗೆಲ್ಲೂ ಹೊಗದಿರಿ. ಅನಿವಾರ್ಯವಾಗಿ ಹೋಗಲೇ ಬೇಕಾದಲ್ಲಿ ಮೂಗು ಮುಚ್ಚುವ ವರೆಗು ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರನ್ನು ಕಾಪಾಡಿಕೊಳ್ಳಿ. ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಧೃಡರಾಗಿರೋಣ. ನೆಮ್ಮದಿಯ ಜೀವನವನ್ನು ಸಾಗಿಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s