ನುಗ್ಗೇ ಸೊಪ್ಪು ಎಲ್ಲರಿಗೂ ಚಿರಪರಿಚಿತವಾಗಿರುವ ಮತ್ತು ವರ್ಷದ ಎಲ್ಲಾ ಕಾಲದದಲ್ಲಿಯೂ ಎಲ್ಲೆಡೆಯಲ್ಲಿಯೂ ಸುಲಭದ ದರದಲ್ಲಿ ಸಿಗಬಹುದಾದ ಸೊಪ್ಪಾಗಿದೆ. ಬಹಳ ಔಷಧೀಯ ಗುಣಗಳಿರುವ ಈ ಸೂಪ್ಪಿನಿಂದ ಪಲ್ಯವನ್ನು ಮಾಡುವುದು ಸರ್ವೇ ಸಾಧಾರಣವಾದರೂ, ನಾವಿಂದು ನಮ್ಮ ನಳಪಾಕದಲ್ಲಿ ಇದೇ ನುಗ್ಗೇಸೊಪ್ಪಿನ ರುಚಿಕರವಾದ ಚಟ್ನಿಪುಡಿಯನ್ನು ಮಾಡುವುದನ್ನು ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಒಂದು ವಾರಕ್ಕೆ ಸವಿಯಬಹುದಾದಷ್ಟು ನುಗ್ಗೇ ಸೊಪ್ಪಿನ ಚಟ್ನಿ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ನುಗ್ಗೆ ಸೊಪ್ಪು – 1 ಬಟ್ಟಲು
- ಕರಿಬೇವಿನ ಸೊಪ್ಪು – 1 ಬಟ್ಟಲು
- ಕಡಲೇ ಬೇಳೆ – 1 ಬಟ್ಟಲು
- ಉದ್ದಿನ ಬೇಳೆ – 1/2 ಬಟ್ಟಲು
- ಕಡಲೇ ಕಾಯಿ ಬೀಜ – 1/4 ಬಟ್ಟಲು
- ಕೊಬ್ಬರಿ ತುರಿ – 1/4 ಬಟ್ಟಲು
- ಜೀರಿಗೆ – 2 ಚಮಚ
- ಧನಿಯಾ – 2 ಚಮಚ
- ಮೆಣಸು – 1 ಚಮಚ
- ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ಕೆಂಪು ಮೆಣಸಿನಕಾಯಿ, ಹುಣಸೆಹಣ್ಣು.
ನುಗ್ಗೇ ಸೊಪ್ಪಿನ ಚಟ್ನಿ ಪುಡಿ ತಯಾರಿಸುವ ವಿಧಾನ
- ಚೆನ್ನಾಗಿ ಕಾದ ಬಾಣಲೆಯಲ್ಲಿ ಕಡಲೇ ಬೇಳೆ, ಉದ್ದಿನಬೇಳೆ, ಕಡಲೇ ಕಾಯಿ ಬೀಜ ಗಳನ್ನು ಹಸಿ ಹೋಗುವ ವರೆಗೂ ಹುರಿದುಕೊಳ್ಳಿ
- ನಂತರ ಅದೇ ಬಾಣಲಿಯಲ್ಲಿ ಜೀರಿಗೆ, ಮೆಣಸು, ಕರಿಬೇವು, ಧನಿಯಾ ಮತ್ತು ಕೆಂಪು ಮೆಣಸಿನಕಾಯಿಗಳನ್ನು ಚಟ ಪಟ ಸಿಡಿಯುವ ವರೆಗೂ ಹುರಿದುಕೊಳ್ಳಿ
- ನಂತರ ಅದೇ ಬಾಣಲಿಯಲ್ಲಿ ನುಗ್ಗೇ ಸೊಪ್ಪನ್ನು ಹಸೀ ಹೋಗುವವರೆಗೂ ಹುರಿದುಕೊಳ್ಳಿ.
- ಹುರಿದುಕೊಂಡ ಎಲ್ಲಾ ಪದಾರ್ಥಗಳೂ ತಣ್ಣಗಾದ ನಂತರ, ರುಚಿಗೆ ತಕ್ಕಷ್ಟು ಉಪ್ಪು, ಹುಣಸೇ ಹಣ್ಣು ಕೊಬ್ಬರಿ ತುರಿ ಮತ್ತು ಬೆಲ್ಲವನ್ನು ಸೇರಿಸಿ ತರಿ ತರಿಯಾಗಿರುವಂತೆ ಪುಡಿ ಮಾಡಿಕೊಂಡರೆ ರುಚಿ ರುಚಿಯಾದ ಆರೋಗ್ಯಕರವಾದ ನುಗ್ಗೇ ಸೊಪ್ಪಿನ ಚಟ್ನೀಪುಡಿ ಸವಿಯಲು ಸಿದ್ಧ
ಈ ಚೆಟ್ನಿಪುಡಿಯನ್ನು ದೋಸೆ, ಇಡ್ಲಿ, ಚಪಾತಿ, ಉಪ್ಪಿಟ್ಟಿನ ಜೊತೆಗೆ ನೆಂಚಿಕೊಂಡು ತಿನ್ನುವುದಲ್ಲದೇ, ಬಿಸಿ ಬಿಸಿ ಅನ್ನದ ಜೊತೆಗೆ ಒಂದೆರಡು ಮಿಳ್ಳೇ ತುಪ್ಪ ಬೆರೆಸಿ ಪಿಡಿಚೆ ಅನ್ನ ತಿನ್ನಲು ಬಹಳ ಮಜವಾಗಿರುತ್ತದೆ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ನಿಮ್ಮವನೇ ಉಮಾಸುತ
ಮನದಾಳದ ಮಾತು : ನುಗ್ಗೇ ಕಾಯಿ ಆಥವಾ ನುಗ್ಗೇ ಸೊಪ್ಪು ಹೀಗೆ ಯಾವುದೇ ನುಗ್ಗೇ ಪದಾರ್ಧದಲ್ಲಿ ಉತ್ತಮ ಪೋಷಕಾಂಶಗಳು ಇವೆ. ಇದರ ನಿತ್ಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುವುದಲ್ಲದೇ, ರಕ್ತ ಶುದ್ದಿಯಾಗಿ, ತ್ವಚೆಯೂ ಸಹಾ ಕಾಂತಿಯುತವಾಗುತ್ತದೆ. ನುಗ್ಗೇ ಪದಾರ್ಥಗಳ ಸೇವನೆ ಕಣ್ಣಿನ ಆರೋಗ್ಯಕ್ಕೂ ಸಹಾ ಒಳ್ಳೆಯದು ಮತ್ತು ನರದೌರ್ಬಲ್ಯ ತಲೆನೋವು, ಮೂಲವ್ಯಾಧಿ ಮುಂತಾದವುಗಳು ನಿವಾರಣೆಯಾಗುತ್ತದೆ. ವಿಶೇಷವಾಗಿ ಗರ್ಭಿಣಿ ಹೆಂಗಸರಿಗೆ ಹಾಲುಣಿಸುವ ತಾಯಂದಿರಿಗೆ ಬಹಳ ಒಳ್ಳೆಯದು. ಕಿತ್ತಳೆ ಹಣ್ಣಿನಲ್ಲಿರುವುದಕ್ಕಿಂತಲೂ 7 ಪಟ್ಟು ಹೆಚ್ಚಿನ ವಿಟಮಿನ್ ಸಿ ಇದರಲ್ಲಿ ಪಡೆಯಬಹುದಾಗಿದೆ. ಹಾಲಿಗಿಂತ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ, ಬಾಳೆಹಣ್ಣಿಗಿಂತ 3 ಪಟ್ಟು ಹೆಚ್ಚು ಪೊಟಾಷಿಯಂ, ಕ್ಯಾರೆಟ್‌ಗಿಂತ 4 ಪಟ್ಟು ಹೆಚ್ಚು ವಿಟಮಿನ್ ಎ, ಪಾಲಾಕ್‌ಗಿಂತ 3 ಪಟ್ಟು ಹೆಚ್ಚು ವಿಟಮಿನ್ ಇ ಇರುವ ಕಾರಣ ಇದೊಂದು ಬಡವರ ಪಾಲಿನ ಸಂಜೀವಿನಿಯಾಗಿದೆ ಎಂದರೂ ತಪ್ಪಾಗಲಾರದು.
ಈ ಪಾಕಶಾಸ್ತ್ರವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳೀಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
Super
LikeLiked by 1 person
ಆಹಾ, ಓದುವಾಗಲೇ ಬಾಯಲ್ಲಿ ನೀರು ಬಂತು, ನಮ್ಮ ಮನೆಯಲ್ಲಿ ಖಂಡಿತಾ ಟ್ರೈ ಮಾಡ್ತೀನಿ.
LikeLiked by 1 person