ತ್ರೇತಾಯುಗದಲ್ಲಿ ನಡೆದ ರಾಮಾಯಣ ಮತ್ತು ದ್ವಾಪರಯುಗದಲ್ಲಿ ನಡೆದ ಮಹಾಭಾರತ ಈ ಕಲಿಯುಗದಲ್ಲಿಯೂ ನಮ್ಮ ಶ್ರದ್ಧೇಯ ಮಹಾಕಾವ್ಯಗಳು . ಭಗವಾನ್ ವಿಷ್ಣುವಿನ ದಶಾವತಾರದ ಅಂಗವಾಗಿ ದುಷ್ಟರ ಶಿಕ್ಷೆಗಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ಮನುಷ್ಯ ರೂಪದಲ್ಲಿ ಈ ಭೂಮಿಯ ಮೇಲೆ ಅವತಾರವೆತ್ತಿದ್ದ ಪ್ರಭು ಶ್ರೀ ರಾಮ ಮತ್ತು ಶ್ರೀ ಕೃಷ್ಣನನ್ನು ಇಂದಿಗೂ ನಾವು ದೇವರಂತೆ ಪೂಜಿಸುತ್ತೇವೆ. ಆದರೆ ಕೆಲವು ಸ್ವಘೋಷಿತ ಬುದ್ಧಿ ಜೀವಿಗಳು ಮತ್ತು ಹಿಂದೂ ವಿರೋಧಿ ಶಕ್ತಿಗಳು ರಾಮಾಯಣ ಮತ್ತು ಮಹಾಭಾರತ ಎನ್ನುವುದು ನಡೆದೇ ಇಲ್ಲ. ಅದೊಂದು ಕಾಲ್ಪನಿಕ ಕಥೆ ಎಂದು ಪದೇ ಪದೇ ವಾದಿಸುತ್ತಲೇ ಬಂದಿದ್ದಾರೆ. ಆದರೆ ಸಹಸ್ರಾರು ವರ್ಷಗಳ ಹಿಂದೆ ನಡೆದಂತಹ ಘಟನೆಗಳಿಗೆ ಸಾಕ್ಷಿಯಾಗಿ ಆ ಮಹಾಕಾವ್ಯದಲ್ಲಿ ಹೇಳಿರುವಂತಹ ಅನೇಕ ಪ್ರದೇಶಗಳು ಇಂದಿಗೂ ನಮ್ಮ ದೇಶದಲ್ಲಿ ಕಾಣಬಹುದಾಗಿರುವ ಕಾರಣ ರಾಮಾಯಣ ಮತ್ತು ಮಹಾಭಾರತಗಳು ಕಟ್ಟು ಕಥೆಯಲ್ಲಾ ಅದು ಇದೇ ದೇಶದಲ್ಲಿ ನಡೆದಿರುವುದಕ್ಕೆ ಪುರಾವೆ ಒದಗಿಸುವಂತಿದೆ. ನಾವಿಂದು ರಾಮಾಯಣ ಮತ್ತು ಮಹಾಭಾರತದಲ್ಲಿ ಕಾಣಸಿಗುವ ಮತ್ತು ಚೌತಿಯ ಚಂದ್ರನ ದರ್ಶನದಿಂದ ಆಗುವ ದೋಷವನ್ನು ಪರಿಹಾರ ಮಾಡುವ ಶಮಂತಕೋಪಾಖ್ಯಾನ ಕಥೆಯ ಮೂಲ ಆಧಾರವಾಗಿದ್ದ ಜಾಂಬುವಂತನ ಗುಹೆಯನ್ನು ನೋಡಿ ಕೊಂಡು ಬರೋಣ ಬನ್ನಿ.
ಗುಜರಾತಿನ ಪೊರ ಬಂದರ್ ರೈಲ್ವೇ ನಿಲ್ದಾಣದಿಂದ ಸುಮಾರು 17 ಕಿ.ಮೀ ದೂರದಲ್ಲಿರುವ ರಣವವ್ ಎಂಬ ಗ್ರಾಮದಲ್ಲಿರುವ ಜಂಬವನ್ ಅತ್ಯಂತ ಪ್ರಾಚೀನ ಗುಹೆ ಎಂದು ಪ್ರಖ್ಯಾತಿ ಪಡೆದಿದೆ. ಸೌರಾಷ್ಟ್ರ ಸಿಮೆಂಟ್ ಕಾರ್ಖಾನೆಯ ಬಳಿ ಇರುವ ಇದು ಗುಜರಾತ್‌ನ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದ್ದು ಪೋರ್ಬಂದರ್‌ನಲ್ಲಿ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ಸ್ಥಳಗಳಲ್ಲಿ ಪ್ರಮುಖವಾಗಿದೆ.
ಜಂಬವಂತನ ಗುಹೆ ಅಥವಾ ಜಂಬುವಂತ್ ಕಿ ಗುಫಾ ಎಂದೂ ಕರೆಯಲ್ಪಡುವ ಈ ಗುಹೆಯಲ್ಲಿ ರಾಮಾಯಣ ಮತ್ತು ಮಹಾಭಾರತ ಎರಡರಲ್ಲೂ ತಮ್ಮದೇ ಆದ ವಿಶೇಷ ಪಾತ್ರವನ್ನು ಹೊಂದಿದ್ದ ಜಾಂಬುವಂತ ನೆಲೆಸಿದ್ದ ಎಂದು ಹೇಳಲಾಗುತ್ತದೆ. ಈ ಗುಹೆಯೊಳಗೆ ಪ್ರವೇಶಿಸಲು ಈ ರೀತಿಯಾದ ಕಿರಿದಾದ ಮೆಟ್ಟಿಲುಗಳ ಮೂಲಕವೇ ಪ್ರವೇಶಿಸ ಬೇಕಾಗುತ್ತದೆ. ಹೀಗೆ ಸುಮಾರು ಮೆಟ್ಟಿಲುಗಳನ್ನು ಇಳಿದ ನಂತರ ವಿಶಾಲವಾದ ನೈಸರ್ಗಿಕವಾದ ಗುಹೆಯು ಕಾಣ ಸಿಗುತ್ತದೆ. ಇದೇ ಗುಹೆಯಲ್ಲಿಯೇ ಶ್ರೀಕೃಷ್ಣ ಮತ್ತು ಜಂಬುವಂತರಿಬ್ಬರೂ ಶಯಮಂತಕ ಮಣಿಗಾಗಿ ಸುಮಾರು 28 ದಿನಗಳ ಕಾಲ ಘನ ಘೋರವಾಗಿ ಹೋರಾಡಿದ ಸ್ಥಳ ಎಂದು ನಂಬಲಾಗಿದೆ. ಶ್ರೀ ಕೃಷ್ಣನ ಸಂಬಂಧಿಯಾಗಿದ್ದ ಸತ್ರಾಜಿತನು ಸೂರ್ಯದೇವನನ್ನು ಕುರಿತ ತಪಸ್ಸು ಮಾಡಿ ಅತೀಂದ್ರಿಯ ಶಕ್ತಿಗಳನ್ನು ಹೊಂದಿದ್ದ ಶ್ಯಮಂತಕ ಮಣಿಯನ್ನು ವರವಾಗಿ ಪಡೆದಿದ್ದನು. ಈ ಮಣಿಯಿಂದ ಪ್ರತೀ ದಿನವೂ ಹತ್ತು ತೊಲ ಬಂಗಾರವನ್ನು ಪಡೆಯುತ್ತಿದ್ದ ಸತ್ರಾಜಿತ ನೋಡ ನೋಡುತ್ತಿದ್ದಂತೆಯೇ ಶ್ರೀಮಂತನಾಗಿ ದಾನ ಧರ್ಮಗಳಲ್ಲಿ ತೊಡಗಿದ್ದದ್ದನ್ನು ಕಂಡ ಶ್ರೀ ಕೃಷ್ಣ ಇಂತಹ ಅಮೂಲ್ಯ ಮಣಿ ಇಲ್ಲಿದ್ದರೆ ವೃಥಾ ಕಳ್ಳ ಕಾಕರಿಂದ ನಿನಗೆ ತೊಂದರೆ ಆಗಬಹುದು. ಹಾಗಾಗಿ ಇದು ನಿನ್ನ ಬಳಿ ಇರುವುದು ಕ್ಷೇಮವಲ್ಲವಾದ್ದರಿಂದ ಇದು ತನ್ನ ಬಳಿ ಇರಲೆಂದು ಶ್ರೀ ಕೃಷ್ಣ ಒಮ್ಮೆ ಹೇಳಿದಾಗ ಸತ್ರಾಜಿತನು ಅದಕ್ಕೆ ಒಪ್ಪದೇ ತನ್ನ ಬಳಿಯೇ ಇಟ್ಟುಕೊಂಡಿರುತ್ತಾನೆ.
ಅದೊಂದು ದಿನ ಶ್ರೀ ಕೃಷ್ಣನು ಕಾಡಿನಲ್ಲಿ ಭೇಟೆಗಾಗಿ ಹೊರಟಾಗ ಸತ್ರಾಜಿತನ ತಮ್ಮನಾದ ಪ್ರಸೇನನೂ ಈ ಅಮೂಲ್ಯವಾದ ಶ್ಯಮಂತಕ ಮಣಿಯನ್ನು ಧರಿಸಿ ಕೃಷ್ಣನೊಂದಿಗೆ ಬೇಟೆಯಾಡಲು ಕಾಡಿಗೆ ಹೋದಾಗ, ಆ ಶ್ಯಮಂತಕ ಮಣಿಯಿಂದ ಆಕರ್ಷಿತವಾದ ಸಿಂಹವೊಂದು ಪ್ರಸೇನನನ್ನು ಕೊಂದು ಮಣಿಯನ್ನು ತೆಗೆದುಕೊಂಡು ಹೋಗುವಾಗ ಆ ಸಿಂಹವನ್ನು ಕೊಂದ ಜಾಂಭವಂತ ಆ ಶ್ಯಮಂತಕ ಮಣಿಯನ್ನು ತೆಗೆದುಕೊಂದು ತನ್ನ ಮಗಳಾದ ಜಾಂಭವತಿಯ ಕೈಗೆ ಕೊಟ್ಟಿರುತ್ತಾನೆ.
ಶ್ರೀಕೃಷ್ಣನೊಂದಿಗೆ ಭೇಟೆಯಾಡಲು ಕಾಡಿಗೆ ಹೋಗಿದ್ದ ತನ್ನ ಸಹೋದರ ಬಹಳ ದಿನಗಳವರೆಗೂ ಹಿಂದಿರುಗದಿದ್ದಾಗ ಮಣಿಯ ಆಸೆಗಾಗಿ ಶ್ರೀ ಕೃಷ್ಣನೇ ನನ್ನು ಕೊಂದನೆಂದು ಸತ್ರಾಜಿತನು ಆರೋಪಿಸಿದಾಗ ಮನನೊಂದ ಶ್ರೀಕೃಷ್ಣನು ನಿಜವಾದ ಕೊಲೆಗಾರನನ್ನು ಹುಡುಕುತ್ತಾ ಆದೇ ಕಾಡಿಗೆ ಹೋದಾಗ ಇದೇ ಗುಹೆಯಲ್ಲಿಯೇ ಶ್ಯಮಂತಕ ಮಣಿಯನ್ನು ಕಂಡು ಅದನ್ನು ಹಿಂದಿರುಗಿಸಲು ಕೋರಿಕೊಂಡಾಗ ಅದಕ್ಕೊಪ್ಪದ ಜಾಂಭವಂತ ಶ್ರೀಕೃಷ್ನನೊಂದಿಗೆ ಯುದ್ಧಕ್ಕೆ ಇಳಿಯುತ್ತಾನೆ. ಆ ಇಬ್ಬರು ಘಟಾನುಘಟಿಗಳ ನಡುವಿನ ಭಯಂಕರ ಹೋರಾಟ 28 ದಿನಗಳ ಕಾಲದವರೆಗೂ ಹೋದಾಗ ತನ್ನೊಡನೆ ಈ ಪ್ರಮಾಣದಲ್ಲಿ ಹೋರಾಟ ಮಾಡಲು ಪ್ರಭು ಶ್ರೀರಾಮಚಂದ್ರನಿಗೆ ಮಾತ್ರ ಸಾಧ್ಯ ಎಂದು ಅರಿತು, ರಾಮನ ಮುಂದಿನ ಅವತಾರವೇ ಶ್ರೀಕೃಷ್ಣ ಎಂಬುದನ್ನು ತಿಳಿದು ಅವನಲ್ಲಿ ಕ್ಷಮೆ ಕೋರಿ ಶ್ಯಮಂತಕ ಮಣಿಯನ್ನು ಕೊಡುವುದರ ಜೊತೆಗೆ ತನ್ನ ಮಗಳಾದ ಜಾಂಭವತಿಯನ್ನೂ ಶ್ರೀಕೃಷ್ಣನಿಗೆ ಮದುವೆ ಮಾಡಿಕೊಡುತ್ತಾನೆ ಎಂದು ಮಹಾಭಾರತದ ಉಪಕಥೆಯೊಂದರಲ್ಲಿ ಬರುತ್ತದೆ.
ಇಂತಹ ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧವಾದ ಈ ಜಾಂಬುವಂತನ ಗುಹೆಯಲ್ಲಿ 50 ಕ್ಕೂ ಹೆಚ್ಚಿನ ಶಿವಲಿಂಗಳನ್ನು ನೋಡಬಹುದಾಗಿದೆ. ಈ ಎಲ್ಲಾ ಶಿವಲಿಂಗವೆಲ್ಲವೂ ಮಾನವ ನಿರ್ಮಿತವಾಗಿರದೇ, ನೈಸರ್ಗಿಕವಾಗಿ ರೂಪುಗೊಂಡಿರುವುದು ವಿಶೇಷವಾಗಿದೆ. ಅಲ್ಲಿರುವ ಮುಖ್ಯ ಶಿವಲಿಂಗದ ಮೇಲೆ ಗುಹೆಯ ಮೇಲಿನ ಛಾವಣಿಯಿಂದ ನಿರಂತರವಾಗಿ ನೀರು ಸುರಿಯುವುದಲ್ಲದೇ, ಮಳೆಗಾಲದಲ್ಲಂತೂ ಲಿಂಗದ ಮೇಲೆ ಧಾರಾಕಾರವಾಗಿ ನೀರು ಹರಿಯುವುದು ನೋಡುವುದಕ್ಕೆ ನಯನ ಮನೋಹರವಾಗಿದೆ. ಈ ಗುಹೆಯೊಳಗೆ ಜಾಂಬುವಂತ ಶ್ಯಮಂತಕ ಮಣಿಯ ಜೊತೆಗೆ ತನ್ನ ಮಗಳಾದ ಜಾಂಬಾವತಿಯನ್ನು ಶ್ರೀ ಕೃಷ್ಣನಿಗೆ ಅರ್ಪಿಸಿದ ಜಾಗದಲ್ಲಿ ಈಗ ಸುಂದರವಾದ ದೊಡ್ಡದಾದ ನಯನಮನೋಹರವಾದ ಪೋಟೋವನ್ನು ನೋಡಲು ಮನಸ್ಸಿಗೆ ಮುದ ನೀಡುತ್ತದೆ.
ಈ ಗುಹೆಯೊಳಗೆ ಎರಡು ಸುರಂಗಗಳಿದ್ದು ಅಲ್ಲಿರಲ್ಲಿ ಒಂದು ದ್ವಾರಕಾಗೆ ಮತ್ತು ಮತ್ತೊಂದು ಜುನಾಗಡಕ್ಕೆ ಹೋಗುತ್ತದೆ ಎನ್ನುಲಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಸದ್ಯದಲ್ಲಿ ಆ ಸುರಂಗದೊಳಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಗುಹೆಯ ಹೊರಗಡೆ ಭಗವಾನ್ ರಾಮನ ದೇವಾಲಯ ಮತ್ತು ಗುರು ರಾಮದಾಸ್ ಅವರ ಸಮಾಧಿಯನ್ನು ಸಹ ನೋಡಬಹುದಾಗಿದೆ. ಈ ಸ್ಥಳದಲ್ಲಿ ಪ್ರತೀ ವರ್ಷವೂ ದೊಡ್ಡ ಜಾತ್ರೆ ಆಚರಿಸಲಾಗುವುದಲ್ಲದೇ ಲಕ್ಷಾಂತರ ಜನರು ಇಲ್ಲಿ ಸೇರುತ್ತಾರೆ.
ಈ ಜಾಂಬವಂತನ ಗುಹೆ ಸಾರ್ವಜನಿಕರ ವೀಕ್ಷಣೆಗೆ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೂ ತೆರೆದಿರುತ್ತದೆ.
ಇನ್ನೇಕೆ ತಡಾ, ಸ್ವಲ್ಪ ಸಮಯ ಮಾಡಿಕೊಂಡು ಇಲ್ಲಿಗೆ ಭೇಟಿ ನೀಡುವ ಮುಖಾಂತರ ರಾಮಾಯಣ ಮತ್ತು ಮಹಾಭಾರತ ಎರಡರಲ್ಲೂ ಪ್ರಮುಖ ಪಾತ್ರವಹಿಸಿದ ಜಾಂಬವಂತನ ಅಸ್ತಿತ್ವಕ್ಕೆ ಸಾಕ್ಷಿಗಳಾಗೋಣ ಅಲ್ವೇ?.
ಏನಂತೀರೀ?
ನಿಮ್ಮವನೇ ಉಮಾಸುತ