ಅಜ್ಜಿ ಮನೆಯಲ್ಲಿ ಬೇಸಿಗೆಯ ರಜಾ ಮಜ

ಪರೀಕ್ಷೆ ಮುಗಿದು, ಫಲಿತಾಂಶ ಬಂದು ಬೇಸಿಗೆ ರಜೆ ಬಂದಿತೆಂದರೆ ನಮಗೆ ಖುಷಿಯೋ ಖುಷಿ. ಪರೀಕ್ಷೆ ಮುಗಿದ ತಕ್ಷಣ ಒಂದೋ ಅಮ್ಮನ ಅಮ್ಮ ಅಜ್ಜಿ ಮನೆಗೆ ಹೋಗಬೇಕು ಇಲ್ಲವೇ ತಂದೆಯ ತಂದೆ ತಾತನ ಮನೆಗೆ ಹೋಗಬೇಕು. ಸಾಧಾರಣವಾಗಿ ನಮ್ಮ ಯುಗಾದಿ ಆದ ಹದಿನೈದು ದಿನಕ್ಕೇ ನಮ್ಮ ಊರಿನಲ್ಲಿ ನಮ್ಮೂರ ಜಾತ್ರೆ ಬಹಳ ಅದ್ದೂರಿಯಿಂದ ಜರುಗುತ್ತಿದ್ದ ಕಾರಣ, ಆ ಜಾತ್ರೆಯನ್ನು ಮುಗಿಸಿಕೊಂಡು ಬಂದ ಕೂಡಲೇ ಅಜ್ಜಿ ಮನೆಗೆ ಹೋಗಲು ಸಿದ್ದವಾಗುತ್ತಿದ್ದೆವು.

ತಾತನ ಊರಿಗೆ ಹೋಗಲು ದೇವಸ್ಥಾನದ ಮುಂದಿನ ಕಲ್ಯಾಣಿಯಲ್ಲಿ ಈಜಾಡುವುದು, ತೋಟದಲ್ಲಿ ಎಳನೀರು ಕುಡಿಯುವುದು, ಜಾತ್ರೆಯಲ್ಲಿ ಆಟ ಸಾಮಾನುಗಳನ್ನು ಕೊಳ್ಳುವುದು ಪ್ರಮುಖ ಆಗರ್ಷಣೆಯಾದರೆ ಅಜ್ಜಿಯ ಮನೆಗೆ ಹೋಗಲಿಕ್ಕೆ ಪ್ರಮುಖ ಆಕರ್ಷಣೆ ಎಂದರೆ ನಮ್ಮ ಮಾವನ ಮನೆಯ ಕರಿಯನ ಜೊತೆ ಆಟ ಆಡೋದು, ಮಾವನ ಸೈಕಲ್ ತುಳಿಯುವುದು (ಅಗ ತಳ್ಳುವುದು), ಮಾವ ತಂದು ಕೊಡುತ್ತಿದ್ದ ಪೊಟ್ಟಣ, ತಾಟಿನಿಂಗು, ಅಜ್ಜಿ ಮನೆಯಲ್ಲಿದ್ದ ಕಿರುನೆಲ್ಲೀಕಾಯಿ. ಅಜ್ಜೀ ಮನೆಯೆ ಸುತ್ತ ಮುತ್ತಲಿದ್ದ ಬೆಟ್ಟಹುಣಸೇ, ಮನೆಯ ಎದುರಿಗಿದ್ದ ಚಾಂಪಿಯನ್ ರೀಘ್ ಚಿನ್ನದ ಗಣಿ ಮತ್ತು ಮನೆಯ ಪಕ್ಕದಲ್ಲಿದ್ದ ಮಾರಿಕುಪ್ಪಂ ಪೋಲೀಸ್ ಠಾಣೆ ಇವೆಲ್ಲವೂ ನನಗೆ ಪ್ರಮುಖ ಆಕರ್ಷಣೀಯವಾಗಿದ್ದವು.

k1

ನಮ್ಮ ತಾಯಿಯೇ ಹಿರಿಯ ಮಗಳಾಗಿದ್ದರಿಂದ ನಮ್ಮ ಅಜ್ಜಿ ಮನೆಯಲ್ಲಿ ನಾನೇ ಮೊದಲ ಮೊಮ್ಮಗ ಹಾಗಾಗಿ, ಅಜ್ಜಿ, ಮಾವ ಮತ್ತು ಚಿಕ್ಕಮ್ಮಂದಿರ ಪ್ರೀತಿಯಲ್ಲಿ ಅಂದು, ಇಂದು ಮತ್ತು ಮುಂದೆಯೂ ನನ್ನ ಪಾಲು ತುಸು ಹೆಚ್ಚೇ. ಹಾಗಾಗಿ ಸ್ವಲ್ಪ ನನ್ನ ಬಗ್ಗೆ ಎಲ್ಲರಿಗೂ ಸ್ವಲ್ಪ ಮುದ್ದು ಕೂಡಾ ಹೆಚ್ಚೇ. ಏನು ಕೇಳಿದರೂ ಇಲ್ಲಾ ಎನ್ನುತ್ತಿರಲಿಲ್ಲ. ಬೈಗುಳವೇ ಇಲ್ಲ ಎಂದಾದಲ್ಲಿ ಇನ್ನು ಹೊಡೆತ ಎಲ್ಲಿಂದ ಬಂತು. ಹಾಗಾಗಿ ನನಗೆ ಅಜ್ಜಿ ಮನೆಗೆ ಹೋಗುವುದೆಂದರೆ ಪಂಚ ಪ್ರಾಣ. ನಾವು ಇಂತಹ ದಿನ ಬರ್ತೀವಿ ಎಂದು ಕಾಗದ ಬರೆದ ಕೂಡಲೇ ಅಜ್ಜಿ ನನಗೆ ಇಷ್ಟವಾದ ತಿಂಡಿಗಳನ್ನೆಲ್ಲಾ ಮಾಡಿ ಸಿದ್ಧವಾಗಿದ್ದರೆ, ನಮ್ಮ ಮಾವ ತಮ್ಮ ಬಲಗೈ ಭಂಟ ರವಿಯನ್ನು ಕರೆದುಕೊಂಡು ಅಷ್ಟೋಂದು ಕತ್ತಲಿನಲ್ಲಿಯೂ ಛಾಂಪಿಯನ್ ರೈಲ್ವೇ ನಿಲ್ದಾಣದಲ್ಲಿ ನಮಗಾಗಿ ಕಾಯುತ್ತಿದ್ದದ್ದನ್ನು ನೆನಪಿಸಿಕೊಂಡರೆ ಇಂದಿಗೂ ಮನಸ್ಸು ತುಂಬಿ ಬರುತ್ತದೆ,

ರೈಲು ಇಳಿದು ಮಾವನನ್ನು ಕಂಡ ಕೂಡಲೇ, ಓಡಿ ಹೋಗಿ ಅವರನ್ನು ಅಪ್ಪಿ ಮುದ್ದಾಡಿ, ಸೈಕಲ್ಲಿಗೆ ತಂದ ಸಾಮಾನುಗಳನ್ನೆಲ್ಲಾ ಹೇರಿ, ಏನ್ ರವೀ ಹೇಗಿದ್ದೀಯಾ ಎಂದು ನಮ್ಮ ಮಾವನ ಭಂಟನನ್ನು ಕೇಳಿದೆ, ಏನಪ್ಪಾ ಸ್ಟೀಗಾಂಟ್ ( ಅಲ್ಲಿನ ಬಹುತೇಕರು ಶ್ರೀಕಂಠ ಎನ್ನುವ ಹೆಸರನ್ನು ಅಪಭ್ರಂಷ ಮಾಡುತ್ತಿದ್ದದ್ದು ನನಗೆ ಬೇಸರ ತರಿಸುತ್ತಿತ್ತು) ಚೆನ್ನಾಗಿದ್ಯಾ. ಎಲ್ಲಾ ಆರಾಮಾ ಎಂದು ತನ್ನ ತಮಿಳು ಮಿಶ್ರಿತ ಕನ್ನಡದಲ್ಲಿ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದಂತೆಯೇ ಸುಮಾರು ಛಾಂಪೀಯನ್ ರೈಲ್ವೇ ಸ್ಟೇಷನ್ನಿನಿಂದ ಮಾರಿಕುಪ್ಪಂ ಪೋಲೀಸ್ ಸ್ಟೇಷನ್ನಿನ ಪಕ್ಕದ ಸಾಯಲ್ ಸಿಮೆಂಟ್ ಬ್ಲಾಕಿನ ಅಜ್ಜಿಮನೆಯ ಸುಮಾರು ಒಂದೂವರೆ ಕಿಮೀ ದೂರ ಕಳೆದು ಹೋಗುತ್ತಿದ್ದದ್ದೇ ಗೊತ್ತಾಗುತ್ತಿರಲಿಲ್ಲ.

k4

ಅಷ್ಟು ಕತ್ತಲಲ್ಲೇ ನಾವು ಬರುತ್ತಿದ್ದದ್ದನ್ನು ಗಮನಿಸಿ ಓಡಿ ಬಂದು ನಮ್ಮ ಮೇಲೆ ಎಗರಾಡಿ ನಮ್ಮನ್ನೆಲ್ಲಾ ಮುದ್ದಾಡುತ್ತಿದ್ದ ಕರಿಯನ ಪ್ರೀತಿಯನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಹೆಚ್ಚು ಮಜಾ ಕೊಡೋದು. ಪ್ರಯಾಣದ ಸುಸ್ತಿನಿಂದ ಅಜ್ಜಿ/ಅತ್ತೆ ಮಾಡಿರುತ್ತಿದ್ದ ಬಿಸಿ ಬಿಸಿ ಅಡುಗೆ ಊಟ ಮಾಡಿ ಬೆಚ್ಚಗೆ ಮಲಗಿ ಬೆಳಗ್ಗೆ ಎದ್ದ ತಕ್ಶಣ ಹಲ್ಲುಜ್ಜಿ ಮುಖ ತೊಳೆದು ಬುಟ್ಟಿ ಹಿಡಿದುಕೊಂಡು ಓಡುತ್ತಿದ್ದದ್ದೇ ಮನೆಯ ಪಕ್ಕದಲ್ಲಿದ್ದ ಮಾರಿಕುಪ್ಪಂ ಪೋಲೀಸ್ ಸ್ಟೇಷನ್ನಿಗೆ. ಆಗೆಲ್ಲಾ ಕೆಜಿಎಫ್ ನಲ್ಲಿ ನಮ್ಮ ಮನೆ ಬಿಟ್ಟರೆ ಕನ್ನಡ ಭಾಷೆ ಕೇಳುತ್ತಿದ್ದದ್ದೇ ಪೋಲೀಸ್ ಸ್ಟೇಷನ್ನಿನಲ್ಲಿಯೇ. ದೇವರ ಪೂಜೆಗೆಂದು ಸ್ಟೇಷನ್ನಿನಲ್ಲಿದ್ದ ದೇವಗಣಗಲೆ ಹೂವು ತರಲು ಹೋಗುತ್ತೇವೆ ಎಂದು ನಾವು ಸೀದಾ ಹೋಗುತ್ತಿದ್ದದ್ದು ಲಾಕಪ್ಪಿನಲ್ಲಿ ಇರುತ್ತಿದ್ದ ಕಳ್ಳರನ್ನು ನೋಡುವುದಕ್ಕಾಗಿಯೇ. ಅದೇನೋ ಕಳ್ಳರನ್ನು ನೋಡುವುದೆಂದರೆ ನನಗೇನೂ ಒಂದು ರೀತಿಯ ಮಜ.

ಸ್ನಾನ ಮಾಡಿ ದೇವರ ಪೂಜೆ ಮಾಡಿ ಅಜ್ಜಿ ಮಾಡಿಕೊಟ್ಟ ತಿಂಡಿ ತಿಂದು ಕೈ ಮುಗಿಯುತ್ತಿದ್ದ ಹಾಗೇಯೇ ಸೀದಾ ಓಡುತ್ತಿದ್ದದೇ ಮನೆಯ ಮುಂದೆ ಕೇವಲ ನೂರು ಅಡಿಗಳಷ್ಟು ದೂರದಲ್ಲೇ ಇದ್ದ ಚುಕ್ ಬುಕ್ ಎಂದು ಸದಾ ಸದ್ದು ಮಾಡುತ್ತಿದ್ದ ಛಾಂಪಿಯನ್ ರೀಘ್ ಚಿನ್ನದ ಗಣಿಗೆ. ಭೂಮಿಯ ಒಳಗೆ ನೂರಾರು ಅಡಿಗಳ ಕೆಳಗೆ ಪ್ರತಿದಿನವೂ ಸುರಕ್ಷಿತವಾಗಿ ಹಿಂದಿರುಗಿ ಬರುತ್ತೇವೆಯೋ ಇಲ್ಲವೋ ಖಾತ್ರಿ ಇಲ್ಲದಿದ್ದರೂ ನಗುನಗುತ್ತಲೇ, ನೀಲಿ ಬಣ್ಣದ ಸಮವಸ್ತ್ರದ ಧರಿಸಿ ತಲೆಯ ಮೇಲೆ ದೀಪವಿರುತ್ತಿದ್ದ ಹೆಲ್ಮೆಟ್ಟನ್ನು ಧರಿಸಿಕೊಂಡು thumbs up ಮಾಡುತ್ತಾ ಟ್ರಾಲಿಯ ಸಹಾಯದಿಂದ ಭೂಮಿಯೊಳಗೆ ಇಳಿಯುತ್ತಿದ್ದ ಗಣಿ ಕಾರ್ಮಿಕರಿಗೆ TaTa ಮಾಡುವುದೇ ಒಂದು ರೀತಿಯ ಸುಂದರ ವಾದ ಅನುಭವ. ಪ್ರತೀ ಸ್ಟೇಜ್ ಸುರಕ್ಷಿತವಾಗಿ ಮುಟ್ಟಿದಾಗ ಅಲ್ಲಿಂದ ಬಾರಿಸುತ್ತಿದ್ದ ಗಂಟೆ ಸದ್ದು ಕೇಳಿದಾಗಲೇ ಎಲ್ಲರಿಗೂ ಒಂದು ರೀತಿಯ ಸಮಾಧಾನ. ಅಲ್ಲಿಂದ ಹೊರಬಂದರೆ ರಾಶಿ ರಾಶಿಯಲ್ಲಿ ಬಿದ್ದಿರುತ್ತಿದ್ದ ಕಪ್ಪನೆಯ ಕಲ್ಲಿನಲ್ಲಿ ಆಡುವ ಹೊತ್ತಿಗೆ ಸೂರ್ಯ ನೆತ್ತಿ ಮೇಲೆ ಬಂದಿರುತ್ತಿತ್ತು ಹೊಟ್ಟೆ ಚುರುಗುಟ್ಟುತ್ತಿತ್ತು.

ಮಧ್ಯಾಹ್ನ ಊಟಕ್ಕೆಂದು ಮಾವ ಬರುವ ಹೊತ್ತಿಗೆ ಎಲ್ಲರಿಗೂ ಸಾಲಾದ ತಟ್ಟೆಗಳನ್ನು ಹಾಕಿ ಲೋಟಗಳಿಗೆ ನೀರು ಬಡಿಸುವ ಕಾರ್ಯ ನಮ್ಮದಾಗಿರುತ್ತಿತ್ತು. ಮಾವಾ ಅಷ್ತು ದೂರದಲ್ಲೇ ಬರುತ್ತಿದ್ದದ್ದನ್ನು ಗಮನಿಸಿದ ನಮ್ಮ ಕರಿಯ ಓಡಿ ಹೋಗಿ ಮಾವನ ಸೈಕಲ್ಲಿನ ಕ್ಯಾರಿಯರ್ ಪಕ್ಕಕ್ಕೆ ಹಾಗಿದ್ದ ಬುಟ್ಟಿಯಲ್ಲಿ ಛಂಗನೆ ಹಾರಿ ಕುಳಿತು ಕೊಳ್ಳುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಮಾವ ಸೈಕಲ್ಲು ಸ್ಟಾಂಡ್ ಹಾಕಿ ಬಟ್ಟೆ ಬಿಚ್ಚಿ ಪಂಚೆ ಉಟ್ಟುಕೊಂಡು ಕೈ ಕಾಲು ತೊಳೆದುಕೊಂಡು ತಟ್ಟೆ ಮುಂದೆ ಕುಳಿತು ಸುತ್ತಮುತ್ತಲೂ ನಾವೆಲ್ಲರೂ ಅವರಿಗಾಗಿಯೇ ಕಾಯುತ್ತಿದ್ದೆವು ಎಂಬುದರ ಅರಿವೇ ಇಲ್ಲದೇ, ಗಬ ಗಬ ಎಂದು ಊಟ ಮಾಡಿ ಸೀದಾ ಆವರ ರೂಮಿಗೆ ಹೋಗುತ್ತಿದ್ದಂತೆಯೇ ಗೋರ್ ಗೋರ್ ಎಂದು ಸದ್ದು ಬಂದಿತೆಂದರೆ ಇನ್ನು 20 ನಿಮಿಷ ಪ್ರಪಂಚವೇ ಅಲುಗಾಡಿದರೂ ಮಾವ ಏಳುತ್ತಿರಲಿಲ್ಲ. ಸರಿಯಾಗಿ 20 ನಿಮಿಷ ಗಾಢ ನಿದ್ದೆ ಮಾಡಿ ಪುನಃ ಎದ್ದು ಮುಖ ತೊಳೆದುಕೊಂಡು ಬಟ್ಟೆ ಹಾಕಿಕೊಂಡು ಪುನಃ ಬಿಜಿಎಂಎಲ್ ಅಸ್ಪತ್ರೆಗೆ ಹೊರಟರೆಂದರೆ ನಾವು ಓಡಿ ಹೋಗಿ ಟಾಟಾ ಮಾಡಿ ಮನೆಯೊಳಗೆ ಬಂದರೆ ಚೌಕಬಾರ ಪಗಡೆ ಆಟ, ಕಲ್ಲಿನಾಟ ಇಲ್ಲವೇ ಸ್ವಲ್ಪ ಹೊತ್ತು ನಿದ್ದೆ ಮಾಡಿ ಸಂಜೆ ನಾಲ್ಕಕ್ಕೆ ಎಳುವಷ್ಟರಲ್ಲಿ ಬಿಸಿ ಬಿಸಿ ಹಾಲು ಅದರ ಜೊತೆಗೆ ಚಕ್ಕಲಿ ಕೋಡುಬಳೆ, ನಿಪ್ಪಟ್ಟು ತೇಂಗೊಳಲು ಹೀಗೆ ಯಾವುದಾರೂ ಒಂದು ಕುರುಕಲು ಸಿದ್ಧವಾಗಿರುತ್ತಿತ್ತು.

ಮುಖ ತೊಳೆದುಕೊಂಡು ಹಾಲು ಕುಡಿದು ಕುರುಕಲು ತಿಂದು ಬುಟ್ತಿ ಹಿಡಿದು ಮನೆಯ ಮುಂದಿನ ವಿಶಾಲವಾದ ತೋಟದಲ್ಲಿದ್ದ ಮಲ್ಲಿಗೆ ಮೊಗ್ಗು ಕೀಳುಲು ಸಿದ್ಧವಾಗುತ್ತಿದ್ದೆವು. ಅಜ್ಜಿ ಅಮ್ಮಾ ಪದೇ ಪದೇ ಮೊಗ್ಗುಗಳನ್ನು ಎಣಿಸಬೇಡ, ಮೊಗ್ಗು ಕಡಿಮೆ ಆಗುತ್ತದೆ ಎಂದು ಎಚ್ಚರಿಸುತ್ತಿದ್ದರೂ ನಾವಂತೂ ಎಣಿಸುವುದನ್ನು ಬಿಡುತ್ತಿರಲಿಲ್ಲ. ಸುಮಾರು 400-500 ಮೊಗ್ಗುಗಳನ್ನು ಪುಟ್ಟ ಪುಟ್ಟ ಕೈಗಳಲ್ಲಿ ಕಿತ್ತು ಅದರ ಜೊತೆಯಲ್ಲಿಯೇ ಬಗೆ ಬಗೆ ಬಣ್ಣದ ಕನಕಾಂಬರವನ್ನೂ ಕೀಳುತ್ತಿದ್ದವು. ಸಾಮಾನ್ಯವಾಗಿ ಕೆಂಪು-ಕೇಸರಿ ಬಣ್ಣದ ಕನಕಾಂಬರ ಎಲ್ಲಾ ಕಡೆಯಲ್ಲಿ ಕಾಣಬಹುದಾದರೇ, ನಮ್ಮ ಅಜ್ಜಿ ಮನೆಯಲ್ಲಿ ಸರಸ್ವತಿ ಬಣ್ನ (lavender colour), ಹಸಿರುಬಣ್ಣ, ಹಳದಿ ಬಣ್ಣದ ಕನಕಾಂಬರ ಹೂವು ಇತ್ತು. ಅಡುಗೆ ಮನೆ ಮತ್ತು ಹಜಾರದ ನಡುವೆ ಇದ್ದ ವಿಶಾಲವಾದ ಓಣಿಯಲ್ಲಿ ಕುಳಿತು ಮೊಗ್ಗು ಮತ್ತು ಕನಕಾಂಬರಗಳನ್ನು ಜೋಡಿಸಿಡುತ್ತಿದ್ದರೆ, ಅಮ್ಮಾ ಮತ್ತು ಚಿಕ್ಕಮಂದಿರು ಅದರ ಜೊತೆ ಬಗೆ ಬಗೆಯ ಪತ್ರೆಗಳನ್ನು ಸೇರಿಸಿ ಚಕ ಚಕನೆ ಅಂದ ಚಂದದ ಹೂವಿನ ಮಾಲೆಯನ್ನು ಕಟ್ಟಿ ಬಿಡುತ್ತಿದ್ದರು. ಸ್ವಲ್ಪ ಮಾರನೇ ದಿನದ ಪೂಜೆಗೆ ಎತ್ತಿಟ್ಟು ಎಲ್ಲರೂ ಸ್ವಲ್ಪ ಸ್ವಲ್ಪ ಮುಡಿದುಕೊಳ್ಳುತ್ತಿದ್ದರು.

ಇನ್ನೇನು ಸೂರ್ಯ ಮುಳುಗಿ ಕತ್ತಲಾಗುತ್ತಿದೆ ಎನ್ನುವಷ್ಟರಲ್ಲಿ ನಮ್ಮ ಗಮನ ಮಾವನ ಆಗಮನಕ್ಕಾಗಿ. ಅದಕ್ಕೆ ಕಾರಣ ಮಾವ ಪ್ರತೀ ದಿನವೂ ತಂದು ಕೊಡುತ್ತಿದ್ದ ಪೊಟ್ಟಣ. ನನಗೆ ನನ್ನ ತಂಗಿಯರಿಗೆ ಮತ್ತು ಮನೆಯವರಿಗೆ ಎಲ್ಲರಿಗೂ ಬೇರೆ ಬೇರೆಯದ್ದೇ ಪೊಟ್ಟಣವನ್ನು ನಾವು ಇರುವಷ್ಟೂ ದಿನವು ತಂದು ಕೊಡುತ್ತಿದ್ದರು. ಆಗ ಅವರ ಜೊತೆ ಕುಳಿತು ಕೊಂಡು ಪೊಟ್ಟಣ ಬಿಡಿಸುತ್ತಿದ್ದ ಹಾಗೆ ಮಾವ ನಮ್ಮಗಳ ಕೆನ್ನೆಗೆ ಸಣ್ಣದಾಗಿ ಸವರುತ್ತಲೋ, ಇಲ್ಲವೇ ಗುದ್ದುತ್ತಲೋ ದಾಲ, ದೋಲ, ದುಮ್ಮ, ಪನ್ನಾಲೋ, ಪನ್ನಿಕೋ, ಪಚ್ಚಮಕ್ಕೋ, ದಾಲುಮಾ, ದಾಲ್ಮಕೋ, ದಾಲುಮಾ (ನಮ್ಮ ಮಾವ ನಮ್ಮನ್ನು ಮುದ್ದಾಡುವಾಗ ಹೇಳುತ್ತಿದ್ದ ಪ್ರೀತಿಯ ಚುಟುಕು) ಎಂದು ಹೇಳುತ್ತಿದ್ದ ಪ್ರೀತಿಯ ಚುಟುಕದ ಅರ್ಥ ಇಂದಿಗೂ ನಮಗೂ ಮತ್ತು ಅವರಿಗೂ ಗೊತ್ತಿಲ್ಲ. ಅದೇ ರೀತಿಯಲ್ಲೇ ಆಫ್ ಫಾರ್ ಸಿಕ್ಸ್, ಟಿಮ್ ಬಾಕ್ಸ್ ಜಾನ್, ಎಕ್ಸಾಟ್ಲಿ ಫಿಟಿಂಗ್, ಎಕ್ಸಾಟ್ಲಿ ಕಟಿಂಗ್, ಟುಫಾನ್ ಕ್ವೀನ್ ಎನ್ನುವ ಮತ್ತೊಂದು ಚುಟುಕು. ನಾನು ದೊಡ್ಡವನಾದ ಮೇಲೆ ಅರ್ಥೈಸಿಕೊಂಡಂತೆ, ಸ್ವಾತ್ರಂತ್ರ್ಯ ಪೂರ್ವದಲ್ಲಿ ಕೆಜಿಎಫ್ ನಲ್ಲಿ ಬ್ರಿಟೀಶರ ಕಾಲೋನಿಗಳೇ ಹೆಚ್ಚಾಗಿದ್ದ ಕಾರಣ ಮತ್ತು ನಮ್ಮ ಅಜ್ಜಿಯ ಮನೆಯೂ ಅಲ್ಲಿಯೇ ಇದ್ದು ನಮ್ಮ ಅಮ್ಮಾ ಮತ್ತು ಮಾವ ತುಂಬಾ ಮುದ್ದು ಮುದ್ದಾಗಿದ್ದ ಕಾರಣ ಆ ಬ್ರೀಟೀಷರು ಪುಟ್ಟ ಮಕ್ಕಳನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಮುದ್ದಾಡುತ್ತಿದ್ದರಂತೆ. ನಮ್ಮ ಮಾವನ ಈ ಮುದ್ದಿನ ಮಾತುಗಳಲ್ಲಿ ಇಂಗ್ಲೀಶ್ ಮತ್ತು ಹಿಂದಿ ಇರುವುದನ್ನು ನೋಡಿದರೆ ಬಹುಶಃ ಇದು ಬ್ರಿಟೀಶರಿಂದ ಬಂದ ಬಳುವಳಿಯಾಗಿರಬಹುದು.

ಇನ್ನು ನಮ್ಮ ಅತ್ತೆ ನಿಜವಾಗಲೂ ತಾಳ್ಯೆಯ ಖನಿಯೇ ಹೌದು. ನಾವೆಷ್ಟೇ ಚೇಷ್ಟೆಮಾಡಿದರೂ ಒಂದು ಚೂರು ಗದರದೇ ನಮ್ಮನ್ನೆಲ್ಲಾ ಅಕ್ಕರೆಯಿಂದಲೇ ಆಡಿಸುತ್ತಿದ್ದ ಮಹಾ ಸಾದ್ವಿ. ಅವರು ಅಂದು ನಮ್ಮೆಲ್ಲರಿಗೂ ಕಲಿಸಿಕೊಟ್ಟ ಅನೇಕ ಹಾಡುಗಳು ಇಂದಿಗೂ ನಮ್ಮ ಮಸ್ತಕದಲ್ಲಿ ಅಚ್ಚೊತ್ತಿದೆ.

k3

ಅಜ್ಜಿ ಮನೆಗೆ ಬಂದು ಮೂರ್ನಾಲ್ಕು ದಿನಗಳು ಕಳೆಯುತ್ತಿದ್ದಂತೆಯೇ ವೂ ಏಕತಾನತೆಯಿಂದಾಗಿ ಬೇಜಾರಾಗುತ್ತಿದ್ದಂತೆಯೇ ಮಾವನ ಜೊತೆಗೆ ಅವರ ಆಸ್ಪತ್ರೆಗೆ ಹೋಗಿ card sectionನಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದದ್ದಲ್ಲದೇ ಆಸ್ಪತ್ರೆಯ ಆವರಣದಲ್ಲಿ ಇರುತ್ತಿದ್ದ ಬೆಟ್ಟದ ಹುಣಸೇ ಮತ್ತೊಂದು ಆಕರ್ಷಣೆ. ಮರದಲ್ಲೇ ಕೆಂಪಗೆ ಹಣ್ಣಾಗಿರುತ್ತಿದ್ದ ಬೆಟ್ಟ ಹುಣಸೆಯನ್ನು (ತಮಿಳಿನಲ್ಲಿ ಕೊರ್ಕಾಂಪಿಲ್ಲೆ) ಮಾವಾ ಯಾವುದಾದರೂ ವಾರ್ಡ್ ಬಾಯ್ ಅವರಿಗೆ ಹೇಳಿ ಕೀಳಿಕೊಡುತ್ತಿದ್ದರು. ನಾನು ಜೀಬು ತುಂಬಾ ತುಂಬಿಸಿಕೊಂಡು ಒಂದೊಂದಾಗಿ ಬಿಡಿಸಿಕೊಂಡು ಸ್ವಲ್ಪ ಒಗುರು ಜಾಸ್ತಿ ಸಿಹಿ ಇರುತ್ತಿದ್ದ ಹಣ್ಣನ್ನು ತಿಂದು ಅದರ ಕಪ್ಪನೆಯ ಜೀಜವನ್ನು ಅಳುಗುಳಿ ಮಣೆ ಆಡಲು ಎತ್ತಿಕೊಳ್ಳುತ್ತಿದ್ದದ್ದಲ್ಲದೇ ಮನೆಗೂ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ.

nelli

ಅಜ್ಜಿಯ ಮನೆಯ ಮತ್ತೊಂದು ಅಕರ್ಷಣೆ ಎಂದರೆ ಕಿರು ನೆಲ್ಲಿಕಾಯಿ. ಬಹುಶಃ ನಾನು ಮರ ಹತ್ತುವುದನ್ನು ಕಲಿತಿದ್ದೇ ಅದೇ ನೆಲ್ಲೀ ಕಾಯಿ ಮರದಲ್ಲಿಯೇ. ಮರದಲ್ಲಿ ಗೊಂಚಲು ಗೊಂಚಲು ನೆಲ್ಲಿಕಾಯಿ ಜೋತಾಡುತ್ತಿದ್ದರೆ ಅದನ್ನು ಕೀಳಲೆಂದೇ ಅಕ್ಕ ಪಕ್ಕದ ಹುಡುಗರು ಕಲ್ಲು ಬೀರುತ್ತಿದ್ದದ್ದು ಅಪ್ಪಿ ತಪ್ಪೀ ನಮ್ಮ ಬಾಗಿಲಿಗೆ ತಾಕಿ ಶಬ್ಧ ಬಂದರೆ ಯಾರೋ ಅದೋ ಕಲ್ಲು ಹೊಡಿತಾ ಇರೋದು ಎಂದು ತಮಿಳಿನಲ್ಲಿ ಜೋರಾಗಿ ಕೂಗುತ್ತಾ ದೊಡ್ಡ ಕೋಲನ್ನು ಹಿಡಿದು ಕೊಂಡು ಬರುತ್ತಿದ್ದ ನಮ್ಮ ಅಜ್ಜಿಯನ್ನು ಈಗ ನೆನಪಿಸಿಕೊಂಡರೆ ಮಜ ಬರುತ್ತದೆ.

ಒಮ್ಮೊಮ್ಮೆ ಸಂಜೆ ಆಫೀಸಿನಿಂದ ನೇರವಾಗಿ ಬೀರ್ ಶಾಪ್ (ರಾಬರ್ಟ್ ಸನ್ ಪೇಟೆ) ಟೌನ್ (ಆಂಡರ್ ಸನ್ ಪೇಟೆ)ಗೆ ಕರೆದುಕೊಂಡು ಹೋಗಿ ಹೋಟೆಲ್ಲಿನಲ್ಲಿ ಮಸಾಲೆ ದೋಸೆ ಕೊಡಿಸಿ ಬರುವಾಗ ಆಗಷ್ಟೇ ತಮಿಳು ನಾಡಿನಿಂದ ತಾಜವಾಗಿ ಬಂದಿರುತ್ತಿದ್ದ ತಾಳೇಕಾಯಿ (ತಮಿಳಿನಲ್ಲಿ ತಾಟಿನಿಂಗು) ಕೊಡಿಸುತ್ತಿದ್ದದು ಇಂದಿಗೂ ಮುದ ನೀಡುತ್ತದೆ. ಮಾವನ ಜೊತೆ ಹೊರಗೆ ಹೋಗುವುದೆಂದರೆ ಅದೊಂದು‌ ರೀತಿಯಲ್ಲಿ VIP‌ ಜೊತೆ ಹೊಗ್ತಾ ಇದ್ದಿವೇನೋ ಅನ್ನಿಸ್ತಿತ್ತು ಅಂದರೆ ಅತಿಶಯವಲ್ಲ. ಮಾವ ಬಿಜಿಎಂಎಲ್ ಆಸ್ಪತ್ರೆಯ Card section in charge ಆಗಿದ್ದ ಕಾರಣ ಮತ್ತು ನಮ್ಮ ಅಜ್ಜನವರೀ ಬಹುತೇಕ ಕೆಜಿಎಫ್

ಅಜ್ಜಿ ಮನೆಯ ಎಲ್ಲರ ಅಕ್ಕರೆಯಲ್ಲಿರುವಾಗ ನಾಲ್ಕೈದು ವಾರಗಳು ಕಳೆದು ಹೋಗುತ್ತಿದ್ದದ್ದೇ ಗೊತ್ತಾಗುತ್ತಿರಲಿಲ್ಲ. ಕಡೆಗೆ ಇನ್ನೇನು ಹೊರಡಲು ಎರಡು ಮೂರು ದಿನಗಳಿವೆ ಎಂದಾಗ ಮಾವ ನಮಗೆಲ್ಲಾ ತಂದು ಕೊಡುತ್ತಿದ್ದ ಬಟ್ಟೆಯನ್ನು ಹಾಕಿಕೊಂಡಾಗ ಆಗುತ್ತಿದ್ದ ಸಂತೋಷ ಮತ್ತು ಸಂಭ್ರಮದ ಮುಂದೆ ಇಂದು ನಾವು ಎಷ್ಟೇ ದುಡ್ಡು ಕೊಟ್ಟು ಯಾವುದೇ ಬ್ರಾಂಡ್ ಬಟ್ಟೆಯನ್ನು ಹಾಕಿಕೊಂಡರೂ ಆಗುವುದಿಲ್ಲ.

ಹೊರಡುವ ದಿನ ಬೆಳಿಗ್ಗೆ ಅಕ್ಕ ಪಕ್ಕದವರೆಲ್ಲರೂ ಪ್ರೀತಿ ಪೂರ್ವಕವಾಗಿ ತಮ್ಮ ಮನೆಯಲ್ಲಿ ಬೆಳೆದಿದ್ದ ಹತ್ತಿ (ದೇವರಿಗೆ ಬತ್ತಿ ಮಾಡಲು) ನುಗ್ಗೇಕಾಯಿ (ಕೆಜಿಎಫ್ ಮಣ್ಣು ನುಗ್ಗೇಕಾಯಿಗೆ ಪ್ರಶಸ್ತವಾಗಿರುವ ಕಾರಣ ಬಹುಶಃ ಅಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ನುಗ್ಗೇ ಮರವನ್ನು ಕಾಣಬಹುದಾಗಿತ್ತು) ಬೆಟ್ಟದ ಹುಣಸೇ ತಂದು ಕೊಡುತ್ತಿದ್ದರು. ಇನ್ನು ನಮ್ಮ ಮಾವ, ಒಂದು ವರ್ಷಗಳಿಗೆ ಆಗುವಷ್ಟು ಬ್ಯಾಂಡೇಜ್, ಡೆಟಾಲ್, ಮದರ್ ಟಿಂಚರ್, ಪ್ಲಾಸ್ಟರ್, ಕ್ಲಿನಿಕಲ್ ಹತ್ತಿ ಎಲ್ಲವನ್ನೂ ನ್ಯೂಸ್ ಪೇಪರಿನಲ್ಲಿ ಚೆಂದವಾಗಿ ಕಟ್ಟಿ ಕಳುಹಿಸುತ್ತಿದ್ದರು.

ರೈಲು ಛಾಂಪಿಯನ್ ಸ್ಟೇಷನ್ ಬರುವಷ್ಟರಲ್ಲಿ ಎಲ್ಲಾ ಸೀಟುಗಳೂ ಭರ್ತಿ ಆಗಿರುತ್ತಿದ್ದ ಕಾರಣ, ಅವರು ತಮ್ಮ ಶಿಷ್ಯ ರವಿಯನ್ನು ಮಾರಿಕುಪ್ಪಂ ಸ್ಟೇಷನ್ಗೆ (starting point) ಕಳುಹಿಸಿ ಅಲ್ಲಿಂದಲೇ ಸೀಟ್ ಹಿಡಿದಿಟ್ಟಿರುತ್ತಿದ್ದರು. ಮದುವೆಯಾದ ಹೆಣ್ಣು ಮಗಳು ತಾಯಿ ಮನೆಯಿಂದ ಗಂಡಮನೆಗೆ ಮೊದಲ ಬಾರಿಗೆ ಹೊಗುವಾಗ ಅಳುವಂತೆಯೇ ನಾವು ಸಹಾ ಅಳುತ್ತಲೇ ಮಾವ ಕಾಣುವಷ್ಟು ದೂರ ಕೈಬೀಸುತ್ತಲೇ ಇರುತ್ತಿದ್ದೆವು.

ಬೆಂಗಳೂರಿಗೆ ಬಂದ ಕೂಡಲೇ ಒಂದು ಪೋಸ್ಟ್ ಕಾರ್ಡ್ ತೆರೆದುಕೊಂಡು ನಾವು ಕ್ಷೇಮವಾಗಿ ತಲುಪಿದೆವು ಎಂದು ಬರೆದು ಅದನ್ನು ಅಂಚೆ ಪೆಟ್ಟಿಗೆಗೆ ಹಾಕಿದಾಗಲೇ ನಮ್ಮ ಅಜ್ಜಿಯ ಮನೆಯೆ ಪ್ರವಾಸ ಸಂಪೂರ್ಣವಾಗುತ್ತಿತ್ತು.

ನಾನು ಬೆಳೆದು ಮಿಡಲ್ ಸ್ಕೂಲ್ ಮತ್ತು ಹೈಸ್ಕೂಲ್ ಬರುತ್ತಿದ್ದಂತೆಯೇ ಬೇಸಿಗೆ ಬಂದ ಕೂಡಲೇ ಒಂದಲ್ಲಾ ಒಂದು ಶಿಬಿರಗಳಿಗೆ (ವೇದ ಶಿಬಿರ, ಸಂಘದ ಶಿಬಿರ) ಕಳುಹಿಸುತ್ತಿದ್ದ ಕಾರಣ ಅಜ್ಜಿಯ ಮನೆಗೆ ಹೋಗುವುದು ಕ್ರಮೇಣ ಕಡಿಮೆ ಆಗಿಯೇ ಹೋಯ್ತು. ಈ ನಡುವೆ ಅಜ್ಜಿಯೂ ಶಿವನ ಪಾದ ಸೇರಿಕೊಂಡಾಗಿತ್ತು. ಕಡೆಯದಾಗಿ ನಾನು ಅಜ್ಜಿ ಮನೆಗೆ ಹೊಗಿದ್ದು ನಮ್ಮ ಮನೆಯ ಗೃಹಪ್ರವೇಶಕ್ಕೆ ಎಲ್ಲರನ್ನೂ ಕರೆಯುವುದಕ್ಕಾಗಿ. ಅದಾದ ನಂತರ ಚಿನ್ನದ ಗಣಿಯೇ ಮುಚ್ಚುವ ಪರಿಸ್ಥಿತಿ ಬಂದಾಗ ಮಾವನಿಗೆ ಸ್ವಯಂ ನಿವೃತ್ತಿ ಕೊಡಿಸಿ, ಅದರಲ್ಲಿ ಬಂದ ಹಣದಲ್ಲಿಯೇ ನಮ್ಮ ಮನೆಯ ಹತ್ತಿರವೇ ಅವರಿಗೆ ಒಂದು ಚೆಂದದ ಪುಟ್ಟದಾದ ಮನೆಯನ್ನು ಕಟ್ಟಿಸಿಕೊಟ್ಟು ಇಲ್ಲಿಗೆ ಕರೆಸಿಕೊಂಡು ಬಿಟ್ಟ ಕಾರಣ ಪ್ರತೀ ದಿನವೂ ಮಾವನ ದರ್ಶನವಾಗುತ್ತಿತ್ತು,

ಕೆಲವರ್ಷಗಳ ನಂತರ ನಾವೇ ಅಲ್ಲಿಂದ ಸ್ವಲ್ಪ ದೂರದಲ್ಲಿ ಮತ್ತೊಂದು ಮನೆಯನ್ನು ಕಟ್ಟಿಕೊಂಡು ಹೋದಾಗ ಹಬ್ಬ ಹರಿ ದಿನಗಳಿಗೇ ನಮ್ಮ ಭೇಟಿ ಸೀಮಿತವಾಗಿ ಹೋಗಿತು. ಪ್ರತಿಬಾರಿ ಅವರ ಮನೆಗೆ ಹೋದ ಕೂಡಲೇ ಹಾಯ್ ಸೆಲೈ (ಚಲುವ ಎನ್ನುವುದರ ತಮಿಳು ಅಪಭ್ರಂಶ) ಎಪ್ಪಡಿ ಇರ್ಕೆ? ಎಂದು ತಮಿಳಿನಲ್ಲಿಯೇ ಕೇಳಿದರೇ, ಏಯ್ ಕನ್ನಡದಲ್ಲಿ ಮಾತಾಡೊ ಎಂದು ಮಾವ ತಮಾಷೆಗೆ ಹೇಳುವಷ್ಟರಲ್ಲಿ ಅವರ ಎರಡೂ ಕೈಗಳನ್ನು ತೆಗೆದುಕೊಂಡು ಚೆನ್ನಾಗಿ ನೆಟಿಕೆ ತೆಗೆದು, ಆವರ ಕೆನ್ನೆಗೆ ಸಣ್ಣದಾಗಿ ಗುದ್ದುತ್ತಾ ಅವರದ್ದೇ ದಾಲಾ.. ದೋಲಾ.. ಹೇಳಿ ತಬ್ಬಿಕೊಂಡಾಗಲೇ ಏನೋ ಅಪ್ಯಾಯಮಾನ.

ಇಂದು ಬೆಳ್ಳಬೆಳಿಗ್ಗೆ ಮಾವನ ಮಗ ಕರೆ ಮಾಡಿ, ಅಣ್ಣನಿಗೆ ಯಾಕೋ ಹುಷಾರಿಲ್ಲ, ಕೊರೋನ -ve ಬಂದಿದೆಯಾದರೂ ಯಾಕೋ ಸುಸ್ತು ಎನ್ನುತ್ತಿದ್ದಾರೆ ಏಂದಾಗ ಕೂಡಲೇ ವಿಡಿಯೋ ಕಾಲ್ ಮಾಡಿ ಮತ್ತದೇ ಕಕ್ಕುಲತೆಯಿಂದ ನಮ್ಮ KGF ಅಸಲೀ ಹೀರೋಗೇ ಹಾಯ್ ಸೆಲೈ ಎಪ್ಪಡಿ ಇರ್ಕೆ? ಎಂದಾಗ, ಶ್ರೀಕಂಠಾ.. ಶ್ರೀಕಂಠಾ.. ಅಗ್ತಾ ಇಲ್ವೋ.. ಯಾಕೋ ವಿಪರೀತ ಸುಸ್ತು ಮತ್ತು ಸಂಕಟ ಆಗುತ್ತಿದೆೆ ಎಂದಾಗ ಕರಳು ಕಿತ್ತು ಬಂದಿದ್ದಂತೂ ಸುಳ್ಳಲ್ಲ. ಇತ್ತೀಚೆಗೆ ಅವರ ಕಣ್ಣ ಮುಂದೆಯೇ ಅವರ ಆತ್ಮೀಯರು ಕೊರೋನಾದಿಂದಾಗಿ ಗತಿಸಿಹೋಗಿದ್ದು ಅವರಿಗೆ ಭಯವನ್ನು ತಂದಿದೆ ಎನಿಸಿ, ಭಯ ಪಡಬೇಡಿ ಆರಾಮಗಿರಿ ಎಂದು ಸಮಾಧಾನ ಪಡಿಸಿದೆ.

ಬಹುತೇಕ ಆಸ್ಪತ್ರೆಗಳು ಕೊರೋನಾದಿಂದಾಗಿ ಭರ್ತಿ ಆಗಿರುವ ಕಾರಣ ಯಾವುದೇ ಆಸ್ಪತ್ರೆ ಸಿಗದೇ ಪರದಾಡುತ್ತಿದ್ದೇವೆ. ದೇವರ ದಯೆಯಿಂದ ಮಾವನಿಗೆ ಆಸ್ಪತ್ರೆಯೊಂದರಲ್ಲಿ ಹಾಸಿಗೆ ಸಿಕ್ಕಿ ಅವರಿಗೆ ಸೂಕ್ತ ಚಿಕಿತ್ಸೆ ದೊರೆತು ಶೀಘ್ರವಾಗಿ ಮೊದಲಿನಂತಾಗಲಿ ಎಂದು ಭಗವಂತನಲ್ಲಿ ನಾವೆಲ್ಲಾ ಪ್ರಾರ್ಥಿಸುತ್ತೇವೆ. ನಮ್ಮ ಪ್ರಾರ್ಥನೆಯ ಜೊತೆ ನಿಮ್ಮೆಲ್ಲರ ಶುಭ ಹಾರೈಕೆಗಳು ನಮ್ಮ ಮಾವನ ಮೇಲಿರುತ್ತದೆ ಅಲ್ವೇ? ಹಿತೈಷಿಗಳ ಶುಭ ಹಾರೈಕೆ ಮತ್ತು ಸಾಂತ್ವಾನ ನಿಜಕ್ಕೂ ಉತ್ತಮ ಫಲ ನೀಡುತ್ತದೆ

ಏನಂತೀರೀ?

ನಿಮ್ಮವನೇ ಉಮಾಸುತ

7 thoughts on “ಅಜ್ಜಿ ಮನೆಯಲ್ಲಿ ಬೇಸಿಗೆಯ ರಜಾ ಮಜ

    1. ವಾವ್!! ನಿಮ್ಮ ಅಜ್ಜಿ ಮನೆಯ ಹತ್ತಿರದ ಕಾನ್ವೆಂಟಿನಲ್ಲೇ ನಮ್ಮ ಅಮ್ಮ ಮತ್ತು ಚಿಕ್ಕಮ್ಮ ಓದಿದ್ದು. ಅಲ್ಲಿಯೇ ಇದ್ದ ಜಾನ್ಸನ್ ಗ್ರೌಂಡ್ಸ್ ನಲ್ಲಿ ಅದೆಷ್ಟೋ ಕ್ರಿಕೆಟ್ ಪಂದ್ಯಗಳನ್ನು‌ ನಾನು ಆಡಿದ್ದೇನೆ.

      Like

  1. Most of my childhood was spent at same place. My uncle qurters were next to Edgar’s shaft. Uddandamma temple, church on the way to champion railway station , post office, level crossing near SP office & mining hospital area is still green in mind

    Like

    1. ಆ ಕಲ್ಲಿನ ರಸ್ತೆಗಳು ಅಕ್ಕಪಕ್ಕಗಳಲ್ಲಿ ಬೆಳೆದಿರುತ್ತಿದ್ದ ಪಾಪಸ್‌ ಕಳ್ಳಿ ಅದರ‌ ತುದಿಯಲ್ಲಿರುತ್ತಿದ್ದ ಹಣ್ಣುಗಳನ್ನು ಕೀಳಲು ಹರಸಾಹಸ ಮಾಡುತ್ತಿದ್ದದ್ದು ನೆನಪಾಗುತ್ತದೆ

      Like

  2. ನಮ್ಮ ಬಾಲ್ಯದ ಸುಮಧುರ ನೆನಪು ಮಾಡಿಕೊಟ್ಟ ಅಣ್ಣ ಶ್ರೀಕಂಠನಿಗೆ ಧನ್ಯವಾದಗಳು.

    ನಿಜ ಇತ್ತೀಚೆಗೆ ಕರೋನ ಸುದ್ದಿಯ ವಿಷಯಗಳ ನಡುವೆಯೂ, ನಾವು ಚಿಕ್ಕವರಿದ್ದಾಗ ಕಳೆದ ಘಟನೆಗಳು ಅಚ್ಚೊತ್ತಿದೆ ಎಂದರೆ ತಪ್ಪಾಗಲಾರದು, ಬಹುಶಃ ಇದು ಎಲ್ಲರಿಗೂ ಆದ ಅನುಭವ.

    ಈಗ ವಿಷಯಕ್ಕೆ ಬರೋಣ, ನಮ್ಮ ಅಜ್ಜಿಯ ಊರು ಚಿನ್ನದ ನಾಡೆಂದೆ ಪ್ರಸಿದ್ಧವಾದ ಕೋಲಾರ ಜಿಲ್ಲೆಯ ಕೆ.ಜಿ.ಎಫ್,
    ಇಲ್ಲಿ ಪ್ರಮುಖವಾಗಿ ಗಣಿಗಾರಿಕೆ ಪ್ರದೇಶ. ಬಾಲ್ಯದ ರಜೆ ಬಂದ ಸಂದರ್ಭದಲ್ಲಿ ನಾವು 15 ರಿಂದ 20 ದಿನಗಳು ರಜೆಯನ್ನು ಕಳೆಯುತ್ತಿದ್ದೆವು. ನಾವು ನಮ್ಮ ಸೋದರ ಮಾವನ, ದೊಡ್ಡಮ್ಮನ, ಚಿಕ್ಕಮ್ಮನ ಮಕ್ಕಳು ಜೊತೆಗೆ, ಅತ್ತೆಯ ಕಡೆ ಸಂಬಂಧಿಕರು
    ಕಡಿಮೆ ಎಂದರು 8 ರಿಂದ 10 ಜನ ಸೇರುತ್ತಿದ್ದರು. ಊರಿಗೆ ಹೋಗುವ ಮುನ್ನ ಎಲ್ಲರಿಗೂ ಪತ್ರದ ಮೂಲಕ ತಿಳಿಸಿ ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ಸೇರಿ ಸಂಜೆ ಹೊರಡುವ ಮಾರಿಕ್ಕುಪ್ಪಂ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆವು.

    ರೈಲುನಲ್ಲಿ ಕಾಡು ಹರಟೆ, ವಿನೋದ, ಅಂತ್ಯಾಕ್ಷರಿ, ಇಲ್ಲವೇ ಹಾಡು‌ ಹೀಗೆ ಒಂದಲ್ಲಾ ಹಲವು ಬಗ್ಗೆಯ ಚಟುವಟಿಕೆಗಳಲ್ಲಿ ತೊಡಗಿ, ಮನೆಯಿಂದ ತಂದಿರುವ ತಿಂಡಿಗಳನ್ನು ತಿನ್ನುತ್ತಾ, ಇಲ್ಲವೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಿಟಕಿ ಮೂಲಕ ಆಸ್ವಾದಿಸುತ್ತ, ಸಮಯ ಕಳೆದದ್ದು ಗೊತ್ತಾದೇ ಇಲ್ಲದಂತೆ ನಮ್ಮ ನಿಲ್ದಾಣ ಬರುತ್ತಿದ್ದಂತೆ ನಮ್ಮ ಲಗೇಜು ಪ್ಯಾಕ್ ಮಾಡಿ ರೈಲಿನಿಂದ ಇಲ್ಲಿದು ಬರುತ್ತಿದ್ದಂತೆ ನಮ್ಮ ಮಾವ ನಮಗಾಗಿ ಕಾಯುತ್ತಾ ಜೊತೆಗೆ ನಮ್ಮ ಮಾವನ ಮನೆಯಲ್ಲಿ ಹಲವು ವರ್ಷಗಳಿಂದ ಮನೆಯ ಆತ್ಮೀಯನಾಗಿಯೇ ಬೆಳೆದ ರವಿ, ಲಗ್ಗೆಜುಗಳನ್ನು ತಗೆದು ಕೊಳ್ಳುತ್ತಾ ಉಭಯ ಕುಶಲ ವಿಚಾರಿಸಿ ಮನೆಗೆ ಸಾಗುತ್ತಿದ್ದೆವು.

    ಒಮ್ಮೆ 1985/86 ಆಸುಪಾಸಿನಲ್ಲಿ ನಮ್ಮ ಅಮ್ಮ, ನಾನು, ನನ್ನ ತಮ್ಮ ಚಿಕ್ಕಮ್ಮ, ಚಿಕ್ಕಪ್ಪ ಮಕ್ಕಳು ಎಲ್ಲರೂ ಬೆಂಗಳೂರಿನಿಂದ ಕೆ.ಜಿ.ಎಫ್ ಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದೆವು. ಹೇಗೋ ಸೀಟುಗಳು ಸಿಕ್ಕಿತು, ಮುಂದೆ ಸಾಗುತ್ತಿದ್ದಂತೆ ಬೋಗಿಗಳಲ್ಲಿ ಜನರು ತುಂಬ ತೊಡಗಿದರು. ಸಾಮಾನ್ಯವಾಗಿ ಪ್ರತಿ ದಿವಸ ಅನೇಕ ಕೂಲಿಗಳು, ಕಾರ್ಮಿಕರು, ಪ್ರಯಾಣ ಮಾಡುತ್ತಾರೆ ಹೀಗೆ ನಮ್ಮ ಬೊಗಿಯು ಜಾಗವಿಲ್ಲದೆ ತುಂಬಿತ್ತು, ನಾವು ಕುಳಿತ ಹಿಂದಿನ ಸೀಟಿನಲ್ಲಿ ಕೆಲವರು ಇಸ್ಪೀಟು ಆಟ ಆಡುತ್ತಾ ಜೋರಾಗಿ ಕೇಕೆ ಹಾಕುತ್ತಾ, ಆಡ ತೊಡಗಿದರು, ಆಗ ನಾವು ಕನ್ನಡದಲ್ಲಿ ಮಾತಾನಾಡುತ್ತಾ ಇರುವುದನ್ನು ಕಂಡ ಕೆಲವು ಪುಂಡರು ನಮ್ಮ ಮೇಲೆ ರೇಗಲು ತೊಡಗಿದರು, ಮೊದಲೇ ಕನ್ನಡ ಮತ್ತು ತಮಿಳುನಾಡಿನ ಮಧ್ಯೆ ಕಾವೇರಿ ವಿಷಯದಲ್ಲಿ ವಿವಾದ ಇತ್ತು, ಇತ್ತ ಮಾತಿನ ಮಧ್ಯೆ ಒಬ್ಬ ಪುಂಡ ನಮ್ಮೆಲ್ಲರನ್ನೂ ತಳ್ಳಿ ಹೊಡೆಯಲು ನಿಂತ. ನಮ್ಮ ಅಮ್ಮ, ಚಿಕ್ಕಮ್ಮ ಎಲ್ಲರೂ ಪ್ರಶ್ನೆ ಮಾಡಿದಾಗ, ನೋಡ ನೋಡುತ್ತಿದ್ದಂತೆಯೇ ನಮ್ಮ ಚಿಕ್ಕಪ್ಪನ ಮೇಲೆ ಕೈ ಮಾಡ ತೊಡಗಿದ‌. ದುರಾದೃಷ್ಟವಶಾತ್ ಯಾರೂ ಸಹ ನಮ್ಮ ಸಹಾಯಕ್ಕೆ ಬರಲಿಲ್ಲ, ನಮ್ಮ ನಿಲ್ದಾಣ ಯಾವಾಗ ಬರುತ್ತದೆ ಎಂದು ಜೀವ ಬಿಗಿಯಾಗಿ ಕುಳಿತಿದ್ದೆವು, ಇದೊಂದು ಸನ್ನಿವೇಶ ಇವತ್ತಿಗೂ ನನ್ನಲ್ಲಿ ಅಚ್ಚೊತ್ತಿದೆ.

    ಕೆ.ಜಿ.ಎಫ್ ನಮ್ಮ ಅಜ್ಜಿಯ ಮನೆ ವಿಶಾಲವಾದ ಪ್ರದೇಶದಲ್ಲಿ ಇತ್ತು. ಮನೆಯ ಬಾಡಿಗೆ ಎಷ್ಟು ಎಂದು ನಂಬುವುದಕ್ಕು ಸಾಧ್ಯವಿಲ್ಲ, ಏಕೆಂದರೆ ಅದು ಬರಿ 5 ರೂಪಾಯಿ ಮಾತ್ರ, ಮನೆ ವಿಶಾಲವಾಗಿದ್ದು ಈಗಿನ ತರವಲ್ಲ, ಮನೆಯ ಮುಂದೆ ತೋಟ, ನಲ್ಲಿಕಾಯಿ, ನುಗ್ಗೆಕಾಯಿ, ಮಲ್ಲಿಗೆ ಯ ಪರಿಮಳ, ಹೂವಿನ ಗಿಡಗಳು, ಮನೆಯ ಬಾಗಿಲಿನಿಂದ ಒಳಹೊಕ್ಕರೆ ಮೊದಲ ಸಿಗುವುದೇ ವೇರಾಂಡ, ಎಡಕ್ಕೆ ಸಣ್ಣದಾದ ನಮ್ಮ ಮಾವನ ಕೋಣೆ, ನಂತರ ಹಾಲ್, ಹಾಲ್ನಲ್ಲಿ ಎಲ್ಲರ ಪೋಟೋ ( ಎದುರಿಗೆ ಅಜ್ಜ ರಾಜಾರಾವ್ ಅದರ ಸುತ್ತಲೂ ಅತ್ತೆ-ಮಾವ, ದೊಡ್ಡಪ್ಪ-ದೊಡ್ಡಮ್ಮ, ನಮ್ಮಪ್ಪ- ಅಮ್ಮ, ಇನ್ನೂ ಮೂವರು ಚಿಕ್ಕಪ್ಪ- ಚಿಕ್ಕಮ್ಮ) ಮುಂದೆ ಸಾಗಿದರೆ ಕಾಮನ್ ಪ್ಯಾಸೇಜ್ ಅಲ್ಲಿ ಅಜ್ಜಿ ಎಲ್ಲಾ ಸಾಮಾನುಗಳನ್ನು ಜೋಡಿಸಿಡಲಾಗುತ್ತಿತ್ತು ಅದರ ಪಕ್ಕದಲ್ಲೇ ವಿಶಾಲವಾದ ಹತ್ತು ಹದಿನೈದು ಜನರು ಆರಾಮವಾಗಿ ಮಲಗ ಬಹುದಾದ ಕೋಣೆ. ಅದರಲ್ಲಿಯೇ ಒಂದು ದೇವರ ಗೂಡು ಸಹಾ‌ ಇತ್ತು.

    ಅಡಿಗೆ ಮನೆ ಮತ್ತು ಲಿವಿಂಗ್ ಹಾಲ್ ನಡುವೆ ಮಧ್ಯೆ ಹತ್ತು ಅಡಿ ಅಂತರ , ಬಚ್ಚಲು ಮನೆ, ಟಾಯ್ಲೆಟ್, ಹೀಗೆ ವಿಶಾಲವಾದ ಮನೆ. ನಾವೆಲ್ಲರೂ 10 ರಿಂದ 13 ವಯಸ್ಸಿನವರು, ಮನೆಯಲ್ಲಿಯೇ ಆಟ, ಇನ್ನೊಂದು ಬಾಗಿಲು ಇತ್ತು, ಆ ಬಾಗಿಲು ತೆಗೆದರೆ ಮನೆ ಮುಂದೆ ಕಾಣುವ ರಾಜಕಾಲುವೆ, ಗಣಿಗಳು , ಮುಂದೆ 1.5 ಕೀ.ಮಿ ದೂರದಲ್ಲಿ ಹೋಗಿ ಬರುವ ರೈಲುಗಳು, ಗಣಿಗಳಿಂದ ಪ್ರತಿ ದಿವಸ ನೂರಾರು ಲಾರಿಗಳು ಹೋಗಿ ಬರುವ ಚಿತ್ರ, ಗಣಿಯ ಚಕ್ ಬುಕ್ ಸದ್ದು, ಮುಂದೆ ರಾಜಕಾಲುವೆ ಮೇಲೆ ಹಾದು ಹೋಗುವ ನೀರಿನ ಪೈಪ್,ಅದರ ಮೇಲೆ ನಡೆಯುವ ಸಾಹಸ, ಹೀಗೆ ಅದೊಂದು ಆಟವಾಡಲು ಪ್ರಶಸ್ತವಾದ ಜಾಗ, ರಾತ್ರಿಯ ಸಮಯದಲ್ಲಿ ಈ ಹಜಾರದಲ್ಲೇ ನಮ್ಮೆಲ್ಲರ ಊಟ, ಇದೇ ನಮ್ಮ ಪ್ರಪಂಚ.

    ಕೆ.ಜಿ.ಎಫ್ ನಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚು. ಮಧ್ಯಾಹ್ನ 12 ಗಂಟೆಯ ನಂತರ ಹೊರಗೆ ಕಾಲು ಇಡಲು ಕಷ್ಟವಾಗುವಂತಹ ಸುಡು ಬಿಸಿಲು ಅದರಲ್ಲೇ ಕಿ.ಮಿ ಗಟ್ಟಲೆ ದೂರದಿಂದ ನೀರು ತರಬೇಕು.

    ಮನೆಯ ಕೂಗಳತೆ ದೂರದಲ್ಲೇ ಪೋಲಿಸ್ ಸ್ಟೇಷನ್. ಹೆಚ್ಚು ಕಡಿಮೆ ಎಲ್ಲಾ ಪೋಲಿಸರು ನಮ್ಮ ಮನೆಗೇ ನೀರಿಗಾಗಿ ಬರುತ್ತಿದ್ದರು.
    ನಾವು ಸಹ ಅಟವಾಡಲು ಸ್ಟೇಷನ್ನಿಗೆ ಹೋಗುತ್ತಿದ್ದೆವು. ಅಲ್ಲಿ ಕಳ್ಳತನ ಮಾಡಿದ ಕಳ್ಳರನ್ನು ಸರಪಳಿಯಿಂದ ಬಂಧಿಸಿರುತ್ತಿದ್ದರು, ಅವರ ನರಳಾಟ ಚೀರಾಟಗಳನ್ನು ನೋಡಿ ನಮಗೆ ಭಯವಾಗುತ್ತಿತ್ತು.

    ಮೈಸೂರು ಹಾಲ್ ಎಂಬ ಹೆಸರಿನ ಪ್ರದೇಶದಲ್ಲಿ ವಾರಕ್ಕೊಮ್ಮೆ ಚಲನಚಿತ್ರ ಹಾಕುತ್ತಿದ್ದು ಹೆಚ್ಚಿನವು ತಮಿಳು ಚಿತ್ರವೇ ಆಗಿರುತ್ತಿತ್ತು.

    ನಮ್ಮ ಮಾವನರಿಗೆ ಕೆಜಿಎಫ್ ನ ಬಹುತೇಕವಾಗಿ ಎಲ್ಲರೂ ಪರಿಚಯವೇ‌. ಮನೆಯಲ್ಲಿ ಮಾತ್ರವೇ ಕನ್ನಡ. ಉಳಿದೆಲ್ಲಾ ಕಡೆ ತಮಿಳುಮಯ, ಅಲ್ಲಿ ಕನ್ನಡ ಮಾತಾನಾಡುವವರ ಸಂಖ್ಯೆ ತುಂಬಾ ಕಡಿಮೆ, ತಮಿಳು ಮಿಶ್ರಿತ ಕನ್ನಡ , ಇನ್ನೊಂದು ವಿಷಯ ಎಂದರೆ ಮುಖ್ಯವಾಗಿ ಗಣಿಗಳಲ್ಲಿ ಕೆಲಸ ಮಾಡುವ ಜನರು ಹೆಚ್ಚಿನ ಸಂಖ್ಯೆಯ ತಮಿಳರು. ಶ್ರಮ ಜೀವಿಗಳು, ಹೀಗೆ ಕೆಲವು ಮಂದಿ ಕನ್ನಡ ಇಲ್ಲವೇ ತೆಲುಗು ಮಾತನಾಡುವ ಜನರು, ನಾವು ಉರಿಗೆ ಹೋದಾಗ ಅವರ ಮನೆಗಳಿಗೂ ಒಮ್ಮೊಮ್ಮೆ ಹೋಗಿ ಬರುತ್ತಿದೆವು.

    ಬಹುತೇಕ ಎಲ್ಲರೂ ಮಧ್ಯಮ ವರ್ಗದವರಾಗಿದ್ದು ಎಲ್ಲರೂ ನಮ್ಮನ್ನು ಬಹಳ ಆದರದಿಂದ ಕಾಣುತ್ತಿದ್ದರು.

    ಕಾಲ ಉರುಳುತ್ತಿದ್ದಂತೆ ಗಣಿಗಾರಿಕೆ ನಿಂತು ಹೋಯಿತು, ಆನೇಕರು ನಿರುದ್ಯೋಗಿಗಳಾದರು. ಬಹುತೇಕರು ಊರು ಬಿಟ್ಟು ಇತರ ಕಡೆಗೆ ಗುಳೇ ಎದ್ದರು. ನಮ್ಮ ಮಾವನವರೂ ಕೂಡ ಬೆಂಗಳೂರು ಸೇರಿದರು. ಆದರೆ 35 ವರ್ಷಗಳು ಕಳೆದರೂ ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಚೊತ್ತಿದೆ. ಈಗಲೂ ಸಹ ಒಮ್ಮೆ ಊರ ನೋಡುವ ಬಯಕೆ. ಇದನ್ನು ನಾನು ನನ್ನ ಅಣ್ಣ, ತಮ್ಮಂದಿರು, ಅಕ್ಕ ತಂಗಿಯರೊಂದಿಗೂ ಹಂಚಿಕೊಳ್ಳಲು ಬಯಸುವೆ.ಮುಂದೆ ನೋಡೋಣ, ಎಂದಿಗಾಗುವುದೋ ನಿನ್ನ ದರ್ಶನ ಎಂದು ದಾಸರು ಶ್ರೀ ಕೃಷ್ಣನನ್ನು ಕೇಳುವಂತೆ??

    ಆರ್. ಸುದರ್ಶನ

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s