ಲಕ್ಷದ್ವೀಪ

lak5

ಹೆಸರೇ ಸೂಚಿಸುವಂತೆ ಅದೊಂದು ದ್ವೀಪಗಳ ಸಮೂಹ. ಭಾರತದ ಅರಬ್ಬೀ ಸಮುದ್ರದಲ್ಲಿ ಸುಮಾರು 36 ಹವಳದ ಬಂಡೆಗಳ ಉಷ್ಣವಲಯದ ದ್ವೀಪಸಮೂಹವೇ ಲಕ್ಷದ್ವೀಪ. ದೇಶದ ಅತ್ಯಂತ ಪ್ರಾಚೀನವಾದ, ನೈಸರ್ಗಿಕವಾದ ಸುಂದರವಾದ ಮತ್ತು ಆಷ್ಟೇ ಸ್ವಚ್ಚತೆಯನ್ನು ಕಾಪಾಡಿಕೊಂಡಿರುವ, ಕನ್ನಡಿಯಂತಹ ನೀರಿನಲ್ಲಿ ಕಣ್ಣು ಕೋರೈಸುವ ಹವಳದ ಬಂಡೆಗಳು, ಬೆಳ್ಳಿಯ ಬಣ್ಣದಲ್ಲಿ ಪ್ರಜ್ವಲಿಸುವ ಕರಾವಳಿ ತೀರಗಳು ಈ ದ್ವೀಪ ಸಮೂಹಗಳಲ್ಲಿ ಇದ್ದು, ಭಾರತದಲ್ಲೇ ಅತ್ಯಂತ ಸ್ವಚ್ಚ ಕರಾವಳಿ ತೀರ ಎಂದೇ ಖ್ಯಾತಿ ಪಡೆದಿರುವ ಕಾರಣ, ಭಾರತ ಮತ್ತು ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ತಮ್ಮ ರಜಾದಿನಗಳನ್ನು ಇಲ್ಲಿ ಕಳೆಯಲು ಬಯಸುತ್ತಾರೆ.

lak8

ವಿಮಾನ ಮತ್ತು ಸಮುದ್ರ ಮಾರ್ಗದ ಮೂಲಕ ಮಾತ್ರವೇ ಸಂಪರ್ಕ ಹೊಂದಿರುವ ಈ ದ್ವೀಪಕ್ಕೆ ತಲುಪಲು ಕೇರಳದ ಕೊಚ್ಚಿನ್ (ಸಮುದ್ರ ಮಾರ್ಗ 496 Kms) ಮತ್ತು ಕರ್ನಾಟಕದ ಮಂಗಳೂರು (ಸಮುದ್ರ ಮಾರ್ಗ 365 km) ಅತ್ಯಂತ ಪ್ರಮುಖವಾದ ಸ್ಥಳಗಳಾಗಿವೆ. ಈ ದ್ವೀಪ ಸಮೂಹದಲ್ಲಿ ಸುಮಾರು 97% ದಟ್ಟವಾದ ಕಾಡಿನಿಂದ ಆವರಿಸಿದ್ದು ಬಹುತೇಕ ಭಾಗಗಳು ರಕ್ಷಿತ ವಲಯಕ್ಕೆ ಸೇರಿದ್ದು ಕೇವಲ ಕೆಲವೇ ಭೂಭಾಗಗಳಲ್ಲಿ ಜನ ಸಾಂದ್ರತೆ ಇದೆ. ಇಲ್ಲಿನ 95% ರಷ್ಟು ನಿವಾಸಿಗಳು ಸಂರಕ್ಷಿಸಲಾದ ಬುಡಕಟ್ಟು ಪಂಗಡಗಳಿಗೆ ಸೇರಿದ್ದು, ಕೇವಲ 11 ದ್ವೀಪಗಳಲ್ಲಿ ಮಾತ್ರವೇ ಜನವಸತಿ ಇದೆ.

ಆನಾದಿ ಕಾಲದಿಂದಲೂ ಭಾರತ ಭೂಭಾಗವಾಗಿಯೇ ಇರುವ ಈ ದ್ವೀಪ ಸಮೂಹದಲ್ಲಿ ಸದ್ಯದ ಪ್ರಕಾರ ಸುಮಾರು 70,000 ಜನರು ವಾಸಿಸುತ್ತಿದ್ದು, ಅವರಲ್ಲಿ 2.7% ಹಿಂದೂಗಳು, 0.5%,ಕ್ರಿಶ್ಚಿಯನ್ನರು 0.01% ಸಿಖ್ಖರು, 0.02% ಬೌದ್ಧರು, 0.02% ಜೈನರು ಇದ್ದರೆ, 96.5% ರಷ್ಟು ಮುಸ್ಲಿಮರು ಇಲ್ಲಿದ್ದಾರೆ. ಈ ದ್ವೀಪಗಳಲ್ಲಿ ಮಲಯಾಳಂ, ಜೆಸ್ಸೆರಿ (ದ್ವಿಪ್ ಭಾಷೆ) ಮತ್ತು ಮಹಲ್ ಭಾಷೆಗಳನ್ನು ಮಾತನಾಡುತ್ತಾರೆ. ಇನ್ನು ಉತ್ತರ ದ್ವೀಪಗಳ ಜನರು ಅರ್ವಿಯನ್ನು ಹೋಲುವ ತಮಿಳು ಮತ್ತು ಅರೇಬಿಕ್ ಪ್ರಭಾವದಿಂದ ಕೂಡಿದ ಮಲಯಾಳಂನ ಉಪಭಾಷೆಯನ್ನು ಮಾತನಾಡುತ್ತಾರೆ.

lak4

ಸುಮಾರು 5ನೇ ಶತಮಾನದವರೆಗೂ ಹಿಂದೂ ಬುಡಕಟ್ಟಿಗೆ ಸೇರಿದವರೇ ಇದ್ದಿದ್ದು ನಂತರ 5-6ನೇ ಶತಮಾನದಲ್ಲಿ ಅಲ್ಲಿಗೆ ಬೌದ್ಧರು ಆಗಮಿಸಿ ನಿಧಾನವಾಗಿ ನೆಲೆಗೊಳ್ಳುತ್ತಾರೆ. 7ನೇ ಶತಮಾನದ ಹೊತ್ತಿಗೆ ಇಸ್ಲಾಂ ಧರ್ಮ ಅಲ್ಲಿಗೆ ಪ್ರವೇಶಿಸಿದ ಬಳಿಕ ನಿಧಾನವಾಗಿ ಆ ದ್ವೀಪಗಳ ಜನರು ವಿವಿಧ ಕಾರಣಗಳಿಂದಾಗಿ ಮುಸಲ್ಮಾನರಾಗಿ ಮತಾಂತರ ಗೊಂಡು ಮುಸ್ಲಿಂ ಬಾಹುಳ್ಯ ದ್ವೀಪವಾಗುತ್ತದೆ. 1468 ರಲ್ಲಿ ಈ ದ್ವೀಪಕ್ಕೆ ಪ್ರವೇಶಿಸಿದ ಪೋರ್ಚುಗೀಸರು ಅಲ್ಲಿಯ ಜನರಿಗೆ ತೆಂಗಿನ ನಾರಿನ ಉತ್ಪಾದನೆ ಕಲಿಸುವ ಮೂಲಕ ಸ್ವಲ್ಪ ಮಟ್ಟಿಗಿನ ಆಧುನಿಕ ಜಗತ್ತನ್ನು ಪರಿಚಯಿಸಿದರೆ ನಂತರ ಬ್ರಿಟಿಷರೂ ಈ ದ್ವೀಪಗಳನ್ನು ಬಹಳಷ್ಟು ಕಾಲ ಆಳ್ವಿಕೆ ನಡೆಸುತ್ತಾರೆ. ಅಗಟ್ಟಿ, ಅಮಿನಿ, ಅನ್ಡ್ರೊಟ್, ಬಂಗಾರಂ, ಬಿತ್ರ, ಚೆತ್ಲಾತ್, ಕದ್ಮತ್, ಕಲ್ಪೇನಿ, ಕವರತ್ತಿ, ಕಿಲ್ತಾನ್, ಮಿನಿಕಾಯ್ ಮುಂತಾದ ದ್ವೀಪಗಳು ಹೆಚ್ಚಿನ ರೀತಿಯಾಗಿ ಅಭಿವೃದ್ಧಿಯನ್ನು ಕಂಡಿದ್ದು ಪ್ರವಾಸಿಗರಿಗೆ ಭೂಲೋಕದ ಸ್ವರ್ಗ ಎನಿಸಿದೆ ಎಂದರೂ ಅತಿಶಯೋಕ್ತಿ ಏನಲ್ಲ.

lak3

ಇಂತಹ ದ್ವೀಪಕ್ಕೆ ಭಾರತ ಸರ್ಕಾರ ನವಂಬರ್ 2, 1956ರಲ್ಲಿ ಪ್ರತ್ಯೇಕವಾದ ಅಸ್ತಿತ್ವವನ್ನು ನೀಡಿದ್ದಲ್ಲದೇ, ಮೈಸೂರು ರಾಜ್ಯದಿಂದ ಕರ್ನಾಟಕ ಎಂಬ ಹೆಸರನ್ನು ಬದಲಿಸಿದ ನವಂಬರ್ 1,1973 ರಂದೇ ಈ ದ್ವೀಪಕ್ಕೆ ಲಕ್ಷದ್ವೀಪ ಎಂದು ಅಧಿಕೃತವಾಗಿ ಹೆಸರಿಸಲಾಯಿತಲ್ಲದೇ ಇದನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿತು.

ಸುಮಾರು 70 ಸಾವಿರದ ಆಸುಪಾಸಿನಲ್ಲಿ ಇರುವ ಈ ದ್ವೀಪ ಸಮೂಹದ ಜನರನ್ನು ಪ್ರತಿನಿಧಿಸಲು ಕೇವಲ ಓರ್ವ ಸಂಸದರಿದ್ದು ಉಳಿದ ಆಡಳಿತವೆಲ್ಲವೂ ಪಂಚಾಯತ್ ವ್ಯವಸ್ಥೆಯ ಮುಖಾಂತರವೇ ನಡೆಯುತ್ತದೆ. ಜನರು ತಮ್ಮ ಮತ ಚಲಾಯಿಸಿ ಪಂಚಾಯತ್ ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ಸ್ಥಳೀಯ ಆಡಳಿತ ನಡೆಸಲಾಗುತ್ತದೆ ಉಳಿದದ್ದೆಲ್ಲವೂ, ಐಪಿಎಸ್ ಅಥವಾ ಐಎಎಸ್ ಮಟ್ಟದ ಅಧಿಕಾರಿಗಳನ್ನೇ ಇಲ್ಲಿನ ಆಡಳಿತ ಅಧಿಕಾರಿಗಳನ್ನಾಗಿ ನೇಮಕ ಮಾಡುವುದು ಅಂದಿನಿಂದಲೂ ನಡೆದುಕೊಂಡ ಬಂದಿರುವ ಸಂಪ್ರದಾಯವಾಗಿದೆ. ಇಲ್ಲಿನ ಜನರು ತಮ್ಮೆಲ್ಲಾ ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ವಿದ್ಯಾಭ್ಯಾಸಗಳಿಗೆ ಕೇರಳ ಅಥವಾ ಕರ್ನಾಟಕದ ಕರಾವಳಿ ಪ್ರದೇಶವನ್ನೇ ಆಶ್ರಯಿಸುತ್ತಾರೆ. 90ರ ದಶಕದಲ್ಲಿ ಇಲ್ಲಿನ ಸಾಂಸದರಾಗಿದ್ದ ಶ್ರೀ ಪಿ ಎಂ ಸಯೀದ್ ಅವರು ತಮ್ಮ ಉನ್ನತ ವ್ಯಾಸಂಗವನ್ನು ಮಂಗಳೂರಿನಲ್ಲಿ ಮಾಡಿದ್ದ ಕಾರಣ ಅವರಿಗೆ ಕನ್ನಡ ಭಾಷೆಯು ಸುಲಲಿತವಾಗಿ ಬರುತ್ತಿದ್ದದ್ದಲ್ಲದೇ ಲೋಕಸಭೆಯಲ್ಲೂ ಅವರೊಮ್ಮೆ ಅಪರೂಪಕ್ಕೆ ಕನ್ನಡದಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದಿದ್ದರು.

ಸಾಮಾನ್ಯವಾಗಿ ಇಲ್ಲಿನ ಆಡಳಿತ ಅಧಿಕಾರಿಗಳಾಗಿ ಬರುತ್ತಿದ್ದ ಐಪಿಎಸ್ ಅಥವಾ ಐಎಎಸ್ ಮಟ್ಟದ ಅಧಿಕಾರಿಗಳು ತಮ್ಮ ಆಡಳಿತಾವಧಿಯಲ್ಲಿ ಹೆಚ್ಚಿನ ಬದಲಾವಣೆಯನ್ನು ತರದೇ ರೂಡಿಯಲ್ಲಿದ್ದ ಪದ್ದತಿಗಳನ್ನೇ ಮುಂದುವರೆಸಿಕೊಂಡು ಹೋಗುತ್ತಾ, ಇಲ್ಲಿನ ಸುಂದರ ಪ್ರಕೃತಿ ತಾಣಗಳಲ್ಲಿ ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಾ ಇಲ್ಲಿನವರಿಗೆ ಅಚ್ಚು ಮೆಚ್ಚಾಗಿಯೇ ಇರುತ್ತಿದ್ದರು. ಒಂದು ವರ್ಷದ ಹಿಂದೆ ಲಕ್ಷದ್ವೀಪದಲ್ಲಿ ಭಾರತದ ಇಂಟಲಿಜೆನ್ಸ್ ಬ್ಯೂರೋ ಮುಖ್ಯಸ್ಥರಾಗಿ ಹೆಸರು ಮಾಡಿದ್ದ ದಿನೇಶ್ವರ್ ಶರ್ಮಾ ಅವರು ಆಡಳಿತ ಅಧಿಕಾರಿಯಾಗಿ ಇದೇ ರೀತಿಯಲ್ಲೇ ಜನ ಮೆಚ್ಚುವಂತೆ ಕೆಲಸ ನಿರ್ವಹಿಸಿ ನಿವೃತ್ತಿಯಾದ ನಂತರ ಲಕ್ಷದ್ವೀಪಕ್ಕೆ ಆಡಳಿತಾಧಿಕಾರಿಯಾಗಿ ಮೊತ್ತ ಮೊದಲ ಬಾರಿಗೆ ರಾಜಕೀಯ ಹಿನ್ನಲೆಯ ಎಲ್‌ ಜೆ ಪ್ರಫುಲ್‌ ಪಟೇಲ್‌ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದಾಗಲೇ ಎಲ್ಲರ ಹುಬ್ಬೇರಿತ್ತು. ಪ್ರಫುಲ್ ಪಟೇಲ್ ಈ ಹಿಂದೆ ಗುಜರಾತಿನಲ್ಲಿ ನರೇಂದ್ರ ಮೋದಿಯವರ ಮಂತ್ರಿಮಂಡಲದಲ್ಲಿ ಅಮಿತ್ ಶಾ ಅವರು ಕೊಲೆ ಆಪಾದನೆ ಮೇರಿಗೆ ಜೈಲು ಸೇರಿದ್ದಾಗ ಗೃಹ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.

ಆರಂಭದ ಕೆಲ ತಿಂಗಳುಗಳ ಕಾಲ ಇಲ್ಲಿನ ಪದ್ದತಿಗಳನ್ನು ಅಧ್ಯಯನ ಮಾಡಿದ ಪ್ರಫುಲ್ ಪಟೇಲ್ ಹವಾಯಿ ದ್ಚೀಪ ಮತ್ತು ಮಾಲ್ಡೀವ್ಸ್ ಗಿಂತಲೂ ಒಂದು ಕೈ ಹೆಚ್ಚೇ ಇರುವ ಈ ಸುಂದರ ಪ್ರದೇಶವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಸಲುವಾಗಿ ಈಗಾಗಲೇ ದೇಶದಲ್ಲಿದ್ದ ಕಾನೂನುಗಳನ್ನೇ ಒಟ್ಟುಗೂಡಿಸಿ ಲಕ್ಷದ್ವೀಪ ಡೆವಲಪ್‌ಮೆಂಟ್‌ ಅಥಾರಿಟಿಯ ರೆಗ್ಯುಲೇಶನ್‌ ಜಾರಿಗೆ ತರಲು ಯೋಚಿಸಿದ್ದೇ ತಡಾ ಇಡೀ ಲಕ್ಷದ್ವೀಪದ ಜನ ಬೆಚ್ಚಿ ಬೆರಗಾದರು. ಅಭಿವೃದ್ಧಿಯ ಹೆಸರಿನಲ್ಲಿ ಕೇವಲ 36 ಕಿವೀ ವಿಸ್ತೀರ್ಣವಿರುವ ಈ ಪ್ರದೇಶದಲ್ಲಿ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸುವ ಸಲುವಾಗಿ ಬಹುತೇಕ ಕಾಡುಗಳನ್ನು ಕಡಿಯುವ ಮೂಲಕ ಇಲ್ಲಿನ ದ್ವೀಪವಾಸಿಗಳ ಜನ ಜೀವನವನ್ನು ಮತ್ತು ಸಾಂಪ್ರದಾಯಿಕ ಕಸುಬುಗಳನ್ನು ನಾಶ ಮಾಡಲಿದೆ ಎಂದು ಜನರು ಕಳವಳಗೊಂಡಿದ್ದಾರೆ.

  • ಇದಷ್ಟೇ ಅಲ್ಲದೇ ಆಡಳಿತಾತ್ಮಕವಾಗಿಯೂ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿರುವುದು ಅಲ್ಲಿನ ಜನರಿಗೆ ಮುಜುಗರವನ್ನುಂಟು ಮಾಡಿದೆ. ಕೇರಳ ರಾಜ್ಯದಿಂದ ಕೇವಲ 200 ಕಿ.ಮೀ. ದೂರದಲ್ಲಿರುವ ಈ ಭೂ ಭಾಗದಲ್ಲಿ ಇಸ್ಲಾಂ ಮಲಯಾಳಿಗಳೇ ಹೆಚ್ಚಾಗಿದ್ದು ಅವರ ಪ್ರಮುಖ ಆಹಾರವಾದ ದನದ ಮಾಂಸ, ತರಕಾರಿ, ಸೊಪ್ಪುಗಳಲ್ಲವನ್ನೂ ಕೇರಳ ಇಲ್ಲವೇ ಕರ್ನಾಟಕದ ಕರಾವಳಿ ಪ್ರದೇಶದಿಂದ ಆಮದು ಮಾಡಿಕೊಳ್ಳಬೇಕು. ಹೀಗೆ ಆಮದು ಮಾಡಿಕೊಂಡಾಗ ಆ ಮಾಂಸ ತಾಜಾವಾಗಿರದ ಕಾರಣ, ಇಲ್ಲಿಯ ಶಾಲಾ ಮಕ್ಕಳ ಊಟದಲ್ಲಿ ಕೋಳಿ ಮತ್ತು ದನದ ಮಾಂಸದ ಬದಲಾಗಿ ಅಲ್ಲಿಯೇ ತಾಜಾವಾಗಿಯೇ ಸಿಗುವ ಮೀನು ಮತ್ತು ಮೊಟ್ಟೆಗಳನ್ನು ಕೊಡುವ ನಿರ್ಧಾರ ಮಾಡಿದ್ದಲ್ಲದೇ, Animal preservation regulation ಎಂಬ ಈಗಾಗಲೇ ಇದ್ದ ಕಾನೂನನ್ನು ಜಾರಿಗೆ ತರುವ ಮೂಲಕ ಮಾಂಸಕ್ಕಾಗಿ ದನವನ್ನು ಕಡಿಯುವುದನ್ನು ತಡೆಗಟ್ಟಲು ಮುಂದಾಗಿದ್ದೇ ತಡಾ, ಬಹು ಸಂಖ್ಯಾತ ಮುಸ್ಲಿಮರಿಗೆ ದನದ ಮಾಂಸವನ್ನು ತಿನ್ನದಂತೆ ಮಾಡುವ ಮೂಲಕ ಬಲವಂತವಾಗಿ ಹಿಂದುತ್ವವನ್ನು ಹೇರಲಾಗುತ್ತಿದೆ ಎಂಬ ಹುಯಿಲನ್ನು ಎಬ್ಬಿಸಿದರು.
  • ಇನ್ನು ಈಗಾಗಲೇ ಭಾರತದ ಬಹುತೇಕ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇರುವಂತೆಯೇ ಇಲ್ಲಿನ ಸ್ಥಳಿಯ ಚುನಾವಣೆಯಲ್ಲಿಯೂ ಸ್ಪರ್ಧಿಸುವವರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು ಎಂಬ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಮುಂದಾದ ಪರಿಣಾಮ, ಈಗಾಗಲೇ ಮೂರ್ನಾಲ್ಕು ಹೆಂಡತಿಯರಿಂದ ಹತ್ತಾರು ಮಕ್ಕಳನ್ನು ಹೊಂದಿದ್ದಂತಹ ಸ್ಥಳೀಯ ಮುಖಂಡರ ಬುಡಕ್ಕೇ ಬೆಂಕಿ ಬಿದ್ದಂತಾಗಿದೆ.
  • ಸಮುದ್ರ ಮಥ್ಯದಲ್ಲಿರುವ ಮತ್ತು ಭಾರತದ ಅನೇಕ ನೌಕಾ ಕೇಂದ್ರಗಳ ಶಾಖೆಗಳು ಅಲ್ಲಿರುವ ಕಾರಣ ದೇಶದ ಹಿತದೃಷ್ಟಿಯಿಂದಾಗಿ ಸಮಾಜ ವಿರೋಧಿ ಚಟುವಟಿಕೆ ತಡೆ (ಪಿಎಎಸ್‌ಎ Prevention of Anti-Social Activities Act -PASA) ಕಾಯ್ದೆ ಜಾರಿಗೆ ಮಾಡಿದಾಗ, ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ಅಪರಾಧ ಸಂಖ್ಯೆ ಕಡಿಮೆ ಇರುವಾಗ ಇಂತಹ ಕಾನೂನು ಏಕೆ? ಎಂಬುದು ಇಲ್ಲಿಯ ಜನರ ಆಕ್ರೋಶವಾಗಿದೆ.
  • ಇನ್ನು ಅಭಿವೃದ್ಧಿ ಯೋಜನೆಗಳಿಗಾಗಿ ಖಾಸಗಿಯವರಿಂದ ಕಾನೂನಾತ್ಮಕವಾಗಿಯೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧವಾಗಿಯೂ ಅಲ್ಲಿಯ ಸ್ಥಳೀಯ ರಿಯಲ್ ಎಸ್ಟೇಟ್ ಏಜೆಂಟ್ಗಳು
    ವರಾತ ತೆಗೆಯುತ್ತಿದ್ದಾರೆ.
  • ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅದುವರೆವಿಗೂ ಲಕ್ಷದ್ವೀಪದಲ್ಲಿ ನಿಷೇಧವಿದ್ದ ಮದ್ಯದ ಮಾರಾಟವನ್ನು ತೆರವುಗೊಳಿಸಿದ್ದೂ ಸಹಾ ಅಲ್ಲಿನ ಮುಸ್ಲಿಂ ಧಾರ್ಮಿಕ ಗುರುಗಳ ಕೆಂಗಣ್ಣಿಗೆ ಗುರಿಯಾಗಿದೆ.
  • ಅದುವರೆವಿಗೂ ಪ್ರವಾಸೋದ್ಯಮಕ್ಕೆ ಕೇರಳದ ಕೊಚ್ಚಿನ್ ನಿಂದಲೇ ಹಡುಗು ಮತ್ತು ವಿಮಾನಗಳ ಹಾರಾಟವಿದ್ದುದ್ದರ ಜೊತೆಗೆ ಪ್ರವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿ ಎಂಬ ದೃಷ್ಟಿ ಕೋನದಿಂದ ಮಂಗಳೂರಿನಿಂದಲೂ ಸಂಪರ್ಕವನ್ನು ಏರ್ಪಡಿಸಲು ಮುಂದಾಗಿದ್ದು ಕೇರಳಿಗರ ಕೋಪವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

lak2

ಈ ಎಲ್ಲಾ ಕಾರಣಗಳಿಂದಾಗಿಯೇ ಈ ಹಿಂದೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಎಂದು ಗುಲ್ಲೆಬ್ಬಿಸಿದ್ದ ರೀತಿಯಲ್ಲಿಯೇ ಅನೇಕ ನಿವೃತ್ತ ಅಧಿಕಾರಿಗಳು (ಎಡಪಂತೀಯರು ಎಂದು ವಿಶೇಷವಾಗಿ ಹೇಳಬೇಕಿಲ್ಲವೇನೋ) ಸಂಸದರು ಮತ್ತು ಚಲನಚಿತ್ರ ಗಣ್ಯರೆಲ್ಲರೂ ಒಟ್ಟಾಗಿ Save Lakshadweep ಎಂಬ ಆಂದೋಲನವನ್ನು ಶುರು ಮಾಡಿರುವುದಲ್ಲದೇ ಈ ಉದ್ದೇಶಿತ ಯೋಜನೆಯಿಂದ ಲಕ್ಷದ್ವೀಪದ ಮೂಲ ಸ್ವರೂಪವೇ ಬದಲಾಗಿ, ಅಲ್ಲಿನ ಬುಡಕಟ್ಟು ಮತ್ತು ಅವರ ನೆಲೆ ಅರಣ್ಯ ನಾಶವಾಗುವುದಲ್ಲದೇ, ಅಲ್ಲಿನ ಜನಜೀವನವನ್ನು ಸಂಪೂರ್ಣ ನಾಶಮಾಡಲಿದೆ. ಹಾಗಾಗಿ ಈ ಉದ್ಧೇಶಿತ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಎಂದಿನಂತೆ ಲೂಟಿಯನ್ಸ್ ಮಾಧ್ಯಮದವರ ಕುಮ್ಮಕ್ಕೂ ಇರುವ ಕಾರಣ ಕಳೆದ ಎರಡು ವಾರಗಳಿಂದ ಇದೇ ವಿಷಯ ಟ್ವಿಟ್ಟರಿನಲ್ಲಿಯೂ ಟ್ರೆಂಡಿಗ್ಗಿನಲ್ಲಿದೆ.

ಉರಿಯುವುದಕ್ಕೆ ತುಪ್ಪಾ ಸುರಿಯುವಂತೆ ಅಲ್ಲಿನ ಸ್ಥಳೀಯರನ್ನು ಎತ್ತಿಕಟ್ಟಿರುವ ಕೆಲವು ಬುದ್ದಿಜೀವಿಗಳು ಇಂತಹ ಮಹಾಮಾರಿಯ ಸಂಧರ್ಭದಲ್ಲಿ ಸರಣಿ ಉಪವಾಸ ಸತ್ಯಾಗ್ರಹವನ್ನು ಅರಂಭಿಸಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ದಂಗೆ ಏಳುವಂತೆ ಪ್ರಚೋದಿಸುತ್ತಿರುವುದಲ್ಲದೇ, ಪ್ರತಿಭಟನೆಯನ್ನು ಹೇಗಾದರೂ ಹಿಂಸಾರೂಪಕ್ಕೆ ಪರಿವರ್ತಿಸಿ ಇದು ಅಂತರಾಷ್ಟ್ರೀಯ ಮಟ್ಟದ ಸುದ್ದಿಯಾಗಿ ಭಾರತಕ್ಕೆ ಕೆಟ್ಟ ಹೆಸರನ್ನು ತರಲು ಕಟಿಬದ್ಧವಾಗಿ ನಿಂತಿರುವುದು ನಿಜಕ್ಕೂ ವಿಷಾಧನೀಯವಾಗಿದೆ.

ಅಪ್ಪಾ ಹಾಕಿದ ಆಲದ ಮರ ಎಂದು ಕಳೆದ ಎಪ್ಪತ್ತು ವರ್ಷಗಳಿಂದಲೂ ಸರಿಯಾದ ರೀತಿಯ ಅಭಿವೃದ್ಧಿ ಕಾಣದ ಈ ದ್ವೀಪಗಳಿಗೆ ವಿಶ್ವಮಾನ್ಯತೆಯನ್ನು ತಂದು ಕೊಡಲು ಮುಂದಾಗಿರುವ ಈ ಯೋಜನೆ ದಿನದಿಂದ ದಿನಕ್ಕೆ ಕೋಮುವಾದದ ಬಣ್ಣಕ್ಕೆ ತಿರುಗುತ್ತಾ ಹೋಗಿರುವುದು ನಿಜಕ್ಕೂ ವಿಷಾಧನೀಯವೇ ಸರಿ. ಬದಲಾವಣೆ ಎನ್ನುವುದು ಜಗದ ನಿಯಮ. ನೀರು ಹರಿಯುತ್ತಿದ್ದಾಗಲೇ ಶುದ್ಧವಾಗಿರುವುದು. ನಿಂತ ನೀರೇ ಕೊಳೆತು ನಾರುವುದು ಎಂಬ ನಿತ್ಯ ಸತ್ಯ ಕೆಲವರ ಸೈದ್ಧಾಂತಿಕ ವಿರೋಧಾಭಾಸಗಳ ನಡುವೆ ಕಾಣೆಯಾಗಿ ಹೋಗುತ್ತಿರುವುದು ವಿಷಾಧನೀಯವೇ ಸರಿ.

ಧರ್ಮಾಧಾರಿತವಾಗಿ ದೇಶದಲ್ಲಿ ಜನಸಂಖ್ಯೆಯ ಅಸಮಾನತೆ ಹೀಗಯೇ ಮುಂದುವರಿದಲ್ಲಿ, ಸಂವಿಧಾನ ನಗಣ್ಯವಾಗಿ, ಅಭಿವೃದ್ಧಿ, ಎನ್ನುವುದು ಹೇಗೆ ಮರೀಚಿಕೆ ಆಗುತ್ತದೆ ಎನ್ನುವುದಕ್ಕೆ ಈ ಪ್ರತಿಭಟನೆಯೇ ಜ್ವಲಂತ ಉದಾಹರಣೆಯಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಲಕ್ಷದ್ವೀಪ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s