ಶಂಕರ ದೂರದ ಹಾಸನದ ಜಿಲ್ಲೆಯ ಸಣ್ಣದೊಂದು ಗ್ರಾಮದಲ್ಲಿ ಹುಟ್ಟಿ ಅಲ್ಲಿಯೇ ತನ್ನ ವಿದ್ಯಾಭ್ಯಾಸವನ್ನೆಲ್ಲವನ್ನೂ ಮುಗಿಸಿದವ. ಇದ್ದ ಸಣ್ಣ ಸಾಗುವಳಿ ಅವರ ಜೀವನಕ್ಕೆ ಸಾಲುತ್ತಿರಲಿಲ್ಲವಾದ್ದರಿಂದ ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು ಅರಂಭದಲ್ಲಿ ಅವರಿವರ ಕೈಕಾಲು ಹಿಡಿದು ಸಣ್ಣ ಕಂಪನಿಯೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡು ನಂತರ ತನ್ನ ಸ್ವಸಾಮರ್ಥ್ಯದಿಂದ ಬೇಗನೇ ಮೇಲೆ ಬಂದು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಐದಂಕಿಯ ಸಂಬಳ ಪಡೆಯುವಷ್ಟರ ಮಟ್ಟಿಗೆ ಬೆಳೆಯುತ್ತಾನೆ. ಬದುಕಿನಲ್ಲಿ ಎಷ್ಟೇ ಮೇಲಕ್ಕೆ ಏರಿದ್ದರೂ ತನ್ನ ಹುಟ್ಟೂರು ತಂದೆ ತಾಯಿ, ತಾತಾ ಅಜ್ಜಿಯರನ್ನು ಮರೆಯದ ಶಂಕರ ಪ್ರತೀ ತಿಂಗಳೂ ತನ್ನ ಸಂಬಳದಲ್ಲಿ ಊರಿಗೆ ಹಣವನ್ನು ಕಳುಹಿಸಿ ತನ್ನ ಪೋಷಕರನ್ನು ತನ್ನ ಕೈಲಾದ ಮಟ್ಟಿಗೆ ಉತ್ತಮವಾಗಿ ಇಟ್ಟುಕೊಳ್ಳುವ ಪ್ರಯತ್ನದಲ್ಲಿರುತ್ತಾನೆ.
ಹಿರಿಯರೆಲ್ಲರೂ ಸೇರಿ ಶಂಕರನಿಗೆ ಮದುವೆ ಮಾಡಿ ಇಬ್ಬರು ಮುದ್ದಾದ ಮಕ್ಕಳ ತಂದೆಯಾಗುತ್ತಾನೆ. ಅಗಾಗಾ ಊರಿನಿಂದ ತಾತ ಅಜ್ಜಿ ಇಲ್ಲವೇ ಅಪ್ಪಾ ಅಮ್ಮಾ ಸಹಾ ಬೆಂಗಳೂರಿಗೆ ಬಂದು ಕೆಲದಿನಗಳ ಕಾಲ ಇದ್ದು ಹೋಗುತ್ತಿದ್ದ ಕಾರಣ, ಎರಡು ಕೊಠಡಿಗಳುಳ್ಳ ಒಂದು ಬಾಡಿಗೆ ಮನೆಯಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿರುತ್ತಾರೆ. ಬೆಳಿಗ್ಗೆ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ತಿಂಡಿ ತಿಂದು ಊಟದ ಡಬ್ಬಿ ಹಿಡಿದು ಕಛೇರಿಗೆ ಹೊರಟನೆಂದರೆ ಇನ್ನು ಮನೆಗೆ ಹಿಂದಿರುಗುತ್ತಿದ್ದದ್ದು ರಾತ್ರಿಯೇ. ಎಲ್ಲಿಗಾದರೂ ಹೋಗಬೇಕಾದರೇ, ಕುಟುಂಬದೊಡನೆ ನೆಮ್ಮದಿಯಾಗಿ ಕಾಲ ಕಳೆಯಲೂ ಸಹಾ ವಾರಾಂತ್ಯಕ್ಕೆ ಕಾಯ ಬೇಕಾದಂತಹ ಅನಿವಾರ್ಯ ಪರಿಸ್ಥಿತಿಯಂತಹ ಯಾಂತ್ರೀಕೃತ ಜೀವನಕ್ಕೆ ಒಗ್ಗಿ ಹೋಗಿರುತ್ತಾರೆ.
ಕಳೆದ ವರ್ಷ ಇದ್ದಕ್ಕಿದ್ದಂತೆಯೇ ಪ್ರಪಂಚಾದ್ಯಂತ ಕೊರೋನಾ ಮಹಾಮಾರಿ ವಕ್ಕರಿಸಿಕೊಂಡು ಇಡೀ ಪ್ರಪಂಚವೇ ಲಾಕ್ಟೌನ್ ಆಗಿ ಹೋದಾಗ, ಶಂಕರನೂ ಮನೆಯಿಂದಲೇ ಕೆಲಸವನ್ನು ಮಾಡಲು ಆರಂಭಿಸುತ್ತಾನೆ. ಆರಂಭದಲ್ಲಿ ಈ ಲಾಕ್ಡೌನ್ ಎಲ್ಲವೂ ಒಂದೆರಡು ವಾರಗಳ ಮಟ್ಟಿಗೆ ಎಂದು ಭಾವಿಸಿದ್ದವರ ಲೆಕ್ಕಾಚಾರವೆಲ್ಲವೂ ತಲೆಕೆಳಗಾಗಿ ತಿಂಗಳಾನುಗಟ್ಟಲೇ ಲಾಕ್ಡೌನ್ ಆದಾಗಾ ವೃಥಾ ಸುಮ್ಮನೇ ಇಲ್ಲೇಕೆ ಬಾಡಿಗೆ ಮನೆಯಲ್ಲಿ ಇರುವುದು ಎಂದುಕೊಂಡು ಮನೆ ಖಾಲಿ ಮಾಡಿ ಸಂಸಾರ ಸಮೇತ ಊರಿಗೆ ಹೋಗಿಬಿಡುತ್ತಾನೆ.
ಮೊಬೈಲ್ ಕ್ರಾಂತಿಯಿಂದಾಗಿ ಎಲ್ಲೆಡೆಯೂ ಸುಲಭವಾಗಿ ಮೊಬೈಲ್ ಬಳಸ ಬಹುದಾದ ಕಾರಣ ಶಂಕರನೂ ತನ್ನ ಹಳ್ಳಿಯ ಮನೆಯಿಂದಲೇ ನೆಮ್ಮದಿಯಾಗಿ Work from home ಮಾಡಲು ಆರಂಭಿಸುತ್ತಾನೆ. ನಗರದ ಕಲುಷಿತ ವಾತಾವರಣದ ಜಂಜಾಟದಿಂದ ಬೇಸತ್ತು ಹೋಗಿದ್ದವರಿಗೆ ಇಡೀ ಕುಟುಂಬವೇ ತಿಂಗಾಳನುಗಟ್ಟಲೇ ಒಟ್ಟಾಗಿ ಕಳೆಯುವ ಸೌಭಾಗ್ಯ ಕೊರೋನಾ ಮಾಹಾಮಾರಿಯಿಂದಾಗಿ ಬಂದೊದಗಿರುತ್ತದೆ. ಚಿಕ್ಕ ಮಕ್ಕಳೂ ಸಹಾ ತಾತಾ ಅಜ್ಜಿ, ಮುತ್ತಾತ, ಮುತ್ತಜ್ಜಿಯವರ ಆರೈಕೆಯಲ್ಲಿ ಪ್ರಕೃತಿಯ ಸೌಂದರ್ಯದೊಂದಿಗೆ ಊರಿನ ಹೊಲ ಗದ್ದೆ, ಕೆರೆ, ಭಾವಿ, ಹತ್ತಾರು ದೇವಸ್ಥಾನಗಳು, ದೇವಸ್ಥಾನದ ಮುಂದಿನ ಕಲ್ಯಾಣಿ ಹೀಗೆ ಎಲ್ಲವನ್ನೂ ಅಹ್ವಾದಿಸುತ್ತಾ ಅಲ್ಲಿನ ವಾತಾವರಣಕ್ಕೆ ಬಲು ಬೇಗನೇ ಒಗ್ಗಿ ಹೊಗುತ್ತಾರೆ. ಅಗೊಮ್ಮೆಈಗೊಮ್ಮೆ ನೆಟ್ ವರ್ಕ್ ಸಮಸ್ಯೆ, ವಿದ್ಯುತ್ ಸಮಸ್ಯೆಯ ಹೊರತಾಗಿಯೂ ತನ್ನ ಕಛೇರಿಯ ಕೆಲಸ ಸುಗಮವಾಗಿ ಸಾಗುತ್ತಾ ತಿಂಗಳು ಕಳೆಯುವ ಹೊತ್ತಿಗೇ ಸಂಬಳ ಬ್ಯಾಂಕಿಗೆ ಜಮೆಯಾಗುತ್ತಿರುತ್ತದೆ. ತಿಂಗಳಿಗೊಮ್ಮೆ ಇಲ್ಲವೇ ಎರಡು ಬಾರಿ ಹತ್ತಿರದ ಪಟ್ಟಣಕ್ಕೆ ಹೋಗಿ ಮನೆಗೆ ಅಗತ್ಯವಿದ್ದಂತಹ ಸಾಮಾನುಗಳನ್ನು ಶಂಕರ ತರುತ್ತಿರುತ್ತಾನೆ. ಮೊಮ್ಮಕ್ಕಳು, ಮರಿ ಮಕ್ಕಳು ಬಂದಿರುವ ಕಾರಣ ಅವರ ಆಟ ಪಾಠಗಳ ನಡುವಿನಲ್ಲಿ ಅವರಿಗಿದ್ದ ಸಣ್ಣ ಪುಟ್ಟ ಕೈನೋವು, ಮಂಡೀ ನೋವು ಸೊಂಟ ನೋವು ಮುಂತಾದವುಗಳ ನೆನಪಿಗೇ ಬಾರದೇ, ಮಗ ಸೊಸೆ ಮಕ್ಕಳಿಗೆ ಬೇಕಾದಂತಹ ರುಚಿ ರುಚಿಯಾದ ಅಡುಗೆಗಳನ್ನು ಮಾಡಿಕೊಂಡು ಸವಿಯುತ್ತಾ ನೆಮ್ಮದಿಯಿಂದ ತುಂಬು ಕುಟುಂಬ ಜೀವನವನ್ನು ಸಾಗಿಸುತ್ತಿರುತ್ತದೆ.
ಅದೊಮ್ಮೆ ಶಂಕರ ತನ್ನ ಮ್ಯಾನೇಜರ್ ನೊಂದಿಗೆ ಮೀಟಿಂಗ್ ನಲ್ಲಿ ಇದ್ದಾಗ ಮುತ್ತಜ್ಜಿಯ ಜೊತೆ ಆಟವಾಡುತ್ತಿದ್ದ ಮಕ್ಕಳು ವಿಪರೀತ ಗಲಾಟೆ ಮಾಡುತ್ತಿರುವುದು ಶಂಕರನಿಗೂ ಮತ್ತು ಅವನ ಮ್ಯಾನೇಜರಿಗೂ ಸ್ವಲ್ಪ ಮುಜುಗರ ತರುತ್ತದೆ. ಕೂಡಲೇ. ತನ್ನ ಮೀಟಿಂಗ್ ಮೈಕ್ ಮ್ಯೂಟ್ ಮಾಡಿ ಅಜ್ಜೀ, ಸ್ವಲ್ಪ ಗಲಾಟೆ ಕಡಿಮೆ ಮಾಡ್ತೀರಾ? ನಾನು ಕಾಲಲ್ಲಿ ಇದ್ದೀನಿ. ನನಗೆ ತೊಂದರೆ ಆಗುತ್ತಿದೆ ಎನ್ನುತ್ತಾನೆ ಶಂಕರ.
ಊರಿನಿಂದ ಬಂದಾಗಲಿಂದಲೂ ಲ್ಯಾಪ್ ಟ್ಯಾಪ್ ಮುಂದೆಯೇ ಕುಳಿತುಕೊಂಡು ಪಟ ಪಟನೇ ಕೀಲಿಗಳನ್ನು ಒತ್ತುತ್ತಾ ಅಗ್ಗಾಗ್ಗೆ ಕಿವಿಗೆ ಹೆಡ್ ಸೆಟ್ ಹಾಕಿಕೊಂಡು ಗಂಟೆ ಗಟ್ಟಲೇ ಮಾತನಾಡುತ್ತಿರುವ ಮೊಮ್ಮಗನ ಕೆಲಸದ ಬಗ್ಗೆ ಅಜ್ಜಿಗೂ ಬಹಳಷ್ಟು ಕುತೂಹಲವಿರುತ್ತದೆ. ಇದೇ ಸಮಯ ಎಂದು ಕೊಂಡು ತನ್ನ ಮೊಮ್ಮಗ ಅದೇನು ಮಾಡುತ್ತಿದ್ದಾನೆ ಎಂದು ಕಂಪ್ಯೂಟರ್ ಮುಂದೆ ಮುಖ ಚಾಚಿದ ಅಜ್ಜಿ, ಆ ಕಡೆಯಲ್ಲಿದ್ದ ವ್ಯಕ್ತಿಯನ್ನು ನೋಡಿ ಅವರು ಯಾರು? ಎಂದು ಕೇಳುತ್ತಾರೆ. ಅದಕ್ಕೆ ಶಂಕರ, ಅವರು ನಮ್ಮ ಮ್ಯಾನೇಜರ್, ನೀವೀಗ ಸುಮ್ಮನೇ ಹೊರಡಿ ಎಂದಾಗ, ನಾನು ನಿಮ್ಮ ಮ್ಯಾನೇಜರ್ ಬಳಿ ಮಾತನಾಡಬಹುದೇ? ಎಂದು ಕೇಳುತ್ತಾಳೆ. ಅಜ್ಜಿಯ ವರಾತ ನೋಡಿ ಮುಜುಗರಕ್ಕೊಳಗಾದ ಶಂಕರ, ಅಜ್ಜೀ ನಾನು ಕೆಲಸ ಮಾಡುತ್ತಿದ್ದೇನೆ. ನೀವು ಹೀಗೆಲ್ಲಾ ಚಿಕ್ಕ ಮಕ್ಕಳ ರೀತಿಯಲ್ಲಿ ತೊಂದರೆ ಕೊಡಬಾರದು ಎನ್ನುತ್ತಿರುವಾಗಲೇ, ಅಜ್ಜೀ ಸಂಜ್ಞೆಯಲ್ಲಿಯೇ ನಾನು ನಿಮ್ಮೊಂದಿಗೆ ಮಾತನಾಡಲು ಬಯಸುತ್ತೇನೆ ಎಂದು ಮ್ಯಾನೇಜರ್ ಅವರಿಗೆ ತಿಳಿಸುತ್ತಾಳೆ.
ಇದನ್ನೆಲ್ಲಾ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದ ಶಂಕರನ ಮ್ಯಾನೇಜರ್ ಸಹಾ, ಒಂದು ನಿಮಿಷ ಮಾತನಾಡಿದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದು ನಿರ್ಧರಿಸಿ, ಶಂಕರ್, ನಿಮ್ಮ ಅಜ್ಜಿಯವರಿಗೆ ಮಾತನಾಡುವ ಅವಕಾಶ ಕೊಡಿ ಎಂದಾಗ, ಶಂಕರಿಗೆ ಆಶ್ಚರ್ಯ ಮತ್ತು ಭಯವೂ ಆಗುತ್ತದೆ. ಅಯ್ಯೋ ನಮ್ಮಜ್ಜಿ ಏನು ಮಾತನಾಡಿ ಬಿಡುತ್ತಾರೋ ಎಂಬ ಕಳವಳವಿದ್ದರೂ ಅತ್ತ ದರಿ ಇತ್ತ ಪುಲಿ ಎಂಬಂತೆ ಮೇಲಧಿಕಾರಿಯ ಆದೇಶದಂತೆ ಅಜ್ಜೀ ಒಂದು ನಿಮಿಷ ಮಾತನಾಡಿ ಬಿಡಿ ಎನ್ನುತ್ತಾನೆ.
ಸರಿ ಸರಿ ಎಂದು ತನ್ನ ತಲೆಯ ಮುಂದೆ ಚಾಚಿದ್ದ ಕೂದಲನ್ನು ಸರಿಪಡಿಸಿಕೊಂಡು ನಮಸ್ಕಾರ ಎಂದು ಎರಡೂ ಕೈಗಳಿಂದ ನಮಸ್ಕರಿಸಿ, ಚಿಕ್ಕದಾಗಿ ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ ಅಜ್ಜಿ.ಆದಕ್ಕೆ ಪ್ರತಿಯಾಗಿ ಮ್ಯಾನೇಜರ್ ಸಹಾ ಪ್ರತಿವಂದಿಸುತ್ತಾರೆ.
ಆಗ ಅಜ್ಜೀ ನೋಡೀ ಇವ್ರೇ, ನೀವೇಕೋ ತುಂಬಾ ಒತ್ತಡದಲ್ಲಿ ಇದ್ದೀರಿ ಮತ್ತು ಉದ್ವೇಗದಿಂದ ಕೆಲದ ಮಾಡುತ್ತಿದ್ದೀರಿ ಎಂದೆನಿಸುತ್ತದೆ ಎಂದಾಗ, ಹೌದು ನಾವು ಬಹಳ ಮುಖ್ಯವಾದ ಮಾತುಕತೆಯಲ್ಲಿದ್ದೆವು. ನೀವೂ ಮತ್ತು ನಿಮ್ಮ ಮೊಮ್ಮಕ್ಕಳ ಗಲಾಟೆಯಿಂದಾಗಿ ನಮ್ಮ ಕೆಲಸದ ಏಕಾಗ್ರತೆಗೆ ಭಂಗವಾಗುತ್ತಿದೆ ಎನ್ನುತ್ತಾರೆ.
ಅದನ್ನು ಕೇಳಿ ನಸು ನಕ್ಕ ಅಜ್ಜೀ, ನಿಮ್ಮ ಸಮಸ್ಯೆಯನ್ನು ಪರಿಹರಿಸಲು ನಾನು ಸಹಾಯ ಮಾಡಬಹುದೇ? ಎಂದಾಗ, ಶಂಕರ, ಅಜ್ಜೀ ಎಂದು ಕೈ ಜಗ್ಗಿದ್ದನ್ನು ಗಮನಿಸಿದ ಮ್ಯಾನೇಜರ್, ಶಂಕರ್, allow her to talk ಎನ್ನುತ್ತಾರೆ.
ಆಗ ಅ ಅಜ್ಜಿ ನೋಡಪ್ಪಾ ನಮ್ಮ ಊರಿನ ಮುಂದೆ ಒಂದು ಅರಳೀ ಕಟ್ಟೆ ಇದೆ. ಊರಿನ ಜನರು ಅಲ್ಲಿಗೆ, ಶುದ್ಧ ಗಾಳಿ, ನೆಮ್ಮದಿ ಮತ್ತು ಶಾಂತಿಗಾಗಿ ಕೆಲ ಸಮಯ ಬಂದು ಕೂರುತ್ತಾರೆ. ಅದೇ ಮರದಲ್ಲಿಯೇ ನೂರಾರು ಹಕ್ಕಿಗಳೂ ಆಶ್ರಯ ಪಡೆದಿವೆ. ಅವುಗಳು ಸಹಾ ಚಿಲಿಪಿಲಿ ಗುಟ್ಟುತ್ತಿರುತ್ತವೆ. ಅದೊಮ್ಮೆ ಯುವನೊಬ್ಬ ನೆಮ್ಮದಿಯಿಂದ ವಿಶ್ರಾಂತಿ ಪಡೆಯಲು ಮರದ ಕೆಳಗೆ ಕುಳಿತಿದ್ದಾಗ ಹಕ್ಕಿಗಳ ಕಲರವದಿಂದ ವಿಮುಖನಾಗಿ ಹಕ್ಕಿಯನ್ನು ಓಡಿಸಲು ಕಲ್ಲನ್ನು ತೂರುತ್ತಾನೆ. ಆತ ತೂರಿದ ಕಲ್ಲಿನ ರಭಸಕ್ಕೆ ನೂರಾರು ಹಕ್ಕಿಗಳು ಒಮ್ಮಿಂದೊಮ್ಮೆಲ್ಲೇ ಆಗಸದತ್ತ ಹಾರಿದಾಗ ಹಕ್ಕಿಗಳ ಕಲರವ ಇನ್ನೂ ಹೆಚ್ಚಾಗುತ್ತದೆ. ಆಗ ಅದರಲ್ಲಿದ್ದ ಒಂದು ಹಿರಿಯ ಹಕ್ಕಿ ಆ ಯುವಕನ ಬಳಿ ಬಂದು, ನೀವು ನಮ್ಮ ಗೂಡಿನ ಬಳಿ ಬಂದು ವಿಶ್ರಾಂತಿ ಪಡೆಯುತ್ತಿದ್ದೀರಿ. ಹಾಗಾಗಿ ನಾವು ನಿಮ್ಮನ್ನು ಇಲ್ಲಿಂದ ದೂರ ಹೋಗಿ ಎಂದು ಹೇಳುವುದಿಲ್ಲ. ಬದಲಾಗಿ ಪರಿಸ್ಥಿತಿಯೊಂದಿಗೆ ಹೊಂದಿಕೊಂಡು ಹೋಗುವ ಮನೋಭಾವನೆಯನ್ನು ಬೆಳಸಿಕೊಂಡಲ್ಲಿ ನೀವೂ ಸಹಾ ನಮ್ಮೊಂದಿಗೆ ಸಹಬಾಳ್ವೆ ನಡೆಸ ಬಹುದು ಎನ್ನುತ್ತದೆ.
ಆರಂಭದಲ್ಲಿ ಹಕ್ಕಿಯ ಮಾತು ಆ ಯುವಕನಿಗೆ ಸರಿ ಎನಿಸದಿದ್ದರೂ, ಕಲ್ಲಿನ ರಭಸಕ್ಕೆ ಹಾರಿ ಹೋಗಿದ್ದ ಹಕ್ಕಿಗಳೆಲ್ಲವೂ ಒಂದೊಂದಾಗಿ ಆದೇ ಮರಕ್ಕೆ ಹಿಂದಿರುಗಿ ತಮ್ಮ ಪಾಡಿಗೆ ಇರಲು ತೊಡಗುತ್ತವೆ. ಆ ಯುವಕನಿಗೆ ಆಲ್ಲಿಯ ಪರಿಸರ ತನ್ನದೆನಿಸಿಕೊಳ್ಳುತ್ತಾ ಹೋದಂತೆಲ್ಲಾ, ಹಕ್ಕಿಗಳ ಕಲರವ ಕಿವಿಗೆ ಬೀಳುವುದೇ ಇಲ್ಲ. ನೆಮ್ಮದಿಯಿಂದ ವಿಶ್ರಾಂತಿಗೆ ಜಾರುತ್ತಾನೆ. ಹಾಗೆಂದ ಮಾತ್ರಕ್ಕೆ ಹಕ್ಕಿಗಳು ಕೆಲರವ ನಿಲ್ಲಿಸಿತು ಎಂದಲ್ಲಾ. ಆ ಯುವಕ ಅವುಗಳೊಂದಿಗೆ ಸಹಬಾಳ್ವೆ ನಡೆಸುವ ಮನಸ್ಥಿತಿಯನ್ನು ಬೆಳಸಿಕೊಂಡ ಎಂದರ್ಥ ಎಂದು ಹೇಳಿ ನಿಟ್ಟುಸಿರು ಬಿಟ್ಟ ಅಜ್ಜಿ,
ಇದು ನಮ್ಮ ಮನೆ ನಮ್ಮ ಗೂಡು. ಇಲ್ಲಿ ನಮ್ಮ ಸಂಸಾರ ಸುಖದಿಂದ ನಡೆಸಿ ಕೊಂಡು ಹೋಗುತ್ತಿದ್ದೇವೆ ಈ ಕೊರೋನಾ ಎಂಬ ಮಹಾಮಾರಿಯ ಪರಿಸ್ಥಿತಿಯನ್ನು ನಾನೂ ಸಹಾ ಅರ್ಥ ಮಾಡಿಕೊಂಡಿದ್ದೇನೆ. ಅದರಿಂದಾಗಿ ಕಛೇರಿಗೆ ಹೋಗಲಾಗುತ್ತಿಲ್ಲ, ಹಾಗೆಂದ ಮಾತ್ರಕ್ಕೆ ಕೆಲಸವನ್ನೇ ನಿಲ್ಲಿಸಿದರೆ, ಜೀವನ ನಡೆಯಲಾಗದು. ನಮ್ಮ ಕೆಲಸದತ್ತ ಏಕಾಗ್ರತೆಯನ್ನು ಹೆಚ್ಚಿಸಿಕೊಂಡಲ್ಲಿ ಅಕ್ಕ ಪಕ್ಕದ ಗಲಾಟೆಗಳ ಕಡೆ ಗಮನವೂ ತಂತಾನೇ ಕಡಿಮೆಯಾಗುತ್ತದೆ ನಿಮ್ಮ ಕೆಲಸವು ಸುಗಮವಾಗಿ ಸಾಗುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.
ಅಕಸ್ಮಾತ್ ನಾವೇನಾದರೂ ನಿಮ್ಮ ಕಚೇರಿಗೆ ಬಂದಲ್ಲಿ ನಿಮ್ಮ ಕಛೇರಿಯ ರೀತಿ ರಿವಾಜುಗಳಿಗೆ ಅನುಗುಣವಾಗಿಯೇ ನಾವು ವರ್ತಿಸುತ್ತೇವೆ. ಅದೇ ರೀತಿ, ನೀವೂ ಸಹಾ ಕಚೇರಿಯ ಕೆಲಸಕ್ಕಾಗಿ ನಮ್ಮ ಮನೆಯನ್ನು ಬಳಸುತ್ತಿರುವಾಗ, ನಮ್ಮ ಮನೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂದು ಆದಕ್ಕೆ ತಕ್ಕಂತೆ ವರ್ತಿಸುವುದು ಉತ್ತಮ.
ಮನೆಯಿಂದ ಕೆಲಸ ಮಾಡುವುದು ತಪ್ಪಲ್ಲ. ಆದರೆ ಅದಕ್ಕಾಗಿ ಕುಟುಂಬದ ಸದಸ್ಯರ ತ್ಯಾಗವನ್ನು ಹತ್ತಿಕುವುದಾಗಲೀ ಅಥವಾ ಬಲಿ ಕೊಡಲಾಗದು. ನಮಗೂ ನಿಮ್ಮ ಸಮಸ್ಯೆಗಳು ಮತ್ತು ಒತ್ತಡ ಅರಿವಿದೆ. ಹಾಗಾಗಿ ನಾವೂ ಸಹಾ ನಿಮ್ಮ ಅಗತ್ಯಕ್ಕೆ ತಕ್ಕಂತೆ ಬಹಳಷ್ಟು ಬದಲಾಯಿಸಿ ಕೊಂಡಿದ್ದೇವೆ. ಆದರೂ ಒಮ್ಮೊಮ್ಮೆ ಪರಿಸ್ಥಿತಿ ಕೈ ಮೀರಿ ಈ ರೀತಿ ಸಮಸ್ಯೆಗಳು ಉದ್ಭವವಾಗುತ್ತದೆ. ಅದಕ್ಕೆ ಮತ್ತಷ್ಟು ಉದ್ವೇಗಕ್ಕೆ ಒಳಗಾಗದೇ ಆ ಕಡೆ ಚಿತ್ತವನ್ನು ಹರಿಸದೇ, ಶಾಂತಿಯಿಂದ ಕೆಲಸವನ್ನು ಮುಂದುವರೆಸಬಹುದಲ್ಲವೇ? ಎಂದು ಹೇಳಿದ ಅಜ್ಜಿ, ಏನಪ್ಪಾ ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದೆಯೇ? ಎಂದು ಮುಗ್ಧ ನಗೆಯನ್ನು ಚೆಲ್ಲಿದರು.
ಆರಂಭದಲ್ಲಿ ಆಜ್ಜಿಯ ಮಾತುಗಳನ್ನು ತಾತ್ಸಾರದಿಂದಲೇ ಕೇಳುತ್ತಿದ್ದ ಆ ಮ್ಯಾನೇಜರ್ ಕ್ರಮೇಣ ಅಜ್ಜಿಯ Crisis Management Skills ಮಾತುಗಳಿಗೆ ಮಾರು ಹೋಗಿ ತೆರೆದ ಬಾಯಿ ಮುಚ್ಚದೇ ಕೇಳುತ್ತಲೇ ಹೋದರು. ಅಜ್ಜಿಯ ಮಾತು ಮುಗಿಯುತ್ತಿದ್ದಂತೆಯೇ, ಎರಡೂ ಕೈಗಳಿಂದ ಜೋರಾಗಿ ಚಪ್ಪಾಳೆ ತಟ್ಟೀ, ಅಜ್ಜೀ ನೀವು ಹೇಳಿರುವುದು 100 ಕ್ಕೆ 100 ರಷ್ಟು ಸರಿಯಾಗಿದೆ. ನಿಮ್ಮ ಅನುಭವದ ಮುಂದೆ ನಮ್ಮದೇನಿದೆ. ಖಂಡಿತವಾಗಿಯೂ ನೀವು ಹೇಳಿದ್ದನ್ನು ಅಕ್ಷರಶಃ ಪಾಲಿಸುತ್ತೇನೆ ಮತ್ತು ಈ ಸುಂದರ ಪಾಠವನ್ನು ದೇಶ ವಿದೇಶಗಳಲ್ಲಿ ಇರುವ ನಮ್ಮ ಇಡೀ ಕಛೇರಿಯ ಸಿಬ್ಬಂಧಿಗಳಿಗೆ ಅಳವಡಿಸಿಕೊಳ್ಳಲು ಹೇಳುತ್ತೇನೆ ಎಂದು ಕೈ ಮುಗಿದು ವಂದಿಸಿದರು. ನಂತರ ಶಂಕರನತ್ತ ತಿರುಗಿ. ಶಂಕರ್ ನಮ್ಮ ಮುಂದಿನ ಬಾರಿಯ All hands meeting ನಲ್ಲಿ ನಿಮ್ಮ ಅಜ್ಜಿಗೆ ಒಂದು Award ಕೊಡಬೇಕೆಂದು ನಾನು recommend ಮಾಡುತ್ತೇನೆ ಎಂದರು.
ಅಜ್ಜೀ ಏನು ಮಾತಾಡ್ತಾರೋ ಎಂಬ ಆತಂಕದಲ್ಲಿದ್ದ ಶಂಕರನಿಗೆ ಅಜ್ಜಿಗೆ Award ಬಂದ ವಿಷಯ ಕೇಳಿ ಆನಂದದಿಂದ, ಅವನಿಗೇ ಅರಿವಿಲ್ಲದಂತೆ ಅಜ್ಜಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ಮುತ್ತನ್ನು ಕೊಟ್ಟಿದ್ದಲ್ಲದೇ, ಆಕೆಯ ಪಾಂಡಿತ್ಯಕ್ಕೆ ಮಾರುಹೋಗಿ ಗೌರವದಿಂದ ಆಕೆಯ ಕಾಲಿಗೆರಗಿ ಆಶೀರ್ವಾದ ಪಡೆಯುವುದನ್ನು ಮರೆಯಲಿಲ್ಲ.
Shankara Shocks, Ajji Rocks. ಅದಕ್ಕೇ ಹೇಳೋದು ವಯಸ್ಸಾದವರು ನಮ್ಮ ಮನೆಗಳಲ್ಲಿ ಸದಕಾಲವೂ ಇರ್ಬೇಕು ಅಂತಾ..
ಏನಂತೀರೀ?
ನಿಮ್ಮವನೇ ಉಮಾಸುತ
ಸಾಮಾಜಿಕ ಜಾಲತಾಣದಲ್ಲಿ ಓದಿದ್ದ ಸಣ್ಣ ಎಳೆಯೊಂದನ್ನು ನಮ್ಮ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಭಾವಾನುವಾದ ಮಾಡಿದ್ದೇನೆ.
ಅಜ್ಜಿಯ ಮಾತುಗಳು ಕೇಳಿ ಕಣ್ಣಂಚಲಿ ನೀರು ತುಂಬಿತು. ಹೃದಯಕ್ಕೆ ತಾಕಿದ ಮಾತುಗಳು. ಹಿರಿಯರ ಅನುಭವದ ಮುಂದೆ ಯಾವ ಪುಸ್ತಕವು ಬೇಕಿಲ್ಲ. ನಿಮ್ಮ ಬರವಣಿಗೆ ಸೊಗಸಾಗಿದೆ sir👏👏👏🙏🙏
LikeLiked by 1 person
ಹೌದು ನಿಜ ಅದಕ್ಕೇ ಹೇಳೋದು ಹಿರಿಯರು ಇರಲವ್ವಾ ಮನೆಯಲ್ಲಿ ಎಂದು
LikeLike
ಅಜ್ಜಿಯ ಮಾತುಗಳು ಕೇಳಿ ಕಣ್ಣಂಚಲಿ ನೀರು ತುಂಬಿತು. ಹೃದಯಕ್ಕೆ ತಾಕಿದ ಮಾತುಗಳು. ಹಿರಿಯರ ಅನುಭವದ ಮುಂದೆ ಯಾವ ಪುಸ್ತಕವು ಬೇಕಿಲ್ಲ. ನಿಮ್ಮ ಬರವಣಿಗೆ ಸೊಗಸಾಗಿದೆ sir👏👏👏🙏🙏
LikeLike
ಪ್ರಿಯ, ಶ್ರೀ. ಶೀಕಂಠ ಬಾಳಗಂಚಿ,
ತಮ್ಮಲೇಖನ ಓದಿ ಹೃದಯ ತುಂಬಿ ಬಂದು ಕಣ್ಣು ಗಳಲ್ಲಿ ನನಗೇ ತಿಳಿಯದ ಹಾಗೆ ನೀರು ತುಂಬಿದ್ದು, ಒಬ್ಬ ಹಳ್ಳಿಯ ಅಜ್ಜಿಯು ಓದದೇ ಇದ್ದರೂ ಸಹ ವ್ಯವಹಾರ ಜ್ಞಾನವಿರುವ ಇಂತಹ ಎಷ್ಟೂ ಅಜ್ಜಿಗಳು ಇದ್ದಾರೆ. ಅಜ್ಜಿಯ ಮಾತು ಕೇಳಿ Manager ಗೆ ನಿಜ ಸಂಗತಿಗಳು ಮನವರಿಕೆ ಮಾಡಿಕೊಟ್ಟು Manager ರಿಂದ ಬೇಷ್ ಅಂತ ಚಪ್ಪಾಳೆ ತಟ್ಟಿಸಿ ಕೊಂಡಿದ್ದು ಅಲ್ಲದೇ ಪ್ರಶಸ್ತಿ ಸಹ ಗಿಟ್ಟಿಸಿ ಕೊಂಡ ಹಳ್ಳಿ ಅಜ್ಜಿ ನಿಜಕ್ಕೂ ಅಭಿನಾಂದನಾರ್ಹರು. ಹಳ್ಳಿಯ ಬಹುತೇಕ ಮನೆಗಳು ಬಹಳ ಸಣ್ಣದಾಗಿದ್ದು ಕೇವಲ ಒಂದು ರೂಂ ಇದ್ದು ಕೊರೂನ ಮಾರಿ ಬಂದಿದ್ದು ಮೊಮ್ಮಕ್ಕಳು, ಮರಿಮಕ್ಕಳು ಆಟವಾಡಲು ಏಲ್ಲಿಗೆ ಹೋಗಲು ಸಾದ್ಯ? ಅಜ್ಜಿಯ ಬುದ್ದಿವಂತಿಕೆ ಮಾತುಗಳು Manager ಮನಸ್ಸನ್ನೇ ಪರಿವರ್ತಿಸಿದ ಈ ಲೇಖನ ನಿಜವಾಗಿ ಹೃದಯಕ್ಕೆ ಬಹಳ ಮುಟ್ಟುವಂತಿದ್ದು, ನಿಮ್ಮ ಈ ಲೇಖನವನ್ನು ಎಷ್ಟು ಸಲ ಓದಿದರು ಪುನಃ ಪುನಃ 10-15 ಸಲ ಬೆಳಗ್ಗೆ ಯಿಂದ ಓದಿದರೂ ಇನ್ನು ಓದಬೇಕೆಂಬ ಹಂಬಲ ತಮ್ಮ ಈ ಲೇಖನ ರಾಷ್ಟ್ರಪ್ರಶಸ್ತಿಗೆ Select ಮಾಡಬೇಕು.
LikeLike
ಅಯ್ಯೋ ರಾಮ ರಾಮ ದೊಡ್ಮಾತು. ಪ್ರಶಸ್ತಿ ಮಾತು ಬಿಡಿ. ನಿಮ್ಮಂತಹ ಹತ್ತಾರು ಸಹೃದಯಿ ಓದುಗರ ಮನಮುಟ್ಟಿದರೆ ನಾವು ಬರೆದದ್ದಕ್ಕೂ ಸಾರ್ಥಕ ಎನಿಸುತ್ತದೆ
LikeLike
Looking for a hobby/sideline: https://thealoeveraco.shop/fIBu2vbv
LikeLike