ಕಳೆದ ಒಂದು ವರ್ಷದಿಂದಲೂ ಕೊರೋನಾ ಮಾಹಾಮಾರಿಯಿಂದಾಗಿ ಇಡೀ ಪ್ರಪಂಚವೇ online ಮೂಲಕ ನಡೆದುಕೊಂಡು ಹೋಗುತ್ತಿದೆ. ನಮ್ಮ ದೇಶದ ವಿದ್ಯಾರ್ಥಿಗಳೂ ಇದಕ್ಕೆ ಹೊರತಾಗಿಲ್ಲ. ಹಳ್ಳಿಗಾಡುಗಳಲ್ಲಂತೂ ಸ್ವಲ್ಪ ಜೋರಾದ ಗಾಳಿ ಇಲ್ಲವೇ ಮಳೆ ಬಂದಿತೆಂದರೂ ಸಾಕು, ವಿದ್ಯುತ್ ಕಡಿತವಾಗಿ ನೆಟ್ವರ್ಕ್ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಇಲ್ಲೊಂದು ಗುಡ್ಡಗಾಡಿನ ಹಳ್ಳಿಯ ಹುಡುಗಿ ತನ್ನ ತರಗತಿಗಳು ಆನ್‌ಲೈನ್ ನಲ್ಲಿ ಆರಂಭವಾಗಿದೆ. ಜೋರಾದ ಮಳೆಯಿಂದಾಗಿ ಮನೆಯಲ್ಲಿ ನೆಟ್ವರ್ಕ್ ಇಲ್ಲ. ಅರೇ.. ನೆಟ್ವರ್ಕ್ ಇಲ್ಲಾ ಎಂದು ಗೊಣಗಾಡದೇ ಕೂಡಲೇ, ಅಪ್ಪಾ ಮತ್ತು ತಂಗಿಯ ಜೊತೆ ಮನೆಯ ಸಮೀಪದ ಎತ್ತರದ ಗುಡ್ಡವನ್ನೇರಿದ್ದಾಳೆ. ತಂಗಿ ಕೊಡೆ ಹಿಡಿದ್ದರೆ ಅದಕ್ಕೆ ಅಪ್ಪಾ ಆಧಾರವಾಗಿ ನಿಂತಿದ್ದಾರೆ. ಆ ಹುಡುಗಿ ತನ್ನ ಪಾಡಿಗೆ ತಾನು ಮೊಬೈಲ್ ನಲ್ಲಿ online ಪಾಠ ಕೇಳುತ್ತಿದ್ದಾಳೆ.
ಇದಕ್ಕೇ ಹೇಳೋದು ನೆಟ್ವರ್ಕ್ ಸಮಸ್ಯೆ, ವಿದ್ಯುತ್ ಸಮಸ್ಯೆ, ಎಂದು ಹತ್ತಾರು ಜನರನ್ನು ಸೇರಿಸಿ ಭಾರಿ ಪ್ರತಿಭಟನೆ ನಡೆಸಿ ಸರ್ಕಾರ ಸರೀ ಇಲ್ಲಾ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ರಾಜೀನಾಮೆ ನೀಡಬೇಕು ಎನ್ನುವುದರಿಂದ ಸಮಸ್ಯೆಗಳು ಪರಿಹಾರವಾಗದು. ಇಂತಹ ಪ್ರತಿಭಟನೆಗಳಿಂದಾಗಿ ಸಮಯ ಮತ್ತು ಪರಿಶ್ರಮ ಎರಡೂ ನಷ್ಟ. ಮಳೆಗಾಲದಲ್ಲಿ ಎಲ್ಲಾ ಪಕ್ಷಿಗಳು ಮಳೆಯಿಂದ ರಕ್ಷಿಸಿಕೊಳ್ಳಲು ಮರಗಿಡಗಳ ಆಶ್ರಯ ಪಡೆದರೆ, ಹದ್ದು ಮಾತ್ರಾ ಮಳೆ ಸುರಿಸುವ ಮೋಡಗಳ ಮೇಲೆ ಹಾರುತ್ತಾ ಮಳೆಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ, ಮಳೆಗಾಲದಲ್ಲಿ ಇಂತಹ ಸಮಸ್ಯೆಗಳೆಲ್ಲವೂ ತಾತ್ಕಾಲಿಕ. ಹಾಗಾಗಿ ಇಂತಹ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ನಮ್ಮಲ್ಲಿ ಛಲ ಮೂಡಿ, ನಾವೇ ಒಂದು ಹೆಜ್ಜೆ ಮುಂದಾಲೋಚನೆ ಮಾಡಿದಲ್ಲಿ ಸಮಸ್ಯೆಯೂ ಬಗೆಹರಿಯುತ್ತದೆ ಮನಸ್ಸಿಗೂ ನೆಮ್ಮದಿ ದೊರೆಯುತ್ತದೆ. ನೆಮ್ಮದಿ ಇದ್ದಲ್ಲಿ ಮಾತ್ರವೇ, ತಾಳ್ಮೆ. ತಾಳ್ಮೆ ಇದ್ದಲ್ಲಿ ಮಾತ್ರವೇ ಸಮಸ್ಯೆಗೆ ಪರಿಹಾರ.
ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರ ನೋಡಿದಾಕ್ಷಣ ನನ್ನ ಮನದಲ್ಲಿ ಮೂಡಿದ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಬಹುಶಃ ನಮ್ಮಲನೇಕರಿಗೆ ಇನ್ನೂ ವಿವಿಧ ರೀತಿಯ ಭಾವನೆಗಳು ಮೂಡಬಹುದು. ಭಾವನೆಗಳು ಯಾವುದೇ ಇರಲಿ. ಸಮಸ್ಯೆ ಪರಿಹಾರವಾಗಬೇಕಷ್ಟೇ. ಸಮಸ್ಯೆ ಒಂದೇ ಇದ್ದರೂ ಅದಕ್ಕೆ ನೂರಾರು ಪರಿಹಾರಗಳು ಇರುತ್ತವೆ. ಹಾಗಾಗಿ ಸಮಸ್ಯೆಗಳನ್ನು ಪರಿಹರಿಸುವತ್ತ ಹರಿಸಬೇಕು ನಮ್ಮ ಚಿತ್ತ.
ಏನಂತೀರೀ?
ನಿಮ್ಮವನೇ ಉಮಾಸುತ