ಅದು 1960ರ ಸಮಯ ರೋಮ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಲಿದೆ. ಎಂದಿನಂತೆ ಭಾರತದಿಂದಲೂ ಕೆಲ ಆಟಗಾರರು ಹೋದಾ ಪುಟ್ಟಾ ಬಂದಾ ಪುಟ್ಟಾ ಎನ್ನುವಂತೆ ಬರಿಗೈಯಲ್ಲಿ ವಾವಾಸಾಗುತ್ತಿದ್ದ ದಿನಗಳಾದರೂ ಈ ಒಲಿಂಪಿಕ್ಸ್ ಭಾರತೀಯರ ಪಾಲಿಗೆ ಅತ್ಯಂತ ವಿಶೇಷವಾಗಿತ್ತು. ಭಾರತದ ಪರ 31ರ ತರುಣ ಅಥ್ಲೆಟಿಕ್ಸ್ ನಲ್ಲಿ ಏನಾದರೂ ಸಾಧಿಸಬಹುದು ಎಂಬ ನಿರೀಕ್ಷೆ ಇತ್ತು. ಏಕೆಂದರೆ 1956ರಲ್ಲಿ ನಡೆದ ಮೆಲ್ಬೊರ್ನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲಬಾರಿಗೆ ಭಾಗವಹಿಸಿದ್ದ ಇದೇ ಓಟಗಾರ, ಸಾಕಷ್ಟು ಅನುಭವವಿಲ್ಲದ ಕಾರಣ ಅಷ್ಟೆನೂ ಸಾಧನೆ ಮಾಡಲಾಗದಿದ್ದರೂ, ಆ ಕ್ರೀಡಾಕೂಟದಿಂದ ಕಲಿತು, ಮುಂದಿನ ನಾಲ್ಕು ವರ್ಷಗಳಷ್ಟರಲ್ಲಿ ವಿಶ್ವದ ನಾನಾ ಕಡೆಯಲ್ಲಿ ನಡೆದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಎಲ್ಲರಿಗೂ ಬಹಳ ಪೈಪೋಟಿ ನೀಡಿ ಅನೇಕ ಪ್ರಶಸ್ತಿಗಳನ್ನು ಚಾಚಿದ್ದರಿಂದ ಆತನ ಮೇಲೆ ಬಹಳಷ್ಟು ಭರವಸೆಗಳೊಂದಿಗೆ ನಿರೀಕ್ಷೆಯೂ ಸಹಾ ಹೆಚ್ಚಾಗಿತ್ತು.
ರೋಮ್ ನ ಆ ಒಲಿಂಪಿಕ್ಸ್ ಕ್ರೀಡಾಕೂಟದ 400 ಮೀಟರ್ ಓಟದ ಆರಂಭಿಕ ಸುತ್ತಿನಲ್ಲಿ ಆತ ಮೀಟರ್ ಓಟವನ್ನು 47.6 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ, 2ನೇ ಸ್ಥಾನ ಗಳಿಸಿದ್ದ. ಮುಂದಿನ ಸುತ್ತಿನಲ್ಲಿ 46.5 ಸೆಕೆಂಡ್‌ಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ತನ್ನದೇ ದಾಖಲೆಯನ್ನು ಉತ್ತಮಗೊಳಿಸಿ ಮತ್ತೆ ೨ನೇ ಸ್ಥಾನ ಗಳಿಸಿದ್ದ.
ಸೆಮಿಫೈನಲ್ ಸುತ್ತಿನಲ್ಲಿ ತಮ್ಮ ಓಟದ ಓಘವನ್ನು ಮತ್ತಷ್ಟೂ ತೀವ್ರಗೊಳಿಸಿ 45.9 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಮೂಅನೇ ಬಾರಿಗೆ 2ನೇ ಸ್ಥಾನಗಳಿಸುವ ಮೂಲಕ ನೆರೆದಿದ್ದ ಎಲ್ಲಾ ಕ್ರೀಡಾಸಕ್ತರ ಗಮನವನ್ನು ಸೆಳೆದಿದ್ದಲ್ಲದೇ, ಭಾರತಕ್ಕೆ ಮೊದಲ ಬಾರಿಗೆ ಓಲಂಪಿಕ್ಸ್ ನಲ್ಲಿ ವಯಕ್ತಿಯವಾಗಿ ಪದಕವನ್ನು ತರುವ ಭರವಸೆ ಮೂಡಿಸಿದ್ದ.
ಅಂತಿಮ ಸುತ್ತಾದ ಫೈನಲ್ಸಿನಲ್ಲಿ ಡಂ! ಎಂದು ಪಿಸ್ತೂಲಿನ ಸದ್ದಾಗುತ್ತಿದ್ದಂತೆಯೇ ಧುಮ್ಮಿಕ್ಕಿ ಭೋರ್ಗರೆಯುವ ಜಲಧಾರೆಯಂತೆ ಗಾಳಿಯಲ್ಲಿ ಹಾರಿಕೊಂಡು ಶರವೇಗದಲ್ಲಿ ಓಡುತ್ತಿದ್ದ ನಮ್ಮ ಭಾರತೀಯ ಆಟಗಾರ ಆರಂಭದ 250 ಮೀಟರ್ ದೂರದ ವರೆಗೂ ತನ್ನ ಪ್ರತಿಸ್ಪರ್ಥಿಗಳಿಗಿಂತಲೂ ಬಹಳವಾಗಿ ಮುಂಚೂಣಿಯಲ್ಲಿರುವ ಮೂಲಕ ಅಗ್ರಸ್ಥಾನದಲ್ಲಿದ್ದಾಗ ಅಲ್ಲಿದ್ದ ಪ್ರತಿಯೊಬ್ಬರಿಗೂ ಈ ಬಾರಿ ಚಿನ್ನ ಭಾರತದ್ದೇ ಎಂಬ ಆಶಾಭಾವನೆ ಮೂಡಿತ್ತು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಮುಂದೆ ನಡೆದದ್ದೇ ಇತಿಹಾಸ.
ಅದಾಗಲೇ ಬಹಳಷ್ಟು ಮುಂದಿದ್ದ ಆ ಆಟಗಾರ ಒಂದು ಕ್ಷಣ ಮೈಮರೆತು ತನ್ನ ವೇಗದ ಗತಿಯನ್ನು ತುಸು ನಿಧಾನ ಮಾಡಿ ಹಿಂದಿರುಗಿ ನೋಡಿದ್ದೇ ತಪ್ಪಾಗಿ ಹೋಯಿತು. ಕಣ್ಣಿನ ರೆಪ್ಪೆ ಮಿಟುಕಿಸಿ ತೆಗೆಯುವಷ್ಟರಲ್ಲಿ ಅವರ ಪ್ರತಿಸ್ಪರ್ಧಿಗಳು ಅವರನ್ನು ಹಿಂದಿಕ್ಕಿ ಓಡತೊಡಗಿದ್ದರು. ಪರಿಸ್ಥಿತಿ ಅರಿವಾಗಿದ್ದೇ ತಡಾ ನಮ್ಮ ಓಟಗಾರ ಶಕ್ತಿಮೀರಿ ಓಡಿದರೂ, ಇತರೆ ಪ್ರತಿಸ್ಪರ್ಧಿಗಳು ಆತನನ್ನು ಹಿಂದಿಕ್ಕಿ ಸಾಕಷ್ಟು ಮುಂದೆ ಧಾವಿಸಿಯಾಗಿತ್ತು
ಅಂತಿಮವಾಗಿ ಒಟಿಸ್ ಡೇವಿಸ್ ಮತ್ತು ಕಾರ್ಲ್ ಕೌಫ್ಮನ್ 44.9 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರೆ, ದಕ್ಷಿಣ ಆಫ್ರಿಕಾದ ಮಾಲ್ಕಮ್ ಸ್ಪೆನ್ಸ್ ಜೊತೆ ಜೊತೆಯಲ್ಲಿಯೇ ನಮ್ಮ ಓಟಗಾರನೂ 45.5 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಆ ಪಂದ್ಯಕ್ಕೆ ರೋಚಕತೆಯನ್ನು ತಂದಿಟ್ಟಿದ್ದರು. ಮೊದಲ ಎರಡು ಸ್ಥಾನಗಳು ನಿರ್ವಿವಾದವಾಗಿ ನಿಶ್ಚಿತಗೊಂಡರೂ, ಮೂರನೇ ಸ್ಥಾನವನ್ನು ನಿರ್ಧರಿಸಲು ತೀರ್ಪುಗಾರರು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬೇಕಾಯಿತು. ಹಲವಾರು ಬಾರೀ ವೀಡೀಯೋ ಗಳನ್ನು ನೋಡಿ ಅಂತಿಮವಾಗಿ ಮಾಲ್ಕಮ್ ಸ್ಪೆನ್ಸ್‌ಗಿಂತ ಕೇವಲ 0.1 ಸೆಕೆಂಡಷ್ಟು ತಡವಾಗಿ, ಅಂದರೆ, 45.6 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದ ಕಾರಣ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ನಮ್ಮ ದೇಶದ ಓಟಗಾರ ಕೆಲ ಕ್ಷಣಗಳ ಕಾಲ ಮೈಮರೆತದ್ದಕ್ಕಾಗಿ ಸೂಜಿ ಮೊನಚಿನಷ್ಟು ಅಂತರದಲ್ಲಿ ಪದಕವನ್ನು ತಪ್ಪಿಸಿಕೊಂಡು,ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡರೂ ಒಲಂಪಿಕ್ಸ್ ನಲ್ಲಿ ಭಾರತದ ಪರ ಇತಿಹಾಸವನ್ನು ಸೃಷ್ಟಿಸಿಯಾಗಿತ್ತು. ಈ ರೀತಿಯ ವಿರೋಚಿತ ಸೋಲಿನ ಮೂಲಕವೇ ಜಗತ ಪ್ರಸಿದ್ಧರಾದವರೇ, ನಮ್ಮ ದೇಶ ಕಂಡ ಅತ್ಯಂತ ವೇಗದ ಓಟಗಾರ, ಹಾರುವ ಸಿಖ್ ಎಂದೇ ಖ್ಯಾತಿ ಹೊಂದಿದ್ದಂತಹ ಶ್ರಿ ಮಿಲ್ಕಾ ಸಿಂಗ್.
ಮುಂದೇ, 1984ರ ಲಾಸ್ ಏಂಜೆಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಗದ ರಾಣಿ ಪಿ. ಟಿ. ಉಷಾ ಮಿಲ್ಖಾ ಸಿಂಗ್‌ರಿಗಿಂತಲೂ ಉತ್ತಮ ಸಾಧನೆ ಮಾಡಿದರೂ, 400 ಮೀಟರ್ ಹರ್ಡ್‌ಲ್ಸ್ ಸ್ಪರ್ಧೆಯಲ್ಲಿ ಮಿಲ್ಕಾ ಸಿಂಗರಂತೆಯೇ, ಕೇವಲ ಸೆಕೆಂಡಿಗೆ 1/100ರ ಅಂತರದಲ್ಲಿ ಕಂಚಿನ ಪದಕ ಕಳೆದು ಕೊಂಡು ಮತ್ತೊಮ್ಮೆ ಅದೇ ರೀತಿಯ ಇತಿಹಾಸವನ್ನು ನಿರ್ಮಿಸಿದ್ದರು.
ಪ್ರಸ್ತುತ ಪಾಕಿಸ್ತಾನದಲ್ಲಿರುವ ಗೋವಿಂದಪುರದಲ್ಲಿ 20ನೇ ನವೆಂಬರ್ 1929ರಂದು ಮಿಲ್ಖಾಸಿಂಗ್ ಜನಿಸಿದರು. ಸ್ವಾತಂತ್ರ್ಯಾನಂತರ ವಿಭಜನೆಯ ಸಮಯದಲ್ಲಿ ಮುಲ್ತಾನಿನಿಂದ ಭಾರತಕ್ಕೆ ರೈಲಿನಲ್ಲಿ ಲಕ್ಷಾಂತರ ಹಿಂದೂಗಳು ಹಿಂದಿರುಗುತ್ತಿದ್ದ ಸಮಯದಲ್ಲಿ ನಡೆದ ಮಾರಣ ಹೋಮದಲ್ಲಿ ತನ್ನ ಕಣ್ಣಮುಂದೆಯೇ ತನ್ನ ಹೆತ್ತವರು ಮತ್ತು ಮೂವರು ಸಹೋದರರ ಹತ್ಯೆ ಮಿಲ್ಕಾರವರನ್ನು ಧೃತಿಗೆಡಿಸಿತ್ತು. ನಂತರ ಭಾರತದ ಮಿಲಿಟರಿ ಟ್ರಕ್‌ನಲ್ಲಿ ಫಿರೋಜ್‌ಪುರಕ್ಕೆ ಬಂದಿಳಿದಾಗ ಅವರಿನ್ನೂ ಸಣ್ಣ ವಯಸ್ಸಿನ ಹುಡುಗ, ಹಾಗಾಗಿ ಕೆಲ ದಿನಗಳ ಕಾಲ ಅದೇ ಸೈನಿಕರ ಬೂಟುಗಳನ್ನು ಪಾಲೀಶ್ ಮಾಡಿ ಹೊಟ್ಟೆ ಹೊರೆಯುತ್ತಾರೆ. ಎಷ್ಟೋ ದಿನಗಳು ತಿನ್ನಲು ಏನೂ ಸಿಗದಿದ್ದಾಗ, ಹೊಟ್ಟೆ ಪಾಡಿಗೆ ಸಣ್ಣ ಪುಟ್ಟ ಕಳ್ಳತನವನ್ನೂ ಮಾಡಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಆ ಅನಾಥ ಮಿಲ್ಕಾ ಸಿಂಗ್ ಅವರಿಗಿರುತ್ತದೆ.
ನಂತರ ಸತತ ಎರಡು ವಿಫಲ ಸೇನಾ ನೇಮಕಾತಿಯ ಪ್ರಯತ್ನಗಳ ನಂತರ, ಅಂತಿಮವಾಗಿ ಮಿಲ್ಕಾ ಸಿಕಂದರಾಬಾದ್‌ನ ಇಎಂಇಗೆ ಸೇರಿಕೊಳ್ಳುತ್ತಾರೆ, ಅಲ್ಲಿ ಗೋಲ್ಕೊಂಡ ಕೋಟೆಯ ನೆರಳಿನಲ್ಲಿ ಅವರ ಅಭ್ಯಾಸ ಆರಂಭವಾಗುತ್ತದೆ. ಅಲ್ಲಿನ ಕ್ರೀಡಾಪಟುತ್ವವನ್ನು ಮೊದಲ ಬಾರಿಗೆ ಗುರುತಿಸಿದ ಸೇನೆಯ ತರಬೇತುದಾರ ಹವಾಲ್ದಾರ್ ಗುರುದೇವ್ ಸಿಂಗ್ 6 ಮೈಲಿ ಓಟಕ್ಕಾಗಿ ಆಯ್ಕೆ ಮಾಡಿದ 500 ಜನರಲ್ಲಿ ಮೊದಲ 10 ಮಂದಿಯ ಪಟ್ಟಿಯಲ್ಲಿ ಮಿಲ್ಕಾಸಿಂಗ್ ಅವರ ಹೆಸರು ಇರುತ್ತದೆ.
ನಂತರ ನೋಡ ನೋಡುತ್ತಿದ್ದಂತೆಯೇ ಇಂಟರ್-ಸರ್ವೀಸಸ್ ಮೀಟ್‌ಗಳಲ್ಲಿ ಸ್ಪರ್ಧೆಯಲ್ಲಿ ಪದಕಗಳ ಕೊಳ್ಳೆ ಹೊಡೆಯುತ್ತಾ, 1956ರ ಹೊತ್ತಿಗೆ ಮೆಲ್ಬೋರ್ನ್ ಒಲಿಂಪಿಕ್ಸ್‌ನಲ್ಲಿ ಭಾರತದ 400 ಮೀಟರ್ ಓಟಗಾರರಾಗಿ ಮೈದಾನಕ್ಕೆ ಇಳಿಯವಷ್ಟು ಎತ್ತರಕ್ಕೆ ಬೆಳೆದಿರುತ್ತಾರೆ. ನಾನು ಹುಟ್ಟಿರುವುದಕ್ಕೇ ಓಡುವುದಕ್ಕಾಗಿ ಎಂದು ಭಾವಿಸಿ, ಸಾಧ್ಯವಾದಷ್ಟೂ ವೇಗವಾಗಿ ಓಡಬೇಕೆಂಬ ಮಹತ್ವಾಕಾಂಕ್ಷೆಯಿಂದಾಗಿ, ಗೆಲ್ಲುವ ಗೀಳಿನಿಂದ ಒಂದೊಂದೇ ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸತೊಡುಗುತ್ತಾರೆ.
ಒಬ್ಬ ಅಥ್ಲೀಟ್ ಆಗಿ ಮಿಲ್ಕಾ ಸಿಂಗ್‌ರ ಪಾಲಿಗೆ 1958ರಿಂದ 1962ರ ಅವಧಿಯು ಸುವರ್ಣ ಯುಗ ಎಂದೇ ಹೇಳಬಹುದಾಗಿದೆ,
1958ರಲ್ಲಿ ಬ್ರಿಟನ್ನಿನ ವೇಲ್ಸ್ ರಾಜಧಾನಿ ಕಾರ್ಡಿಫ್‌ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 46.16 ಸೆಕೆಂಡ್‌ಗಳಲ್ಲಿ 400 ಮೀಟರ್ ಓಟ ಮುಗಿಸಿ ಸ್ವರ್ಣ ಪದಕ ಗೆಲ್ಲುವ ಮೂಲಕ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎನಿಸಿ ಎಲ್ಲರ ಗಮನ ಸೆಳೆಯುತ್ತಾರೆ, ಅದೇ ಸಮಯದಲ್ಲಿಯೇ ಪಾಕಿಸ್ತಾನದಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಸ್ಪರ್ಧೆಯಲ್ಲಿ, ದೇಶ ಇಬ್ಭಾಗದ ಸಮಯದಲ್ಲಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದಾಗಿ ಪಾಕೀಸ್ಥಾನಕ್ಕೆ ಹೋಗಲು ಮಿಲ್ಕಾ ಸಿಂಗ್ ನಿರಾಕರಿಸುತ್ತಾರೆ. ವಯಕ್ತಿಕ ಕಾರಣಗಳಿಂದಾಗಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಂದ ಅವರು ಸ್ಪರ್ಧಿಸಲು ಹಿಂಜರಿದಲ್ಲಿ, ರಾಜಕೀಯ ಅಡ್ಡ ಪರಿಣಾಮಗಳ ಕುರಿತಂತೆ ಅಂದಿನ ಪ್ರಧಾನಿಗಳಾಗಿದ್ದ ನೆಹರುವರು ವಿವರಿಸಿದ ನಂತರ ಮಿಲ್ಕಾ ಸಿಂಗ್ ಆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಲ್ಲದೇ, ಅಲ್ಲಿ ತಮ್ಮ ಎಲ್ಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ್ದಲ್ಲದೇ, ಪಾಕೀಸ್ಥಾನದ ಅಂದಿನ ಪ್ರಬಲ ಕ್ರೀಡಾಪಟು ಅಬ್ದುಲ್ ಖಲೀಕ್ ಅವರನ್ನು ಸೋಲಿಸಿದದ್ದನ್ನು ಕಂಡಪಾಕಿಸ್ತಾನದ ಸರ್ವಾಧಿಕಾರಿ ಆಡಳಿತಗಾರ ಜನರಲ್ ಅಯೂಬ್ ಖಾನ್ ಮಿಲ್ಕಾ ಸಿಂಗರಿಗೆ ವೇಗವಾಗಿ ಚಲಿಸುವ,ಹಾರುವ ಸಿಖ್ (ಫ್ಲೈಯಿಂಗ್ ಸಿಖ್) ಈ ಹೆಸರನ್ನು ನೀಡುವ ಮೂಲಕ ಗೌರವ ಸಲ್ಲಿಸುತ್ತಾರೆ.
1958ರಲ್ಲಿ ಟೋಕಿಯೋದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 200 ಮೀಟರ್ ಮತ್ತು 400 ಮೀಟರ್ ವಿಭಾಗದಲ್ಲಿ ಮಿಲ್ಕಾ ಸಿಂಗ್ ಚಿನ್ನದ ಪದಕ ಗೆದ್ದಿದ್ದರು. 1962ರ ಏಷ್ಯನ್ ಗೇಮ್ಸ್‌ನಲ್ಲಿ 400 ಮೀಟರ್ ಮತ್ತು 4X400 ರಿಲೇ ವಿಭಾಗದಲ್ಲಿಯೂ ಇಂಥದ್ದೇ ಸಾಧನೆಯನ್ನು ಮಾಡುವ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿಯೇ ಏಷ್ಯಾದ ಅತ್ಯುತ್ತಮ ಓಟಗಾರ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ.
ಇದರ ಮಧ್ಯೆ ಅಂದಿನ ಭಾರತದ ಮಹಿಳಾ ವಾಲಿಬಾಲ್ ತಂಡದ ನಾಯಕಿಯಾಗಿದ್ದ ನಿರ್ಮಲ್ ಕೌರ್ ಅವರನ್ನು ವಿವಾಹವಾಗಿ ಅವರಿಬ್ಬರ ಸುಂದರ ದಾಂಪತ್ಯದ ಫಲವಾಗಿ, ಮೋನಾ ಸಿಂಗ್, ಅಲೀಜಾ ಗ್ರೋವರ್ ಮತ್ತು ಸೋನಿಯಾ ಸಾನ್‌ವಲ್ಕಾ ಎಂಬ ಮೂವರು ಪುತ್ರಿಯರೊಂದಿಗೆ ಜೀವ್ ಮಿಲ್ಖಾ ಸಿಂಗ್ ಹೆಸರಿನ ಮಗ ಜನಿಸುತ್ತಾನೆ. ತಂದೆಯಂತೆಯೇ ಮಗನು ಸಹಾ ಕ್ರೀಡಾಳುವಾಗಿದ್ದು ಭಾರತದ ಪರ ಖ್ಯಾತವೃತ್ತಿಪರ ಗಾಲ್ಫ್ ಆಟಗಾರರಾಗಿದ್ದಾರೆ.
ಮಿಲ್ಕಾ ಸಿಂಗ್ ಅವರ ಕ್ರೀಡಾಸಾಧನೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಲಭಿಸಿದೆಯಲ್ಲದೇ, ಶ್ರೀಯುತರಿಗೆ 1959 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆವರ ಪುತ್ರ ಜೀವ್ ಸಹಾ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷವಾಗಿದೆ. ಮಿಲ್ಕಾ ಸಿಂಗ್ ಅವರ ಜೀವನ ಆಧರಿಸಿದ ಭಾಗ್ ಮಿಲ್ಕಾ ಭಾಗ್ ಎಂಬ ಚಲನಚಿತ್ರ 2013ರಲ್ಲಿ ತೆರೆಕಂಡು ಅವರ ಸಾಧನೆಗಳು ಇಂದಿನ ಅನೇಕ ಯುವ ಜನರಿಗೆ ತಿಳಿಯುವಂತಾಗಿ ಪ್ರೇರಣೆಯಾಗಿದೆ.
ವಯಸ್ಸು 90ನ್ನು ದಾಟಿದ್ದರೂ ಉತ್ತಮರೀತಿಯ ದೈಹಿಕ ಪರಿಶ್ರಮದಿಂದಾಗಿ ಸದಾಕಾಲವೂ ಬಹಳ ಚಟುವಟಿಕೆಯಿಂದಾಗಿ ಕೂಡಿದವರಾಗಿ ಕೇವಲ 60ರ ವಯಸ್ಸಿನಂತೆ ಕಾಣುತ್ತಿದ್ದರು. ದೇಶದಲ್ಲಿ ಯಾರೇ ಎಲ್ಲಿಗೇ ಯಾವುದೇ ಸಮಾರಂಭಕ್ಕೆ ಕರೆದಲ್ಲಿ ಯಾವುದೇ ಹಮ್ಮು ಬಿಮ್ಮಿಲ್ಲದೇ ಭಾಗವಹಿಸಿ ಯುವಕರಿಗೆ ಶಿಸ್ತು ಸಂಯಮ, ದೇಶ ಭಕ್ತಿ, ಕ್ರೀಡಾಸಕ್ತಿಗಳ ಬಗ್ಗೆ ಹುರಿದುಂಬಿಸುತ್ತಿದ್ದಂತಹ ಬಹಳ ಸರಳ ಸಜ್ಜನ ವ್ಯಕ್ತಿಯಾಗಿದ್ದರು.
ಕೆಲವು ವಾರಗಳ ಹಿಂದೆ ಪತಿ ಪತ್ನಿ ಇಬ್ಬರೂ ಸಹಾ ಕೋವಿಡ್ ಮಹಾಮಾರಿಗೆ ತುತ್ತಾಗಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ದುರಾದೃಷ್ಟವಶಾತ್ ವಯಸ್ಸಾಗಿದ್ದ ಕಾರಣ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸದ ಆವರ ಪತ್ನಿ ನಿರ್ಮಲ್ ಕೌರ್ ಕಳೆದ ವಾರ ಚಂಡೀಗಡದಲ್ಲಿ ನಿಧನಹೊಂದಿದರೆ, ಅವರನ್ನೇ ಹಿಂಬಾಲಿಸಿದ ಮಿಲ್ಕಾ ಸಿಂಗ್ ಅವರು ಸಹಾ ಶುಕ್ರವಾರ ಜೂನ್ 18ರ ತಡರಾತ್ರಿ ಕೊವಿಡ್ ಸೋಂಕಿನಿಂದಾಗಿ ನಿಧನರಾಗುವ ಮೂಲಕ ಈ ದೇಶ ಕಂಡ ಅತ್ಯುತ್ತಮ ಚಾಂಪಿಯನ್ ಒಬ್ಬರನ್ನು ಕಳೆದುಕೊಂಡಿದೆ ಎಂದರೂ ತಪ್ಪಾಗಲಾರದು.
ದೇಶವಿಭಜನೆಯಲ್ಲಿ ತನ್ನ ಕುಟುಂಬ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಯುವಕನೊಬ್ಬ ತನ್ನ ಅಚಲವಾದ ನಂಬಿಕೆ, ನಿರಂತರ ಸಾಧನೆಗಳಿಂದ ಎಲ್ಲವನ್ನೂ ಮೆಟ್ಟೆ ನಿಂತು ಹೇಗೆ ಅಂತರಾಷ್ಟ್ರೀಯ ಮಟ್ಟದವರೆಗೂ ಏರಬಹುದು ಎಂಬುದನ್ನು ಸಾಧಿಸಿ ತೋರಿಸಿದ ಹಾರುವ ಸಿಖ್ ಮಿಲ್ಕಾ ಸಿಂಗ್ ಅವರಿಗೆ ನಮ್ಮೆಲ್ಲರ ಪರವಾಗಿ ತುಂಬು ಹೃದಯದ ಶ್ರದ್ಧಾಂಜಲಿಯನ್ನು ಸಲ್ಲಿಸೋಣ.
ಏನಂತೀರೀ?
ನಿಮ್ಮವನೇ ಉಮಾಸುತ
Sir thanks for your patriot artical
On Sat, 19 Jun, 2021, 5:24 pm ಏನಂತೀರೀ? Enantheeri?, wrote:
> ಶ್ರೀಕಂಠ ಬಾಳಗಂಚಿ posted: “ಅದು 1960ರ ಸಮಯ ರೋಮ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ
> ನಡೆಯುತ್ತಲಿದೆ. ಎಂದಿನಂತೆ ಭಾರತದಿಂದಲೂ ಕೆಲ ಆಟಗಾರರು ಹೋದಾ ಪುಟ್ಟಾ ಬಂದಾ ಪುಟ್ಟಾ
> ಎನ್ನುವಂತೆ ಬರಿಗೈಯಲ್ಲಿ ವಾವಾಸಾಗುತ್ತಿದ್ದ ದಿನಗಳಾದರೂ ಈ ಒಲಿಂಪಿಕ್ಸ್ ಭಾರತೀಯರ ಪಾಲಿಗೆ
> ಅತ್ಯಂತ ವಿಶೇಷವಾಗಿತ್ತು. ಭಾರತದ ಪರ ೩೧ರ ತರುಣ ಅಥ್ಲೆಟಿಕ್ಸ್ ನಲ್ಲಿ ಏನಾದರೂ”
>
LikeLiked by 1 person
ಶ್ರೀ ಶ್ರೀಕಂಠ ಬಾಳಗಂಚಿ ರವರೇ ಈ ನಿಮ್ಮ ಲೇಖನ ಹೃದಯ ವಿದ್ರಾವಕ ಆಗುವಂತಹ ಲೇಖನ ಮಿಲ್ಕಾ ಸಿಂಗ್ ರವರಿಗೆ ನಮ್ಮೆಲ್ಲರ ಹೃದಯ ಪೂರ್ವಕ ಶ್ರಧ್ದಾಂಜಲಿಗಳು
ಓಂ ಶಾಂತಿ
LikeLiked by 1 person