ಅರೇ ಈ ರಾಜಾರಾಂ ಅಂದ್ರೇ ಯಾರು ಅಂತಾ ಗೊತ್ತಗ್ಲಿಲ್ವಾ? ಅದೇ ರೀ, ರಮೇಶ್ ಭಟ್ ಮತ್ತು ಕ್ರೇಜೀ ಕರ್ನಲ್ ಸೀರಿಯಲ್ಲಿನಲ್ಲಿ ರಮೇಶ್ ಭಟ್ ಜೊತೆ ಇರ್ತಾ ಇದ್ರಲ್ಲಾ ಗೊತ್ತಾಯ್ತಾ? ಅರೇ ಇನ್ನೂ ಗೊತ್ತಾಗ್ಲಿಲ್ವಾ ಅದೇ ರೀ ಗಾಳಿಪಟದ ಸಿನಿಮಾದಲ್ಲಿ ನಮ್ಮ ದೂದ್ ಪೇಡ ದಿಗಂತ್ ಆವರ ತಾತನ ಪಾತ್ರದಲ್ಲಿ ಅನಂತ್ ನಾಗ್ ಹಂದಿ ಹೊಡೆಯಲು ಪ್ರಚೋದಿಸಿದ್ರಲ್ಲಾ ಅವರೇ ಅಂದಕ್ಷಣಾ ಓ.. ಅವ್ರಾ.. ಆ ಬಿಳೀ ತಾತ ಗೊತ್ತು ಬಿಡಿ ಬಹಳ ಚೆನ್ನಾಗಿ ಅಭಿನಯಿಸ್ತಾರೆ. ಸಂಜೆ ಹೊತ್ತು ಮಲ್ಲೇಶ್ವರದ 15-18 ನೇ ಕ್ರಾಸಿನ ಕಡೆ ವಾಕಿಂಗ್ ಮಾಡ್ತಾ ಇರ್ತಾರೆ. ಅವರದ್ದು ಮತ್ತು ಭಾರ್ಗವೀ ನಾರಾಯಣ್ ಅವರ ಜೋಡಿ ಬಹಳಾನೇ ಪ್ರಸಿದ್ಧ ಅಲ್ವೇ? ಅಂತ ಆವ್ರೇ ಹೇಳುವಷ್ಶು ಪ್ರಖ್ಯಾತರು.
ನೋಡಿದಾಕ್ಷಣ ಅರೇ ಇವರು ಯಾರೋ ನಮ್ಮ ತಾತನ ತರಹಾನೇ ಇದ್ದಾರಲ್ಲಾ! ಎನ್ನುವಷ್ಟು ಅಪ್ಯಾಯಮಾನತೆ, ಇಳೀ ವಯಸ್ಸಿನಲ್ಲಿಯೂ ತುಂಟತನ ತೋರುವ ತಾತ, ಹೀಗೆ ತಮ್ಮ ಸಹಜ ಅಭಿನಯದ ಮೂಲಕ ರಂಗಭೂಮಿ, ಹಿರಿತೆರೆ, ಕಿರಿತೆರೆಯಲ್ಲಿ ಸುಮಾರು ಆರು ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ ರಂಗಕರ್ಮಿ ರಾಜಾರಾಂ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ.
ಆರ್. ಎಸ್. ರಾಜಾರಾಂ ಅವರು ಮೂಲತಃ ಅಪ್ಪಟ ಬೆಂಗಳೂರಿನ ಮಲ್ಲೇಶ್ವರದವರು. ಅವರ ತಂದೆ ಶ್ರೀ ಜಿ.ಎಸ್. ರಘುನಾಥರಾವ್ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕೆಲಸ ನಿಮಿತ್ತ ಕೋಲಾರ ಜಿಲ್ಲೆಯ ಕೆ.ಜಿ.ಎಫ್ ಗೆ ವರ್ಗವಣೆಯಾಗಿದ್ದಾಗ 1938ರ ಜುಲೈ 10ರಂದು ಶಾರದಾಬಾಯಿಯವರ ಗರ್ಭದಲ್ಲಿ ಜನಿಸಿದ ಕೆಲವೇ ತಿಂಗಳಲ್ಲಿ ಮತ್ತೆ ಮಲ್ಲೇಶ್ವರದ ಮನೆಗೆ ಹಿಂದಿರುಗುತ್ತಾರೆ ಮಲ್ಲೇಶ್ವರದ ಸರ್ಕರಿ ಶಾಲೆಯಲ್ಲಿಯೇ ತಮ್ಮ ಹತ್ತನೇ ತರಗತಿಯವರೆಗೂ ವಿದ್ಯಾಭ್ಯಾಸವನ್ನು ಮುಗಿಸಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪಿ.ಯೂ.ಸಿಯನ್ನು ಮುಗಿಸುವ ಜೊತೆ ಜೊತೆಯಲ್ಲಿಯೇ ಗೆಳೆಯರೊಡನೆ ಮನೆಯ ಹತ್ತಿರವೇ ಇದ್ದ ಟೈಪಿಂಗ್ ಇನಿಸ್ತಿಟ್ಯೂಟ್ ಒಂದಕ್ಕೆ ಸೇರಿ ತಮ್ಮ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆ ಮುಗಿಸಿಕೊಳ್ಳುತ್ತಾರೆ. ನಂತರ ತಮ್ಮ ಪದವಿಗಾಗಿ ನರಸಿಂಹರಾಜಾ ಕಾಲೋನಿಯಲ್ಲಿರುವ ಆಚಾರ್ಯ ಪಾಠಶಾಲೆಯಲ್ಲಿ ಬಿ.ಎ ಪದವಿಗೆ ಸೇರಿದ ಸಮಯದಲ್ಲಿಯೇ ಯು.ಪಿ.ಎಸ್.ಸಿ ಮುಖೇನ ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನಸೌಧದಲ್ಲಿ ಬೆರಳಚ್ಚುಗಾರರಾಗಿ ಉದ್ಯೋಗಕ್ಕೆ ಸೇರಿ 37 ವರ್ಷಗಳ ಸುದೀರ್ಘವಾದ ಸೇವೆ ಸಲ್ಲಿಸಿ ಹಂತ ಹಂತವಾಗಿ ಭಢ್ತಿಯನ್ನು ಪಡೆದು ಕಡೆಗೆ ಅಧೀನ ಕಾರ್ಯದರ್ಶಿ ಹುದ್ದೆಗೇರಿ ನಿವೃತ್ತಿ ಹೊಂದಿದರು.
ಶಾಲಾ ದಿನಗಳಿಂದಲೇ ನಾಟಕ, ಏಕಪಾತ್ರಾಭಿನಯ, ವೇಷಭೂಷಣ ಸ್ಪರ್ಧೆಗಳಲ್ಲಿ ಭಾಗವಹಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಕಾರಣ ಸಹಜವಾಗಿ ಚಿಕ್ಕವಯಸ್ಸಿನಲ್ಲಿಯೇ ರಂಗಭೂಮಿಯತ್ತ ಆಕರ್ಷಿತರಾಗಿ ತಮ್ಮ ಮನೆಯ ಅಕ್ಕ ಪಕ್ಕದಲ್ಲೇ ಇದ್ದ ಸ್ನೇಹಿತರೊಂದಿಗೆ ರಸಿಕ ರಂಜನಿ ಕಲಾವಿದರು ಎಂಬ ತಂಡವನ್ನು ಸ್ಥಾಪಿಸಿಕೊಂಡು ಅಂದಿನ ಕಾಲದ ಪ್ರಸಿದ್ಧ ನಾಟಕಕಾರಾದ ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್, ಕೆ. ಗುಂಡಣ್ಣ ಮುಂತಾದವರ ನಾಟಕಗಳನ್ನು ಮಾಡುತ್ತಾರೆ. ತಮ್ಮ ಮನೆಗಳಿಂದ ತಂದಿದ್ದ ಪಂಚೆಗಳನ್ನೇ ಪರದಯನ್ನಾಗಿಸಿಕೊಂಡು ಹತ್ತು ಪೈಸಾ, ನಾಲ್ಕಾಣೆ ಎಂಟಾಣೆಯ ಪ್ರವೇಶ ದರದ ಟಿಕೆಟ್ ನೊಂದಿಗೆ ತಮ್ಮ ನಾಟಕಗಳನ್ನು ಅಲ್ಲಿಯೇ ಇದ್ದ ಸೇವಾ ಸದನದಲ್ಲಿ ಪ್ರದರ್ಶನ ಮಾಡುತ್ತಿರುತ್ತಾರೆ.
ಬಿಎ ಪದವಿ ಕಲಿಯಲೆಂದು ಸೇರಿದ್ದ ಆಚಾರ್ಯ ಪಾಠಶಾಲೆ ಅವರಲ್ಲಿದ್ದ ಕಲಾವಿದನಿಗೆ ಅತ್ಯತ್ತಮ ವೇದಿಕೆಯಾಗುವುದಲ್ಲದೇ ಅಲ್ಲಿಯೇ ಅವರಿಗೆ ಅನೇಕ ಹವ್ಯಾಸೀ ನಾಟಕ ತಂಡಗಳ ಪರಿಚಯವಾಗುತ್ತದೆ. ಬೆಳ್ಳಂ ಬೆಳಿಗ್ಗೆ ಚುಮು ಚುಮು ಚಳಿಯಲ್ಲಿ 6 ಗಂಟೆಗೆ ಮಲ್ಲೇಶ್ವರಂ ನಿಂದ ಸೈಕಲ್ಲಿನಲ್ಲಿ ಕಾಲೇಜಿಗೆ ಹೋಗಿ ಬೆಳಗಿನ ತರಗತಿಗಳನ್ನು ಮುಗಿಸಿಕೊಂಡು 10:30ಕ್ಕೆ ಅಲ್ಲಿಂದ ಹೊರಟು 11:00 ಕ್ಕೆ ಸರಿಯಾಗಿ ವಿಧಾನ ಸೌಧದಲ್ಲಿ ಕೆಲಸಕ್ಕೆ ಹಾಜರಾಗಿ ಸಂಜೆ 5:30ಕ್ಕೆ ಮೆಜೆಸ್ಟಿಕ್ ಭಾಗದಲ್ಲಿ ನಡೆಯುತ್ತಿದ್ದ ನಾಟಕಗಳ ತಾಲೀಮು ಮುಗಿಸಿಕೊಂಡು ಮತ್ತೆ ಮನೆಗೆ ಸೇರುವಷ್ಟರಲ್ಲಿ ಗಂಟೆ ಹತ್ತು ಇಲ್ಲವೇ ಹನ್ನೊಂದಾಗುತ್ತಿತ್ತು. ಅದೆಷ್ಟೋ ಬಾರಿ ಕೋಪಗೊಂಡ ಅವರ ತಂದೆ ಮನೆಯ ಮುಂದಿನ ಬಾಗಿಲನ್ನು ಹಾಕಿಕೊಂಡಾಗ, ಅವರ ಪ್ರೀತಿಯ ಅಜ್ಜಿ ಹಿತ್ತಲಿನ ಬಾಗಿಲಿನಿಂದ ಮೊಮ್ಮಗನನ್ನು ಮನೆಯೊಳಗೆ ಕರೆದುಕೊಂಡು ಅಷ್ಟು ತಡರಾತ್ರಿಯಲ್ಲಿಯೂ ಅನ್ನ ಕಲಸಿ ಹಾಕುವ ಮೂಲಕ ರಾಜಾರಾಂ ಅವರ ಕಲೆಗೆ ಪ್ರೋತ್ಸಾಹ ಕೊಟ್ಟಿದ್ದರು.
ನೋಡ ನೋಡುತ್ತಿದ್ದಂತೆಯೇ ರಾಜಾರಾಂ ಅವರು ಸರಸ್ವತಿ ಕಲಾ ನಿಕೇತನ, ಪ್ರಧಾನ ಮಿತ್ರ ಮಂಡಲಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಹರಿಕಥಾ ವಿದ್ವಾಂಸರಾಗಿದ ಶ್ರೀ ಗುರುರಾಜಲು ನಾಯ್ಡು ರವರ ಜೈ ಭಾರತ್ ನಾಟಕ ಮಂಡಳಿಯೊಂದಿಗೆ ಸಂಪರ್ಕ ಪಡೆಯುವ ಮೂಲಕ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದರು. ಹಣ ಹದ್ದು, ಮಗು ಮದ್ವೆ, ಪಂಚಭೂತ, ಹೋಂರೂಲು, ‘ಅವರೇ ಇವರು- ಇವರೇ ಅವರು’ ಮೊದಲಾದವು ಇವರ ಕೆಲವು ಪ್ರಸಿದ್ಧ ನಾಟಕಗಳಾಗಿದ್ದವು.
ರಾಜಾರಾಂ 1964ರಲ್ಲಿ ತಮ್ಮ ಸಚಿವಾಲಯ ಉದ್ಯೋಗಿಗಳೊಡನೆ ಸೇರಿಕೊಂಡು ಸಚಿವಾಲಯ ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿಕೊಂಡು ಅದರ ಮೂಲಕ ದೇಶಾದ್ಯಂತ ಅನೇಕ ನಾಟಕ ಸ್ಪರ್ಥೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಪುಸ್ಕಾರಗಳಿಗೆ ಭಾಗಿಯಾದರೂ, ಇಲ್ಲಿ ಹೆಚ್ಚಿನ ನಾಟಕದ ಚಟುವಟಿಕೆಗಳು ನಡೆಯುತ್ತಿರಲಿಲ್ಲವಾದ್ದರಿಂದ, ವಿಧಾನ ಸೌಧದಲ್ಲೇ ಇದ್ದ ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಅತಿಥಿ ಕಲಾವಿದರಾಗಿ ಪಾಲ್ಗೊಂಡು ಸರ್ವೇಜನಾಃ ಸುಖಿನೊ ಭವಂತು ಎಂಬ ನಾಟಕವಲ್ಲದೇ ಕುಟುಂಬ ಕಲ್ಯಾಣ ಯೋಜನೆಯ ಅನೇಕ ನಾಟಕಗಳಲ್ಲಿ ಅಭಿನಯಿಸುತ್ತಾರೆ. ಇದೇ ಸಮಯದಲ್ಲಿಯೇ ಅಲ್ಲಿಗೆ ಅತಿಥಿ ಕಲಾವಿದರಾಗಿ ನಟಿಸುತ್ತಿದ್ದ ಸಿ. ಆರ್. ಸಿಂಹ, ಕಪ್ಪಣ್ಣ, ಲೋಕೇಶ್, ಗುಬ್ಬಿ ವೀರಣ್ಣನವ್ವರ ಮಗ ದೇವಾನಂದ್. ಮುಂದೆ ಹೆಸರಾಂತ ನಿರ್ಮಾಪಕರಾಗಿ ಖ್ಯಾತ ಗಳಿಸಿದ ಕೃಷ್ಣಂರಾಜು ಮತ್ತು ಶಂಕರ್ ರಾವ್ ಅವರುಗಳ ಪರಿಚಯವಾಗಿ ಇಂದಿಗೂ ಹವ್ಯಾಸಿ ರಂಗದಲ್ಲಿ ಪ್ರಖ್ಯಾತವಾಗಿರುವ ನಟರಂಗ ತಂಡವನ್ನು 1972ರಲ್ಲಿ ಸ್ಥಾಪನೆ ಮಾಡಿ ಅದರ ಮೂಲಕ ಎಚ್ಚೆಮನಾಯಕ, ಟಿಪ್ಪುಸುಲ್ತಾನ್, ಕಿತ್ತೂರು ಚೆನ್ನಮ್ಮ, ರಕ್ತಾಕ್ಷಿ, ಸದಾರಮೆ, ಕಾಕನ ಕೋಟೆ, ತುಘಲಕ್, ಮೃಚ್ಛಕಟಿಕ, ಸಂಕ್ರಾಂತಿ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದರು.
ಹೀಗೆ ಒಂದಾದ ಮೇಲೆ ಒಂದು ನಾಟಕಗಳಲ್ಲಿ ಆಭಿನಯಿಸುತ್ತಿರುವಾಗಲೇ ಸಿ. ಆರ್ ಸಿಂಹ ಅವರ ಮೂಲಕ ನಾಟಕಗಳಲ್ಲಿ ಸಂಗೀತ ಸಂಯೋಜನೆ ಮಾಡುತ್ತಿದ್ದ ಮತ್ತೊಬ್ಬ ದಿಗ್ಗಜ ಸಿ. ಅಶ್ವಥ್ ಅವರ ಪರಿಚಯವಾಗಿ ಮುಂದೆ ರಾಜಾರಾಂ ಮತ್ತು ಅಶ್ವಥ್ ಅವರ ಜೋಡಿ ಹಾಲು ಜೇನಿನಂತಾಗುತ್ತದೆ. ಹಾರ್ಮೋನಿಯಂ ಹಿಡಿದು ತಾರಕ ಸ್ವರದಲ್ಲಿ ಅಶ್ವಥ್ ಹಾಡಲು ಆರಂಭಿಸಿದರೆ ಅವರಿಗೆ ಡೋಲಕ್ ಮೂಲಕ ರಾಜಾರಾಂ ಸಾಥ್ ನೀಡುತ್ತಿದ್ದರು. ನಾಟಕಗಳಿಗಾಗಿ ರೈಲಿನಲ್ಲಿ ದೂರ ಪ್ರಯಾಣ ಮಾಡುತ್ತಿರುವಾಗ ಅನೇಕ ಸ್ಥಳಗಳಲ್ಲಿ ಕೆಲವು ಗಂಟೆಗಳ ಕಾಲ ರೈಲು ನಿಂತರೆ ಇವರಿಬ್ಬರೂ ರೈಲಿನಿಂದ ಇಳಿದು ಪ್ಲಾಟ್ಫಾರ್ಮಿನ ಮೇಲೆ ಕುಳಿತು ಹಾಡುತ್ತಿದ್ದರೆ ಸುತ್ತಲೂ ಇರುವವರಿಗೆ ರಸದೌತಣ ಎಂದು ಬೇರೆ ಹೇಳಬೇಕಿಲ್ಲ.
ಹೀಗೆ ನಾನಾ ನಾಟಕಗಳಲ್ಲಿ ಆಭಿನಯಿಸುತ್ತಿರುವಾಗಲೇ 1971ರಲ್ಲಿ ತಮ್ಮ ಬಾಲ್ಯಸ್ನೇಹಿತರೊಬ್ಬರ ಸಹಾಯದಿಂದ ಪಾಪಾ ಪುಣ್ಯ ಚಿತ್ರದಲ್ಲಿ ಪ್ರಪ್ತಥಮವಾಗಿ ಬಣ್ಣ ಹಚ್ಚುವ ಅವಕಾಶ ಲಭಿಸಿ, ಪಂಡರೀ ಬಾಯಿ ಮತ್ತು ಕಲ್ಯಾಣ್ ಕುಮಾರ್ ಅವರೊಂದಿಗೆ ಶ್ರೀ ಶೈಲದಲ್ಲಿ ಚಿತ್ರೀಕರಣದಲ್ಲಿ ಭಾಗಿಗಳಾಗುತ್ತಾರೆ. ನಂತರ 1972ರಲ್ಲಿಯೇ ಭಲೇ ಹುಚ್ಚಾ ಚಿತ್ರದಲ್ಲಿ ಜೋಕರ್ ಶ್ಯಾಮ್ , ಕೆಮಡಿಯನ್ ಗುಗ್ಗು ಅವರೊಟ್ಟಿಗೆ ನಟ ಸಾರ್ವಭೌಮ ರಾಜಕುಮಾರ್ ಅವರೊಂದಿಗೆ ನಟಿಸುವ ಅವಕಾಶ ಲಭಿಸುತ್ತದೆ. ದುರಾದೃಷ್ಟವೆಂದರೆ ಅದೇ ಸಿನಿಮಾ ಅಣ್ಣಾವ್ರ ಜೊತೆ ಅಭಿನಯಿಸಿದ ಮೊದಲ ಮತ್ತು ಕಡೆಯ ಸಿನಿಮಾ ಆಗುತ್ತದೆ. ನಂತರ ಕನ್ನಡದ ಬಹುತೇಕ ಎಲ್ಲಾ ನಾಯಕ ನಟರೊಂದಿಗೆ ಅಭಿನಯಿಸಿದ ಹೆಗ್ಗಳಿಕೆ ರಾಜಾರಾಂ ಅವರದ್ದಾಗಿದೆ.
ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಲು ಸಾಧ್ಯವಾಗಲಿಲ್ಲ. ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯನವರು ರಾಜಾರಾಂ ಅವರು ಬಾಲು ಮಹೇಂದ್ರ ಅವರ ನಿರ್ದೇಶನದಲ್ಲಿ ಕಮಲಹಾಸನ್ ಅವರೊಂದಿಗೆ ನಟಿಸಿದ ಚಿತ್ರವನ್ನು ನೋಡಿ ಪ್ರಥಮಬಾರಿಗೆ ತಮ್ಮ ಚಿತ್ರದಲ್ಲಿ ರಾಜಾರಾಂ ಅವರಿಗೊಂದು ಅವಕಾಶ ನೀಡುತ್ತಾರೆ. ಅಲ್ಲಿಂದ ಮುಂದೆ ಅವರಿಬ್ಬರದ್ದೂ ರಾಮ ಲಕ್ಷ್ಮಣ ಜೋಡಿಯಂತಾಗಿ ಅವರ ಪ್ರತಿಯೊಂದು ಚಿತ್ರದಲ್ಲಿಯೂ ಒಂದಲ್ಲಾ ಒಂದು ಪ್ರಮುಖ ಪಾತ್ರ ರಾಜಾರಾಂ ಅವರಿಗೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಅದೇ ಸಂಪ್ರದಾಯವನ್ನು ಸಿದ್ದಲಿಂಗಯ್ಯ ಅವರ ಶಿಷ್ಯ ಕೆ.ವಿ. ರಾಜು ಅವರು ಸಹಾ ಮುಂದುವರೆಸಿ ತಮ್ಮ ಬಹುತೇಕ ಚಿತ್ರಗಳಲ್ಲಿ ರಾಜಾರಾಂ ಅವರಿಗೆ ಅವಕಾಶ ಕೊಟ್ಟಿದ್ದರು.
1971 ರಿಂದ ಪಾಪ ಪುಣ್ಯದ ಮುಖಾಂತರ ಆರಂಭವಾಗಿ ಕೆಲವರ್ಷಗಳ ಹಿಂದೆ ಬಿಡುಗಡೆಯಾದ ಜೈಲಲಿತಾ ಸಿನಿಮಾ ಅವರ ಕೊನೆಯ ಸಿನಿಮಾವಾಗಿದ್ದು ಒಟ್ಟು 62 ಚಿತ್ರಗಳಲ್ಲಿ ನಟಿಸಿದ್ದಾರೆ. ಯೋಗರಾಜ್ ಭಟ್ಟರ ನಿರ್ದೇಶನದ, ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಅಭಿನಯಿಸಿದ್ದ ಗಾಳಿಪಟದಲ್ಲಿ ದೂಡ್ ಪೇಡಾ ದಿಂಗತ್ ತಾತಾನಾಗಿ ಅಭಿನಯಿಸಿದ್ದು ಮತ್ತು ಲೋಕೇಶ್ ಅವರ ನಿರ್ದೇಶನದ ಭುಜಂಗಯಯನ ದಶಾವತಾರ ಚಿತ್ರದ ಅವರಿಗೆ ಅತ್ಯಂತ ಖ್ಯಾತಿಯನ್ನು ತಂದುಕೊಟ್ಟಿತ್ತು.
ಕನ್ನಡಲ್ಲಿ ಖಾಸಗೀ ಛಾನೆಲ್ಗಳು ಆರಂಭವಾದ ಮೇಲಂತೂ ರಾಜಾರಾಂ ಅವರಿಗೆ ಭರಪೂರ ಕೆಲಸ ಸಿಕ್ಕಿತ್ತು. ರಮೇಶ್ ಭಟ್ ಮತ್ತು ಗಿರಿಜಾ ಲೋಕೇಶ್ ರೊಂದಿಗೆ ಅಭಿನಯಿಸಿದ ಕ್ರೇಜಿ ಕರ್ನಲ್ ಎಂಬ ಧಾರಾವಾಹಿಯಲ್ಲಿ ಅವರಿಬ್ಬರ ಸರಿಸಮನಾಗಿ ರಾಜಾರಾಂ ಅವರ ಪಾತ್ರಾಭಿನಯವೂ ಬಹಳ ಮೆಚ್ಚಿಗೆಗಳಿಸಿತ್ತಲ್ಲದೇ, ಸಿಹಿ ಕಹಿ ಚಂದ್ರು ಅವರ ಅನೇಕ ಧಾರವಾಹಿಗಳದೇ ಇನ್ನೂ ಹತ್ತು ಹಲವರು ನಿರ್ದೇಶಕರ ಜೊತೆ ನೂರಾರು ಸಂಚಿಕೆಗಳಲ್ಲಿ ತಮ್ಮ ಸಹಜ ಅಭಿನಯದ ಮುಖಾಂತರ ಕನ್ನಡಿಗರ ಹೃನ್ಮನಗಳನ್ನು ಗೆದ್ದಿದ್ದರು.
ತಮ್ಮ ಪಾತ್ರಗಳ ಮುಖಾಂತರ ಜನರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದರೂ ಬದುಕಿನಲ್ಲಿ ಬಹಳವಾಗಿ ನೊಂದಿದ್ದರು. ಆರ್ಥಿಕವಾಗಿ ಸಧೃಢರಾಗಿದ್ದದೂ ಅವರ ಇಬ್ಬರು ಮಕ್ಕಳು ಹುಟ್ಟು ಕುರುಡರಾಗಿದ್ದು ಅವರಿಗೆ ಬಹಳ ನೋವನ್ನುಂಟು ಮಾಡಿತ್ತು. ಇಬ್ಬರಿಗೂ ಉತ್ತಮವಾದ ಶಿಕ್ಷಣವನ್ನು ಕೊಡಿಸಿ ಹಿರಿಯ ಮಗ ತನ್ನದೇ ಆದ ಅಂಧ ಹೆಣ್ಣು ಮಕ್ಕಳ ಶಾಲೆಯನ್ನು ನಡೆಸುತ್ತಿದ್ದರೆ, ಇನ್ನು ಎರಡನೆಯ ಮಗ ಕಾರ್ಪರೇಷನ್ ಬ್ಯಾಂಕಿನಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಕಾಲ ಮೇಲೇ ತಾವು ನಿಂತು ಸಂಸಾರವನ್ನು ನಿಭಾಯಿಸುತ್ತಿದ್ದಾರೆ.
ರಾಜಾರಾಂ ಅವರಿಗೆ ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಮಯೂರ ಕಲಾರಂಗ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಮತ್ತು ಪ್ರತಿಷ್ಠಾನಗಳ ಗೌರವಗಳು ಸಂದಿವೆ.
ಇತ್ತೀಚಿನ ದಿನಗಳಲ್ಲಿ ಚಲನಚಿತ್ರ, ಧಾರವಾಹಿ ಮತ್ತು ನಾಟಕಗಳಿಂದ ಸ್ವಲ್ಪ ದೂರವಿದ್ದು ವಿಶ್ರಾಂತ ಜೀವನ ನಡೆಸುತ್ತಿದ್ದ ಹಿರಿಯ ರಂಗಕರ್ಮಿ ಆರ್.ಎಸ್.ರಾಜಾರಾಂ ಅವರು ಕೋವಿಡ್ ಸೋಂಕಿನಿಂದಾಗಿ ಏಪ್ರಿಲ್ 10, 2021ರಂದು ನಮ್ಮಲ್ಲರನ್ನೂ ಅಗಲಿದ್ದಾರೆ. ದೈಹಿಕವಾಗಿ ರಾಜಾರಾಂ ಅವರು ನಮ್ಮನ್ನಗಲಿದ್ದರೂ ಅವರ ತುಂಟಾಟಿಕೆಯ ಅಭಿನಯದ ಮೂಲಕ ಕನ್ನಡಿಗರ ಮನ ಮನೆಗಳಲ್ಲಿ ಶಾಶ್ವತವಾಗಿ ಮನೆಮಾಡಿದ್ದಾರೆ ಎಂದರೂ ಅತಿಶಯೋಕ್ತಿಯಾಗದು ಅಲ್ವೇ?
ಕೆಲವೊಮ್ಮೆ ಜನರು ಬದುಕಿರುವಾಗ ಅವರ ಬಗ್ಗೆ ಹೊಗಳುವುದಕ್ಕೆ ಕಂಜೂಸ್ ತನ ತೋರಿಸುವವರೇ ಸತ್ತ ನಂತರ ವಾಚಾಮಗೋಚರವಾಗಿ ಹೋಗಳುವಾಗ, ಅರೇ ಇದೇ ಮಾತುಗಳನ್ನು ಅವರು ಬದುಕಿದ್ದಾಗ ಮಾಡಿದ್ದರೆ ಇನ್ನೂ ಒಂದೆರಡು ದಿನ ಹೆಚ್ಚಿಗೆ ಬದುಕುತ್ತಿದ್ದರೇನೋ ಅನಿಸುತ್ತದೆ ಎನ್ನುವುದು ಸತ್ಯವಾದರೂ, ಹೇಗಾದರೂ ಇರುತ್ತಾರಲ್ಲಾ, ಅವರನ್ನು ಹೊಗಳಿದರೆ ಎಲ್ಲಿ ಅಟ್ಟಕ್ಕೇರಿ ಕುಳಿತು ಬಿಡುತ್ತಾರೋ ಎನ್ನುವ ಸಂಶಯವೂ ಇರಬಹುದೇನೋ? ಇಲ್ಲವೇ ಅವರು ಇಷ್ಟು ಬೇಗ ಅಗಲುತ್ತಾರೆ ಎನ್ನುವ ಮನೋಭಾವವೂ ಮತ್ತೊಂದು ಕಾರಣ ಇರಬಹುದು.
ಹಾಗಾಗಿ ದಯವಿಟ್ಟು ಯಾರನ್ನಾದರೂ ಹೊಗಳ ಬೇಕು ಇಲ್ಲವೇ ಏನಾದರೂ ಕೊಡಬೇಕು ಎನಿಸಿದಲ್ಲಿ ನಾಳೆಯ ಕೆಲಸವ ಇಂದೇ ಮಾಡು, ಇಂದಿನ ಕೆಲಸವ ಇಂದೇ ಮಾಡು ಎಂದು ಥಟ್ ಅಂತ ಮಾಡಿಬಿಡಿ. ಯಾರಿಗೆ ಗೊತ್ತು ನಾಳೆ ನಾವಿರ್ತಿವೋ ಇಲ್ಲಾ ಅವರು ಇರ್ತಾರೋ ಎಂದು.
ಏನಂತೀರೀ?
ನಿಮ್ಮವನೇ ಉಮಾಸುತ