ಸಂಚಾರಿ ವಿಜಯ್

ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು.|
ಮದುವೆಗೋ ಮಸಣಕೋ ಹೋಗೆಂದ ಕಡೆ ಗೋಡು ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ||

ಡಿವಿಜಿಯವರು ಅಂದು ಯಾರನ್ನು ತಲೆಯಲ್ಲಿ ಇಟ್ಟುಕೊಂಡು ಈ ಕಗ್ಗವನ್ನು ಬರೆದರೋ ಏನೋ? ಆದರೆ ಈ ಪದ್ಯ ಮಾತ್ರ ಸದ್ಯದ ಪರಿಸ್ಥಿತಿಯಲ್ಲಿ ರಂಗಭೂಮಿ ಮತ್ತು ಚಲನಚಿತ್ರನಟ ಮತ್ತು ನಿರ್ದೇಶಕ ಸಂಚಾರಿ ವಿಜಯ್ ಅವರ ಪಾಲಿಗಂತೂ ಅನ್ವಯವಾಗುತ್ತದೆ ಎಂದರೂ ತಪ್ಪಾಗಲಾರದು. ಕೆಲ ವರ್ಷಗಳ ಹಿಂದೆ, ದಯಾಳ್ ಪದ್ಮನಾಭ್ ಅವರ ನಿರ್ದೇಶನದ ಸತ್ಯಹರಿಶ್ಚಂದ್ರ ಸಿನಿಮಾ ತಿರುವಣ್ಣಾಮಲೈನಲ್ಲಿನ ಚಿತ್ರೀಕರಣದಲ್ಲಿ ವಿಜಯ ಭಾಗವಹಿಸುತ್ತಿದ್ದರು. ಅದೆ ಸಮಯದಲ್ಲಿ ಅವರದ್ದೇ ಆದ ಆರನೇ ಮೈಲಿ ಚಿತ್ರದ ಪೂಜೆ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಹಮ್ಮಿಕೊಂಡಿದ್ದು ನಿರ್ಮಾಪಕರು ಬರಲೇ ಬೇಕು ಎಂಬ ಒತ್ತಾಯ ಮಾಡಿದ ಪಲವಾಗಿ ರಾಜನಹಳ್ಳಿಗೆ ಬಂದು ಪೂಜೆ ಮುಗಿಸಿಕೊಂಡು ನಿರ್ಮಾಪಕ ಎ. ಮಂಜು ಅವರ ಕಾರಿನಲ್ಲಿ ಮತ್ತೆ ತಿರುವಣ್ಣಾಮಲೈಗೆ ಹಿಂದಿರಿಗುವ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರು ನುಜ್ಜು ಗುಜ್ಜಾಗಿದ್ದರೂ ಅದೃಷ್ಠವಷಾತ್ ವಿಜಯ್ ಹೆಚ್ಚಿನ ಅಪಾಯವಿಲ್ಲದೇ ಪಾರಾದಾಗ, ಎಲ್ಲರೂ ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಮೊನ್ನೆ ಜೂನ್ 12 ಶನಿವಾರ ಜೆಪಿ ನಗರದಲ್ಲಿ ತಮ್ಮ ಗೆಳೆಯನ ಬೈಕ್ನಲ್ಲಿ ಹೆಲ್ಮೆಟ್ ಹಾಕಿಕೊಳ್ಳದೇ ಹೋಗುತ್ತಿರುವಾಗ ಬೈಕ್ ಅಪಘಾತವಾಗಿ ತೊಡೆ ಮತ್ತು ತಲೆಗೆ ತೀವ್ರವಾದ ಪೆಟ್ಟು ಬಿದ್ದ ಕಾರಣ, ಕೂಡಲೇ ಅವರನ್ನು ಅಪೋಲೋ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೆದಳು ನಿಶ್ಕ್ರಿಯೆಯಾಗಿ ಜೀವಚ್ಛವವಾಗಿ ಈಗಲೋ ಆಗಲೋ ಎನ್ನುವಂತಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಅಂದು ಕಾರು ನುಚ್ಚು ನೂರಾದರೂ ಉಳಿಸಿದ್ದ ವಿಧಿ, ಇಂದು ಸಾಧಾರಣಗಿ ಬೈಕ್ ಜಾರಿದ್ದಕ್ಕೆ ಸೀದಾ ಮಸಣದ ದಾರಿ ತೋರಿಸಿರುವುದು, ನಂಬಲಾರದಾಗಿದೆ.

vij7

ಬಿ. ವಿಜಯ್ ಕುಮಾರ್ ಎಂಬ ಸುಸಂಪನ್ನ, ವಿದ್ಯಾವಂತ ಸುರದ್ರೂಪಿ ತರುಣ ಸಂ‍ಚಾರಿ ವಿಜಯ್ ಆಗಿದ್ದರ ಹಿಂದೆಯೂ ಒಂದು ರೋಚಕ ಕಥೆ ಇದೆ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಬಿಇ ಮುಗಿಸಿ ಕೆಲಸವನ್ನು ಅರಸಿ ಬೆಂಗಳೂರಿಗೆ ಬಂದು ಕೆಲ ಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಲೇ ನಟನಾಗ ಬೇಕೆಂಬ ಅಸೆಯಿಂದ ಸಂಜೆಯ ಹೊತ್ತಿನಲ್ಲಿ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಂಗಭೂಮಿಯ ನಟನೆಯಲ್ಲಿ ನಿರತರಾಗುತ್ತಿದ್ದಂತೆಯೇ ಎರಡು ದೋಣಿಯ ಮೇಲೆ ಕಾಲು ಇಡುವುದು ಸರಿಯಲ್ಲ ಎಂದು ನಿರ್ಧರಿಸಿ,ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಕೊಳ್ಳುತ್ತಾರೆ. ಆಗಾಗಲೇ ಖ್ಯಾತಿ ಪಡೆದಿದ್ದ ಸಂಚಾರಿ ಎಂಬ ಹೆಸರಿನ ನಾಟಕ ತಂಡದ ಅವಿಭಾಜ್ಯ ಅಂಗವಾಗಿ ಸುಮಾರು ಹತ್ತು ವರ್ಷಕ್ಕೂ ಅಧಿಕವಾಗಿ ಕಾಲ ಕಳೆದದ್ದರಿಂದ ಅವರು ಸಂಚಾರಿ ವಿಜಯ್ ಎಂದೇ ಖ್ಯಾತಿಯನ್ನು ಪಡೆಯುತ್ತಾರೆ. ಸಂಚಾರಿ ನಾಟಕ ತಂಡವಲ್ಲದೇ ನಾಡಿನ ಹಲವಾರು ತಂಡಗಳೊಂದಿಗೆ ಲೆಕ್ಕವಿಲ್ಲದಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೇ, ಅದರ ಜೊತೆ ಜೊತೆಯಲ್ಲಿಯೇ ಕನ್ನಡದ ವಿವಿಧ ಛಾನೆಲ್ಲುಗಳ ಧಾರಾವಾಹಿಗಳಲ್ಲದೇ ಅಲ್ಲೊಂದು ಇಲ್ಲೊಂದು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಲ್ಲದೇ, ಒಂದೆರಡು ನಾಟಕಗಳನ್ನು ಸಹ ನಿರ್ದೇಶಿಸಿದ್ದರು.

ಕಲೆ ಎಂಬುದು ವಿಜಯ ಅವರಿಗೆ ರಕ್ತಗತವಾಗಿ ಬಂದಿತ್ತು ಎಂದರು ತಪ್ಪಾಗಲಾರದು. ಜುಲೈ 17, 1983 ರಂದು ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ, ಸಿಂಗಟಗೆರೆ ಹೋಬಳಿಯ, ರಂಗಾಪುರ ಗ್ರಾಮದಲ್ಲಿ ಬಸವರಾಜಯ್ಯ ಮತ್ತು ಗೌರಮ್ಮ ದಂಪತಿಗಳ ಕುಟುಂಬದಲ್ಲಿ ವಿಜಯ್ ಅವರ ಜನನವಾಗುತ್ತದೆ. ತಂದೆ ಬಸವರಾಜಯ್ಯನವರು ಚಿತ್ರ ಕಲಾವಿದರಾಗಿದ್ದಲ್ಲದೇ, ಅನೇಕ ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಎತ್ತಿದ ಕೈ. ತಾಯಿಯವರೂ ಸಹಾ ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದರು. ಹೀಗಾಗಿಯೇ ವಿಜಯ್ ಬಾಲ್ಯದಿಂದಲೇ ರಂಗಭೂಮಿ, ಚಿತ್ರಕಲೆಯ ಜೊತೆಗೆ ಕರ್ನಾಟಕ ಮತ್ತು ಹಿಂದೂಸ್ಥಾನೀ ಸಂಗೀತವನ್ನು ಅಭ್ಯಾಸಿಸುತ್ತಾರೆ. ಅವರ ಅನೇಕ ನಾಟಕಗಳಲ್ಲಿ ತಮ್ಮ ಸಂಗೀತದ ಸುಧೆಯನ್ನು ಹರಿಸಿದ್ದಲ್ಲದೇ ಮುಂದೆ ಅನೇಕ ರಿಯಾಲಿಟಿ ಶೋಗಳಲ್ಲಿಯೂ ಅದನ್ನು ಜನರಿಗೆ ಪರಿಚಯಿಸಿದ್ದಾರೆ.

ಚಿಕ್ಕಂದಿನಿಂದಲೂ ಅಮ್ಮನ ಜೊತೆ ಪೇಟೆಗೆಂದೂ ಹೋದಾಗ ಅಲ್ಲಿ ಓಡಾಡುತ್ತಿದ್ದ ಆಟೋ, ಕಾರುಗಳ ಮೇಲೆಯೇ ವಿಜಯ್ ಕಣ್ಣು. ಅವರ ಪಂಚನಹಳ್ಳಿವರೇ ಆದ ಕಡೂರಿನ ಅಂದಿನ ಶಾಸಕರಾಗಿದ್ದ ಪಿ.ಬಿ.ಓಂಕಾರಮೂರ್ತಿ ಅವರ ಮನೆಯ ಎದುರು ಪ್ರತಿ ನಿತ್ಯವೂ ಐದಾರು ಬಗೆ ಬಗೆಯ ಕಾರುಗಳು ಬರುವುದನ್ನೇ ಬೆರಗುಗಣ್ಣಿನಿಂದ ನೋಡಿ ನಿಲ್ಲುತ್ತಿದ್ದ ವಿಜಯ್, ಅಮ್ಮಾ ನಾವೂ ಸಹಾ ಅಂತಹ ಕಾರಿನಲ್ಲಿ ಓಡಾಡ ಬೇಕು ಎಂದು ಪೀಡಿಸುತ್ತಿದ್ದರಂತೆ, ಅಯ್ಯೋ ಮಗಾ, ಕಾರು ಅಂದ್ರೆ ಸಾಮಾನ್ಯನಾ? ಅದೆಲ್ಲಾ ದೊಡ್ಡವರಿಗೆ ಮಾತ್ರಾ! ಎಂದು ಅವರ ಅಪ್ಪ ಮತ್ತು ಅಮ್ಮ ಸಮಾಧಾನ ಪಡಿಸುತ್ತಿದ್ದರಂತೆ, ಪೋಷಕರ ಜೊತೆ ಚಿಕ್ಕಮಗಳೂರಿಗೆ ಹೋದಾಗ ಆಟೋದ ಬಲಭಾಗದಲ್ಲಿ ಕುಳಿತು ಆಟೋದಿಂದ ಕುತ್ತಿಗೆ ಹೊರಗೆ ಹಾಕಿ ಇಡೀ ಪೇಟೆ ಬೀದಿಯ ಅಂಗಡಿಗಳನ್ನು ನೋಡುವುದೆಂದರೆ ವಿಜಯ್ ಗೆ ಏನೋ ಒಂದು ರೀತಿಯ ಖುಷಿ.

vij3

SSLC ಮುಗಿಸಿ ತಿಪಟೂರಿನಲ್ಲಿ ಪಿಯುಸಿಗೆ ಸೇರಿಕೊಂಡಿದ್ದೇ ತಡಾ ಬಿಚ್ಚಿ ಬಿಟ್ಟ ಕುದುರೆಯಂತಾಗಿ ಗೆಳೆಯರ ಗುಂಪನ್ನು ಕಟ್ಟಿಕೊಂಡು ಸಾಧಾರಣ ಸೈಕಲ್ಲಿನಲ್ಲಿಯೇ, ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರವಾಸ ಹೋಗುವುದು ಅವರಿಗೆ ಮುದ ನೀಡುತ್ತಿತ್ತು. ಅದರಲ್ಲಿಯೂ ಮಳೆಯಲ್ಲಿ ನೆನೆದುಕೊಂಡು ಸೈಕಲ್ ತುಳಿಯುವುದೆಂದರೆ ಬಹಳ ಮಜ ನೀಡುತ್ತಿತ್ತು. ನಂತರ ತಿಪಟೂರಿನ ಕಲ್ಪತರು ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇಗೆ ಸೇರಿಕೊಂಡಾಗ ಸೈಕಲ್ ಬದಲಾಗಿ ಗೆಳೆಯರೊಂದಿಗೆ ಬೈಕ್ನಲ್ಲಿ ಪ್ರವಾಸ ಹೋಗುವುದನ್ನು ಅಭ್ಯಾಸ ಮಾಡಿಕೊಂಡರು. ನಾಲ್ಕೈದು ಗೆಳೆಯರು ಸೇರಿಕೊಂಡು ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ, ವಿಜಯ್ ಅವರ ತಂಡ ಓಡಾಡದ ಪ್ರದೇಶವಿಲ್ಲ ಎಂಬಂತಾಗಿತ್ತು. ಇದೇ ಸಮಯದಲ್ಲಿಯೇ ಗೆಳೆಯರ ನೆರವಿನಿಂದ ಕಾರ್ ಓಡಿಸುವುದನ್ನೂ ಕಲಿತುಕೊಂಡಾಗಿತ್ತು. ಇವೆಲ್ಲದರ ನಡುವೆಯೇ ಉತ್ತಮ ದರ್ಜೆಯಲ್ಲಿಯೇ ಎಂಜಿನಿಯರಿಂಗ್ ಪದವಿ ಮುಗಿಸಿ ಜೀವನ ಅರೆಸುತ್ತಾ ಬೆಂಗಳೂರಿನತ್ತ ಪಯಣ ಸಾಗಿ ಬಂತು. ಬೆಂಗಳೂರಿಗೆ ಬಂದ ಮೇಲಂತೂ ಕಾರು ಖರೀದಿಸಬೇಕು ಎನ್ನುವ ಅವರ ಆಸೆ ಮತ್ತಷ್ಟು ಹೆಚ್ಚಾಯಿತಾದರೂ ಅಂದಿನ ಆರ್ಥಿಕ ಪರಿಸ್ಥಿತಿ ಇಲ್ಲದ ಕಾರಣ, ಕಾಲೇಜು ಪಾಠ, ರಂಗಭೂಮಿ, ಸಿನಿಮಾದಲ್ಲಿ ಅವಕಾಶ ಪಡೆಯತೊಡಗಿದರು. ಇದೇ ಸಮಯದಲ್ಲಿಯೇ ಅವರ ತಮ್ಮ ಕೊಡಿಸಿದ ರಿಡ್ಜ್ ಕಾರು ಅವರ ಜೀವನದ ಮೊತ್ತಮೊದಲ ಕಾರಾಗಿತ್ತು. ಅದೇ ಕಾರಿನಲ್ಲಿಯೇ. ಶಿರಸಿ, ಆಗುಂಬೆ ಮತ್ತು ಚಿಕ್ಕಮಗಳೂರಿಗೆ ಮಳೆಗಾಲದಲ್ಲಿ ಮಳೆಯ ನಡುವಿನ ಪ್ರಯಾಣದ ತಮ್ಮ ಕನಸನ್ನು ನನಸನ್ನಾಗಿ ಮಾಡಿಕೊಂಡಿದ್ದರು. ಅಂತಿಮವಾಗಿ ಮಳೆಯಲ್ಲಿಯೇ ತಮ್ಮ ನೆಚ್ಚಿನ ವಾಹನದಲ್ಲಿ ಸಂಚರಿಸುತ್ತಿದ್ದಾಗಲೇ ಅಂತ್ಯ ಕಾಣಬೇಕಾದ ಪರಿಸ್ಥಿತಿ ಬಂದೊದಗಿದ್ದು ವಿಧಿಯ ವಿಪರ್ಯಾಸವೇ ಸರಿ.

ಇಷ್ಟರ ನಡುವೆ ಸಾವು ಧ್ಯೇಯಕ್ಕಿಲ್ಲ ಸಾಂಬಶಿವ ಪ್ರಹಸನ, ಸ್ಮಶಾನ ಕುರುಕ್ಷೇತ್ರ, ಸಾವಿರದವಳು, ಪ್ಲಾಸ್ಟಿಕ್ ಭೂತ, ಶೂದ್ರ ತಪಸ್ವಿ, ಸತ್ಯಾಗ್ರಹ, ಸಂತೆಯೊಳಗೊಂದು ಮನೆಯ ಮಾಡಿ, ಮಾರ್ಗೊಸ ಮಹಲ್, ಮಹಾಕಾಲ, ಅರಹಂತ, ಕಮಲಮಣಿ ಕಾಮಿಡಿ ಕಲ್ಯಾಣ, ನರಿಗಳಿಗೇಕೆ ಕೋಡಿಲ್ಲ ಮುಂತಾದ ನೂರಾರು ನಾಟಕಗಳಲ್ಲಿ ನಟಿಸಿದ್ದಲ್ಲದೇ, ಪಾಪ ಪಾಂಡು, ಪಾರ್ವತಿ ಪರಮೇಶ್ವರ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ಪಾತ್ರವಹಿಸಿದ್ದರೂ ವಿಜಯ್ ಸಾಮಾನ್ಯ ಜನರಿಗೆ ಇನ್ನೂ ಅಪರಿಚಿತರಾಗಿಯೇ ಉಳಿದಿದ್ದರು.

vij6

ರಮೇಶ್ ಅಭಿನಯದ ರಂಗಪ್ಪ ಹೋಗ್ಬಿಟ್ನಾ ಮುಖಾಂತರ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದ ವಿಜಯ್ ರಾಮರಾಮ ರಘುರಾಮ, ವಿಲನ್, ದಾಸವಾಳ, ಒಗ್ಗರಣೆ ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸುವಾಗಲೇ. ಇವರು ನಟಿಸಿದ್ದ ಹರಿವು ಚಿತ್ರಕ್ಕೆ ರಾಜ್ಯಪ್ರಶಸ್ತಿಯೂ ಬಂದಿತ್ತು. 2014ರ ಸಾಲಿನ 62ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ನಾನು ಅವನಲ್ಲ ಅವಳು ಎಂಬ ಚಿತ್ರದಲ್ಲಿ ತೃತೀಯ ಲಿಂಗಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಕ್ಕಾಗಿ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಪ್ರಕಟವಾದಾಗಲೇ, ಸಮಸ್ತ ಕನ್ನಡಿಗರಿಗೂ ರಾತ್ರೋ ರಾತ್ರಿ ಸಂಚಾರಿ ವಿಜಯ್ ಎಂಬ ಅಧ್ಭುತ ನಟ ಅಕ್ಷರಶಃ ಪರಿಚಯವಾದರು ಎಂದರೂ ತಪ್ಪಾಗಲಾರದು.

vij5

ರಾಷ್ಟ್ರಪ್ರಶಸ್ತಿ ಪಡೆದ ನಂತರ ಕನ್ನಡ ಚಿತ್ರರಂಗದ ಜೊತೆ ಜೊತೆಯಲ್ಲಿಯೇ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳು ಸಾಲು ಸಾಲಾಗಿ ಸಿಕ್ಕರೂ ತಮ್ಮ ಆಯ್ಕೆಯಲ್ಲಿ ಎಚ್ಚರವಹಿಸಿದ ಕಾರಣ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದರೂ ಎಲ್ಲರ ಮನದಲ್ಲಿ ಉಳಿಯುವಂತೆ ಅಭಿನಯಿಸಿದ್ದರು.

vij2

ಲಾಕ್ಡೌನ್ ಸಮಯದಲ್ಲಿ ಅವಶ್ಯಕತೆ ಇದ್ದವರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುವ ಅಭ್ಯಾಸವನ್ನು ರೂಢಿಯಲ್ಲಿ ಇಟ್ಟುಕೊಂಡಿದ್ದರು. ಅವರೇ ಒಂದು ಸಂದರ್ಶನದಲ್ಲಿ ಹೇಳಿದಂತೆ ನಮ್ಮ ಜೀವನ ಎಲ್ಲವೂ ಕ್ಷಣಿಕ. ಇದ್ದಾಗ ಕೈಲಾದಷ್ಟು ಜನರಿಗೆ ಉಪಕಾರ ಮಾಡುವ ಮೂಲಕ ಅವರ ಮನಸ್ಸಿನಲ್ಲಿ ಶಾಶ್ವತವಾದ ನೆಲೆ ಮೂಡಿಸುವಂತಾಗಬೇಕು ಎಂದು ಹೇಳಿದ್ದು‌ಇನ್ನೂ ಕಿವಿಗಳಲ್ಲಿ ಗುಂಯ್ ಗುಟ್ಟುತ್ತಿದೆ.

ಮೊನ್ನೆ ಶನಿವಾರ ಅಪಘಾತವಾದ ಸಮಯದಲ್ಲಿಯೂ ಯಾವುದೋ ಕೋವಿಡ್ ಸೋಂಕಿತರಿಗೆ ಆಹಾರದ ಕಿಟ್ ವಿತರಿಸಿ, ಹಿಂದಿರುಗುವಾಗ ಮಳೆ ಜೋರಾದ ಕಾರಣ ಅವರ ಸ್ನೇಹಿತ ಗಾಡಿಯ ವೇಗವನ್ನು ಹೆಚ್ಚಿಸಿದಾಗ ಗಾಡಿ ಮಳೆಯ ನೀರಿನಿಂದಾಗಿ ಜಾರಿ ವಿಜಯ್ ಗಾಡಿಯಿಂದ ಹಾರಿ ಬಿದ್ದು ಅಲ್ಲಿನ ದೀಪದ ಕಂಬಕ್ಕೆ ತಲೆತಾಗಿ ಜೋರಾಗಿ ತಲೆಗೆ ಮತ್ತು ತೊಡೆಗೆ ಪೆಟ್ಟಾಗಿದೆ. ಅಕಸ್ಮಾತ್ ತಲೆಗೆ ಹೆಲ್ಮೆಟ್ ಹಾಕಿದ್ದಲ್ಲಿ ಈಪಾಟಿ ಅಪಘಾತ ಆಗುತ್ತಿರಲಿಲ್ಲ ಎಂಬುದೇ ಅವರನ್ನು ಚಿಕಿತ್ಸೆ ಮಾಡಿದ ಡಾಕ್ಟರ್‌ ಅರುಣ್ ನಾಯಕ್ ಹೇಳಿದ್ದು ಎಲ್ಲಾ ವಾಹನ ಚಾಲಕರಿಗೂ ಎಚ್ಚರಿಕೆಯ ಗಂಟೆಯಾಗಿದೆ.

ಬದುಕಿರುವಾಗ ಕೈಲಾದ ಮಟ್ಟಿಗೆ ಸಹಾಯ ಮಾಡುವುದನ್ನು ರೂಢಿ ಮಾಡಿ ಕೊಂಡಿದ್ದ ವಿಜಯ್ ಈಗ ಮೆದುಳು ನಿಶ್ಕ್ರಿಯೆಯಾಗಿ ಮತ್ತೆ ಚೇತರಿಕೊಳ್ಳುವುದಿಲ್ಲ ಎಂಬ ವಿಷಯ ಅವರ ಮನೆಯವರಿಗೆ ತಿಳಿದ ತಕ್ಷಣವೇ, ಅವರ ಕುಟುಂಬ ಬದುಕಿದ್ದೂ ಸತ್ತವರಂತೆ ಬದುಕುವ ಬದಲು, ಸತ್ತ ಮೇಲೆಯೂ ಮೂರ್ನಾಲ್ಕು ಜನರ ಬಾಳಿನಲ್ಲಿ ಬದುಕುವ ಆಸೆಯನ್ನು ಮೂಡಿಸುವ ಸಲುವಾಗಿ ಅವರ ಅಂಗಾಂಗ ದಾನಕ್ಕೆ ಮುಂದಾಗಿರುವುದು ನಿಜಕ್ಕೂ ಅನ್ಯನ್ಯ ಮತ್ತು ಅನುಕರಣೀಯವೇ ಸರಿ. ಅವರ ಎರಡು ಕಣ್ಣುಗಳು, ಎರಡು ಕಿಡ್ನಿಗಳನ್ನು, ಯಕೃತ್ ತೆಗೆದು ಅಗತ್ಯ ಇರುವವರಿಗೆ ಕಸಿ ಮಾಡುವ ಮೂಲಕ ಬದುಕಿನ ಭರವಸೆಯನ್ನು ಕಳೆದುಕೊಂಡು ದುಃಖದ ಕೋಡಿಯಲ್ಲಿರುವವರ ಜೀವನದಲ್ಲಿ ಮತ್ತೆ ನಗುವನ್ನು ತುಂಬುವಂತಹ ಶ್ಲಾಘನೀಯ ಕೆಲಸಕ್ಕೆ ಮುಂದಾಗಿರುವ ವಿಜಯ್ ಅವರ ಕುಟುಂಬವನ್ನು ಎಷ್ಟು ಹೊಗಳಿದರೂ ಸಾಲದು.

ಸುರದ್ರೂಪಿ, ಸಮಾಜಮುಖೀ ನಟ ವಿಜಯ್ ಅವರ ಅಕಾಲಿಕ ಮರಣ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ನಷ್ಟವಾದರೂ ಪರೋಪಕಾರಾಯ ಇದಂ ಶರೀರಂ ಎನ್ನುವಂತೆ ಬದುಕಿದ್ದಾಗಲೂ ಮತ್ತು ಸಾಯುವಾಗಲೂ ಮತ್ತೊಬ್ಬರಿಗೆ ಸಹಾಯ ಮಾಡಿದ ವರ ಕೀರ್ತಿ ಕನ್ನಡ ಚಿತ್ರರಂಗದಲ್ಲಿ ಆಚಂದ್ರಾರ್ಕವಾಗಿ ಉಳಿಯಲಿದೆ ಎನ್ನುವುದಂತೂ ಸತ್ಯ.

ಕೇವಲ 38. ವರ್ಷಗಳ ಸಾಯಬಾರದ ವಯಸ್ಸಿನಲ್ಲಿ ಅಚಾನಕ್ಕಾಗಿ, ಅಕಾಲಿಕವಾಗಿ ದುರ್ಮರಣಕ್ಕೆ ತುತ್ತಾಗಿ ಜೀವನದ ಪಯಣದ ಸಂಚಾರವನ್ನು ತುರ್ತಾಗಿ ಮೊಟುಕುಗೊಳಿಸಿಕೊಂಡ ಸಂಚಾರಿ ವಿಜಯ್ ಅವರ ಆತ್ಮಕ್ಕೆ ಭಗವಂತ ಸದ್ಗತಿ ಕೊಡಲಿ ಅವರು ಮಾಡುತ್ತಿದ್ದ ಸಮಾಜಮುಖೀ ಕಾರ್ಯಗಳು ಎಲ್ಲರಿಗೂ ಪ್ರೇರಣಾದಾಯಕವಾಗಲಿ. ಅವರು ನಿರ್ಲಕ್ಷದಿಂದ ಹೆಲ್ಮೆಟ್ ಧರಿಸದೇ ಅಪಘಾತಕ್ಕೀಡಾದದ್ದು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಲಿ.

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಸಂಚಾರಿ ವಿಜಯ್

  1. ಸಂಚಾರಿ ವಿಜಯ್ ಸಾಧನೆ ಮೆಚ್ಚುವಂಥದ್ದೆ. ಅಷ್ಟು ಪ್ರತಿಭಾವಂತ ಸ್ಪುರದ್ರೂಪಿ ನಟ ಈ ರೀತಿ ಅಂತ್ಯಗೊಂಡಿದ್ದು ದುರ್ದೈವ. ಇತ್ತೀಚೆಗಂತೂ ಹೆಲ್ಮೆಟ್ ಹಾಕೊಳ್ಳಿ, ಇಲ್ಲದಿದ್ದರೆ ಜೀವಕ್ಕೇ ಅಪಾಯ ಎಂದು
    ಪೊಲೀಸರು ಹಲವಾರು ಬಾರಿ ಹೇಳುತ್ತಿದ್ದರೂ ಅನೇಕ ಯುವಕರು ಹಾಗೇ ಗಾಡಿ ಓಡಿಸುತ್ತಿದ್ದರು. ಇವರು ಹೆಲ್ಮೆಟ್ ಹಾಕಿಕೊಂಡಿದ್ದರೆ ಸಣ್ಣಪುಟ್ಟ ಗಾಯಗಳಾಗಿ ಜೀವ ಉಳಿಯುತ್ತಿತ್ತು. ಎಲ್ಲರಿಗೂ ಇದೊದು ಪಾಠ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s