ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ನೆನಪಿಸಿದ ಕೂರೋನಾ

ಕೊರೋನಾ ಬಂದು ಇಡೀ ಪ್ರಪಂಚವೇ ಕಳೆದು ಒಂದೂವರೆ ವರ್ಷಗಳಿಂದ ಲಾಕ್ಡೌನ್ ಆಗಿರುವಾಗ ಅರೇ ಇದೇನಪ್ಪಾ ಇಂತಹ ಶೀರ್ಷಿಕೆ ಎಂದು ಆಶ್ಚರ್ಯ ಪಡುತ್ತಿದ್ದರೆ ನಿಮಗೊಂದು ಅಚ್ಚರಿಯ ಸಂಗತಿಗಳೊಂದಿಗೆ ನಿಮಗೆ ಸಾದರ ಪಡಿಸುವ ಸಣ್ಣದಾದ ಪ್ರಯತ್ನ

ಕೊರೋನಾ ವಕ್ಕರಿಸುವುದಕ್ಕಿಂತಲೂ ಮುಂಚೆ, ಎಲ್ಲರ ಮನೆಗಳಲ್ಲಿ ನಡೆಯುತ್ತಿದ್ದ ಸಣ್ಣ ಪುಟ್ಟ ಸಮಾರಂಭಗಳೂ ಸಹಾ ಬಹಳ ಅದ್ದೂರಿಯಿಂದ ನೂರಾರು ಜನರ ಸಮ್ಮುಖದಲ್ಲಿ ನಡೆಯುತ್ತಿತ್ತು. ಇನ್ನೂ ಮದುವೆ ಮುಂಜಿ ಉಪನಯನಗಳಲ್ಲಂತೂ ಸಾವಿರಾರು ಜನರನ್ನು ಸೇರಿಸಿ ನಭೂತೋ ನ ಭವಿಷ್ಯತಿ ಎನ್ನುವಂತೆ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ಜಾಂ ಜಾಂ ಎಂದು ನಡೆಸುತ್ತಿದ್ದರು. ನಿಜ ಹೇಳಬೇಕೆಂದರೆ ಈ ಎಲ್ಲಾ ಸಮಾರಂಭಗಳಲ್ಲಿ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಆತ್ಮೀಯತೆಗಿಂತ ಅಬ್ಬರದ ಆಡಂಬರವೇ ಪ್ರಾಧಾನ್ಯವಾಗಿ ಕಾರ್ಯಕ್ರಮಕ್ಕೆ ಬಂದಿರುವವರನ್ನು ಸರಿಯಾಗಿ ಯಾರೂ ವಿಚಾರಿಸಿಕೊಳ್ಳದೇ, ಬಂದವರು ಬಂದರು ಹೋದವರು ಹೋದರು ಎನ್ನುವಂತೆ ಹೊಟ್ಟೆ ಭರ್ತಿ ಉಂಡು ಲೋಕಾರೂಢಿಯಾಗಿ ಉಡುಗೊರೆಯೊಂದನ್ನು ಕೊಟ್ಟು ಫೋಟೋ ಇಲ್ಲವೇ ವೀಡಿಯೋ ತೆಗೆಸಿಕೊಳ್ಳುವುದಕ್ಕೆ ಮಾತ್ರವೇ ಸೀಮಿತವಾಗಿ ಹೋಗಿದ್ದದ್ದು ವಿಪರ್ಯಾಸವಾಗಿತ್ತು.

ಯಾವಾಗ ಕೊರೋನ ವಕ್ಕರಿಸಿ ಕೊಂಡಿತೋ, ಅದನ್ನು ತಡೆಗಟ್ಟುವುದಕ್ಕೆ ಮಾಸ್ಕ್ ಧರಿಸುವುದು, ಶುಚಿತ್ವ ಕಾಪಾಡಿ ಕೊಳ್ಳುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದೊಂದೇ ಸೂಕ್ತವಾದ ಮಾರ್ಗ ಎಂದು ತಿಳಿಯುತ್ತಿದ್ದಂತೆಯೇ, ಸರ್ಕಾರವು ಎಲ್ಲಾ ಸಭೆ ಸಮಾರಂಭಗಳಿಗೆ ಅಂಕುಶವನ್ನು ಹಾಕಿದ್ದಲ್ಲದೇ, ಮೂವತ್ತು ನಲವತ್ತು ಜನರಿಗಷ್ಟೇ ಸೀಮಿತಗೊಳಿಸಿತು. ಆರಂಭದಲ್ಲಿ ಸರ್ಕಾರದ ಈ ನಿಯಮ ಅನೇಕರಿಗೆ ಕೋಪ ತರಿಸಿದರೂ ನಂತರದ ದಿನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸರ್ಕಾರದ ನಿಯಮಗಳು ಸೂಕ್ತ ಎನಿಸಿ ಅದಕ್ಕೆ ತಕ್ಕಂತೆ ಅನುಸರಿಸಿದ್ದು ಮೆಚ್ಚಿಗೆಯ ವಿಷಯವಾಗಿತ್ತು.

ನಮ್ಮ ಕುಟುಂಬದಲ್ಲೂ ಇದಕ್ಕೆ ಹೊರತಾಗಿರಲಿಲ್ಲ. ನಮ್ಮ ತಂದೆ ತಾಯಿಯರ ಶ್ರಾದ್ಧ ಕಾರ್ಯಕ್ಕೆ ಸುಮಾರೂ ಐವತ್ತು ಅರವತ್ತು ಜನರು ಸೇರುವುದು ಸಹಜ ಪ್ರಕ್ರಿಯೆಯಾಗಿತ್ತು. ಈ ಕೊರೋನಾದಿಂದಾಗಿ ಶ್ರಾದ್ಧ ಕಾರ್ಯಗಳನ್ನು ಮಾಡಿಸಲು ಪೌರೋಹಿತರು ಮತ್ತು ಅಡುಗೆಯವರು ಸಿಗದೇ ಹೋದಂತಹ ಪರಿಸ್ಥಿತಿಯ ಜೊತೆಗೆ ಕುಟುಂಬದವರು ಕೊರೋನಾ ನೆಪದಿಂದ ಬರಲು ಹಿಂದೇಟು ಹಾಕಿದಾಗ ವಿಧಿ ಇಲ್ಲದೇ ಮನೆಯ ಮಟ್ಟಿಗೆ ಶ್ರದ್ಧೆಯಿಂದ ಶ್ರಾದ್ಧವನ್ನು ಮಾಡಿ ಪಿತೃಕಾರ್ಯವನ್ನು ಮುಗಿಸಿದ್ದೆವು.

ವರ್ಷದ ಹಿಂದೆಯೇ ತಂಗಿಯ ಮಗಳಿಗೆ ಸಂಬಂಧ ಗೊತ್ತಾಗಿದ್ದರೂ ಕೊರೋನಾದಿಂದಾಗಿ ನಿಶ್ಚಿತಾರ್ಥ ಮತ್ತು ಮದುವೆಯನ್ನು ಮುಂದೂಡುತ್ತಲೇ ಬಂದು ಕಡೆಗೆ ಕಳೆದ ಅಕ್ಟೋಬರ್ ಸಮಯದಲ್ಲಿ ಕೊರೋನಾ ಸ್ವಲ್ಪ ಕಡಿಮೆಯಾದಾಗ ಸರ್ಕಾರೀ ನಿಯಮದಂತೆಯೇ, ಕೇವಲ ಮೂವತ್ತು ಜನರ ಸಮ್ಮುಖದಲ್ಲಿಯೇ ನಿಶ್ಚಿತಾರ್ಥ ನಡೆಸಿದಾಗ, ಮನೆಯ ಅನೇಕ ಹಿರಿಯರು ನೀವೆಲ್ಲಾ ದೊಡ್ಡವರಾಗಿ ಬಿಟ್ರೀ. ನಮ್ಮನ್ನೆಲ್ಲಾ ಕರೆಯದೇ ನಿಮ್ಮ ಪಾಡಿಗೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿಯೂ ಆಗಿತ್ತು. ಆನಂತರ ಅವರಿಗೆ ಕಾರ್ಯಕ್ರಮದ ವೀಡೀಯೋ ಮತ್ತು ಪೋಟೋಗಳನ್ನು ತೋರಿಸಿ ಕೇವಲ ಮನೆಯ ಮಟ್ಟಿಗೆ ಮಾಡಿಕೊಂಡಿದ್ದೇವೆ ಎಂದು ಸಮಾಧಾನ ಪಡಿಸುವುದರಲ್ಲಿ ಸಾಕು ಸಾಕಾಗಿ ಹೋಗಿತ್ತು.

ಮದುವೆಯನ್ನಾದರೂ ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗೇ ಮಾಡೋಣ ಎಂದು ತೀರ್ಮಾನಿಸಿ ಅದಕ್ಕೆ ತಕ್ಕಂತೆ ಛತ್ರ, ಪುರೋಹಿತರು, ಅಡುಗೆಯವರು, ಪೋಟೋ, ಓಲಕ, ಹೀಗೆ ಎಲ್ಲರನ್ನೂ ಸಂಪರ್ಕಿಸಿ ಎಲ್ಲರಿಗೂ ಮುಂಗಡವನ್ನು ಕೊಟ್ಟು ಒಪ್ಪಿಸಲಾಗಿತ್ತು. ದುರಾದೃಷ್ಟವಶಾತ್ ಮತ್ತೆ ಕೊರೋನಾ ಎರಡನೇ ಅಲೇ ಮಿತಿ ಮೀರೀ ಹರಡಿ ಅನೇಕ ಹತ್ತಿರದ ಬಂಧು ಮಿತ್ರರನ್ನೇ ಆಹುತಿ ತೆಗೆದುಕೊಂಡಾಗ ಸರ್ಕಾರವೂ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್ಡೌನ್ ಮತ್ತೊಮ್ಮೆ ಘೋಷಿಸಿದ್ದಲ್ಲದೇ ಮತ್ತೆ ಮದುವೆ ಮುಂಜಿ ಮತ್ತು ಸಮಾರಂಭಳಿಗೆ ಜನರ ಮಿತಿಯನ್ನು ಹೇರಿದಾಗ ಮತ್ತೊಮ್ಮೆ ಕುಟುಂಬದಲ್ಲಿ ಆತಂಕದ ಛಾಯೆ. ಮದುವೆಗೆ ಇನ್ನೇನು ಹತ್ತು ದಿನಗಳವರೆಗೂ ಎಲ್ಲವೂ ಅಯೋಮಯವಾಗಿತ್ತು. ಕಡೆಗೆ ಛತ್ರದವರು ಫೋನ್ ಮಾಡಿ ಸರ್ಕಾರದ ಆಜ್ಞೆಯ ಅನುಸಾರವಾಗಿ ನಿಮ್ಮ ಮದುವೆಗೆ ನಮ್ಮ ಛತ್ರ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದಾಗ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತೆ ಆದರೂ ಮನೆಯಲ್ಲಿಯೇ ಮದುವೆ ಮಾಡಲು ನಿರ್ಧರಿಸಿದಾಗ ಕೊಂಚ ನಿರಾಳ.

ಮತ್ತೆ ಪುರೋಹಿತರು, ಪೋಟೋದವರಿಗೆ, ಹೂವಿನವರಿಗೆ, ಅಡುಗೆಯವರಿಗೆ, ಅಲಂಕಾರ ಮಾಡುವವರಿಗೆ ಎಲ್ಲರೀಗೂ ಮನೆಯಲ್ಲಿಯೇ ಮನೆಮಟ್ಟಿಗೆ ಮದುವೆ ಮಾಡುತ್ತಿರುವ ವಿಷಯವನ್ನು ತಿಳಿಸಿ ಮತ್ತೊಮ್ಮೆ ಬಂಧು ಮಿತ್ರರಿಗೆಲ್ಲರಿಗೂ ಅನಿವಾರ್ಯ ಕಾರಣಗಳಿಂದಾಗಿ ಮದುವೆಯನ್ನು ಮನೆಯ ಮಟ್ಟಿಗೆ ಮನೆಯಲ್ಲೇ ಮಾಡುತ್ತಿರುವ ವಿಷಯವನ್ನು ತಿಳಿಸುವುದಕ್ಕೂ ಕೊಂಚ ನಿರಾಸೆಯಾದರೂ, ವಿಧಿ ಇಲ್ಲದೇ ಎಲ್ಲರಿಗೂ ವಿಷಯವನ್ನು ತಿಳಿಸಿ, ಅದರ ಜೊತೆಗೆ ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲರು ಅವರವರ ಮನೆಗಳಲ್ಲಿಯೇ ಕುಳಿತುಕೊಂಡು ಮದುವೆಯ ನೇರಪ್ರಸಾರ (Live) ನೋಡುವ ಸೌಲಭ್ಯವನ್ನು ಕಲ್ಪಿಸಿರುವುದನ್ನು ತಿಳಿಸಿಯಾಗಿತ್ತು. ಸ್ಥಳೀಯ ಬಿಬಿಎಂಪಿ ಕಛೇರಿಗೆ ಹೋಗಿ ಐದಾರು ಗಂಟೆಗಳ ಕಾಲ ವ್ಯಯಿಸಿ ಮದುವೆಗೆ ಬೇಕಾಗಿದ್ದ ಎಲ್ಲಾ ಅನುಪತಿ ಪತ್ರಗಳನ್ನು ಪಡೆದು ಅದರ ನಕಲನ್ನು ಹತ್ತಿರದ ಪೋಲೀಸ್ ಠಾಣೆಗೆ ತಲುಪಿಸಿದಾಗಲೇ ಮದುವೆ ಹೆಣ್ಣಿನ ಅಪ್ಪನಿಗೆ ಒಂದು ರೀತಿಯ ನಿರಾಳ.

ಮನೆಯಲ್ಲಿಯೇ ಮದುವೆಯಾಗಿದ್ದರಿಂದ ಸಾಂಗೋಪಾಂಗವಾಗಿ ಯಾವುದೇ ಶಾಸ್ತ್ರ ಸಂಪ್ರದಾಯಗಳಿಗೆ ಲೋಪವಾಗಂತೆ ಐದು ದಿನಗಳ ಮದುವೆಯ ಕಾರ್ಯ ಶುರುವಾಗಿತ್ತು. ಮನೆಯ ಹೆಣ್ಣು ಮಕ್ಕಳಿಗಂತೂ ಐದು ದಿನಗಳ ಮದುವೆಯ ಸಂಭ್ರಮ ನಿಜಕ್ಕೂ ಕೌತುಕವನ್ನು ಹೆಚ್ಚಿಸಿತ್ತು, ಗುರುವಾರ ಶಾಸ್ತ್ರ ಎಂದಿಲ್ಲದಿದ್ದರೂ, ಇಂದಿನ ರೂಢಿಯಂತೆ ಮದರಂಗಿ ಹಚ್ಚುವವರನ್ನು ಮನೆಗೇ ಕರೆಸಿ ಮನೆಯ ಹೆಣ್ಣು ಮಕ್ಕಳಿಗೆಲ್ಲರಿಗೂ ಎರಡೂ ಕೈಗಳಿಗೂ ಮದರಂಗಿ ಹಚ್ಚಿಸಿದ್ದ ಕಾರಣ ಅವರ ಊಟೋಪಚಾರಗಳೆಲ್ಲವೂ ಮನೆಯ ಗಂಡುಮಕ್ಕಳದ್ದೇ ಆಗಿತ್ತು. ಐದಾರು ಗಂಟೆಗಳ ನಂತರ ಅವರ ಕೈಗಳಲ್ಲಿ ಕೆಂಪಗೆ ಅರಳಿದ್ದ ಮದರಂಗಿಯ ಬಣ್ಣ ನೋಡಿ ಅವರ ಮುಖಾರವಿಂದಗಳು ಅರಳಿದ್ದನ್ನು ಹೇಳುವುದಕ್ಕಿಂತಲೂ ನೋಡಿದ್ದರೇ ಚೆನ್ನಾಗಿರುತ್ತಿತ್ತು.

ಎರಡನೆಯ ದಿನ ಚಪ್ಪರದ ಪೂಜೆ, ಹಿರಿಯರಿಗೆ ಪಾದ ಪೂಜೆ ಮಾಡಿ ಅವರ ಆಶೀರ್ವಾದ ಪಡೆದು, ನಾಂದಿ ಹೋಮದಲ್ಲಿ ಗಣಪತಿ ಮತ್ತು ನವಗ್ರಹಗಳನ್ನು ಸಂಪ್ರಿತಗೊಳಿಸಿ ಮದುವೆ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯುವಂತೆ ಕೋರಿ, ಬಂದಿದ್ದ ಮುತ್ತೈದೆಯರ ಕಾಲು ತೊಳೆದು, ಕೈ ತುಂಬಾ ಅರಿಶಿನ ಕೊಟ್ಟು ಬಳೆ ತೊಡಿಸಿ ನಾನಾವಿಧದ ಪಲಪುಷ್ಪಗಳೊಂದಿಗೆ ಹೂವಿಳ್ಯವೆಲ್ಲವೂ ಶಾಸ್ತ್ರೋಕ್ತವಾಗಿ ವಿಧಿವತ್ತಾಗಿ ನಡೆದು ಇಂದಿನ ಕಾಲಕ್ಕೆ ಅನುಗುಣವಾಗಿ ಬೀಸೋಕಲ್ಲು, ಒನಕೆ ಎಲ್ಲವಕ್ಕೂ ಪೂಜೆ ಮಾಡಿ ಶಾಸ್ತ್ರಕ್ಕಾಗಿ ಅರಿಶಿನ ಕುಟ್ಟಿಸಿದಾಗ ಅಧಿಕೃತವಾಗಿ ಮದುವೆಯ ಕಾರ್ಯ ಆರಂಭವಾಗಿತ್ತು.

ಮೂರನೇ ದಿನದ ಸಂಜೆ ವರಪೂಜೆಯಾದರೂ ಬೆಳಗಿನಿಂದಲೇ ಮನೆಯಲ್ಲಿ ಸಂಭ್ರಮ. ಗಂಡಸರು ಹೂವು ಮತ್ತಿತರ ಸಾಮಗ್ರಿಗಳನ್ನು ತರಲು ಹೊರಗೆ ಹೊದರೆ, ಮನೆಯಲ್ಲಿದ್ದ ಹೆಣ್ಣುಮಕ್ಕಳು ಮದುವೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆಯೇ ಮಧ್ಯಾಹ್ನವಾಗಿ ಎಲ್ಲರ ಹೊಟ್ಟೆ ಚುರುಗುಟ್ಟುತ್ತಿತ್ತು. ಮನೆಯಲ್ಲಿದ್ದ ಹತ್ತು ಹದಿನೈದು ಜನರಿಗೆ ತಟ್ಟೆಯಲ್ಲಿ ಊಟಬಡಿಸಿ ಆ ತಟ್ಟೆಗಳನ್ನೆಲ್ಲಾ ತೊಳೆಯುವವರು ಯಾರು ಎಂದು ಅಲ್ಲರನ್ನೂ ಅರ್ಧ ಚಕ್ರಾಕಾರದಲ್ಲಿ ಕುಳ್ಳರಿಸಿಕೊಂಡು ಮನೆಯ ಹಿರಿಯ ತಾಯಿ ಕೈ ತುತ್ತು ಹಾಕುತ್ತಿದ್ದರೆ, ತಾಮುಂದು ನಾಮುಂದು ಎಂದು ಹತ್ತು ಹದಿನೈದು ನಿಮಿಷಗಳಲ್ಲಿ ಎಲ್ಲರ ಹೊಟ್ಟೆ ತುಂಬಿಹೋಗಿದ್ದೇ ಗೊತ್ತಾಗಲಿಲ್ಲ.

ಸಂಜೆ ಗಂಡಿನ ಮನೆಯವರು ಬರುವಹೊತ್ತಿಗೆ ಎಲ್ಲಾ ಹೆಣ್ಣುಮಕ್ಕಳು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ಯಥಾಶಕ್ತಿ ಸೌಂದರ್ಯವರ್ಧಕಗಳನ್ನು ಧರಿಸಿ ಆಕಾಶದಲ್ಲಿದ್ದ ನಕ್ಷತ್ರಗಳೆಲ್ಲಾ ಒಟ್ಟಿಗೆ ಭೂಮಿಗೆ ಇಳಿದು ಬಿಟ್ಟಿದ್ದಾರೇನೋ ಎನ್ನುವಂತೆ ಕಂಗಳಿಸುತ್ತಿದ್ದರು ಎಂದರೂ ಉತ್ರ್ಪೇಕ್ಶೆಯೇನಲ್ಲ.

ಬೀಗರ ಮನೆಯವರು ಆಗಮಿಸುತ್ತಿದ್ದಂತೆಯ ಮನೆಯ ಹೆಣ್ಣು ಮಕ್ಕಳು ಆರತಿ ಬೆಳಗಿದರೆ, ಮನೆಯ ಹಿರಿಯರು ಎಲ್ಲರಿಗೂ ಸಂಬಂಧಮಾಲೆ ಹಾಕಿ ಸ್ವಾಗತಿಸಿದರು, ಗಂಡು ಮಕ್ಕಳು ಬೀಗರ ಮೆನೆಯವರು ತಂದಿದ್ದ ಸಾಮಾನುಗಳನ್ನೆಲ್ಲಾ ಅಚ್ಚುಕಟ್ಟಾಗಿ ಅವರ ಕೋಣೆಗೆ ತಲುಪಿಸಿ ಎಲ್ಲರನ್ನು ತಿಂಡಿಗೆ ಕೂರಿಸುವ ಹೊತ್ತಿನಲ್ಲಿ ಸೂರ್ಯ ಮುಳುಗಿ ಚಂದ್ರ ವರಪೂಜೆಯಲ್ಲಿ ನವ ದಂಪತಿಗಳನ್ನು ನೋಡಲು ಬಂದಿದ್ದ. ಗಂಡು ಮತ್ತು ಹೆಣ್ಣಿನ ಮನೆ ಎರಡೂ ಕಡೆ ಸೇರಿಸಿದರು ಸಂಖ್ಯೆ 40 ಮೀರದೇ ಹೋದದ್ದು ಹೆಣ್ಣಿನ ತಂದೆಗೆ ಕೊಂಚ ನಿರಾಳ. ಎಂಕಾ ನಾಣಿ ಸೀನ ಎಂದು ಮೂರು ಮತ್ತೊಂದು ಜನರು ಇದ್ದ ಕಾರಣ, ಕೆಲವೇ ಕೆಲವು ನಿಮಿಷಗಳಲ್ಲಿ ಎಲ್ಲರಿಗೂ ಅವರವರ ಪರಿಚಯವಾಗಿ ವರಪೂಜೆಯ ಕಾರ್ಯಕ್ರಮಗಳೆಲ್ಲವೂ ನಿರ್ವಿಘ್ನವಾಗಿ ನಡೆದು ರಾತ್ರಿ ಹೋಳಿಗೆ ಊಟ ಮುಗಿಯುತ್ತಿದ್ದಂತೆಯೇ ಬಂದವರಿಗೆ ಹಾಸಿಗೆ ಹೊದಿಕೆಯನ್ನು ಹೊಂದಿಸಿಯಾಗಿತ್ತು.

ನಾಲ್ಕನೇಯ ದಿನ ಧಾರೆಯ ದಿನ ಬೆಳಿಗ್ಗೆಯೇ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ, ಎಲ್ಲರೂ ಅವರವರಿಗೆ ಒಪ್ಪಿಸಿದ್ದ ಕಾರ್ಯಗಳನ್ನೆಲ್ಲಾ ಮುಗಿಸುವಷ್ಟರಲ್ಲಿ ಗಂಟೆ ಎಂಟಾಗಿತ್ತು. ಒಂದು ಸಾರಿ ಕಾಫಿ ಕುಡಿದ ನಂತರ ಹೆಣ್ಣು ಮಕ್ಕಳೆಲ್ಲಾ ಪುರೋಹಿತರ ಆಣತಿಯಂತೆ ಹಸೆಹಾಕಿ ಹಸೇಮಣೆಯನ್ನು ಇಟ್ಟು ಎಲ್ಲಾ ಅಲಂಕಾರಗಳನ್ನು ಮಾಡುತ್ತಿದ್ದರೆ, ಗಂಡಸರು ಹಿಂದಿನ ದಿನ ಹಿಡಿದಿಟ್ಟಿದ್ದ ನೀರೇಲ್ಲಾ ಖಾಲಿಯಾಗಿದ್ದನ್ನು ನೋಡಿ ಮತ್ತೆ ನೀರು ತುಂಬಿಸುವಷ್ಟರಲ್ಲಿ ಬಿಸಿ ಬಿಸಿ ತಿಂಡಿ ಸಿದ್ಧವಾಗಿತ್ತು. ಒಂದು ಕಡೆ ತಿಂಡಿ ತಿನ್ನುತ್ತಿದ್ದರೆ ಮತ್ತೊಂದು ಕಡೆ ಕಾಶೀ ಯಾತ್ರೆಗೆ ವರ ಸಿದ್ಧಾನಾಗಿ ಹೊರಟಾಗಿತ್ತು. ಅರರರೇ.. ಕಾಶೀಯಾತ್ರೆಗೆ ಒಬ್ಬಂಟಿಯಾಗಿ ಹೋಗುವುದು ಸರಿಯಲ್ಲ. ಹಾಗಾಗಿ ನಿಮ್ಮೊಂದಿಗೆ ನನ್ನ ಮಗಳನ್ನು ಕಲ್ಯಾಣ ಮಾಡಿಕೊಡುತ್ತೇನೆ. ಇಬ್ಬರೂ ನೆಮ್ಮದಿಯಾಗಿ ಕಾಶೀ ಯಾತ್ರೆ ಮುಗಿಸಿಕೊಂಡು ಬನ್ನಿ ಎಂದು ವಧುವಿನ ತಂದೆ ವರನ ಕಾಲು ತೊಳೆದು ಕೇಳಿಕೊಂಡರೆ ಹುಡುಗಿಯ ಸಹೋದರ ಭಾವನ ಕಾಲುಗಳಿಗೆ ಚಪ್ಪಲಿ ತೋಡಿಸಿ, ಛತ್ರಿ ಹಿಡಿದು ಹಸೆ ಮಣೇಗೆ ಕರೆದು ತರುವಷ್ಟರಲ್ಲಿ ಅಂತರಪಟ ಹಿಡಿದಾಗಿತ್ತು. ಹುಡುಗಿಯ ಸೋದರ ಮಾವ, ಸಕ್ಕರೆಯಂತೆ ಅಲಂಕಾರ ಮಾಡಿಕೊಂಡು ಸಿದ್ಧವಾಗಿದ್ದ ತನ್ನ ಸೊಸೆಯನ್ನು ಅಕ್ಕರೆಯಿಂದ ಎತ್ತುಕೊಂಡು ಹಸೆಯಣೆಯ ಮೇಲೆ ನಿಲ್ಲಿಸಿ ಜೀರಿಗೆ ಧಾರಣೆ ಮಾಡಿಸಿ, ಮಾಂಗಲ್ಯವನ್ನು ಬಂದಿದ್ದವರೆಲ್ಲರ ಕೈಗೆ ಮುಟ್ಟಿಸಿ ತನ್ನ ಸೊಸೆಯ ಮಾಂಗಲ್ಯಭಾಗ್ಯ ನೂರ್ಕಾಲ ಗಟ್ಟಿಯಾಗಿರಲಿ ಎಂದು ಹರಸಿ ಎಂದು ಕೇಳಿಕೊಂಡು ಮಾಂಗಲ್ಯವನ್ನು ವರನ ಕೈಗೆ ಕೊಡುತ್ತಿದ್ದಂತೆಯೇ ಪುರೋಹಿತರ ಗಟ್ಟಿ ಮೇಳಾ ಗಟ್ಟಿಮೇಳಾ ಎನ್ನುತಿದ್ದಂತೆಯೇ, ಮೊಬೈಲಿನಲ್ಲಿಯೇ ನಾದಸ್ವರ ಜೋರಾದರೆ, ಮಾಂಗಲ್ಯಂ ತಂತುನಾನೇನಾ ಮಮ ಜೀವನ ಹೇತುನಾ… ಎಂದು ಪುರೋಹಿತರು ಹೇಳುತ್ತಿದ್ದರೆ, ವರ ಮಧುವಿನ ಕೊರಳಿಗೆ ಮಾಂಗಲ್ಯದ ಮೂರು ಗಂಟು ಹಾಕುತ್ತಿದ್ದರೆ, ಅಲ್ಲಿಯವರೆಗೂ ತಡೆದು ಹಿಡಿದುಕೊಂಡಿದ್ದ ಕಣ್ನೀರ ಧಾರೆ ವಧುವಿನ ತಾಯಿಯ ಕಣ್ಣುಗಳಲ್ಲಿ ಧಾರಾಕಾರವಾಗಿ ಹರಿದು ಅದೇ ಕಣ್ಣಿರಿನಲ್ಲಿಯೇ ಮಗಳನ್ನು ಅಳಿಯನಿಗೆ ಧಾರೆ ಎರೆದು ಕೊಡುತ್ತಿದ್ದಂತೆಯೇ ಮದುವೆಯೂ ಮುಗಿದು ಹೊಗಿತ್ತು. ಸಪ್ತಪದಿ, ಲಾಜಹೋಮಗಳೆಲ್ಲವೂ ಸಾಂಗವಾಗಿ ನಡೆದು, ನಂತರ ಬಂದವರೆಲ್ಲರು ಭೂರೀ ಭೂಜನ ಸವಿದರೆ, ವಧು ವರರು ಜೊತೆಗೊಂದಿಷ್ಟು ಹಿರಿಯರು ಎಲ್ಲರು ಒಟ್ಟಿಗೆ ಭೂಮದ ಊಟಕ್ಕೆ ಕುಳಿತರೆ, ಉಳಿದವರೆಲ್ಲರು ಅದರ ಮಜ ತೆಗೆದುಕೊಳ್ಳಲು ಸುತ್ತುವರೆದಿದ್ದರು. ಅತ್ತೆ ಅಳಿಯನಿಗೆ ಪಾಯಸ ಹಾಕಲು ಬಂದಾಗ ಅಳಿಯ ಅತ್ತೆಯ ಕೈ ಹಿಡಿದು ಚಕ್ಕುಲಿಯನ್ನು ತೊಡಿಸಿದಾಗ ಎಲ್ಲರ ಹರ್ಷೋಧ್ಗಾರ ಮುಗಿಲಿ ಮುಟ್ಟಿತ್ತು. ನಂತರ ವರ ನಯವಾಗಿ ಸಿಹಿತಿಂಡಿಗಳನ್ನು ತಿನ್ನಿಸಿದರೆ, ವಧು ಮಾತ್ರಾ ತನ್ನ ಪತಿಗೆ ಬಗೆ ಬಗೆಯ ಉಂಡೆಗಳು, ಚಕ್ಕುಲಿ ಕೋಡುಬಳೆಯಂತಹ ಬಗೆ ಬಗೆಯ ತಿನಿಸಿಗಳನ್ನು ತಿನ್ನಿಸಿದರೆ, ಅವರ ಜೊತೆಗೆ ಕುಳಿತಿದ್ದ ಹಿರಿಯರೂ ತಮ್ಮ ಮದುವೆಯ ಸಮಯದಲ್ಲಿ ತಾವು ಇದೇ ರೀತಿಯಾಗಿ ತಿನಿಸಿದ್ದದ್ದನ್ನು ಮೆಲುಕು ಹಾಕುತ್ತಾ ಮತ್ತೆ ತಿನಿಸಿದ್ದು ಎಲ್ಲರಿಗೂ ಮೋಜು ತರಿಸಿದ್ದಂತೂ ಸುಳ್ಳಲ್ಲ. ಮತ್ತೆ ಸಂಜೆ ಔಪಚಾರಿಕವಾಗಿ ನಡೆದ ಆರತಕ್ಷತೆಗೆ ಎಲ್ಲರೂ ಮತ್ತೆ ಸಿದ್ಧರಾಗಿ, ಬಂದ ಅಕ್ಕ ಪಕ್ಕದ ಮನೆಯವರ ಜೊತೆ ಫೋಟೋ ತೆಗೆಸಿಕೊಂಡು ಎಲ್ಲರೊಂದಿಗೆ ಬಗೆ ಬಗೆಯ ಸಿಹಿಗಳೊಂದಿಗೆ ಊಟ ಮುಗಿಸಿ ಹಾಸಿಗೆಗೆ ಕಾಲು ಚಾಚಿದ್ದಷ್ಟೇ ನೆನಪಾಗಿ ಮತ್ತೆ ಎಚ್ಚರವಾದಾಗ ಸೂರ್ಯ ತನ್ನ ಆಗಮನವನ್ನು ತಿಳಿಸಿಯಾಗಿತ್ತು.

ಐದನೇ ದಿನ ಲಗುಬಗನೆ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಸತ್ಯನಾರಾಯಣ ಸ್ವಾಮಿಯ ಪೂಜೆಗೆ ಸಿದ್ಧತೆ ಮಾಡಿಕೊಂಡು ಭಕ್ತಿ ಪೂರ್ವಕವಾಗಿ ವಿಘ್ನವಿನಾಶಕನ ಜೊತೆ, ಮನೆ ದೇವರಿಗೆ ಪೂಜೆ ಸಲ್ಲಿಸಿ, ರುದ್ರಾಭಿಷೇಕ ಮಾಡಿ, ಸತ್ಯನಾರಾಯಣ ಕತೆಯ ಜೊತೆಜೊತೆಯಲ್ಲಿಯೇ ಪೂಜೆಯನ್ನು ಮುಗಿಸಿ ಎಲ್ಲರೂ ಭಕ್ತಿಯಿಂದ ಮಂಗಳಾರತಿ ತೀರ್ಥಪ್ರಸಾದಗಳನ್ನು ಸ್ವೀಕರಿಸಿ, ಬೀಗರ ಔತಣವನ್ನು ಸವಿದು ಫಲತಾಂಬೂಲವನ್ನು ಸ್ವೀಕರಿಸುತ್ತಿದ್ದಂತೆಯೇ ಮಗಳನ್ನು ಕಳುಹಿಸಿಕೊಡುವ ಹೃದಯವಿದ್ರಾವಕ ಪ್ರಸಂಗ ಹೇಳಲಾಗದು. ಮಧುಮಗಳಿಗೆ ಗಂಡನ ಮನೆಗೆ ಹೋಗುವ ಸಂಭ್ರಮದ ಕಡೆ ಇಷ್ಟು ದಿನಗಳ ಕಾಲ ಹುಟ್ಟಿ ಆಡಿ ಬೆಳೆದ ತವರು ಮನೆಯನ್ನು ಬಿಟ್ಟು ಹೊಗಬೇಕಲ್ಲಾ ಎಂಬ ಸಂಕಟವಾದರೇ, ಇಷ್ಟು ದಿನ ತಮ್ಮ ತೋಳಿನಲ್ಲಿ ಆಡಿ ಬೆಳೆದ ಮಗಳನ್ನು ಕಳುಹಿಸಿ ಕೊಡುವ ಸಂಕಟಕ್ಕೆ ಹರಿಯುವ ಕಣ್ಣೀರ ಧಾರೆ ಅಲ್ಲಿದ್ದ ಮಕ್ಕಳಿಗೆ ನಗುಹುಟ್ಟಿಸುವುದಾದರೂ ಮುಂದೆ ಅವರು ಆ ಸಂಧರ್ಭವನ್ನು ಅನುಭವಿಸಬೇಕಾದಗಲೇ ಅದರ ಸಂಕಟದ ಅರಿವಾಗುತ್ತದೆ.

ಬಹುಶಃ ಕೊರೋನಾ ಇಲ್ಲದಿದ್ದರೆ ಛತ್ರದಲ್ಲಿ ಇದೇ ಮದುವೆ ನಡೆದಿದ್ದರೇ, ಯಾವುದೋ ಕೆಲಸದಲ್ಲಿ ತೊಡಗಿಕೊಂಡೋ ಇಲ್ಲವೇ ಛತ್ರದ ಮೂಲೆಯೊಂದರಲ್ಲಿ ಕುಳಿತುಕೊಂಡು ಕಾಡು ಹರಟೆ ಹೊಡೆಯುವುದರಲ್ಲೇ ಕಳೆದು ಹೊಗುತ್ತಿತ್ತು. ಕೊರೋನಾದಿಂದಾಗಿ ಮನೆಯ ಮಟ್ಟಿಗೆ ಮದುವೆ ಮಾಡಬೇಕಾದಾಗ ಪ್ರತಿಯೊಂದನ್ನು ಹತ್ತಿರದಿಂದ ನೋಡುತ್ತಾ ಆ ಸಂಭ್ರಮ ಸಡಗರಗಳಲ್ಲಿ ಪಾಲ್ಗೊಳ್ಳುವ ಸುಯೋಗ ಲಭಿಸಿತು ಎಂದರು ತಪ್ಪಾಗದು.

ಮದುವೆ ಎಂದರೆ ಅದು ಕೇವಲ ಗಂಡು ಮತ್ತು ಹೆಣ್ಣಿನ ಸಂಬಂಧವಲ್ಲ. ಅದು ಕುಟುಂಬ ಕುಟುಂಬಗಳ ನಡುವಿನ ಸಂಬಂಧಕ್ಕೆ ಬೆಸುಗೆಯನ್ನು ಹಾಕುವ ಒಂದು ಸುಂದರ ವಿಧಿ ವಿಧಾನ ಎಂಬುದನ್ನು ಈ ಮೂಲಕ ಕೊರೋನಾ ತಿಳಿಸಿ ಕೊಟ್ಟಿದ್ದಲ್ಲದೇ ಕಾಲ ಕಾಲಕ್ಕೂ ನೆನಪಿನಲ್ಲಿ ಉಳಿಯುವಂತೆ ಮಾಡಿದೆ ಎಂದರು ಅತಿಶಯವಲ್ಲ. ಇದೇ ಸತ್ ಸಂಪ್ರದಾಯವನ್ನು ಕೊರೋನ ನಂತರವೂ ಮುಂದುವರೆಸಿಕೊಂಡು ಹೋದರೆ ಉತ್ತಮವಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

4 thoughts on “ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ನೆನಪಿಸಿದ ಕೂರೋನಾ

  1. ಕೊರೋನ ಕಾರಣದಿಂದ 50 ಜನ ಮತ್ತು ಅದಕ್ಕಿಂತ ಕಡಿಮೆ ಜನ ಸೇರಿ ಮದುವೆ ಮುಂಜಿ ಮುಂತಾದ ಕಾರ್ಯಕ್ರಮಗಳನ್ನು ಮಾಡಿತ್ತಿರುವ ಸಂದರ್ಭ ಬಂದಿರುವುದು ಸ್ವಾಗತಾರ್ಹ. ಮದುವೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದರೆ ಕೆಲವರು ಸಮಾಜಕ್ಕೆ ಹೆದರಿ ಸಾಲ ಸೋಲ ಮಾಡಿ ಕಷ್ಟಪಟ್ಟು ಮದುವೆ ಮಾಡುತ್ತಿದ್ದಾರೆ. ಗಂಡು ಮತ್ತು ಹೆಣ್ಣಿನ ಮನೆಯವರು ಮಾತ್ರ ಸೇರಿ ಸರಳ ರೀತಿಯಲ್ಲಿ ಮದುವೆ ಮಾಡಬೇಕಾದ ಪದ್ಧತಿ ಜಾರಿಗೆ ತಂದು ಜನ ನೆಮ್ಮದಿಯಿಂದ ಜೀವನ ಮಾಡುವ ಸಂದರ್ಭವನ್ನು ಸೃಷ್ಠಿ ಮಾಡುವುದು ಒಳ್ಳೆಯದು. ಈ ಕಾರಣದಿಂದ ಈ ಕೊರೋನ ಭಯ ಇನ್ನೂ ಎರಡು ಮೂರು ವರ್ಷ ಮುಂದುವರೆದರೆ ಬಲವಂತವಾಗಿಯಾದರೂ ಇಂಥ ಒಳ್ಳೆಯ ಪರಿಸ್ಥಿತಿ ನಿರ್ಮಾಣವಾಗಲು ಅವಕಾಶವಾಗುತ್ತದೆ. ಹಳೆಯ ಸಂಪ್ರದಾಯ ನಿಲ್ಲಿಸೋಣ. ಸರಳ ವಿವಾಹ ಶಾಶ್ವತವಾಗಿ ಜಾರಿಗೆ ಬರಲಿ. ಅದ್ದೂರಿ ಮದುವೆ ನಿಲ್ಲಲಿ. ಜನ ನೆಮ್ಮದಿಯಿಂದಿರಲಿ.

    Liked by 1 person

  2. ಒಂದೇ ಗುಕ್ಕಿಗೆ ಓದಿ ಮುಗಿಸುವ ಹಾಗಿದೆ ಲೇಖನ ಕಣ್ಮುಂದೆ ಮದುವೆ ನೋಡಿದ ಅನುಭವ ಆಯ್ತು 😄

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s