ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ

ಸಾಮ್ಯಾನ್ಯವಾಗಿ ನಮ್ಮ ಹಿಂದಿನ ಕಾಲದವರು ಈಗಿನಷ್ಟು ಆರ್ಥಿಕವಾಗಿ ಸಧೃಡರಿಲ್ಲದಿದ್ದರೂ, ಸರಿಯಾಗಿ ಎರಡು ಹೊತ್ತು ಊಟ ಮಾಡಲು ಇರುತ್ತಿರದಿದ್ದರೂ, ಯಾವುದೇ ರೋಗ ರುಜಿನಗಳಿಲ್ಲದೇ ಆರಾಮವಾಗಿ 80-90 ವರ್ಷಗಳು ಜೀವಿಸುತ್ತಿದ್ದರು. ಅದೆಷ್ಟೋ ಜನ ಶತಾಯುಷಿಗಳಾಗಿಯೂ ಜೀವಿಸಿದ್ದರು. ಅವರ ನೆನಪಿನ ಶಕ್ತಿಯಂತೂ ಕೇಳುವುದೇ ಬೇಡ. ಹಾಗಾಗಿಯೇ ಸುಲಭವಾಗಿ ಐದಾರು ತಲೆಮಾರುಗಳನ್ನು ಸುಲಭವಾಗಿ ನೋಡಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವೆಲ್ಲವೂ ಮಾಯವಾಗಿದೆ. 20-30 ವರ್ಷಕ್ಕೇ ಕೂದಲೆಲ್ಲಾ ಬೆಳ್ಳಾಗಾಗಿ ಅದೆಷ್ಟೋ ಮಂದಿಗಳಿಗೆ ಕೂದಲೆಲ್ಲ ಉದುರಿ ಹೋಗಿ, ಹತ್ತಾರು ರೀತಿಯ ಖಾಯಿಲೆಗಳಿಗೆ ತುತ್ತಾಗಿ ಊಟಕ್ಕಿಂತಲೂ ಹೆಚ್ಚಾಗಿ ದಿನಕ್ಕೆ ಮೂರು ಬಾರಿ ಮಾತ್ರೆಗಳನ್ನು ಸೇವಿಸುವವವರೇ ಹೆಚ್ಚಾಗಿದ್ದಾರೆ. 50 ವರ್ಷಗಳ ಕಾಲ ಬದುಕಿದ್ದರೆ ಅದೇ ಬೋನಸ್ ಎಂಬುವಂತಾಗಿದೆ. ಇಂದಿನ ಪೀಳಿಗೆಯವರಿಗೂ ಹಿಂದಿನ ಪೀಳಿಗೆಯವರಿಗೂ ನಡುವಿರುವ ಜೀವನಶೈಲಿಯ ವ್ಯತ್ಯಾಸವನ್ನು ಈ ಸುಂದರ ಅನುಭವಗಳ ಮೂಲಕ ಅರ್ಥೈಸಿಕೊಳ್ಳೋಣ ಬನ್ನಿ.

ಆ ಹುಡುಗನಿಗೆ ಆಗ ಸುಮಾರು 9 ವರ್ಷ ವರ್ಷಗಳಾಗಿತ್ತು. ಸುಮಾರು 35 ವರ್ಷದ ಅವನ ತಂದೆಯರು ತಮ್ಮದೇ ವಯಸ್ಸಿನ ಸಹೋದ್ಯೋಗಿಯೊಬ್ಬರ ಅಂತಿಮ ಸಂಸ್ಕಾರಕ್ಕಾಗಿ ತಮ್ಮ ಮಗನಾದ ಆ ಹುಡುಗನನ್ನೂ ಕರೆದು ಕೊಂಡು ಹೋಗಿದ್ದರು. ಅವನಿಗೆ ಮೃತರಾದವರ ಪರಿಚಯವಿಲ್ಲದ ಕಾರಣ ಅಲ್ಲೇ ಮೂಲೆಯೊಂದರಲ್ಲಿ ನಿಂತು ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದ. ಆಗ ಇದ್ದಕ್ಕಿದ್ದಂತೆಯೇ ಒಬ್ಬ ವ್ಯಕ್ತಿಯು ಅವರ ಹತ್ತಿರ ಬಂದು, ಮಗು ಈ ಜೀವನ ಎಂಬುದು ನಶ್ವರ, ಹಾಗಾಗಿ ಜೀವ ಇರುವವರೆಗೂ ಚೆನ್ನಾಗಿ ಆನಂದಿಸು. ಇಲ್ಲದೇ ಹೋದರೆ ನನ್ನ ರೀತಿ ಏನನ್ನೂ ಅನುಭವಿಸದೇ ಹೋಗಬೇಕಾಗುತ್ತದೆ ಎಂದು ಹೇಳುತ್ತಾ ಆ ಹುಡುಗನ ತಲೆಯ ಮೇಲೆ ತನ್ನ ಕೈಗಳನ್ನು ಇತ್ತು ಹರಸಿ ಹೋರಟು ಹೋದರು.

ಅಂತಿಮ ಸಂಸ್ಕಾರದ ವಿಧಿವಿಧಾನಗಳೆಲ್ಲವೂ ಮುಗಿದು ಇನ್ನೇನು ಶವಸಂಸ್ಕಾರ ಮಾಡಬೇಕು ಎನ್ನುವ ಮೊದಲು ಆ ಹುಡುಗನ ತಂದೆ ಮೃತರಿಗೆ ನಮಸ್ಕಾರ ಮಾಡು ಎಂದು ಹೇಳಿದಾಗ, ತಂದೆಯ ಮಾತಿಗೆ ಮರು ಮಾತನಾಡದೇ, ಮೃತರ ಶವದ ಸುತ್ತ ಪ್ರದಕ್ಷಿಣೆ ಹಾಕಲು ಹೋದಾಗ, ಮೃತಪಟ್ಟ ವ್ಯಕ್ತಿಯನ್ನು ನೋಡಿದ್ದೇ ತಡಾ ಆ ಬಾಲಕನಿಗೆ ಒಮ್ಮಿಂದೊಮ್ಮೆಲೇ ಅಚ್ಚರಿಯ ಜೊತೆ ಭಯವೂ ಕಾಡಿತು. ಕೆಲವೇ ಕೆಲವು ನಿಮಿಷಗಳ ಹಿಂದೆ ಅವರನ್ನು ಮಾತನಾಡಿಸಿ ಆಶೀರ್ವದಿಸಿದ ವ್ಯಕ್ತಿಯೇ ಚಟ್ಟದ ಮೇಲೆ ಮಲಗಿಸಿದ್ದರು, ಕೂಡಲೇ ಓಡಿ ಹೋಗಿ ತಂದೆಯ ಕೈಯ್ಯನ್ನು ಬಿಗಿಯಾಗಿ ಹಿಡಿದು, ಅಪ್ಪಾ ನಡೀರೀ ಮನೆಗೆ ಹೋಗೋಣ ಎಂದು ಒತ್ತಾಯಿಸಿದ.

ಮನೆಗೆ ಹೋಗಿ ಬಟ್ಟೆ ಬದಲಿಸಿ ಸ್ನಾನ ಮುಗಿಸಿ ತನ್ನ ಕೊಠಡಿಗೆ ಹೋಗಿ ಮಂಚದ ಮೇಲೆ ಮಲಗಿ ಬಿಟ್ಟ, ಆ ದಿನ ಅವನಿಗೆ ಊಟವೇ ಸೇರಲಿಲ್ಲ. ಸರಿಯಾಗಿ ನಿದ್ದೆಯೂ ಬರಲಿಲ್ಲ. ಅಂದಿನಿಂದ ಪ್ರತಿದಿನವೂ ಅವನಿಗೆ ಭಯಂಕರವಾದ ದುಃಸ್ವಪ್ನಗಳು ಕಾಣತೊಡಗಿದವು ಒಬ್ಬಂಟಿಯಾಗಿ ತನ್ನ ಕೊಠಡಿಯಲ್ಲಿ ಮಲಗಲು ಅವನಿಗೆ ಭಯವಾಗುತ್ತಿತ್ತು. ಅದೆಷ್ಟೊ ಬಾರಿ ಹೆದರಿಕೆಯಿಂದ ಹಾಸಿಗೆಯನ್ನು ಒದ್ದೆ ಮಾಡಿದ್ದೂ ಉಂಟು. ಹಗಲು ಹೊತ್ತು ಹೇಗೋ ಕಳೆದು ಬಿಡುತ್ತಿದ್ದನಾದರೂ ರಾತ್ರಿ ಕತ್ತಲಾಗುತ್ತಿದ್ದಂತೆಯೇ ಅವನಿಗೇ ಅರಿವಿಲ್ಲದಂತೇ ಭಯಭೀತನಾಗುತ್ತಿದ್ದ. ಇದ್ದಕ್ಕಿದ್ದಂತೆಯೇ ಕಿಟಾರ್ ಎಂದು ಕಿರಿಚಿಕೊಂಡು ನಿದ್ದೆಯಿಂದ ಎದ್ದು ಬಿಡುತ್ತಿದ್ದ. ಚಿಕ್ಕ ಹುಡುಗ ಏನೋ ಬೆಚ್ಚಿಕೊಂಡಿರಬೇಕು ಎಂದು ಅವನ ಪೋಷಕರು ಸುಮ್ಮನಾಗಿದ್ದರು.

ಕೆಲಸದ ನಿಮಿತ್ತ ಅವರ ಕುಟುಂಬ ಬೇರೇ ಊರಿಗೆ ವರ್ಗವಾಗಿ ಹೋಗಿದ್ದರು. ಕಲೆ ವರ್ಷಗಳ ತರುವಾಯು ಅದೇ ಹುಡುಗ ಬೆಳೆದು ವಿದ್ಯಾವಂತನಾಗಿ ದೊಡ್ಡ ಕಂಪನಿಯಲ್ಲಿ ಆರಂಕಿ ಸಂಬಳ ಪಡೆಯುವಷ್ಟರ ಮಟ್ಟಿಗೆ ಬೆಳೆದರೂ, ಕಛೇರಿಯ ಕೆಲಸದ ಒತ್ತಡದ ಜೊತೆಗೆ ಬಾಲ್ಯದ ಆ ಘಟನೆ ನೆನಪಾಗಿ ಮತ್ತೆ ಮತ್ತೇ ಅದೇ ರೀತಿಯಲ್ಲಿಯೇ ಭಯ ಪಡುತ್ತಿದ್ದದ್ದನ್ನು ಮತ್ತು ಆಗಾಗ ಖಿನ್ನತೆಗೆ ಒಳಗಾಗುತ್ತಿದ್ದದ್ದನ್ನು ಗಮನಿಸಿದ ಅವರ ಪೋಷಕರು ವೈದ್ಯರ ಬಳಿಗೆ ಕರೆದೊಯ್ದರು. ವೈದ್ಯರೂ ಸಹಾ ಎಲ್ಲಾ ರೀತಿಯ ಪರೀಕ್ಷಗಳನ್ನೂ ಮಾಡಿಸಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹಗಳ ಹೊರತಾಗಿ ಆ ಯುವಕ ಆರೋಗ್ಯವಾಗಿರುವುದನ್ನು ಖಚಿತ ಪಡಿಸಿದ್ದಲ್ಲದೇ, ಹೆಚ್ಚಿನ ಚಿಕಿತ್ಸೆಗಾಗಿ ಮಾನಸಿಕ ತಜ್ಞರಲ್ಲಿ ತಪಾಸಣೆ ಮಾಡಿಸಲು ಸೂಚಿಸಿದರು. ಅವರೂ ಸಹಾ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿ ಆತ ಮಾನಸಿಕವಾಗಿ ಆರೋಗ್ಯಕರವಾಗಿದ್ದಾನೆ. ಬಹುಶಃ ಚಿಕ್ಕವಯಸ್ಸಿನಲ್ಲಿ ನಡೆದಿರಬಹುದಾದ ಯಾವುದೋ ಒಂದು ಘನ ಫೋರವಾದ ಘಟನೆ ಆತನ ಮನಸ್ಸಿನ ಮೇಲೆ ಬಾರೀ ಪರಿಣಾಮ ಬೀರಿರುವ ಕಾರಣ ಈ ರೀತಿ ಆಗಿರಬಹುದು ಎಂದು ನಿರ್ಧರಿಸಿ ಕೆಲವೊಂದು ಔಷಧಿಗಳನ್ನು ಬರೆದುಕೊಟ್ಟು ಆದಷ್ಟೂ ಯೋಗ, ಓಂಕಾರ ಮತ್ತು ಧ್ಯಾನ ಮಾಡಲು ಸೂಚಿಸಿ ಅನಗತ್ಯವಾಗಿ ಚಿಂತೆ ಮಾಡುವುದನ್ನು ಕಡಿಮೆ ಮಾಡಲು ಸೂಚಿಸುತ್ತಾರೆ.

ಇಲ್ಲೊಂದು ಮಲೆನಾಡು ಮೂಲದ ಕುಟುಂಬ. ವಕೀಲಿಕೆ ಮಾಡುವ ಸಲುವಾಗಿ ಸುಮಾರು ವರ್ಷಗಳ ಹಿಂದೆಯೇ ಪಟ್ಟಣಕ್ಕೆ ಬಂದು ಸೇರಿಯಾಗಿದೆ. ಮನೆಯಲ್ಲಿ ಉತ್ತಮವಾದ ಸಂಸ್ಕಾರವನ್ನು ಕಲಿಸಿದ್ದ ಕಾರಣ, ಇತರೇ ವಕೀಲರಂತೆ ಒಂದಕ್ಕೆ ಎರಡು ಸೇರಿಸಿ ಕಕ್ಷೀದಾರರನ್ನು ಸುಲಿಯುವ ಮನೋಭಾವನೆಯವರಲ್ಲ. ಹಾಗಾಗಿ ಅದೆಷ್ಟೋ ವ್ಯಾಜ್ಯಗಳನ್ನು ಕೋರ್ಟಿನಲ್ಲಿ ಕೇಸ್ ಹಾಕುವ ಬದಲು ತಮ್ಮ ಕಛೇರಿಯಲ್ಲೇ ಸಂಧಾನ ಮಾಡಿಸಿ ಕಳುಹಿಸುತ್ತಿದ್ದರಿಂದ ಆ ಊರಿನ ಸುತ್ತಮುತ್ತಲೆಲ್ಲಾ ಬಾರೀ ಪ್ರಸಿದ್ಧಿಯಾಗಿದ್ದರು. ಕಕ್ಷೀದಾರರಿಂದ ಅವರೆಂದೂ ಇಷ್ಟು ಕೊಡು ಅಷ್ಟು ಕೊಡು ಎಂದು ಬಲವಂತ ಪಡಿಸುತ್ತಿರಲಿಲ್ಲ. ಅವರು ಕೊಟ್ಟಷ್ಟೇ ಹಣವನ್ನು ಪಡೆದು ಸಂತೃಪ್ತರಾಗಿದ್ದವರು. ಅದೆಷ್ಟೋ ಕೇಸುಗಳಲ್ಲಿ ತಮ್ಮ ಕೈನಿಂದಲೇ ಕೋರ್ಟಿನ ಫೀಸು ಕಟ್ಟಿ ವಾದ ಮಾಡಿದ ಉದಾರಣೆಗಳಿವೆ.

ಹಾಗಾಗಿಯೇ ಅವರಿಗೂ ಮತ್ತು ಕಕ್ಷೀದಾರರಿಗೂ ವಕೀಲರಿಗೂ ಅದೊಂದು ರೀತಿಯ ಅನಿನಾಭಾವ ಸಂಬಂಧ ಮುಂದುವರೆದು, ಪಟ್ಟಣಕ್ಕೆ ಬರುವಾಗಲೆಲ್ಲಾ ತಮ್ಮ ಜಮೀನಲ್ಲಿ ಬೆಳೆದ್ದಿದ ಒಂದಿಷ್ಟು ಅಕ್ಕಿ, ರಾಗಿ, ಬೇಳೆ ಕಾಳುಗಳು, ಇಲ್ಲವೇ ತರಕಾರಿ ಹಣ್ಣುಗಳು, ಬೆಣ್ಣೆ ಇಲ್ಲವೇ ತುಪ್ಪಾ ತಂದು ಕೊಟ್ಟು ತಮ್ಮ ಋಣವನ್ನು ಆ ಮೂಲಕವಾದರೂ ಕಡಿಮೆ ಮಾಡಿಕೊಳ್ಳುತ್ತಾರೆ.

ಆ ವಕೀಲರ ಮೊಮ್ಮಗ ಒಂದು ವರ್ಷದ ವೇದಾಂಗ. ಇನ್ನು ಹೆಸರಿಗೆ ಅನ್ವರ್ಥವಾಗಿಯೇ ಮೀನಿನಂತೆ ಕಣ್ಗಳ 26 ಹರೆಯದ ವೇದಾಂಗನ ಅಮ್ಮ ಮೀನಾಕ್ಷಿ. 52ರ ಪ್ರಾಯದ ಅಮ್ಮನ ಅಮ್ಮ ಅಮ್ಮಮ್ಮ (ಅಜ್ಜಿ) ಪ್ರತಿಮ,. 74 ವಯಸ್ಸಿನ ‌ಮತ್ತಜ್ಜಿ (ಅಜ್ಜಿಯ ಅಮ್ಮ) ಸರೋಜಮ್ಮ ಇನ್ನು 94 ವರ್ಷಗಳ ಸಿರಿಯಜ್ಜಿ (ಮುತ್ತಜ್ಜಿಯ ತಾಯಿ) ಸುಭದ್ರಮ್ಮ. ಹೀಗೆ ಐದು ತಲೆಮಾರು ಕಂಡಿರುವ ಅಪರೂಪದ ತಲೆಮಾರು ಅವರದ್ದು.

ನಿಜಕ್ಕೂ ಇಂದಿನ ಕಾಲದಲ್ಲಿ ಆ ಪುಟ್ಟ ಕಂದ ವೇದಾಂಗ ಅದೃಷ್ಟವಂತನೇ ಸರಿ, ಅಮ್ಮ, ಅಜ್ಜಿ, ಮುತ್ತಜ್ಜಿ,ಸಿರಿಯಜ್ಜಿ ಹೀಗೆ ತನ್ನನ್ನೂ ಸೇರಿಸಿಕೊಂಡು ಐದು ತಲೆಮಾರುಗಳನ್ನು ಒಟ್ಟಿಗೆ ನೋಡುವ ಸೌಭಾಗ್ಯ ಆ ಪುಟ್ಟ ಕಂದನದ್ದು.. 1920ರ ದಶಕದಲ್ಲಿ ಹುಟ್ಟಿರುವ ಯಾವುದೇ ರೀತಿಯ ಖಾಯಿಲೆ ಮತ್ತು ಕಸಾಲೆಗಳಿಲ್ಲದೇ ಆರೋಗ್ಯಕರವಾದ ವಾತ್ಸಲ್ಯಮಯಿ ಸಿರಿಯಜ್ಜಿ ಸುಭದ್ರಮ್ಮನವರ ಮಡಿಲಲ್ಲಿ 2020ರಲ್ಲಿ ಹುಟ್ಟಿದ ವೇದಾಂಗ ಮುದ್ದು ಮುದ್ದಾಗಿ ಆಟವಾಡುತ್ತಿರುವ ಫೋಟೋ ನೋಡುತ್ತಿದ್ದರೆ, ಭಗವಂತಾ, ಈ ಅದ್ಭುತ ತಲೆಮಾರಿಗೆ ಯಾರ ದೃಷ್ಟಿಯೂ ತಾಗದಿರಲಿ ಎಂದು ಕೇಳಿಕೊಳ್ಳ ಬೇಕು ಎನ್ನಿಸುತ್ತದೆ ಎಂದರೂ ಅತಿಶಯವಲ್ಲ.

ಈ ಎರಡೂ ಪ್ರಸಂಗಗಳನ್ನು ಗಮಿಸಿದಲ್ಲಿ, ಒಂದು ಕಡೆ 30ರ ಹರೆಯಕ್ಕೇ ನಾನಾ ರೀತಿಯ ಖಾಯಿಲೆಗಳಿಗೆ ಒಳಗಾಗಿ ಖಿನ್ನತೆಯಿಂದ ಬಳಲುತ್ತಿದ್ದರೆ, ಮತ್ತೊಂದು ಕಡೆ 90ರ ಹರೆಯದಲ್ಲೂ ನೆಮ್ಮದಿಯಿಂದ ಸಂತೃಪ್ತ ಜೀವನ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಈ ರೀತಿಯಾಗಲೂ ಕಾರಣವೇನೂ ಎಂದು ಸೂಕ್ಷ್ಮವಾಗಿ ಅವಲೋಕಿಸಿದರೆ, ತಿಳಿದು ಬಂದ ಸರಳ ಉತ್ತರವೆಂದರೆ ಒತ್ತಡ. ಪಟ್ಟಣದಲ್ಲಿ ಇರುವ ಮಂದಿ ಜೀವನಕ್ಕೆ ಅವಶ್ಯಕವಾಗಿರುವ ಎಲ್ಲಾ ಅಸ್ತಿ, ಅಂತಸ್ತು ಆಳು ಕಾಳು ಎಲ್ಲವು ಇದ್ದರೂ ಮತ್ತೇನನ್ನೋ ಅರಸುತ್ತಾ, ಪ್ರತಿಯೊಂದಕ್ಕೂ ಅನಗತ್ಯವಾಗಿ ಯೋಚನೆ ಮಾಡುತ್ತಾ ಮಾನಸಿಕವಾಗಿ ಜರ್ಜರಿತರಾಗುವುದರಿಂದಲೇ ನಾನಾ ರೀತಿಯ ಖಾಯಿಲೆಗಳಿಗೆ ಈಡಾಗುವುದಲ್ಲದೇ, ಕಡಿಮೇ ವಯಸ್ಸಿನಲ್ಲಿಯೇ ಸ್ವಯಂಕೃತಾಪರಾಧವಾಗಿ ಜೀವವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಗೆ ಒಳಗಾಗುತ್ತಾರೆ.

ಅದೇ ಮಲೆನಾಡಿನ ಮೂಲದ ವಕೀಲರ ಕುಟುಂಬದವರು, ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುತ್ತಾ ಇದ್ದದ್ದರಲ್ಲೇ ಎಲ್ಲರೂ ಹಂಚಿ ತಿನ್ನುವ ಜೀವನದ ಶೈಲಿಯನ್ನು ಅಳವಡಿಸಿಕೊಂಡಿರುವ ಕಾರಣ, ಯಾವುದೇ ರೀತಿಯ ಒತ್ತಡವಿಲ್ಲದೇ, ಖಾಯಿಲೆ ಕಸಾಲೆಗಳಿಲ್ಲದೇ ಐದು ತಲೆಮಾರಿನಷ್ಟು ದೀರ್ಘಾಯುಷ್ಯವನ್ನು ಹೊಂದಿ ನೆಮ್ಮದಿಯ ಜೀವನ ನಡೆಸುತ್ತಿರುವುದನ್ನು ಕಾಣಬಹುದಾಗಿದೆ.

ಎಷ್ಟೋ ವೈದ್ಯರುಗಳು ಮತ್ತು ಮನೋವೈದ್ಯರುಗಳಿಂದ ಚಿಕಿತ್ಸೆ ಪಡೆದರೂ ಹುಷಾರಾಗದಿದ್ದ ಆ ಯುವಕನ ಸಮಸ್ಯೆಯ ಹಿಂದಿನ ರಸವತ್ತಾದ ರಹಸ್ಯ ನಿಮಗೆ ತಿಳಿಸಿದರೆ, ಹೊಟ್ಟೆ ಹುಣ್ಣಾಗುವಷ್ಟು ನಗುವುದರಲ್ಲಿ ಅನುಮಾನವೇ ಇಲ್ಲ.

ಅದೊಮ್ಮೆ ಆ ಯುವಕ ತನ್ನ ಬಾಲ್ಯದ ಗೆಳೆಯನ ವಿವಾಹಕ್ಕೆಂದು ತನ್ನ ಹಳೆಯ ಊರಿಗೆ ಹೋಗಿದ್ದಾಗ, ಅಲ್ಲಿ ಮತ್ತೊಮ್ಮೆ ತನ್ನ ಬಾಲ್ಯದಲ್ಲಿ ತಲೆಯ ಮೇಲೆ ಕೈ ಇಟ್ಟು ಜೀವನದ ರಸ ಕ್ಷಣಗಳನ್ನು ಚೆನ್ನಾಗಿ ಸವಿಯಬೇಕು ಮಗೂ.. ಎಂದು ಆಶೀರ್ವಾದ ಮಾಡಿದ್ದ ಹಿರಿಯರನ್ನು ನೋಡಿ ಮತ್ತೊಮ್ಮೆ ಆಶ್ಚರ್ಯ ಚಕಿತನಾಗಿ, ನೀವೂ.. ನೀವೂ… ಎಂದು ಬಡ ಬಡಿಸುತ್ತಾ ನೀವು ನಮ್ಮ ತಂದೆಯವರ ಸಹೋದ್ಯೋಗಿಯಾಗಿದ್ದರಲ್ಲವೇ? ಎಂದು ತನ್ನ ತಂದೆಯ ಹೆಸರು ಮತ್ತು ಅವರು ಕೆಲಸ ಮಾಡುತ್ತಿದ್ದ ಕಂಪನಿಯ ಹೆಸರು ಹೇಳಿದಾಗ, ಆ ವಯೋವೃದ್ಧರು ಕೆಲ ಕಾಲ ಮೌನವಾಗಿ ನಂತರ ದುಗುಡದಿಂದ ಅದು ನಾನಲ್ಲ. ಅವನು ನನ್ನ ಅವಳೀ ಸಹೋದರ ಕೆಲಸದ ಒತ್ತಡ ತಡೆಯಲಾರದೇ ಮೂವತ್ತೈದರ ಚಿಕ್ಕವಯಸ್ಸಿನಲ್ಲಿಯೇ ಅಸುನೀಗಿದ ಎಂದು ಹೇಳಿ ಕಣ್ಣಿರು ಸುರಿಸುತ್ತಾರೆ.

ಅವರ ಮಾತುಗಳನ್ನು ಕೇಳುತ್ತಿದ್ದಂತೆಯೇ ಆ ಯುವಕ ಒಂದು ದೀರ್ಘವಾದ ನಿಟ್ಟುಸಿರನ್ನು ಬಿಟ್ಟು ಆ ವೃದ್ಧರನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡು ಈ ವಿಷಯ ನನಗೇಕೆ ಅಂದೇ ತಿಳಿಯದೇ ಹೋಯಿತು? ಇಷ್ಟು ಚಿಕ್ಕ ಸಂಗತಿಯಿಂದಾಗಿ ವಿನಾ ಕಾರಣ ಎರಡು ದಶಕಗಳ ಕಾಲ ಮನಸ್ಸಿನಲ್ಲಿಯೇ ಕೊರಗೀ ಕೊರಗೀ ಕೃಶಕಾಯನಾಗಿ ಬಿಟ್ಟೆನಲ್ಲಾ! ಎಂದು ಮಮ್ಮಲ ಮರುಗುತ್ತಾನೆ.

ಈ ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ. ಸ್ವಲ್ಪ ತಾಳ್ಮೆವಹಿಸಿ ಯೋಚಿಸಿದಲ್ಲಿ ಎಲ್ಲದಕ್ಕೂ ಪರಿಹಾರ ಸಿಕ್ಕೇ ಸಿಗುತ್ತದೆ. ಅದಕ್ಕಾಗಿ ದೀರ್ಘಕಾಲದವರೆಗೂ ಕಾಯುವ ಮನೋಭಾವವನ್ನು ಚಿಕ್ಕಂದಿನಿಂದಲೇ ಪೋಷಕರು ತಮ್ಮ ಮಕ್ಕಳಿಗೆ ರೂಢಿಸಬೇಕಷ್ಟೇ.

ಪ್ರತಿಯೊಂದಕ್ಕೂ ಬರೀ ಕೆಟ್ಟದ್ದನ್ನೇ ಆಲೋಚಿಸುತ್ತಾ, ನಕಾರಾತ್ಮಕ ಮನೋಭಾವನೆಗಳನ್ನು ಬೆಳಸಿಕೊಂಡು ಹೋದಲ್ಲಿ ಆ ಯುವಕನಂತೆ ಜೀವನಪರ್ಯಂತ ಪರಿತಪಿಸ ಬೇಕಾಗುತ್ತದೆ. ಇನ್ನು ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ ಎಂದು ಸಕಾರಾತ್ಮವಾದ ಮನೋಭಾವನೆಯನ್ನು ರೂಢಿಸಿಕೊಂಡಲ್ಲಿ ಸುಭಧ್ರಮ್ಮನವರಂತೆ ಸುಭದ್ರವಾಗಿ ಸುಂದರವಾದ ಜೀವನ ನಡೆಸಿಕೊಂಡು ಹೋಗಬಹುದಾಗಿದೆ.

ಆಯ್ಕೆ ನಮ್ಮ ಕೈಯ್ಯಲ್ಲಿಯೇ ಇದೇ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s