ಶರೀರೇ ಜುರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇವರೇ |
ಔಷಧೀ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋಹರಿಃ||
ಎಂಬ ಶ್ಲೋಕವನ್ನು ಸಾಧಾರಣವಾಗಿ ಎಲ್ಲಾ ದೇವಾಲಯಗಳಲ್ಲಿ ಪುರೋಹಿತರು ತೀರ್ಥ ಕೊಡುವಾಗ ಹೇಳುವುದನ್ನು ಕೇಳಿರುತ್ತೇವೆ. ಇದರ ಅರ್ಥ ಹೀಗಿದೆ. ಶರೀರವು ವ್ಯಾಧಿಗ್ರಸ್ತವೂ ಜರ್ಜರಿತವೂ ಆಗಿ ಕಳೇಬರದಂತಾಗಿ ಹೋದಾಗಾ, ಗಂಗಾ ಜಲವೇ ಔಷಧಿ, ಹರಿ ಅರ್ಥಾತ್ ಶ್ರೀ ಮನ್ನಾರಾಯಣನೇ ವೈದ್ಯನಾಗುತ್ತಾನೆ ಎಂದು ಭಗವಂತನನ್ನು ಹಾಡಿ ಹೊಗಳುವುದೇ ಆಗಿದೆ.
ಸದ್ಯದ ಕಲಿಗಾಲದಲ್ಲಿ ಭಗವಂತನನ್ನು ಮರೆತು ಲೌಕಿಕದಲ್ಲೇ ಕಾಲ ಹರಣ ಮಾಡುತ್ತಿರುವವರು ಕಾಯಿಲೆಗೆ ತುತ್ತಾಗಿ ಅವರ ಶರೀರ ಜರ್ಜರಿತವಾಗಿ ಪರಿಸ್ಥಿತಿ ಉಲ್ಬಣಿಸಿದಾಗ, ಸಂಕಟ ಬಂದಾಗ ವೆಂಕಟರಮಣ ಎಂದು ದೈವವನ್ನು ನಂಬುವುದರ ಜೊತೆಗೆ ಸೂಕ್ತವಾದ ವೈದ್ಯಕೀಯ ಚಿಕಿತ್ಸೆಯೂ ಅತ್ಯಗತ್ಯವಾಗಿದೆ. ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳು ಇರುವ ಹೈಟೆಕ್ ಆಸ್ಪತ್ರೆಗೆ ಸೇರಿದರೂ ಹುಷಾರಾಗದೇ ಹೋಗಬಹುದು. ಅದೇ ಒಂದು ಸಾಧಾರಣ ಕ್ಲಿನಿಕ್ಕಿನಲ್ಲಿ ಅಥವಾ ಸರ್ಕಾರೀ ಆಸ್ಪತ್ರೆಗೆ ಸೇರಿದರೂ ಉತ್ತಮ ಸೇವಾಮನೋಭಾವವುಳ್ಳ ವೈದ್ಯರಿಂದ ಚಿಕಿತ್ಸೆ ದೊರೆತು ಖಾಯಿಲೆ ಗುಣಮುಖವಾದ ಅನೇಕ ಉದಾಹರಣೆಗಳಿವೆ. ನಾವಿಂದು ಅಂತಹದ್ದೇ ನಿಸ್ವಾರ್ಥ ಸಮಾಜಮುಖೀ ವೈದ್ಯರಾದ ತಮ್ಮ ಮೊಬೈಲ್ ಕ್ಲಿನಿಕ್ ಮುಖಾಂತರವೇ ರಾಜ್ಯ ಮತ್ತು ರಾಷ್ಟ್ರಾದ್ಯಂತ ಪ್ರಖ್ಯಾತರಾಗಿರುವ ಡಾ. ಶ್ರೀ ಸುನೀಲ್ ಕುಮಾರ್ ಹೆಬ್ಬಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಕೊಳ್ಳೋಣ.
ಮೂಲತಃ ವಿಜಯಪುರದಲ್ಲಿ ಹುಟ್ಟಿ, ಬೆಳೆದ ಶ್ರೀ ಹೆಬ್ಬಿಯವರು, 2008 ರಲ್ಲಿ ತಮ್ಮ ವೈದ್ಯಕೀಯ ಪದವಿ ಮುಗಿಸಿಕೊಂಡು ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಬೆಂಗಳೂರಿನ ಯಾವುದಾದರೂ ನರ್ಸಿಂಗ್ ಹೋಂ ನಲ್ಲಿ ನೌಕರಿ ಸಿಕ್ಕಿದರೆ ಸಾಕು ಎಂದು ಹುಡುಕುತ್ತಿದ್ದಾಗ ಪ್ರಖ್ಯಾತವಾದ ಬಿಜಿಎಸ್ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿ ಸುಮಾರು 3 ವರ್ಷಗಳ ಕಾಲ ಅಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಾರೆ. ಅಲ್ಲಿಗೆ ಬರುವ ಎಷ್ಟೋ ರೋಗಿಗಳಿಗೆ ಚಿಕಿತ್ಸೆಗಾಗಿ ದುಬಾರಿ ಹಣವನ್ನು ಕಟ್ಟಲೂ ಅರದಾಡುತ್ತಿರುವುದು ಅವರ ಮನಸ್ಸಿಗೆ ಬಹಳ ಕಸಿವಿಸಿಯನ್ನುಂಟು ಮಾಡುತ್ತಿರುತ್ತದೆ. ದೇಶದ ಪ್ರತಿಯೊಬ್ಬ ನಾಗರೀಕರಿಗೂ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಸಿಗುವಂತಾಗಬೇಕು ಎಂಬ ಭಾವನೆ ಅವರಲ್ಲಿ ಮೂಡಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಕೆಲವೇ ಸಮಯಲ್ಲಿ ಅಲ್ಲಿನ ಕೆಲಸವು ಯಾಂತ್ರೀಕೃತ ಎನಿಸಿದಾಗ 2011ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟ ಶ್ರೀ ಹೆಬ್ಬಿಯವರು ತಮ್ಮನ್ನು ತಾವು ಸಂಪೂರ್ಣವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಮನಸ್ಸು ಮಾಡುತ್ತಾರೆ.
ಅದರ ಭಾಗವಾಗಿಯೇ ತಮ್ಮ ಆತ್ಮೀಯರೊಬ್ಬರ ಬಳಿ 2 ಲಕ್ಷದಷ್ಟು ದೇಣಿಗೆ ಪಡೆದು ತಮ್ಮ ಬಳಿ ಇದ್ದ ಕಾರನ್ನೇ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ತಮ್ಮದೇ ಆದ ಮಾತೃ ಸಿರಿ ಫೌಂಡೇಶನ್ ಹೆಸರಿನಲ್ಲಿ ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆ ಮಾಡಲು Dr. On Wheel ಎನ್ನುವ Mobile clinic ಆರಂಭಿಸಿ, ಪ್ರತೀ ದಿನವೂ ರಾಜ್ಯದ ಹಲವಾರು ಕಡೆ ಪ್ರಯಾಣಿಸಿ ಅಗತ್ಯವಿದ್ದವರಿಗೆ ಉಚಿತವಾಗಿ ಚಿಕಿತ್ಸೆ ಕೊಡಲು ಪ್ರಾರಂಭಿಸುತ್ತಾರೆ.
ಅಂದು ಸಣ್ಣದಾಗಿ ತಮ್ಮ ಕಾರಿನಲ್ಲಿಯೇ ಆರಂಭಿಸಿದ Mobile clinic ಇಂದು ಸಂಪೂರ್ಣ ಸುಸಜ್ಜಿತವಾದ ಮೊಬೈಲ್ Dr ಕ್ಲಿನಿಕ್ ಮೂಲಕ ಸುಮಾರು 785 ಕ್ಕೂ ಹೆಚ್ಚು ಉಚಿತ ಚಿಕಿತ್ಸಾ ಶಿಬಿರಗಳನ್ನು ನಡೆಸುವ ಮೂಲಕ 85,000 ಕ್ಕೂ ಹೆಚ್ಚು ರೋಗಿಗಳಿಗೆ ಸಂತೃಪ್ತ ಸೇವೆ ಸಲ್ಲಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಕಾಲದಲ್ಲಿ ಉಚಿತವಾಗಿ ಚಿಕಿತ್ಸೆ ದೊರೆತು ಎಲ್ಲರೂ ಆರೋಗ್ಯದಿಂದ ಇರಬೇಕು ಎನ್ನುವ ಅವರ ಅಭಿಪ್ರಾಯವನ್ನು ಸಾಕಾರ ಮಾಡಲೆಂದೇ ಕಟಿ ಬದ್ಧರಾಗಿದ್ದಾರೆ. ಹಾಗಾಗಿಯೇ, ದೇಶದಲ್ಲಿ ಆರೋಗ್ಯ ಹಕ್ಕು ಕಾನೂನು ಜಾರಿಗೆಯಾಗಲೀ ಎಂಬ ಜನ ಜಾಗೃತಿಯನ್ನು ಎಲೆಮರೆ ಕಾಯಿಯಂತೆ ಮೂಡಿಸುತ್ತಾ, ಇದುವರೆಗೆ ಸುಮಾರು 8,000km ರಷ್ಟು ದೂರವನ್ನು ದೇಶಾದ್ಯಂತ ಸಂಚಾರ ಮಾಡಿ ಜನರಲ್ಲಿ ಮೂಡಿಸುವಲ್ಲಿ ಸಫಲರಾಗಿದ್ದಾರೆ.
ಪ್ರಸ್ತುತ ಮಲ್ಲೇಶ್ವರದ ನಿವಾಸಿಯಾಗಿರುವ ಡಾ. ಹೆಬ್ಬಿ ಅವರು, ರಾತ್ರಿ 8 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಗೋರಿಪಾಳ್ಯದಲ್ಲಿರುವ ಬಿಬಿಎಂಪಿ ಕೋವಿಡ್ ಕೇರ್ ಕೇಂದ್ರದಲ್ಲಿ ಒಪ್ಪಂದದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರಲ್ಲದೇ, ಅಲ್ಲಿನ ಕೆಲಸ ಮುಗಿಸಿಕೊಂಡು ಕೇವಲ 2 ಗಂಟೆಗಳ ಕಾಲ ವಿರಾಮ ಪಡೆದುಕೊಂಡು ಮತ್ತೆ ಬೆಳಿಗ್ಗೆ 10 ಗಂಟೆಯಿಂದ ಎಂದಿನಂತೆ ತಮ್ಮ ಮೊಬೈಲ್ ಕಾರ್ ಕ್ಲಿನಿಕ್ ಸೇವೆಗೆ ಸಿದ್ದರಾಗುತ್ತಾರೆ.
ಕೊರೋನಾ ಎಂಬ ಮಹಾಮಾರಿ ಪ್ರಪಂಚಾದ್ಯಂತ ವಕ್ಕರಿಸದ ಮೇಲಂತೂ, ಪ್ರಪಂಚಾದ್ಯಂತ ಪ್ರತಿನಿತ್ಯವೂ ಲಕ್ಷಾಂತರ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಹೆಚ್ಚಿನವರು ಸ್ಸೂಕ್ತವದ ಚಿಕಿತ್ಸೆ ದೊರೆಯದೇ ಸಾವನ್ನಪ್ಪುತ್ತಿರುವ ವಿಷಯವನ್ನು ಮನಗಂಡ ಡಾ. ಹೆಬ್ರಿಯವರು, ತಮ್ಮ ಮೊಬೈಲ್ ಕ್ಲಿನಿಕ್ ಮುಖಾಂತರ ಸೋಂಕಿಗೊಳಗಾದ ಬಡವರು ಇರುವಲ್ಲಿಗೇ ಹೋಗಿ ಅವರಿಗೆ ಸಂಪೂರ್ಣ ಉಚಿತವಾಗಿ ವೈದ್ಯಕೀಯ ಸೇವೆಗಳನ್ನು ನೀಡುತ್ತಿರುವುದು ನಿಜಕ್ಕೂ ಅಮೋಘ. ಅನನ್ಯ ಮತ್ತು ಅನುಕರಣೀಯವೇ ಸರಿ.
ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚಾದ ಮೇಲಂತೂ ಹೆಬ್ಬಿಯವರಿಗೆ ವೈದ್ಯಕೀಯ ನೆರವನ್ನು ಕೋರಿ ಅನೇಕ ದೂರವಾಣಿ ಕರೆಗಳು ನಿರಂತರವಾಗಿ ಬರುತ್ತಲೇ ಇವೆ. ಎಲ್ಲಾ ಕರೆಗಳನ್ನೂ ತಾಳ್ಮೆಯಿಂದಲೇ ಸ್ವೀಕರಿಸಿ ಆವರಿಗೆ ಪೋನ್ ಮುಖಾಂತರವೇ ಚಿಕಿತ್ಸೆ ನೀಡುತ್ತಾರೆ. ಕೊರೋನಾ ಆರಂಭಿಕ ಲಕ್ಷಣಗಳಿರುವವರಿಗೆ ಅವರ ಉಸಿರಾಟದ ಆಮ್ಲಜನಕದ ಪ್ರಮಾಣವನ್ನು ಅರಿತುಕೊಂಡು, ಫೋನ್ ಮೂಲಕವೇ ಔಷಧಿಯನ್ನು ಸೂಚಿಸುತ್ತಾರೆ. ಅಕಸ್ಮಾತ್ ಪರಿಸ್ಥಿತಿ ತ್ರೀವ್ರವಾಗಿದೆ ಎಂದಾದಲೇ, ಸ್ವತಃ ಅವರೇ ಸೋಂಕಿತರ ಮನೆಗೆ ಹೋಗಿ ಸೂಕ್ತವಾದ ಚಿಕಿತ್ಸೆ ಕೊಟ್ಟು ಅದಕ್ಕಿಂಲೂ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಹತ್ತಿರದ ಆಸ್ಪತ್ರೆಗಳಿಗೆ ಸೇರಿಸಿಯೂ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ಸೋಂಕಿತರೊಬ್ಬರಿಗೆ, ಆಸ್ಪತ್ರೆಗೆ ಸೇರಲೇ ಬೇಕಾದ ಅನಿವಾರ್ಯತೆಯಾದಾಗ, ಕೇವಲ 3 ಕಿಮೀ ದೂರದಲ್ಲಿರುವ ಆಸ್ಪತೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್ ಚಾಲಕನೊಬ್ಬ ರೂ.12,000 ಕೇಳಿದಾಗ, ಆದನ್ನು ಭರಿಸಲಾಗದೇ ಹೆಬ್ಬಿಯವರಿಗೆ ಕರೆ ಮಾಡಿದಾಗ, ಹೆಬ್ಬಿಯವರೇ ಆ ವ್ಯಕ್ತಿಯನ್ನು ಎಲೆಕ್ಟ್ರಾನಿಕ್ ಸಿಟಿಯ ಆಸ್ಪತ್ರೆಗೆ ಸೇರಿಸಿ ಬಂದಿದ್ದಾರೆ.
ಕೊರೋನಾದಿಂದಾಗಿಯೇ ಹೆಬ್ಬಿಯವರ ಅಣ್ಣನ ಮಗನೂ ಕೆಲ ತಿಂಗಳ ಹಿಂದೆ ತೀರಿಕೊಂಡಾಗ, ಭಯಗ್ರಸ್ತರಾದ ಅವರ ಕುಟುಂಬದವರು ಹೆಬ್ಬಿಯವರ ಮೊಬೈಲ್ ಕ್ಲಿನಿಕ್ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರೂ, ಸೋಂಕಿತರ ಕುಟುಂಬಸ್ಥರ ನೋವು, ನರಳಾಟವನ್ನು ನೋಡಲು ಸಾಧ್ಯವಾಗದೇ, ಅಣ್ಣನ ಮಗನ ಅಂತ್ಯಕ್ರಿಯೆ ಮುಗಿದ ಮರುದಿನವೇ ಮರಳಿ ತಮ್ಮ ಸೇವೆಯನ್ನು ಎಂದಿನಂತೆ ಆರಂಭಿಸಿದ್ದಾರೆ.
ಪ್ರತೀನಿತ್ಯವೂ 80 ರಿಂದ 120 ಕಿಮೀ ದೂರದ ವರೆಗೂ ಪ್ರಯಾಣಿಸಿ, ಸುಮಾರು 10-12 ಮಂದಿಗೆ ಚಿಕಿತ್ಸೆ ನೀಡುತ್ತಾರೆ. ಇಷ್ಟು ವರ್ಷಗಳ ಕಾಲ ಯಾವುದನ್ನೋ ಬದುಕೆಂದುಕೊಂಡು ಯಾಂತ್ರೀಕೃತವಾಗಿ ಕೆಲಸ ಮಾಡಿ ತಮ್ಮ ಬದುಕನ್ನು ನಷ್ಟ ಮಾಡಿಕೊಂಡಿದಕ್ಕೆ ಅವರಿಗೆ ಬೇಸರವಿದೆ. ಈಗ ಅವರಿಗೆ ನಿಜವಾದ ಬದುಕು ಏನೆಂಬುದು ಅರ್ಥವಾಗಿ ಕಳೆದ ವರ್ಷಗಳಿಂದ ದುಡಿಮೆಗೆ ನೀಡುವಷ್ಟೇ ಸಮಯವನ್ನು ತಮ್ಮ ಇಷ್ಟದ ಬದುಕನ್ನು ಜೀವಿಸಲು ಮೀಸಲಿಡಬೇಕೆಂದು ನಿರ್ಧರಿಸಿದ್ದಾರೆ. ಜೀವನದಲ್ಲಿ ಏರಿಳಿತ ಇಲ್ಲದಿದ್ದರೆ ಸುಖಃ ದುಖಃದ ಅರಿವಿಲ್ಲದೆ ಜೀವಂತ ಹೆಣವಾಗಿ ಬಿಡುತ್ತೇವೆ. ಅತಿಯಾದ ದುಡಿಮೆಯಿಂದಾಗಿ ಕನಿಷ್ಠ ಸುಖ ಸಿಗಬಹುದೇ ಹೊರತು ಬದುಕಿನ ಆನಂದ ಲಭಿಸಲಾರದು. ಹಾಗಾಗಿ ಬದುಕನ್ನು ಕಲಿಸುವುದೇ ನಿಜವಾದ ಬದುಕು ಎನ್ನುತ್ತಾರೆ ಡಾ. ಹೆಬ್ಬಿಯವರು.
ಇವರ ಸೇವೆಯನ್ನು ಗುರುತಿಸಿ ಸುಮಾರು 50 ಕ್ಕೂ ಹೆಚ್ಚು ಪ್ರಶಸ್ತಿ, ಪ್ರಮಾಣ ಪತ್ರ ಸಂದಿವೆಯಲ್ಲದೇ, ನೂರಾರು ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ದೇಶಾದ್ಯಂತ ಇವರ ಸೇವೆಯ ಕುರಿತಾದ ಮಾಹಿತಿಯನ್ನು ಪ್ರಸಾರ ಮಾಡಿವೆ.
ದಿನೇ ದಿನೇ ಗಗನಕ್ಕೇರಿರುವ ಪೆಟ್ರೋಲ್ ಬೆಲೆ, ಔಷಧಿ, ವೈದ್ಯಕೀಯ ಸಲಕರಣೆಗಳ ಬೆಲೆಯಿಂದಾಗಿ ತಮ್ಮ ಮೊಬೈಲ್ ಕ್ಲಿನಿಕ್ ಮುಂದುವರೆಸುವುದು ಅವರಿಗೆ ತ್ರಾಸದಾಯಕವಾಗುತ್ತಿದೆ. ಹಾಗಾಗಿ ಸಹೃದಯೀ ಜನರಿಂದ ಇಂತಹ ಸಮಜಮುಖೀ ಸೇವೆಗಾಗಿ ತಮ್ಮ ಕೈಲಾದ ಮಟ್ಟಿಗಿನ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ.
ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ ||
ಪರೋಪಕಾರಕ್ಕಾಗಿ ಮರಗಳು ಹಣ್ಣುಕೊಡುತ್ತವೆ, ನದಿಗಳು ಹರಿಯುತ್ತಾ ನೀರನ್ನು ಕೊಡುವುದೂ ಬೇರೆಯವರ ಉಪಯೋಗಕ್ಕಾಗಿಯೇ, ಇನ್ನು ಹಸುಗಳು ಹಾಲನ್ನು ಕೊಡುವುದೂ ಸಹ ಬೇರೆಯವರಿಗಾಗಿಯೇ ಆದೇ ರೀತಿ ನಮ್ಮ ದೇಹ ಇರುವುದೂ ಸಹ ಬೇರೆಯವರಿಗೆ ಉಪಕಾರಮಾಡುವುದಕ್ಕಾಗಿಯೇ ಎಂಬ ಈ ಶ್ಲೋಕದ ತಾತ್ಪರ್ಯದಂತೆ, ಎಲ್ಲೆಲ್ಲಿಯೋ ಯಾವುದಕ್ಕೋ ಎಷ್ಟೆಷ್ಟೋ ಖರ್ಚು ಮಾಡುವ ನಾವುಗಳು ಅದರಲ್ಲಿ ಕೊಂಚ ಭಾಗವನ್ನಾದರೂ ಡಾ. ಹೆಬ್ಬಿಯವರ +919741958428 ಈ ಮೊಬೈಲ್ ನಂಬರಿಗೆ Google Pay ಮುಖಾಂತರ ಯಥಾಶಕ್ತಿ ಸಹಾಯವನ್ನು ಮಾಡುವ ಮುಖಾಂತರ ಅವರ ಸೇವೆಯೆಂಬ ಯಜ್ಞದಲ್ಲಿ ನಾವುಗಳೂ ಸಮಿಧೆಯಂತೆ ಯಥಾ ಶಕ್ತಿ ಭಾಗಿಗಳಾಗೋಣ. ಇದು ಅಗ್ರಹ ಪೂರ್ವಕ ಒತ್ತಾಯವೇನಲ್ಲವಾದರೂ, ಪ್ರೀತಿಪೊರ್ವಕ ಕೋರಿಕೆಯಷ್ಟೇ. ನಾನೂ ಸಹಾ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುವುದಲ್ಲದೇ ನನ್ನ ಬಂಧು-ಮಿತ್ರರಿಗೂ ಈರೀತಿಯಾಗಿ ಸಹಾಯ ಮಾಡಲು ಕೋರಿಕೊಳ್ಳುತ್ತೇನೆ. ನೀವೂ ಸಹಾ ಅದನ್ನೇ ಮಾಡ್ತೀರೀ ತಾನೇ?
ಏನಂತೀರೀ?
ನಿಮ್ಮವನೇ ಉಮಾಸುತ.
ಹೆಚ್ಚಿನ ಮಾಹಿತಿಗಾಗಿ : Call : +916363832491 | +919741958428 |
| http://www.matrusiri.in | http://www.matrusirifoundation.org |
ಖಂಡಿತ ಸರ್. ಕೈಲಾದಷ್ಟು ಪ್ರೀತಿಯಿಂದ ಸಹಾಯ ಮಾಡುತ್ತೇವೆ. ಡಾ. ಹೆಬ್ಬಿ ಅವರ ನಿಸ್ವಾರ್ಥ ಸೇವೆಗೆ ನಮ್ಮ ಹೃದಯಪೂರ್ವಕ ನಮನಗಳು 🙏🙏
LikeLike
ನನ್ನ ಮಗನೂ ಈಗ ಸಧ್ಯವಷ್ಟೇ MD ಮುಗಿಸಿದ್ದಾನೆ ( paediatrics ).. ನಿಮ್ಮ ಲೇಖನದಲ್ಲಿ ಒಬ್ಬ ಡಾಕ್ಟರ್ ಅವರನ್ನು ಪರಿಚಯಿಸಿದ್ದು ಖುಷಿ ಕೊಡುವ ವಿಚಾರ
LikeLiked by 1 person
ಒಳ್ಳೆಯ ಸೇವಾ ಮನೋಭಾವದ ವೈದ್ಯರಾಗಲಿ ಎಂದು ಹಾರೈಸುತ್ತೇವೆ
LikeLike