ಅದು ಎಪ್ಪತ್ತು ಮತ್ತು ಎಂಭತ್ತರ ದಶಕ. ಕರ್ನಾಟಕ ರಾಜ್ಯದ ರಣಜಿ ತಂಡದಲ್ಲಿ ಘಟಾನುಘಟಿಗಳು ಇದ್ದಂತಹ ಕಾಲ. ಕಾರ್ಲ್ಟನ್ ಸಲ್ಡಾನ, ಬಿನ್ನಿ, ಅಭಿರಾಂ, ಸುಧಾಕರ್ ರಾವ್, ಎ ವಿ ಜಯಪ್ರಕಾಶ್, ಬ್ರಿಜೇಶ್ ಪಟೇಲ್, ಅವಿನಾಶ್ ವೈದ್ಯ, ರಘುರಾಂ ಭಟ್ ಅವರುಗಳು ಇದ್ದ ಕಾಲ. ಅವರ ಜೊತೆಯಲ್ಲಿಯೇ ಮತ್ತೊಬ್ಬ ಸಧೃಢವಾದ ಚಂಡು ಇರುವುದೇ ಬಾರೀ ಹೊಡೆತಕ್ಕೇ ಎಂದು ಭರ್ಜರಿಯಾಗಿ ಸಿಕ್ಸರ್ ಗಳನ್ನು ಬಾರಿಸುತ್ತಿದ್ದ ಇನ್ನು ಚಂಡನ್ನು ಕೈಯಲ್ಲಿ ಹಿಡಿದು ಬೋಲಿಂಗ್ ಮಾಡಿದರೆ ದಾಂಡಿಗರನ್ನು ವಂಚಿಸಿ ಸೀದಾ ವಿಕೆಟ್ ಉರುಳಿಸುತ್ತಿದ್ದಂತಹ ಚಾಣಾಕ್ಷ ಎಡಗೈ ಆಟಗಾರ ಆಗಿದ್ದಂತಹ ಬಿ ವಿಜಯಕೃಷ್ಣ ಅವರು ಸಹಾ ಅದೇ ತಂಡದಲ್ಲಿ ಇದ್ದರು.
ಆಗೆಲ್ಲಾ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಲೀಗ್ ಪಂದ್ಯಗಳನ್ನು ವೀಕ್ಷಿಸಲು ನೂರಾರು ಕ್ರೀಡಾಪ್ರೇಮಿಗಳು ಸೇರುತ್ತಿದ್ದ ಕಾಲ. ಅದರಲ್ಲೂ ಪ್ರತಿಷ್ಠಿತ ಬ್ಯಾಂಕುಗಳಾದ ಎಸ್.ಬಿ.ಐ, ಎಸ್. ಬಿ.ಎಂ, ಕೆನರಾಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ತಂಡಗಳು ಬಹುತೇಕ ರಣಜಿ ಆಟಗಾರಿಂದಲೇ ಕೂಡಿರುತ್ತಿದ್ದ ಈ ಬ್ಯಾಂಕ್ ತಂಡಗಳ ನಡುವಿನ ಪಂದ್ಯ ಅತ್ಯಂತ ರೋಚಕವಾಗಿರುತ್ತಿದ್ದ ಕಾರಣ, ಈ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಪ್ರೇಮಿಗಳ ಸಂಖ್ಯೆ ಸಾವಿರದಕ್ಕೂ ಅಧಿಕವಾಗಿರುತ್ತಿತ್ತು. ನಾನೂ ಸಹಾ 2:30 ಕ್ಕೆ ಸ್ಕೂಲ್ ಮುಗಿಸಿದೊಡನೆಯೇ ಸೀದಾ ನಮ್ಮ ಶಾಲೆಯ ಪಕ್ಕದಲ್ಲೇ ಇದ್ದ ಬಿಇಎಲ್ ಗ್ರೌಂಡ್ಸ್ ಗೆ ಧಾಳಿ ಇಡುತ್ತಿದ್ದೆ. ಅಂದೆಲ್ಲಾ ಬಹುತೇಕ ತಂಡಗಳ ಆಟಗಾರರ ಪರಿಚಯ ಇದ್ದ ಕಾರಣ ನಾನು ಹೋಗಿ ಸೀದಾ ಸ್ಕೋರ್ ಮಾಡಲು ಕೂರುತ್ತಿದ್ದೆ.
ಸಿಂಡಿಕೇಟ್ ಬ್ಯಾಂಕ್ ಮತ್ತು ಸಿಟಿ ಕ್ರಿಕೆಟರ್ಸ್ ಪರವಾಗಿ ಆಡುತ್ತಿದ್ದ ವಿಜಯಕೃಷ್ಣ ಆವರು ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದರೆ, ನಮಗೆ ಸ್ಕೋರ್ ಮಾಡಲು ಮಜವಾಗುತ್ತಿತ್ತು. ಆಡುತ್ತಿದ್ದದ್ದು ಸ್ವಲ್ಪ ಹೊತ್ತೇ ಆದರೂ ಪಟಪಟನೇ ಔಂಡರಿ ಮತ್ತು ಸಿಕ್ಸರ್ ಬಾರಿಸಿ ಸ್ಕೋರರ್ಗಳನ್ನೂ ಸಹಾ ಸದಾ ಕಾಲವೂ ಚುರುಕಾಗಿಯೇ ಇರಿಸುತ್ತಿದ್ದಂತಹ ದಾಂಡಿಗರವರು. ಅವರು ಬಾರಿಸುತ್ತಿದ್ದ ಸಿಕ್ಸರ್ಗಳಿಂದಾಗಿ ಅದೆಷ್ಟೋ ಚೆಂಡುಗಳು ಕಳೆದು ಹೋಗಿದ್ದ ಉದಾಹರಣೆಗಳೂ ಸಾಕಷ್ಟು ಇತ್ತು.
ಇಂತಹ ಬಿ. ವಿಜಯಕೃಷ್ಣ, 12 ಅಕ್ಟೋಬರ್ 1949 ರಂದು ಬಾರೀ ಸ್ಥಿತಿವಂತ ಕುಟುಂಬದಲ್ಲೇ ಜನಿಸಿದರು. ವಿಜಯಕೃಷ್ಣರ ತಂದೆ ಕರ್ನಾಟಕದ ದಲಿತ ಸಮುದಾಯದ ಮೊದಲ ಐ ಎ ಎಸ್ ಅಧಿಕಾರಿಗಳಾಗಿ ನಂತರ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿಯೂ ನಿಸ್ಪೃಹರಾಗಿ ಸೇವೆ ಸಲ್ಲಿಸಿದ್ದ ಆರ್ ಭರಣಯ್ಯನವರು. ಇಬ್ಬರು ಸಹೋದರರು ಮತ್ತು ಏಳು ಸಹೋದರಿಯರ ತುಂಬು ಕುಟುಂಬದಲ್ಲಿ ಜನಿಸಿದ್ದರು ವಿಜಯಕೃಷ್ಣ.
ತಂದೆಯವರ ಹೆಸರನ್ನು ಎಲ್ಲೂ ಬಳಸಿಕೊಳ್ಳದೇ, ಸ್ವಸಾಮರ್ಥ್ಯದಿಂದ ಕ್ರಿಕೆಟ್ಟಿನಲ್ಲಿ ಮೇಲೆ ಬಂದಂತಹವರು. 1960 ರ ದಶಕದ ಕೊನೆಯಲ್ಲಿ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಆದಾಗಲೇ ಆಡಿದ್ದಂತಹ ಕೆ.ನಾಗಭೂಷಣ್ ಅವರು ವಿಜಯಕೃಷ್ಣ ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಅವರ ಕಾರ್ ಶೆಡ್‌ನಲ್ಲಿ ಟೆನಿಸ್ ಚೆಂಡಿನೊಂದಿಗೆ ಬೌಲಿಂಗ್ ಮಾಡುವಂತೆ ಪ್ರೋತ್ಸಾಹಿಸಿದರು. ನಂತರ ನಿಧಾನವಾಗಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದ ಸಿಟಿ ಕ್ರಿಕೆಟರ್ಸ್ ತಂಡದ ಪರ ಆಡತೊಡಗಿದರು. ಎಡಗೈ ಆಟಗಾರರಾಗಿ ಅತ್ಯಂತ ಬಲಶಾಲಿ ಹೊಡೆತಗಳನ್ನು ಬಾರಿಸುತ್ತಿದ್ದ ವಿಜಯ ಕೃಷ್ಣರವರ ಪರಿ ಹೇಗಿತ್ತೆಂದರೆ, ಅವರು ಸ್ಕ್ವೇರ್ ಲೆಗ್ನತ್ತ ಎತ್ತರದಲ್ಲಿ ಬಾರಿಸುತ್ತಿದ್ದ ಚೆಂಡು ರಭಸವಾಗಿ ಪಂಪ ಮಹಾಕವಿ ರಸ್ತೆಯಲ್ಲಿ ತರಗುಪೇಟೆ ಕಡೆಗೆ ಮೂಟೆಗಳನ್ನು ಹೊತ್ತು ಚಲಿಸುತ್ತಿದ್ದ ಲಾರಿಗಳೊಳಗೆ ಬಿದ್ದು ಚೆಂಡು ಕಳೆದು ಹೋದ ಅನೇಕ ಪ್ರಸಂಗಗಳೂ ಉಂಟು. ಬ್ಯಾಟಿಂಗ್ ಮುಗಿಸಿದೊಡನೆ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಅಲ್ಲೇ ರಸ್ತೆ ಬದಿಯ ಪೆಟ್ಟಿ ಅಂಗಡಿಯಲ್ಲೇ ಬೀಡಿ ಸೇದಿ ಹೋಗುತ್ತಿದ್ದಂತಹ ಸರಳ ಜೀವಿ.
ಲೀಗ್ ಪಂದ್ಯಾವಳಿಗಳಲ್ಲಿನ ತಮ್ಮ ಭರ್ಜರಿ ಪ್ರದರ್ಶನದಿಂದಾಗಿ 60ರ ದಶಕದಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾದರೂ ತಂಡದಲ್ಲಿ ಎರ್ರಪ್ಪಳ್ಳಿ ಪ್ರಸನ್ನ ಮತ್ತು ಬಿ ಎಸ್ ಚಂದ್ರಶೇಖರ್ ಅವರಂತಹ ಘಟಾನುಘಟಿಗಳು ಇದ್ದ ಕಾರಣ ತಮ್ಮ ಚೊಚ್ಚಲು ಪಂದ್ಯಕ್ಕೆ ಕೆಲ ಸಮಯ ಕಾಯಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಅವರಿಗಿತ್ತು. 1968-69ರಲ್ಲಿ ಹೈದರಾಬಾದ್ ವಿರುದ್ಧ ತಮ್ಮ ಚೊಚ್ಚಲ ರಣಜಿ ಪಂದ್ಯವನ್ನು ಆಡುವ ಅವಕಾಶ ಪಡೆದ ವಿಜಿ, ಆ ಪಂದ್ಯದಲ್ಲಿ 3 ವಿಕೆಟ್ ಗಳಿಸಿದರೆ, ಮದ್ರಾಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ 6 ವಿಕೆಟ್ ಪಡೆದರಾದರೂ, ಮತ್ತೆ ತಂಡಕ್ಕೆ ಚಂದ್ರ ಮತ್ತು ಪ್ರಸನ್ನ ಅವರು ಬಂದಾಗಲೆಲ್ಲಾ ಬೆಂಚ್ ಕಾಯಿಸಲೇ ಬೇಕಾಗುತ್ತಿತ್ತು. 1969ರಲ್ಲಿಯೇ ದಕ್ಷಿಣ ವಲಯ ತಂಡಕ್ಕೆ ದುಲೀಪ್ ಟ್ರೋಫಿಗಾಗಿ ಆಯ್ಕೆಯಾದರೂ ಪಂದ್ಯದ 11ರ ಬಳಗದಲ್ಲಿ ಅವಕಾಶ ಸಿಗದೇ, ಸುಮಾರು 10 ವರ್ಷಗಳ ಕಾಲ ಕಾಯಬೇಕಾಯಿತು.
1971-72ರಲ್ಲಿ ರಾಜಸ್ಥಾನ ವಿರುದ್ಧದ ಕ್ವಾರ್ಟರ್ ಫೈನಲ್ನಲ್ಲಿ, ಕಾಲು ನೋವಿನಿಂದ ನರಳುತ್ತಿದ್ದರೂ ಭರ್ಜರಿಯಾಗಿ ಆಟವಾಡಿ 71* ಗಳಿಸಿ ನಾಟ್ ಔಟ್ ಆಗಿ ಉಳಿದಿದ್ದರು. 1975-76ರ ಮಹಾರಾಷ್ಟ್ರ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಜಿ ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್ನುಗಳನ್ನು ಗಳಿಸಿದರೆ, ಎರಡನೇ ಇನ್ನಿಂಗ್ಸಿನಲಿ ಕೇವಲ 138 ನಿಮಿಷಗಳಲ್ಲಿ 102* ರನ್ ಗಳಿಸುವ ಮೂಲಕ ಆ ಋತುವಿನ ಅತ್ಯಂತ ವೇಗದ ಶತಕದ ಪ್ರಶಸ್ತಿಗೂ ಭಾಜನಾದರು. 77-78ರಲ್ಲಿ ಬಿಹಾರ ವಿರುದ್ಧ ಮತ್ತೊಂದು ಭರ್ಜರಿ ಶತಕ ಬಾರಿಸಿದ್ದರು.
1978–79ರಲ್ಲಿ ಆಲ್ವಿನ್ ಕಾಳೀಚರಣ್ ನಾಯಕತ್ವದ ಪ್ರವಾಸೀ ವೆಸ್ಟ್ ಇಂಡೀಸ್ ತಂಡದ ವಿರುದ್ಧ, ಕರ್ನಾಟಕ್ ತಂಡದ ಐತಿಹಾಸಿಕ ಗೆಲುವಿನಲ್ಲಿ ವಿಜಿ ಅವರ ಪಾತ್ರ ಬಹಳವಾಗಿತ್ತು. ಅ ಪಂದ್ಯದಲ್ಲಿ 6/79 ಮತ್ತು 3/89 ಪಡೆಯುವ ಮೂಲಕ ವಿಂಡೀಸ್ ದಾಂಡಿಗರಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು. ಕರ್ನಾಟಕ ಪರ ಆಡಿದ ಎಡಗೈ ಸ್ಪಿನ್ನರ್ ಮತ್ತು ಎಡಗೈ ಬ್ಯಾಟ್ಸ್‌ಮನ್ ಆಗಿ ಸುಮಾರು 15 ವರ್ಷಗಳ ಕಾಲ ಸುಮಾರು 80 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ, ಸರಾಸರಿ 25.8 ರನ್ನುಗಳೊಂದಿಗೆ 2297 ರನ್ ಗಳಿಸಿದ್ದಲ್ಲದೇ, 194 ವಿಕೆಟ್ಗಳನ್ನು ಪಡೆದಿದ್ದರು. ಇದರಲ್ಲಿ ಎರಡು ಶತಕಗಳೊಂದಿಗೆ 16 ಅರ್ಧಶತಕಗಳನ್ನು ಒಳಗೊಂಡಿತ್ತು. ವಿಜಿ ಕರ್ನಾಟಕದ ಪರ ಆಡುತ್ತಿದ್ದ ಸಮಯದಲ್ಲಿ ಒಟ್ಟು 5 ಬಾರಿ ಕರ್ನಾಟಕ ತಂಡ ರಣಜಿ ಟ್ರೋಫಿ ಫೈನಲ್ ತಲುಪಿ 1973-74, 1977-78 ಮತ್ತು 1982-83 ಮೂರು ಬಾರಿ ಛಾಂಪಿಯನ್ ಆಗುವುದರಲ್ಲಿ ವಿಜಿ ಅವರ ಕೊಡುಗೆಯೂ ಅಪಾರವಾಗಿತ್ತು.
ಬಹುಶಃ ಅವರ ಕಾಲದಲ್ಲಿ one day matches ಈಗಿನಂತೆ ಹೆಚ್ಚಾಗಿದ್ದು, T20 ಪಂದ್ಯಾವಳಿಗಳು ಏನಾದರೂ ಇದ್ದಿದ್ದಲ್ಲಿ ವಿಜಯಕೃಷ್ಣ ನಿಸ್ಸಂದೇಹವಾಗಿ ಧ್ರುವತಾರೆಯಂತೆ ಮಿಂಚಿ ಮಿನುಗುತ್ತಿದ್ದರಲ್ಲಿ ಅನುಮಾನವೇ ಇಲ್ಲಾ
ರಣಜಿ ಪಂದ್ಯಗಳ ಅತ್ಯಂತ ಉತ್ತಮ ಪ್ರದರ್ಶವನ್ನು ನೀಡಿದ ಫಲವಾಗಿ ಸಹಜವಾಗಿಯೇ ಭಾರತ ತಂಡದ ಪರವಾಗಿ ಆಡಲು ಕಾತುರತೆಯಿಂದ ಕಾಯುತ್ತಿದ್ದರೂ ಅದೇಕೋ ಏನೋ ಆಯ್ಕೆದಾರರ ದೃಷ್ಟಿ ವಿಜಿಯವರ ಮೇಲೆ ಬೀಳಲೇ ಇಲ್ಲ. ಹರ್ಯಾಣ ಪರ 750ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದ ರಾಜಿಂದರ್ ಸಿಂಗ್ ಗೋಯಲ್ ಮತ್ತು ಕರ್ನಾಟಕದ ವಿಜಯ್ ಕೃಷ್ಣ ಇಬ್ಬರೂ ಸಹಾ ಅಗಾಧವಾದ ಪ್ರತಿಭೆಯಿದ್ದರೂ ರಾಷ್ಟ್ರೀಯ ತಂಡದಲ್ಲಿ ಅವಕಾಶ ವಂಚಿತರಾದ ನತದೃಷ್ಟರು ಎಂದರು ತಪ್ಪಾಗಲಾರದು. ಇವರು ಆಡುತ್ತಿದ್ದ ಸಮಯದಲ್ಲೇ, ಬೇಡಿ, ವೆಂಕಟ ರಾಘವನ್, ಚಂದ್ರಾ, ಪ್ರಸನ್ನ ನಂತರ ದಿಲೀಪ್ ದೋಷಿ ಅಂತಹ ಆಟಗಾರರು ಇದ್ದ ಕಾರಣ ಇವರಿಬ್ಬರಿಗೂ ಸಹಜವಾಗಿ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ ಎನ್ನುವುದೇ ವಾಸ್ತವ. 34 ವರ್ಷಗಳಾದರೂ ಭಾರತ ತಂಡದ ಪರ ಆಡಲು ಅವಕಾಶ ಸಿಗದ ಕಾರಣ, ಸುಮ್ಮನೇ ರಾಜ್ಯ ತಂಡದಲ್ಲಿ ಆಡುತ್ತಾ ಮುಂದುವರೆದು ಮತ್ತೊಬ್ಬ ಎಳೆಯ ಪ್ರತಿಭಾವಂತನ ಅವಕಾಶವನ್ನು ಕಿತ್ತುಕೊಳ್ಳಲು ಬಯಸದ ವಿಜಯಕೃಷ್ಣ 1982–83ರಲ್ಲಿ ಬಾಂಬೆ ವಿರುದ್ಧದ ರಣಜಿ ಫೈನಲ್ ಪಂದ್ಯದ ವಿಜಯದ ನಂತರ ವಿಜಯಕೃಷ್ಣ ಎಲ್ಲಾ ರೀತಿಯ ಪ್ರಥಮ ದರ್ಜೆಯ ಕ್ರಿಕೆಟ್ ನಿಂದ ನಿವೃತ್ತರಾದರೂ, ಕೆಲ ವರ್ಷಗಳ ಕಾಲ ತಮ್ಮ ಬ್ಯಾಂಕ್ ಮತ್ತು ಕ್ಲಬ್ ಪರ ತಮ್ಮ ನೆಚ್ಚಿನ ಕ್ರಿಕೆಟ್ ಆಡವಾಡುತ್ತಾ ತಮ್ಮ ಮನಮೋಹಕ ಭರ್ಜರಿ ಹೊಡೆತಗಳ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದರು. ಅವರು ಸಿಂಡಿಕೇಟ್ ಬ್ಯಾಂಕ್ ಪರ ಆಡುತ್ತಿದ್ದಾಗ ಆ ತಂಡದಲ್ಲಿ ಬಿ. ಎಸ್. ಚಂದ್ರಶೇಖರ್, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಸದಾನಂದ ವಿಶ್ವನಾಥ್, ಸುಧಾಕರ್ ರಾವ್, ಎ.ವಿ.ಜಯಪ್ರಕಾಶ್ ರಂತಹ ಘಟಾನುಘಟಿಗಳ ಜೊತೆಗೆ ವಿಜಯಕೃಷ್ಣವರು ಆಡುತ್ತಿದ್ದರು.
1998-99ರಲ್ಲಿ ರಾಜ್ಯ ಕ್ರಿಕೆಟ್ ತಂಡದ ಆಯ್ಕೆಗಾರರಾಗಿದ್ದಾಗ ಬೆಂಗಳೂರಿನ ಹೊರಗಿನ ಪ್ರದೇಶದ ಅನೇಕ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ರಾಜ್ಯ ತಂಡದಲ್ಲಿ ಆಡಲು ಅವಕಾಶ ಮಾಡಿಕೊಟ್ಟಿದ್ದು ನಿಜಕ್ಕೂ ಅಭಿನಂದನಾರ್ಹವಾಗಿತ್ತು. ತಮ್ಮ ನಿವೃತ್ತಿಯ ನಂತರವೂ ಯುವ ಆಟಗಾರೊಂದಿಗೆ ನೆಟ್ ನಲ್ಲಿ ಬರಿಗಾಲಿನಲ್ಲಿಯೇ ತಮ್ಮ ಡ್ರಿಫ್ಟ್, ಫ್ಲೈಟ್, ಆರ್ಮ್ ಬಾಲ್ ಮುಖಾಂತರ ಯುವ ಆಟಗಾರರನ್ನು ಚಕಿತಗೊಳಿಸುತ್ತಿದ್ದರು.
ಕೆಲ ವರ್ಷಗಳ ಹಿಂದೆ ಯುವರಾಜ್ ಸಿಂಗ್ ಜಾಹೀರಾತಿನಲ್ಲಿ ಹೇಳಿರುವಂತೆ जब तक बल्ला चल रहा है तब तक ठाट हैं. जिस दिन बल्ला नहीं चलेगा….. उस दिन और ज्यादा थाथ है भाई ಎಲ್ಲಿಯವರೆಗೂ ಬ್ಯಾಟ್ ಸದ್ದು ಮಾಡುತ್ತಿರುತ್ತದೋ ಅಲ್ಲಿಯವರೆಗೂ ಎಲ್ಲವೂ ಉತ್ತಮವಾಗಿರುತ್ತದೆ. ಒಮ್ಮೆ ಬ್ಯಾಟ್ ಸದ್ದು ಮಾಡುವುದನ್ನು ನಿಲ್ಲಿಸಿದರೆ ಅದಕ್ಕಿಂತಲೂ ಕೆಟ್ಟ ಗಳಿಗೆ ಮತ್ತೊಂದು ಇರುವುದಿಲ್ಲ ಎನ್ನುವುದು ವಿಜಿ ಅವರ ಕ್ರಿಕೆಟ್ ಜೀವನದಲ್ಲಿ ಅಕ್ಷರಶಃ ಸತ್ಯವಾಗಿತ್ತು. ಕೇವಲ ಅಧ್ಭುತವಾದ ಪ್ರತಿಭೆಯಿದ್ದರೆ ಸಾಲದು, ಪ್ರತಿಭೆಯ ಜೊತೆಗೆ ಅದೃಷ್ಟವೂ ಇರಬೇಕು ಎಂಬುದಕ್ಕೆ ವಿಜಯಕೃಷ್ಣ ಅವರ ಕ್ರಿಕೆಟ್ ಬದುಕೇ ಸಾಕ್ಷಿ.
ಒಮ್ಮೆ ಕ್ರಿಕೆಟ್ಟಿನಿಂದ ನಿವೃತ್ತರಾದ ಕೂಡಲೇ ಸಾರ್ವಜನಿಕವಾಗಿ ಅಷ್ಟೇನೂ ಗುರುತಿಸಿಕೊಳ್ಳದ ವಿಜೀ, ಕಳೆದ ಗುರುವಾರ 17 ಜೂನ್ 2021ರಂದು ತಮ್ಮ 71 ನೇ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆಯೇ, ಹೃದಯಾಘಾತದಿಂದ ನಿಧನರಾದರು. ಈ ಮೂಲಕ ಕರ್ನಾಟಕ ಕ್ರಿಕೆಟ್ ತಂಡದ ಅಮೂಲ್ಯ ರತ್ನವೊಂದು ಕಳಚಿ ಬಿದ್ದಂತಾಯಿತು. ತಮ್ಮ ವೃತ್ತಿಪರ ಕ್ರಿಕೆಟ್ ಜೀವನದಲ್ಲಿ ಚೈನಾಮನ್ ಸ್ಪಿನ್ನರ್ ಆಗಿ, ಕೆಳ ಮಧ್ಯಮ ಕ್ರಮಾಂಕದ ಬಿರುಸಿನ ದಾಂಡಿಗನಾಗಿ, ತಂಡಕ್ಕೆ ಆಪಧ್ಭಾಂಧವನಾಗಿ, ಶಾರ್ಟ್ ಫೈನ್ ಲೆಗ್ ನಲ್ಲಿ ಅತ್ಯಂತ ಚುರುಕಿನ ಫೀಲ್ಡರಾಗಿ ಕ್ರಿಕೆಟ್ ಪ್ರಿಯರ ಮನಸಿನಲ್ಲಿ ಸದಾಕಾಲವೂ ಹಚ್ಚ ಹಸಿರಾಗಿಯೇ ಉಳಿಯುತ್ತಾರೆ. ಗಟ್ಟಿಯಾದ ಅಧಿಕಾರಯುತ ಕುಟುಂಬದ ಹಿನ್ನೆಲೆ ಇದ್ದರೂ, ಪ್ರತಿಭೆ, ಅಧಿಕಾರ ಮತ್ತು ಪ್ರಸಿದ್ಧಿ ಎಲ್ಲವೂ ಸನಿಹದಲ್ಲೇ ಕೈಗೆಟುಕುವಂತೆ ಇದ್ದರೂ ಅದಾವುದರ ಗೊಡವೆಯೂ ಇಲ್ಲದೆ ಎಲೆಮರೆಕಾಯಿಯಂತೆ ಸರಳವಾಗಿ ಸದ್ದಿಲ್ಲದೇ ಇಹಲೋಕವನ್ನು ತ್ಯಜಿಸಿ ಹೋದ ಬಿ. ವಿಜಯಕೃಷ್ಣ ನಿಜವಾಗಿಯೂ ಕರ್ನಾಟಕ ಕ್ರಿಕೆಟ್ ಪ್ರಿಯರ ಮನಸ್ಸಿನಲ್ಲಿ ಶಾಶ್ವತವಾಗಿ ಮನೆ ಮಾಡಿರುವುದಂತೂ ಸತ್ಯ.
ಏನಂತೀರೀ?
ನಿಮ್ಮವನೇ ಉಮಾಸುತ
nicely written Shrikanta. Vijayakrishna avarige takkudaada baravaNige..
LikeLiked by 1 person
ನಾನು ಚೆನ್ನಾಗಿ ಬರೆದಿದ್ದೇನೆ ಎನ್ನುವುದಕ್ಕಿಂತಲೂ ವಿಜಯ ಕೃಷ್ಣಾರವರ ಆಟ ಹಾಗಿತ್ತು. ಹಾಗಾಗಿಯೇ ಲೇಖನ ಚೆನ್ನಾಗಿ ಮೂಡಿ ಬಂದಿದೆ.
LikeLike