ಅದೇ ಸಾರು ಹುಳೀ ಪಲ್ಯಗಳನ್ನು ತಿಂದು ಜಡ್ಡು ಹೋಗಿರುವ ನಾಲಿಗೆಗೆ ಸ್ವಲ್ಪ ಹುಳೀ ಮತ್ತು ಖಾರದ ಜೊತೆಗೆ ಒಗರು ಸೇರಿರುವ ಹುಳಿ ಮಾವಿನ ಕಾಯಿಯ ಜೊತೆಗೆ ವರ್ಷದ ಎಲ್ಲಾ ಕಾಲದದಲ್ಲಿಯೂ ಎಲ್ಲೆಡೆಯಲ್ಲಿಯೂ ಅತೀ ಸುಲಭದ ದರದಲ್ಲಿ ಸಿಗುವ, ಬಹಳ ಔಷಧೀಯ ಗುಣಗಳಿರುವ ಮೆಂತ್ಯದ ಸೊಪ್ಪು ಸೇರಿಸಿ ಅತ್ಯಂತ ರುಚಿಕರವಾದ ಮಾವಿನಕಾಯಿ ಮೆಂತ್ಯ ಸೊಪ್ಪಿನ ತೊವ್ವೆ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಮಾವಿನಕಾಯಿ ಮೆಂತ್ಯ ಸೊಪ್ಪಿನ ತೊವ್ವೆ ತಯಾರಿಸಲು ಬೇಕಾಗುವ ಪದಾರ್ಥಗಳು
- ಬೇಯಿಸಿದ ತೊಗರಿ ಬೇಳೆ – 1 ಬಟ್ಟಲು
- ತುರಿದ/ಹೆಚ್ಚಿದ ಮಾವಿನಕಾಯಿ – 1 ಬಟ್ಟಲು
- ಮೆಂತ್ಯ ಸೊಪ್ಪು – 1 ಬಟ್ಟಲು
- ಮೆಣಸಿನ ಪುಡಿ – 1 ಚಮಚ
- ಸಾಸುವೆ – 1/2 ಚಮಚ
- ಜೀರಿಗೆ – 1/2 ಚಮಚ
- ಮೆಂತ್ಯ – 1/4 ಚಮಚ
- ಚಿಟುಕಿ ಅರಿಶಿನ
- ಚಿಟುಕಿ ಇಂಗು
- ರುಚಿಗೆ ತಕ್ಕಷ್ಟು ಉಪ್ಪು
- ಹಸಿರು ಮೆಣಸಿನಕಾಯಿ 5-6
- ಕರಿ ಬೇವಿನ ಸೊಪ್ಪು – 8-10 ಎಲೆಗಳು
- ಸ್ವಲ್ಪ ಕೊತ್ತಂಬರೀ ಸೊಪ್ಪು
ಮಾವಿನಕಾಯಿ ಮೆಂತ್ಯ ಸೊಪ್ಪಿನ ತೊವ್ವೆ ಮಾಡುವ ವಿಧಾನ
- ಒಂದು ಕುಕ್ಕರಿನಲ್ಲಿ ತೊಗರೀಬೇಳೇ ಹಾಕಿ ಸುಮಾರು ಮೂರ್ನಾಲ್ಕು ವಿಸಿಲ್ ಬರುವವರೆಗೂ ಬೇಯಿಸಿಕೊಳ್ಳಿ.
- ಒಂದು ಗಟ್ಟಿ ತಳದ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ, ಸಾಸಿವೆ ಸಿಡಿಸಿಕೊಂಡು ಅದಕ್ಕೆ ಜೀರಿಗೆ, ಮೆಂತ್ಯ ಕರಿಬೇವು ಹಸಿರು ಮೆಣಸಿನಕಾಯಿಗಳ ಜೊತೆಗೆ ಚಿಟುಕಿ ಇಂಗು ಹಾಕಿ ಚೆನ್ನಾಗಿ ಹಸೀ ಹೋಗುವವರೆಗೂ ಬಾಡಿಸಿಕೊಳ್ಳಿ
- ಇದಕ್ಕೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಂಡಿರುವ ಇಲ್ಲವೇ ತುರಿದುಕೊಂಡಿರುವ ಮಾವಿನ ಕಾಯಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ
- ಈ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಮೆಂತ್ಯಾ ಸೊಪ್ಪುನ್ನು ಸೇರಿಸಿ ಹಸೀ ಹೋಗುವವರೆಗೂ ಬಾಡಿಸಿಕೊಳ್ಳಿ.
- ಚೆನ್ನಾಗಿ ಬಾಡಿದ ನಂತರ ಅದಕ್ಕೆ ಉಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ ಒಂದು ಕುದಿ ಬರುತ್ತಿದ್ದಂತೆಯೇ, ಬೇಯಿಸಿಟ್ಟುಕೊಂಡ ತೊಗರೀಬೇಳೆಯನ್ನು ಬೆರೆಸಿ 5 ನಿಮಿಷಗಳಷ್ಟು ಕುದಿಸಿ,
- ಕತ್ತರಿಸಿದ ಕೊತ್ತಂಬರಿ ಸೊಪ್ಪು ಬೆರೆಸಿದಲ್ಲಿ, ಬಿಸಿ ಬಿಸಿಯಾದ ಮಾವಿನಕಾಯಿ, ಮೆಂತ್ಯ ಸೊಪ್ಪಿನ ತೊವ್ವೆ ಸವಿಯಲು ಸಿದ್ಧ
ಈ ತೂವ್ವೆಯನ್ನು ದೋಸೆ, ಚಪಾತಿ ಪರೋಟದೊಂದಿಗೆ ನೆಂಚಿಕೊಂಡು ತಿನ್ನಬಹುದಾಗಿದೆ. , ಹಾಗೆಯೇ ಬಿಸಿ ಬಿಸಿ ಅನ್ನದ ಜೊತೆಗೆ ಒಂದೆರಡು ಮಿಳ್ಳೆ ತುಪ್ಪಾ ಮತ್ತು ಈ ತೊವ್ವೆಯನ್ನು ಸೇರಿಸಿಕೊಂಡು ಕಲಸಿ ತಿನ್ನುತ್ತಿದ್ದರೆ, ಸ್ವರ್ಗಕ್ಕೆ ಮೂರೇ ಗೇಣು.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ನಿಮ್ಮವನೇ ಉಮಾಸುತ
ಮನದಾಳದ ಮಾತು : ಮಾವಿನಕಾಯಿ ಮತ್ತು ಮೆಂತ್ಯ ಸೊಪ್ಪಿನಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧಿಯಾಗಿ ಬಳಸಬಹುದಾಗಿದೆ. ಮೆಂತ್ಯ ಸೊಪ್ಪಿನ ನಿರಂತರ ಸೇವನೆಯಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಇನ್ನು ಮಧುಮೇಹಿಗಳಿಗಂತು ಮೆಂತ್ಯಾ ಸೊಪ್ಪು ರಾಮಬಾಣವಾಗಿದೆ. ಮೆಂತ್ಯೆಯಲ್ಲಿ ಇರುವ ನಾರಿನಾಂಶವು ಸಾಧಾರಣ ಜನರಲ್ಲಿ ಕಾರ್ಬ್ಸ್ ಸೂಕ್ಷ್ಮತೆಯನ್ನು ಸುಧಾರಣೆ ಮಾಡುವುದಲ್ಲದೇ, ಇನ್ಸುಲಿನ್ ಚಟುವಟಿಕೆ ಸುಧಾರಣೆ ಮಾಡುವುದು. ಹಾಲುಣಿಸುವ ತಾಯಂದಿರಿಗೆ ಹಾಲನ್ನು ವೃದ್ಧಿಸಲೂ ಸಹಾ ಮೆಂತ್ಯ ಸೊಪ್ಪು ಬಹಳ ಸಹಕಾರಿಯಾಗಿದೆ.
ಈ ಪಾಕಶಾಸ್ತ್ರವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳೀಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು