ಕಲಾಸೀ ಪಾಳ್ಯದ ಬೆಂಕಿ ಕರಗ

ಬೆಂಗಳೂರಿನ ಆಸುಪಾಸಿನಲ್ಲಿ ಶತಶತಮಾನಗಳಿಂದಲೂ ಪ್ರಮುಖ ದೇವಾಲಯಗಳಲ್ಲಿ ಅದರಲ್ಲೂ ವಿಶೇಷವಾಗಿ ದೇವಿಯ ದೇವಸ್ಥಾನಗಳಲ್ಲಿ ಕರಗ ಮಹೋತ್ಸವವನ್ನು ಅದ್ದೂರಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಕರಗಕ್ಕೇ ತನ್ನದೇ ಆದ ವೈಶಿಷ್ಟ್ಯವಿದೆ. ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಕರಗ ಮಹೋತ್ಸವವೂ ಒಂದು. ಕರಗ(ಕರಕ) ಎಂಬ ಮಾತಿಗೆ ಕುಂಭ ಎಂಬ ಅರ್ಥವೂ ಇದೆ. ಕರಗದ ಒಂದೊಂದು ಅಕ್ಷರವೂ ಒಂದೊಂದು ಸಂಕೇತವನ್ನು ಹೊಂದಿವೆ ಎನ್ನುವ ಪ್ರತೀತಿ ಇದೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು (ತಿರುಗುವುದು) ಎಂಬ ಅರ್ಥ ವಿವರಣೆ ಬಳಕೆಯಲ್ಲಿದೆ. ಕರಗ ಪೂಜೆ ಮತ್ತು ಉತ್ಸವಗಳು ತಮಿಳುನಾಡಿನಲ್ಲಿ ಬಹು ಹಿಂದಿನಿಂದಲೂ ವೈಭವದಿಂದ ಆಚರಿಸಲ್ಪಟ್ಟು ಕ್ರಮೇಣ ಕರ್ನಾಟಕದ ಬೆಂಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಆಚರಣೆ ರೂಢಿಯಲ್ಲಿದೆ.

karaga9

ಇನ್ನು ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ, ಕುರುಕ್ಷೇತ್ರ ಸಮರದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮಾರ್ಛಿತಳಾಗಿ ಬಿದ್ದಳಂತೆ. ದ್ರೌಪದಿ ಮೂರ್ಛಿತಳಾಗಿ ಬಿದ್ದದ್ದು ಪಾಂಡವರಿಗೆ ತಿಳಿಯದೆ ಮುಂದೆ ನಡೆಯುತ್ತಾರೆ. ಆಕೆಗೆ ಎಚ್ಚರ ಬಂದು ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದ. ಆಗ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ಯಜಮಾನರನ್ನು, ಹಣೆಯಿಂದ ಗಣಾಚಾರಿಗಳನ್ನು, ಕಿವಿಗಳಿಂದ ಗವ್ಡರನ್ನು, ಬಾಯಿಯಿಂದ ಗಂಟೆಪೂಜಾರಗಳನ್ನು ಮತ್ತು ಹೆಗಲಿನಿಂದ ವೀರಕುಮಾರರನ್ನು ಸೃಷ್ಟಿಸುತ್ತಾಳೆ. ಹೀಗೆ ದ್ರೌಪತಿಯ ತಪೋಬಲದಿಂದ ಹುಟ್ಟಿದವರೆಲ್ಲರೂ ಸೇರಿ ಆ ರಾಕ್ಷಸನ ವಿರುದ್ಧ ವೀರಾವೇಷದಿಂದ ಹೋರಾಡಿ ಅವನನ್ನು ಸಂಹರಿಸುತ್ತಾರೆ. ಹೀಗೆ ಮಕ್ಕಳನ್ನು ಹುಟ್ಟಿಸಿದ ದ್ರೌಪದಿ ಆದಿಶಕ್ತಿಯಾಗಿ, ಮತ್ತೆ ಭೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗುವುದು ಆ ಮಕ್ಕಳಿಗೆ ದುಗುಡವನ್ನು ಉಂಟು ಮಾಡುತ್ತದೆ. ಅವಳು ಹೋಗದಂತೆ ತಡೆಯಲು ಶ್ರೀ ಕೃಷ್ಣನ ಮೊರೆ ಹೋಗುತ್ತಾರೆ. ಆಗ ಶ್ರೀ ಕೃಷ್ಣನು ಆ ವೀರಕುಮಾರರಿಗೆ ತಮ್ಮ ತಾಯಿಯನ್ನು ಹೋಗದಂತೆ ತಡೆಯಲು ತಮ್ಮ ಕೈಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಇದನ್ನು ಕರಗ ಹಬ್ಬದಲ್ಲಿ ಅಲಗುಸೇವೆ ಎನ್ನುತ್ತಾರೆ) ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು ಎಂದು ಅವಲತ್ತು ಮಾಡಿಕೊಳ್ಳಲು ತಿಳಿಸುತ್ತಾನೆ. ವೀರಕುಮಾರರು ಶ್ರೀಕೃಷ್ಣನ ಆಣತಿಯನ್ನು ಚಾಚೂ ತಪ್ಪದೇ ಪಾಲಿಸಿದ್ದನ್ನು ನೋಡಿದ ದ್ರೌಪದಿಗೆ ಮರುಕವಾಗಿ ಪ್ರತಿ ವರುಷವೂ ಭೂಮಿಗೆ ಬಂದು ಮಕ್ಕಳೊಂದಿಗೆ ಇರುವ ಮಾತು ನೀಡುತ್ತಾಳೆ. ಆ ದಿನವೇ ಕರಗ ಹಬ್ಬದ ದಿನ. ಈ ಸಂದರ್ಭದ ನೆನಪಿಗೆಗಾಗಿಯೇ ಕರಗ ಮಹೋತ್ಸವ ನಡೆಯುತ್ತದೆ ಎಂಬ ಪ್ರತೀತಿ ಇದೆ.

tim21

ಇದರ ಜೊತೆಗೆ ಇನ್ನೊಂದು ಐತಿಹ್ಯವಿದೆ. ದ್ವಾಪರ ಯುಗದಲ್ಲಿ, ಒಂದು ಸರ್ವಾಲಂಕಾರ ಭೂಷಿತೆಯಾದ ದ್ರೌಪದಿ ಮಂಗಳ ಕಲಶವನ್ನು ಹಿಡಿದು ಸ್ವಯಂವರ ಮಂಟಪವನ್ನು ಪ್ರವೇಶಿಸಿದಳು. ಮತ್ಸ್ಯವನ್ನು ಭೇದಿಸುವ ಅರ್ಜುನನ್ನೂ, ಕುಂತಿಯ ಅಭಿಲಾಷೆಯಂತೆ ಉಳಿದ ನಾಲ್ವರು ಪಾಂಡವ ಸಹೋದರರನ್ನೂ ಶಾಸ್ತ್ರೋಸ್ತವಾಗಿ ವಿವಾಹವಾದಳು. ಆಗ ಸಂತೋಷದಿಂದ ಕೈಯಲಿದ್ದ ಕಲಶವನ್ನು ಶಿರದಲ್ಲಿ ಧರಿಸಿದಳು. ಅದೇ ಕರಗವಾಯಿತು ಎಂಬ ನಂಬಿಕೆಯೂ ಇದೆ.

dt1

ಬೆಂಗಳೂರಿನ ಸಿಟಿ ಮಾರ್ಕೆಟ್ ಬಳಿ ಇರುವ ಶ್ರೀ ಧರ್ಮರಾಯನ ದೇವಸ್ಥಾನದಲ್ಲಿ 9 ದಿನಗಳ ಕರಗವನ್ನು ಅನ್ವೇಷಿಸಿ, ಕನ್ನಡ ಮತ್ತು ತಮಿಳು ಮಿಶ್ರಿತವಾದ ಭಾಷೆಯನ್ನಾಡುವ ತೋಟಗಾರರ ಸಮುದಾಯವಾದ ತಿಗಳರು ನೂರರು ವರ್ಷಗಳ ಹಿಂದೆ ಆರಂಭಿಸಿ, ಇಂದಿಗೂ ಅದೇ ಸಂಪ್ರದಾಯವನ್ನು ಉಳಿಸಿಕೊಂಡು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಚೈತ್ರ ಮಾಸದ ಹುಣ್ಣೆಮೆಯಂದು ಬೆಂಗಳೂರಿನ ಹೂವಿನ ಕರಗ ನಡೆದರೆ, ಇದಾಗಿ ಸರಿಯಾಗಿ ಒಂದು ತಿಂಗಳ ಬಳಿಕ ವೈಶಾಖಮಾಸದ ಹುಣ್ಣಿಮೆಯಂದು ಕಲಾಸಿಪಾಳ್ಯದ ಕರಗ ನಡೆಯುತ್ತದೆ. 11 ದಿನಗಳ ಕಾಲ ನಡೆಯುವ ಕಲಾಸಿಪಾಳ್ಯ ಕರಗದ ಬಹುತೇಕ ಆಚರಣೆ ಬೆಂಗಳೂರು ಕರಗದ ಮಾದರಿಯಲ್ಲೇ ನಡೆಯುತ್ತದೆ. ವಿಶೇಷತೆ ಎಂದರೆ, ಕಲಾಸಿಪಾಳ್ಯ ಕರಗ ಮಹೋತ್ಸವವನ್ನು ಸೂರ್ಯಾಸ್ತದ ಸಮಯದಲ್ಲಿ ಕೆಂಡದ ಮೇಲೆ ಸಾಗುವ ಮೂಲಕ ಆಚರಿಸಲಾಗುತ್ತದೆ. ಹಾಗಾಗಿ‌ ಈ ಕರಗವನ್ನು ಬೆಂಕಿ ಕರಗ ಎನ್ನುತ್ತಾರೆ.

ಕೆಂಡ ಹಾಯುವುದಕ್ಕೂ ಮುನ್ನಾ ಭಕ್ತರು ತಾವು ಹೊತ್ತಿದ್ದ ಅನೇಕ ರೀತಿಯ ಹರಕೆಯನ್ನು ತೀರಿಸುತ್ತಾರೆ. ಅಗ್ನಿಕುಂಡದ ಸುತ್ತ ನೂರಾರು ವೀರಕುಮಾರು ಜೈಕಾರ ಹಾಕುತ್ತ ಕೈಯಲ್ಲಿ ಹಿಡಿದಿದ್ದ ಕತ್ತಿಯಿಂದ ಎದೆಗೆ ಬಡಿಕೊಂಡು ಹರಕೆ ಸಲ್ಲಿಸಿದರೆ, ಹಲವರು ಬಾಯಿಗೆ ಮಾರುದ್ದದ ತ್ರಿಶೂಲವನ್ನು ಚುಚ್ಚಿಕೊಂಡು ಅರ್ಧಾತ್ ಬಾಯಿಗೆ ಬೀಗ ಹಾಕಿಕೊಂಡು ಕೆಂಡ ಹಾದು ಪೂಜೆ ಸಲ್ಲಿಸುವವರು ಕೆಲವರಿರುತ್ತಾರೆ.

karaga10

ಶಕ್ತಿ ದೇವತೆ ದ್ರೌಪದಿ ದೇವಿಯ ಪ್ರತೀಕವಾಗಿ ಆಚರಣೆಗೊಳ್ಳುವ ಕಲಾಸಿಪಾಳ್ಯ ಕರಗ ಮಹೋತ್ಸದಲ್ಲಿ ಕುಂಭದಲ್ಲಿ ದುರ್ಗೆಯನ್ನು ಆವಾಹಿಸಿ, ಪೂಜಿಸಿ, ಹೂವಿನಿಂದ ಅಲಂಕಾರ ಮಾಡಲಾದ ಹಳದಿ ಸೀರೆ ಉಟ್ಟು, ಬಳೆ ತೊಟ್ಟಿದ್ದ ದೇವಸ್ಥಾನದ ಅರ್ಚಕರು, ಗಣಾಚಾರಿ, ಗಂಟೆ ಪೂಜಾರಿಯ ಉಸ್ತುವಾರಿಯಲ್ಲಿ ನಾನಾ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ, ಕರಗ ಹೊತ್ತು ಮಂಗಳವಾದ್ಯಗಳ ನಡೆವೆ ಅಗ್ನಿಕುಂಡದ ಬಳಿ ಆಗಮಿಸಿ, ಐದು ಸುತ್ತು ಪ್ರದಕ್ಷಿಣೆ ಹಾಕಿ ನಂತರ ಕೆಂಡದ ಮೇಲೆ ಸಾಗುತ್ತಿದ್ದಂತೆ, ದ್ರೌಪದಿ ದೇವಿಯ ಮೂರ್ತಿ ಹೊತ್ತ ವೀರಕುಮಾರ ನಡೆಯುತ್ತಾರೆ. ಅವರ ಹಿಂದೆಯೇ ಹಳದಿ ವಸ್ತ್ರ ತೊಟ್ಟು ಕೈಯಲ್ಲಿ ಕತ್ತಿ ಹಿಡಿದ ನೂರಾರು ವೀರಕುಮಾರರು ಗೋವಿಂದಾ ಗೋವಿಂದಾ ಎಂದು ಗೋವಿಂದನ ನಾಮಸ್ಮರಣೆ ಮಾಡುತ್ತಾ ಅವರ ಜೊತೆಗೆ ನೆರೆದಿರುವ ಸಾವಿರಾರು ಭಕ್ತರು ಕೆಂಡದಲ್ಲಿ ನಡೆದು ಕರಗವನ್ನು ಹಿಂಬಾಲಿಸುತ್ತಾರೆ.

ಪೊಲೀಸ್ ಬಿಗಿ ಭದ್ರತೆಯಲ್ಲಿ, ಮಂಗಳವಾದ್ಯಗಳ ನಡುವೆ ಕೆಂಡದ ಮೇಲೆ ಸಾಗಿದ ಹೂವಿನ ಕರಗ ಹೊತ್ತ ಅರ್ಚಕರು ಸಾಗಿದ ನಂತರ ಕಲಾಸಿಪಾಳ್ಯದ ಧರ್ಮರಾಯಸ್ವಾಮಿ ಮತ್ತು ಪೆರುಮಾಳ್ ದೇವಸ್ಥಾನದಿಂದ ಸಾಗಿ, ಕಬ್ಬನ್ ಪೇಟೆ, ಕಿಲಾರಿ ರಸ್ತೆ, ಸಂಪಂಗಿರಾಮ ನಗರ, ಸುಧಾಮ ನಗರ, ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲಿನ ನಾನಾ ದೇವಸ್ಥಾನಗಳಲ್ಲಿ ಪೂಜೆ ಸ್ವೀಕರಿಸುತ್ತ ಸಂಚರಿಸಿತ್ತದೆ. ಮಾರ್ಗದ ಮಧ್ಯೆಯಲ್ಲಿ ಬರುವ ಮಸೀದಿಯಲ್ಲೂ ಪೂಜೆ ಮಾಡಿಸಿಕೊಳ್ಳುವ ಮೂಲಕ ಹಿಂದೂ ಮುಸ್ಲಿಂ ಭಾವೈಕತೆಯನ್ನು ಈ ಕರಗ ಮಹೋತ್ಸವ ಎತ್ತಿಹಿಡಿಯುತ್ತದೆ. ಈ ಕರಗ ಮಹೋತ್ಸವದಲ್ಲಿ ಭಾಗಿಯಾಗಿ ದೇವರ ಕೃಪೆಗ ಪಾತ್ರರಾಗಲು ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನದ ಬಳಿ ಸೇರಿರುತ್ತಾರೆ. ಕರಗ ಸಾಗುವುದನ್ನು ವೀಕ್ಷಿಸಲು ದೇವಸ್ಥಾನದ ರಸ್ತೆ ಕಿರಿದಾಗಿರುವುದರಿಂದ ಸುತ್ತಮುತ್ತಲಿನ ಮನೆಗಳ ಚಾವಣಿ ಹಾಗೂ ತಾರಸಿಯನ್ನೇರಿ ಜನರು ಕರಗ ವೀಕ್ಷಿಸಿ ಪುನೀತರಾಗುತ್ತಾರೆ.

ಈ ಬಾರಿ ಕೊರೋನದ ಮಹಾಮಾರಿಯ ಕಾರಣ ನಿರ್ಭಂಧ ಹೇರಿರುವ ಕಾರಣ, ಎಂದಿನಂತಿನ ಅದ್ದೂರಿ ಇಲ್ಲದಿದ್ದರೂ ದೇವಸ್ಥಾನದ ಮಟ್ಟಿಗೆ ಸರಳವಾಗಿಯಾದರೂ, ಯಾವುದೇ ಶಾಸ್ತ್ರ ಸಂಪ್ರದಾಯಗಳಿಗೆ ಚ್ಯುತಿ ಬಾರದಂತೆ ನಡೆದಿದೆ.

ದೇವಸ್ಥಾನಗಳು ನಮ್ಮ ಧಾರ್ಮಿಕ ಶ್ರದ್ಧಾಕೇಂದ್ರಗಳು. ಅಂತಹ ಶ್ರದ್ಧಾಕೇಂದ್ರಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ಅಗ್ಗಿಂದ್ದಾಗೆ ನಡೆಯುತ್ತಿದ್ದಾಗಲೇ ನಮ್ಮ ಇಂದಿನ ಜನಾಂಗಕ್ಕೆ ನಮ್ಮ ಧರ್ಮ ಮತ್ತು ದೇವರುಗಳ ಅರ್ಥೈಸಿಕೊಂಡು ನಮ್ಮ ಆಚಾರ ವಿಚಾರಗಳಲ್ಲಿ ಶ್ರದ್ಧಾ ಭಕ್ತಿ ಹೆಚ್ಚಾಗುತ್ತದೆ.

ಏನಂತೀರೀ?
ನಿಮ್ಮವನೇ ಉಮಾಸುತ

5 thoughts on “ಕಲಾಸೀ ಪಾಳ್ಯದ ಬೆಂಕಿ ಕರಗ

  1. ಕಲಾಸೀಪಾಳ್ಯದ ಬೆಂಕಿ ಕರಗದ ಬಗ್ಗೆ ಲೇಖನ ಬಹಳ ಸುಂದರವಾಗಿ ವಿವರಣೆ ಯೊಂದಿಗೆ ವೀಡಿಯೋ ಗಳನ್ನು ಸಹ ಇದರ ಬಗ್ಗೆ ಎಷ್ಟೂ ಜನರಿಗೆ ತಿಳಿಯದೇ ಇರದ ವರುಗಳಿಗೆ ಶೀ್ರ. ಶೀ್ರಕಂಠ ಬಾಳಕಂಚಿ ತಿಳಿಸಿರುವ ನಿಮ್ಮ ಕರಗದ ಲೇಖನ ಬಹಳ ಸುಂದರ ವಾಗಿ ವೀಡಿಯೋ ಗಳೊಂದಿಗೆ ಹೊರಹೊವ್ವಿದ್ದು ತಮ್ಮ ಈ ಕರಗದ ಲೇಖನ ಬಹಳ ಸುಂದರವಾಗಿ ಮೂಡಿಬಂದಿದೆ ಇದನ್ನು ನನ್ನ ತಹ ಏಷ್ಟೋಜನರು ಕಲಾಸಿಪಾಳ್ಯದ ಬೆಂಕಿ ಕರಗದ ಬಗ್ಗೆ ತಮ್ಮ ಲೇಖನ ಬರೆದಿರುವತಮಗೆ
    ಒಂದನೆಗಳು👌👍🙏

    Liked by 1 person

      1. ನನ್ನ ಅನಿಸಿಕೆ (Likes, Comments) ಇದರಲ್ಲಿ ತಪ್ಪಾಗಿದ್ದು ಅದನ್ನು ತಮಗೆ ಕಳಿಸಿದ ನಂತರ ಬೇರೆ ಅನಿಸಿಕೆ ಯಲ್ಲಿ ಸರಿಪಡಿಸಲು ನೋಡಿದೆ ಸಾದ್ಯವಾಗಲಿಲ್ಲ ತಪ್ಪನ್ನು ತಾವೇ ಸರಿಪಡಿಸಿದ್ದು ನಂತರ ನನ್ನ ಅನಿಸಿಕೆಯನ್ನು ಪ್ರಕಟಿಸಿದ ಶ್ರೀ.ಶ್ರೀರಂಠ ಬಾಳಗಂಚಿ ಸರ್ ನಿಮಗೆ ಮತ್ತೊಮ್ಮ ನನ್ನ ವಂದನೆಗಳು 👌👍🙏

        Like

  2. O.K. Pl. Mkdify the mistakes only after forwarded my comments then i read it there is an error hope you will makes it correction & Tben only you put on ur ಏನಂತೀರೀ ??? ಅನಿಸಿಕೆ ವಿಭಾಗದಲ್ಲಿ I tried to makes it correction from my end but its not allowed to make correction from my end
    My weakness is only after forwarded my message than only i will read but it is not possible to makes correction from my end
    Ramachandra.G.H.

    Like

Leave a comment