ನೀರು ಓಕೆ. ಕೃತಕ‌ ಪಾನೀಯ ಏಕೆ?

ಪೋರ್ಚುಗಲ್ ನಲ್ಲಿ ನಡೆಯುತ್ತಿರುವ ಯೂರೋ 2020 ಟೂರ್ನಿಯಲ್ಲಿ ಪೋರ್ಚುಗಲ್ ತನ್ನ ಮೊದಲ ಪಂದ್ಯವನ್ನು ಆಡುತ್ತಲಿತ್ತು. ಸಹಜವಾಗಿ ಪಂದ್ಯ ಆಡುವ ಮುನ್ನ ತಂಡದ ಮ್ಯಾನೇಜರ್ ಮತ್ತು ತಂಡದ ನಾಯಕರ ಪ್ರೆಸ್ ಕಾನ್ಫರೆನ್ಸ್ ಮಾಡುವುದು ಸಹಜ ಪ್ರಕ್ರಿಯೆಯಾಗಿದೆ. ಈ ಸಂವಾದ ಪ್ರಪಂಚಾದ್ಯಂತ ಪ್ರಸಾರವಾಗುವ ಕಾರಣ, ಟೂರ್ನಿಯ ಪ್ರಾಯೋಜಕರಾದ ಕೋಕೋಕೋಲ ಇದರ ಪ್ರಯೋಜನವನ್ನು ಪಡೆಯುವ ಸಲುವಾಗಿ ಸಂವಾದ ನಡೆಸುವವರ ಟೇಬಲ್ ಮುಂದೆ ಸಣ್ಣದಾದ ಎರಡು ಕೋಕ್ ಬಾಟಲ್ ಗಳನ್ನು ಇಟ್ಟಿದ್ದರು. ಮೊದಲು ಈ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ ಪೋರ್ಚುಗಲ್ ತಂಡದ ಮ್ಯಾನೇಜರ್ ಫರ್ನಾಂಡೋ ಸ್ಯಾಂಟೋಸ್ ಯಾವುದೇ ಮುಜುಗರವಿಲ್ಲದೇ ಸಂವಾದ ಮುಗಿಸಿದ್ದರು.

ronoldo1

ಹಂಗರಿ ವಿರುದ್ಧದ ಪಂದ್ಯದ ಮುನ್ನ ಬುದಾಪೆಸ್ಟ್ನಲ್ಲಿ ನಡೆಯುತ್ತಿದ್ದ ಪತ್ರಿಕಾಗೋಷ್ಠಿಗೆ ಆಗಮಿಸಿದ ಪೋರ್ಚುಗಲ್ ತಂಡದ ನಾಯಕ ಕ್ರಿಶ್ಚಿಯಾನೊ ರೊನಾಲ್ಡೊ, ಕುರ್ಚಿಯಲ್ಲಿ ಕೂರಲು ತನ್ನ ಟೇಬಲ್ ಮುಂದೆ ಬಂದಾಗ ಅವರ ಮುಂದಿದ್ದ ಕೋಲಾ ಬಾಟಲುಗಳನ್ನು ಗಮನಿಸಿದ ಕೂಡಲೇ ಸುಮ್ಮನೇ ಎರಡೂ ಬಾಟಲುಗಳನ್ನು ದೂರ ಸರಿಸಿ ಅಲ್ಲಿಯೇ ಇದ್ದ ನೀರಿನ ಬಾಟಲಿ ಎತ್ತಿ ತೋರಿಸುತ್ತಾ ಅಕುವಾ (ನೀರು) ಎಂದು ಪೋರ್ಚುಗೀಸ್ ಭಾಷೆಯಲ್ಲಿ ಹೇಳಿದರಲ್ಲದೇ, ತಮ್ಮ ಸಂವಾದ ಮುಂದುವರೆಸಿದರು. ಈ ಎಲ್ಲಾ ಪ್ರಕ್ರಿಯೆಗಳು ಕೇವಲ 20-30 ಸೆಕಂಡುಗಳಲ್ಲಿ ಸಹಜ ಎನ್ನುವಂತೆ ನಡೆದು ಹೋಗಿತ್ತು.

ರೋನಾಲ್ಡೊ, ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದನ್ನು ಬಿಟ್ಟು, ಶುದ್ಧವಾದ ನೀರು ಕುಡಿಯಿರಿ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ ಎಂದೇ ಈ ಘಟನೆಯನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ, ಎನ್ನುವ ಹಾಗೆ ಇದರ ಪರಿಣಾಮ ನಷ್ಟವನ್ನು ಅನುಭವಿಸಿದ್ದು ಮಾತ್ರ ಕೋಕಾ ಕೋಲಾ ಕಂಪನಿ ಎನ್ನುವುದು ಮಾತ್ರ ರೋಚಕದ ಸಂಗತಿಯಾಗಿದೆ.

ಕೋಕಾ-ಕೋಲಾ ಬಹುರಾಷ್ಟ್ರೀಯ ಕಂಪನಿಯು ವಿಶ್ವದ 200 ಕ್ಕೂ ಹೆಚ್ಚು ದೇಶಗಳಲ್ಲಿ ದಿನಕ್ಕೆ 1.8 ಬಿಲಿಯನ್ ಪಾನೀಯಗಳನ್ನು ಮಾರಾಟ ಮಾಡುತ್ತದೆ. ಸೂಕ್ಷ್ಮವಾಗಿ ಗಮನಿಸಿದಲ್ಲಿ, ಪ್ರತಿ ಸೆಕೆಂಡಿಗೆ 12,600 ಜನರು ಕೋಕ್ ಉತ್ಪನ್ನವನ್ನು ಸೇವಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಈ ಯೂರೋ ಕಪ್ಪಿನ ಪ್ರಾಯೋಜಕ ಕಂಪನಿಗಳಲ್ಲಿ ಒಂದಾಗಿರುವ ಕೋಕಾ ಕೋಲಾದ ಷೇರುಗಳು, ರೋನಾಲ್ಡೋ ಅವರ ಈ ಪ್ರಹಸನದಿಂದಾಗಿ ಈಗಾಗಲೇ, ಭಾರಿ ಕುಸಿತಕ್ಕೆ ಒಳಗಾಗಿವೆ. ಈ ಪತ್ರಿಕಾಗೋಷ್ಠಿಯ ಬಳಿಕ ಕೋಕಾ ಕೋಲಾ ಕಂಪನಿಯ ಷೇರು ಮೌಲ್ಯ 56.10 ಡಾಲರ್ನಿಂದ 55.22 ಡಾಲರ್ಗೆ ಇಳಿಕೆಯಾಗಿತ್ತು. ಜತೆಗೆ ಕಂಪನಿಯ ಮಾರುಕಟ್ಟೆ ಮೌಲ್ಯ 4 ಬಿಲಿಯನ್ ಡಾಲರ್ (ಸುಮಾರು 30 ಸಾವಿರ ಕೋಟಿ ರೂ.) ಕುಸಿತ ಕಂಡಿರುವುದು ಕಂಪನಿಗೆ ಭಾರೀ ಹೊಡೆತ ಕೊಡುವಷ್ಟು ದುಷ್ಪರಿಣಾಮವನ್ನು ಬೀರಿದೆ ಎನ್ನುವುದು ಗಮನಾರ್ಹವಾಗಿದೆ.

ಯೂರೋ 2020 ಟೂರ್ನಿಗೆ ಕೋಕಾ ಕೋಲಾ ಕಂಪನಿ ಕೂಡಾ ಸಹಾ ಪ್ರಾಯೋಕತ್ವ ವಹಿಸಿಕೊಂಡಿರುವ ಕಾರಣ, 5 ಬಾರಿ ಬಾಲನ್ ಡಿ ಓರ್ ಪ್ರಶಸ್ತಿ ವಿಜೇತ ರೊನಾಲ್ಡೋ ಅವರ ಈ ನಡೆಯ ವಿರುದ್ಧ ಕಠಿಣವಾದ ಕ್ರಮವನ್ನು ಜರುಗಿಸಲಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರೂ, ಇಡೀ ಜಗತ್ತೇ ರೊನಾಲ್ಡೋ ಅವರ ಈ ನಡೆಯನ್ನು ತುಂಬು ಹೃದಯದಿಂದ ಸ್ವಾಗತಿಸಿರುವುದು ಅಭಿನಂದನಾರ್ಹವಾಗಿದೆ.

ಇಷ್ಟೆಲ್ಲಾ ಮುಜುಗರದ ಪ್ರಸಂಗದ ನಂತರವೂ ಯೂರೋ ಟೂರ್ನಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೋ ಬಾರಿಸಿದ 2 ಮಿಂಚಿನ ಗೋಲುಗಳ ನೆರವಿನಿಂದ ಹಂಗೇರಿ ವಿರುದ್ದ ಪೋರ್ಚುಗಲ್ 3-0 ಅಂತರದಲ್ಲಿ ಗೆದ್ದು ಯೂರೋ ಟೂರ್ನಿಯಲ್ಲಿ ಶುಭಾರಂಭ ಮಾಡಿರುವುದೂ ಸಂತಸದ ವಿಷಯವಾಗಿದೆ.

ರೊನಾಲ್ಡೋ ಅವರ ಈ ರೀತಿಯ ಅನಿರೀಕ್ಷಿತ ನಡೆಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆಯಲ್ಲದೇ ಅನೇಕರು ಟ್ವಿಟರ್ ಮುಖಾಂತರ ಅಭಿನಂದಿಸುತ್ತಿದ್ದಾರೆ. ಹಿರಿಯ ಪತ್ರಕರ್ತರಾದ ರಾಜೇಶ್ ಕಾಲ್ರಾ ಅವರೂ ಈ ಕುರಿತಂತೆ ಟ್ವೀಟ್ ಮಾಡಿದ್ದು, ರೊನಾಲ್ಡೋ ಅವರು ಈಗ ಮಾಡಿರುವುದನ್ನು ಬಹಳ ಹಿಂದೆಯೇ ಭಾರತದ ಬ್ಯಾಡ್ಮಿಂಟನ್ ದಿಗ್ಗಜರಾಗಿದ್ದ ಮತ್ತು ಪ್ರಸ್ತುತ ಖ್ಯಾತ ತರಭೇತುದಾರರಾಗಿರುವ ಪುಲ್ಲೇಲಾ ಗೋಪಿಚಂದ್, ಆರ್ಥಿಕವಾಗಿ ಅಷ್ಟೇನೂ ಸಬಲರಾಗಿಲ್ಲದಿದ್ದರೂ, ತಮ್ಮ ವೃತ್ತಿ ಜೀವನದ ಉನ್ನತ ಸ್ಥಾನದಲ್ಲಿದ್ದಾಗಲೇ ಪೆಪ್ಸಿ ಕಂಪನಿಯವರ ಭಾರೀ ಮೊತ್ತದ ಪ್ರಾಯೋಜತ್ವವನ್ನು ನಿರಾಕರಿಸಿದ್ದರ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಅದೇ ರೀತಿ ತಮ್ಮ ಆರಂಭದ ದಿನಗಳಲ್ಲಿ ಪೆಪ್ಸಿ ಪರವಾಗಿದ್ದ ವಿರಾಟ್ ಕೋಹ್ಲಿ ಸಹಾ 2017 ರ ನಂತರ ಈ ರೀತಿಯ ಎಲ್ಲಾ ಕೃತಕ ತಂಪು ಪಾನೀಯಗಳ ಪ್ರಾಯೋಜಕತ್ವವನ್ನು ನಿರಾಕರಿಸಿರುವುದು ಅನನ್ಯ ಮತ್ತು ಇತರೇ ಸೆಲೆಬ್ರಿಟಿಗಳಿಗೆ ಅನುಕರಣಿಯವಾಗಿದೆ ಎಂದರೂ ತಪ್ಪಾಗಲಾರದು.

ಇತ್ತೀಚಿನ ಯುವಕರುಗಳು ಸರಿಯಾದ ಆಹಾರ ಸೇವಿಸದೇ ಜಂಕ್ ಪುಡ್ ಗಳತ್ತಾ ವಾಲಿರುವುದಲ್ಲದೇ ನೀರಿನ ಬದಲಾಗಿ ಇಂತಹ ಕೃತಕ ಪಾನೀಯಗಳನ್ನು ಸೇವಿಸುವುದನ್ನೇ ಹವ್ಯಾಸ ಮಾಡಿಕೊಂಡಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. 2014ರ ಅಂಕಿ ಅಂಶದ ಪ್ರಕಾರ, ಒಬ್ಬ ಫ್ರೆಂಚ್ ಮನುಷ್ಯ ವರ್ಷಕ್ಕೆ ಸರಾಸರಿ 20.7 ಲೀಟರ್ ಕೋಕಾ-ಕೋಲಾವನ್ನು ಕುಡಿಯುತ್ತಿದ್ದರೆ, ಒಬ್ಬ ಅಮೇರಿಕನ್ ಸರಾಸರಿ 99.5 ಲೀಟರ್ ಮತ್ತು ಮೆಕ್ಸಿಕನ್ 105.9 ಲೀಟರ್ ಕುಡಿಯುತ್ತಾರೆ ಎನ್ನುವುದು ಆತಂಕದ ವಿಷಯವಾಗಿದೆ. ನಮ್ಮ ದೇಶದ ಹಳ್ಳಿಯಲ್ಲಿ ಕುಡಿಯಲು ಶುದ್ದವಾದ ನೀರು ಸಿಗದಿದ್ದರೂ, ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಇಂತಹ ತಂಪು ಪಾನೀಯಗಳು ಸುಲಭವಾಗಿ ಲಭ್ಯವಿರುವುದು ಸ್ವಲ್ಪ ಆತಂಕಕ್ಕೆ ಎಡೆ ಮಾಡಿಕೊಡುತ್ತದೆ.

ಕೋಕಾ-ಕೋಲಾದಲ್ಲಿ ಬಳಸುವ ಪದಾರ್ಥಗಳೆಂದರೆ, ಕಾರ್ಬೊನೇಟೆಡ್ ನೀರು, ಸಕ್ಕರೆ, ಕ್ಯಾರಮೆಲ್ ಫಾಸ್ಪರಿಕ್ ಆಮ್ಲ ಕೆಫೀನ್ ಜೊತೆಗೆ ಕೆಲವು ಸಸ್ಯದ ಸಾರಗಳನ್ನು ನೈಸರ್ಗಿಕ ರುಚಿಗಳಾಗಿ ಬಳಸುತ್ತಾರೆ. ಒಂದು ಕ್ಯಾನ್ ಕೋಕಾ-ಕೋಲಾ ಸುಮಾರು 33 ಕ್ಯಾಲೋರಿಗಳಷ್ಟಿದ್ದರೆ, ಅದರಲ್ಲಿ 35 ಗ್ರಾಂ ಸಕ್ಕರೆಯಿರುತ್ತದೆ. ಅಂದರೆ ಇದು 7 ಸಕ್ಕರೆ ಉಂಡೆಗಳಿಗೆ ಸಮಾನವಾಗಿರುತ್ತದೆ.

ಕೋಕಾ-ಕೋಲಾದಲ್ಲಿ ಈ ಪ್ರಮಾಣದಲ್ಲಿ ಸುಕ್ರೋಸ್ ಮತ್ತು ಸಕ್ಕರೆಗಳು ಇರುವುದರಿಂದ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುವುದಲ್ಲದೇ ಮಧುಮೇಹಕ್ಕೂ ಕಾರಣವಾಗುತ್ತದೆ, ಹಲ್ಲು ಹುಳುಕಾಗುವುದಲ್ಲದೇ ಬೊಜ್ಜು ಸಹಾ ಹೆಚ್ಚಾಗುತ್ತದೆ.

ಅಮೇರೀಕಾದಲ್ಲಿ 43,000 ವಯಸ್ಕರು ಮತ್ತು 4,000 ಹದಿಹರೆಯದವರೊಂದಿಗೆ ನಡೆಸಿದ ಅಧ್ಯಯನವೊಂದರ ಪ್ರಕಾರ ದಿನಕ್ಕೆ ಒಮ್ಮೆ ಅಥವಾ ಅದಕ್ಕಿಂತ ಹೆಚ್ಚಿನ ಬಾರೀ ಈ ರೀತಿಯ ತಂಪು ಪಾನೀಯಗಳನ್ನು ಸೇವಿಸುವುದರಿಂದ ಬೊಜ್ಜು ಬರುವ ಸಾಧ್ಯತೆಯು 27% ಹೆಚ್ಚಾಗುತ್ತದೆ ಎಂದು ಹೇಳಿದೆ. ದಿನಕ್ಕೆ ಕನಿಷ್ಠ ಒಂದು ಬಾರಿ ಸೋಡಾವನ್ನು ಸೇವಿಸುವುದರಿಂದ 62% ವಯಸ್ಕರು ಅಧಿಕ ತೂಕ ಅಥವಾ ಬೊಜ್ಜು ಹೊಂದುತ್ತಾರೆ ಎನ್ನುವುದು ಕಳವಳಕಾರಿಯಾಗಿದೆ.

ಕೋಕಾ-ಕೋಲಾದ ಸೇವನೆಯಿಂದಾಗಿ, ಅದರಲ್ಲಿರುವ ಅತಿಯಾದ ಸಿಹಿಯು ಬಾಯಿಯಲ್ಲಿ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸುವುದಲ್ಲದೇ, ಅವುಗಳು ಹಲ್ಲುಗಳ ದಂತಕವಚದ ಮೇಲೆ ಆಕ್ರಮಣ ಮಾಡುವ ಆಮ್ಲವನ್ನು ಬಿಡುಗಡೆ ಮಾಡುವ ಕಾರಣ ದಂತ ಕುಳಿಗಳಿಗೆ ಕಾರಣವಾಗುತ್ತದೆ. ಕೋಕಾ ಕೋಲಾದಲ್ಲಿ ಬಳಸುವ ಫಾಸ್ಪರಿಕ್ ಆಮ್ಲದಲ್ಲಿ 2.5-2.7 ರಷ್ಟು ಪಿಹೆಚ್ ಅನ್ನು ಹೊಂದಿರುವ ಕಾರಣ, ಈ ಆಮ್ಲೀಯತೆಯು ಬಾಯಿಯ ಪಿಹೆಚ್ ಅನ್ನು ಕಡಿಮೆ ಮಾಡುವುದರಿಂದ ವಿಶೇಷವಾಗಿ ಕ್ಷಯದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎನ್ನುವುದು ಬೆಳಕಿಗೆ ಬಂದಿದೆ,

ಕೋಕಾ-ಕೋಲಾದಲ್ಲಿ ಹುಳಿಯಾದ ರುಚಿಯನ್ನು ನೀಡುವ ಫಾಸ್ಪರಿಕ್ ಆಮ್ಲವು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಉತ್ಪತ್ತಿಸುತ್ತವೆ. ಇನ್ನು ಇದೇ ಫಾಸ್ಪರಿಕ್ ಆಮ್ಲವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವುದಲ್ಲದೇ, ಆಸ್ಟಿಯೊಪೊರೋಸಿಸ್ ನಂತಹ ಮೂಳೆ ಕಾಯಿಲೆಗಳನ್ನು ಉತ್ತೇಜಿಸುತ್ತದೆ ಎನ್ನುವುದು ಆತಂಕಕಾರಿಯಾಗಿದೆ.

ಯಾರೋ ನಮ್ಮ ನೆಚ್ಚಿನ ಸಿನಿಮಾ ನಟ ಇಲ್ಲವೇ ಯಾರೋ ನಮ್ಮ ನೆಚ್ಚಿನ ಆಟದ ಆಟಗಾರರು ಇಂತಹ ಕಂಪನಿಗಳಿಂದ ಪ್ರಾಯೋಜಕತ್ವ ಪಡೆದು ತಮ್ಮ ಜೋಬನ್ನು ತುಂಬಿಸಿ ಕೊಂಡು E Dil mange more ಎಂದೋ, har wrong ko right bana de ಎಂದೋ, Always the Real Thing!, ठंडा मतलब Coca-Cola! / Thanda matalaba Coca-Cola! ಎಂದು ಅವುಗಳನ್ನು ಕುಡಿಯುವುದನ್ನು ನೋಡಿ, ಅವರ ಮೇಲಿನ ಅಂಧಾಭಿಮಾನದಿಂದ ನಾವುಗಳು ಹಣವನ್ನು ಕೊಟ್ಟು ಆರೋಗ್ಯವನ್ನು ಏಕೆ ಹಾಳು ಮಾಡಿಕೊಳ್ಳ ಬೇಕು?

ನಮ್ಮ ನೆಚ್ಚಿನ ನಟ ಮತ್ತು ಆಟಗಾರ ಮೇಲಿನ ಅಭಿಮಾನ ತಪ್ಪಲ್ಲ ಅದರೇ ಈ ರೀತಿಯ ಅಂಧಾಭಿಮಾನ ನಿಜಕ್ಕೂ ಅನಾರೋಗ್ಯಕರವೇ ಸರಿ. ತಮ್ಮ ಜೇಬನ್ನು ತುಂಬಿಸಿಕೊಳ್ಳಲು ಈ ರೀತಿಯ ಕೃತಕ ಪಾನೀಯ ಕುಡಿಯಿರಿ, ಆ ಜೂಜಾಟ ಆಡಿರಿ ಎನ್ನುವರಿಗಿಂತ ತಮ್ಮ ಅಭಿಮಾನಿಗಳ ಪರ ಕಾಳಜಿಯನ್ನು ವಹಿಸಿ ಇಂತಹ ಕೃತಕ ಪೇಯಗಳನ್ನು ತಿರಸ್ಕರಿಸಿದ, ಪುಲ್ಲೇಲ ಗೋಪಿಚಂದ್, ತಡವಾಗಿಯಾದರೂ ಬುದ್ಧಿ ಕಲಿತುಕೊಂಡ ವಿರಾಟ್ ಕೊಹ್ಲಿ ಮತ್ತು ಈಗ ಕ್ರಿಶ್ಚಿಯಾನೊ ರೊನಾಲ್ಡೊ ಗಳೇ ನಿಜವಾದ ಹೀರೋಗಳು ಎನಿಸಿ ಕೊಳ್ಳುತ್ತಾರೆ.

ಏನಂತೀರೀ?
ನಿಮ್ಮವನೇ ಉಮಾಸುತ

One thought on “ನೀರು ಓಕೆ. ಕೃತಕ‌ ಪಾನೀಯ ಏಕೆ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s